Shridevi Patil

Classics Inspirational Others

4  

Shridevi Patil

Classics Inspirational Others

ಅದೃಷ್ಟ ಮತ್ತು ಪರಿಶ್ರಮ

ಅದೃಷ್ಟ ಮತ್ತು ಪರಿಶ್ರಮ

3 mins
171



ಅದೃಷ್ಟ ಎನ್ನುವುದು ಪ್ರತಿ ಸಲವೂ ಕೈ ಹಿಡಿಯುವುದಿಲ್ಲ. ಯಾವಾಗಲೋ ಒಮ್ಮೊಮ್ಮೆ ಅದೃಷ್ಟದಿಂದ ಗೆದ್ದರು ಗೆಲ್ಲಬಹುದು. ಆದರೆ , ಅದನ್ನು ನೆಚ್ಚಿಕೊಂಡು ಪ್ರಯತ್ನ ಪಡದೇ , ಪರಿಶ್ರಮ ಹಾಕದೇ ಯಶಸ್ಸು ಬೇಕು ಎಂದರೆ ಹೇಗೆ ತಾನೇ ಅದು ಲಭಿಸಲು ಸಾಧ್ಯ. ಒಮ್ಮೊಮ್ಮೆ ಪ್ರಯತ್ನ ಮಾಡಿ , ಪರಿಶ್ರಮದಿಂದ ಕೆಲಸ ಮಾಡಿದಾಗಲೂ ಸಹ ಫಲ ದೊರೆಯುವುದು ಅಸಾಧ್ಯ ಅನ್ನಿಸಿಬಿಡುತ್ತದೆ. ಅಂಥದ್ದರಲ್ಲಿ ಕೇವಲ ಅದೃಷ್ಟ ನಂಬಿ ಕೂತರೆ ಯಾವ ಕೆಲಸವೂ ಪರಿಪೂರ್ಣವಾಗಿ ಆಗಲು ಸಾಧ್ಯವಿಲ್ಲ. ಒಂದೊಮ್ಮೆ ಅದೃಷ್ಟದ ದೆಸೆಯಿಂದ ಗೆದ್ದವರೂ ಇದ್ದಾರೆ. ಹೇಳಲಿಕ್ಕೆ ಆಗಲ್ಲ ಅದು ಪ್ರತಿಸಲ ನಮ್ಮ ಕೈ ಹಿಡಿಯುತ್ತದೆ ಅಂತ...


ವಿಭಾ ಮತ್ತು ಮನ್ವಿತ ಮನೆಯಲ್ಲಿ ನೋಡಿ, ಇಬ್ಬರು ಇಷ್ಟ ಪಟ್ಟ ಮೇಲೆ ಮದುವೆ ಆದ ಜೋಡಿ. ಎರಡು ಕುಟುಂಬಗಳು ತುಂಬು ಖುಷಿಯಿಂದ ಮದುವೆ ಮಾಡಿ ಮುಗಿಸಿ ಸಂಭ್ರಮ ಪಟ್ಟಿದ್ದರು. ವಿಭಾ ನೋಡಲು ಸುಂದರಿ, ಕನಸು ಕಾಣುತ್ತಾ , ಹಕ್ಕಿಯಂತೆ ಹಾರುತ್ತ , ನೋಡಿದ್ದೆಲ್ಲವನ್ನು ಕೊಂಡುಕೊಳ್ಳುತ್ತ ಸದಾ ನಗು ಮೊಗದ , ಎಲ್ಲರನ್ನು ನಗಿಸುತ್ತ ಇರುವಂತಹ ಮುದ್ದು ಗೊಂಬೆ ಅವಳು. ನಾವಿರುವುದು ಸಮಾಜದಲ್ಲಿ, ಅಲ್ಲಿ ನಾಲ್ಕಾರು ಜನರ ತರಹ ತಾವೂ ಇರಬೇಕು, ಬಾಳಬೇಕು ಎನ್ನುವ ವ್ಯಕ್ತಿತ್ವ ವಿಭಾಳದ್ದು.


