Exclusive FREE session on RIG VEDA for you, Register now!
Exclusive FREE session on RIG VEDA for you, Register now!

Natesh MG

Abstract Classics


3.7  

Natesh MG

Abstract Classics


ಮುಕ್ತಿ .ಮಾತೃ ಹತ್ಯೆ .

ಮುಕ್ತಿ .ಮಾತೃ ಹತ್ಯೆ .

6 mins 101 6 mins 101

ಹಾಸಿಗೆ ಮೇಲೆ ಮಲಗಿದ , ಅಮ್ಮನ ಕಡೆಯೇ ನೋಡುತ್ತಾ ಕುಳಿತಿದ್ದೆ ನಾನು.  ಗೊತ್ತಿತ್ತು ನನಗೆ , ನಾನು ಕೊಟ್ಟ "ನಿದ್ದೆಯ "ಇಂಜೆಕ್ಷನ್ ಬಹಳ ಹೊತ್ತು ಆಕೆಯನ್ನು ಮಲಗಿಸುವುದಿಲ್ಲವೆಂದು.   ಹೆಚ್ಚು ಎಂದರೆ ಇನ್ನೊಂದು ಗಂಟೆಯಲ್ಲಿ , ಆಕೆಗೆ "ಎಚ್ಚರ "ಆಗುತ್ತದೆ ಎಂಬುದು ಕೂಡ ತಿಳಿದಿತ್ತು. ಅದೆಷ್ಟು ದಿನಗಳಾಯಿತು "ಅಮ್ಮ "ಮಲಗಿ , ಎಂದು ಲೆಕ್ಕ ಹಾಕಿದೆ .

ಸೊಂಟ ನೋವು ಎಂದು ಆರು ತಿಂಗಳ ಹಿಂದೆಯೇ ಆಕೆ ಹೇಳಿದಾಗ , ನನ್ನದೇ "ಆಸ್ಪತ್ರೆಯಲ್ಲಿ "ಸಂಪೂರ್ಣ ಚೆಕ್ ಮಾಡಿಸಿದ್ದೆ . ಬಂದ , ಬರುತ್ತಿರುವ ಒಂದೊಂದೇ "ರಿಪೋರ್ಟ್" ನೋಡಿ ಕಂಗಾಲಾಗಿ ಹೋಗುತ್ತಿದ್ದೆ . " ಬೋನ್ ಕ್ಯಾನ್ಸರ್ "ಮೂರನೇ ಹಂತ ದಾಟಿ ,  ನಾಲ್ಕನೆ ಹಂತಕ್ಕೆ ಕಾಲಿಟ್ಟು ಬಿಟ್ಟಿತ್ತು. ಅದೆಷ್ಟೋ ರೋಗಿಗಳನ್ನು ನೋಡಿದ್ದೆ , ಆದರೆ ಈ ರೋಗ ನನ್ನ ಅಮ್ಮನಿಗೆ ಬರುತ್ತದೆ ಎಂಬುದು ....ಕನಸು-ಮನಸಿನಲ್ಲಿಯೂ ಆಲೋಚನೆ ಮಾಡಿರಲಿಲ್ಲ.


ಅದೆಷ್ಟು ಕನಸಿತ್ತು ಅವಳಲ್ಲಿ , ನಾನು ಡಾಕ್ಟರ್ ಆಗಲಿ ಎಂದು. ಅದೊಂದೇ "ಕನಸು" ಬಹುಶಃ ನಿಜವಾಗಿತ್ತು ಅವಳದು. ಅದೆಷ್ಟು  "ಸಂಭ್ರಮವಿತ್ತು "ನಾನು ಡಾಕ್ಟರ್ ಆದಾಗ. ಎಲ್ಲವೂ ಅವಳ ಕೊಡುಗೆಯೇ . ಇಲ್ಲದೇ ಹೋಗಿದ್ದರೆ , ನಾನು "ಕುಡುಕರ "ಪಟ್ಟಿ ಸೇರಿ ಹೋಗುತ್ತಿದ್ದೆ ಚಿಕ್ಕ ವಯಸ್ಸಿನಲ್ಲಿಯೇ.  ಅಮ್ಮ ಅಂದರೆ ಅವಳು, ಕೇವಲ ಅಮ್ಮ ಆಗಿರಲಿಲ್ಲ ನನಗೆ . ಉತ್ತಮ ಗೆಳತಿಯಾಗಿದ್ದಳು.  ಪ್ರತಿ ವಿಷಯವನ್ನು ಅವಳು "ವಿಶ್ಲೇಷಿಸುವ " ರೀತಿಯೇ ಬೇರೆ ಇತ್ತು.

