ಆಶಾತುರಾಣಾಂ.................
ಆಶಾತುರಾಣಾಂ.................


ಪಾಕೀಟ ಚೀಲದಲ್ಲಿ ಮಲಗಿದ್ದ ಕರೆವಾಣಿ ಕಿರ್ರ್ ಎಂದಿತು.
ನೋಡಿದೆ ಜಗದೀಶ್!!
"ಏನಪ್ಪಾ? ಈಗಲಾದರೂ ಈ ಬಡಪಾಯಿಯ ನೆನಪಾಯಿತಲ್ಲಾ?"
"ಮತ್ತೆ ಏನು ವಿಶೇಷ? " ತಾನೇನಾದರೂ ವಿಷಯ ತಿಳಿಸಬೇಕಿದ್ದರೆ ಇವನ ಆರಂಭ ಹಾಗೆಯೇ.
"ಏನಿಲ್ಲಪ್ಪಾ!! ಅದೇ ಕೆಲ್ಸ, ದಿನ, ರಾತ್ರೆ ಎನೂ ವಿಶೇಷವಿಲ್ಲ"
ನಮ್ಮಿಬ್ಬರ ನಡುವೆ ಸಲಿಗೆಯಿದೆ, ಆದರೆ ಆತ ಡೈರೆಕ್ಟರ್ ಲವೆಲ್.
"ಈ ಸಾರಿಯೂ ಇನ್ಕ್ರಿಮೆಂಟ್ ಬೋನಸ್ ಏನೂ ಇಲ್ಲವಂತೆ, ಅವರು ತಮ್ಮ, ತಮ್ಮವರ ಸಂಬಳ ಎಗ್ಗಿಲ್ಲದೇ ಏರಿಸುತ್ತಾರೆ, ನಮಗೆ ಮಾತ್ರ ಏನಿಲ್ಲವಂತೆ" ಅವನ ಅಳಲು.
"ಹೋಗಲಿ ಬಿಡೋ, ನಾವು ಮಾಡಿದುದಕ್ಕೆ ಪ್ರತಿಫಲ ದೇವರೇ ಕೊಡುತ್ತಾನೆ" ನಾನೆಂದೆ.
"ಏನು ದೇವರು ಕೊಡೋದು, ನೀನು ಅಷ್ಟು ಕೆಲಸ ಮಾಡ್ತೀಯಾ, ಕೆಲಸ ಮೊದಲಿಗಿಂತ ಜಾಸ್ತಿಯೇ, ಸಂಬಳ ಮಾತ್ರ ಮೊದಲಿಗಿಂತ ಕಮ್ಮಿ ಯಾಕೆ ಹೀಗೆ? ಹೇಳು?
ನಿನಗೊಂದೂ ಅರ್ಥವಾಗಲ್ಲ, ನಿನ್ನನ್ನು ಅವರು ಯೂಸ್ ಮಾಡ್ತಾರೆ ನೀನೂ ಇದ್ದೀಯಾ!! ಇದೇ ನನಗಾಗಿದ್ದರೆ ಅವರಿಗೆ ತೋರ್ಸಿದ್ದೆ!!"
"ಅವರಿಗೆ ಸಿಗದಿದ್ದಮೇಲೆ ನಮಗೆಲ್ಲಿಂದ ಕೊಡ್ತಾರೆ ಹೇಳು,..... ಹಾಗಾದ್ರೂ ಇರಲಿ ಅಂತ ಕಡಿಮೆ ಹಣಕ್ಕೆ ಹೊರಗುತ್ತಿಗೆ ತಗೊಂಡು... ಅದೂ ನಮ್ಮನ್ನ ಮನೆಗೆ ಕಳುಹಿಸಬಾರದು ಎಂತ, ಹಾಗಿರುವಾಗ ನೀನು ಏನೇನೆಲ್ಲಾ ಹೇಳಬೇಡ ಪಾಪ!!"
