STORYMIRROR

Revati Patil

Classics Inspirational Children

4  

Revati Patil

Classics Inspirational Children

ರಸೂಲನ ಮಗಳು ವಿಜಯಾ

ರಸೂಲನ ಮಗಳು ವಿಜಯಾ

4 mins
224

ವಿಜಯಾ ಎಲ್ಲ ಎಂಟು ಚಿನ್ನದ ಪದಕ ಹಿಡಿದು, ಮುಂದಿದ್ದ ಮಾಧ್ಯಮದವರ ಕ್ಯಾಮೆರಾ , ಪ್ರಶ್ನೆಗಳಿಗೆ ಬೇಡವೆನ್ನುವಂತೆ ಸಂಜ್ಞೆ ಮಾಡಿ , ಲಗುಬಗೆಯಿಂದ ಸಿಕ್ಕ ಆಟೋವೊಂದಕ್ಕೆ ಹತ್ತಿ ಕೂತಳು . ಮಾಧ್ಯಮದವರು ಅವಳ ಸಂದರ್ಶನಕ್ಕಾಗಿ , ಅವಳು ಹತ್ತಿದ ಆಟೋವನ್ನು ಹಿಂಬಾಲಿಸುತ್ತ ಹೊರಟರು .


ಆಟೊ ಹೋಗಿ ನಿಂತಿದ್ದು ಜಯನಗರದ ನಾಲ್ಕನೇ ಬ್ಲಾಕಲ್ಲಿ . ಕೈಯ್ಯಲ್ಲಿ ಹಿಡಿದ ಎಂಟೂ ಚಿನ್ನದ ಪದಕಗಳ ಜೊತೆ ವಿಜಯಾ ಕೆಲವು ನಿಮಿಷ ಬಜಾರಿನಲ್ಲಿ ನಡೆಯುತ್ತ ಹೋಗಿ ಒಂದು ಚಪ್ಪಲಿ ಅಂಗಡಿ ಮುಂದೆ ನಿಂತಳು . ಅವಳ ಹಿಂದೆ ಮಾಧ್ಯಮದವರೂ ಬಂದಾಗಿತ್ತು .


ವಿಜಯಾ ನೇರವಾಗಿ ಹೋದವಳೇ ಅಂಗಡಿಯಾತನ ಕಾಲಿಗೆರಗಿ ಎಲ್ಲ ಚಿನ್ನದ ಪದಕಗಳನ್ನು ಅವನ ಕಾಲಿಗೆ ಸಮರ್ಪಿಸಿ , ನಮಸ್ಕರಿಸಿದಳು . ಅವನು ಅವಳನ್ನು ಮೇಲೆತ್ತಿ ತಲೆ ಮೇಲೆ ಕೈಯಿಟ್ಟು ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕೂರಿಸಿದನು . ವಿಜಯಾಳ ಕಣ್ಣೀರು , ಆ ಚಿನ್ನದ ಪದಕಗಳೇ ಆಕೆಯ ಸಾಧನೆಯನ್ನು ಹೇಳಿದ್ದವು .