ಕಾಲೇಜ್ ಮೆಟ್ಟಿಲು ಹತ್ತಿದವನು, ಒಮ್ಮೆ ರುಚಿ ನೋಡಲು "ವಿಸ್ಕಿ "ಕುಡಿದಿದ್ದೆ . ಕಡೆಗೆ ವಾರಕ್ಕೊಮ್ಮೆ ಅದೇ ಅಭ್ಯಾಸವಾಗಿ ಹೋಯಿತು ಅದು ನನಗೆ . ಪ್ರತಿಯೊಂದನ್ನು "ಕಣ್ಣಂಚಿನಲ್ಲಿ "ಗಮನಿಸುತ್ತಿದ್ದ ಅಮ್ಮ , ಒಂದು ಮಾತು ಕೂಡ ಆಡಿರಲಿಲ್ಲ . ಒಮ್ಮೆ ಕುಡಿದು ಬಂದು ಊಟಕ್ಕೆ ಕುಳಿತಾಗ , ಎಲ್ಲವನ್ನು ವಾಂತಿ ಮಾಡಿದ್ದೆ . ಓಡಿ ಬಂದು ತನ್ನ "ಬೊಗಸೆ" ಒಡ್ಡಿದ್ದು ಈಗಲೂ ಕಣ್ಣಿಗೆ ಕಟ್ಟಿದ ಹಾಗಿದೆ .  ನಾಲ್ಕಾರು ದಿನ ರಜೆ ಇದ್ದಾಗ , ಆಕೆ ಸ್ವಲ್ಪ ಹೊರಗಡೆಯ ಊರಿಗೆ ಹೋಗಿ ಸುತ್ತಾಡಿ ಬರೋಣ ಅಂದಾಗ ಖುಷಿಯಾಗಿ ಹೊರಟಿದ್ದೆ .  ಸೀದಾ ಆಕೆ ಕರೆದುಕೊಂಡು ಹೋಗಿದ್ದು , ಮಂಗಳೂರಿಗೆ .

ಮೊದಲ ದಿನ ಬೀಚ್ ಸುತ್ತಾಟ , ಅಲ್ಲಿನ ಸಮುದ್ರ ... ಎಲ್ಲವನ್ನೂ ಅಮ್ಮನ ಜೊತೆ ಕುಳಿತು ನೋಡಿದ್ದೆ . ಆಟ ಆಡಿದ್ದೆ.

ಇಬ್ಬರೂ ಸೇರಿ ಆವತ್ತು , ಮರಳಿನಲ್ಲಿ ಹಠ ತೊಟ್ಟು "ಈಶ್ವರ ಲಿಂಗವನ್ನು "ಮಾಡಿ ನಿಟ್ಟುಸಿರು ಬಿಡುವ ಮುನ್ನವೇ ದೊಡ್ಡ ಅಲೆಯೊಂದು ಅದನ್ನು ಕೊಚ್ಚಿಕೊಂಡು , ತನ್ನ ಕಡೆಗೆ ಎಳೆದುಕೊಂಡು ಹೋಗುತ್ತಿತ್ತು . "ಜೀವನವೇ ಹಾಗೆ ಕಣೋ ಎಂದಿದ್ದಳು "ಅಮ್ಮ ಆಗ .  ಮರುದಿನ ಆಕೆ ಕರೆದುಕೊಂಡು ಹೋಗಿದ್ದು , "ಮಣಿಪಾಲ್ ಕಸ್ತೂರ್ಬಾ "ಆಸ್ಪತ್ರೆಗೆ .

