ರಂಗನಾಥ ಈ

Drama Tragedy Others

4.7  

ರಂಗನಾಥ ಈ

Drama Tragedy Others

ಪ್ರವಾಹ ಕಥನ

ಪ್ರವಾಹ ಕಥನ

14 mins
653



ಮೂರು ವರ್ಷಗಳ ಕಾಲ ಮನಬಂದಂತೆ ಕುಣಿದು, ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಡುವ ಪ್ರಶ್ನೆ,ಇಷ್ಟು ದಿನ ನಾವೇನು ಮಾಡಿದ್ವಿ? ಮುಂದೇನು ಗತಿ!. ಅದೇ ತರ ಗ್ರಾಮೀಣ ಪ್ರದೇಶಗಳಿಂದ ಹಾಗೂ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದವರಿಗೆ ಕಾಡುವ ಇನ್ನೊಂದು ಪೆಡಂಭೂತ ಅಂದ್ರೆ ಅದು ಇಂಗ್ಲೀಷ್ ಭಾಷೆ.ಇದಕ್ಕೆ ಕಾರಣ ಇಂಗ್ಲೀಷಿನ ಹಿರಿಮೆಯೋ, ನಮ್ಮ ಬಗೆಗಿನ ಕೀಳರಿಮೆಯೋ ಕಾಣೆ!.ಬಹುಶಃ ಒಬ್ಬ ವಿದ್ಯಾರ್ಥಿ ಶಾಲೆಗೆ ಸೇರಿದಾಗಿನಿಂದ,ಇಂಗ್ಲೀಷ್ ಸಹ ಎಲ್ಲ ಭಾಷೆಗಳ ಹಾಗೆ ಒಂದು ಭಾಷೆ ಎಂದು ಯಾರೂ ಹೇಳುವುದಿಲ್ಲ! ಇಂಗ್ಲೀಷ್ ಅಂದ್ರೆ ಕಷ್ಟ, ಇಂಗ್ಲೀಷಲ್ಲಿ ಮಾತಾಡಿದ್ರೆ ಅವನು ಬುದ್ಧಿವಂತ ಅನ್ನುವಂತಹ ಮನಸ್ಥಿತಿಯನ್ನು ಎಳೆಯ ವಯಸ್ಸಿನಲ್ಲೇ ನಮ್ಮ ಮೇಲೆ ಹೇರುವುದು ಇದಕ್ಕೆ ಕಾರಣ ಎನ್ನುವುದು ನನ್ನ ಅನುಭವದಿಂದ ಗ್ರಹಿಸಿದ ವೈಯಕ್ತಿಕ ಅಭಿಪ್ರಾಯ.ಇಲ್ಲಾಂದ್ರೆ ಓದು ಬರಹ ಬರದೆ ಇರೋ ಒಬ್ಬಶ್ರೀಸಾಮಾನ್ಯ ತನ್ನ ಅಕ್ಕಪಕ್ಕದ ಮನೆಯವರಾಡುವ ಉರ್ದು,ತೆಲುಗು,ಲಂಬಾಣಿ ಮುಂತಾದ ಭಾಷೆಗಳನ್ನ ಸಲೀಸಾಗಿ ಕಲಿಯುತ್ತಾನೆ; ಅದು ಅವನಿಗೆ ಕಷ್ಟ ಅಥವಾ ಅದಕ್ಕೆ ವಿಶೇಷ ಶಕ್ತಿಯ ಅವಶ್ಯಕತೆ ಇದೆ ಎಂದೆನಿಸುವುದಿಲ್ಲ.ಅದೇ ಇಂಗ್ಲೀಷ್ ಭಾಷೆ ಎಂದ ಕೂಡಲೇ ಕಲಿಯುವ ಮೊದಲೇ ಸಾಧ್ಯವಿಲ್ಲ ಎನ್ನುವ ಕೀಳರಿಮೆ ಅವನಲ್ಲಿ ಮೈದೋರುತ್ತದೆ!.ಅಂದರೆ ಇಂಗ್ಲಿಷನ್ನು ಸಹ ಒಂದು ಆಡುಭಾಷೆಯಾಗಿ ಕಲಿಯಬಹುದು ಎಂದು ಊಹಿಸಲು ಸಾಧ್ಯವಿಲ್ಲ.ಅಷ್ಟರ ಮಟ್ಟಿಗೆ ಇಂಗ್ಲೀಷಿನ ತುಳಿತಕ್ಕೆ ಒಳಗಾಗಿದ್ದೇವೆ!. ಇಂಗ್ಲೀಷಲ್ಲಿ ಮಾತಾಡುವವರನ್ನು ಕಂಡರೆ ಕರೋನದ ಹಾವಳಿ ಇಲ್ಲದ ಆ ಸಮಯದಲ್ಲೂ ಸಹ ಅಂತರ ಕಾಯ್ದುಕೊಂಡು ಅವರಿಂದ ದೂರವೇ ಇರುತ್ತಿದ್ದ ಶ್ರೀಸಾಮಾನ್ಯರಲ್ಲೊಬ್ಬನಾದ ನನ್ನ ಹೆಸರೇ……ಹೆಸರಲ್ಲೇನಿದೆ ಮಣ್ಣು ನಿಮಗೇನೂ ಬೇಕೋ ಆ ಹೆಸರು ಇಟ್ಟುಕೊಳ್ಳಿ!.


ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈಗಿನ ಅಂತರ್ಜಲದ ಮಟ್ಟಕ್ಕೂ ತೀರಾ ಕೆಳಗೆ ನನ್ನ ಇಂಗ್ಲೀಷ್ ಭಾಷಾಸಂಪತ್ತು ಅಡಗಿತ್ತು!ಇನ್ನೂ ನಮ್ಮದು ಸರ್ಕಾರಿ ಕಾಲೇಜು ಆದರೂ ಸಹ ನೂರಕ್ಕೂ ಅಧಿಕ ಕಂಪನಿಗಳು ಕ್ಯಾಂಪಸ್ ಸಂದರ್ಶನಕ್ಕೆ ಬರ್ತಾ ಇದ್ವು.ಕಂಪನಿ ಎಷ್ಟು ಬಂದರೇನು ಫಲ,ನನ್ನ ಅರ್ಹತೆಗೆ ಅವು ಕೇಳುವ ಅರ್ಹತೆ ಹೊಂದಾಣಿಕೆ ಆಗಬೇಕಲ್ಲ! ಒಂದಷ್ಟು ಕಂಪನಿಗಳು ಬರೀ ಕಂಪ್ಯೂಟರ್ ಸೈನ್ಸ್ ಅವರನ್ನ,ಒಂದಷ್ಟು ಯಾವಾಗಲೂ ಗ್ರೀನ್(ಎವರ್ಗ್ರೀನ್!) ಎಲೆಕ್ಟ್ರಾನಿಕ್ಸ್ ಅವರನ್ನ,ಇನ್ನೊಂದಷ್ಟು ಜನ ಪ್ರತಿ ಸರಿ ಶಾಕ್ ಹೊಡಿಸಿಕ್ಕೊಳ್ಳೋ ಎಲಿಕ್ಟ್ರಿಕಲ್ ಅವರನ್ನ,ಇನ್ನೊಂದಷ್ಟು ಜನ ಒಂಟಿ ಹುಡುಗರಾದ ಮೆಕ್ಯಾನಿಕಲ್ ಅವರನ್ನ ಕೇಳ್ತಾ ಇದ್ವು.ಆದ್ರೆ ಇವರು ಕೇಳ್ತಿದ್ದ ಅರ್ಹತೆ,ಯಾವಾಗಲೂ ಫೇಲ್ ಆಗಿರಬಾರದು(ಮೊದಲ ವರ್ಷ ಫಿಸಿಕ್ಸ್ ಹೊಗೆ!)ಸರಾಸರಿ 70%(ಈಗಲೇ ಇಲ್ಲ ಇನ್ನೂ ಅವಾಗೆಲ್ಲಿಂದ!),ಕೆಲವರು ಇವೆರಡರಲ್ಲೂ ರಿಯಾಯಿತಿ ಕೊಟ್ಟು ನಮಗೆ ಅವಕಾಶ ಕೊಟ್ರು ಸಹ,ಗುಂಪು ಚರ್ಚೆ ಅನ್ನೋ ಗಂಡಾಂತರನ ನಮ್ಮ ಮುಂದೆ ಇಟ್ಟಿರೋರು!. ನಾನು ಅಲ್ಲಿ ಹೋಗಿ ಎಲ್ಲರ ಮುಖ ಮುಖ ಮಾಡಿ ನನ್ನ ಸರದಿ ಬಂದಾಗ ‘ಬ್ಯಾ ಬ್ಯಾ’ಅಂದು ಅದೇ ಬೇಜಾರಲ್ಲಿ ಹಾಸ್ಟೆಲಿಗೆ ಬಂದು ಬರೀ ಒಂದ್ಮೂರೂ ತಟ್ಟೆ ತಿಂಡಿ ತಿಂದು ಬೆಡ್ಶೀಟ್ ಹಾಕೊಂಡು ಮಲಗ್ತಾ ಇದ್ದೆ!ಇನ್ನೂ ಆವಾಗ್ಲೇ 100 ಕಂಪನಿಗಳು ಬರ್ತವೆ ಅಂತ ಹೇಳಿದೆನಲ್ಲ,ಅದ್ರಲ್ಲಿ 90 ಇದೇ ತರ.ನನ್ನ ಅರ್ಹತೆಗೆ ಅವರು ಯಾರು ಸರಿಯಾಗ್ತಿರಲಿಲ್ಲ!


