Revati Patil

Romance Classics Inspirational

3  

Revati Patil

Romance Classics Inspirational

ಆಡದೇ ಉಳಿದ ಆ ಒಂದು ಮಾತು

ಆಡದೇ ಉಳಿದ ಆ ಒಂದು ಮಾತು

4 mins
242



ಕಾಫಿಯನ್ನು ಟೇಬಲ್ ಮೇಲಿಡುತ್ತಲೇ ಸುಹಾಸ್ ಕಣ್ಣು ಮಿಟುಕಿಸದೆ ನೋಡಿದ. ಆಫೀಸಿಗೆ ಸ್ವರ್ಗ ಸುಂದರಿ ಬಂದಂತೆ ಸುಹಾಸ್ ಮುಂದೆ ಬರುತ್ತಿದ್ದ ಹುಡುಗಿಯತ್ತ ನೋಡಿದ.

ಗಾಳಿಗೆ ಹಾರಾಡುತ್ತಿದ್ದ ಕಪ್ಪು ಕೂದಲು, ಬಿಳಿ ಮುಖದಲ್ಲಿ ಸ್ಪಷ್ಟವಾಗಿ ಕಂಗೊಳಿಸುತ್ತಿದ್ದ ಹುಬ್ಬು, ಉದ್ದನೆಯ ಮೂಗು, ಕೋಲು ಮುಖದ ಚೆಲುವೆಯ ಆ ಮುಗುಳುನಗೆ, ಕಿವಿಯಲ್ಲಿ ಅವಳ ಹೆಜ್ಜೆ ಜೊತೆ ತೂರಾಡುತ್ತಿದ್ದ ಬಳೆಗಳಂತ ಓಲೆಗಳು, ಬಿಳಿ ಬಣ್ಣದ ಸಲ್ವಾರಿಗೆ ಆಕಾಶ ನೀಲಿ ಬಣ್ಣದ ದುಪ್ಪಟ್ಟಾ ಅದೆಷ್ಟು ಚಂದ ಹೊಂದಿಕೆಯಾಗಿತ್ತು. ಕೈಯಲ್ಲೊಂದು ಫೈಲ್ ಹಿಡಿದು ಆಫೀಸ್ ಕ್ಯಾಂಟೀನ್ ಒಳಗೆ ಬರುತ್ತಿದ್ದ ಆ ಸ್ನಿಗ್ಧ ಸುಂದರಿಯನ್ನು ಕಣ್ಣು ಮುಚ್ಚದೆ ನೋಡುತ್ತ ತನ್ನನ್ನೇ ತಾನು ಮರೆತುಬಿಟ್ಟ ಸುಹಾಸ್ !


ಮಿಸ್ಟರ್ ಸುಹಾಸ್ ಅಂದ್ರೆ ಯಾರಿಲ್ಲಿ?

ಎಂದು ಆ ಸುಂದರಿ ಆಫೀಸ್ ಬಾಯ್ ರವಿಯನ್ನು ಕೇಳಿದ್ದು ಸುಹಾಸ್ ಕಿವಿಗೆ ಬಿದ್ದಿದ್ದೇ, ಲಡ್ಡುಗಳ ಲಾರಿಯೇ ಬಾಯಿಗೆ ಬಂದು ಬಿದ್ದಷ್ಟು ಖುಷಿಯಾಗಿತ್ತು.

ಯಾರನ್ನು ಕಂಡು ಮೈಮರೆತಿದ್ದನೋ ಆ ಸುಂದರಿ ತನ್ನನ್ನೇ ಹುಡುಕೊಂಡು ಬಂದಿದ್ದಾಳಲ್ಲ ಎಂದು ಸುಹಾಸ್ ಒಳಗೊಳಗೆ ಸಂತಸಗೊಂಡ.


