Shridevi Patil

Classics Inspirational Others

4  

Shridevi Patil

Classics Inspirational Others

ಅಮ್ಮ ಮಗನ ಪುಟ್ಟ ಪ್ರಪಂಚ

ಅಮ್ಮ ಮಗನ ಪುಟ್ಟ ಪ್ರಪಂಚ

2 mins
836


ಅಮ್ಮ ಕಣ್ಣಿಗೆ ಕಾಣುವ ದೇವರು. ದೇವರು ಎಲ್ಲ ಕಡೆಯೂ ಇರೋಕಾಗಲ್ಲ ಅಂತಾನೆ ತಾಯಿಯನ್ನ ಸೃಷ್ಟಿ ಮಾಡಿದ. ತಾಯಿ ಎಷ್ಟೇ ಮಕ್ಕಳನ್ನು ಹೆತ್ತರೂ ಎಲ್ಲ ಮಕ್ಕಳನ್ನು ಒಂದೇ ತರನಾಗಿ , ಪ್ರೀತಿ ಮಮತೆ , ವಾತ್ಸಲ್ಯವನ್ನು ಕೊಟ್ಟು ಬೆಳೆಸುತ್ತಾಳೆ. ದೇವರು ಸಹ ಹಾಗೆ ಅಲ್ಲವೇ. ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅದು ನಿಜ ಕೂಡ. ಎದೆ ಹಾಲು ನೀಡಿ ಜೊತೆಗೆ ಕೈತುತ್ತು ಕೊಟ್ಟು ಬೆಳೆಸುವ ತಾಯಿ ಸಂಸ್ಕಾರ , ರೀತಿ ನೀತಿ , ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಿ ನಮ್ಮನ್ನು ಉತ್ತಮ ಸುಸಂಸ್ಕೃತರನ್ನಾಗಿ ಮಾಡುವ ತಾಯಿ ಯಾವ ದೇವರಿಗೂ ಕಮ್ಮಿ ಇಲ್ಲ. ಒಂದು ಹೊತ್ತು ಉಪವಾಸ ಇದ್ದರೂ ಮಕ್ಕಳಿಗೆ ಅದನ್ನು ತೋರಿಸಿಕೊಳ್ಳದೆ ಆ ತಾಯಿ , ತನ್ನ ಮಕ್ಕಳಿಗೆ ಮಾತ್ರ ಒಂದು ತುತ್ತೂ ಕಡಿಮೆ ಆಗದಂತೆ ತಿನ್ನಿಸಿ , ಬೇಕು ಬೇಡಗಳನ್ನು ಈಡೇರಿಸಬೇಕೆಂದು ಆಸೆ ಪಡುತ್ತಾಳೆ. ಅಮ್ಮನಿಗೆ ಸರಿಸಾಟಿ ಯಾರಿಲ್ಲ. ಅಮ್ಮನಿಗಿಂತ ಬೇರೆ ಬಂಧುವು ಬೇಕಿಲ್ಲ. ಅಮ್ಮ ದೇವರು ನಮಗೆ ನೀಡಿದ ದೊಡ್ಡ ವರದಾನ , ಅಮ್ಮನಿಲ್ಲದೆ ಮಕ್ಕಳಿಲ್ಲ.ಅಮ್ಮನ ಪ್ರೀತಿ ಮುಂದೆ ಸೋಲದವರೂ ಇಲ್ಲ.


