ಸ್ವಾವಲಂಬಿ ಗಂಗಾ..
ಸ್ವಾವಲಂಬಿ ಗಂಗಾ..
ಗಂಗಾಳಿಗೆ ಮದುವೆಯಾಗಿ 1 ವರ್ಷಗಳ ನಂತರ ಒಬ್ಬ ಗಂಡು ಮಗುವಿನ ಜನನವಾಯಿತು, ಆದರೆ ಆಕೆಯ ಗಂಡನಿಗೆ ಮಗು ಜನಿಸಿದ ಖುಷಿಯೇ ಇರಲಿಲ್ಲ!!, ಇತ್ತ ಆಕೆಯ ಮೇಲೆ ಪ್ರತಿ ದಿನವೂ ಕೂಗಾಡಿ, ರೇಗಾಡಿ ಮಾಡುತ್ತಿದ್ದ ಗಂಡ, ಆಕೆ ಬಾಣಂತಿ ಎಂದೂ ನೋಡದೇ ಎಂದಿನಂತೆ ಆಕೆಗೆ ಹಿಂಸೆ ಕೊಡುತ್ತಿದ್ದ!!
ಗರ್ಭಿಣಿಯಾಗಿದ್ದಾಗ ಗಂಡನ ಜೊತೆಗೆ ಹೇಗೋ ಸುಧಾರಿಸಿಕೊಂಡು ಹೋಗುತ್ತಿದ್ದ ಗಂಗಾಗೆ ಆಗ ತಾನೇ ಹುಟ್ಟಿದ ಹಸುಳೆಗೆ ಮೊಲೆ ಹಾಲು ಕೊಟ್ಟು ಕಾಪಿಟ್ಟು, ಜೊತೆಗೆ ಬಾಣಂತಿಯ ಆರೈಕೆ, ಪಥ್ಯಗಳನ್ನು ಮಾಡಿಕೊಂಡು, ಪತಿಯ ಹಿಂಸೆಯನ್ನು ಕೂಡ ತಾಳಿಕೊಂಡು ಬಾಳಲು ಕಷ್ಟವಾಯಿತು ಹಾಗಾಗಿ ಆಕೆ ಗಂಡನಿಂದ ದೂರ ಸರಿಯುವ ನಿರ್ಧಾರ ಮಾಡಿದಳು ಹಾಗೂ ಸಣ್ಣ ವಯಸ್ಸಿನಲ್ಲಿಯೇ ಅಪ್ಪ, ಅಮ್ಮನನ್ನು ಕಳೆದುಕೊಂಡಿದ್ದ ಗಂಗಾ, ತನ್ನ ಹಸುಳೆಯೊಂದಿಗೆ ತನ್ನ ತವರು ಮನೆಯಿಂದ ಊರಿಗೆ ತೆರಳಿ, ತವರು ಮನೆಯ ಪಕ್ಕದಲ್ಲಿ ಒಂದು ಶೀಟ್ ಹಾಕಿ, ಸೋಗೆಯ ನಾಲ್ಕು ಗೋಡೆಗಳನ್ನು ನಿರ್ಮಿಸಿ ಜೀವನ ಮಾಡಲು ಶುರು ಮಾಡಿದಳು.
ಇತ್ತ ಆಕೆಯ ಗಂಡನಿಗೂ ಆಕೆಯಿಲ್ಲದೇ ಖುಷಿಯೆನಿಸಿತು, ಏಕೆಂದರೆ ಆತನಿಗೆ ಒಂದು ಹೆಂಗಸಿನ ಜೊತೆಗೆ ಅಕ್ರಮ ಸಂಬಂಧವಿತ್ತು, ಹಾಗಾಗಿ ಆತನು ಪತ್ನಿಗೆ ವಿಚ್ಛೇದನ ಕೊಡಬೇಕೆಂದು ನಿರ್ಧಾರ ಮಾಡಿದ.
