STORYMIRROR

JAISHREE HALLUR

Classics Inspirational Others

4  

JAISHREE HALLUR

Classics Inspirational Others

ಶಿಸ್ತು

ಶಿಸ್ತು

3 mins
396


ಮಿತ್ರರೆ, 


ಈಗಷ್ಟೇ ಶಿಸ್ತಿನ ಬಗ್ಗೆ ಒಂದು ಸುಂದರ ಲೇಖನ ಓದಿದೆ. ನನ್ನ ಆಪ್ತ ಮಿತ್ರೆಯಾದ Smt Daya Subbaiah ಅವರು ಬರೆದ ಲೇಖನ ಇದು..

ಶಿಸ್ತಿನ ಬಗ್ಗೆ ನನ್ನ ಅನುಭವ ಹೇಳಬೇಕಾದರೆ ನಾನು ಮೊದಲು ಶಿಸ್ತಿನಿಂದಿರಬೇಕಲ್ಲವೇ?

ಇತರರಿಗೆ ಹೇಳುವ ಮೊದಲು ನಾನು ಸರಿಯಿರಬೇಕು ಎಂಬುದು ನನ್ನ ತರ್ಕ.

ಹಾಗಂತ , ನನ್ನ ಮಕ್ಕಳಲ್ಲಿ ಶಿಸ್ತಿಲ್ಲ ಅಂತಲ್ಲಾ. ಅವರನ್ನು ಮುಕ್ತವಾಗಿ ಬೆಳೆಸಿಬಿಟ್ಟಿದ್ದೀನಿ. ಯಾವುದೇ ನಿರ್ಬಂಧವಿಲ್ಲದೆ, ಆಡಂಬರವಿಲ್ಲದೆ, ಕಷ್ಟಕೋಟಲೆಗಳಿಲ್ಲದೆ,

ಹೆಚ್ಚು ವೆಚ್ಚವಿಲ್ಲದೆ ಸರಳಜೀವನದ ದಾರಿ ಕಲಿಸಿದೆ. ಅದನ್ನೆ ನಾವೂ ಅನುಸರಿಸಿದೆವು. ಮುಂದಿನ ಬದುಕೂ ಹೀಗೇ ನಡೆದುಬಿಡುತ್ತದೆ ಎಂಬ ಅನಿಸಿಕೆ..

ಆದರೆ...ಆದರೆ....

ನನ್ನ ಸಹೋದ್ಯೋಗಿಗಳಾದವರ ಕೆಲವು ಸೈನಿಕರ ಅನುಭವದಲ್ಲಿ ಶಿಸ್ತಿಗೆ ಬೇರೇನೆ ಅರ್ಥವಿದೆ.ಅವರ ದಿನನಿತ್ಯದ ಕ್ಷಣಗಳು ಯಾವತ್ತೂ ಅತಿಯಾದ ಶಿಸ್ತನ್ನು ಬಯಸುತ್ತದೆ. ಕೂತರೂ, ನಿಂತರೂ, ಉಂಡರೂ, ಮಲಗಿದರೂ , ನಿದ್ರಿಸಿದರೂ ಸಹ ಶಿಸ್ತು ಬಹಳ ಮುಖ್ಯ.

ಇಂದು ಒಬ್ಬ ಸೇನೆಯ ಅಧಿಕಾರಿಯೊಬ್ಬರೊಂದಿಗೆ ಮಾತಿನ ಚಕಮಿಕಿ ನಡೆಯುವಾಗ , ಅವರು ತಮ್ಮ ಕಾರ್ಯಾಲಯದ ಘಟನೆಗಳನ್ನು ವಿವರಿಸಿದರು..