ಸರೋಜಮ್ಮ ಎಲ್ಲ ಸಂಬಂಧಗಳನ್ನು ಕಳಚಿ ಬಿಸಾಡಿ , ಯಾರ ಸಹವಾಸವೂ ಬೇಡವೇ ಬೇಡ ಎಂಬ ನಿರ್ಣಯಕ್ಕೆ ಬಂದು , ತನ್ನ ಮೂರು ವರ್ಷದ ಮಗನೊಂದಿಗೆ ತನ್ನ ಸ್ವಂತ ಊರನ್ನು ಬಿಟ್ಟು ದೂರದ ಊರಿಗೆ ಹೋದಳು. ಯಾರೂ ಗೊತ್ತಿರದ ಜಾಗವದು. ಅಲ್ಲಿರುವವರು ಎಂತವರೆಂದೂ ಗೊತ್ತಿಲ್ಲ. ಆದರೆ ಬದುಕಲೇ ಬೇಕಿತ್ತು. ಮಗ ಚಿಕ್ಕವನು. ಅವನೇ ಆಕೆಗೆ ಉಸಿರು , ಬದುಕಲು ಕಾರಣನಾಗಿದ್ದ. ಅಕಸ್ಮಾತ್ ಮಗ ಇಲ್ಲವೆಂದಿದ್ದರೆ ಇವತ್ತು ಸರೋಜಮ್ಮ ಬಹುಶಃ ಫೋಟೋದಲ್ಲಿ ಹಾರದ ಸಮೇತ ರಾರಾಜಿಸುತ್ತಿದ್ದಳೋ ಏನೋ ಗೊತ್ತಿಲ್ಲ. ಇರುವ ಶ್ರೀಮಂತಿಕೆ ಎಲ್ಲವನ್ನು ಬಿಟ್ಟು ಬಂದು ಏನೂ ಇಲ್ಲದವರಂತೆ ಬದುಕಬೇಕಾದ ಅನಿವಾರ್ಯತೆ ಆಕೆಗೆ ಬಂದಿತ್ತು. ಮಗ ಮಹೇಶ್ ನನ್ನು ಬೆಳೆಸುವುದೊಂದೆ ಆಕೆಯ ಗುರಿಯಾಗಿತ್ತು. ಗಂಡ ತೀರಿಹೋದ ಬಳಿಕ ಮನೆಯವರೆಲ್ಲರ ಕೆಟ್ಟ ವರ್ತನೆಯನ್ನು ಕಂಡು , ಬೇಸತ್ತು ,ಅದಕ್ಕಿಂತ ಹೆಚ್ಚಾಗಿ ಭಯದಿಂದ ಮನೆ ಬಿಟ್ಟು ಬಂದಿದ್ದಳು ಸರೋಜಮ್ಮ.


ಗೊತ್ತಿರದ ಆ ಊರಲ್ಲಿ ಮೊದಮೊದಲು ತಾನು ತಂದಿದ್ದ ಅಲ್ಪ ಸ್ವಲ್ಪ ಹಣದಿಂದ ಒಂದು ವಾರ ಹೇಗೋ ಇದ್ದಳು. ಪುಟ್ಟ ಗುಡಿಸಲಲ್ಲಿ ಅವರಿವರ ಸಹಾಯದಿಂದ ಒಂದೆರಡು ಸಾಮಾನು ತಂದು ತನ್ನ ಜೀವನ ಆರಂಭಿಸಿದಳು. ಪಕ್ಕದವರ ಜೊತೆ ಮಾತಾಡಿ ಕೂಲಿ ಕೆಲಸಕ್ಕೆ ತಾನು ಬರುವೆನೆಂದು ಹೇಳಿಕೊಂಡಿದ್ದಳು. ಮಗು ಚಿಕ್ಕದಾದರೂ ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದಳು. ಹೀಗೆ ಕೂಲಿ ಕೆಲಸ , ಗಾರೆ ಕೆಲಸ ಮಾಡುತ್ತಾ ಬಂದ ಹಣದಲ್ಲಿ ಮಗನಿಗೆ ಹೊಟ್ಟೆ ತುಂಬ ತಿನಿಸಿ , ಚೆಂದದ ಬಟ್ಟೆ ತಂದು ಹಾಕಿ ನೋಡಿ ಖುಷಿ ಪಡುತ್ತಿದ್ದಳು.


ಮಗನಿಗೆ ಆರು ವರ್ಷ ತುಂಬಲು ಅದೇ ಊರಲ್ಲಿ ಸರಕಾರಿ ಶಾಲೆಗೆ ಹಾಕಿದಳು. ತಾನು ಸ್ವಲ್ಪ ಶಾಲೆ ಕಲಿತಿದ್ದರಿಂದ ಮಗನಿಗೆ ಹೇಳಿ ಕೊಟ್ಟು ಎರಡಕ್ಷರದ ಮಹತ್ವ ಆತನ ತಲೆಗೆ ಹೋಗುವಂತೆ ಮಾಡಿದ್ದಳು. ಒಳ್ಳೆಯ ಸಂಸ್ಕಾರದ ಗುಣಗಳನ್ನು ಧಾರೆ ಎರೆದಿದ್ದಳು. ಮಗ ಬೆಳೆಯುತ್ತಿದ್ದಂತೆ ಆತನ ಮನಸ್ಸಿನ ತುಂಬೆಲ್ಲ ಸಹಾಯ ಮಾಡುವ ಗುಣ , ಮತ್ತೊಬ್ಬರ ಕಷ್ಟಕ್ಕೆ ಮರಗುವ ಗುಣ , ಹಿರಿಯರಿಗೆ ಗೌರವಿಸುವ ಗುಣ , ಎಲ್ಲರನ್ನು ಸ್ನೇಹಭಾವದೊಂದಿಗೆ ಕಾಣಬೇಕೆನ್ನುವ ಗುಣಗಳು ಸಹ ಬೆಳೆಯುವಂತೆ ಮಾಡಿದ್ದಳು. ತಾಯಿಯ ಒಳ್ಳೆಯ ಮನಸ್ಸಿನಂತೆ ದೇವರೂ ಸಹ ಆಕೆಗೆ ಒಳ್ಳೆಯ ಮಗನನ್ನೇ ಕರುಣಿಸಿದ್ದ. ಓದಿನಲ್ಲಿ ಸದಾ ಮುಂದೆ ಇರುತ್ತಿದ್ದ ಮಹೇಶ ಶಾಲೆಯಲ್ಲಿ , ತಾನಿರುತ್ತಿದ್ದ ಓಣಿ ಕೇರಿಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ.