ಮೊದಲೇ ಸಾಕಷ್ಟು "ಬ್ರೆಡ್ "ಅನ್ನು ತೆಗೆದುಕೊಂಡು ಒಳಗೆ ಹೋಗಿದ್ದೆವು ನಾವು . ಅರ್ಥವೇ ಆಗಿರಲಿಲ್ಲ ನನಗೆ , ಅವಳು ಅಲ್ಲಿಗೆ ಯಾಕೆ ನನ್ನ ಇಲ್ಲಿಗೆ ಕರೆ ತಂದಳು ಎಂದು .  ಅಲ್ಲಿನ ವಾರ್ಡ್ ನಲ್ಲಿ , ಕುಡಿದು ಹಾಳಾದ ಲಿವರ್ ರೋಗಿಗಳು ಮಲಗಿದ್ದರು . ಹೊಟ್ಟೆ "ಊದಿ "ಹೋಗಿತ್ತು ಅವರದು .  ಕುಡಿದು , ಅದರಿಂದ ಬಂದ ಕ್ಯಾನ್ಸರ್ ಪೀಡಿತರಿಗೆ ಕೂಡ ..ನನ್ನಿಂದಲೇ "ಬ್ರೆಡ್ ಪ್ಯಾಕನ್ನು " ಕೊಡಿಸಿದಳು.            ಭೂಲೋಕದಲ್ಲಿರುವ "ನರಕವನ್ನು "ಆಗಲೇ ನಾನು ನೋಡಿದ್ದು . ಅಲ್ಲಿ ಮಲಗಿದವರ ಮಕ್ಕಳನ್ನು , ಅವರ ಹೆಂಡಿರನ್ನು . ಎಲ್ಲರೂ ಕೂಡ ನನ್ನಂತೆ , ಮೊದಲು" ರುಚಿ " ನೋಡಲು ಹೋಗಿ ....ಅದರ ಗಾಳಕ್ಕೆ ಸಿಕ್ಕಿದವರೆ ಆಗಿದ್ದರು.  ಅದೆಷ್ಟು "ಬುದ್ದಿವಂತಿಕೆಯಿಂದ "ನನ್ನ ಕುಡಿತ ಬಿಡಿಸಿ ಬಿಟ್ಟಿದ್ದಳು ಆಕೆ .ಒಂದು ಮಾತನಾಡದೇ , ಒಮ್ಮೆಯೂ ಗದರಿಸದೆ ನನ್ನ ಕುಡಿತ , ಸಿಗರೇಟ್ ಚಟವನ್ನು ಬಿಡಿಸಿ ಹಾಕಿದ್ದಳು .

      

ಅಷ್ಟರ ಮೇಲೆಯೂ ಆಕೆ , ಅದರ ಸುದ್ದಿ ಎತ್ತಿರಲಿಲ್ಲ.  ಕನಸಿತ್ತು ನನಗೂ , ಅಮ್ಮನ ಹಾಗೆ . ಇಬ್ಬರ ಕನಸು ಕೂಡ ಒಂದೇ ತರಹ .  ನನ್ನ ಮದುವೆ , ಮಕ್ಕಳನ್ನು ನೋಡಲು ಆಸೆ ಪಟ್ಟಿದ್ದಳು. ಆದರೆ ಅಷ್ಟರ ಒಳಗೆ , ದೇವರು ನಮ್ಮ ಮೇಲೆ ಮುನಿಸಿಕೊಂಡಿದ್ದ .  ಕಾಯಿಲೆ ಅವಳನ್ನು ಕುಗ್ಗಿಸಲಿಲ್ಲ , ಆದರೆ ನನ್ನ ಕುಗ್ಗಿಸಿ ಬಿಟ್ಟಿತ್ತು ಅದು . ಅಮ್ಮನ ಈ ಪಾತು , ಡಾಕ್ಟರ್ "ಪಾರ್ಥ ಸಾರಥಿ 'ಆಗಿ ಬಹಳಷ್ಟು ....ಅವಳ ಎದುರಿಗೆ ಸಾಧಿಸಿ ತೋರಿಸಬೇಕು ಎಂದು ಇದ್ದೆ. ಆದರೆ ಅವಳ ಕಣ್ಣಲ್ಲಿ ನೀರು ಹಾಕಿಸಿದ್ದು ಮಾತ್ರ , ಅದರ ನೋವು .  "ತಡೆಯಲಾರದ ನೋವು ". ಪ್ರತಿನಿತ್ಯ ಹೊಟ್ಟೆಗೆ ಕೇವಲ "ಒಂದೆರಡು "ಚಮಚ , ಹಣ್ಣಿನ ರಸ ಹೋಗುತ್ತಿತ್ತು . ಆದರೂ ಈ "ಜೀವ "ಮಾತ್ರ ಅದರಲ್ಲೇ ಜೀವಿಸುತಿತ್ತು.