ನಾವು ಗೊತ್ತಲ್ಲಾ ಮಾಸ್! ಅದಕ್ಕೆ ಈ ಹಳ್ಳಿ ಕಡೆ ಕುರಿಮಂದೆಗೆ ನುಗ್ಗಿ,ಒಳ್ಳೆ ಕುರಿ ಹಿಡೀತಾ ಹಿಡೀತಾ ಅಂದಾಜು ತಪ್ಪಿ,ಸುಮಾರಾಗಿರೋ ಒಂದು ಕುರೀನಾ ಒಳ್ಳೆದರ ಜೊತೆ ಹಾಕಿರ್ತಾರಲ್ಲ ಹಂಗೆ ಈ ಮಾಸ್ ಕಂಪೆನಿಗೆ ಹೋಗ್ತಾ ಇದ್ದೆ! ಅವರಿಗೆ ಬೇಕಾಗಿರೋದು ನಮ್ಮಂಥವರೇ.ಇಂಥದ್ರಲ್ಲಿ ಹೆಂಗೊ ಮೊದಲನೇ ಸುತ್ತು ಪಾಸಾಗಿ ಮುಂದೆ ಹೋದ್ರೆ ಅಲ್ಲೂ ನಂಗೆ ಇಂಗ್ಲೀಷ್ ಕಾಟ! ಮೊದಲನೇ ಪ್ರಶ್ನೆ:Tell me about your self. ತಲತಲಾಂತರದಿಂದ ಬದಲಾಗದೆ ಉಳಿದಿರೋ ಒಂದೇ ಪ್ರಶ್ನೆ ಅಂದ್ರೆ ಇದೇ! ಕೇಳೋದೇ ತಡ ರಾತ್ರಿ ಎಲ್ಲ ಕಂಠಪಾಠ ಹಾಕಿದ್ದ ನಾಕ್ಸಾಲ್ನ ಗಿಳಿಪಾಠ ತರ ಒಪ್ಪಿಸಿಬಿಡ್ತಿದ್ದೆ.ಮುಂದೆ ಕೂತಿರೋನೇನು ಮುಠ್ಠಾಳನ ?ಓಹ್! ಗುಡ್, ಅಂತಾ ಹೇಳಿ, ಸರಿ ನೀವು ಸಿನೆಮಾ ಜಾಸ್ತಿ ನೋಡ್ತೀನಿ ಅಂತ ಬರೆದಿದ್ದೀರಾ,ನಿಮ್ಮ ನೆಚ್ಚಿನ ಸಿನೆಮಾ ಯಾವುದು?. “ನೋಡಿ ಸ್ವಾಮಿ ನಾವಿರೋದು ಹೀಗೆ” ಸಾರ್ ಅಂದೆ; ಎದುರಿಗೆ ಇದ್ದದ್ದು ಗಂಡುಪ್ರಾಣಿ ಅಲ್ವಾ ಅದಕ್ಕೆ!.ಇದೇ ಪ್ರಶ್ನೆನಾ ಹುಡುಗಿ ಕೇಳಿದ್ರೆ “ನಾ ನಿನ್ನ ಮರೆಯಲಾರೆ” ಅಂತ ಹೇಳ್ಬೇಕು ಅಂತಾ ಇದ್ದೆ!.ಗೊತ್ತಾಗುತ್ತೆ ನೋಡಿದ್ರೆ!ಅದರ ಕತೆ ಸ್ವಲ್ಪ ಹೇಳಿ ಕೇಳೋಣ ಅಂದ ಎದುರಿಗೆ ಇದ್ದ ಆ ಗಂಡು ಪ್ರಾಣಿ!.


ಸಾರ್,ಮೊದಲನೇ ದೃಶ್ಯ ಸಾರ್, ನೀರಿಲ್ಲದೆ ವಠಾರದವರೆಲ್ಲ ಕಾಯ್ತಾ ಇದಾರೆ, ಒಬ್ಬನಿಗೆ ಹಜಮತ್ತು ಮಾಡಿಸಿಕೊಳ್ಳೊ ಅವಸರ,ಇನ್ನೊಬ್ಬನಿಗೆ ಹೊಟ್ಟೆ ಖಾಲಿ ಮಾಡೋ ಅವಸರ,ಹೀಗೆ ಒಬ್ಬೊಬ್ಬರಿಗೆ ಒಂದೊಂದು ಅವಸರ ಸಾರ್! ಈ ಟೈಮಲ್ಲಿ ಶಂಕ್ರಣ್ಣ ಎಂಟ್ರಿ ಸಾರ್!,ತೊಟ್ಟಿಲಿ ಬಿದ್ದಿರೋ ಇಲಿನಾ ತೆಗೆದು ನಲ್ಲಿಯಲ್ಲಿ ನೀರು ಬರೋ ಹಾಗೆ ಮಾಡಿದ್ರು ಸಾರ್! ಆಮೇಲೆ “ನೋಡಿ ಸ್ವಾಮಿ ನಾವಿರೋದು ಹೀಗೆ” ಹಾಡು ಬರುತ್ತೆ ಸಾರ್ ಅಂತ ಹೇಳ್ತಾ ಇದ್ದೆ,ಅಷ್ಟಕ್ಕೇ ಓಹ್ !ಸೂಪರ್ ಅಂತ ಹೇಳಿ ನನ್ನ ಕತೆಗೆ ಅರ್ಧದಲ್ಲೇ ಕಲ್ಲು ಹಾಕಿದ!.ಈ ತರ ಅದ್ಭುತವಾಗಿ ಕತೆ ಹೇಳಿದ ಮೇಲೆ ನನ್ನ ಆಯ್ಕೆ ಮಾಡದೆ ಇರ್ತಾರ! ನೀವೇ ಹೇಳಿ?


ನಾನು ಸಂದರ್ಶನ ಆದ್ಮೇಲೆ ,ಸಾರ್ ನನ್ನ ಸಂದರ್ಶನ ಹೇಗಿತ್ತು ಸಾರ್? ಅಂದೆ. ಆಹ್ ತುಂಬಾ ಚೆನ್ನಾಗಿತ್ತು. ಮತ್ತೇ …ಅಂತ ಬಾಯಿ ತೆಗೆದೆ, “ಯು ಕ್ಯಾನ್ ಲೀವ್ ಫಾರ್ ದಿ ಡೇ, ವೀ ವಿಲ್ ಲೆಟ್ ಯು ನೋ” ಅಂತ ಹೇಳಿತು ಆ ಗಂಡುಪ್ರಾಣಿ!. ಆ ದಿನ ಸಂಜೆ ಫಲಿತಾಂಶ ಬಂತು. ನಾನು ನೋಡ್ತೀನಿ,ತುಂಬಾ ಜನದ ಹೆಸರು ಇತ್ತು ಆದ್ರೆ ನಂದೊಂದು ಬಿಟ್ಟು! ಕತೆನ ಇಂಗ್ಲೀಷಲ್ಲಿ ಬೇರೆ (ಬ್ಯಾ ಬ್ಯಾ ಅಂತ) ಹೇಳಿದ್ದು ಅವನಿಗೆ ಅರ್ಥ ಆಗಿಲ್ಲ ಅನ್ಸುತ್ತೆ ದಡ್ಡ ಮುಂಡೆದುಕ್ಕೆ ಅಂತ ಬೈಕೊಂಡು ಸುಮ್ಮನಾದೆ!

ಹೀಗೆ ಗುಂಪಲ್ಲಿ ಕಂಪನಿ ಆದವರೆಲ್ಲ ಗುಂಪಾಗಿ “ಸಂತೋಷಕ್ಕೆ ಹಾಡು ಸಂತೋಷಕ್ಕೆ” ಅಂತ ಕುಡಿದು ಕುಣಿತಾ ಇದ್ರು;ನಾನು “ಮೂಗನ ಕಾಡಿದರೇನು ಸವಿ ಮಾತನು ಆಡುವನೇನು” ಹಾಡು ಕೇಳ್ತಾ ಕೂತಿದ್ದೆ!.ಇದೇ ದುಃಖದಲ್ಲಿ ಇರೋಬರೋ ಶೋಕ ಗೀತೆಗಳನ್ನೆಲ್ಲ ಕೇಳಿದೆ.ಆಮೇಲೆ ಒಂದಿನ ಹಿಂಗೆ ಇನ್ನೊಂದು ಮಾಸ್(ಹೆಚ್ಚು ಸಂಖ್ಯೆಯಲ್ಲಿ ಕೆಲಸಕ್ಕೆ ಆಯ್ಕೆ ಮಾಡೋ ಕಂಪನಿ) ಕಂಪೆನಿಗೆ ಸಂದರ್ಶನಕ್ಕೆ ಹೋದೆ.ಅದು ಕಾಲೇಜು ಹೊರಗಡೆ!.ಕಾಲೇಜಲ್ಲಿ ಇರೋ ಕಡಿಮೆ ಜನದಲ್ಲೇ ಆಗಿಲ್ಲ ಹೊರಗೆ ಹೋಗಿ ಆಗೋದು ಅಷ್ಟು ಸುಲಭನಾ...? ಆದರೆ ದುರಾದಷ್ಟವಶಾತ್ ಅವತ್ತು ಆ ಕಂಪೆನಿಯವರು ನಿನ್ನ ತಲೆ ಅನ್ನೋ ತಪ್ಲೆಯ (ಪಾತ್ರೆ) ನಿಖರವಾದ ಬೆಲೆ ವರ್ಷಕ್ಕೆ 3ಲಕ್ಷ ಅಂತ ಒಂದು ಮುದ್ರೆ ಒತ್ತಿ ಬಿಟ್ಟರು! ನನ್ನ ನಾನೂ 3 ಲಕ್ಷಕ್ಕೆ ಮಾರ್ಕೊಂಡು ಬಿಟ್ಟೆ ಅವತ್ತು!


ಇನ್ನೂ ಕೇಳಬೇಕೆ,ಕಾಲೇಜಲ್ಲಿ ಇರಬೇಕಾದರೆ ಕೆಲ್ಸ ಸಿಕ್ಕಿದೆ ಅಂದ್ರೆ ಕಾಲೇಜಲ್ಲಿ ಮತ್ತೆ ಹಾಸ್ಟೆಲಲ್ಲಿ ಒಂಥರಾ ಮರ್ಯಾದೆ.ಹಿಂಗೆ ಅಗಾಯಿಗ ಅನ್ನೋವಷ್ಟರಲ್ಲಿ ನಾನು ಡಿಗ್ರೀ ಮುಗಿಸಿ ಯಾಂತ್ರಿಕ ಅಭಿಯಂತರನಾದೆ ನಂತರ ತಾಂತ್ರಿಕ ದೋಷದಿಂದ ಐಟಿ ನೌಕರನಾದೆ!