ಅಮ್ಮನಿಲ್ಲದ ಬದುಕೇ ಇಲ್ಲವೇನೋ ಎಂಬಂತೆ ಮಹೇಶ ಬದುಕುತ್ತಿದ್ದ. ತಾಯಿಗೆ ತಕ್ಕ ಮಗ ಎಂದು ಎಲ್ಲರೂ ರೇಗಿಸುತ್ತಿದ್ದರು. ತನ್ನಮ್ಮ ತಿನ್ನಿಸಿದ ಒಂದೊಂದು ತುತ್ತಿಗೂ ಬೆಲೆಯಿದೆ ,ಅದು ತನ್ನಮ್ಮನ ಪರಿಶ್ರಮದ ತುತ್ತು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಶಾಲೆಯಲ್ಲಿ ಅಪ್ಪನ ಬಗ್ಗೆ ಕೇಳಿದಾಗ ತನ್ನಮ್ಮನೆ ತನಗೆಲ್ಲ , ಅಪ್ಪ ಅಮ್ಮ ಬಂಧು ಬಳಗ ಎಲ್ಲವೂ ತನ್ನ ತಾಯಿ ಸರೋಜಾ ಎಂದು ಎದೆಸೆಟೆಸಿ ಹೇಳುತ್ತಿದ್ದ. ತನ್ನ ಓದು ಮುಗಿಯುತ್ತಿದ್ದಂತೆ ಕೆಲಸ ಹುಡುಕಿಕೊಂಡು ಅಮ್ಮನ ಕೂಲಿ ಕೆಲಸಕ್ಕೆ ಬ್ರೇಕ್ ಹಾಕಿಸಿದ. ಆದರೆ ಅಮ್ಮನ ಆ ಕಷ್ಟದ ಜೀವನವನ್ನು ಕಣ್ಣಾರೆ ಕಂಡಿದ್ದ ಮಹೇಶ ಅಮ್ಮನ ಸುಖಕ್ಕೆ ತನ್ನ ಜೀವವನ್ನಾದರೂ ಕೊಡಲಿಕ್ಕೆ ಸಿದ್ಧನಿದ್ದ. ಅಷ್ಟೊಂದು ಸಮಾಧಾನ ಹಾಗೂ ತಿಳುವಳಿಕೆಯುಕ್ತ ಮನಸ್ಕನಾಗಿದ್ದನು. ಮದುವೆಯಾದರೆ ಬಂದ ಸೊಸೆ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೋ ಇಲ್ಲವೋ ಎಂದು ಸಂದೇಹ ಪಟ್ಟು ತಾನು ಮದುವೆಯೇ ಆಗುವುದಿಲ್ಲವೆಂದು ಪಟ್ಟು ಹಿಡಿದಿದ್ದನು. ಅಮ್ಮ ಎಷ್ಟೇ ಹೇಳಿದರೂ ಒಪ್ಪದೇ ಮುಂದೆ ನೋಡೋಣ ಎಂದು ಆ ತಕ್ಷಣಕ್ಕೆ ಪಾರಾಗುತ್ತಿದ್ದನು.


ಹೀಗೆ ಅಮ್ಮ ಮಗ ಇಬ್ಬರೇ ತಮ್ಮ ಪುಟ್ಟದಾದ ಪ್ರಪಂಚದಲ್ಲಿ ಸುಖವಾಗಿದ್ದರು.


Rate this content
Log in

Similar kannada story from Classics