ಅಂತಹ ಸಾಧನೆಗೈದವಳು ಇಂತಹ ಚಪ್ಪಲಿಯಂಗಡಿಯವನ ಕಾಲಿಗೆರಗಿದ್ದನ್ನು ಅಚ್ಚರಿ ಎನ್ನುವಂತೆ ನೋಡುತ್ತಿದ್ದರು . ವಿಜಯಾಳ ಒಂದೇ ಒಂದು ಪ್ರತಿಕ್ರಿಯೆಗೆ ಇಲ್ಲಿವರೆಗೂ ಬಂದಿದ್ದ ಅವರು ಇನ್ನಾದರೂ ಸಂದರ್ಶನ ಸಿಗಬಹುದೇ ಎನ್ನುವಂತೆ ನೋಡುತ್ತಿದ್ದರು . ರಸೂಲನಿಗೆ ಇದೇನು ಹೊಸತಲ್ಲ . ವಿಜಯಾಳ ಪ್ರತಿ ಸಾಧನೆ ಮಾಡಿದಾಗಲೂ ಅವಳ ಹಿಂದೆ ಮಾಧ್ಯಮದವರ ದಂಡು ಬರುತ್ತಿದ್ದುದು ರಸೂಲನಿಗೆ ಅಭ್ಯಾಸವಾಗಿತ್ತು . ರಸೂಲ್ ವಿಜಯಾಳಿಗೆ ಕುಡಿಯಲು ನೀರು ಕೊಟ್ಟು , ಚಿನ್ನದ ಪದಕಗಳನ್ನು ದೇವರ ಫೋಟೋ ಬಳಿ ಇಟ್ಟು ಮಾಧ್ಯಮದವರ ಮುಂದೆ ಬಂದು ನಿಂತ .


'' ಕೇಳಿ ಏನದು ನಿಮ್ಮ ಪ್ರಶ್ನೆ ?"

(ಮಾಧ್ಯಮದವರ ಮೌನ ಅರಿತ ರಸೂಲ್, ಒಂದು ಸಲ ಸಣ್ಣದಾಗಿ ನಕ್ಕು , ಇಳಿಯುತ್ತಿದ್ದ ಕನ್ನಡಕವನ್ನೊಮ್ಮೆ ಸರಿ ಮಾಡಿ ಮಾತಿಗಿಳಿದ )

"ಹೌದು . ಇವಳು ವಿಜಯಾ . ಎಂಟು ಚಿನ್ನದ ಪದಕಗಳನ್ನು ಗೆದ್ದ ಪ್ರತಿಭಾವಂತೆ . ನನ್ನ ಮಗಳು..


(ರಸೂಲ್ ಇನ್ನೂ ಹೇಳುತ್ತಿದ್ದ , ಅಷ್ಟರಲ್ಲಿ ಮಾದ್ಯಮದವರು "ರಸೂಲ್ ಸರ್ " ಎಂದುಬಿಟ್ಟರು)


ಮಾಧ್ಯಮದವರ ಮಾತನ್ನು ಅರ್ಧದಲ್ಲಿಯೇ ತಡೆದ ರಸೂಲ್ ಮಾತನಾಡತೊಡಗಿದ .


ರಸೂಲ್ : ನಿಮ್ಮ ಪ್ರಶ್ನೆ ತಿಳಿದಿದೆ . ನಾನೇ ಎಲ್ಲವನ್ನೂ ವಿವರಿಸಿ ಹೇಳುತ್ತೇನೆ . ಆದರೆ ನಿಮ್ಮಲ್ಲೊಂದು ವಿನಂತಿ . ನಾನು ಹೇಳುವ ಯಾವ ಮಾತಿಗೂ ನೀವು ಇನ್ನಷ್ಟು ಬಣ್ಣ ಹಚ್ಚಿ ಪ್ರಸಾರ ಮಾಡುವ ಕೆಲಸ ಮಾಡಬೇಡಿ . ಇರುವಷ್ಟರಲ್ಲಿಯೇ ನಾನು , ನನ್ನ ಮಗಳು ಸುಖವಾಗಿದ್ದೇವೆ . ಇದಕ್ಕೆ ಧಕ್ಕೆ ಬರುವುದು ನನಗಾಗಲಿ , ವಿಜಯಾಳಿಗಾಗಲಿ ಇಷ್ಟವಿಲ್ಲ .


ಮಾಧ್ಯಮದವರು ರಸೂಲನಿಗೆ ಒಪ್ಪಿಗೆ ಸೂಚಿಸುತ್ತ , ಮಾತಾಡಲು ಹೇಳುತ್ತ ಪೆನ್ನು ಪೇಪರ್ ಸಿದ್ಧವಾಗಿಟ್ಟುಕೊಂಡರು.