"ಇವರೇ ನೋಡಿ ಮಿಸ್ಟರ್ ಸುಹಾಸ್, ನಿಮ್ಮ ಟೀಮ್ ಹೆಡ್, ಸುಹಾಸ್ ಸರ್ ಇವರು ನಿಲೋಫರ್, ನಿಮ್ಮನ್ನೇ ಹುಡುಕ್ತಿದ್ರು "


ಒಹ್ ಹೌದಾ, ಸರಿ ನೀನು ಹೊರಡು ರವಿ. (ರವಿ ಹೋಗುತ್ತಾನೆ )


"ಹಲೋ.. ಹೇಳಿ ಮಿಸ್ ನಿಲೋಫರ್, ಏನಾಗ್ಬೇಕಿತ್ತು? ನಿಮ್ಮನ್ನ ಈ ಮೊದ್ಲು ನೋಡಿಲ್ಲ ಅಂದ್ಕೊಳ್ತಿನಿ. ಹೊಸದಾಗಿ ಜಾಯಿನ್ ಆಗಿದ್ದೀರಾ? "


" ಹೌದು ಸರ್ ನಾಲ್ಕು ದಿನ ಆಯ್ತಷ್ಟೆ. ಟ್ರೇನಿಂಗ್ ಮುಗಿತು ಇವತ್ತಿಗೆ. ಈಗ ನಿಮ್ಮ ಟೀಮಲ್ಲಿ ಇದೀನಿ ಸರ್. "


"ಒಹ್ ಕಂಗ್ರಾಟ್ಸ್ ನಿಲೋಫರ್. ನನ್ನನ್ನ ಹುಡುಕಿಕೊಂಡು ಬಂದ ಕಾರಣ "


"ಸರ್, ಕೋಡಿಂಗ್ ಸ್ವಲ್ಪ ತಪ್ಪಾಗಿದೆ. ಬಾಸ್ ತುಂಬ ಸ್ಟ್ರಿಕ್ಟ್ ಅಂತೆ, ಕೆಲಸಕ್ಕೆ ಸೇರಿ ಇನ್ನೂ ಮೂರು ದಿನ ಆಗಿಲ್ಲ, ಭಯ ಆಗಿ ಶೀತಲ್ ಹತ್ತಿರ ಸಹಾಯ ಕೇಳಿದಾಗ ನಿಮ್ಮ ಬಗ್ಗೆ ಹೇಳಿದರು. ನೀವು ನಮ್ಮ ಟೀಮ್ ಹೆಡ್ ಅಂತ ಗೊತ್ತಾಯಿತು ಅದಕ್ಕೆ ಇಲ್ಲಿಗೆ ಬಂದೆ "


"ಒಹ್ ಅಷ್ಟೇನಾ. ಅದೇನು ಅಂತಹ ಸಮಸ್ಯೆ ಅಲ್ಲ ಬಿಡಿ. ಎಕ್ಸಪೀರಿಯೆನ್ಸ್ ಇರೋವ್ರೆ ಮಿಸ್ಟೇಕ್ಸ್ ಮಾಡ್ತಾರೆ, ನೀವಿನ್ನು ಹೊಸಬರು ಅಲ್ವಾ, ಇದೆಲ್ಲ ಕಾಮನ್ ಬಿಡಿ ನಿಲೋಫರ್ "


"ಥ್ಯಾಂಕ್ಯೂ ಸರ್. "


"ಸರಿ ಬನ್ನಿ, ನೋಡೋಣ ಏನಾಗಿದೆ ಅಂತ "


(ಸುಹಾಸ್ ಸೀನಿಯರ್ ಇಂಜಿನಿಯರ್. ಒಳ್ಳೆಯ ಮನುಷ್ಯ. ಕೆಲಸ, ಆಫೀಸ್ ಎರಡೇ ಅವನ ಜೀವನ. ಕಾಫಿ ಟೈಮಿಗೆ ಕ್ಯಾಂಟೀನ್ನಲ್ಲಿ ಇರುತ್ತಿದ್ದ. ಏನೇ ಟೆಕ್ನಿಕಲ್ ಪ್ರಾಬ್ಲೆಮ್ಸ್ ಇದ್ದರೂ ಅದನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿದ್ದ. ಇನ್ನೂ ಮದುವೆಯಾಗಿರಲಿಲ್ಲ. ಶೀತಲ್, ನಾರ್ತ್ ಇಂಡಿಯನ್ ಹುಡುಗಿ ಪ್ರಾಚಿ, ಸ್ವಾತಿಯರ ಪ್ರೇಮ ನಿವೇದನೆಯನ್ನು ನಯವಾಗಿ ತಿರಸ್ಕರಿಸಿದ್ದ.  ಅಂತಹ ಸುಹಾಸ್ ಮನಸ್ಸನ್ನು ನಿಲೋಫರ್ ಕದ್ದಿದ್ದಳು.)


