STORYMIRROR

Bellala Gopinath Rao

Others

4  

Bellala Gopinath Rao

Others

ಮಾನವೀಯತೆ

ಮಾನವೀಯತೆ

2 mins
88


ಬೆಳಿಗ್ಗೆ ಎಂದಿನಂತೆ ಆರೂವರೆಗೆ ರೆಡಿಯಾಗಿ ಆಫೀಸಿಗೆ ಹೋಗಲು ಮನೆಯಿಂದ ಹೊರ ಬಿದ್ದಾಗಲಷ್ಟೇ ಗೊತ್ತಾದುದು ನನ್ನಗಾಡಿಯ ಮುಂದಿನ ಬಲ ಚಕ್ರ ನೆಲಕ್ಕಪ್ಪಚ್ಚಿಯಾಗಿದೆ ಅಂತ. ಅನಿವಾರ್ಯವಾಗಿ ನಡೆದೇ ಹೋಗಬೇಕಾಗಿತ್ತು. ಬಸ್ಸು ಆಟೋ ಯಾವುದು ಸಿಗಬೇಕಾದರೂ ಒಂದೂವರೆ ಕಿ ಮಿ ನಡೆಯೋದು ಅನಿವಾರ್ಯ.ಇನ್ನೇನು ಮಾಡಲೂ ಸಾಧ್ಯವಿಲ್ಲ ಆ ಬೆಳ್ಳಂಬೆಳಗ್ಗೆ.

ಯಮ ಭಾರ ದ( ಈಗಂತೂ ಶಾಲೆಗೆ ಹೋಗುವ ಮಕ್ಕಳ ಹಾಗೆ ಲ್ಯಾಪ್ ಟೋಪ್) ಬ್ಯಾಗ್ ಹೊತ್ತು ಕೊಂಡು ಹೋಗ ಬೇಕು. ಅಂತೆಯೇ ಬಸ್ ನಿಲ್ದಾಣ ತಲುಪಿ ಬಸ್ ಗೆ ಕಾಯುತ್ತಾ ನಿಂತೆ.


ಬೆಳಗಿನ ಕುಳಿರ್ಗಾಳಿ.ಅಲ್ಲೊಂದು ಇಲ್ಲೊಂದು ವಾಹನ ಚಲಿಸುತ್ತಿದೆ ರಸ್ತೆಯಲ್ಲಿ, ಎಲ್ಲರಿಗೂ ಇನ್ನೂ ಬೆಳಗಾಗಿರಲಿಲ್ಲವಲ್ಲ.ಆಗಲೇ ಬಾಲವಾಡಿಸುತ್ತಾ ತನ್ನೆರಡು ಕಂದಮ್ಮಗಳನ್ನು ಕರೆದುಕೊಂಡು ಬಂದಳು ತಾಯಿಯೊಬ್ಬಳು. ಮಕ್ಕಳಿಗೆ ಆಹಾರ ಹುಡುಕಲು ಹೇಳಿಕೊಡುತ್ತಿದ್ದಳೋ ಏನೋ. ಮಕ್ಕಳಿಗೆ ಸಾಕಾಯ್ತು ಅನ್ನಿಸುತ್ತೆ. ಒಬ್ಬ ನಿಂತ ತಾಯಿಯ ಕುತ್ತಿಗೆಯ ಪಕ್ಕವೇ ಅವಳಿಗೆ ತಾಕುವಂತೆ ಕುಳಿತ, ಅಕ್ಕರೆಯಿಂದೊಮ್ಮೆ ಅವನ ಮೂತಿಗೆ ಮೂತಿ ತಾಕಿಸಿದಳು ತಾಯಿ. ಇನ್ನೊಬ್ಬ ಮಗಳು ಪ್ರಾಯಷ ಹುಷಾರಿಲ್ಲ ಕುತ್ತಿಗೆ ಉಬ್ಬಿಕೊಂಡಿತ್ತು ಏನು ರೋಗವೋ ಏನಾಯ್ತೋ. ಅದು ತಾಯಿಯ ಸ್ಥನಕ್ಕೇ ಬಾಯಿ ಹಾಕಿತು. ಹಸಿವಾಯ್ತೋ ಏನೋ. ಬೆಳಗಿನ ಹೊತ್ತು, ಯಾವ ಅಂಗಡಿ ಮುಗ್ಗಟ್ಟುಗಳೂ ತೆರೆದಿರಲಿಲ್ಲ, ನನ್ನ ಬ್ಯಾಗಲ್ಲೂ ಈ ಸಂಸಾರಕ್ಕೆ ಬೇಕಾದ ತಿಂಡಿ ಇದ್ದಿರಲಿಲ್ಲ. ಆ ತಾಯಿಯ ಹಾಗೇ ನಾನೂ ಅಸಹಾಯಕನಾಗಿ ನೋಡುತ್ತಿದ್ದೆ. ಏನು ಮಾಡಿಯಾಳು ಅಂತ ನನ್ನ ಕುತೂಹಲ. ತಾಯಿಯ ಅಸಹನೆ ಕಿರಿಕಿರಿಯೂ ಕಾಣಿಸುತ್ತಿತ್ತು. ಒಂದು ಜಾಗದಲ್ಲಿ ನಿಲ್ಲದೇ ಮಕ್ಕಳನ್ನೂ ತಪ್ಪಿಸಿಕೊಂಡು ತಿರುಗಾಡಿದರೂ ಅವೂ ತಮ್ಮ ಬಾಯಿ ಚಪಲ ನಿಲ್ಲಿಸಿರಲಿಲ್ಲ.ಆದರೆ ಪ್ರಾಯಶ: - ತಾಯಿಯೇ ಬಡಕಲು, ಮಕ್ಕಳಿಗೆ ಅವಳಲ್ಲಿ ಎಲ್ಲಿ ಉಳಿದೀತು ಹಾಲು ಪಾಪ. ತಾಯಿಯ ಚಡಪಡಿಕೆಯೂ ಜೋರಾಯ್ತು. ಮಕ್ಕಳೂ ಬಿಡಲೊಲ್ಲವು.


