ಕಲಿಯುಗದ ರಾಧೆ
ಕಲಿಯುಗದ ರಾಧೆ
ಕಲಿಯುಗದ ಮೀರೆಯವಳು
ಅವನ ನೆನಪಲಿ ಸದಾ ಸಾಗಿದಾಕೆ
ಕಹಿಯ ಬಾಳನೆಲ್ಲ ಮರೆತವಳು
ಅವನ ನೆನದು ಮತ್ತೆ ತುಸು ನಕ್ಕಾಕೆ..
ಅವನೆಂದರೆ ಅವಳಿಗೇ ಪ್ರಾಣ
ಅನವರತ ಅವನ ಹಂಬಲಿಸುವಾಕೆ
ವೀಣೆಯೊಂದರ ಕೊರಳ ಬಳಸಿ
ರಮ್ಯ ಸ್ವರಗಳ ಸುರಿಸಿ ಕಾಯುವಾಕೆ..
ಸಂಬಂಧಗಳೆಲ್ಲವ ತಾ ತೊರೆದು
ಅವನನುಬಂಧ ಬಯಸಿ ಬಂದವಳು
ಪ್ರೇಮದಿಂದಲೆ ನಲ್ಲನ ಕರೆದು
ಒಲವ ಮುತ್ತಿನ ಹಾರವ ಪಡೆದವಳು..
ವಿರಹದುರಿಯು ಆಗಾಗ ಸುಡಲು
ಬಿರಿದ ಕುಸುಮವದು ಬಾಡುವಂತಾಯ್ತು
ಮುಕುಂದನೊಲುಮೆಯ ಬಯಸಿ
ಮತ್ತದೆ ರಂಜಿಪ ರಾಗ ಸಂಪನ್ನವಾಯ್ತು..
ಕಲಿಯುಗದ ಮೀರೆಯವಳು
ಎಲ್ಲೆಗಳೆಲ್ಲ ಮೀರಿ ಅವನನೇ ಪಡೆದವಳು
ಒಲವ ಸೊಲ್ಲಡಗಿ ಹೋಗದಂತೆ
ಎಂದೆಂದೂ ಎದೆಯಲವನ ಕಾದವಳು..

