Vijaya Bharathi

Classics Inspirational Others

3.9  

Vijaya Bharathi

Classics Inspirational Others

ಸ್ವತಂತ್ರ ಭಾರತ

ಸ್ವತಂತ್ರ ಭಾರತ

4 mins
623ಅಂದು,ಎಪ್ಪತ್ನಾಲ್ಕನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಕ್ಕೆ ರಾಂಪುರದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶ್ರೀಯುತ ರಾಜಾರಾಮ್ ಅವರನ್ನು ಮುಖ್ಯ ಅತಿಥಿ ಗಳಾಗಿ ಆ ಊರಿನ ತಹಶಿಲ್ದಾರರಾಗಿದ್ದ ಸುರೇಶ್ ಕುಮಾರ್ ಆಹ್ವಾನಿಸಿದಾಗ, ತೊಂಬತ್ತರ ಹರೆಯದ ರಾಜಾರಾಂ ಅವರು ತಮ್ಮ ವಯೋಸಹಜವಾದ ಕೆಲವು ಅನಾರೋಗ್ಯಗಳನ್ನೂ ಲೆಕ್ಕಿಸದೆ, ತುಂಬಾ ಸಂತೋಷದಿಂದ ಒಪ್ಪಿಕೊಂಡರು.ತಮ್ಮನ್ನು ಇತ್ತೀಚೆಗೆ ಸದಾಕಾಲವೂ ಕಾಡಿಸುತ್ತಿರುವಮಂಡಿನೋವು, ದೃಷ್ಟಿ ಮಂಜು,ಮಧುಮೇಹ,ಅಧಿಕ ರಕ್ತದೊತ್ತಡ,ಮುಂತಾದ ವಯೋಸಹಜ ಖಾಯಿಲೆಗಳೆಲ್ಲವೂ ಅವರಿಗೆ ಮರೆತು ಹೋಗಿ,ನಾಳಿನ ಧ್ವಜಾರೋಹಣ ಕಾರ್ಯಕ್ರಮವನ್ನೇ ಇದಿರುನೋಡುತ್ತಿದ್ದರು. ಅವರಲ್ಲಿ ಯುವಕರ ಉತ್ಸಾಹ ತುಂಬಿ ಪುಟಿಯುತ್ತಿತ್ತು..


ತಮ್ಮ ಯೌವನದ ಕಾಲದ ಸ್ವಾತಂತ್ರಪೂರ್ವದ ದಿನಗಳು ನೆನಪಾಗತೊಡಗಿತು. ತಾವು ಮೆಟ್ರಿಕ್ ನಲ್ಲಿ ಓದುತ್ತಿದ್ದಾಗ, ದೇಶದಲ್ಲಿಸ್ವಾತಂತ್ರದ ಕಿಚ್ಚು ಹೆಚ್ಚಾಗಿ, ಎಲ್ಲೆಲ್ಲೂ ಹೋರಾಟಗಳು ಬಿರುಸಾಗಿ,ಅಂದಿನ ಕಾಲದ ಅನೇಕ ಯುವ ವಿದ್ಯಾರ್ಥಿಗಳು,ತಮ್ಮ ವಿದ್ಯಾಭ್ಯಾಸವನ್ನು ತೊರೆದು, ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕುತ್ತಿದ್ದು, ಸುಮಾರು ಕ್ರಿ.ಶ್.1945 ರಲ್ಲಿ ತಾವು ಸಹ ತಮ್ಮ ಕಾಲೆಜ್ ವಿದ್ಯಾಭ್ಯಾಸವನ್ನು ತೊರೆದು, ದೇಶಸೇವೆಗಾಗಿ ಮನೆ ಮಠ ತೊರೆದು ,ಮಹಾತ್ಮಗಾಂಧೀಜಿಯವರ ಹಿಂದೆ,ಯುವ ನೇತಾರನಾಗಿ ಮನೆ ಬಿಟ್ಟು ಹೋದುದು, ನಂತರ ಕ್ವಿಟ್ ಇಂಡಿಯ ಮೂವ್ ಮೆಂಟ್ ನಲ್ಲಿ  ಸಕ್ರಿಯವಾಗಿ ಪಾಲ್ಗೊಂಡಿದ್ದು, ಮುಂದೆ ಬ್ರಿಟಿಷರ ಕಣ್ತಪ್ಪಿಸುತ್ತಾ,ಭೂಗತರಾಗಿ, ಕೆಲಸ ಮಾಡುತ್ತಿದ್ದುದು, ಕಡೆಗೆ ನಮ್ಮದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಮನೆಗೆಹಿಂತಿರುಗಿ, ಉಪಾಧ್ಯಾಯ ವೃತ್ತಿಗೆ ಸೇರಿ,ಸಂಸಾರಿಯಾದದ್ದು,ನಂತರಮದುವೆ,ಮಕ್ಕಳು,ಎಂದು ಸಾಂಸಾರಿಕ ಜೀವನವನ್ನು ನಿಭಾಯಿಸಿದ್ದು..........ಹೀಗೆ ರಾಜಾರಾಂ ಅವರಿಗೆ ಹಳೆಯದೆಲ್ಲಾ ನೆನಪಾಗತೊಡಗಿತು. ಇವರ ಈ ಸ್ವಾತಂತ್ರ್ಯ ಹೋರಾಟದ ಗಾಥೆ ಮನೆಯವರಿಗೆ ಹಾಗೂ ತಮ್ಮ ಆಪ್ತವಲಯದ ವಿದ್ಯಾರ್ಥಿಗಳನ್ನು ಬಿಟ್ಟರೆ ಯಾರಿಗೂ ತಿಳಿದಿರಲ್ಲಿಲ್ಲ. ಅವರು ಎಲೆಮರೆಕಾಯಿಯಂತೆ ತಮ್ಮ ಪಾಡಿಗೆ ತಾವು ಇದ್ದುಬಿಟ್ಟಿದ್ದರು.


