ಆನೆ ಮತ್ತು ತೋಳ
ಆನೆ ಮತ್ತು ತೋಳ
ಮಕ್ಕಳ ಕಥೆ
ಒಂದು ಕಾಡಿನಲ್ಲಿ ತೋಳವೊಂದು ತನಗಾಗಿ ಒಂದು ಗಟ್ಟಿಯಾದ ಮನೆಯನ್ನು ಕಟ್ಟಿಕೊಂಡಿತ್ತು. ಇತರ ಪ್ರಾಣೆಗಳೆದುರು ತನ್ನ ಮನೆಯ ಬಗ್ಗೆ ತುಂಬಾ ಜಂಭ ಕೊಚ್ಚಿಕೊಳ್ಳುತ್ತಾ ತಾನೇ ಹೆಚ್ಚೆಂದು ಅಹಂಕಾರದಿಂದ ಮೆರೆಯುತ್ತಿತ್ತು . ವರ್ಷಗಳು ಕಳೆದಂತೆ ಮಳೆ, ಬಿಸಿಲು, ಗಾಳಿಗಳ ಹೊಡೆತಕ್ಕೆ ತೋಳದ ಮನೆ ಹಳೆಯದಾಗುತ್ತಾ ಬಂತು.
ಒಂದು ದಿನ ಆನೆಯೊಂದು ಆ ಅಹಂಕಾರಿ ತೋಳದ ಮನೆಯ ಪಕ್ಕ ನಡೆದುಕೊಂಡು ಹೋಗುವಾಗ, ಆನೆಯ ಹೆಜ್ಜೆಯ ತುಳಿತಕ್ಕೆ, ತೋಳದ ಮನೆ ಮುರಿದು ಬಿದ್ದಿತು.
ಇದನ್ನು ನೋಡಿದ ಆನೆ, ಕೂಡಲೇ ಅಲ್ಲಿಯೇ ಕೆಳಗೆ ಬಿದ್ದಿದ್ದ ಮರ ,ಕಲ್ಲು, ಮೊಳೆಗಳನ್ನು ಸೇರಿಸಿ, ಕುಸಿದು ಹೋದ ಮನೆಯನ್ನು ಮತ್ತೆ ಸರಿಪಡಿಸಿಕೊಟ್ಟು ಮುಂದೆ ಹೋಗುತ್ತಿತ್ತು. ಅಷ್ಟರೊಳಗೆ ಹಿಂದಿನಿಂದ ಬಂದ ಆ ತೋಳ , ಆನೆಯನ್ನು ತಡೆದು ನಿಲ್ಲಿಸಿ, ಚೆನ್ನಾಗಿ ಬಯ್ಯುತ್ತಾ, ತನಗೆ ಹೊಸಮನೆ ಕಟ್ಟಿಕೊಡುವಂತೆ ಜೋರಾಗಿ ಕಿರುಚಾಡಿತು.
ಆ ದುರಹಂಕಾರಿ ತೋಳದ ಆರ್ಭಟವನ್ನು ಕೇಳಿದ ಆನೆ ಕೋಪಗೊಂಡು, ಆ ತೋಳವನ್ನು ಅನಾಮತ್ತಾಗಿ ಮೇಲಕ್ಕೆತ್ತಿ,"ಎಲಾ, ದುರಹಂಕಾರಿ ತೋಳವೇ, ನನ್ನಿಂದ ನಿನ್ನ ಮನೆ ಹಾಳಾಗಿ ಹೋಯಿತಲ್ಲವೆಂದು ಪಶ್ಚಾತ್ತಾಪ ಪಟ್ಟು, ಕೂಡಲೇ ಮನೆಯನ್ನು ಸರಿಮಾಡಿಕೊಟ್ಟರೆ, ನನಗೇ ಜೋರು ಮಾಡುತ್ತೀಯ, ಈಗ ನಾನು ನಿನಗೆ ನನ್ನ ಶಕ್ತಿಯನ್ನು ತೋರಿಸುತ್ತೇನೆ" ಅಂತ ಹೇಳುತ್ತಾ, ಆ ತೋಳವನ್ನು ಸಮುದ್ರಕ್ಕೆ ಎಸೆದು ಬಿಟ್ಟಿತು.
ಇದನ್ನೆಲ್ಲ ನೋಡುತ್ತಿದ್ದ ಇತರ ಪ್ರಾಣಿಗಳು ತೋಳನ ಮೂರ್ಖತನಕ್ಕೆ ಮರುಗಿ ತಮ್ಮ ತಮ್ಮಲೇ ಮಾತನಾಡಿಕೊಂಡವು.
’"ಅಯ್ಯೋ, ಮೂರ್ಖ ತೋಳವೆ, ನಿನಗೆ ಒಳ್ಳೆಯದು ಕೆಟ್ಟದು ಯಾವುದೆಂದು ತಿಳಿಯದೆ, ಅಹಂಕಾರದಿಂದ ಆನೆಯ ಒಳ್ಳೇಯತನವನ್ನು ಹೀಗಳೆದೆಯೆಲ್ಲ, ನಿನ್ನ ಈ ದುಷ್ಟಬುದ್ಧಿಗೆ ಸರಿಯಾದ ಶಿಕ್ಷೆಯಾಯಿತು. "
ನೀತಿ: ಬೇರೆಯವರ ಒಳ್ಳೆಯತನವನ್ನು ಗುರುತಿಸಬೇಕು.
