Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Vijaya Bharathi

Classics Inspirational Others

1.5  

Vijaya Bharathi

Classics Inspirational Others

ಪರಿವರ್ತನೆ

ಪರಿವರ್ತನೆ

3 mins
109


ಅಂದು ಬೆಳಿಗ್ಗೆ ಬೆಳಿಗ್ಗೆಯೇ ಎಂಭತ್ನಾಲ್ಕರ ಹರೆಯದ ಅಮ್ಮ, ಫೋನ್ ಮಾಡಿ ದಾಗ, ಏನಾಯಿತೆಂದು ವಿಚಾರಿಸಿದೆ. ನನ್ನ ಜೊತೆ ಎರಡು ಮಾತು ಗಳನ್ನಾಡುತ್ತಾ ಅಮ್ಮ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದಾಗ, ಫೋನ್ ಡಿಸ್ಕನೆಕ್ಟ್ ಮಾಡಿ,ನನ್ನ ಸ್ಕೂಟಿ ತೆಗೆದು ತಮ್ಮನ ಮನೆಗೆ ಓಡಿದೆ. ಪಾಪ ವಯಸ್ಸಾದ ಜೀವ, ಏನು ತೊಂದ್ರೆ ಆಗಿದ್ಯೋ ಏನೊ ಅಂತ ಯೋಚಿಸುತ್ತಾ ಗಾಡಿ ಓಡಿಸಿದೆ.


ತಮ್ಮ ನ ಮನೆ ತಲುಪಿ, ಅಮ್ಮ ನನ್ನು ನೋಡಿದಾಗ ನನಗೆ ಸಮಾಧಾನ ವಾಯಿತು. ನಾನು ಕಲ್ಪಿಸಿಕೊಂಡಿದ್ದ ಯಾವ ಘಟನೆಗಳೂ ಅಲ್ಲಿ ನಡೆದಿರಲಿಲ್ಲ ವೆಂಬುದು ಅಲ್ಲಿಗೆ ಹೋದ ಮೇಲೆ ನನಗೆ ಮನದಟ್ಟಾಯಿತು.

ಇತ್ತೀಚೆಗೆ ಅಮ್ಮ ತುಂಬಾ ಸೂಕ್ಷ್ಮ ಮನಸ್ಸಿನ ವಳಾಗಿದ್ದು, ಮನೆಯಲ್ಲಿ ಯಾರು ಏನು ಹೇಳಿದರೂ ತಪ್ಪು ತಿಳುವಳಿಕೆ ಮಾಡಿ ಕೊಂಡು ಬಿಡುತ್ತಾಳೆಂದು ನನ್ನ ತಮ್ಮ ಪೇಚಾಡಿಕೊಂಡಾಗ, 'ವಯಸ್ಸಾಗುತ್ತಾ ಹೋದಂತೆ ಹಿರಿಯರು ಮಕ್ಕಳಿಗೆ ಸಮಾನ ಅಂತಾರೆ, ನೀನೇನೂ ಬೇಸರ‌ಮಾಡ್ಕೋಬೇಡ್ವೋ ',ಅಂತ ಅವನಿಗೂ ಸಮಾಧಾನ‌ ಹೇಳಿ ಅಮ್ಮ ನ ಹತ್ತಿರ ಕುಳಿತು ಅವಳನ್ನೂ ಸಂತೈಸಿದೆ. ಮನೆಯಲ್ಲಿ ನಡೆದ ಒಂದು ಕ್ಷುಲ್ಲಕ ಮಾತಿಗೆ ಅಮ್ಮ ನೊಂದು ಕೊಂಡು ತಪ್ಪಾಗಿ ತಿಳಿದುಕೊಂಡು ಕಡೆಗೆ ಅತ್ತೂ ಕರೆದು ರಂಪ ಮಾಡಿದ್ದಳೆಂಬುದು ಗೊತ್ತಾಯಿತು.