"ಮಿಸ್ ನಿಲೋಫರ್, ಇವತ್ತು ಹೊರಡಿ, ನಾಳೆ ಒಂಬತ್ತುವರೆಗೆ ಮೀಟಿಂಗ್ ಇದೆ. ತಪ್ಪಿಸಬೇಡಿ"


"ಖಂಡಿತ ಸರ್. ಬರ್ತೀನಿ "

-------------------------------------


(ಹೀಗೆ ಒಂದೆರಡು ತಿಂಗಳು ಕಳೆಯುತ್ತದೆ. ಸುಹಾಸ್, ನಿಲೋಫರ್ ತುಂಬ ಆತ್ಮೀಯರಾಗಿರುತ್ತಾರೆ. ಸುಹಾಸ್ ಮಾತ್ರ ನಿಲೋಫರಳನ್ನು ಪ್ರೀತಿಸುತ್ತಿರುತ್ತಾನೆ ಆದರೆ ಹೇಳಲು ಧೈರ್ಯ ಮಾಡುವುದಿಲ್ಲ. ಅವಳು ತನ್ನಿಂದ ದೂರವಾಗಬಹುದು ಎನ್ನುವ ಭಯ ಒಂದೆಡೆಯಾದರೆ ಈ ಮೊದಲೇ ನಿಲೋಫರ್ ಯಾರನ್ನಾದರೂ ಪ್ರೀತಿಸುತ್ತಿದ್ದರೆ ಎಂದು ಯೋಚಿಸಿ ಸುಮ್ಮನಾಗುತ್ತಾನೆ.)


------------------------


"ಹಲೋ, ಡೇವಿಡ್ ಕೇಳಿಸ್ತಿದೆಯಾ "


"ಹಾಂ ಕೇಳಿಸ್ತಿದೆ ಹೇಳೋ ಸುಹಾಸ್."


"ಯಾವಾಗ ಹೈದ್ರಾಬಾದಿನಿಂದ ಬೆಂಗಳೂರಿಗೆ ಬರ್ತಿದೀಯಾ ಡೇವಿಡ್ ? "


"ಇನ್ನೂ ಎರಡು ತಿಂಗಳಾದರೂ ಆಗಬಹುದು ಸುಹಾಸ್ "


"ಮತ್ತೇ ಡೈವೋರ್ಸ್ ಫೈನಲ್ ಆಯ್ತಾ? "


"ಇಲ್ಲ ಕಣೋ. ಅವಳು ಡೈವೋರ್ಸ್ ಕೊಡೋಕೂ ಒಪ್ತಿಲ್ಲ, ಒಂದ್ ಸಣ್ಣ ತಪ್ಪು ಮಾಡಿದ್ದಕ್ಕೆ ನಂಜೊತೆ ಬಾಳ್ವೆನೂ ಮಾಡ್ತಿಲ್ಲ "


"ನೋ ಡೇವಿಡ್. ನೀನು ಮಾಡಿದ್ದು ಸಹ ತಪ್ಪೇ ಅಲ್ವಾ. ನಿನ್ನ ಹೆಂಡತಿನ ನೋಡದಿದ್ರೂ ನೀನು ಹೇಳೋದ್ರಲ್ಲೇ ಗೊತ್ತಾಗ್ತಿತ್ತು ಅವಳು ಎಷ್ಟು ಒಳ್ಳೆ ಹೆಂಗಸು ಅಂತ. ಯಾವ ಹೆಂಡ್ತಿ ತಾನೇ, ತನ್ನ ಗಂಡ ಇನ್ನೊಬ್ಬಳ ತೆಕ್ಕೆಯಲ್ಲಿರೋದನ್ನ ನೋಡಿ ಸಹಿಸ್ಕೊತಾಳೆ. ನಿಂಗೇನೋ ಬಂದಿತ್ತು ದೊಡ್ಡರೋಗ, ಹೋಗಿ ಹೋಗಿ ಆ ಮಾರಿಯಾ ಹಿಂದೆ ಬಿದ್ದಿದ್ದೆ "