ಒಂದೊಮ್ಮೆ ಅವರ ಮೇಲಾಧಿಕಾರಿಗಳು ಟ್ರೇನಿಂಗ್ ಸಮಯದಲ್ಲಿ, ಯಾರೇ ಶಿಸ್ತನ್ನು ಪಾಲಿಸದಿದ್ದಲ್ಲಿ ಕಠಿನ ಶಿಕ್ಷೆಗೆ ಗುರಿಪಡಿಸುತ್ತಾರೆ. ಬಹಳಷ್ಟು ಸಲ, ಬೆಣಚು ಕಲ್ಲುಗಳ ಮೇಲೆ ಉರುಳುಸೇವೆ ಮಾಡಬೇಕಾಗುತ್ತದೆ. ಕಲ್ಲುಗಳ ಮೇಲೆ ಮಂಡಿಯೂರಿ ನಡೆಯಬೇಕಾಗುತ್ತದೆ. ಕೆಲವೊಮ್ಮೆ ಬರೀ ಮೈಯಲ್ಲಿ ಬಿಸಿಕಲ್ಲುಬಂಡೆಗಳ ಮೇಲೆ ಉರುಳುಸೇವೆಗೈಯ್ಯಬೇಕು. ಇನ್ನೂ ಕೆಲವೊಮ್ಮೆ ದಿನಗಟ್ಟಲೆ ಊಟ , ನೀರು ಇಲ್ಲದೆ ಉಪವಾಸಗೈದ ಅನುಭವ. ಹೀಗೆ ಹಲವಾರು ವೈವಿಧ್ಯಮಯ , ಯಾತನಾಮಯ, ಶಿಕ್ಷೆಗೆ ಗುರಿಪಟ್ಟಿರುತ್ತಾರೆ ನಮ್ಮ ದೇಶಪ್ರೇಮಿಗಳಾದ ಶಿಸ್ತಿನ ಸೈನಿಕರು. ಅವರೆಲ್ಲರಿಗೂ ನನ್ನದೊಂದು ಸಲಾಂ.

ಒಮ್ಮೆ, ಹೀಗೇ ಒಂದು ಪ್ರಸಂಗ ಬಂತು. ಒಬ್ಬರು ಕರ್ನಲ್ ನನ್ನ ಅಧಿಕಾರಿಯಾಗಿದ್ದರು. ಅವರೂ ಕನ್ನಡದವರೇ ಆಗಿದ್ದು ನನಗೂ ಹೆಮ್ಮೆ ಅನಿಸಿತ್ತು. ದಿನದ ಕೆಲಸದ ಒತ್ತಡವಿದ್ದರೂ ಆತ ನಮ್ಮೆಲ್ಲರ ನಡುವೆ ಬಂದು ಕುಳಿತು, ತಾನು ಅಧಿಕಾರಿ ಎಂಬುದನ್ನು ಮರೆತು, ಬಾಯಿತುಂಬಾ ಹರಟೆ ಹೋಡೀತ್ತಿದ್ದರು. ತಮ್ಮ ಸೇನೆಯ ಅನುಭವ ಹಂಚಿಕೊಳ್ಳುತ್ತಿದ್ದರು.