ರಸೂಲ್ : ಇವಳು ನನ್ನ ಮಗಳು ವಿಜಯಾ . ಅಲ್ಲಲ್ಲ , ಮಗಳಲ್ಲ ಅಮ್ಮನೆಂದರೇ ಸರಿಯಾದೀತು . ಹೌದೌದು

ಅಮ್ಮ ಅಂತಲೇ ಬರೆದುಕೊಳ್ಳಿ .

(ರಸೂಲನ ಕಂಠ ಗದ್ಗದಿತವಾಗಿತ್ತು . ಒಂದು ಕ್ಷಣ ಸುಮ್ಮನಾದ ಆತ , ಮತ್ತೆ ಕನ್ನಡಕ ಏರಿಸಿಕೊಂಡು ಹೇಳಲಣಿಯಾದ )


"ನಾನಾಗ ಚಪ್ಪಲಿ ಹೊಲೆಯುತ್ತಿದ್ದೆ . ನನ್ನ ಹೆಂಡತಿ ಬಾಳ ಪಯಣದಲ್ಲಿ ಅರ್ಧಕ್ಕೆ ನನಗೆ ವಿದಾಯ ಹೇಳಿ ನನ್ನನ್ನು ಒಬ್ಬಂಟಿಯಾಗಿ ಮಾಡಿ ಹೋದಳು . ಅಲ್ಲಾನಿಗೂ ಕರುಣೆ ಬರಲಿಲ್ಲ . ಹೋದವಳು ಒಬ್ಬಳೇ ಹೋಗಲಿಲ್ಲ . ಅವಳು ಅಪಘಾತದಲ್ಲಿ ಮೃತ ಪಟ್ಟಾಗ ಏಳು ತಿಂಗಳ ಗರ್ಭಿಣಿಯಾಗಿದ್ದಳು . ಪ್ರಪಂಚ ನೋಡುವ ಮೊದಲೇ ನನ್ನ ಕೂಸನ್ನು , ಹೆಂಡತಿಯನ್ನು ಕಳೆದುಕೊಂಡು ಅನಾಥನಾಗಿಬಿಟ್ಟೆ . ನನ್ನ ಚಪ್ಪಲಿ ಹೊಲೆಯುವ ಕಾಯಕವೊಂದೇ ನನ್ನ ಸಂಗಾತಿ ಆಗಿತ್ತು .

ನಾನು ಕೂರುವ ಜಾಗದ ಪಕ್ಕದಲ್ಲಿ ಮತ್ತೊಂದು ದೊಡ್ಡ ಚಪ್ಪಲಿ ಅಂಗಡಿ ಇತ್ತು . ಅದು ರತ್ನಮ್ಮನದು . ರತ್ನಮ್ಮ ಸಹ ಒಳ್ಳೆಯ ಹೆಣ್ಣು ಮಗಳು . ಗಂಡ ಹೆಂಡತಿ ಸಂತೋಷವಾಗಿಯೇ ಇದ್ದರು . ತಾಯಿಯಿಂದ ಉಡುಗೊರೆಯಾಗಿ ಸಿಕ್ಕ ಈ ಅಂಗಡಿಯನ್ನು ರತ್ನಮ್ಮನೇ ನೋಡಿಕೊಳ್ಳುತ್ತಿದ್ದರು . ನನ್ನನ್ನು ತಮ್ಮನಂತೆ ಕಾಣುತ್ತಿದ್ದರು ರತ್ನಮ್ಮ .

ರತ್ನಮ್ಮ ಗರ್ಭಿಣಿಯಾಗಿದ್ದಾಗ ಅವರ ಗಂಡ, ಗಂಡು ಮಗುವೇ ಬೇಕೆನ್ನುವಂತೆ ದೇವರಿಗೆಲ್ಲಾ ಹರಕೆ ಹೊತ್ತಿದ್ದರು . ಅಂತೂ ರತ್ನಮ್ಮನಿಗೆ ಹೆರಿಗೆ ಆಯಿತು. ಆಗ ಹುಟ್ಟಿದವಳೇ ವಿಜಯಾ ..