ಈ ರಿಸೆಷನ್ ಬಂದಾಗ ಪಾಪ, ಬಾಸ್ ಕಳುಹಿಸಿದ ಮಿಂಚಂಚೆಯೊಂದು ನನ್ನ ಕರುಳನ್ನೇ ಕರಗಿಸಿತ್ತು, ಅದರಲ್ಲಿನ ಸಾರಾಂಶ ನನ್ನ ಮನಸ್ಸನ್ನು ಕರಗಿಸಿ ನಾನು ಯಾರನ್ನೂ ಕೇಳದೇ ನಿಮ್ಮ ಕಷ್ಟದ ಕಾಲದಲ್ಲಿ ನನಗೆ ಯಾವೊಂದೂ ಸೌಕರ್ಯ ಬೇಡವೆಂದೂ ಸಂಬಳ ಅರ್ಧ ಮಾತ್ರ ಕೊಟ್ರೆ ಸಾಕೆಂದೂ ಮರುತ್ತರ ಕಳುಹಿಸಿದ್ದೆ. ಅದನ್ನೇ ತುಂಬಾ ಪ್ರಶಂಶೆ ಮಾಡಿ ಬಾಸ್ ಎಲ್ಲರೀಗೂ ಕಳುಹಿಸಿದ್ದ, ಅದನ್ನ ನೋಡಿ ನನ್ನ ಎದೆಉಬ್ಬಿತ್ತು, ಆದರೆ ನನ್ನ ಸಹ ಕೆಲಸಗಾರರಿಗೆ ಅದು ಸರಿಯಾಗಿ ಕಾಣಲಿಲ್ಲ, ಎಲ್ಲರೂ ನನ್ನ ಬೈಯ್ಯಲು ಬಂದಾಗ ಅದು ನನ್ನ ವೈಯ್ಯಕ್ತಿಕ ವಿಷಯ ಎಂದು ಹೇಳಿ ಎಲ್ಲರ ಬಾಯಿ ಮುಚ್ಚಿಸಿದ್ದೆ.
"ಹಾಗೇನಿಲ್ಲ ಈ ಸಿದ್ಧೂ, ಕರ್ಣ, ಕರುಣಾಕರ, ರಾಮ್ ಎಲ್ಲರೂ ಬಿಟ್ಟು ಹೋದರಲ್ಲ, ಅವರಿಗೆಲ್ಲರಿಗೂ ಒಳ್ಳೆಯ ಕೆಲಸವೇ ಸಿಕ್ಕಿತ್ತಲ್ಲ, ಸಂಬಳವೂ ಜಾಸ್ತಿಯೆ, ಗೊತ್ತಾ?" ಅವನ ಮಾತು
"ಯಾಕಪ್ಪಾ ನೀನೂ ಪ್ರಯತ್ನಿಸ್ತಾ ಇದ್ದೀಯಾ ಹೇಗೆ?" ನಾನು ಆತನತ್ತ ಪ್ರಶ್ನೆ ಎಸೆದೆ.
"ಹಾಗೇನಿಲ್ಲ , ಆದರೂ ಹೊರಗಿನಿಂದ ಬೇಡಿಕೆ ಚೆನ್ನಾಗಿ ಬರ್ತಾ ಇದೆ" ಅವನೆಂದ.