ಆದರೆ , ಇದಕ್ಕೆ ವಿರುದ್ಧ ನಮ್ಮ ಹುಡುಗ ಮನ್ವಿತ. ಮನ್ವಿತ್ ಗೆ ಮನೆಯಲ್ಲಿ ಎಲ್ಲರೂ ಮನು, ಮನು , ಅಂತ ಪ್ರೀತಿಯಿಂದ ಕರೆಯುತ್ತಿದ್ದರು. ಈ ಮನು ಹಣ ಖರ್ಚು ಮಾಡುವ ಸ್ವಭಾವದವನಲ್ಲ. ಕೂಡಿಡಬೇಕು ಎನ್ನುವಂತವನು. ಅನಾವಶ್ಯಕ ತಿರುಗಾಟ ಬೇಡ ಎನ್ನುವ ಈ ಮನು, ಬೇರೆಯವರು ಹೇಗಿದ್ದರೇನು? ನಾವು ನಮಗೆ ಇಷ್ಟ ಬಂದ ಹಾಗೆ ಇರುವುದು ಒಳ್ಳೆಯದು, ಯಾರೋ ಹೇಗೋ ಜೀವನ ಮಾಡುತ್ತಾರೆಂದು ನಾವು ನಮ್ಮ ಬದುಕಿನ ದಿಕ್ಕನ್ನು, ಮಾರ್ಗವನ್ನೂ ಬದಲಾಯಿಸಲಿಕ್ಕೆ ಆಗುವುದಿಲ್ಲ ಅಂತ ಹೇಳುವಂತಹ ಸ್ವಭಾವದವನು.



ಈ ಅಪರೂಪದ ಜೋಡಿಗೆ ಬೇರೆ ಊರಲ್ಲಿ ಮನೆ ಮಾಡುವ ಅನಿವಾರ್ಯತೆ ( ಕೆಲಸದ ನಿಮಿತ್ಯ) ಬಂದಾಗ ಅತೀ ಪುಟ್ಟ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದ. ನಿಜ ಹೇಳಬೇಕೆಂದರೆ ಒಂದು ದೊಡ್ಡ ಪಲ್ಲಂಗ ಸಹ ಹಾಕಲು ಬರದಿರುವಷ್ಟು ಸಣ್ಣ ಮನೆ. ಅವನು ನಮ್ಮಿಬ್ಬರಿಗಷ್ಟೇ ಅಲ್ಲವೇ ಇಷ್ಟು ಸಾಕೆಂದಿದ್ದನು. ಆದರೆ ವಿಭಾ ಆ ಮನೆ ನೋಡಿದ ತಕ್ಷಣ ಇಷ್ಟ ಪಡದೇ ಮುಖ ಶಿಂಡರಿಶಿಕೊಂಡಳು. ಮನು ಆಮೇಲೆ ಸರಿ ಹೋಗ್ತಾಳೆ ಅಂತ ಸುಮ್ಮನಾದನು. ಬರುವ ಸಂಬಳದಲ್ಲಿ ಅಪ್ಪ ಅಮ್ಮನಿಗೆ ಕಳುಹಿಸಿ ಮಿಕ್ಕಿದ್ದರಲ್ಲಿ ತನ್ನ ಮನೆ,ಸಂಸಾರ ನಡೆಸಬೇಕಾಗಿತ್ತು. ಹೇಳಿಕೊಳ್ಳುವಷ್ಟು ಜಮೀನು ಇರಲಿಲ್ಲ. ಸಂಬಳ ನೆಚ್ಚಿಕೊಂಡು ಜೀವನ ಮಾಡುತ್ತಿದ್ದರು.