"ಎಲ್ಲ ನನ್ನ ಗ್ರಹಚಾರ ಬಿಡು. ಮತ್ತೇ ಹೊಸ ಸಮಾಚಾರ ಏನಾದ್ರು ಆಫೀಸಲ್ಲಿ "


"ಡೇವಿಡ್ ನಂಗ್ ಲವ್ವಾಯ್ತು ಕಣೋ "


"ಬಡ್ಡಿ ಮಗನೇ, ನಿಜ ಹೇಳೋ. ಎಲ್ಲಿ, ಯಾವ ಹುಡುಗಿ, ಹೆಸರೇನು? "


"ಹೌದು ಡೇವಿಡ್. ಈಗ ಸ್ವಲ್ಪ ದಿನಗಳ ಹಿಂದೆಯಷ್ಟೇ ನಮ್ಮ ಆಫೀಸಿಗೆ ಹುಡುಗಿಯೊಬ್ಬಳು ಜಾಯಿನ್ ಆಗಿದಾಳೆ. ನನಗಂತೂ ಅವಳು ತುಂಬ ಇಷ್ಟ ಕಣೋ. ಇನ್ನೇನು ಇಷ್ಟರಲ್ಲೇ ಪ್ರಪೋಸ್ ಕೂಡ ಮಾಡ್ತೀನಿ. ಹುಂ ಅಂದ್ರೆ ಮದ್ವೆಗೆ ಕರೀತೀನಿ, ಬಂದು ನನ್ನ ಹುಡುಗಿ ನೋಡು. "


"ಆಯ್ತಪ್ಪ ಆಯ್ತು. ಕೋರ್ಟಿನ ಕೆಲಸ ಮುಗಿಲಿ, ಬೇಗ ಬೆಂಗಳೂರಿಗೆ ಬರ್ತೀನಿ. ನನ್ನ ಹೆಂಡ್ತಿ ಕೂಡ ಬೆಂಗಳೂರಲ್ಲೇ ಅವರ ಅಣ್ಣನ ಮನೇಲಿದ್ದಾಳೆ ಕಣೋ ಸುಹಾಸ್ "


"ಸರಿ ಕಣೋ, ಎಲ್ಲ ಸಮಸ್ಯೆಗಳು ಪರಿಹಾರ ಆಗಲಿ ಡೇವಿಡ್. ನನ್ನಿಂದಾದರೆ ಸಾಧ್ಯವಾದಷ್ಟು ನಿಮ್ಮಿಬ್ಬರನ್ನು ಒಂದುಗೂಡಿಸಲು ಏನು ಬೇಕಾದರೂ ಮಾಡ್ತೀನಿ. ಮತ್ತೇ ಸಿಗೋಣಾ ಆಫೀಸಲ್ಲಿ

ಬೈ "


---------------------


(ಹದಿನೈದು ದಿನಗಳ ನಂತರ ಸುಹಾಸನ ಗೆಳೆಯ ಡೇವಿಡ್, ಆಫೀಸಿಗೆ ಬಂದಿದ್ದು ನೋಡಿ ಸುಹಾಸ್ ಕುಣಿದಾಡುತ್ತಾನೆ. ಮೊದಲಿಂದಲೂ ಒಂದೇ ಆಫೀಸಲ್ಲಿ ಕೆಲಸ ಮಾಡಿದವರು ಸುಹಾಸ್ ಮತ್ತು ಡೇವಿಡ್. ಡೇವಿಡ್ ತನ್ನ ಡೈವೋರ್ಸ್ ಕಾರಣಕ್ಕಾಗಿ ಹೈದ್ರಾಬಾದ್ ಬ್ರ್ಯಾಂಚಿಗೆ ವರ್ಗ ಮಾಡಿಸಿಕೊಂಡಿದ್ದನು. ಸುಮಾರು ಮೂರ್ನಾಲ್ಕು ತಿಂಗಳುಗಳ ನಂತರ ಹಳೆಯ ಆಫೀಸಿಗೆ ಮುಖ ಮಾಡಿದ್ದ ಡೇವಿಡ್. )