            

ನಿಧಾನಕ್ಕೆ "ಪಾತು "ಎಂದಳು ಅಮ್ಮ ...ಸಣ್ಣಗೆ ಎಚ್ಚರ ಆಗತೊಡಗಿತು ಅವಳಿಗೆ. "ನೋವು ಕಣೋ , ಯಾಕೋ ಈ ಜೀವ ಕೂಡ ಹೋಗುತ್ತಿಲ್ಲ " ಎಂದಿದ್ದಳು .  ಕಟ್ಟಿ ಹಿಡಿದಿದ್ದ ಕಣ್ಣೀರು , ಉಕ್ಕಿ ಬರತೊಡಗಿತ್ತು ನನಗೆ .  ಈ ರೋಗವೇ ಹಾಗೆ . ಪ್ರಜ್ಞೆ ಕೂಡ ತಪ್ಪಿಸದೆ , ಅದು ಕೊಡುವ ನೋವು ಅತಿ ಭೀಕರ .  "ಪಾತು ತಡೆಯೋಕೆ ಕಷ್ಟ ಆಗ್ತಾ ಇದೆ ನನಗೆ , ಬೆನ್ನು ಕೂಡ ಸುಲಿದು ಹೋಗಿದೆ ಕಣೋ ". ತಕ್ಷಣ ಎದ್ದುಹೋಗಿ "ಅಮ್ಮನ ಮಗ್ಗಲು " ಬದಲಾಯಿಸಿ ಬಂದೆ ...  ಮಲಗಿ ಮಲಗಿ , ಬೆನ್ನಿನಲ್ಲಿ ಗಾಯ ಆಗಿತ್ತು . ಮೇಲಿರುವ ಚರ್ಮವೇ ಸುಲಿದು ಹೋಗಿತ್ತು.  ವಾಟರ್ ಬೆಡ್ ಮೇಲೆ ಮಲಗಿಸಿದ ಮೇಲೆ ಕೂಡ , ಅಮ್ಮನ ಬೆನ್ನಿನ ಗಾಯ ನಿಂತಿರಲಿಲ್ಲ .ಪ್ರತಿ ದಿನ ಅದನ್ನು "ಸ್ವಚ್ಛಗೊಳಿಸಿ "ಔಷಧ ಹಚ್ಚಿ ನಿಧಾನವಾಗಿ ಮಲಗಿಸುತ್ತಿದ್ದೆ .

            

ಅಮ್ಮನ ಮುಂದಿನ ದಿನಗಳು , ಅತಿ ಘೋರ ಎಂದು ತಿಳಿದಿತ್ತು .ಈ ಬೋನ್ ಕ್ಯಾನ್ಸರ್ ವೇ ಹಾಗೆ . ಕೊನೆ ಕೊನೆಗೆ ಮೈನ ಎಲುಬುಗಳು "ಬಿಸ್ಕೇಟ್ ನಂತೆ "ಮೆದುವಾಗಿ ...ಕಂಡ ಕಂಡಲ್ಲಿ "ಪುಡಿಯಾಗುತ್ತಾ " ಇರುವುದು ಕೂಡ ಇದರ ಒಂದು ಲಕ್ಷಣ .  ನಾ ಚಿಕ್ಕವನು ಇದ್ದಾಗಲೇ ತೀರಿಕೊಂಡ ಅಪ್ಪನ ನೆನಪು ಕೂಡ , ನನಗೆ ಬಾರದಂತೆ ಬೆಳೆಸಿದ್ದಳು ನನ್ನನ್ನು .