"ಆದರೆ ಜಗ್ಗೂ ಬೇರೆ ಎಲ್ಲರಿಗಿಂತ ನಿನಗೆ ಒಳ್ಳೆಯ ಸಂಬಳಾನೇ ಕೊಡ್ತಾ ಇದ್ದಾರಲ್ಲಾ, ಹಾಗಿರುವಾಗ ನೀನೇ ಹೀಗಂದ್ರೆ ಅದು ಸರಿಯಲ್ಲ ಕಣಪ್ಪಾ" ನನಗೆ ಅದು ಸರಿಯೆನಿಸಲಿಲ್ಲ
" ಅಲ್ಲ ನಾನೇನೂ ಕೊನೆಯವರೆಗೂ ಇಲ್ಲಿಯೇ ಇರ್ತೇನೆ ಅಂತ ಬರೆದು ಕೊಟ್ಟಿದ್ದೇನಾ? ಹೌದು ೭-೮ ವರುಷಗಳಿಂದ ಇಲ್ಲಿದ್ದೇನೆ, ಆದರೆ ಸಂಬಳಕ್ಕೆ ಸರಿಯಾಗಿ ಕೆಲಸವನ್ನೂ ಮಾಡುತ್ತಿದ್ದೇನಲ್ಲ?" ಆತ
ನಾನು ಮಾತುಕಥೆ ಮುಗಿಸುವ ಮೊದಲೆಂದೆ " ಆದರೂ ನನಗೇಕೋ ಇದು ಸರಿ ಬರುವುದಿಲ್ಲಪ್ಪಾ"
ಇದಾಗಿ ನಾಲ್ಕೇ ದಿನಕ್ಕೆ ಜಗ್ಗೂ ಒಂದು ಪಾರ್ಟಿ ಅರೇಂಜ್ ಮಾಡಿದ್ದ
" ನೋಡೂ ಇವರು ಶೇಖರ್, ನನ್ನ ಕಸಿನ್ " ಅದ್ಯಾಕೋ ಶೇಖರ್ ಹೇಳುತ್ತಿದ್ದ ವಿಷಯ ನನ್ನಲ್ಲಿ ಸ್ವಲ್ಪ ಕುತೂಹಲ ಮೂಡಿಸಿತ್ತು. ನನ್ನ ಹಾಗೇ ಇದ್ದರೂ ಆತನಿಗೆ ನನ್ನ ಎರಡುಪಟ್ಟು ಸಂಬಳವಿದೆ, ಹಾಗೆ ನೋಡಿದರೆ ಆತ ಎರಡು ಪ್ರೋಜೆಕ್ಟ್ ನೋಡಿಕೊಂಡರೆ ನಾನು ನಾಲ್ಕು ನಾಲ್ಕು. ಯೋಚಿಸ ಹೊರಟರೆ ನನಗೂ ಹೊರಗಡೆ ಈ ಕಂಪೆನಿಗಿಂತ ಜಾಸ್ತಿ ಕೊಡುವವರು ಸಿಕ್ಕೇ ಸಿಕ್ಕಾರು ಅನ್ನ್ನಿಸಿತು.ತಲೆ ಕೊಡವಿದೆ. ಎಂತಹ ಯೋಚನೆ, ಕಂಪೆನಿ ಈಗ ಕಷ್ಟದಲ್ಲಿದೆ.ಇಲ್ಲದಿದ್ದರೆ ಅವರೂ ಜಾಸ್ತಿ ಸಂಬಳ ಕೊಡುತ್ತಿರಲಿಲ್ಲವಾ?
ಮಾರನೆಯ ದಿನ ಆಫೀಸಿನಲ್ಲಿ ಹೊಸ ಮುಖಗಳನ್ನು ಕಂಡೆ .
ಹೊಸ ಕೆಲಸ ಸಿಗುತ್ತೆ ಅಂತ ಕಾಣ್ಸತ್ತೆ, ಜಾಸ್ತಿ ಜನರು ಬೇಕೇ ಬೇಕಲ್ಲಾ. ಜಗ್ಗೂ ಇವತ್ತೂ ಬೇರೆ ಎನೆಲ್ಲಾ ಹೇಳುತ್ತಿದ್ದ.
ನಮ್ಮ ಬಾಸ್ ಸಿಹಿ ಹಂಚಿದರಂತೆ ಹೊಸ ಬಂಗ್ಲೆ ತಗೊಂಡ್ರೂ ಅಂತ. ಹೊಸ ಕಾರು ಬುಕ್ ಮಾಡಿದರಂತೆ , ಎಲ್ಲಾ ಸುಳ್ಳು.
ಇದಾಗಿ ಒಂದು ವಾರಕ್ಕೆ ಮತ್ತೊಮ್ಮೆ ಅವನ ಕರೆ ಬಂತು.
ಹೇಳು ಏನು ವಿಶೇಷ? ನಾನೇ ಕೇಳಿದೆ
"ಒಂದು ಒಳ್ಳೆಯ ಬೇಡಿಕೆಯಿದೆ"
" ಸೇರ್ಕೋ ಹಾಗಾದ್ರೆ" ನಾನೆಂದೆ.