" ಡೇವಿಡ್, ವೆಲ್ಕಮ್ ಬ್ಯಾಕ್ "


" ಅದ್ಬಿಡಪ್ಪ, ಎಲ್ಲಿ ನಿಮ್ಮ ಪಾರಿವಾಳ,?


"ಒಹ್ ಅವಳಾ ಒಂದ್ ವಾರ ರಜೆ ಮೇಲೆ ಹೋಗಿದ್ದಾಳೆ. ಗುರುವಾರ ಬರ್ತಾಳೆ. ಆಗ ಪರಿಚಯಿಸ್ತಿನಿ ಬಿಡು. ನಿಂದೇನಾಯ್ತು ಹೇಳು. ಡೈವೋರ್ಸ್ ಫೈನಲ್ ಆಯ್ತಾ "


" ಸ್ವಲ್ಪ ದಿನ ಜೊತೆಯಾಗಿರಿ ಅಂತ ಡಿಸಿಷನ್ ಆಗಿದೆ. ಆಗಲೂ ಇಬ್ಬರ ಮಧ್ಯ ಹೊಂದಾಣಿಕೆ ಆಗ್ದಿದ್ರೆ ಆಗ ಡೈವೋರ್ಸ್ ಆಗತ್ತೆ, ಬಟ್ ಅವಳನ್ನ ತುಂಬಾ ದಿನಗಳ ನಂತರ ನೋಡಿದೆ ಕಣೋ. ಈಗಲೂ ನನಗೆ ಅವಳಂದ್ರೆ ತುಂಬ ಇಷ್ಟ. ಈ ಸಲ ಹೇಗಾದ್ರೂ ಮಾಡಿ ಅವಳ ಮನಸ್ಸು ಮತ್ತೆ ಗೆಲ್ಲಬೇಕು. ಅವಳನ್ನು ಕಳ್ಕೊಳೋದಿಕ್ಕೆ ನಾನು ತಯಾರಿಲ್ಲ ಸುಹಾಸ್"


"ಲೋ ಡೇವಿಡ್. ಅವಳು ನಿನ್ನ ಹೆಂಡ್ತಿ ಕಣೋ. ಧೈರ್ಯವಾಗಿರು, ಎಲ್ಲ ಸರಿಯಾಗುತ್ತೆ. ಅವಳ ಮನಸ್ಸು ಸ್ವಲ್ಪ ತಿಳಿಯಾಗಲಿ. ಹೇಗೂ ಬೆಂಗ್ಳೂರಲ್ಲೇ ಇದ್ದಾಳೆ ಅಂದಿದ್ಯಲ್ಲ, ನಮ್ಮ ಆಫೀಸಿಗೆ ಜಾಯಿನ್ ಆಗು ಅಂತ ಹೇಳಿನೋಡು. ನೀವಿಬ್ರು ಒಂದೇ ಟೀಮಲ್ಲಿ ಇದ್ರೆ ಹೇಗೋ ಅವಳನ್ನ ಮತ್ತೇ ಗೆಲ್ಲಬಹುದು ನೀನು. ಅಲ್ವಾ "


"ಹಾಂ ಗುಡ್ ಐಡಿಯಾ ಕಣೋ,"


"ಸರಿ ಡೇವಿಡ್, ಬೈ "


-----------------------


(ಅವತ್ತು ಗುರುವಾರ ನಿಲೋಫರ್ ಆಫೀಸಿಗೆ ಬರುತ್ತಿದ್ದಂತೆ ಸುಹಾಸ್ ಅವಳಿಗೆ ಪ್ರಪೋಸ್ ಮಾಡಲೇಬೇಕೆಂದು ಮನಸ್ಸಲ್ಲೇ ತೀರ್ಮಾನಿಸಿದ )