ಒಂದೊಮ್ಮೆ, ಅವರು ಲೇಹ್..ಲಡಾಕ್ನಲ್ಲಿ ಡ್ಯೂಟೀಲಿದ್ದಾಗ, ಬೆಟ್ಟದ ಮೇಲೆ ಅವರ ವಾಸಸ್ಥಳ. ಇಂತಹ ಅನೇಕ ಬೆಟ್ಟದ ತುದಿಗಳಲ್ಲಿ ಸಣ್ಣ ಪುಟ್ಟ ಸೇನಾ ತುಕಡಿಗಳು ಇರುತ್ತವೆ. ಹಾಗಾಗಿ, ಒಂದು ತುಕುಡಿಯಿಂದ ಇನ್ನೊಂದು ತುಕುಡಿಗೆ ಸುದ್ದಿ ರವಾನಿಸಲು ಮೂಲತಃ ಮನುಷ್ಯರೇ ಕಾಲ್ನಡಿಯಲ್ಲೋ, ಗಾಡಿಗಳಲ್ಲೋ ಹೋಗಬೇಕಾಗುತ್ತದೆ. ಅಂದರೆ ಬೆಟ್ಟ ಹತ್ತಿ, ಇಳಿಯುವ ಕಠಿಣವಾದ ಕೆಲಸ ಈ ಸುದ್ದಿವಾಹಕನದು. ಮತ್ತು ಅಷ್ಟೇ ಜಾಗರೂಕತೆಯಿಂದ ಶತ್ರುಗಳ ಕೈಗೆ ಸಿಗದೇ ಹೋಗಬೇಕಾಗುತ್ತದೆ. ಇಂತಹ ಒಂದು ಸಂದರ್ಭದಲ್ಲಿ, ಒಂದು ಮುಖ್ಯವಾದ ಪತ್ರವನ್ನು ಮತ್ತೊಂದು ಸೇನಾ ತುಕುಡಿಗೆ ತಲುಪಿಸುವಂತೆ ತನ್ನ ಅಧಿಕಾರಿಯಿಂದ ಬೆಳಗಿನ ಹೊತ್ತಿನಲ್ಲಿ ಆದೇಶ ಬಂತು. ಆಗಷ್ಟೇ ಸೇನೆ ಸೇರಿದ ಹುಮ್ಮಸ್ಸಿನಲ್ಲಿ, ಈ ಆದೇಶವನ್ನು ಪಾಲಿಸುವುದನ್ನು ಮರೆತು, ತಡವಾಗಿ ನೆನಪಿಸಿಕೊಂಡಾಗ ಮಧ್ಯಾನವಾಗಿತ್ತು. ಇದರ ಸುಳಿವು ದೊರತ ಸೇನಾಧಿಕಾರಿಗೆ ಕೆಂಡಾಮಂಡಲ ಸಿಟ್ಟು ಬಂತು. ಆ ಪತ್ರವನ್ನು ಇಂದೇ ರಾತ್ರಿಯ ವೇಳೆಗೆ ತಲುಪಿಸಬೇಕೆಂದು ಕರಾರುವಕ್ಕಾಗಿ ಹೇಳಿದಾಗ, ಇವರಿಗೆ ಕಕ್ಕಾಬಿಕ್ಕಿಯಾಯಿತು. ಆಗಲೇ ಸಂಜೆಯಾವರಿಸಿದೆ. ಈ ಬೆಟ್ಟ ಇಳಿದು ಆ ಬೆಟ್ಟ ಹತ್ತುವುದು ಕಷ್ಟ ಸಾಧ್ಯ. ಸುತ್ತಲೂ ಕೊರೆಯುವ ಹಿಮ. ಸೂರ್ಯ ಮುಳುಗುವ ಹೊತ್ತು. ಕಗ್ಗತ್ತಲೂ ಸಹ. ಹೇಗೆ ಕಾಲ್ನಡಿಗೆಯಲ್ಲಿ ಹೋಗುವುದೆಂದು ಸಮಸ್ಯೆ ಕಾಡಿತು. ಗಾಡಿಯಾವುದೂ ಕೊಡಕೂಡದೆಂದು ಅಧಿಕಾರಿಗಳ ಚೆತಾವಣಿ ಬೇರೆ..ವಿಧಿಯಿಲ್ಲದೆ, ಉಡುಪುಗಳ ಬಂದೋಬಸ್ತು ಮಾಡಿಕೊಂಡು, ಪತ್ರವನ್ನು ಜೋಪಾನವಾಗಿಟ್ಟುಕೊಂಡು, ಕೈಯಲ್ಲಿ ಸಹಾಯಕ್ಕಿರಲಿಯೆಂದು ಉದ್ದನೆಯ ಕೋಲಿಟ್ಟುಕೊಂಡು ಯಾತ್ರೆ ಶುರುಮಾಡಿದ್ದರು..