ಆದರೆ ಇತ್ತೀಚೆಗೆ ರಾಂಪುರಕ್ಕೆ ತಹಶಿಲ್ದಾರ್ ಆಗಿ ನೇಮಕಗೊಂಡಿರುವ ಅವರ ಆಪ್ತ ಶಿಷ್ಯ ಶ್ರೀ ಸುರೇಶ್ ಕುಮಾರ್ ರವರು ಒಮ್ಮೆ ತಮ್ಮ ನೆಚ್ಚಿನ ಗುರುಗಳಾದ ಶ್ರಿ ರಾಜಾರಾಮ್ ಅವರನ್ನು ಭೇಟಿ ಮಾಡಿ,ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಮ್ಮ ಗುರುಗಳಾದ, ರಾಜಾರಾಂ ಅವರನ್ನು ಮುಖ್ಯಅತಿಥಿಗಳಾಗಿ ಹಾಗೂ ಪ್ರಧಾನ ಭಾಷಣಕಾರರಾಗಿ ಆಹ್ವಾನಿಸಿದ್ದರು.ತಮ್ಮ ಮೆಚ್ಚಿನ ಶಿಷ್ಯ ತಮ್ಮನ್ನು ಗುರುತಿಸಿ,ನಾಳೆಯ ಸಮಾರಂಭಕ್ಕೆ ಆಹ್ವಾನಿಸಿರುವುದನ್ನು ಕಂಡು ಅವರಿಗೆ ತುಂಬಾ ಸಂತೋಷವಾಗಿತ್ತು,ಜೊತೆಗೆ ಇಂತಹ ಶಿಷ್ಯನ ಬಗ್ಗೆ ಹೆಮ್ಮೆಯೆನಿಸಿತು.


ಆಗುಸ್ಟ್ ಹದಿನೈದರ ಮುಂಜಾನೆ,ರಾಜಾರಾಂ ಅವರು ಅತ್ಯಂತ ಉತ್ಸಾಹದಿಂದ, ಸಿದ್ಧರಾಗತೊಡಗಿದರು. ಬಿಳಿಯ ಪಂಚೆ,ಬಿಳಿಯ ಜುಬ್ಬ,ಗಾಂಧಿ ಟೋಪಿ,ಹಣೆಗೆ ಪುಂಡ್ರ ,ಹಸಿರುಶಾಲು ಧರಿಸಿ, ಮನೆಯ ಮುಂದೆ ವಾಹನಕ್ಕಾಗಿ ಕಾಯುತ್ತಾ ನಿಂತರು.ತೊಂಭತ್ತರ ಹರೆಯದ ಅವರ ಉತ್ಸಾಹ ಇಂದಿನ ಯುವಕರನ್ನು ನಾಚಿಸುವಂತಿತ್ತು.ಸುಮಾರು ಏಳುವರೆಯ ವೇಳೆಗೆ ತಹಶೀಲ್ದಾರ್ ಕಚೇರಿಯ ವಾಹನವೊಂದು ಬಂದು,ಅವರನ್ನು ಕರೆದುಕೊಂಡು ಹೋಯಿತು. 


