STORYMIRROR

Chethana Bhargav

Classics Inspirational Others

4  

Chethana Bhargav

Classics Inspirational Others

ತಾಯ್ತನದ ಸವಿ

ತಾಯ್ತನದ ಸವಿ

2 mins
215

 


ತಾಯ್ತನ ಎಂಬುದು ಹೆಣ್ಣಿಗೆ ಭಗವಂತ ನೀಡಿರುವ ಒಂದು ವರ. ಪ್ರತಿಯೊಂದು ಹೆಣ್ಣಿಗೆ ತಾಯ್ತನ ತನ್ನೊಳಗೆ ಇರುತ್ತದೆ. ಅವಳು ತಾಯಿಯಾದಾಗ ಆ ತಾಯ್ತನಕ್ಕೆ ಒಂದು ಆಕಾರ ಬರುತ್ತದೆ.


ನನಗೆ ಪ್ರಸವದ ದಿನಾಂಕ ಹತ್ತಿರ ಬರುತ್ತಿದಾಗ ಮನಸ್ಸಿನಲ್ಲಿ, ನಾನು ಪ್ರಸವದ ನೋವು ಹೇಗೆ ತಡೆದುಕೊಳ್ಳುತ್ತೀನಿ, ನೋವಿನ ತೀವ್ರತೆ ಎಷ್ಟು ಇರುತ್ತದೆ , ನಾನು ಮಗುವನ್ನು ಸಂಭಾಳಿಸುವಲ್ಲಿ ಪ್ರಭುದ್ಧಳಾಗಿದ್ದೆನೋ ಇಲ್ಲವೋ ಇಂತಹ ಸಾವಿರಾರು ಪ್ರಶ್ನೆಗಳು ಉಧ್ಭವಿಸುತ್ತಿತ್ತು. ಜಾಸ್ತಿ ಬೇಡದ್ದೆಲ್ಲಾ ಯೋಚಿಸಬೇಡ ಭಗವಂತನ ಸ್ಮರಣೆ ಮಾಡು ಅದೆಲ್ಲ ತನ್ನಿಂದ ತಾನೇ ಬರುತ್ತದೆ ಎಂದು ಅಮ್ಮ ಕಿವಿ ಮಾತನ್ನು ಹೇಳುತ್ತಿದ್ದರು. ಹೆರಿಗೆಯಾಗಿ ಕಂದನನ್ನು ನನ್ನ ಮಡಿಲಲ್ಲಿ ಮಲಗಿಸಿದ್ದಾಗ ಆದ ಮಧುರ ಅನುಭವವನ್ನು ವರ್ಣಿಸಲು ಸಾಧ್ಯವಿಲ್ಲ. ಕಂದನನ್ನು(ಮಗಳು) ನೋಡಿದೊಡನೆ ಹೆರಿಗೆಯಾಗುವಾಗ ಅನುಭವಿಸಿದ ನೋವು ಎಲ್ಲಾ ಮರೆತುಹೋಯಿತು. ಮೊದಲ ಪುಟ್ಟ ಪುಟ್ಟ ಕೈ ಕಾಲಿನ ಸ್ಪರ್ಶವನ್ನು ನೆನೆಸಿಕೊಂಡರೆ ಈಗಲೂ ಮೈ ರೋಮಾಂಚನಗೊಳ್ಳುತ್ತದೆ.

ಮಗುವಿನ ಜನನದೊಂದಿಗೆ ತಾಯಿಯ ಪುನರ್ಜನ್ಮವು ಆಗುತ್ತದೆ. ಮಗು ಜನಿಸಿದೊಡನೆ ತಾಯಿಯ ಪ್ರಪಂಚವೇ ಬೇರೆ ಆಗುತ್ತದೆ. ಆ ಮಗು ಒಂದೇ ಆಕೆಯ ಪ್ರಪಂಚ. ಸದಾ ಮಗುವಿನ ಬಗ್ಗೆಯೇ ಯೋಚಿಸುತ್ತಾ ಇರುತ್ತಾಳೆ. ಸ್ನೇಹಿತರೊಡನೆ ಮಾತನಾಡಬೇಕಾದರೂ ಕೂಡ ನಿಮ್ಮ ಮಗು ಯಾವ ಯಾವ ತಿಂಗಳಲ್ಲಿ ಏನೇನು ಮಾಡುತ್ತಿತ್ತು ಎಂದೆಲ್ಲಾ ಚರ್ಚಿಸುತ್ತಿರುತ್ತಾಳೆ.