ಹೋಗ್ತಾ ಹೋಗ್ತಾ ಕತ್ತಲಾಯಿತು. ದಾರಿ ಕಾಣದು. ಹಿಮದ ಆಳ ತಿಳಿಯದು. ಹಳ್ಳ ಎಲ್ಲಿದೆ ಎಂದೂ ಕಾಣದು. ಕೋಲಿನಿಂದ ಚುಚ್ಚಿ ಚುಚ್ಚಿ , ಮುಂದೆ ನಡೆಯುವ ಜಾಣತನವಿತ್ತು. ಬೆಟ್ಟದ ತಳ ತಲುಪುವಷ್ಟರಲ್ಲಿ ಮಧ್ಯರಾತ್ರಿ. ಮುಂದೆ ಸಾಗಿ ಆ ಮತ್ತೊಂದು ಬೆಟ್ಟದ ಕಡೆ ತಿರುಗಿದಾಗ, ಕೈಯಲ್ಲಿದ್ದ ಕೋಲು ಜಾರಿ ಎಲ್ಲೋ ಕಳೆದುಹೋಯಿತು. ಮತ್ತೇನು ಮಾಡುವುದು? ಮಂಡಿಯೂರಿ, ಕೈಯಲ್ಲೇ ತಡಕಾಡುತ್ತಾ, ಬೆಟ್ಟದ ಬುಡಕ್ಕೆ ಬಂದಾಗ, ಏನೋ ಸದ್ದಾದ ಹಾಗೆ ಕಂಡಿತು.ಯಾರೋ ಹಿಂದಿನಿಂದ ಬಂದು ಕುತ್ತಿಗೆಯ ಬಳಿ ಬಂದೂಕು ಇಟ್ಟ ಸ್ಪರ್ಶ. ಕೈಕಾಲು ತಣ್ಣಗಾಯಿತು. 