ಹೀಗಾಗಿ ಮನು ಕಾಸಿಗೆ ಕಾಸು ಕೂಡಿಟ್ಟು , ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಂಡು,ತಾವಿಬ್ಬರು ತಮ್ಮ ಮಕ್ಕಳೊಂದಿಗೆ ಖುಷಿಯಾಗಿ, ಚೆನ್ನಾಗಿ ಇರಬೇಕೆಂಬುದು ಆತನ ಮಹದಾಸೆಯಾಗಿತ್ತು.


ಆತನ ಕೂಡಿಡುವ ಪ್ರವೃತ್ತಿ ವಿಭಾಳಿಗೆ ಒಮ್ಮೊಮ್ಮೆ ಇರುಸು ಮುರುಸಾಗುತ್ತಿತ್ತು. ಇವತ್ತು ನನಗೆ ನಿನಗೆ ಸುಖಕ್ಕೆ ಇಲ್ಲದ್ದು ನಾಳೆ ಯಾಕೆ ಬೇಕು, ಇದ್ದರೆಷ್ಟು ಇಲ್ಲವಾದರೆಷ್ಟು? ಅಂತ ಖ್ಯಾತೆ ತೆಗೆಯುತ್ತಿದ್ದಳು.

ಒಮ್ಮೊಮ್ಮೆ ಇಬ್ಬರಿಗೂ ಜೋರು ಜಗಳವೂ ಆಗುತ್ತಿತ್ತು..


ಮನು ತನ್ನ ದುಡಿಮೆಯ ಫಲ ತನ್ನ ಮಕ್ಕಳಿಗೆ ಅಂತ ಕೂಡಿಡುತ್ತಿದ್ದನು, ಅಪ್ಪ ಅಮ್ಮ ವಯಸ್ಸಾದವರು,ಸ್ವಲ್ಪ ಅವರ ಆರೋಗ್ಯದ ದೃಷ್ಟಿಯಿಂದ ಕೂಡಿಡುತ್ತಿದ್ದನು. ಇನ್ನೊಂದು ಸ್ವಲ್ಪ ತಮ್ಮಿಬ್ಬರ ಮುಂದಿನ ಭವಿಷ್ಯತ್ತಿಗಾಗಿ ಕೂಡಿಡುತ್ತಿದ್ದನು. ಇದನ್ನರಿಯದ ಆಕೆ, ಅಲ್ಲಾರಿ ಮಕ್ಕಳ ಅದೃಷ್ಟ ಚೆನ್ನಾಗಿದ್ದರೆ, ಅವರ ಹಣೆಬರಹವನ್ನು ದೇವರು ಚೆನ್ನಾಗಿ ಬರೆದಿದ್ದರೆ ಅವರಿಗ್ಯಾಕೆ ನಾವು ಹಣ ಕೂಡಿದಬೇಕು?

ಇನ್ನು ಅತ್ತೆ ಮಾವನವರ ಆರೋಗ್ಯಕ್ಕೆ ಏನಾಗಿದೆ? ಅವರ ಅದೃಷ್ಟ ಚೆನ್ನಾಗಿದೆ ಅನ್ಸುತ್ತೆ ,ಆರಾಮಿದಾರೆ ಮತ್ಯಾಕೆ ಕೂಡಿಡುವ ಅವಶ್ಯಕತೆ ಇದೆ.?


ನೀವೇ ಮಸ್ತಾಗಿ ದುಡಿಯುವವರು ಇರಬೇಕಾದಾಗ ಆ ಭವಿಷ್ಯಕ್ಕಾಗಿ ನಮಗೆ ಏಕೆ ಹಣ ಕೂಡಿಡುತ್ತಿರುವಿರಿ?


ನಿಮಗೆಲ್ಲೋ ಬ್ರಾಂತು , ಒಮ್ಮೊಮ್ಮೆ ಅದೃಷ್ಟ ಚೆನ್ನಾಗಿದ್ದರೆ ಎಲ್ಲವೂ ಸುಲಿದ ಬಾಳೆಹಣ್ಣಿನಂತೆ ಸುಲಭವಾಗಿ ಬಿಡುತ್ತದೆ ಅಂತ ಕತೆ ಪುರಾಣ ಹೇಳುತ್ತಿದ್ದಳು.