ತಾಯಿ ಮತ್ತು ಹೆಂಡತಿ ಯ ಮಧ್ಯೆ ನನ್ನ ತಮ್ಮ ಅಸಹಾಯಕ ನಾಗಿರಬೇಕಾದ ಪರಿಸ್ಥಿತಿ. 'ಅವನಿಗೆ ಅವನ ಹೆಂಡತಿ ಯೇ ಮುಖ್ಯ,ನನ್ನ ಮಾತುಗಳನ್ನು ಲೆಕ್ಕಕ್ಕೆ ಇಡುವುದಿಲ್ಲ 'ಎಂಬುದು ಅಮ್ಮನ ಆರೋಪವಾದರೆ, 'ಅವರಿಗೆ ಅವರ‌ ತಾಯಿಯೇ ಸರ್ವಸ್ವ,ನಾನು ಎಷ್ಟು ಬಗೆಯಲ್ಲಿ ನೋಡಿಕೊಂಡರೂ ಏನಾದರೂ‌ ಕೊಂಕು ತೆಗಿತಾರೆ,' ಅನ್ನುವುದು ನನ್ನ ಅತ್ತಿಗೆ ಯ ಆರೋಪ,ಇವರ ನಡುವೆ ನನ್ನ ತಮ್ಮ ಪಾಪದವನಾಗಿ ಸಿಕ್ಕಿಹಾಕಿಕೊಂಡು ಬಳಲುತ್ತಿದ್ದ. ಕಡೆಗೆ ಒಂದೆರಡು ತಿಂಗಳು ನಾನು ಅಮ್ಮನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ, ಅಮ್ಮನನ್ನು ನಮ್ಮ ಮನೆಗೆ ಕರೆದುಕೊಂಡು ಬಂದೆ.

ನಮ್ಮ ಮನೆಗೆ ಬಂದ ಒಂದೈದಾರು ದಿನಗಳಲ್ಲಿ ಅಮ್ಮ ನ ಮನಸ್ಸು ಸ್ವಲ್ಪ ಸಮಾಧಾನವಾಯಿತು. ನಮ್ಮ ಮನೆಯಲ್ಲಿ ಯಜಮಾನರು,ಮಗ ಸೊಸೆ ಎಲ್ಲರೂ ಬೆಳಿಗ್ಗೆ ಕೆಲಸಕ್ಕೆ ಹೊರಟರೆ ಮನೆಗೆ ಬರುವುದು ರಾತ್ರಿ ಯಾಗುತ್ತಿದ್ದುದರಿಂದ, ಇಡೀ ದಿನ ಅಮ್ಮನೊಂದಿಗೆ ಮಾತನಾಡುತ್ತಾ , ಅವರಿಗೆ ಬೇಕಾದ ತಿಂಡಿ ಊಟಗಳನ್ನು

ಮಾಡಿಕೊಡುತ್ತಾ ಅವರನ್ನು ನೋಡಿಕೊಳ್ಳಲು ನನಗೆ ಸಾಕಷ್ಟು ಸಮಯ ಸಿಗುತ್ತಿತ್ತು.

ರಾತ್ರಿ ಎಲ್ಲರೂ ಮನೆಗೆ ಬರುವ ವೇಳೆಗೆ ನಾನೇ ಅಡುಗೆ ತಿಂಡಿ ಗಳನ್ನು ಮಾಡಿಟ್ಟಿರುತ್ತಿದ್ದೆ. ಐ.ಟಿ.ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸೊಸೆಯಿಂದ ಮನೆಗೆಲಸ ಗಳನ್ನು ನಾನು ನಿರೀಕ್ಷೆ ಮಾಡುತ್ತಿರಲಿಲ್ಲ. ರಾತ್ರಿ ಅವರಿಬ್ಬರೂ ಮನೆಗೆ ಬಂದ ಮೇಲೆ ಎಲ್ಲರಿಗೂ ಬಡಿಸುವುದೂ ಸಹ ನನ್ನ ಕೆಲಸದಲ್ಲಿ ಸೇರಿತ್ತು. ನಂತರ ಅಡುಗೆ ಮನೆ ಶುಚಿಗೊಳಿಸಿ ಮಾರನೇದಿನ ದ ತಿಂಡಿ ಹಾಗೂ ಡಬ್ಬಿಗಳಿಗೆ‌ ಸಿದ್ಧತೆ ನಡೆಸಿಟ್ಟುಕೊಳ್ಳುವುದು ನನ್ನ ಸೊಸೆಯ ಕೆಲಸವಾಗಿತ್ತು. ಅವಳಿಗೇನಾದರೂ ಹೆಚ್ಚಿನ ಕೆಲಸವಿದ್ದು ಮನೆಗೆ ಬಂದು ಮೇಲೆಯೂ ಲ್ಯಾಪ್ಟಾಪ್ ತೆಗೆದು ಕುಳಿತರೆ ಆ ಕೆಲಸಗಳೂ ಸಹ ನನ್ನ ಮೇಲೆ ಬೀಳುತ್ತಿತ್ತು.ಸೊಸೆಗೇನಾದರೂ ಹೇಳಿದರೆ ಮಗನಿಗೆ ಕೋಪ ಬರುತ್ತದೆ,ಮಗ ಸೊಸೆ ಹಾಗೂ ನನ್ನ ಮಧ್ಯೆ ಮನಸ್ತಾಪಗಳೇರ್ಪಟ್ಟರೆ ನಮ್ಮ ಮನೆಯವರಿಗೆ ನೆಮ್ಮದಿ ಇರುವುದಿಲ್ಲ. ಹೀಗೆಲ್ಲಾ ಯೋಚಿಸುತ್ತಾ "ಕಾಲಾಯ ತಸ್ಮೈ ನಮ:", ಎಂದು ಕೊಂಡು ಎಲ್ಲರನ್ನೂ ಅನುಸರಿಸಿ ಕೊಂಡು ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದೆ.