(ಮಾಧ್ಯಮದವರು ವಿಜಯಾ ರಸೂಲನ ಮಗಳಲ್ಲ ಎನ್ನುತ್ತಲೇ ಪ್ರಶ್ನೆ ಕೇಳಲು ಸಜ್ಜಾಗುತ್ತಿದ್ದಂತೆ , ರಸೂಲ್ ಅವರನ್ನು ಅರ್ಧಕ್ಕೆ ನಿಲ್ಲಿಸಿ , ಮತ್ತೆ ತನ್ನ ಮಾತು ಮುಂದುವರೆಸಿದನು )


ರಸೂಲ್ : ಹೆಣ್ಣು ಎಂಬ ಕಾರಣಕ್ಕೆ ಗಂಡನಿಂದಲೇ ಅಸಡ್ಡೆಗೊಳಗಾದ ಮಗುವನ್ನು ರತ್ನಮ್ಮ ಮಾತ್ರ ಪ್ರೀತಿಯಿಂದಲೇ ಪೋಷಿಸತೊಡಗಿದರು . ಎಷ್ಟಾದರೂ ಹೆತ್ತ ಕರಳು ಅಲ್ವೇ ? ಅಪ್ಪನೇ ಅವಳನ್ನು ಮೆಚ್ಚುವಂತ ಸಾಧನೆಗೈಯಲಿ ಎಂಬ ಆಸೆಯೊಂದಿಗೆ ಮಗುವಿಗೆ 'ವಿಜಯಾ ' ಎಂದು ನಾಮಕರಣ ಮಾಡಿದರು . ಎರಡು ವರ್ಷ ಕಳೆಯುವ ಹೊತ್ತಿಗೆ ಮಗುವಿಗೆ ಕಿವಿ ಕೇಳಿಸದ , ಬಾಯಿ ಬಾರದ ನ್ಯೂನತೆ ಗೊತ್ತಾಯಿತು . 

ಹೌದು! ವಿಜಯಾ ಮೂಗಿ, ಕಿವುಡಿ !

(ಒಂದು ಕ್ಷಣ ಗಟ್ಟಿ ಮೌನ , ಪತ್ರಕರ್ತರೆಲ್ಲ ಬಿಟ್ಟ ಕಣ್ಣು ಬಿಟ್ಟೇ ಇದ್ದರು )