ಸಕಲ ಸಿದ್ಧತೆಗಳಿಂದ ಸಜ್ಜುಗೊಂಡಿದ್ದ ಪ್ರಾಂಗಣದಲ್ಲಿ, ತಹಶಿಲ್ದಾರ್ ಸುರೇಶ್ ಕುಮಾರ್ ರವರ ಸಮ್ಮುಖದಲ್ಲಿ, ಧವಜಾರೋಹಣ ಕಾರ್ಯಕ್ರಮ ಮುಗಿದ ನಂತರ, ವೇದಿಕೆಯಲ್ಲಿ ಗಣ್ಯರ ಭಾಷಣಗಳ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಾರ್ಥನೆಯ ನಂತರ ಸುರೇಶ್ ಕುಮಾರ್ ರವರು ತಮ್ಮಗುರುಗುಳೂ, ಮುಖ್ಯ ಅತಿಥಿಗಳೂ ಆದ ಶ್ರೀ ರಾಜಾರಾಮ್ ರವರನ್ನು ಸಭೆಗೆ ಪರಿಚಯಿಸಿದರು.ನಂತರ ಮುಖ್ಯ 

ಅತಿಥಿಗಳಿಂದ ಭಾಷಣವೆಂದು ಪ್ರಕಟಣೆಯಾದಾಗ, ರಾಜಾರಾಂ ಎದ್ದು ನಿಂತರು. 


" ವಂದೇ ಮಾತರಂ,ಭಾರತ್ ಮಾತಾಕಿ ಜೈ" ಎಂಬ ಘೋಷಣೆಯೊಂದಿಗೆ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು.

"ನನ್ನ ಆತ್ಮೀಯ ಸಹೋದರ ಸಹೋದರಿಯರೆ, ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ನಾಲ್ಕು ವರ್ಷಗಳಾದವು. ಈ ಆಚರಣೆಯ ಹಿಂದಿನ ಶ್ರಮ,ತ್ಯಾಗ,ಬಲಿದಾನಗಳು ಸ್ಮರಣೀಯ. ’ಸ್ವರಾಜ್ಯ ನನ್ನ ಆಜನ್ಮ ಸಿದ್ಧ ಹಕ್ಕು’ ಎಂದು ಘೋಷಿಸುತ್ತಾ, ಬ್ರಿಟಿಷರ ಕಪಿಮುಷ್ಟಿಯಿಂದ ಭಾರತಮಾತೆಯನ್ನು ಮುಕ್ತಳನ್ನಾಗಿಸಲು,ಅನೇಕ ಮಹನೀಯರ ಬಲಿದಾನವಿದೆ,.ನಿಸ್ವಾರ್ಥವಾದ ತ್ಯಾಗವಿದೆ,ನಿರಂತರ ಹೋರಾಟವಿದೆ,.ಅಂತಹ ದೇಶಭಕ್ತರನ್ನು ಇಂದು ನೆನಪಿಸಿಕೊಂಡು ಅವರಿಗೆ ನಮ್ಮ ನಮನಗಳನ್ನು ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ವೀರ ಸವಾರ್ಕರ್,ಬಾಲ ಗಂಗಾಧರ್ ತಿಲಕ್, ಚಂದ್ರಶೇಖರ್ ಅಜಾದ್, ಬಿಪಿನ್ ಚನ್ದ್ರ ಪಾಲ್, ಬಂಕಿಮ ಚಟರ್ಜಿ,ಸುಭಾಶ್ ಚಂದ್ರ ಭೋಸ್, ಲಾಲಾ ಲಜ್ಪತ್ರಾಯ್,