  ನಮ್ಮ ಸಂಸಾರದಲ್ಲಿ ನನ್ನ ಪರಿಸ್ಥಿತಿ ನೋಡಿದ ಅಮ್ಮ ನನಗೆ ತುಂಬಾ ಬುದ್ದಿ ಹೇಳಲು ಪ್ರಾರಂಭಿಸಿದಳು.

",ಅಲ್ಲಾ ಕಣೆ ಶಕ್ಕು,ಮನೆಗೆ ಸೊಸೆ ಬಂದರೂ ನಿನಗೆ ಕೆಲಸ ಕಡಿಮೆ ಆಗಲಿಲ್ಲ. ನೀನು ಸೊಸೆಗೆ ಸರಿಯಾಗಿ ಹೇಳಿ ಕೆಲಸ ಮಾಡಿಸದೇ ಇದ್ದರೆ ನಿನಗೇ ಕಷ್ಟ ನೋಡು,ನಾನು ಈಗಲೇ ಹೇಳ್ತಾ ಇದ್ದೀನಿ. ಸೊಸೆಯ ಹತ್ತಿರ ಸ್ವಲ್ಪ ಬಿಗಿಯಾಗಿ ಮಾತಾಡಿ ಕೆಲಸ ಮಾಡಿಸು.ಇಲ್ಲದಿದ್ದರೆ ತಲೆ ಮೇಲೆ ಕೂತ್ಕೋ ತಾರೆ".

ಅಮ್ಮ ಏನಾದರೊಂದಕ್ಕೆ ನನ್ನ‌ ಸೊಸೆಯ ಬಗ್ಗೆ ಹೇಳುತ್ತಿದ್ದಾಗ ,ನಾನು ಒಂದು ದಿನ ಅಮ್ಮ ನಿಗೆ

ಹೇಳಿದೆ.

"ಅಮ್ಮ ಈಗ ಕಾಲ ಬದಲಾಗಿದೆ. ಎಲ್ಲರಲ್ಲೂ ತಿಳುವಳಿಕೆ ಮೂಡುತ್ತಿದೆ. ನಿನ್ನ ಕಾಲದಂತೆ ನಾನು ಸೊಸೆಯ ಮೇಲೆ ಏನಾದರೊಂದು ಹೇಳುತ್ತಾ ಇರುವುದಕ್ಕೆ ಆಗುವುದಿಲ್ಲ. ನಿಧಾನವಾಗಿ ಅವಳೇ ತಿಳಿದುಕೊಳ್ಳುತ್ತಾಳೆ.ನಾನು ಅವಳಿಗೇನಾದರೂ ಹೇಳಲು ಹೋಗಿ, ಗಂಡ ಮತ್ತು ಮಗನ ಮುಂದೆ ಕೆಟ್ಟವಳಾಗುವುದಕ್ಕೆ ನನಗೆ ಇಷ್ಟವಿಲ್ಲ. ಬದುಕೆಂದರೆ ಹೀಗೆ . ಈಗ ಮೂವತ್ತು ವರ್ಷಗಳ ಹಿಂದೆ ನಾನು ಈ ಮನೆಗೆ ಸೊಸೆಯಾಗಿ ಬಂದಾಗ ನನ್ನ ಅತ್ತೆ ಮಾವಂದಿರನ್ನು ಹೊಂದಿಕೊಂಡು ಹೋದೆ. ಈಗ ನನಗೆ ಸೊಸೆ ಬಂದಾಗ ಸೊಸೆಗೆ ಹೊಂದಿಕೊಂಡು ಹೋಗುತ್ತಿದ್ದೇನೆ. ಮನೆಯ ನೆಮ್ಮದಿ ಗೆ ಯಾರಾದರೊಬ್ಬರು ಹೊಂದಿಕೊಂಡೇ ಸಾಗಬೇಕು."