            

ಹತ್ತಿರದ "ಶಾಲೆಯಲ್ಲಿ "ಟೀಚರ್ ನೌಕರಿ ಮಾಡುತ್ತಾ. ಹೆಮ್ಮೆ ಇತ್ತು ಅವಳ ಬಗ್ಗೆ , ಅದೆಷ್ಟು ಜನ ಮಕ್ಕಳಿಗೆ ಆಕೆ ಕನಸುಗಳನ್ನು ಕಟ್ಟಿ ಕೊಟ್ಟಿದ್ದಳು . ಯಾವಾಗಲೂ ಅವಳ ತುಟಿಯ ಮೇಲೆ ಮಾಸದ ನಗು , ಅದು ಪ್ರತಿಯೊಂದು ಮಕ್ಕಳಲ್ಲಿ ಜೀವಂತಿಕೆ ತುಂಬಿಸುತ್ತಾ ಇದ್ದಿದ್ದು ಖಾತ್ರಿ .  ಪ್ರತಿ ಕ್ಷಣ ಅಮ್ಮನ ಮುಂದೆಯೇ ಇರುತ್ತಿದ್ದೆ .ಎಷ್ಟೋ ಬಾರಿ ದೇವರನ್ನು ಕೇಳಿಕೊಂಡೆ ಕೂಡ ....ಅವಳು ಅನುಭವಿಸುವ "ಅರ್ಧದಷ್ಟು "ನೋವು ನನಗಾದರು ಕೊಡು ಎಂದು .

   

ಒಮ್ಮೆ ಅಮ್ಮನನ್ನು "ದೇವರು "ನೋಡಿದರೂ ಕೂಡ ಸಾಕಾಗಿತ್ತು . ಖಂಡಿತಾ ಆತನ ಕಣ್ಣಿನಲ್ಲಿ ಕೂಡ ನೀರು ಬರುತಿತ್ತು .

ಆದರೆ ಆತನಿಗೆ ಪುರುಸೊತ್ತು ಎಲ್ಲಿದೆ . ಗುರುಗಳಿಗೆ , ದೇವರಿಗೆ ಹೋಲಿಸುವ ಟೀಚರ್ ಅನ್ನು , ಅಮ್ಮನನ್ನು ಕೂಡ ಸ್ವಲ್ಪವೂ ಕರುಣೆ ತೋರದೆ ಪ್ರತಿಕ್ಷಣ ಹಿಂಸಿಸಿ "ಜೀವ ಹಿಂಡುತಿತ್ತು "ರೋಗ . " ಪಾತು , ಆಗೋಲ್ಲ ಕಣೋ ನನ್ನಿಂದ ".

ಅಮ್ಮನ ಸಣ್ಣ ಬಿಕ್ಕಳಿಕೆ ಕಣ್ಣೀರು ಅಮ್ಮನ ಕಣ್ಣಿನಿಂದ , ತಾನಾಗೇ ಹರಿದು ಹೋಗುತ್ತಿತ್ತು . ನೋವನ್ನು ತುಟಿ ಕಚ್ಚಿ ಸಹಿಸಿ ಕೊಳ್ಳುತ್ತಿದ್ದಳು .  ಅಮ್ಮನ ತಲೆ ಸವರಿ ಸಾಂತ್ವಾನ ಹೇಳುವುದು ಬಿಟ್ಟರೇ , ನನಗೂ ಯಾವ ದಾರಿ ಇರಲಿಲ್ಲ . ಎಲ್ಲಿ ಎಂದು ರೇಡಿಯೋ ಥೆರಪಿ ಕೊಡಿಸುವುದು . ಕೇಮೋ ಇಂಜೆಕ್ಷನ್ ಕೂಡ ವ್ಯರ್ಥ ಈ ಕಾಯಿಲೆಗೆ .ಆಕೆಯ ಕಣ್ಣೀರು ಒರೆಸುತ್ತಿರುವಾಗ , ಒಂದು ಕ್ಷಣ ದೊಡ್ಡದಾಗಿ ಕೂಗಿ ಕೊಂಡಳು .ಆಗ ಅರಿವು ಆಗಿತ್ತು , "ಹುಬ್ಬು" ಕೂಡ ಪುಡಿಯಾಗುತ್ತ ಇದೆಯೆಂದು .