ಬಂಕಿಮಚಂದ್ರ ಚಟರ್ಜಿ,ಮಹಾತ್ಮಾಗಾಂಧಿ,ಭಗತ್ಸಿಂಗ್,ಇವರೇ ಮೊದಲಾದ ಮಹನೀಯರ ಬಲಿದಾನಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಈ ಮಹಾನ್ ನೇತಾರರ ಹಿಂದೆ ಎಷ್ಟೋ ಜನರು ಎಲೆಮೆರೆಕಾಯಿಯಂತೆ ಹೋರಾಟ ಮಾಡಿದ್ದಾರೆ ಹಾಗೂ ಪ್ರಾಣವನ್ನೂ ಕೊಟ್ಟಿದ್ದಾರೆ. ಇವರುಗಳ ಬಲಿದಾನದ ಫಲವನ್ನು ಇಂದು ನಾವು ಅನುಭವಿಸುತ್ತಿದೇವೆ. ಆದರೆ ಇಂದು ಈ ಸ್ವಾತಂತ್ರ್ಯ ವೆಂಬುದೇನಾಗಿದೆ ಎಂಬುದನ್ನು ನೋಡುವಾಗ, ನನಗೆ ತುಂಬಾ ಬೇಸರವಾಗುತ್ತದೆ.ಇಂದಿನ ಜನರಿಗೆ ನಿಜವಾದ ಸ್ವಾತಂತ್ರ್ಯದ ಪರಿಕಲ್ಪನೆಯೇ ಇಲ್ಲದೆ ಸ್ವಾತಂತ್ರ್ಯವೆಂದರೆ ಸ್ವೇಚ್ಚಾಚಾರ ವೆಂದು ತಿಳಿದಿದ್ದಾರೆ.

ಮೊದಲು ಸ್ವಾತಂತ್ರ್ಯ ವೆಂದರೇನು ?ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ.

ಹಾಗಾದರೆ ಸ್ವಾತಂತ್ರ್ಯವೆಂದರೇನು?ಸ್ವಾತಂತ್ರ್ಯವೆಂದರೆ ನಿರಂಕುಶಮತಿತ್ವ ವೆಂದಲ್ಲ,ಸ್ವೇಚ್ಚಾಚಾರವಲ್ಲ, ಯಾರ ಮಾತನ್ನೂ ಕೇಳದೆ,ನಮಗೆ ತೋಚಿದಂತೆ ಅಶಿಸ್ತಿನಿಂದ ಇರುವುದಲ್ಲ,ಕಟ್ಟುಪಾಡುಗಳಿಲ್ಲದೆ, ನಿರಮರಾಹಿತ್ಯವೆಂದಲ್ಲ. ಸ್ವಾತಂತ್ರ್ಯವೆಂದರೆ,ನಮ್ಮದೇ ಸಾಂವಿದಾತ್ಮಕವಾದ ಶಿಸ್ತುಬದ್ಧವಾದಆಡಳಿತ ವೆಂಬುದು ರಾಜಕೀಯವಾದ ಒಂದು ಅರ್ಥ. ಇದರ ಮುಂದುವರಿಕೆಯಾಗಿ ವೈಯಕ್ತಿಕ ಸ್ವಾತಂತ್ರ್ಯ ಬರುತ್ತದೆ. ವೈಯ್ಯಕ್ತಿಕ ಸ್ವಾತಂತ್ರ್ಯವೆಂದಾಗ, ಮನಬಂದಂತೆ ಇರುವುದಲ್ಲ. ಅದೂ ಕೂಡ ದೇಶದ ಆಡಳಿತಾತ್ಮಕ ಕಟ್ಟು ಪಾಡುಗಳಿಗೆ,ಧಾರ್ಮಿಕ ಕಟ್ಟುಪಾಡುಗಳ ಚೌಕಟ್ಟಿನೊಳಗೆ ಇರಬಹುದಾದ ಶಿಸ್ತಿನ ಸ್ವಾತಂತ್ರ್ಯವೆಂದುಅಳವಡಿಸಲಾಗಿದೆ.ಹೀಗಾಗಿ ವೈಯಕ್ತಿಕ ಸ್ವಾತಂತ್ರ್ಯಕ್ಕೂ ಒಂದು ಮಿತಿಯನ್ನು ಇಟ್ಟುಕೊಂಡಾಗ, ದೇಶವನ್ನು ಸನ್ಮಾರ್ಗದಲ್ಲಿ ಮುನ್ನಡೆ್ಸಬಹುದು.ಇಲ್ಲವಾದಾಗ, ನಾನಾ ರೀತಿಯ ಅರಾಜಕತೆ ಸೃಷ್ಟಿಯಾಗುತ್ತದೆ. ಇಂದು ನಮ್ಮ ದೇಶದಲ್ಲಿ ಸ್ವಾತಂತ್ರ್ಯದ ದುರುಪಯೋಗ ಆಗುತ್ತಿರುವುದನ್ನು ನಾವೆಲ್ಲರೂ ಗಮನಿಸುತ್ತಿದೇವೆ.ಇದಕ್ಕೆ ಕಾರಣವೆಂದರೆ ಸ್ವಾತಂತ್ರ್ಯವೆನ್ನುವುದು "ಸ್ವೇಚ್ಚಾಚಾರ" ವಾಗುತ್ತಿದೆ. ಹೀಗಾಗಿ ನಮ್ಮ ಸ್ವತಂತ್ರ ಭಾರತದಲ್ಲಿ, ಮಹಿಳೆಯರು,ದುರ್ಬಲರು ಶೋಷಿತರಾಗುತ್ತಿದ್ದಾರೆ. ಇದು ನಿಜವಾಗಿಯು ಶೋಚನೀಯ.


