ನೆತ್ತಿಯಲಿಮುತ್ತಿನಿರಿಸಿ
ನೆತ್ತಿಯಲಿಮುತ್ತಿನಿರಿಸಿ
ನೇಸರನ ಕಿರಣಗಳು
ಕಿಟಕಿಯಾಚಿಂದ ಮೆಲ್ಲನೆ
ತೂರಿ ಬರುತಿವೆ ಕಳ್ಳನಂತೆ
ಮುಸುಕು ಜಾರಿದ ಹೊತ್ತಿಗೆ
ಕನಸುಗಳು ಬಿಕರಿಯಾಗಿ
ನಕ್ಷತ್ರಗಳ ಹೊಳಪು
ಎದೆಯಲ್ಲಿ ಮಿನುಗಿವೆ
ಎತ್ತ ಮರೆಯಾದೆ ನೀನು
ಕಿರಣಗಳಲ್ಲಿ ಬೆರೆತು
ಮೈ ಮನವ ಹೊಸೆದು
ಬಿಸಿಯುಸಿರ ನಲುಗಿಸಿ
ಮರೆಯಾದ ದಾಹಕೆ
ನಿಲುವಂಗಿ ಧರಿಸಿ
ಮೌನ ತಾಳಿಲ್ಲ ನಾನು
ಅರೆಗಣ್ಣ ತೆರೆದು ಕಾಯುತ್ತಿರುವೆ
ಎಂದಾವರಿಸುವೆ ನನ್ನ
ಮೋಹದ ಪೊರೆ ಕಳಚುವ
ಆತುರ ನನ್ನೊಳಗೆ
ಬೆತ್ತಲೆಯಾಗಿ ಕಾದಿರುವ
ಕಾರಿರುಳ ಸೀಳಿ
ನೆತ್ತಿಯಲಿ ಮುತ್ತಿನಿರಿಸಿ
ಕಾವಕೊಡುವ ಕೋಳಿಯಂತೆ
ಜಗವೆಲ್ಲ ನಿನ್ನನ್ನು ಹೊಗಳಿದಂತೆ
ನಿನ್ನಾಳ ನನ್ನಲಿ ನೆಲೆಸಿದಂತೆ
ಹೊಸ ಚಿಗುರು ಅರಳಿದಂತೆ
ಪ್ರೇಮದಾಹ ಕರಗಿದಂತೆ
ನೇಸರನ ಚಿತ್ತ ನಲಿದಂತೆ
ಜಗವೆಲ್ಲ ಪ್ರೇಮಯವಾದಂತೆ