ನೋಡಿ ನೋಡಿ ಮನು, ನೋಡೇ ವಿಭಾ ಸಮಯ ಸಂದರ್ಭ ಹೇಗೆ ಬರುತ್ತೆ, ಯಾವಾಗ ಬರುತ್ತೆ ಅಂತ ಹೇಳೋಕಾಗೋಲ್ಲ? ನಾನು ಇವತ್ತಿದ್ದವನು ನಾಳೆ ಇರುತ್ತೇನೋ ಇಲ್ಲವೋ ಅದೂ ಗೊತ್ತಿಲ್ಲ. ಅದೃಷ್ಟ ನಂಬುವುದಕ್ಕಿಂತ ಪ್ರಾಮಾಣಿಕ ಕೆಲಸ ಮಾಡಿ, ಪರಿಶ್ರಮದಿಂದ ದುಡಿದರೆ ಮಾತ್ರ ಅದರ ಫಲ ಮಾತ್ರ ಅದ್ಭುತವಾಗಿ ಇರುತ್ತದೆ.


ನೀನೇ ಹೇಳು, ನಿಮ್ಮ ತಂದೆಗೆ ಹಾರ್ಟ್ ಅಟ್ಯಾಕ್ ಆಗಿ ಎಮರ್ಜೆನ್ಸಿ ಆಪರೇಷನ್ ಮಾಡಿಸಲು ವೈದ್ಯರು ಹೇಳಿದಾಗ ನಿಮ್ಮ ಹತ್ತಿರ ಹಣ ಸ್ವಲ್ಪ ಕೂಡ ಇರಲಿಲ್ಲ. ಆಗ ಅದೃಷ್ಟ ನಂಬಿ ಕೂತಿದ್ದರೆ ಅಪ್ಪ ಉಳಿಯುತ್ತಿದ್ದರಾ? ಹೇಳು? ಇಲ್ಲ ಅಲ್ಲವಾ? ವೈದ್ಯರ ಪರಿಶ್ರಮದ ಆಪರೇಷನ್ ಜೊತೆಗೆ ನನ್ನ ದುಡಿಮೆಯಲ್ಲಿ ಕೂಡಿಟ್ಟ ಆ ಹಣದಿಂದ ನಿನ್ನ ತಂದೆ ಜೀವಂತ ಉಳಿದಿದ್ದರು. ಒಪ್ಪುತ್ತೇನೆ ನಿನ್ನ ಮಾತನ್ನೂ, ಅದೃಷ್ಟ ಚೆನ್ನಾಗಿದ್ದಾಗ ಬದುಕಬಹುದು, ಆದರೆ ಎಲ್ಲ ಸಮಯದಲ್ಲಿ ಆಗಲ್ಲ. ಪರಿಶ್ರಮ ಹಾಕಿ ಕೆಲಸ ಮಾಡಿ ಸುಖ ಜೀವನ ಮಾಡೋಣ, ಅಂತ ತಿಳಿ ಹೇಳಿದಾಗ ವಿಭಾ ಖುಷಿಯಿಂದ ಗಂಡನನ್ನು ಅಪ್ಪಿಕೊಂಡು ತನ್ನ ತಿಳುವಳಿಕೆ ತಪ್ಪಾಗಿತ್ತು, ಅದೃಷ್ಟಾನು ಬೇಕು, ಪರಿಶ್ರಮವೂ ಬೇಕು ಅಂತ ಗಂಡನಿಗೆ ಕಿವಿಯಲ್ಲಿ ಮೆಲ್ಲಗೆ ಹೇಳಿ ಕೆನ್ನೆಗೊಂದು ಮುತ್ತಿಟ್ಟು ಅಡುಗೆಮನೆ ಕಡೆ ಓಡಿದಳು..


Rate this content
Log in

Similar kannada story from Classics