ನಮ್ಮ ಪ್ರಾಚೀನ ಮಹರ್ಷಿಗಳು, ಸ್ವರಾಜ್ಯವೆಂದರೆ, ತಮ್ಮೊಳಗಿನ ಸದ್ವಸ್ತುವನ್ನು ಒಳಗಣ್ಣಿನಿಂದ ತಪಸ್ಸಿನ ಮೂಲಕ ಕಂಡುಕೊಂಡುಆ ಆತ್ಮಸಾಮ್ರಾಜ್ಯದಲ್ಲಿ ಆನಂದದಿಂದ ನೆಮ್ಮದಿಯಿಂದ ಇರುವುದು ಎಂದು ಸಾರಿದ್ದಾರೆ.ಆದ್ದರಿಂದಲೇ "ಭಾರತ" ಎಂದಾಗ "ಭಾ" ಎಂದರೆ ಬೆಳಕು,ಅದರಲ್ಲಿ "ರತ"ರೆಂದರೆ ಆಸಕ್ತರು.ಅಂದರೆ ಭಾರತ ವೆಂದಾಗ ಜ್ಞಾನ ದ ಬೆಳಕಿನಲ್ಲಿ ಆಸಕ್ತಿಯುಳ್ಳವರು ಎಂಬ ಮಹತ್ತರವಾದ ಅರ್ಥವಿದೆ. ನಮ್ಮ ಭಾರತ ಜ್ಞಾನಿಗಳ ನಾಡು, ಭಕ್ತರ ಬೀಡು, ಸಾಧುಸಂತರ ನೆಲೆವೀಡು.ಅಂತೆಯೇ ನಮ್ಮ ಪ್ರಾಚೀನ ಭಾರತದ ಎಲ್ಲಾ ಸಾಮ್ರಾಜ್ಯಗಳ ಸಮರ್ಥ ಆಳ್ವಿಕೆಯ ಹಿಂದೆ ಒಬ್ಬೊಬ್ಬ ಸಮರ್ಥರಾದ ತಪಸ್ವಿಗಳಾದ ಗುರುಗಳೇ ಕಾರಣವೆಂಬುದನ್ನು ನಾವು ನಮ್ಮ ಇತಿಹಾಸ ಕಾವ್ಯಗಳಿಂದ ಅರಿತುಕೊಳ್ಳಬಹುದು. ಉದಾಹರಣೆಗೆ, ವಸಿಷ್ಠರು, ಶತಾನಂದರು,ಚಾಣಾಕ್ಯ, ವಿದ್ಯಾರಣ್ಯರು ಇತ್ಯಾದಿ ಗುರುಗಳು ಒಂದೊಂದು ಸಾಮ್ರಾಜ್ಯದ ಉನ್ನತಿಗೆ ಕಾರಣರಾಗಿದ್ದಾರೆ. ಹೀಗಾಗಿ ಧರ್ಮಸಾಮ್ರಜ್ಯಕ್ಕೆ ,ಉತ್ತಮ ಆಡಳಿತಕ್ಕೆ, ನಮ್ಮ ಭಾರತ ಇಂದಿಗೂ ವಿಶ್ವವಿಖ್ಯಾತವಾಗಿದೆ.