"ಹೌದ್ರಪ್ಪ , ನನ್ನ ವಿಜಯಾ ಮೂಗಿ , ಕಿವುಡಿ . ಈ ವಿಷಯ ಗೊತ್ತಾಗಿ ರತ್ನಮ್ಮನ ಗಂಡ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಲು ಪೀಡಿಸಿತೊಡಗಿದ . ಮಗು ಮನೆಯಲ್ಲೇ ಇದ್ದರೆ , ತನ್ನ ಗಂಡ ಮಗುವಿಗೇನಾದರೂ ಕೆಡುಕು ಮಾಡಬಹುದೆಂದು ರತ್ನಮ್ಮ ತಮ್ಮ ಜೊತೆ ಅಂಗಡಿಗೆ ಮಗುವನ್ನು ಕರೆದುಕೊಂಡು ಬರುತ್ತಿದ್ದರು . ಮಗುವಿನ ಸ್ಪರ್ಶವೇ ತಿಳಿಯದ ನನಗೆ ಅವಳೆಂದರೆ ಪ್ರೀತಿ . ರತ್ನಮ್ಮನ ಅಂಗಡಿಗೆ ಗಿರಾಕಿ ಬಂದರೆ, ರತ್ನಮ್ಮ ಸ್ವಲ್ಪ ಸಮಯ ಮಗುವನ್ನು ಆಡಿಸುವಂತೆ ನನಗೆ ಹೇಳುತ್ತಿದ್ದರು . ಆಗಾಗ ಗಂಡ ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಲು ಹೇಳಿದ್ದನ್ನು ನೆನೆದು ಅಳುತ್ತಿದ್ದರು . ದಿನವೂ ಅವಳ ಕಣ್ಣೀರು ನೋಡುತ್ತಿದ್ದ ನಾನು ಮಗುವನ್ನು ನನಗೆ ದತ್ತು ಕೊಡುವಂತೆ ಕೇಳಿಯೇಬಿಟ್ಟೆ . ಮಗುವಿಗೆ ಪ್ರಾಣಾಪಾಯ ಇದ್ದುದರಿಂದ ರತ್ನಮ್ಮನೂ ಒಪ್ಪಿದರು . ಮಗಳು ಮೂಗಿ , ಕಿವುಡಿ ಅಂತ ಗೊತ್ತಿದ್ದು ನಾನು ಮಗುವನ್ನು ಕೇಳಿದ್ದು ಅವರಿಗೆ ನನ್ನಲ್ಲಿ ನಂಬಿಕೆ ಹುಟ್ಟಿಸಿತು . ಈ ಚಪ್ಪಲಿ ಅಂಗಡಿ ರತ್ನಮ್ಮನದೇ. ಈ ಅಂಗಡಿಯನ್ನು ವಿಜಯಾಳ ಹೆಸರಿಗೆ ಬರೆದು ಹೋದರು . ಆದರೆ ಗಂಡ ಹೆಂಡತಿಯ ಕಿತ್ತಾಟ ನಿಲ್ಲದೆ ಹೋದಾಗ , ಅದೊಂದು ದಿನ ರತ್ನಮ್ಮ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯಿತು .


ಆಕೆಯ ಗಂಡ ಸ್ವಲ್ಪ ದಿನಗಳಲ್ಲೇ ಮತ್ತೊಂದು ಮದುವೆಯಾದ . ಅನುಕೂಲಸ್ಥರಾದ ಕಾರಣ, ಆ ಮನುಷ್ಯ ಇವತ್ತಿಗೂ ಅಂಗಡಿ ಕಡೆ ಬರಲಿಲ್ಲ . ಕೆಲವೇ ದಿನಗಳಲ್ಲಿ ವಿಜಯಾ ನನ್ನನ್ನು ಹಚ್ಚಿಕೊಂಡಳು . ನನ್ನ ಮಗಳಾಗಿ ಬಿಟ್ಟಳು . ಅವಳೀಗ ವಿಜಯಾ ರಸೂಲ್ .

(ರಸೂಲ್ ಕಣ್ಣೀರು ಒರೆಸಿಕೊಂಡು ಮತ್ತೆ ಮಾತಾಡಲು ಶುರು ಮಾಡಿದ )

ಅವಳನ್ನು ಸರಕಾರಿ ಶಾಲೆಯಲ್ಲೇ ಓದಿಸಿದೆ. ಅವಳು ಮೂಗಿ , ಕಿವುಡಿಯಿದ್ದರೂ ಓದಿನಲ್ಲಿ ಎಲ್ಲರಿಗೂ ಮುಂದೆ ಇದ್ದಳು. ಅವಳನ್ನು ನೋಡಿ ಯಾರಾದರೂ ನಕ್ಕರೂ, ಅದನ್ನು ಮನಸ್ಸಿಗೆ ತಟ್ಟದಂತೆ ನೋಡಿಕೊಳ್ಳುವಷ್ಟು ಪ್ರಬುದ್ಧೆಯಾಗಿದ್ದಳು ನನ್ನ ವಿಜಯಾ .