ವಿಚ್ಛೇದನ ನೋಟಿಸ್ ನ್ನು ನೋಡಿದ ಗಂಗಾ ಒಂದು ಕ್ಷಣ ಕಕ್ಕಾಬಿಕ್ಕಿಯಾದಳು ಆದರೂ ಪ್ರತಿ ನಿತ್ಯವೂ ಅವನು ಕೊಡುತ್ತಿದ್ದ ಹಿಂಸೆಯನ್ನು ನೆನೆದು ವಿಚ್ಛೇದನದ ಪತ್ರಕ್ಕೆ ಸಹಿ ಹಾಕಿದಳು.
ಇತ್ತ ಬಾಣಂತಿಯೆಂದೂ ನೋಡದೇ, ಗಂಗಾ ಅಲ್ಲಿಯೇ ಪಕ್ಕದಲ್ಲಿದ್ದ ಸಾಹುಕಾರರ ಮನೆಯಲ್ಲಿ ಕೂಲಿ ಮಾಡಿ ಜೀವನ ನಡೆಸಲು ಅನುವಾದಳು. ಅವಳು ದುಡಿಯದೇ ವಿಧಿಯೇ ಇಲ್ಲ, ತನಗಾಗಿ ಅಲ್ಲದೇ ಇದ್ದರೂ ತನ್ನ ಮಗುವಿಗಾಗಿಯಾದರೂ ತಾನು ಬದುಕಬೇಕು ಎಂಬ ನಿರ್ಧಾರ ಮಾಡಿದಳು ಹಾಗೂ ಹಗಲು ರಾತ್ರಿಯೆನ್ನದೆ ಅವರಿವರ ಮನೆಯಲ್ಲಿ ಮುಸುರೆ ತಿಕ್ಕಿ, ಕೂಲಿ ಮಾಡಿ, ಜೀವನ ನಡೆಸುತ್ತಿದ್ದಳು.
ಇತ್ತ ತನ್ನ ಮಗ ಬೆಳೆದು ದೊಡ್ಡವನಾಗಿ ಬಿಟ್ಟ, ಅವನ ವಿದ್ಯಾಭ್ಯಾಸದ ಚಿಂತೆ ಗಂಗಾಗೆ ಶುರುವಾಯಿತು. ಅಲ್ಲಿಯೇ ಪಕ್ಕದಲ್ಲಿದ್ದ ಸರ್ಕಾರಿ ಶಾಲೆಗೆ ಮಗನನ್ನು ಕಳುಹಿಸಿದಳು. ಮಗನು ಅಮ್ಮನ ಕಷ್ಟಗಳನ್ನು ಅರಿತು, ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಮುಂದೆ ಬಂದನು. ಮುಂದೆ ಅವನಿಗೆ ಓದುತ್ತಾ ಹೋದಂತೆ ಉತ್ತಮ ಅಂಕಗಳನ್ನು ಗಳಿಸಿದ ಕಾರಣ ಅವನಿಗೆ ಸ್ಕಾಲರ್ ಶಿಪ್ ದೊರೆಯಿತು ಹಾಗಾಗಿ ಅವನ ವಿದ್ಯಾಭ್ಯಾಸದ ಚಿಂತೆ ಗಂಗಾಗೆ ಕಾಡಲಿಲ್ಲ.
ಉತ್ತಮ ಅಂಕ ಪಡೆದ ಚೇತನ್ ತಾನು ಪದವಿಯಲ್ಲಿ ಕಲಿಯುತ್ತಿರುವಾಗಲೇ ಉದ್ಯೋಗಕ್ಕೆ ಆಯ್ಕೆಯಾದ!!, ಅದೂ ಕೂಡ ಬೆಂಗಳೂರಿನಲ್ಲಿ ಉದ್ಯೋಗ ದೊರಕಿತು, ತನ್ನ ಅಮ್ಮನನ್ನು ಕರೆದುಕೊಂಡು ಬೆಂಗಳೂರಿನತ್ತ ನಡೆದ ಚೇತನ್ ಹಾಗೂ ಇಷ್ಟೊಂದು ಕಷ್ಟಪಟ್ಟು ಸಾಕಿದ ತನ್ನ ಅಮ್ಮನಿಗೆ ಯಾವುದೇ ಕಾರಣಕ್ಕೂ ನೋವು, ತೊಂದರೆಗಳಾಗದ ರೀತಿಯಲ್ಲಿ ಚೆನ್ನಾಗಿ ನೋಡಿಕೊಂಡ.