ಅಂತೆಯೇ ಮಹಾತ್ಮ ಗಾಂಧೀಜಿಯವರು, "ರಾಮರಾಜ್ಯ"ದ ಕನಸನ್ನು ಕಂಡಿದ್ದರು. 


ಆದರೆ ಸ್ವತಂತ್ರ ಭಾರತದ ಸ್ಥಿತಿ ಇಂದೇನಾಗಿದೆ?

ಅಖಂಡ ಭರತಭೂಮಿ ಹರಿದು ಹಂಚಿ ಹೋಗಿದೆ,"ಭಾರತೀಯರೆಲ್ಲರೂ ಒಂದೇ" ಎಂಬ ಸಧ್ಭಾವನೆ ಮಾಯವಾಗಿ, ದೇಶದಲ್ಲೆಲ್ಲ, ಒಡಕು, ಅಶಾಂತಿ,ಅಸೌಖ್ಯ,ದುರಾಚಾರ,ಅತ್ಯಾಚಾರ,ಅಧರ್ಮಗಳು ತಾಂಡವವಾದುತ್ತಿದೆ.ಮಹಿಳೆಯರಿಗೆ, ಅಸಹಾಯಕರಿಗೆ ಸರಿಯಾದ ರಕ್ಷಣೆ ಇಲ್ಲದೆ, ಬೆಳಗಾದರೆ,ವೃತ್ತಪತ್ರಿಕೆಗಳಲ್ಲಿ,ಸ್ತ್ರೀ ಭ್ರೂಣಹತ್ಯೆ,

ಕೊಲೆ,ಅತ್ಯಾಚಾರ, ದರೋಡೆ, ವ್ಯಭಿಚಾರಗಳನ್ನೇ

ಕಾಣುತ್ತಿದ್ದೇವೆ. ಅಪರಾಧಿಗಳು ಶಿಕ್ಷೆಯಿಂದ ಪಾರಗುತ್ತಿರುವುದು ಮತ್ತೊಂದು ಅವ್ಯವಸ್ಥೆ.ಇಂತಹ ಸ್ವಾತಂತ್ರ ಬೇಕಿತ್ತೆ? ನೀವೆಲ್ಲರೂ ಯೋಚಿಸಿ.


ಮುಂದೇನಾಗಬೇಕು?

ಇಲ್ಲಿರುವ ಯುವ ಜನಾಂಗದವರೆ ನಾನು ಹೇಳುವ ಮಾತನ್ನು ಚೆನ್ನಾಗಿ ಕೇಳಿಸಿಕೊಳ್ಳಿ, ಮುಂದಿನ ಭವ್ಯ ಭಾರತದ ನಿರ್ಮಾಣ ನಿಮ್ಮಕೈಗಳಲ್ಲಿದೆ.

ಸ್ವಾಮಿ ವಿವೇಕಾನಂದರು, ರಾಣಾಪ್ರತಾಪ್, ಸರ್ದಾರ್ ವಲ್ಲಭಬಾಯ್ ಪಟೆಲ್, ಅಟಲ್ ಬಿಹಾರಿ ವಾಜ್ಪೇಯ್,ಅಬ್ದುಲ್ ಕಲಾಮ್,ಮಹರ್ಷಿ 

ಅರಬಿನ್ದೋ,ರವೀಂದ್ರನಾಥ್ ಟಾಗೂರ್ ,ಸುಭಾಶ್ ಚಂದ್ರಭೋಸ ಮುಂತಾದ ಮಹನೀಯರು ನಿಮ್ಮ ಆದರ್ಶವಾಗಲಿ,ಅವರು ಬಿಟ್ಟು ಹೋಗಿರುವ ಹೆಜ್ಜೆ ಗುರುತುಗಳನ್ನು ಹಿಡಿದು ಮುಂದೆ ಸಾಗುವ ಕೆಚ್ಚೆದೆ 