''ನಿಲೋಫರ್, ಇವತ್ತೇನು ಜಾಸ್ತಿ ಕೆಲಸ ಇಲ್ಲ, ಮದ್ಯಾಹ್ನ ಒಟ್ಟಿಗೆ ಊಟ ಮಾಡೋಣ. ನನ್ನ ಫ್ರೆಂಡ್ ಕೂಡ ಬರ್ತಾನೆ, ನೀವೂ ಬೇಗ ಬನ್ನಿ "


" ಓಕೆ ಸರ್ "


ಕ್ಯಾಂಟಿನಲ್ಲಿ ಡೇವಿಡ್, ಸುಹಾಸ್ ಮಾತಾಡ್ತಾ ಕೂತಿದ್ದರು. ಸುಹಾಸ್ ವರ್ಣಿಸಿದ ಪರಿ ನೋಡಿ ಅವನ ಹುಡುಗಿಯನ್ನು ನೋಡಲು ಆತುರದಿಂದ ಡೇವಿಡ್ ಕೂಡ ಕಾಯುತ್ತಿದ್ದ. ಅಷ್ಟರಲ್ಲಿ ದೂರದಿಂದ ನಿಲೋಫರ್ ಬರ್ತಿರುವುದು ಸುಹಾಸ್ ಗಮನಿಸಿದ. ಗೆಳೆಯನಿಗೆ ನಿಲೋಫರಳನ್ನು ತೋರಿಸಲು ಬಾಯಿ ಬಿಡುತ್ತಿದ್ದಂತೆ ಡೇವಿಡ್ ಎದ್ದುನಿಂತ.


"ಯಾಕೋ ಡೇವಿಡ್, ಏನಾಯ್ತೋ ನಿನಗೆ? ಗಾಬರಿ ಆಗಿರುವ ಹಾಗೇ ಕಾಣಿಸ್ತಿದೀಯಾ. ಏನಾಯ್ತೋ? "


"ಸುಹಾಸ್, ಅಲ್ಲಿ ನೋಡು, ಬಿಳಿ ಬಣ್ಣದ ಸಲ್ವಾರ್ ಹಾಕಿಕೊಂಡು ಬರ್ತಿದಾಳಲ್ಲ ಅವಳೇ ಕಣೋ ನನ್ನ ಹೆಂಡತಿ, ಕೆಲಸಕ್ಕೆ ಸೇರಿದ್ದೀನಿ, ನಿಮಗೆ ಪರಿಚಯ ಇರುವ ಆಫೀಸ್ ಅಂತ ಹೇಳಿದ್ಲು ಆದರೆ ಇದೇ ಆಫೀಸ್ ಅಂತ ಗೊತ್ತಿರ್ಲಿಲ್ಲ.. ಇವಳನ್ನ ಹೇಗೋ ಬಿಡೋಕಾಗತ್ತೆ ನಾನು "


"ಡೇವಿಡ್ ಆರ್ ಯು ಸೀರಿಯಸ್? ಅವಳು ಮೂರ್ನಾಲ್ಕು ತಿಂಗಳಾಯಿತು ಜಾಯಿನ್ ಆಗಿ. ಅವಳು ನಿಲೋಫರ್ ಅಂತ. ಅವಳಾ ನಿನ್ನ ಹೆಂಡತಿ?