ಇದಾದ ಮೇಲೆ ನಾನು ಊರಿಗೆ ಹೋದೆ;ಕೆಲಸ ಸಿಕ್ಕಿದೆ ಅಂತ ಕೆಲವರಿಗೆ ಮಾತ್ರ ಹೇಳಿದ್ದೆ. ಯಾಕಂದ್ರೆ ಇವರು ಕುರಿ ಮಂದೆ ತರ ಸಾವಿರಾರು ಜನಾನ ತಗೊಂಡವ್ರೆ,ನಂಗೆ ಯಾವಾಗ ಬಂದು ಕೆಲಸಕ್ಕೆ ಸೇರೋಕೆ ಹೇಳ್ತಾರೆ ಅಂತ ಗೊತ್ತಿಲ್ಲ,ಅದಕ್ಕೆ ಅವರು ಯಾವಾಗ ಹೇಳ್ತಾರೋ ಆವಾಗ್ಲೇ ಹೇಳೋದು ಅಂತ. ಇನ್ನ ಮನೆಯಲ್ಲೇ ಎಷ್ಟು ಹೊತ್ತು ಅಂತ ಕೂತ್ಕೊಳ್ಳೋದು,ಬೇಜಾರಾಗಿ ಸುಮ್ಮನೆ ಸೈಕಲ್ ತಗೊಂಡು ತಿರುಗೋಕೆ ಅಂತ ಹೊರಟೆ.


ಹಳ್ಳಿ ಅಂದ್ಮೇಲೆ ಒಂದು ಅರಳಿಕಟ್ಟೆ ಅಥವಾ ಬೇವಿನಮರದ ಕಟ್ಟೆ ಇರೋದು, ಅಲ್ಲಿ ಕೆಲ್ಸ ಇಲ್ದಿರೋ ಸೋಮಾರಿಗಳು ಕೂರೋದು ಎರಡು ಖಾಯಮ್ಮು!ಇವರು ಹೋಗಿ ಬರೋರನ್ನೆಲ್ಲ ಎಲ್ಲಿಗೆ ಹೋಗಿದ್ದೆ,ಏನು ಅಂತ ಗಿರಾಗತಿ ಕೇಳಿ ಕಾಟ ಕೊಡ್ತಾನೆ ಇರ್ತಾರೆ. ಹಾಗಾಗಿ ಜನ ಈ ಮಹಾಶಯರು ಅಲ್ಲಿ ಇದಾರೆ ಅಂದ್ರೆ ಸಾಕು,ನೋಡಿ ನೋಡದ ಹಾಗೆ ಹೋಗ್ಬಿಡ್ತಾರೆ!.ನಾನು ಸೈಕಲಲ್ಲಿ ಬರ್ತಾ ಇವರನ್ನು ನೋಡಿ ಹಾಗೆ ಹೋಗ್ತಾ ಇದ್ದೆ.ಬಿಡಬೇಕಲ್ಲ ಬಡ್ಡಿಮಕ್ಳು ಯಾರ ತಲೇನೂ ತಿಂದಿಲ್ಲ ,ಬಿಟ್ಟಿ ಉಪದೇಶ ಕೊಟ್ಟಿಲ್ಲ ಅಂದ್ರೆ ತಿಂದಿರೋದು ಅರಗೊದಾದ್ರು ಹೇಗೆ?

ಬಾರೋ ಇಲ್ಲಿ ಅಂತ ಒಬ್ಬ ಕರೆದ.ಅವನಿಗೆ ಬೆಲೆ ಕೊಟ್ಟಿಲ್ಲ ಅಂದ್ರೂ ಅವನ ವಯಸ್ಸಿಗಾದ್ರು ಬೆಲೆ ಕೊಡಬೇಕಲ್ಲ! ಏನಣ್ಣ ಅಂತ ಹೋದೆ. ಮುಗಿತೇನೋ ಓದಿದ್ದು?ಇಲ್ಲೇ ತಿರುಗ್ತಾ ಇದ್ದೀಯ, ಕೆಲ್ಸ ಸಿಕ್ಕಿಲ್ವಾ ಅಂತ ಕೇಳಿದ.ಇನ್ನೂ ಇಲ್ಲ ಅಣ್ಣ ಹುಡುಕ್ತಾ ಇದೀನಿ ಅಂದೆ.ಅಷ್ಟು ಸಾಕಾಗಿತ್ತು ಅವನಿಗೆ,ನಾನು ಆವಾಗ್ಲೇ ಹೇಳಿದೆ,ಇಂಜಿನಿಯರ್ ಓದು ಬೇಡ ,ಬೆಲೆ ಇಲ್ಲ ಅಂತ. ಕೇಳಬೇಕಲ್ಲ ನಮ್ಮಾತು ನೀವು!ನಮ್ಮ ಹುಡುಗನಿಗೆ ಹೇಳಲಾ ಕೆಲ್ಸ ಕೊಡ್ಸೋಕೆ? ಅಂದ.ನಾನು ಇವನು ಯಾವಾಗ ನಂಗೆ ಎಂಜಿನಿಯರಿಂಗ್ ಓದಬೇಡ ಅಂದ, ಅಂತ ಯೋಚ್ನೆ ಮಾಡ್ಬೇಕಾದ್ರೆ ಇನ್ನೊಬ್ಬ ಯಾರೋ ದಾರಿಯಲ್ಲಿ ಹೋಗೊನ್ನ ಕರೆದ. ಮತ್ತೆ ನಂಗೆ ನಾ ಹೇಳಿದಾಂಗೆ ಮಾಡು ಹೋಗು ಅಂತ ಹೇಳಿದ. ನಂಗೆ ಸರಿಯಾಗಿ ಸಿಟ್ಟು ಬಂದಿತ್ತು ಬಂದವರತ್ರ ಬೀಡಿ ಇಸ್ಕೊಂಡು ಸೆದೋ ನನ್ಮಗ,ನಂಗೆ ಉಪದೇಶ ಕೊಡ್ತಾನೆ.ಇವನೇ ಕೆಲಸ ಇಲ್ಲದೆ ಲಾಟ್ರಿ ಹೊಡಿತಾವ್ನೆ ಮತ್ತೆ ನಂಗೆ ಕೆಲ್ಸ ಕೂಡುಸ್ತಾನಂತೆ! ಅಂತ ಮಾತೃಭಾಷೆಯಲ್ಲಿ ಮನಃತೃಪ್ತಿ ಆಗೋ ಹಾಗೆ ಬಯ್ಕೊಂಡೆ!.


ಹಿಂಗೆ ಸಿಕ್ಕ ಸಿಕ್ಕೊರೆಲ್ಲ ಉಪದೇಶ ಕೊಟ್ಟಿದ್ದನ್ನ ಕೇಳಿ ನಂಗೂ ಸಾಕಾಗಿತ್ತು. ಒಂದಿನ ನೀವು ಇಂತಹ ದಿನ ಬಂದು ಕೆಲಸಕ್ಕೆ ಸೇರಿ ಅಂತ ಕಂಪನಿಯಿಂದ ಒಂದು ಮೇಲ್ ಬಂತು.ಅದು ಬೆಂಗಳೂರಲ್ಲಿ ಅಲ್ಲ ಚೆನ್ನೈಯಲ್ಲಿ. ನಮ್ಮೂರಲ್ಲಿ ಆಗ್ಲೇ ಆ ಹುಡುಗನಿಗೆ ಚೆನ್ನೈಯಲ್ಲಿ ಕೆಲಸ ಸಿಕ್ಕೈತಂತೆ,ಎತ್ಕಂತಿದ್ದಂಗೆ 70 ಸಾವಿರ ಸಂಬಳ ಅಂತ ಹಬ್ಬುಸ್ಬಿಟ್ಟಿದ್ರು! ಎಂದು ಕೇಳಿರದ ಚೆನ್ನೈ ಅನ್ನೋ ಊರ ಹೆಸರು ನಮ್ಮ ಊರವರಿಗೆ ಬೆಂಗಳೂರಿಗಿಂತ ಬಾಳ ಇಷ್ಟವಾಯಿತು! ಹಂಗೆ ಮಗ್ಲಲ್ಲೆ ಇರೋ ಊರಲ್ಲಿ ಕೆಲಸ ಮಾಡಿದ್ರೆ ಬೆಲೆ ಕಮ್ಮಿ!ದೂರದ ಬೆಟ್ಟನೆ ನೋಡೋಕೆ ಚೆಂದ ಯಾಕಂದ್ರೆ ನಮ್ಮೂರಿಂದ ಬೆಂಗಳೂರಿಗೇ ಬರೀ 160ಕಿಮೀ ದೂರ.


ಅಂತೂ ನವೆಂಬರ್ 16,2015 ರಂದು ಹೋಗಿ ಕಂಪೆನಿಗೆ ಸೇರಬೇಕಿತ್ತು.ಹಾಗಾಗಿ ನಾನು ಸ್ವಲ್ಪ ಗಂಟು ಮೂಟೆ ಕಟ್ಕೊಂಡು ಬೆಂಗಳೂರಿಗೆ ಹೊರಟೆ.ಅಲ್ಲಿ ಹೋಗಿ ಬಟ್ಟೆ-ಬರೆ ಎಲ್ಲ ತಗೊಂಡು ನವೆಂಬರ್ 14,ಶನಿವಾರ ರಾತ್ರಿ ಬಸ್ಸು ಹತ್ತಬೇಕಿತ್ತು.ನಾನು ಬೇರೆ ಹಾಸ್ಟೆಲ್ ಅಲ್ಲಿ ಸಿಕ್ಕವರಿಗೆಲ್ಲ ಮೊಳೆ ಹೊಡ್ಕಂಡು ತುಂಬಾ ಜನಾನ ಫ್ರೆಂಡ್ಸ್ ಮಾಡ್ಕೊಂಡು ಇದ್ದೆ.ಹಾಗಾಗಿ ನಮ್ಮ ರೂಮ್ ನಂಬರ್ 47ರ ಹುಡುಗರು ಮತ್ತೆ ಅಕ್ಕಪಕ್ಕ ರೂಮವರು ಒಟ್ಟು ಒಂದದಿನೈದು ಜನ ನನ್ನ ಬಿಡೋಕೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ವರ್ಗೂ ಜೊತೆಗೆ ಬಂದ್ರು!ಈ ಕುರಿನಾ ಬಲಿ ಕೊಡೋ ಮುಂಚೆ ಮೆರವಣಿಗೆ ಮಾಡ್ತಾರಲ್ಲ ಹಂಗೆ!ಅಲ್ಲಿ ಬಸ್ ಕಂಡಕ್ಟರ್ ಇಷ್ಟು ಜನಾನ ನೋಡಿ ಬಾಳ ಖುಷಿಯಾದ.ಬಸ್ ಹೊರಟಾಗ ನಾನೊಬ್ಬನೇ ಹತ್ತಿದ್ದನ್ನು ನೋಡಿ ಮುಖನ ಹುಣಸೆ ಹಣ್ಣು ತಿಂದವನ ತರ ಮಾಡ್ಕೊಂಡ. ಕೇಳದೆ ಖುಷಿಯಾದರೆ ನಾವೇನು ಮಾಡೋಕಾಗುತ್ತೆ! ಅಂತೂ ನವೆಂಬರ್ 15 ಬೆಳಗಿನ ಜಾವ ಚೆನ್ನೈಯಲ್ಲಿ ಇಳಿದೆ.