               

ಆಕೆ ನನ್ನ ಕೈ ಹಿಡಿದು , ಇಷ್ಟು ದಿನದ ನರಳಾಟದ ನಂತರ ಕೇಳಿದ್ದು ಒಂದೇ ....."ಯಾವುದಾದರೂ ಇಂಜೆಕ್ಷನ್ ಕೊಟ್ಟು , ದಯವಿಟ್ಟು ನೋವಿನಿಂದ ಮುಕ್ತಿ ಕೊಡಿಸು ನನ್ನನ್ನು " ಎಂದು . ಯಾಚನೆ ಇತ್ತು ಅವಳ ಕಣ್ಣಲ್ಲಿ .ಆಗ ಮಾತ್ರ ಗಟ್ಟಿಯಾಗಿ ಅತ್ತು ಬಿಟ್ಟೆ , ಅವಳ ಎದುರಲ್ಲೇ . ಹಿಂದಿನಿಂದ ಅಮ್ಮನ ಸ್ವರ ಮತ್ತೆ ."ಬೇಡಿ ಕೊಳ್ಳುತ್ತೇನೆ , ದಯವಿಟ್ಟು ನನ್ನ ಇದರಿಂದ ಮುಕ್ತಿ ಕೊಡಿಸೋ " ಎಂದು ಕಷ್ಟ ಪಟ್ಟು ಹೇಳಿದ್ದಳು . ಯಾವಾಗಲೂ ಅಮ್ಮ ಜೊತೆಗಿರಲಿ ಎಂದು ಬಯಸಿದ ನನಗೆ , ಇತ್ತೀಚೆಗೆ ಎಷ್ಟೋ ಸಲ ಆಕೆ "ಜೀವ ಬಿಟ್ಟರೆ ಸಾಕು ದೇವರೇ "ಎಂದು ಪ್ರಾರ್ಥನೆ ಮಾಡುತಿದ್ದೆ .


ಜಗತ್ತಿನಲ್ಲಿ  ಮೊದಲ ಮಗ ನಾನೇ ಇರಬೇಕು , "ಅಮ್ಮನನ್ನು ಕರೆದುಕೊಂಡು ಹೋಗು ದೇವರೇ " ಎಂದಿರುವುದು.

ಯೋಚಿಸುತ್ತಾ ಕುಳಿತು ಬಿಟ್ಟೆ . ಅಮ್ಮ ಪ್ರತಿಕ್ಷಣ ಬೇಡಿ ಕೊಳ್ಳುತ್ತಾ ಇದ್ದಿದ್ದು ಕೇಳುತ್ತಾ . ಅದೆಷ್ಟು ಇರಬೇಡ ಆಕೆಗೆ ನೋವು . ಮಗನಾಗಿ ನಾನು ಎಲ್ಲವನ್ನೂ ಮಾಡಬಹುದಿತ್ತು , ಆದರೆ ಈ ನೋವನ್ನು ಮಾತ್ರ  ತೀರ್ಮಾನಕ್ಕೆ ಬಂದಿದ್ದೆ ನಾನು , ಯಾರು ಏನಾದರೂ ಕರೆಯಲಿ ನನ್ನ ತಾಯಿ ಕೊಂದವನು , ಮಾತೃ ಹತ್ಯೆ ಮಾಡಿದವನು ಎಂದು .

