ಮರಳಿ ನಿಮ್ಮ ಮಡಿಲಿಗೆ
ಮರಳಿ ನಿಮ್ಮ ಮಡಿಲಿಗೆ
ಓಡುತಿದೆ, ಬಲು ದೂರಕೆ
ಎನ್ನ ಕರೆದೊಯ್ಯುತಿದೆ |
ಸರಳವಾದ ಬಿಂಬದೆದುರು
ಮೂಕವಾಗಿ ನಿಲ್ಲುತಿದೆ ||
ತಾನೇ ಸಲುಹಿದ ತನ್ನನು,
ತಮದಾಚೆ ನೂಕುತಿದೆ |
ತೆರೆದ ದಾರಿಯೊಳು ಚಲಿಸಿ,
ತಿರುಗಿ ತಮದೊಳು ನಿಲ್ಲಿಸಿದೆ ||
ಆಗಸದ ಹನಿಗಳನು,
ಧರೆಯು ಆಕರ್ಷಿಸಿದೆ|
ಕಮರಿದ ಲತೆಗಳ,
ಮರುಪೂರಣದಿ ಸ್ಪರ್ಶಿಸಿದೆ||
ಅಂತರವನೆನ್ನೊಳಗೆ ಅಂತರ್ಗತಗೊಳಿಸಿ,
ಕಾದಿರುವೆ ಅಪೂರ್ವ ನಾಳೆಗೆ|
ಆರಂಭದ ಸಾಲಿಗೊಂದರ್ಥವನೀದು ಬರುವೆ,
ಮರಳಿ ನಿಮ್ಮ ಮಡಿಲಿಗೆ||