ನಿಮ್ಮದಾಗಬೇಕು. ಆಗಷ್ಟೇ ಮಹಾತ್ಮ ಗಾಂಧೀಜಿಯವರ ಕನಸಿನ "ರಾಮರಾಜ್ಯ" ದ ನಿರ್ಮಾಣ ಸಾಧ್ಯವಾಗಬಲ್ಲದು. ಯುವಕರ ಕಿವಿಗಳಲ್ಲಿ,"ಉತ್ತ್ಥಿಷ್ಠತ,ಜಾಗೃತ,ಮಾಸುಷುಪ್ತ,

ಅಗ್ನಿಮಿಚ್ಚಿದ್ವಮ್ ಭಾರತಾಃ"ಎಂಬ ಮಂತ್ರವು ಮೊಳಗುತ್ತಿರಲಿ."


"ಬೊಲೋ ಭಾರತ್ ಮಾತಾ ಕಿ ಜೈ "ಎಂದು ಹೇಳುತ್ತ, ಉತ್ತರೀಯದಲ್ಲಿ ತಮ್ಮ ಕಣ್ಣನ್ನು ಒರೆಸಿಕೊಳ್ಳುತ್ತಾ, ರಾಜಾರಾಮ್ ರವರು ತಮ್ಮ ಭಾಷಣವನ್ನು ಮುಗಿಸಿ,ತಮ್ಮ ಆಸನದಲ್ಲಿ ಕುಳಿತರು.

ನಂತರ ವಂದನಾರ್ಪಣೆ ಹಾಗೂ ರಾಜಾರಾಮ್ ರವರಿಗೆ ಗೌರವ ಸಮರ್ಪಣೆಗಳದವು. ಆ ಹಿರಿ ಜೀವಕ್ಕೆ ಅಂದು ಸಮಾಧಾನ ಸಿಕ್ಕಿತು. ತಾವು ಹೇಳಬೇಕೆಂದುಕೊಂಡಿದ್ದನ್ನೆಲ್ಲಾ ಹೇಳಿ ಮುಗಿಸಿದ್ದರು. ತೃಪ್ತರಾಗಿದ್ದರು.ಆ ಸಭೆಯಲ್ಲಿ ನೆರದಿದ್ದವರೆಲ್ಲರೂ ಈ ಹಿರಿಯ ಸ್ವಾತಂತ್ರ ಹೋರಾಟಗಾರರ ಮಾತಿನ ಮೋಡಿಗೆ ಮರುಳಾಗಿದ್ದರು. ಇವರ ಪಾದಮುಟ್ಟಿ ನಮಸ್ಕರಿಸುತ್ತಿದ್ದರು..ಇಷ್ಟುದಿನ ನಾವು ಇಲ್ಲೇ ಎಲೆಯಮರೆಯ ಕಾಯಿಯಂತೆ ಇದ್ದ ಈ ರಾಜಾರಾಂ ಅಜ್ಜನನ್ನು ಗುರುತಿಸಲೇ ಇಲ್ಲವಲ್ಲ ಎಂದು ಪೇಚಾಡಿಕೊಳ್ಳುತ್ತಿದ್ದರು.


ಕಾರ್ಯಕ್ರಮ ಮುಗಿಸಿ ಮನೆಗೆ ಬಂದ ರಾಜಾರಾಮ್ ರವರು ಅಂದು ರಾತ್ರಿ ದೂರದರ್ರ್ಶನದಲ್ಲಿ ಪ್ರಸಾರವಾಗುವ ಎಲ್ಲಾ ಧ್ವಜಾರೋಹಣ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾ, ನೆಮ್ಮದಿಯಿಂದ ನಿದ್ರೆ ಮಾಡಿದ ಅವರು, ಬೆಳಗ್ಗೆ ಏಳಲೇ ಇಲ್ಲ, ಆ ಹಿರಿಯ ದೇಶಭಕ್ತನ ಆತ್ಮ,ಭಾರತಾಂಬೆಯ ಮಡಿಲನ್ನು ಸೇರಿತು.
Rate this content
Log in

Similar kannada story from Classics