Gireesh pm Giree

Abstract Classics Inspirational

4  

Gireesh pm Giree

Abstract Classics Inspirational

ಅಮ್ಮ ನೆನೆಪು

ಅಮ್ಮ ನೆನೆಪು

1 min
288


*ಹಸಿರ ಹೊದಿಕೆ, ನೀರ ಚಿಲುಮೆ…ಎಲ್ಲವೂ ನೆನಪು!*


ನೆನಪು ಒಂದು ರೀತಿಯ ದೀರ್ಘ ಅಧ್ಯಾಯ. ಗೆಲುವಿನ ಕಥೆಯಿದೆ, ನೋವಿನ ವ್ಯಥೆಯಿದೆ. ಜೀವನದಲ್ಲಿ ಎದುರಾದ ಏಳುಬೀಳಿನ ಸಾರವ ಉಣಬಡಿಸುತ್ತದೆ. ಸಿಂಹಾವಲೋಕನ ಮಾಡಿದಾಗ ನಾವು ಅದೆಷ್ಟೋ ವಿಸ್ಮಯಗಳನ್ನು ದಾಟಿ ಬಂದಿರುವುದು ಅರಿವಿಗೆ ಬರುತ್ತದೆ. ಕಳೆದ ಕ್ಷಣಗಳು ಮರಳಿ ಬಾರವು ಆದರೆ ಕಳೆದ ನೆನಪುಗಳು ಮಾತ್ರ ಸದಾ ಹಸಿರು.


ನನ್ನನ್ನೂ ಗಾಢವಾಗಿ ಕಾಡುತ್ತಿರುವ ನೆನಪೊಂದಿದೆ. ನಮ್ಮ ಊರ ಕಡೆ ಮಳೆಗಾಲ ಶುರುವಾಯಿತೆಂದರೆ ನಮ್ಮಂತ ತುಂಟ ಮಕ್ಕಳಿಗೆ ನವೋಲ್ಲಾಸ. ಅಮ್ಮ ಕೊಡುವ ಕೆಂಡದಲ್ಲಿ ಸುಟ್ಟ ಗೆಣಸು ಸವಿಯುವುದು, ಹಲಸಿನ ಹಪ್ಪಳ ಚಪ್ಪರಿಸುವುದು, ಹರಿವ ನೀರಿನಲ್ಲಿ ಕಾಗದದ ದೋಣಿ ಬಿಡುವುದು ಹೀಗೆ.. ನೀರು ತುಂಬಿದ ಬಯಲಲ್ಲಿ ಕಾಲಕಳೆಯುವುದೆಂದರೆ ನನಗೆ ಅಚ್ಚುಮೆಚ್ಚು. ಮೊಣಗಂಟಿನವರೆಗೆ ನೀರಿರುತ್ತಿದ್ದ ಬಯಲಿಂದ ಪುಟ್ಟ ಮೀನಿನ ಮರಿಗಳನ್ನು ಹಿಡಿದು ನಮ್ಮ ಮನೆ ಬಾವಿಯಲ್ಲಿ ಹಾಕಿ ಖುಷಿಪಡುತ್ತಿದ್ದೆ. ಗೆಳೆಯರೂ ಈ ಕೆಲಸಕ್ಕೆ ಸಾಥ್ ಕೊಡುತ್ತಿದ್ದರು. ಈ ಕಾರಣದಿಂದಲೇ ಅಮ್ಮನ ಕೈಯಿಂದ ಅದೆಷ್ಟೋ ಬಾರಿ ಪೆಟ್ಟು ತಿನ್ನುತ್ತಿದ್ದೆ. ಅಮ್ಮನ ಕಣ್ತಪ್ಪಿಸಿ ಹೋದರೂ, ನನ್ನ ಕೆಸರು ಬಟ್ಟೆ ಅಮ್ಮನಿಗೆ ಎಲ್ಲವನ್ನೂ ಹೇಳಿಬಿಡುತ್ತಿತ್ತು!


ಅಂದು ನಾನು ಕುಣಿದು ಕುಪ್ಪಳಿಸುತ್ತಿದ್ದ, ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿದ್ದ ನೆಲ ಇಂದು ಕಣ್ಮರೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಬಯಲನ್ನು ಮಣ್ಣಿನಿಂದ ಮುಚ್ಚಲಾಗಿದೆ. ಬಗೆಬಗೆಯ ಕಟ್ಟಡಗಳು ತಲೆಯೆತ್ತಿವೆ. ಮಳೆಗಾಲದಲ್ಲಿ ಸದಾ ನೀರಿನ ಚಿಲುಮೆಯಾಗಿರುತ್ತಿದ್ದ ಜಾಗದಲ್ಲಿ ಇಂದು ತೊಟ್ಟು ನೀರಿಲ್ಲ. ಜಲಚರ, ಪ್ರಾಣಿಗಳ ಸದ್ದಿಲ್ಲ. ಬದಲಾವಣೆಗೆ ಸಾಕ್ಷಿಯೆಂಬಂತೆ ಹಳೇ ಹುಣಸೇ ಮರವೊಂದು ಇಂದಿಗೂ ಹಾಗೇ ಇದೆ. ಆ ಮರವನ್ನು ನೋಡಿದಾಗ ಬಾಲ್ಯದ ಮಧುರ ಕ್ಷಣವೆಲ್ಲವೂ ನೆನಪಾಗಿ ಮನದ ಕದ ತಟ್ಟುತ್ತವೆ.


ಅಭಿವೃದ್ಧಿಯ ಅಂಧಕಾರದಲ್ಲಿ ಮಾನವನಿದ್ದು ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಇದರ ಪರಿಣಾಮವನ್ನು ಈಗಾಗಲೇ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಪ್ರಕೃತಿ ಮೇಲಿನ ಅನಾಚಾರ ಸಾವಿನ ಹಾದಿಯನ್ನು ಇನ್ನೂ ಸಮೀಪಿಸುವಂತೆ ಮಾಡಿದೆ ಎಂಬುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಇನ್ನಾದರೂ ಪರಿಸರ ಉಳಿಸೋಣ. ನಮ್ಮ ಮುಂದಿನ ಪೀಳಿಗೆಗಾಗಿ...



Rate this content
Log in

Similar kannada story from Abstract