" ಏಯ್ , ಯಾರು ನೀನು? ಇಲ್ಲೇನು ಮಾಡ್ತಿದ್ದೀಯಾ? "ಅಚ್ಚ ಭಾರತೀಯ ಭಾಷೆ ಕೇಳಿ ಸ್ವಲ್ಪ ಉಸಿರು ಬಂತು. ತನ್ನ ವಿವರ, ಉದ್ದೇಶ ಎರಡನ್ನೂ ಹೇಳಿದಾಗ, ಹೇಗೆ ನಂಬುವುದು? ನಿನ್ನ ಐಡೀ ತೋರಿಸು ಎಂದಾಗ, ಹಿಂಬದಿಯ ಬ್ಯಾಗೆಲ್ಲಾ ತಡಕಾಡಿ, ಜೇಬಿನ ಕಿಸೆಯಲ್ಲೂ ತಡಕಾಡಿದರೂ ತನ್ನ ಐಡೀ ಕಾರ್ಡ್ ಸಿಗಲೇ ಇಲ್ಲ. ಹೊರಡುವ ತರಾತುರಿಯಲ್ಲಿ, ತನ್ನ ಐಡಿ ಮರೆತು ಬಂದದ್ದು ದೊಡ್ಡ ಅನಾಹುತವೇ ಆಗಿತ್ತು. ಇದೂ ಸಹ ಅಶಿಸ್ತಿನ ಒಂದು ಉದಾಹರಣೆ. ಐಡಿಯಿಲ್ಲದೇ ಆ ಮತ್ತೊಂದು ತುಕುಡಿಗೆ ಹೋಗಲು ಬಿಡುವುದಿಲ್ಲ. ತನ್ನನ್ನು ಸೆರೆಯಾಳಾಗಿಸಿ ಹೆಡೆಮುರಿಕಟ್ಟಿ ಎಳೆದೊಯ್ದರು ಧಾಂಡಿಗರು..ನಂತರ, ಒಂದು ಎಳೆಯುವ ಯಂತ್ರದ ಶಬ್ದ, ಹಗ್ಗದ ರಾಟೆಯಂತೆ. ಅವರು ಈತನನ್ನು ಆ ಬುಟ್ಟಿಯಲ್ಲಿ ಒಗೆದರು. ಅದು ರೊಯ್ಯನೆ ಬೆಟ್ಟದ ಮೇಲಕ್ಕೇರಿತು. ತನಗೇನಾಗುತ್ತಿದೆ ಎಂಬ ಅರಿವೇ ಇಲ್ಲದಷ್ಟು ಬಾಯಿಬಂದ್ ಮಾಡಲಾಗಿತ್ತು. ಉಸಿರಾಡಲಷ್ಟೇ ಸ್ವಲ್ಪ ಅವಕಾಶವಿತ್ತು. ಬೆನ್ನಿನಶಚೀಲದಲ್ಲಿದ್ದ ಕಾಗದಪತ್ರಗಳ ತಪಾಸಣೆ ನಂತರ, ನಾನು ಶತ್ರಪಡೆಯವನಲ್ಲ, ಭಾರತದ ಸೇನೆಯವನೆಂದು ಖಾತ್ರಿಯಾದ ಮೇಲೆ, ಆ ಪತ್ರವನ್ನು ಇಸಿದುಕೊಂಡು ಅದೇ ಬಂದ ದಾರಿಯಲ್ಲಿ (ಬುಟ್ಟಿಯಲ್ಲ), ಕೈಕಾಲುಕಟ್ಟಿ, ಬೆಟ್ಟದ ಮೇಲಿಂದ ಉರುಳಿಸಿಬಿಟ್ಟಿದ್ದರು. ಹಿಮ ಹೆಪ್ಪುಗಟ್ಟಿ ಜಾರುಬಂಡೆಯಂತಾದಾಗ, ಮೇಲಿಂದ ಜಾರುವುದು ಸುಲಭ. ಹತ್ತುವುದು ಮಾತ್ರ ಕಷ್ಟ. ಎಲ್ಲಿ, ಹೇಗೆ ಜಾರಿದನೋ, ಅಂತೂ ಮರುದಿನ ಬೆಳಗಾಗುವಷ್ಟರಲ್ಲಿ ಬೆಟ್ಟದ ತಳಕ್ಕೆ ಬಂದು ಬದುಕಿದ್ದ ಕತೆಯನ್ನು ರೋಮಾಂಚನವಾಗುವ ರೀತಿ ವಿವರಿಸುತ್ತಿದ್ದರು. ಆಗ ಶಿಸ್ತು ಎಂದರೇನು? ಅದನ್ನು ಮೀರಿದರೆ ಎಂತಹ ಶಿಕ್ಷೆ ಕಾದಿರುತ್ತದೆ ಎಂಬುದನ್ನು ಅವರು ಅನುಭವಿಸಿ ಹೇಳಿದ ಕತೆಯಿದು. ನಾನಂತೂ ಕಿವಿಬಾಯಿಬಿಟ್ಟುಕೊಂಡು ಕೇಳುತ್ತಿದ್ದೆ. ಇಂತಹ ಮಹಾನ್ ದೇಶಸೇವಕರು ನಮಗಾಗಿ ಎಷ್ಟೆಲ್ಲಾ ನೋವು ಅನುಭವಿಸುತ್ತಾರೆ. ಅವರ ಶಿಸ್ತಿನ ಬದುಕು ನಮಗೆಲ್ಲ ಮಾದರಿಯಾಗಲಿ.

ಅವರಿಗೆ ನಮ್ಮಿಂದ ಒಂದು ಒಳ್ಳೆಯ ಆಶಯ, ಪ್ರಾರ್ಥನೆಯಿರಲಿ. 

ಅದೇ ಶಿಸ್ತನ್ನು ಸಾಧ್ಯವಾದಷ್ಟರ ಮಟ್ಟಿಗೆ ಕಾಪಾಡಿಕೊಳ್ಳೋಣವೆಂದು ನನ್ನ ಕೋರಿಕೆ. 

ಧನ್ಯವಾದಗಳು...



Rate this content
Log in

Similar kannada story from Classics