ಒಂದೇ ಕ್ಷಣ.... ಮೌನದ ಅಸಹನೀಯತೆ, ನಾನೂ ಚಡಪಡಿಸಿದೆ ಒಂದು ಕ್ಷಣ. ಒಂದು ಮಕ್ಕಳ ತಾಯಿಯ ಕಕ್ಕುಲಾತಿಯ, ಅಕ್ಕರೆಯ,ಪ್ರಶ್ನೆ, ಪ್ರಾಯಶ: ಪ್ರಪಂಚದ ಎಲ್ಲಾ ತಾಯಿಯ ಹಕ್ಕಿನದ್ದೂ ಕೂಡಾ..

ನಾನೇನು ಬರೆಯುತ್ತಿದ್ದೇನೆ ಅನ್ನುವುದು ಅ ಕ್ಷಣ ನನ್ನಂತೆ ನೀವೂ ಊಹಿಸಲಾರಿರಿ.....ತಾಯಿ ಗಕ್ಕನೆ ವಾಂತಿ ಮಾಡಿತು.ಅದನ್ನೇ ಪಂಚ ಭಕ್ಷ ಪರಮಾನ್ನದ ಹಾಗೆ ಮಕ್ಕಳಿಬ್ಬರೂ ತಿನ್ನತೊಡಗಿದವು.ಇನ್ನೊಂದೇ ಕ್ಷಣದಲ್ಲಿ ಆ ಜಾಗ ಈಗ ತಾನೇ ನೆಲ ತೊಳೆದ ಹಾಗೆ ಹೊಳೆದಿತ್ತು.ನೋಡನೋಡುತ್ತಿದ್ದಂತೆ ನಿಲ್ದಾಣದಲ್ಲಿ ಬರುವ ಬಸ್ಸಿಗಾಗಿ ಜನ ಸೇರತೊಡಗಿ ತಾಯಿ ತನ್ನ ಮಕ್ಕಳನ್ನು ಕರೆದುಕೊಂಡು ಜಾಗ ಖಾಲಿಮಾಡಿದಳು.


ನನಗೆ ತನ್ನ ಹುಟ್ಟುಹಬ್ಬಕ್ಕಾಗಿ ಎಲ್ಲರಿಗೂ ಪಂಚ ತಾರಾ ಹೋಟೆಲ್ಲಿನಲ್ಲಿ ಪಾರ್ಟಿ ಮಾಡಿಸಿಕೊಂಡು ಎಲ್ಲರ ಹತ್ರ ಉಡುಗೊರೆ ತೆಗೆದುಕೊಂಡು ಮುಂದಿನೆರಡು ತಿಂಗಳು ತನ್ನ ಕೆಲಸಗಾರರಿಗೆ ಅರ್ಧ ಅರ್ಧ ಸಂಬಳ ಕೊಡುತ್ತಾ ಸತಾಯಿಸಿದ್ದ ಬಾಸ್ ನೆನಪಾಯ್ತು..ಪ್ರಾಣಿಗಳಲ್ಲೂ ಇದೆ ತನ್ನ ಮಕ್ಕಳನ್ನು ಹೇಗಾದರೂ ಮಾಡಿ ಹಸಿವೆ ಹಿಂಗಿಸುವ ಗುಣ.... ಆದರೆ ನಮ್ಮಲ್ಲಿ...ನಾವೆಲ್ಲಿದ್ದೇವೆ... ಎಲ್ಲಿಗೆ ಹೋಗುತ್ತಿದ್ದೇವೆ...



Rate this content
Log in