ನನ್ನ ಮಾತುಗಳನ್ನು ಕೇಳುತ್ತಾ ಅಮ್ಮನಿಗೆ ಒಂದು ರೀತಿ ಬೇಸರವಾಯಿತೇನೋ?

"ಏನೋಮ್ಮ ನಾನು ನಿನ್ನ ಒಳ್ಳೇದಕ್ಕೆ ಹೇಳಿದರೆ ನೀನು ನನಗೇ ಉಪದೇಶ ನೀಡುತ್ತಿದ್ದೀ".

ಅಷ್ಟರಲ್ಲಿ ಕಾಲಿಂಗ್ ಬೆಲ್ ಬಾರಿಸಿದ್ದರಿಂದ ನಮ್ಮ ಸಂಭಾಷಣೆ ಅರ್ಧದಲ್ಲೇ ನಿಂತಿತು.

ನಮ್ಮ ಮನೆಗೆ ನನ್ನ ಓರಗಿತ್ತಿ ನಾದಿನಿಯರು ಬಂದಿದ್ದರು. ಅವರನ್ನು ಸ್ವಾಗತಿಸಿ ಕೂರಿಸಿ ಸ್ವಲ್ಪ ಅಡುಗೆ ಮನೆಯತ್ತ ಹೋದೆ.ಅವರಿಬ್ಬರೂ ಅಮ್ಮ ನೊಡನೆ ಮಾತನಾಡುತ್ತಿದ್ದರು.


ನಮ್ಮ ಅತ್ತಿಗೆ ತನ್ನ ಸೊಸೆಯ ಬಗ್ಗೆ "ಈಗಿನ ಕಾಲದ ಸೊಸೆಯಂದಿರಿಗೆ ಗಂಡ ಮಾತ್ರ ಮುಖ್ಯ,ಅವನ ಮನೆಯ ಇತರ ಸದಸ್ಯರೆಂದರೆ ತಾತ್ಸಾರ. ನಾವು ಏನು ಹೇಳಿದರೂ ಕಿವಿ ಮೇಲೆ ಹಾಕಿ ಕೊಳ್ಳುವುದಿಲ್ಲ. ಅದೂ ಅಲ್ಲದೆ ಗಂಡು ಮಕ್ಕಳು ತಮ್ಮ ಹೆಂಡತಿಯರನ್ನು ಬಿಟ್ಟು ಕೊಡುವುದೂ ಇಲ್ಲ. ದೊಡ್ಡ ವರೆನಿಸಿದ  ನಾವೇ ಅವರನ್ನು ಅನುಸರಿಸಿ ಕೊಂಡೇ ಹೋಗಬೇಕು" ಎನ್ನುತ್ತಿದ್ದರೆ,ನನ್ನ‌ ನಾದಿನಿ ತನ್ನ ಸೊಸೆಯ ಬಗ್ಗೆ "ನೀವು ಹೇಳೋದು ನೂರಕ್ಕೆ ನೂರು ಸತ್ಯ ವೈನಿ,

ನಮ್ಮ ಮನೆಯಲ್ಲಿ ನನ್ನ ಸೊಸೆಯ ತಂಟೆಗೆ ಹೋದರೆ ಸಾಕು,ಮಗ ನಮ್ಮ ಮೇಲೆ ಹರಿಹಾದುಬಿಡ್ತಾನೆ. ಅವಳಿಗೆ ಏನು ಕೆಲಸವೂ ಬರಲ್ಲ. ಮಗನಿಗೋಸ್ಕರ ನಾನೇ ಅನುಸರಿಸಿಕೊಂಡು ಹೋಗುತ್ತಾ ಇದ್ದೀನಿ.ಒಟ್ಟಲ್ಲಿ ಈಗಿನ ಕಾಲದಲ್ಲಿ ತುಂಬಾ ಕಷ್ಟ" ಹೇಳುತ್ತಿದ್ದಳು.