ಅಲ್ಲಿಂದ ಸಿಟಿ ಬಸ್ ಸ್ತಾಂಡಿಗೆ ಹೋಗೋದು ಹೆಂಗೆ ಅಂತ ಯಾರಿಗೆ ಕೇಳೋದು?ಕನ್ನಡದಲ್ಲಿ ಕೇಳಿದ್ರೆ ಅವರಿಗೆ ಅರ್ಥ ಆಗ್ತಾ ಇಲ್ಲ,ನಂಗೆ ತಮಿಳಲ್ಲಿ ಕೇಳೋಕೆ ಬರ್ತಾ ಇಲ್ಲ.ಆಮೇಲೆ ಒಂದು ಆಟೋಗೆ ಕೈಹಾಕಿ ಸಿಟಿ ಬಸ್ ಸ್ಟ್ಯಾಂಡ್ ಅಂದೆ.ಅವ್ನು ಬನ್ನಿ ಅನ್ನೋ ತರ ತಲೆ ಗುಣುಕಾಕಿದ.ಅಲ್ಲೇ ಮೇಲ್ಸೇತುವೆ ಮೇಲೆ ಹತ್ತಿ ಎರಡು ಸುತ್ತು ಸುತ್ತಿಸಿ ಕೆಳಗಿಳಿಸಿ ಇದೆ ಬಸ್ ಸ್ಟಾಂಡ್ ಅಂದ!ಎಷ್ಟು ಅಂತ ಕೇಳಿದ್ದಕ್ಕೆ,ತಮಿಳಲ್ಲಿ ಹೇಳಿದ, ನಾನು 100 ರೂಪಾಯಿ ಕೊಟ್ಟೆ 20 ರೂಪಾಯಿ ವಾಪಸ್ ಕೊಟ್ಟು ಹೋದ.ಆಮೇಲೆ ನೋಡ್ತೀನಿ ನಾನು ಇಳಿದ ಆ ಬಸ್ಸು ನಂಗೆ ಎದುರುಗಡೆನೆ ನಿಂತಿದೆ! ಬಡ್ಡಿಮಗ ಆ ಕಡೆ ರೋಡಿಂದ ಈ ಕಡೆಗೆ ಬಿಡೋಕೆ ಸೇತುವೆ ಎಲ್ಲ ಸುತ್ತಿಸಿ 80 ರೂಪಾಯಿಗೆ ನಂಗೆ ಮೆತ್ತಿದ್ದ!ಆಮೇಲೆ ರಾಘು ಹೇಳಿದ ಬಸ್ ನಂಬರ್ ಹುಡುಕಿ ಹತ್ತಿದೆ.ಟಿಕೇಟ್ ಕೊಡೋಕೆ ಕಂಡಕ್ಟರ್ ಬಂದಾಗ ಜಾಗದ ಹೆಸರು ಹೇಳೋಕೆ ಬರ್ತಾ ಇಲ್ಲ,ನಾಲಗೆ ಸರಿಯಾಗಿ ತಿರುಗ್ತ ಇಲ್ಲ.ಕೊನೆಗೆ ಬ್ಯಾಗಲ್ಲಿದ್ದ ಚೀಟಿ ತೋರಿಸಿದೆ. ಅವನೆ ಓದಿ ಟಿಕೇಟ್ ಕೊಟ್ಟ.ನಮ್ಮವ್ವ ಚಿಕ್ಕುಡುಗ್ನಾಗೆ ನಾಲಗೆಗೆ ಹುಣಸೆಹಣ್ಣು ಹಾಕಿ ಸರಿಯಾಗಿ ತಿಕ್ಕಿಲ್ಲ ಅನ್ಕೊಂಡೆ! ಅಂತೂ ಅರ್ಥ ಆಗಿಲ್ಲ ಅಂದ್ರು,ಕಿಟಕಿ ಪಕ್ಕದಿಂದ ಕಾಣೋ ಬೋರ್ಡ್ ನೋಡ್ಕಂಡು ಕೊನೆಗೆ ನಾನೂ ಶೋಲಿಂಗನಲ್ಲೂರು ಅಲ್ಲಿ ಇಳಿದೆ.ನಮ್ಮ ಗೆಳೆಯಾ ರಾಘು ಅವನ ಪಿಜಿ ಹತ್ರ ಕರ್ಕೊಂಡು ಹೋಗೋಕೆ ಛತ್ರಿ ತಗೊಂಡು ಬಂದಿದ್ದ.ಮಳೆ ಜಿನಿ ಜಿನಿ ಹನಿತಿತ್ತು.ಒಂದು ವಾರದಿಂದ ಹಿಂಗೆ ನೋಡ್ಲೆ ಅಂತ ರಾಘು ಮಳೆಯ ಗುಣಗಾನ ಮಾಡ್ತಾಯಿದ್ದ, ಅಷ್ಟೊತ್ತಿಗೆ ಪಿಜಿ ಸಿಕ್ಕಿತು.


ಪಿಜಿ ಒಳಗೆ ಹೋದ್ರೆ ಆ ರೂಮ್ ಒಳ್ಳೆ ಭೂತ ಬಂಗಳೆ ತರ ಇದೆ! ಕರೆಂಟ್ ಇಲ್ಲ ಅಂದ್ರೆ ಎದುರಿಗಿರೋರು ಕಾಣಲ್ಲ ಮತ್ತೆ ಫ್ಯಾನ್ ಇಲ್ಲ ಅಂದ್ರೆ ಬದುಕೋದು ಸಾಧ್ಯನೇ ಇಲ್ಲ! ಗಾಳಿ ಬೆಳಕೂ ಎರಡು ಇಲ್ಲ.ರಾಘು ರೂಮಲ್ಲಿ ಇನ್ನೊಬ್ಬ ಇದ್ದ ಅವನು ನಮ್ಮ ಹಾಸ್ಟೆಲ್ ಹುಡುಗನೆ ಅಮಿತ್ ಅಂತ.ದೊಡ್ಡ ಸೈಕೊ ಅಂತ ಕರೀತಾ ಇದ್ವಿ ಹಾಸ್ಟೆಲಲ್ಲಿ!ಇವಾಗ ಅವನ ಜೊತೆ ಇರಬೇಕಿತ್ತು ಸದ್ಯಕ್ಕೆ.ಸರಿ ಮುಖ ತೊಳ್ಕೊಂಡು ಕೆಳಗಡೆ ತಿಂಡಿ ತಿಂದು ಮತ್ತೆ ಮೂವರು ರೂಮಿಗೆ ಬಂದ್ವಿ. ನಾನಾದರೂ ಆ ರೂಮಲ್ಲಿ ಕೂತು ಏನ್ಮಾಡೋದು,ಹೊರಗೆ ಹೋಗೋಣ ಅಂದ್ರೆ ಮಳೆ ,ಅದಕ್ಕೆ ಟಿವಿ ಹಾಕಿದೆ.ಅಲ್ಲಿ ಯಾವ ಕನ್ನಡ ಚಾನಲ್ ಬರ್ತಾ ಇರಲಿಲ್ಲ.ಯಾವುದೋ ಒಂದು ಹಾಡು ಬರೋ ತಮಿಳ್ ಚಾನಲ್ ಹಾಕಿದೆ.ಅಷ್ಟೊತ್ತಿಗೆ ರಾಘು ನಾನು ಬಯ್ಯಾಗೆ ಭೇಟಿ ಆಗಿ ಬರ್ತೀನಿ ಅಂತ ಛತ್ರಿ ತಗೊಂಡು ಹೋದ. ನಾನು ಒಂದೆರಡು ಹಾಡು ನೋಡಿದ್ದೆ, ಅಷ್ಟೊತ್ತಿಗೆ ಅಮಿತ್ ನಾನು ಮಲಗ್ಬೇಕು ಟಿವಿ ಆಫ್ ಮಾಡು ಅಂತ ಇಂಗ್ಲೀಷಲ್ಲಿ ಹೇಳಿದ! ನಾನು ಸರಿ ಅಂತ ಆಫ್ ಮಾಡಿ ಒಂಟಿ ನಾಯಿ ತರ ಕೂತ್ಕೊಂಡೆ.ಅವಾಗ ನನ್ಹತ್ರ ಮೊಬೈಲ್ ಅಂತ ಒಳ್ಳೇದು ಇರಲಿಲ್ಲ;ಹೆಸರಿಗೆ ಒಂದು ಸ್ಕ್ರೀನ್ ಟಚ್ ಮೊಬೈಲ್ ಇತ್ತು ಅಷ್ಟೇ.ಅದನ್ನ ಟಚ್ ಮಾಡದಲ್ಲ ಸುತ್ತಿಗೆ ತಗೊಂಡು ಹೊಡೆಯೋದು ಬಾಕಿ ಅಷ್ಟೇ!ನಂಗೂ ಕಸ್ಟಮರ್ ಕೇರ್ ಬಿಟ್ರೆ ಯಾರು ಫೋನ್ ಅಲ್ಲಿ ಕೇರ್ ಮಾಡ್ತಾ ಇರಲಿಲ್ಲ ಅದಕ್ಕೆ ಸುಮ್ಮನೆ ಇದ್ದೆ.ಆಮೇಲೆ ಎಷ್ಟೋ ಹೊತ್ತಿಗೆ ರಾಘು ರೂಮಿಗೆ ಬಂದು ಟೀ ಕುಡಿಯೋಕೆ ಹೋಗಣ ಅಂದ.ಅಷ್ಟೊತ್ತಿಗೆ ಅಮಿತ್ ಎದ್ದ,ಮೂವರು ಹೊರಟ್ವಿ.