ಶಾಲಾ , ಕಾಲೇಜುಗಳಲ್ಲಿ ಸಿಗುತ್ತಿದ್ದ ವಿದ್ಯಾರ್ಥಿವೇತನದ ಸಹಾಯದಿಂದ ಉನ್ನತ ವ್ಯಾಸಂಗಕ್ಕೂ ಆಯ್ಕೆ ಆದಳು .ಊರಿನ ದೊಡ್ಡ ಮನುಷ್ಯರು ಇವಳ ಸಾಧನೆ ನೋಡಿ ಇನ್ನಷ್ಟು ಧನ ಸಹಾಯ ಮಾಡಿ, ಸ್ನಾತಕೋತ್ತರ ಪದವಿ ಓದಲು ಸಹಾಯ ಮಾಡಿದರು . ಅವಳ ಸತತ ಪರಿಶ್ರಮ , ಗೆಲ್ಲಲೇಬೇಕೆನ್ನುವ ಛಲ , ಅಪ್ಪನ ಅಸಡ್ಡೆ , ಅಮ್ಮನ ಅಸಹಾಯಕತೆ ಎಲ್ಲವೂ ಇಂದು ಈ ಚಿನ್ನದ ಪದಕಗಳಾಗಿ ಬಂದಿವೆ . ಎಂಟೂ ಚಿನ್ನದ ಪದಕಗಳ ಹಿಂದೆ ಒಂದೊಂದು ಕಥೆಯಿವೆ.


ಈಗ ಅವಳಿಗೆ ವಿದೇಶದಿಂದ ಹೆಚ್ಚಿನ ಸಂಶೋಧನೆಗೆ ಅವಕಾಶ ಸಿಕ್ಕಿದೆ . ಸರಕಾರವೇ ಆ ಖರ್ಚು ಭರಿಸುತ್ತದೆ . ಇನ್ನೇನು ಬೇಕು ನಮಗೆ . ಅವಳ ತಂದೆಗೆ ಇದನ್ನು ನೋಡುವ ಅದೃಷ್ಟ ಇರಲಿಲ್ಲ . ನಾನು ವಿಜಯಾಳ ತಂದೆಯೆನ್ನಲು ಹೆಮ್ಮೆ ಪಡುತ್ತೇನೆ . ಎಲ್ಲ ಅವಕಾಶಗಳು ಇದ್ದಾಗ ಮಾಡುವುದು ಸಾಧನೆ ಅಲ್ಲ . ನಮ್ಮಲ್ಲಿಯ ಕೊರತೆಗಳನ್ನು ಮೆಟ್ಟಿ ನಿಂತು , ಮುನ್ನುಗ್ಗಿ ಮಾಡುವ ಸಾಧನೆ ಒಂದು ತೂಕ ಹೆಚ್ಚಲ್ಲವೇ ? ತನ್ನಂತ ಎಷ್ಟೋ ವಿಕಲ ಚೇತನರಿಗೆ ನನ್ನ ಮಗಳು ಇಂದು ಸ್ಪೂರ್ತಿಯಾಗಿದ್ದಾಳೆ . ನನ್ನ ಮಗಳಲ್ಲ , ನನ್ನ ಅಮ್ಮನಿವಳು" 


( ಕನ್ನಡಕ ತೆಗೆದ ರಸೂಲ್ ಕಣ್ಣೀರು ಒರೆಸುವ ಮೊದಲೇ , ವಿಜಯಾ ತನ್ನಪ್ಪನ ಕಣ್ಣೀರಿಗೆ ತನ್ನ ಕೈಯಿಟ್ಟಿದ್ದಳು . ಇಂತಹ ದೈವಿಕ ಪ್ರೀತಿಗೆ ಸಾಕ್ಷಿಯಾದ ಮಾಧ್ಯಮದವರ ಕಣ್ಣಲ್ಲೂ ನೀರು ಜಿನುಗಿತ್ತು )



Rate this content
Log in

Similar kannada story from Classics