ಸ್ವಲ್ಪ ಹೊತ್ತು ಮಹಿಳಾ ಮಂಡಳಿ ಯಲ್ಲಿ ಸಂಜೆಯವರೆಗೂ ಅತ್ತೆ ಸೊಸೆಯರ‌ ಮಾತುಕತೆಗಳು ಮುಂದುವರಿದು, ಅವರಿಬ್ಬರೂ ಹೊರಟು ಮೇಲೆ ನಾನು ನನ್ನ ಅಮ್ಮ ನಿಗೆ ಹೇಳಿದೆ. 'ನೋಡಿದ್ಯಾ ಅಮ್ಮ , ಕೇವಲ ನಿನ್ನ ಮನೆಯಲ್ಲಿ ಮಾತ್ರ ಅತ್ತೆ ಸೊಸೆ ,ಗಂಡ ಹೆಂಡತಿ, ತಾಯಿ ಮಗನ ನಡುವೆ ಮನಸ್ತಾಪ ಜಗಳಗಳು ಇರುವುದೆಂದು ತಿಳಿದು ಕೊಳ್ಳಬೇಡ.ಇದು ಮನೆಮನೆಯಲ್ಲೂ ಇರುವಂತಹುದು. ಹೀಗಾಗಿ ಎಲ್ಲರ ಮನೆಯ ದೋಸೆಯೂ ತೂತು ಎನ್ನುವುದು ಇದಕ್ಕಲ್ಲದೆ ಮತ್ತೇನು?ಒಂದು ಮನೆಯಲ್ಲಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಹೊಂದಿಕೊಂಡು ಹೋದಾಗ ಮಾತ್ರ ಸಂಸಾರ ಸುಗಮವಾಗಿ ಸಾಗುತ್ತದೆ.


ಆಡುವ ಪ್ರತಿಮಾತಿಗೂ ತಪ್ಪು ಅರ್ಥ ಮಾಡಿಕೊಳ್ಳಬಾರದು. ವಯಸ್ಸಾದ ಕಾಲದಲ್ಲಿ ನಿನ್ನನ್ನು ಮನೆಯಲ್ಲಿಯೇ ಇಟ್ಟು ಕೊಂಡು ನೋಡಿಕೊಳ್ಳುತ್ತಿದ್ದಾರಲ್ಲ ಅದಕ್ಕೆ ನೀನು ಖುಷಿ ‌ಪಟ್ಟುಕೋ. ಸಣ್ಣ ಸಣ್ಣ ಜಗಳಗಳನ್ನು ಮರೆತುಬಿಡು.

ನಿನ್ನ ಮಗ ಶಾಮ್ ಕೂಡ ಆಗ ನೆಮ್ಮದಿ ಯಿಂದ ಇರಬಹುದು",. ನಾನು ಮಾತು ನಿಲ್ಲಿಸಿ ಅಮ್ಮ ನ ಮುಖವನ್ನೇ ಗಮನಿಸಿದೆ. ಅವಳಲ್ಲಿ ಏನೋ ಪರಿವರ್ತನೆಯಾದಂತೆ ಭಾಸವಾಯಿತು. ಅದೇನನ್ನಿಸಿತೋ ಏನೋ .

ಅಂದು ರಾತ್ರಿ ಅಮ್ಮ ನನ್ನ ಬಳಿಬಂದು "ಶಕ್ಕು, ನಾನು ನಾಳೇನೇ ನಮ್ಮ ಮನೆಗೆ ಹೊರಟು ಬಿಡ್ತೀನಿ. ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟುಬಿಡು. ನೀನು ಹೇಳಿದ ಹಾಗೆ ಎಲ್ಲರ ಮನೆ ದೋಸೇನೂ ತೂತೇ.

ನಮ್ಮ ನಮ್ಮ ಮನೆ ನಮಗೆ ಸರಿ"ಎಂದು ಹೇಳಿ ರೂಮಿಗೆ ಹೋಗಿ ತನ್ನ ಬಟ್ಟೆ ಗಳನ್ನು ಬ್ಯಾಗ್ ಗೆ ಹಾಕುತ್ತಾ ಕುಳಿತ ಅಮ್ಮ ನನ್ನು ನೋಡಿ ನಗುತ್ತಾ ನಿಂತೆ.



Rate this content
Log in

Similar kannada story from Classics