ಟೀ ಕುಡಿದು ಬರೋವರ್ಗು ಈ ರಾಘು ಮತ್ತೆ ಅಮಿತ್ ಇಂಗ್ಲೀಷಲ್ಲಿ ಮಾತಾಡ್ತಾವ್ರೇ, ನಾನು ಲೋ ಏನೋ ಶೋಕಿ ಆಫೀಸಲ್ಲಿ ಸರಿ,ಇಲ್ಲಿ ಯಾಕೋ ತಲೆ ತಿಂತೀರಾ ಅಂತ ಮನಸಲ್ಲಿ ಅನ್ಕೊಂಡೆ. ಮತ್ತೆ ರೂಮಿಗೆ ಬಂದು ಟಿವಿ ಹಾಕಿದೆ,ಮಗಾ ನಾನು ಓದಬೇಕು ಅಂತ ಹೇಳಿ ಆಫ್ ಮಾಡಿಸಿದ ಈ ಅಮಿತ್. ಅವನು ಓದಿ ಮುಗಿಸಿದ; ಊಟಕ್ಕೋಗಿ ಬಂದ್ವಿ.ಮತ್ತೆ ಟಿವಿ ಹಾಕಿದೆ,ಅವ್ನು ನಾನು ಮಲಗಬೇಕು ಅಂದ! ನಾನು ರಾಘು ಕಡೆ ನೋಡಿದೆ,ಅವನು ಮುಖ ಆ ಕಡೆ ತಿರುಗಿಸಿದ.ಹೊರಗೆ ಕರೆದು ಥೂ... ನಿಂಗೆ ಯಾರೂ ಬೇರೇವರು ಸಿಗಲಿಲ್ವ ರೂಂಮೇಟ್ ಅಂತ ಬಯ್ದು ನಂಗೆ ತೋರಿಸಿದ ಹೊಸ ರೂಮಲ್ಲಿ ಮಲಗಲು ಹೋದೆ. ಅಷ್ಟೊತ್ತಿಗೆ ಭಾರಿ ಮಳೆಯ ಕಾರಣದಿಂದ ನಿಮ್ಮ ಸೇರ್ಪಡೆ ದಿನಾಂಕವನ್ನು 17/11/2015 ಕ್ಕೆ ಮುಂದೂಡಲಾಗಿದೆ ದಯವಿಟ್ಟು ಸಹಕರಿಸಿ ಅಂತ ಮೇಲ್ ಬಂತು.


ಬೆಳಗ್ಗೆ ಮತ್ತೆ ರಾಘು ರೂಮಿಗೆ ಹೋದೆ;ಅವ್ನು ಆಫೀಸಿಗೆ ಹೋಗೋಕೆ ಹೊರಟಿದ್ದ, ಇಬ್ರೂ ಕೆಳಗೆ ಹೋಗಿ ತಿಂಡಿ ತಿಂದ್ವಿ.ಅವನು ಹಾಗೆ ಆಫೀಸಿಗೆ ಹೋದ, ನಾನು ರೂಮಿಗೆ ಬಂದು ಪೂರ್ತಿ ದಿನ ನೆಮ್ಮದಿಯಾಗಿ ಅಮಿತನ ಕಾಟ ಇಲ್ಲದೆ ಟಿವಿ ನೋಡಿದೆ. ಮತ್ತೆ ಆ ದಿನ ಸಂಜೆ ಮತ್ತೆ ನಿಮ್ಮ ಸೇರ್ಪಡೆಯ ದಿನವನ್ನು ನಾಳಿದ್ದಿಗೆ ಮುಂದೂಡಲಾಗಿದೆ ಅಂತ ಮೇಲ್ ಬಂತು. ಬುಧವಾರ ಬೆಳಗ್ಗೆ ಎದ್ದು ತಯಾರಾಗಿ ಆಫಿಸತ್ರ ಹೋದೆ.ಅಲ್ಲಿ ಹೋಗಿ ನೋಡ್ತೀನಿ ತಳ ಮಹಡಿ ತುಂಬಾ ನೀರು ನಿಂತಿದೆ! ನನ್ನ ತರ ಇನ್ನೂ ಸ್ವಲ್ಪ ಜನ ಮುಖ-ಮುಖ ನೋಡ್ಕೊಂಡು ನಿಂತಿದ್ರು. ಅಷ್ಟೊತ್ತಿಗೆ ಒಂದು ಮೇಲ್ ಬಂತು!ಅನಿರ್ದಿಷ್ಟ ಮಳೆಯಿಂದಾಗಿ ನಿಮ್ಮ ಸೇರ್ಪಡೆ ದಿನಾಂಕವನ್ನು ಮುಂದೂಡುಲಾಗಿದೆ,ಆದಷ್ಟು ಬೇಗ ನಿಮಗೆ ತಿಳಿಸುತ್ತೇವೆ.ಅಲ್ಲಿಯವರೆಗೆ ನಿಮ್ಮ ಸ್ಥಳಗಳಿಗೆ ಹೋಗಬಹುದು ಎಂದು ಬರೆದಿತ್ತು. ಈ ಆಫೀಸ್ ಮುಂದೆ ಕಾಯ್ತಾ ಇರಬೇಕಾದರೆ ಕಿರಣ್ ಅಂತ ಮೈಸೂರು ಹುಡುಗ ಪರಿಚಯ ಆದ. ಅವನು ನಾನು ಜೊತೆಗೆ ಬೆಂಗಳೂರಿಗೆ ಬಂದ್ವಿ.


ಮತ್ತೆ ಒಂದು ವಾರದ ನಂತರ ನವೆಂಬರ್ 30 ರಂದು ಬಂದು ಕೆಲಸಕ್ಕೆ ಸೇರಬೇಕು ಅಂತ ಮೇಲ್ ಬಂತು.ಮತ್ತೆ ಅದೇ ಕತೆ ನನ್ನ ಬಿಡೋಕೆ ಈ ಸಲ ನಮ್ಮ ಗೆಳೆಯರ ಒಂದು ಗುಂಪು ಜೊತೆ ಬಂತು.ಹೋಗಿ ಮೂರೇ ದಿನಕ್ಕೆ ವಾಪಸ್ ಬಂದಿದ್ನಲ್ಲ ಅದಕ್ಕೆ ಈ ಸಲನೂ ಹಂಗೆ ಬರಬೇಡ ಕಣೋ ಕಗ್ಗ ಅಂತ ಹೇಳಿ ಬಸ್ ಹತ್ತಿಸಿದ್ರು.ನಾನು ಸರಿ ಅಂತ ಹೇಳಿ ಬಸ್ಸು ಹತ್ತಿದೆ.


ಬೆಳಗಿನ ಜಾವ 6ಗಂಟೆಗೆ ಬಸ್ಸು ಚೆನ್ನೈಯಲ್ಲಿ ನಿಂತಿತು.ನಾನು ಇಳಿದು ಈ ಸಾರಿ ಕುರಿ ಆಗದೇ ಸೀದಾ ಸಿಟಿ ಬಸ್ ಸ್ಟಾಂಡಿಗೆ ಹೋಗಿ ಬಸ್ ಹತ್ತಿ ಪಿಜಿಗೆ ಹೋದೆ.ಕಳೆದ ಬಾರಿ ಅಮಿತನ ದಿವ್ಯಸ್ವರೂಪದ ಪರಿಚಯವಿದ್ದ ನಂಗೆ ಈ ಸಲ ಅದೂ ವಿಚಿತ್ರವಾಗಿ ಕಾಣಿಸಲಿಲ್ಲ!ಯಾಕಂದ್ರೆ ಅದು ವಿಚಿತ್ರಕ್ಕಿಂತ ಮೇಲೆ ಅಂತ ನಾನು ತಿಳಿದಿದ್ದೆ!ನವೆಂಬರ್ 30 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.ನನ್ನ ಮನಸ್ಸಿನಲ್ಲಿ ನೂರಾರು ಯೋಚನೆಗಳು ತಕ ತಕ ಕುಣಿದು ನಾನು ಹಾಗೆ ನಿದ್ರೆಗೆ ಜಾರಿದ್ದೆ.


ಬೆಳಗ್ಗೆ ಎದ್ದ ತಕ್ಷಣ ಕಿಟಕಿಯಲ್ಲಿ ಇಣುಕಿದೆ ಮಳೆಯ ಸುಳಿವಿರಲಿಲ್ಲ!ಬೇಗ ಸ್ನಾನ ಮಾಡಿ ಅಂಗಿ ಮತ್ತೆ ಪ್ಯಾಂಟಿನಲ್ಲಿ ಅವಸರವಸರವಾಗಿ ಮೈ ತೂರಿಸಿಕೊಂಡು ಹೊರಟೆ.ಒಂದು ಶೇರ್ ಆಟೋ ಹಿಡಿದು ಕಂಪನಿಯ ಬಳಿ ಬಂದಾಗ ಸಮಯ 8 ಗಂಟೆ.ಕುರಿಮಂದೆಯ ರೀತಿಯಲ್ಲಿ ನೂರಾರು ಜನ ಸಾಲಿನಲ್ಲಿ ನಿಂತಿದ್ದರು.ನಾನು ಬೇಗ ಹೋಗಿ ಮಂದೆಯನ್ನು ಸೇರಿಕೊಂಡೆ.ಸುಮಾರು ಹೊತ್ತಿನ ನಂತರ ನನ್ನ ಸರದಿ ಬಂದಾಗ ದಾಖಲೆಗಳನ್ನು ಪರಿಶೀಲಿಸಿ ಒಂದು ಕೊರಳಿಗೆ ಹಾಕಿಕೊಳ್ಳಲು ನೇಣು ಕುಣಿಕೆಯನ್ನು ಕೊಟ್ಟರು!ಇದುವರೆಗೆ ಐಡಿ ಕಾರ್ಡನ್ನುಕತ್ತಿಗೆ ಹಾಕಿಸುವ ಯಾವ ಖಾಸಗಿ ಶಾಲೆ ಅಥವಾ ಕಾಲೇಜಿನಲ್ಲಿ ನಾನು ಓದಿರಲಿಲ್ಲ.ಅದು ಒಂತರ ನಾಯಿ ಕೊರಳಿಗೆ ಹಾಕುವ ಪಟ್ಟಿಯೆಂದೆ ನನ್ನ ಭಾವನೆ! ಇದೆಲ್ಲ ಆದಮೇಲೆ ನಮ್ಮನ್ನೆಲ್ಲ ಒಂದು ಆಡಿಟೋರಿಯಂನಲ್ಲಿ ಕೂರಿಸಿ ಬೆಳಗ್ಗೆಯಿಂದ ಸಂಜೆ ತನಕ ಮಧ್ಯೆ ಸುಧಾರಿಸಿಕೊಳ್ಳಲು ವಿರಾಮ ಕೊಟ್ಟು ಚೆನ್ನಾಗಿ ಕುಯ್ದರು!.ನೋಡಿ ಎಷ್ಟೇ ದೊಡ್ಡ ಕಂಪನಿ ಆಗಿರಲಿ,ಸಾಧನೆ ಮಾಡಿರಲಿ ಬೆಳಗ್ಗೆಯಿಂದ ಹೇಳಿದ್ರೆ ನಿದ್ದೆ ಬಂದೆ ಬರುತ್ತೆ ನಾನು ಸಹ ಅನ್ನ ತಿನ್ನೋ ಮನುಷ್ಯ ಅದಕ್ಕೆ ಅರ್ಧಕ್ಕೆ ಮಲ್ಗಿದ್ದೆ!ಸಂಜೆ 5 ಗಂಟೆಗೆ ಹೊರಗೆ ಬಿಟ್ಟರು.