ಅತ್ತ ಗಂಗಾಳ ಗಂಡನ ಪರಿಸ್ಥಿತಿ ಅದೋಗತಿಯಲ್ಲಿತ್ತು, ಆತನನ್ನು ತೊರೆದು ಆಕೆ ಹೋಗಿದ್ದಳು, ಆತನಿಗೆ ಇದೇ ಬೇಸರದಿಂದ ಮಾನಸಿಕ ಖಾಯಿಲೆಯೂ ಬಂದೊದಗಿತ್ತು!!, ಇತ್ತ ಅದೇಕೋ ಬೆಂಗಳೂರಿನಿಂದ ಮಗನ ಜೊತೆಗೆ ಬಂದಿದ್ದ ಗಂಗಾಳಿಗೆ ತಾನು ಮದುವೆಯಾಗಿ ಹೋದ ಊರನ್ನು ನೋಡಬೇಕೆಂಬ ಬಯಕೆಯಾಯಿತು, ಹಾಗಾಗಿ ಅಲ್ಲಿಗೆ ತೆರಳಿದ ಗಂಗಾಳಿಗೆ ತನ್ನ ಪತಿಯನ್ನು ನೋಡಿ ಸಂಕಟವಾಯಿತು, ಎಷ್ಟಾದರೂ ಕಷ್ಟ, ನೋವುಗಳನ್ನು ಉಂಡ ಹೆಣ್ಣು ಕರುಳಲ್ಲವೇ??, ಸಂಕಟವಾಗದೇ ಇದ್ದೀತೇ?! ಹಾಗಾಗಿ ತನ್ನ ಜೊತೆಗೆ ಪತಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡುವ ಯೋಚನೆಯಿಂದಾಗಿ ಮಗನೊಂದಿಗೆ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದಳು ಹಾಗೂ ನಿಧಾನವಾಗಿ ಗುರುವಯ್ಯನು ಚೇತರಿಸಿಕೊಂಡನು.
ನನ್ನಿಂದ ತಪ್ಪಾಯಿತು ಗಂಗಾ, ನನ್ನನ್ನು ಕ್ಷಮಿಸಿ ಬಿಡು ಎಂದು ಗುರುವಯ್ಯನು ಬೇಡಿಕೊಂಡನು ಹಾಗೂ ಪತಿಯು ನಿನ್ನನು ತಿರಸ್ಕರಿಸಿದರೂ, ಯಾರ ಆಸರೆಯೂ ಇಲ್ಲದೇ ನೀನು ಮಗನನ್ನು ಚೆನ್ನಾಗಿ ಸಾಕಿ, ಉತ್ತಮ ವಿದ್ಯಾಭ್ಯಾಸ ಕೊಡಿಸಿ, ಒಳ್ಳೆಯ ಉದ್ಯೋಗ ಒದಗುವ ಹಾಗೆ ಮಾಡಿದೆ ನೀನು ಗ್ರೇಟ್ ಗಂಗಾ ಎಂದು ಪತ್ನಿಯನ್ನು ಹೊಗಳಿದನು.
ಹೀಗೆ ಗಂಗಾಳು ಹೆಣ್ಣಾದರೂ ಕೂಡ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಸ್ವಾವಲಂಬಿಯಾಗಿ ಜೀವನದಲ್ಲಿ ಮುಂದೆ ಬಂದು ಗೆಲುವನ್ನು ಕಂಡಳು.