ನನ್ನ ಮಗಳ ಮೊದಲ ನಗು ಕಂಡೊಡನೆ ಬೆಳದಿಂಗಳ ಚಂದಿರನೇ ಧರೆಗಿಳಿದು ಬಂದನೇನು ಅಂತ ಅನಿಸುತ್ತಿತ್ತು. ಮಗುಚಿಕೊಂಡು ನನ್ನೆಡೆ ತಿರುಗಿದಾಗ ನಾನೇನು ಸಾಧಿಸಿದ್ದೀನಿ ನೋಡಮ್ಮ ಅಂದ ಹಾಗೆ, ಮೊದಲು ಕುಳಿತುಕೊಂಡಾಗ, ಅಮ್ಮ ನಾನು ಇಡೀ ಜಗತ್ತನ್ನೇ ಕುಳಿತು ವೀಕ್ಷಿಸುತ್ತಿದ್ದೇನೆ ಅಂದ ಹಾಗೆ, ಅಂಬೆಗಾಲು ಇಡಲು ಶುರುಮಾಡಿದಾಗ ನಾನು ಎಲ್ಲಿದ್ದೀನಿ ಹುಡುಕಮ್ಮ ಎಂದ ಹಾಗೆ, ತೊದಲು ನುಡಿಗಳಲ್ಲಿ ಮೊದಲ ಬಾರಿ ಅಮ್ಮಾ ಎಂದು ಕರೆದಾಗ ಇಡಿಯ ಪ್ರಪಂಚವೇ ನನ್ನ ಕರೆಗೆ ಓಗೊಟ್ಟಿದೇಯೇನೋ ಎಂಬಂತೆ ನಾನು ಸ್ಪಂದಿಸಿದ್ದು , ಮಗಳು ನಿಲ್ಲಲು ಪ್ರಾರಂಭಿಸಿ ನೋಡಿ ಹೇಗೆ ನಾನು ನನ್ನ ಕಾಲ ಮೇಲೆ ನಿಂತಿದ್ದೇನೆ ಎಂದು ಆತ್ಮವಿಶ್ವಾಸದ ನಗೆ ಬೀರಿದ ಹಾಗೆ. ನಡೆಯಲು ಶುರು ಮಾಡಿದಾಗ ನನ್ನನ್ನು ಹಿಡಿಯುವರೇ ಈ ಪ್ರಪಂಚದಲ್ಲಿ ಇಲ್ಲವೇನೋ ಎಂಬಂತೆ ಗೆದ್ದು ಬೀಗಿದ ರೀತಿಯನ್ನು ನಾನು ಮರೆಯಲಾಗದು. ಅವಳ ಪ್ರತಿಯೊಂದು ಹಂತದ ಬೆಳವಣಿಗೆಯಲ್ಲೂ ನಾನು ನನ್ನ ತಾಯ್ತನವನ್ನು ಸಂಭ್ರಮಿಸಿದ ರೀತಿ ಹೇಳತೀರದು.


ನನ್ನ ಚೊಚ್ಚಲ ಬಾಣಂತನದ ವೇಳೆ, ನನ್ನ ತವರಿನಲ್ಲಿ ಅಡಿಕೆ ಕೊಯಿಲಿನ ಸಮಯ, ಅಮ್ಮನಿಗೆ ಅಡಿಕೆ ಸುಲಿಯಲು ಬರುವ ಕೆಲಸದವರಿಗೆಲ್ಲಾ ತಿಂಡಿ, ಪಾನೀಯಗಳನ್ನು ಒದಗಿಸಿ , ಎರಡೆರಡು ಕೊಟ್ಟಿಗೆಯ ಜಾನುವಾರುಗಳನ್ನು ಸಂಭಾಳಿಸುತ್ತಾ ಜೊತೆಗೆ ದೈನಂದಿನ ಮನೆಯ ಕೆಲಸ ಕಾರ್ಯಗಳ ಒತ್ತಡವಿದ್ದರೂ ನನ್ನ ಮಗಳ ಅಳುವ ಕರೆಗೆ ಓಗೊಟ್ಟು ರಾತ್ರಿಯಲ್ಲಿ ಅವಳನ್ನು ಅಂಗಾಲ ಮೇಲೆ ಮಲಗಿಸಿಕೊಂಡು ಸಮಾಧಾನಿಸುತ್ತಿದ್ದ ಪರಿ , ತಾಯ್ತನದ ತಾಳ್ಮೆಯನ್ನು ಕಂಡು ಅಚ್ಚರಿಪಟ್ಟಿದ್ದಿದೆ.

ಅದರಂತೆ ನನ್ನ ಎರಡನೇ ಮಗಳಿಗೆ ಮೊದಲ ಮಗಳು ಅಕ್ಕನಾಗಿ ,ತಾಯಿಯಂತೆ ಊಟ ತಿಂಡಿ ಮಾಡಿಸುವಾಗ, ಸ್ನಾನ ಮಾಡಿಸಿ, ತಲೆ ಬಾಚಿ , ಹಣೆಗಿಟ್ಟು ಶೃಂಗಾರ ಮಾಡಿ ಖುಷಿ ಪಡುವ , ಚಿಕ್ಕ ಮಗಳು ಅತ್ತಾಗ ದೊಡ್ಡವಳು ಸಮಾಧಾನ ಹೇಳುವ ಪರಿ ಕಂಡು ಹೆಣ್ಣಿಗೆ ತಾಯ್ತನ ಎಷ್ಟು ಸಹಜವಾಗಿಯೇ ಮೈಗೂಡುತ್ತದೆಯಲ್ಲವೇ ಎಂಬ ಅರಿವು ಆಗಿದೆ. ಅಮ್ಮ ಹೇಳುತ್ತಿದ್ದ ಕಿವಿ ಮಾತಿನಂತೆ ಮಗುವೊಂದು ಜನಿಸಿದಾಗ ತಾಯಿಯೂ ತಾನಾಗೆ ಜನಿಸುತ್ತಾಳೆ ಎಂಬ ಮಾತು ಎಷ್ಟು ನಿಜ ಎಂದೆನಿಸಿದೆ.

ಒಟ್ಟಿನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ಹೆತ್ತು ಅವರ ಬಾಲ್ಯದ ಆಟ ಪಾಠಗಳನ್ನು ಕಾಣುತ್ತಾ ಅವರು ಸ್ವತಂತ್ರವಾಗಿ ಶಾಲೆಗೆ ಹೋಗತೊಡಗಿದ ಮೇಲೆ ಕಂಡ ಈ ಹಿನ್ನೋಟ ನೋಡಿ ನನಗೆ ಅನಿಸಿದ್ದು ಹೀಗೆ.

ಈ ಎರಡು ಮಕ್ಕಳ ತಾಯ್ತನದ ಅನುಭವ ಬೇರೆ ಆದರೂ ಭಾವ ಒಂದೇ ......


Rate this content
Log in

Similar kannada story from Classics