ಸಂಕಲ್ಪ
ಸಂಕಲ್ಪ
ಸೌಮ್ಯ ಮತ್ತು ಮಾನ್ಯ ಬಹಳ ಒಳ್ಳೆಯ ಸ್ನೇಹಿತೆಯರು. ಇಬ್ಬರೂ ಚಿಕ್ಕ ವಯಸ್ಸಿನಿಂದ ಒಂದೇ ಶಾಲೆಯಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದ ಬುದ್ಧಿವಂತ ವಿದ್ಯಾರ್ಥಿನಿಯರು. ಸೌಮ್ಯ ಮಧ್ಯಮ ವರ್ಗದವಳು. ಆದರೆ ಮಾನ್ಯಳ ತಂದೆ ತಾಯಿ ಕೂಲಿ ಮಾಡಿ ಕಷ್ಟಪಟ್ಟು ಮಗಳನ್ನು ಓದಿಸುತ್ತಿದ್ದರು. ಇವರ ಹಳ್ಳಿಯಲ್ಲಿ ಕಾಲೇಜಿನವರೆಗೆ ಮಾತ್ರ ವ್ಯಾಸಂಗ ಮಾಡಲು ಅವಕಾಶವಿತ್ತು. ಇಬ್ಬರೂ ಸ್ನೇಹಿತೆಯರು ಪದವಿ ಪೂರ್ವ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. ಇಬ್ಬರೂ ವೈದ್ಯವೃತ್ತಿಯನ್ನು ಕೈಗೊಳ್ಳುವ ಕನಸನ್ನು ಹೊತ್ತಿದ್ದರು. ಇಬ್ಬರಿಗೂ ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಎಮ್‌ಬಿಬಿಎಸ್ ಓದಲು ಅವಕಾಶ ಸಿಕ್ಕಿತ್ತು. ಇಬ್ಬರೂ ಹಾಸ್ಟಲ್ ನಲ್ಲಿ ವಾಸ್ತವ್ಯ ಹೂಡಿದರು.
ಹಳ್ಳಿಯಲ್ಲಿ ಬೆಳೆದ ಮಾನ್ಯ ನಗರ ಜೀವನದ ಆಕರ್ಷಣೆಗೆ ಒಳಗಾದಳು. ತಂದೆ ತಾಯಿಯರ ಕಷ್ಟವನ್ನು ಅರ್ಥಮಾಡಿಕೊಳ್ಳದೆ ಮೋಜು ಮಸ್ತಿ ಮಾಡುತ್ತಾ ರಂಗಿನ ಬದುಕನ್ನು ನಡೆಸಲು ಪ್ರಾರಂಭಿಸಿದಳು. ಮೊಬೈಲ್ ಸಿಕ್ಕಿದ ಮೇಲಂತೂ ಓದಿನ ಕಡೆಗೆ ಗಮನ ಕೊಡದೆ ಸದಾ ಅದರಲ್ಲೇ ಮಗ್ನಳಾಗಿರುತ್ತಿದ್ದಳು. ಪರೀಕ್ಷೆಗಳಲ್ಲಿ ಅಂಕ ಕಡಿಮೆ ಬರಲು ಪ್ರಾರಂಭವಾಯಿತು. ಸೌಮ್ಯಳಿಗೆ ಮಾನ್ಯಳ ಪೋಷಕರ ಕಷ್ಟದ ಅರಿವಿತ್ತು. ಇವಳನ್ನು ಏನಾದರೂ ಮಾಡಿ ಸರಿದಾರಿಗೆ ತರಬೇಕು ಎಂದು ಸಂಕಲ್ಪ ಮಾಡಿದಳು .
ಅದರಂತೆ ಸೌಮ್ಯ ಸೌಮ್ಯವಾಗಿ ಅವಳಿಗೆ ಅನಗತ್ಯ ಖರ್ಚಿನ ಬಗ್ಗೆ, ಹೆತ್ತವರ ಕಷ್ಟದ ಬಗ್ಗೆ ಅವರು ಮಕ್ಕಳ ಮೇಲೆ ಇಟ್ಟುಕೊಂಡಿರುವ ಕನಸು ಹಾಗೂ ಭರವಸೆಯ ಬಗ್ಗೆ ಮನಸ್ಸಿಗೆ ಮುಟ್ಟುವಂತೆ ತಿಳಿಹೇಳಿ ರಂಗಿನ ಬದುಕಿನಿಂದ ಹೊರಬರುವಂತೆ ಮಾಡಿ, ವಿದ್ಯಾಭ್ಯಾಸದ ಕಡೆಗೆ ಗಮನ ಕೊಡುವಂತೆ ಮಾಡಿದಳು.
ಇಬ್ಬರೂ ಹಗಲು ರಾತ್ರಿ ಲೆಕ್ಕಿಸದೆ ಚೆನ್ನಾಗಿ ಓದಿ ಉತ್ತಮ ಅಂಕವನ್ನು ಪಡೆದು ಉತ್ತಮ ವೈದ್ಯೆಯರಾಗಿ ಸೇವೆ ಸಲ್ಲಿಸುವ ಸಂಕಲ್ಪ ಮಾಡಿ ಹಳ್ಳಿ ಹಳ್ಳಿಯಲ್ಲೂ ಸೇವೆ ಸಲ್ಲಿಸುತ್ತಾ ಸಾರ್ಥಕ ಜೀವನವನ್ನು ನಡೆಸುತ್ತಿದ್ದಾರೆ.