"ಹೌದು ಸುಹಾಸ್, ಅವಳೇ ನನ್ನ ಹೆಂಡತಿ, ನೀನು ನಮ್ಮಿಬ್ಬರನ್ನ ಸೇರ್ಸೋಕೆ ಸಹಾಯ ಮಾಡ್ತೀನಿ ಅಂದಿದೀಯಲ್ಲ, ಇನ್ಮೇಲೆ ಒಂದೇ ಆಫೀಸಲ್ಲಿ ಎಲ್ರು ಇರ್ತೀವಿ, ಹೇಗಾದ್ರು ಅವಳನ್ನ ಕನ್ವೆನ್ಸ್ ಮಾಡಿದ್ರಾಯ್ತು. ನೀನಿದ್ದಾಗ ನಂಗೇನ್ ಭಯ. ಅಲ್ವಾ ಸುಹಾಸ್ "


ಅಷ್ಟರಲ್ಲಿ ನಿಲೋಫರ್ ಅವರ ಬಳಿ ಬಂದಳು. ತನ್ನ ಗಂಡ ಡೇವಿಡ್ ಅಲ್ಲಿದ್ದದ್ದನ್ನು ನೋಡಿ ಅವಳಿಗೇನು ಅಚ್ಚರಿ ಆಗಲಿಲ್ಲ. ಹಾಯ್ ಡೇವಿಡ್. ನಾನೂ ನಿನ್ನ ಆಫೀಸಲ್ಲೆ ಜಾಯಿನ್ ಆಗಿದೀನಿ. ಮಿಸ್ಟರ್ ಸುಹಾಸ್ ಅವರೇ ನಮ್ಮ ಟೀಮ್ ಹೆಡ್.



"ಒಹ್ ಹೌದಾ, ಗೊತ್ತಾಯ್ತು ಸುಹಾಸ್ ಹೇಳಿದ. ಊಟ ಮಾಡೋಣ ಈಗ, ನಂತರ ಮಾತಾಡಿದ್ರಾಯ್ತು. ಅಲ್ವಾ "



ಊಟ ಮಾಡುತ್ತಲೇ ಡೇವಿಡ್, ಸುಹಾಸನ ಕಿವಿಯಲ್ಲಿ ನಿನ್ನ ಹುಡುಗಿ ಎಲ್ಲೋ? ಇವತ್ತು ತೋರಿಸ್ತೀನಿ ಅಂದಿದ್ಯಲ್ಲ ಮಾರಾಯಾ? ಎನ್ನುತ್ತಿದ್ದಾಗಲೇ, ನಿಲೋಫರ್ ಕೂಡ ಒಹ್ ಹೌದಾ ನಿಮ್ಮ ಹುಡುಗಿನೂ ಇದೇ ಆಫೀಸಾ, ಯಾರ್ರೀ ಅದು? ಸ್ವಾತಿ, ಪ್ರಾಚಿ...?? ಎನ್ನುತ್ತಿದ್ದಂತೆ ಸುಹಾಸ್ ಸ್ವಲ್ಪ ಹೊತ್ತು ಮೌನವಾದ.



" ಏನಿಲ್ಲ ಡೇವಿಡ್, ನಿಲೋಫರ್. ನನಗೆ ಈ ಲವ್ವು ಗಿವ್ವು ಇಷ್ಟ ಆಗಲ್ಲ. ಅವತ್ತು ಡೇವಿಡ್ ಬೇಸರದಲ್ಲಿದ್ದ ಅಂತ ಅವನ ಮನಸ್ಸು ಬೇರೆಡೆ ಸೆಳೆಯಲು ಈ ತರ ಸುಳ್ಳು ಹೇಳಿದೆ. ನನಗ್ಯಾವ ಪ್ರೇಮಿಯೂ ಇಲ್ಲ ಎನ್ನುತ್ತ ಆಡಬೇಕೆಂದುಕೊಂಡು ತೀರ್ಮಾನಿಸಿದ ಆ ಒಂದು ಪ್ರೇಮನಿವೇದನೆಯ ಮಾತನ್ನು ಆಡದೆ, ಸುಹಾಸ್ ಎದ್ದು ಹೋದನು.


(ನಿಲೋಫರ್,  ಡೇವಿಡ್ ಇಬ್ಬರೂ ಒಂದಾಗಿ ಸುಖವಾಗಿ ಬಾಳಲಿ ಎಂದು ಸುಹಾಸ್ ತನ್ನ ಮಾತನ್ನು ಇಬ್ಬರೆದುರು ಆಡದೆ ಮುಚ್ಚಿಟ್ಟ)



Rate this content
Log in

Similar kannada story from Romance