  ಮಾತೃ ಹತ್ಯೆ ದೋಷ , ನೂರಾರು ಜನ್ಮದವರೆಗೆ ಎಂದು ಕೇಳಿದ್ದೆ . ಅದಕ್ಕೆ ಪ್ರಾಯಶ್ಚಿತವಾಗಿ , ಹದಿನೆಂಟು ಬಂಗಾರದ "ದೇವಸ್ಥಾನಗಳನ್ನು "ಕಟ್ಟಿದರೂ ಕೂಡ ಹೋಗುವುದಿಲ್ಲವೆಂದು ಕೇಳಿದ್ದೆ .  ಆದರೆ ಅವಳು ನನ್ನಲ್ಲಿ ಕೇಳಿ ಕೊಂಡಿದ್ದು ಒಂದೇ , ಅವಳ ಇಡೀ ಜೀವನದಲ್ಲಿ . "ನೋವಿನಿಂದ ಮುಕ್ತಿ ಕೊಡಿಸು "ಎಂದು .


ಕಣ್ಣಿನ ನೀರು ಒರೆಸಿಕೊಂಡು , ಅಮ್ಮನ ಕಡೆ ನೋಡಿ ಬಾಗಿಲು ಮುಂದೆ ಮಾಡಿ ರಸ್ತೆಗೆ ಇಳಿದಿದ್ದೆ . ರಸ್ತೆಯ ಅತ್ತ ಇರುವ , ಮೆಡಿಕಲ್ ಸ್ಟೋರ್ ಕಡೆಗೆ . ನಾ ಹೇಳುತಿದ್ದ ಎಲ್ಲಾ ತರಹದ ಇಂಜೆಕ್ಷನ್ ತೆಗೆದು ಇಡುತ್ತಿದ್ದ ಆತ .ಪ್ರಖ್ಯಾತ ಡಾಕ್ಟರ್ ಎಂದು ಎಲ್ಲರಿಗೂ ಗೊತ್ತಿತ್ತು , ನನ್ನ ಬಗ್ಗೆ . ಆದರೆ ನಾ ಒಂದು "ಕೊಲೆ "ಮಾಡಲು ಹೋಗುತ್ತಾ ಇದ್ದೇನೆ , ಎಂಬುದು ಯಾರಿಗೂ ತಿಳಿದಿರಲಿಲ್ಲ . "ಅದರಲ್ಲೂ ಅಮ್ಮನ ಕೊಲೆ". ಮನೆ ಒಳಗೆ ಬಂದು , ಅರ್ಧ ಗಂಟೆ ಆಲೋಚನೆ ಮಾಡುತ್ತಾ ಇದ್ದೆ . ಅಮ್ಮನ ನರಳಾಟ "ನಿರಂತರ " ಎಂಬಂತೆ ಇತ್ತು ."ನೋವಿನಿಂದ ಮುಕ್ತಿ ಕೊಡಿಸು "ಎಂದು , ಪ್ರತಿಕ್ಷಣ ನನ್ನ ಕಣ್ಣಲ್ಲಿ ಕಣ್ಣಿಟ್ಟು ಯಾಚನೆ ಮಾಡುತಿದ್ದಳು . ಎಲ್ಲಿಯೂ ಕೂಡ ಆಗದ , ಮಾಡದ ಕೆಲಸವನ್ನು ನಾನು ಮಾಡಲಿಕ್ಕೆ ಹೊರಟಿದ್ದೆ . ಕೈ ನಡುಗುತ್ತಿತ್ತು ನನ್ನದು ಮೊದಲ ಬಾರಿಗೆ , ಅಮ್ಮನ ಕಣ್ಣಲ್ಲಿ ನೋಡುವ ದೈರ್ಯ ಇರಲಿಲ್ಲ .