 ವಿರಾಮದ ವೇಳೆಯಲ್ಲಿ ನಾವು ಆಗಲೇ ಒಂದು ಕನ್ನಡ ಸಂಘ ಕಟ್ಟಿದ್ವಿ!ಬೇರೆ ರಾಜ್ಯಕ್ಕೆ ಹೋದಾಗ ನಮ್ಮ ಭಾಷಾಭಿಮಾನ ದುಪ್ಪಟ್ಟಾಗುತ್ತೆ.ಆಗ ನಮ್ಮ ಜಾತಿ,ಮತ,ಜಿಲ್ಲೆ,ರಾಜ್ಯ ಎಲ್ಲ ಹೋಗಿ ಕನ್ನಡ ಅನ್ನೋ ಭಾಷೆ ನಮ್ಮನ್ನ ಒಟ್ಟಾಗಿಸುತ್ತೆ.ಅದೇ ಒಂದು ಭಾಷೆಗಿರೋ ಶಕ್ತಿ.ಹೊರಗಡೆ ಬಂದು ಒಂದು ಟೀ ಅಂಗಡಿ ಹತ್ರ ಟೀ ಕುಡಿತಾ “ಅವ್ನವ್ನು ಹುಚ್ಚು ಸೂಳೆಮಕ್ಳು” ಮಳೆ ಬರುತ್ತೆ ಅಂತ ಸುಳ್ಳೇ ಹೇಳಿದ್ರು ಅಂತ ಆ ಗುಂಪಲ್ಲಿ ಇದ್ದ ಒಬ್ಬ ಹೇಳಿದ.ಆ ಪರಭಾಷಿಗರ ಮಧ್ಯೆ ಈ ಅಪ್ಪಟ ಪ್ರದೇಶಿ ಮಾತು ಕೇಳಿ ಕಿವಿ ಪಾವನವಾಯಿತು! ಆಮೇಲೆ ಅಲ್ಲಿಂದ ಎಲ್ಲ ಅವರವರ ಪಿಜಿ ಕಡೆ ಹೊರಟ್ವಿ.

ಮತ್ತೆ ಮರುದಿನ ಬೆಳಗ್ಗೆ 8 ಗಂಟೆಗೆ ಆಡಿಟೋರಿಯಂ ಅಲ್ಲಿ ಕೂತಿದ್ವಿ.2 ಗಂಟೆ ರುಬ್ಬಿ ಒಂದು ವಿರಾಮ ಕೊಟ್ಟರು. ನಾವು ಆರಾಮಾಗಿ ಕ್ಯಾಂಟೀನಿಗೆ ಹೋಗಿ ತಿಂಡಿ ತಿಂತಾ ಇರಬೇಕಾದರೆ, ದಯವಿಟ್ಟು ಗಮನಿಸಿ: ಇಂದು ಚೆನ್ನೈನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹಾಗಾಗಿ ತಾವೆಲ್ಲರೂ ಸುರಕ್ಷಿತ ಸ್ಥಳಗಳಿಗೆ ಹೋಗಬೇಕೆಂದು ವಿನಂತಿಸುತ್ತೇವೆ ಎಂದು ಮೈಕಿನಲ್ಲಿ ಹೇಳಿದರು.ಹೊರಗೆ ಜಿಟಿ ಜಿಟಿ ಬೀಳುತ್ತಿದ್ದ ಮಳೆ ನೋಡಿ,ಈ ಹುಚ್ಚ್ನನ್ನ ಮಕ್ಕಳಿಗೆ ಕೆಲ್ಸ ಇಲ್ಲೋಲೆ, ನೆನ್ನೇನೂ ಹಿಂಗೆ ಹೇಳಿದ್ರು ಅಂತ ಸರ್ವಸಮ್ಮತವಾಗಿ ಬೈದು ಹೊರಗೆ ಬಂದ್ವಿ.


ಅಷ್ಟೊತ್ತಿಗೆ ಮಳೆ ಕೊಂಚ ಬಿರುಸಾಗಿ ರಸ್ತೆಯಲ್ಲಿ ನೀರು ನಿಂತಿತ್ತು.ಸರಿ ಪಿಜಿಗೆ ಹೋಗಿ ಏನ್ಮಾಡೋದು ಅಂತ, ಪಕ್ಕದಲ್ಲಿ ಇದ್ದ ಅರವಿಂದ ಥಿಯೇಟರ್ಗೆ ಸಿನೆಮಾ ನೋಡೋಕೆ ಹೋದ್ವಿ.ಯಾವ ಸಿನೆಮಾ ಅನ್ನೋ ಯೋಚನೆ ಸಹ ಇರಲಿಲ್ಲ.ಅಂತೂ 2 ಗಂಟೆ ಸಿನೆಮಾ ಮುಗಿಸಿ ಹೊರಗಡೆ ಬಂದಾಗ ಒಂದು ಕ್ಷಣ ನಮ್ಮ ಕಣ್ಣನ್ನು ನಾವೇ ನಂಬಕಾಗಲಿಲ್ಲ!ಥಿಯೇಟರ್ ಒಳಗೆ ನೀರು ನುಗ್ಗಿದೆ, ನಾವು ಬಾಲ್ಕನಿಯಲ್ಲಿ ಇದ್ದ ಕಾರಣ ನಮಗೆ ಗೊತ್ತೇ ಆಗಿಲ್ಲ!ಅಂತೂ ಪ್ಯಾಂಟನ್ನು ಮಂಡಿವರೆಗೆ ಮಡಿಚಿ ಹೊರಗೆ ಬಂದ್ವಿ. ಮಳೆ ಇನ್ನು ಜೋರಾಗಿ ಹೊಯ್ತಾ ಇತ್ತು.ರಸ್ತೆಯಲ್ಲಿ ತುಂಬಾ ನೀರಿತ್ತು;ಬೈಕ್ ಎಲ್ಲ ಹೋಗೋಕೆ ಆಗ್ತಾ ಇರಲಿಲ್ಲ.ಕೆಲವು ಆಟೋಗಳು ತೀರಾ ನಿಧಾನವಾಗಿ ಬದಿಯಲ್ಲೇ ಹೋಗ್ತಾಯಿದ್ದವು.ನಾವೆಲ್ಲ ನಾಳೆ ಸಿಗೋಣ ಅಂತ ಹೇಳಿ ಹೊರಟೆವು.


ನಾನು ಒಂದು ಶೇರ್ ಆಟೋ ಹಿಡಿದು ಹೊರಟೆ. ಅವನು ಶೋಲಿಂಗನಲ್ಲುರು ಸರ್ಕಲ್ ಹತ್ರ ನಿಲ್ಲಿಸಿ ಮುಂದೆ ಹೋಗೋಕೆ ಆಗಲ್ಲ ಜಾಸ್ತಿ ನೀರಿದೆ ಅಂತ ಹೇಳಿದ.ನಾನು ಅಲ್ಲೇ ಇಳಿದೆ. ಮಳೆ ಹನಿಗಳು ಆಲಿಕಲ್ಲಿನ ತರ ತಲೆ ಮೇಲೆ ಬಿದ್ದಿದ್ದೆ ತಡ ಪಕ್ಕದಲ್ಲೇ ಇದ್ದ ಅಂಗಡಿಯೊಳಕ್ಕೆ ಓಡಿದೆ.ಅಲ್ಲಿಂದ ನಾನು ಇಳಿದ ಆಟೋ ಸಹ ಕಾಣ್ತಾ ಇರಲಿಲ್ಲ ಅಷ್ಟು ಧಾರಾಕಾರವಾಗಿ ಬರ್ರೆಂದು ಶಬ್ಧ ಮಾಡುತ್ತಾ ಮಳೆ ಸುರಿಯುತ್ತಿತ್ತು!ಈಗ ನಾನು ನಿಂತಿಂದ ರಸ್ತೆ ಪಕ್ಕದ ಅಂಗಡಿಗೆ ನೀರು ಅಷ್ಟು ನುಗ್ಗಿರಲಿಲ್ಲ!ಹಾಗೆ ಆಲೋಚಿಸಿದಾಗ ನನಗೆ ಹೊಳೆದದ್ದು OMR(ಓಲ್ಡ್ ಮಹಾಬಲಿಪುರಂ ರೋಡ್)ನ ಎಡ ಭಾಗ ಸ್ವಲ್ಪ ಉಬ್ಬಿದ್ದರೆ,ರೋಡಿನ ಬಲಭಾಗವೂ ಪೂರ್ತಿ ಇಳಿಜಾರಾಗಿದೆ.ಹಾಗಾಗಿ ಬಿದ್ದ ಮಳೆ ನೀರೆಲ್ಲ ಇಳಿಜಾರಿನ ಕಡೆ ಹರಿಯುತ್ತಿತ್ತು.ನಾನು ಅದೇ ಅಂಗಡಿಯಲ್ಲಿ ಅಂಬ್ರೆಲಾ ಕೊಡಿ ಎಂದು ಕೇಳಿದೆ. ಬೆಲೆ ಅವ್ನು ಹೇಳಿದ್ದು ನಾನು ಕೊಟ್ಟಿದ್ದು!.