" ನಂಗಲ್ಲ ಕಣೋ ನಿಂಗೆ"
"ನನ್ನ ಈ ವಯಸ್ಸಲ್ಲಿ ಯಾರು ಕೇಳ್ತಾರೆ, ಹೇಳು?" ನಾನು ಕೇಳಿದೆ ಗಲಿಬಿಲಿಗೊಂಡು.
" ಬರ್ತೀಯಾ ಹೇಳು, ನಾನೂ ಬಿಡ್ತಾ ಇದ್ದೇನೆ, ನಂಗೂ ಈಗ ಸಿಗೋ ಒಂದೂವರೆ ಪಟ್ಟು, ನಿಂಗೂ "
" ನೋಡೋಣ" ಎಂದೆ ಅರ್ಧ ಸ್ವರದಲ್ಲಿ.
ಮುಂದಿನ ರವಿವಾರ ನನ್ನ ಸಂದರ್ಶನವಿತ್ತು, ಅವನೂ ಬಂದಿದ್ದ.
ಸಂದರ್ಶನ ತುಂಬಾನೇ ಒಳ್ಳೆಯದಾಗಿತ್ತು, ಅವರ ಮುಖ ನೋಡಿಯೇ ನನಗೆ ನಾನು ಅವರಿಗೆ ಬೇಕೇ ಬೇಕು ಅಂತ ಗೊತ್ತಾಗಿತ್ತು. ಅವರೂ ನನಗೆ ಒಳ್ಳೆಯ ಭವಿಷ್ಯವಿದೆ ಅಂತ ತೋರಿಸಿಕೊಟ್ಟರು. ಸಂಬಳದ ಚೌಕಾಶಿ ಮುಂದುವರಿದು ನಾನೆಣಿಸಿದ ದುಪ್ಪಟ್ಟು ನಿಶ್ಕರ್ಷೆಯಾಯ್ತು.
ನಾನು ಈಗ ಇದ್ದ ಸ್ಥಾನಕ್ಕೆ ಮೂರು ತಿಂಗಳ ಮೇಲೆಯೇ ಬಿಡಬೇಕಾಗಿತ್ತು, ಆದರೆ ಅವರು ನನಗೆ ಒತ್ತಾಯ ಮಾಡಿದುದರಿಂದ ಅಳೆದೂ ಸುರಿದೂ ಹದಿನೈದು ದಿನಕ್ಕೇ ಸೇರಿಕೊಂಡೆ ಹೊಸ ಕಂಪೆನಿಯನ್ನಯಾಕೆಂದರೆ ಹೊಸ ಪ್ರೋಜೆಕ್ಟ್ ಬೇಗನೇ ಆರಂಭವಾಗುತ್ತಲಿದ್ದರಿಂದ..
ಒಂದೇ ತಿಂಗಳಲ್ಲಿ ಇವರ ಬಂಡವಾಳ ಗೊತ್ತಾಯ್ತು. ಕಂಪೆನಿಯೇ ಅಲ್ಲ ಅದು, ಜನರನ್ನ ಏಮಾರಿಸಿದುಡ್ಡು ಮಾಡಿಕೊಳ್ಳೋ ಬ್ಲೇಡ್ ಕಂಪೆನಿ.ಪುನಹ ನಾನು ನಿರುದ್ಯೋಗಿ.
ಸುಮ್ಮನೆ ಒಮ್ಮೆ ಹಳೆ ಕಂಪೆನಿಗೆ ಹೋದೆ.
ಜಗದೀಶ್ ನನ್ನ ಸ್ವಾಗತಿಸಿದ. ಅರೇ ನೀನು ಇಲ್ಲಿದ್ದೀಯಾ? ಹಳೇ ಕಂಪೆನಿಯಲ್ಲೇ, ಅಷ್ಟೇ ಅಲ್ಲ ...
ನನ್ನ ಜಾಗಕ್ಕೆ ಹೊಸಬನನ್ನು ಸೇರಿಸಿಕೊಂಡು ತಿಂಗಳಾಗಿತ್ತು, ಯಾರು ಗೊತ್ತಾ ಶೇಖರ್ , ಜಗ್ಗೂ ನ ಕಸಿನ್!!!