             

ಕಣ್ಣೀರು ಒಂದು ಕಡೆ ಇಳಿದು ಹೋಗುತ್ತಿತ್ತು , ನಾ ಮಾಡುವ ಹೇಸಿಗೆ ಕೆಲಸವನ್ನು ನೆನದು . ಅಮ್ಮನಿಗೂ ಗೊತ್ತಾಗಿರಬೇಕು ಅದು. ಕಣ್ಣು ಸನ್ನೆಯಿಂದಲೇ ಕರೆದಿದ್ದಳು ಬಳಿಗೆ ."ನಾನೇ ಸ್ವತಃ ಹೇಳುತ್ತಿದ್ದೇನೆ ಕಣೋ , ಇದು ಪುಣ್ಯದ ಕೆಲಸ . ಅಮ್ಮನ ನೋವು ಕಡಿಮೆ ಮಾಡಿದ ಪುಣ್ಯ ಬರುತ್ತೆ , ಯಾವ ದೋಷ ಕೂಡ ಬರೋಲ್ಲ "ಎಂದಿದ್ದಳು . ಅವಳ "ನೋವು "ಈ ಮಾತನ್ನು ಆಡಿಸಿದ್ದು ಎಂದು ಗೊತ್ತಾಗಿತ್ತು ನನಗೆ . ನಡುಗುವ ಕೈಯಿಂದಲೇ ನಿಧಾನಕ್ಕೆ , ಅಮ್ಮನ ಕಾಲಿನ ನರಕ್ಕೆ ಏರಿಸಿದ್ದೆ ಕೆಲ ಇಂಜೆಕ್ಷನ್ ನನ್ನು ಮಿಶ್ರಣ ಮಾಡಿ. ನಡುಗುತ್ತಿದ್ದ ಕೈಯಲ್ಲಿ .

ಅಮ್ಮನ ಕಣ್ಣಲ್ಲಿ ಒಂದು ತೃಪ್ತಿ ಇತ್ತು ಈಗ , "ನೀ ಮಾಡಿದ್ದು ತಪ್ಪು ಅಲ್ಲವೆಂದು ಹೇಳುತ್ತಿತ್ತು "ಅದು .

         

ಅಮ್ಮನ ಕೈಯನ್ನು ಹಿಡಿದುಕೊಂಡು ಕುಳಿತಿದ್ದೆ , ಕೊನೆ ಕ್ಷಣದಲ್ಲಿ ಕೂಡ ಆಕೆ ನನ್ನ ಜೊತೆಗೆ ಇರಲಿ ಎಂದು . ನಿಧಾನಕ್ಕೆ ಕೈ "ತಣ್ಣಗೆ "ಆಗತೊಡಗಿತು .ಅಮ್ಮನ ಕಣ್ಣು ಮಾತ್ರ , ನನ್ನ ದಿಟ್ಟಿಸಿ ನೋಡುತ್ತಿತ್ತು ."ಬಿಟ್ಟು ಹೋಗುತ್ತಿದ್ದೇನೆ ಪಾತು ನಿನ್ನ 'ಎಂದು .  ಪವಿತ್ರವಾದ ಕೆಲಸವನ್ನು , ಜೀವ ಕಾಪಾಡುವ ವೃತ್ತಿಯನ್ನು ..ಅಮ್ಮನ ಕೋರಿಕೆ ಮೇರೆಗೆ ಅಡವು ಇಟ್ಟಿದ್ದೆ.

ನಾ ಮಾಡಿದ ಕೆಲಸ , ಹೇಯ ಕೃತ್ಯವನ್ನು ಸಮರ್ಥಿಸುವ ಮಾತೇ ಇರಲಿಲ್ಲ . ಪೋಲಿಸ್ ಸ್ಟೇಷನ್ ಕಡೆಗೆ ಹೆಜ್ಜೆ ಹಾಕಿದ್ದೆ .

ಅಲ್ಲಿಗೆ ಹೋಗುವ ಮುಂಚೆ , ನನ್ನ ಚೆಂದದ ಅಮ್ಮನ ಕಣ್ಣು ಮುಚ್ಚಿ.


Rate this content
Log in

More kannada story from Natesh MG

Similar kannada story from Abstract