ಅಲ್ಲಿಂದ ಕೊಡೆ ಹಿಡಿದು ಹೊರಗೆ ಬಂದೆ. ಒಂದು ಕೈಯಲ್ಲಿ ಕೊಡೆ,ಇನ್ನೊಂದು ಕೈಯಲ್ಲಿ ಬೂಟು ಮತ್ತೆ ಬೆನ್ನಿಗೆ ಬ್ಯಾಗ್ ಹಾಕೊಂಡು ಒಂದೊಂದೇ ಹೆಜ್ಜೆ ಮೊದಲು ತಡಕಿ ಇಡುತ್ತ ನಡೆದೆ. ಮೊದಲ್ನೆದಾಗಿ ಆ ನೀರಲ್ಲಿ ಜೋರಾಗಿ ನಡೆಯೋದು ಅಸಾಧ್ಯ, ಯಾಕಂದ್ರೆ ನೀರು ಮಂಡಿಗಿಂತ ಮೇಲೆ ಇತ್ತು.ಎರ್ಡ್ನೆದಾಗಿ ಎಲ್ಲಿಲ್ಲಿ ಗುಂಡಿ ಇದೆಯೋ ಯಾರಿಗೊತ್ತು!ಮಳೆ ಮಾತ್ರ ಬರ್ರೋ ಅಂತ ಸುರಿತಾನೆ ಇತ್ತು.ಹೀಗೆ ನಡೆದು ಪಿಜಿ ಸೇರೋವೊತ್ತಿಗೆ ಸಂಜೆಯಾಗಿತ್ತು!ಒಂದೂವರೆ ಕಿಲೋಮೀಟರ್ ನಡೆಯೋಕೆ ಕಮ್ಮಿ ಅಂದ್ರು ಒಂದೂವರೆ ಗಂಟೆ ತಗೊಂಡಿದ್ದೆ!ರೂಮಿಗೆ ಹೋದ್ರೆ ಕರೆಂಟ್ ಇಲ್ಲ.ಮೊಬೈಲ್ ಆಗಲೇ ಮಕ್ಕೊಂಡಿತ್ತು.ನಾನು ಈಗಲೇ ಬೆಂಗಳೂರಿಗೆ ಹೊರಡ್ತೀನಿ ಅಂದಿದ್ದಕ್ಕೆ, ರಾಘು ಈ ಮಳೇಲಿ ಹೆಂಗೋಗ್ತೀಯ?ಬಸ್ಸು ಸಿಕ್ಕಿಲ್ಲ ಅಂದ್ರೆ ಏನ್ಮಾಡ್ತೀಯಾ ? ಬೆಳಗ್ಗೆ ಎದ್ದು ಹೋಗು ಅಂತ ಊಟಕ್ಕೆ ಕೂತಾಗ ಹೇಳಿದ.ನಾನು ಸರಿ ಅಂತ ಮೇಲೆ ರೂಮಿಗೆ ಬಂದು ಹಾಸಿಗೆ ಮೇಲೆ ಮಲಗಿದ್ದಷ್ಟೆ ಗಾಢ ನಿದ್ರೆ ಹತ್ತಿತ್ತು.


ಬೆಳಗ್ಗೆ ಎದ್ದು ಬೆಂಗಳೂರಿಗೆ ಹೋಗೋಕೆ ಅಂತ ಪಿಜಿ ಹೊರಗೆ ಬಂದ್ರೆ ಅಲ್ಲಿ ಸೊಂಟದವರೆಗೆ ನೀರು ನಿಂತಿದೆ!ತಲೆ ಮೇಲೆ ಬ್ಯಾಗ್ ಹೊತ್ಕೊಂಡು ನಿಧಾನಕ್ಕೆ ಇಳಿದು ರಸ್ತೆಗೆ ದಾಟಿದೆ.ನನ್ನ ಅವತಾರ ನೋಡಿ ರಾಘು ಬಿದ್ದು ಬಿದ್ದು ನಗ್ತಾ ಇದ್ದ.ನಾನು ಹಾಗೆ ನಡೆದುಕೊಂಡು OMR ರೋಡ್ ಹತ್ರ ಬಂದೆ.ಅಲ್ಲಿಂದ ಯಾವುದೋ ಒಂದು ಬಸ್ ಸಿಕ್ತು.ಅಲ್ಲಿಂದ ಮುಂದೆ ಕಾರಪಕ್ಕಂ ಗೆ ಹೋಗಿ ಇಳಿದೆ.ಒಂದೇ ರಾತ್ರಿಗೆ 5 ರೂಪಾಯಿ ಇದ್ದ ಚಾರ್ಜ್ 30 ರೂಪಾಯಿ ಆಗಿತ್ತು!ಅಲ್ಲಿ ಇಳಿದು ಸುತ್ತ ನೋಡಿದ್ರೆ ಎಲ್ಲ ಕಡೆ ಬರೀ ನೀರು ನೀರು.


ಆ ನೀರು ನೋಡಿದ ಮೇಲೆ ಈ ಲಗೇಜ್ ಎಲ್ಲ ಹೊತ್ಕೊಂಡು ಬೆಂಗಳೂರು ಸೇರೋದು ಕಷ್ಟ ಅನ್ಕೊಂಡು ಮೊಬೈಲ್ ನೋಡಿದೆ ಅದೃಷ್ಟವಶಾತ್ ಮೊಬೈಲ್ ಬದುಕಿತ್ತು! ಮೈಸೂರು ಫ್ರೆಂಡ್ ಕಿರಣ್ ಗೆ ಫೋನ್ ಮಾಡಿ ,ಬ್ಯಾಗ್ ನಿನ್ನ ಪಿಜಿಯಲ್ಲಿ ಇಡ್ತೀನಿ,ಇದನ್ನೆಲ್ಲ ಹೊತ್ಕೊಂಡು ಹೋಗೋದು ಕಷ್ಟ ಅಂದೆ. ಸರಿ,ವಾಪಸ್ ಬಂದ್ಮೇಲೆ ಹೆಂಗೂ ಇಲ್ಲಿಗೆ ಬರ್ತೀಯಲ್ಲ ಬಾ ಅಂತ ಹೇಳಿದ.ನಾನು ಹೋಗಿ ಪಿಜಿ ಯಜಮಾನನಿಗೆ ಪುನಃ ವಾಪಸ್ ಬಂದಾಗ ಇಲ್ಲೇ ಇರ್ತೀನಿ ಅಂತ ಹೇಳಿದೆ.ಅವ್ರು ಸರಿ ಅಂತ ಹೇಳಿ ತಿಂಡಿ ತಿನ್ನು ಅಂತ ಹೇಳಿದ್ರು.ಸರಿ ಅಂತ ಸ್ವಲ್ಪ ತಿಂದು ಬ್ಯಾಗ್ ಎಲ್ಲ ಲಾಕರಲ್ಲಿ ಇಟ್ಟು,ನಾನು ಕಿರಣ್ ಹೊರಟ್ವಿ.


ಸುಮಾರು ದೂರ ನಡ್ಕೊಂಡು ಹೋಗಿ ಒಂದು ಬಸ್ ಸ್ಟ್ಯಾಂಡ್ ಹತ್ರ ನಿಂತ್ವಿ.ನೋಡಿದ್ರೆ ರೋಡೆ ಕಾಣ್ತಾ ಇಲ್ಲ ಬರೀ ನೀರು.ಒಂದು ಬಸ್ಸು ಬಂತು ಕೊಯಂಬೀಡು ಹೋಗ್ಬೇಕು ಅಂದ್ರೆ,ಅವನು ಎಲ್ಲ ರೋಡ್ ಬ್ಲಾಕ್ ಆಗಿವೆ ತಿರುವನ್ಮಾಯೂರೂ ಹೋಗ್ತೀವಿ ಅಲ್ಲಿಂದ ಬೇರೆ ಬಸ್ ನೋಡಿ ಅಂತ ತಮಿಳಲ್ಲಿ ಹೇಳಿದ. ಅದ್ರಲ್ಲಿದ್ದ ಎರಡು ಮೂರು ಇಂಗ್ಲೀಷ್ ಪದಗಳ ಆಧಾರದಲ್ಲಿ ಅವನು ಹೇಳಿದ್ದು ಅರ್ಧಂಬರ್ಧ ಅರ್ಥ ಆಯ್ತು.ಅಲ್ಲಿಂದ 5 ಕಿಲೋಮೀಟರ್ ಹೋಗೋಕೆ 100 ತಗೊಂಡ!ಅಲ್ಲಿ ಮತ್ತೆ ಇಳಿದು ಚೆನ್ನೈ ಸೆಂಟ್ರಲ್ ಗೆ ಹೋಗೋ ಬಸ್ ಹತ್ತಿದ್ವಿ.ಅಲ್ಲಿಂದ ಯಾವುದಾದ್ರೂ ರೈಲು ಸಿಕ್ಕಿದ್ರೆ ಬೆಂಗಳೂರಿಗೆ ಹೋಗೋಣ ಅಂತ.


ರಾತ್ರಿ ಆದ ಆ ಭಾರಿ ಮಳೆಗೆ ಚೆನ್ನೈ ತತ್ತರಿಸಿ ಹೋಗಿತ್ತು.ಎಷ್ಟೋ ಜನರ ಬದುಕು ರಾತ್ರೋರಾತ್ರಿ ಬೀದಿಗೆ ಬಂದಿತ್ತು.ಮನೆಯೊಳಕ್ಕೆ ನುಗ್ಗಿದ ನೀರನ್ನು ಹೊರಗೆ ಉಗ್ಗುತ್ತಿದ್ದ ಜನ ಒಂದು ಕಡೆ, ನೆಲಮಹಡಿಯೆಲ್ಲ ಮುಳುಗಡೆಯಾಗಿ ಹೊರಬರಲಾರದೆ ತಮ್ಮನ್ನು ಕೊಂಡೊಯ್ಯಲು ಬರುತ್ತಿದ್ದ ದೋಣಿಗಾಗಿ ಮೇಲ್ಮಹಡಿಯಲ್ಲಿ ಕಾಯುತ್ತಿದ್ದ ಜನ ಒಂದು ಕಡೆ,ತನ್ನ ಜಾಗವನ್ನು ಆಕ್ರಮಿಸಿದ ಜನರನ್ನು ಹೊರಗೆ ನಿಲ್ಲಿಸಿದೆ ಎಂದು ಭೋರ್ಗರೆದು ಹರಿಯುತ್ತಿದ್ದ ನೀರು ಒಂದು ಕಡೆ,ಇಷ್ಟೆಲ್ಲದರ ಮಧ್ಯೆ ಅಲ್ಲಿಲ್ಲಿ ತೂರಿಕೊಂಡು ನಮ್ಮ ಬಸ್ಸು ಸಾಗರದಲ್ಲಿ ತೇಲುತ್ತಿರುವ ಪುಟ್ಟ ದೋಣಿಯಂತೆ ಸಾಗುತ್ತಿತ್ತು!


ನೀರಲ್ಲಿ ಮುಳುಗಡೆಯಾದ ಪುಟ್ಟ ಮನೆಗಳು ಸಹ ನೀರಿನಲ್ಲಿ ತೇಲುತ್ತಾ ಇರೋ ತೆಪ್ಪಗಳಂತೆ ಕಾಣುತ್ತಾ ಇದ್ದವು.ಇಷ್ಟೆಲ್ಲಾ ಕಣ್ಣಿಗೆ ಕಾಣುವ ಸನ್ನಿವೇಶಗಳಾದರೆ,ಮನಸ್ಸು ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಅಲ್ಪ ಎಂಬ ಆಲೋಚನೆಯಲ್ಲಿ ಮುಳುಗಿತ್ತು.ಅಂತೂ ಚೆನ್ನೈ ಸೆಂಟ್ರಲ್ ತಲುಪಿದಾಗ ಹೊತ್ತು ನೆತ್ತಿಗೇರಿ ಬೆವರಿಳಿಯುತ್ತಿತ್ತು!ರಾತ್ರಿ ಎಲ್ಲ ಧಾರಾಕಾರವಾಗಿ ಮಳೆಯಾಗಿದ್ದರೂ ಬೆಳಗ್ಗೆ ಈ ತರ ವಾತಾವರಣಕ್ಕೆ ಕಾರಣ ಆರ್ದ್ರತೆ.ಬೆಂಗಳೂರಿನ ಜನರಿಗೆ ಇದು ವಿಚಿತ್ರವೆನಿಸಿದರು ಚೆನ್ನೈ ಜನರಿಗೆ ಇದು ಸಾಮಾನ್ಯ ಸಂಗತಿ.ಚೆನ್ನೈ ಸೆಂಟ್ರಲಿನಲ್ಲಿ ವಿಚಾರಿಸಿದಾಗ ರೈಲು ಸಂಚಾರವನ್ನು ರಾತ್ರಿ ಸ್ಥಗಿತಗೊಳಿಸಲಾದ ವಿಷಯ ತಿಳಿಯಿತು!ಜನ ಸಾಗರೋಪಾದಿಯಲ್ಲಿ ನೆರೆದಿದ್ದರು.ಕಣ್ಣು ಹಾಯಿಸಿದಷ್ಟು ದೂರ ಬರೀ ತಲೆಗಳೆ ಕಾಣುತ್ತಿದ್ದವು!ಇಷ್ಟು ತಲೆಗಳಲ್ಲಿ ನಮ್ಮದು ಎರಡು! ಚಿಕ್ಕ ಕಾರು ಮತ್ತೆ ಆಟೋಗಳು ಆ ನೀರಿನಲ್ಲಿ ಸಂಚರಿಸಲು ಸಾಧ್ಯವೇ ಇರಲಿಲ್ಲ.ನಾವು ಬರುವ ವಾಹನಗಳಿಗೆ ಕೈ ಅಡ್ಡ ಹಾಕಿ ಕೋಯಾಂಬೀಡು ಅಂದು ಅಂದು ಸಾಕಾಯ್ತು!


ಅಲ್ಲಿ ನೆರೆದಿದ್ದ ಕೆಲವರು ತಲೆಗೆ ಒಂದು ಸಾವಿರ ರೂಪಾಯಿ ಕೊಡ್ತೀವಿ, ನಮ್ಮನ್ನ ಬಸ್ ಸ್ಟ್ಯಾಂಡ್ ಗೆ ಬಿಡಿ ಎಂದು ಕೇಳುತ್ತಿದ್ದರು.ಇಂತಹ ಪರಿಸ್ಥಿತಿಯಲ್ಲು ದುಡ್ಡು ನಮ್ಮನ್ನ ಕಾಪಾಡುವುದು ಎಂಬ ಆಲೋಚನೆ ಮನುಷ್ಯನದ್ದು! ಒಮ್ಮೆಲೆ ಟೈಟಾನಿಕ್ ಚಿತ್ರದ ಕೊನೆ ದೃಶ್ಯ ನೆನಪಾಯಿತು.ಆ ತರ ಆಮಿಷ ಒಡ್ಡೋಕೆ ನನ್ನ ಹತ್ರ ಅಷ್ಟು ಹಣ ಇರಲಿಲ್ಲ.ಮತ್ತೆ ಮಳೆಯಿಂದಾಗಿ ಎಲ್ಲ ಎಟಿಎಂಗಳಲ್ಲಿ ನೀರು ನುಗ್ಗಿ ಎಲ್ಲ ಮಲಗಿದ್ದವು!ಈಗ ನನ್ನ ಖರ್ಚು ಸಹ ಕಿರಣ್ ನೋಡ್ಕೋತಿದ್ದ.ಅಷ್ಟೊತ್ತಿಗೆ ಯಾವುದೋ ಒಂದು ಟೆಂಪೋ ನಿಲ್ಲಿಸಿತು. ನಾವು ಓಡಿ ಹೋಗಿ ಹೆಂಗೋ ಹತ್ತಿದ್ವಿ! ಅಂತೂ ಆ ಟೆಂಪೋ ರಸ್ತೆಯ ಒಂದು ಬದಿಯಲ್ಲಿ ನಿಧಾನಕ್ಕೆ ಸಾಗುತ ಹೊರಟಿತು.ಆಗಲೇ ಮಳೆ ಜಿನಿ ಜಿನಿ ಅಂತ ಶುರುವಾಗಿತ್ತು.ಇದು ಇನ್ನಷ್ಟು ಭಯ ಹುಟ್ಟಿಸಿತು.


ಅಂತೂ ಹೇಗೋ ಕೊಯಾಂಬೀಡು ತಲುಪಿದಾಗ ಸಂಜೆ 4 ಗಂಟೆ!.ಬಸ್ ಸ್ಟಾಂಡಿನ ಒಳಗೆ ಹೋಗಿ ವಿಚಾರಿಸಿದಾಗ ಸದ್ಯಕ್ಕೆ ಯಾವ ಬಸ್ಸು ಇಲ್ಲ ಅಂತ ಹೇಳಿದ್ರು!ತಮಿಳುನಾಡು ಸಾರಿಗೆ ಮತ್ತೆ ಆಂಧ್ರ ಸಾರಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.ನಮ್ಮನ್ನ ಕೈ ಹಿಡಿಯೋಕೆ ಇದ್ದದ್ದು ಈಗ ಕರ್ನಾಟಕ ಸಾರಿಗೆ ಮಾತ್ರ!ನಾವು,ನಿಂತಿದ್ದ ಎಲ್ಲ ಬಸ್ಸು ಹತ್ರ ಹೋಗಿ ಬೆಂಗಳೂರು ಹೋಗುತ್ತಾ,ಬೆಂಗಳೂರಿಗೆ ಹೋಗುತ್ತಾ ಅಂತ ಕೇಳಿದ್ವಿ ,ಸಿಕ್ಕಿದ್ದು ಒಂದೇ ಉತ್ತರ ಹೋಗಲ್ಲ ಅಂತ!.ಯಾವುದಾದರೂ ಬಸ್ಸು ಬಂದ್ರೆ ಸಾಕು ಹಿಂದೆ ಓಡಿ ಹೋಗ್ತಿದ್ವಿ,ಅದು ಬೆಂಗಳೂರಿಗೆ ಹೋಗಲ್ಲ ಅಂತ ಗೊತ್ತಾದ ಮೇಲೆ ವಾಪಸ್ ಬರ್ತಾ ಇದ್ವಿ.ಹಿಂಗೆ ಸಾಹಸ ಮಾಡ್ತಾ ಇರಬೇಕಾದರೆ ನನ್ನ ತಲೆಗೆ ಒಂದು ಐಡಿಯಾ ಬಂತು.ಬೆಂಗಳೂರಿಗಲ್ಲ ಚೆನ್ನೈ ಬಿಟ್ಟು ಯಾವ ಸುಡುಗಾಡು ಆದ್ರೂ ಪರವಾಗಿಲ್ಲ ಹೋಗಿ ಆಮೇಲೆ ಅಲ್ಲಿಂದ ಬೆಂಗಳೂರಿಗೆ ಹೋಗೋದು ಅಂತ!ಆದ್ರೆ ಆ ಐಡಿಯಾ ಕೂಡ ಕೈಬಿಡಬೇಕಾಯಿತು ಯಾಕಂದ್ರೆ KSRTC ಬಿಟ್ಟರೆ ಬೇರೆ ಯಾವ ಬಸ್ಸು ಓಡಾಡ್ತಾ ಇರಲಿಲ್ಲ!ಹಿಂಗೆ ಅಲೆದು ಅಲೆದು ಸುಸ್ತಾಗಿ ನಿಂತಾಗ ಹಿಂದಿಂದ ಒಂದು ಅಶರೀರವಾಣಿ "ಯಾವ್ ಹುಚ್ಚ್ಸುಳೆಮಗಂದ್ಲೆ ಯಪ್ಪಾ ಈ ಮಳೆ " ಅಂದಿದ್ದು ಕೇಳಿಸಿತು.ಅದು ಕೇಳಿದ್ದೆ ತಡ ಮೈಯಲ್ಲಿ ಒಂಥರಾ ಶಕ್ತಿ ಬಂದಂತಾಯ್ತು.ನಮ್ಮವರು ಯಾರೋ ಇದಾರೆ ಅಂತ!.ತಿರುಗಿ ನೋಡಿದ್ರೆ 4 ಜನ ನಿಂತಿದ್ರು, ಮಾತಾಡಿಸಿದಾಗ ಎಲ್ಲ ಬೆಳಗಾವಿಯವ್ರು ಅಂತ ಗೊತ್ತಾಯ್ತು.


ಬರೋ ಬಸ್ಸು ಹಿಂದೆ ಮುಂಚೆ ಇಬ್ಬರೂ ಓಡ್ತಾ ಇದ್ವಿ,ಇವಾಗ 6 ಜನ ಓಡೋಕೆ ಶುರು ಮಾಡಿದ್ವಿ!ಮತ್ತೆ ಇನ್ನೊಂದು ಸಲ ನಿಂತಿರೋ KSRTC ಬಸ್ಸು ಹತ್ರ ಹೋಗಿ,ಸಾರ್ ಬೆಂಗಳೂರಿಗೆ ಹೋಗುತ್ತಾ ಅಂತ ಕೇಳೋಕೆ ಶುರು ಮಾಡಿದ್ವಿ;ನಮ್ಮಂತಹ ಸುಮಾರು ಜನದ ಪ್ರಶ್ನೆಗೆ ಉತ್ತರ ಕೊಟ್ಟು ಬೇಸತ್ತಿದ್ದ ಕಂಡಕ್ಟರ್ ಇಲ್ಲ ಹೋಗ್ರಯ್ಯ, ಒಂದ್ಸಲ ಹೇಳಿದ್ರೆ ಅರ್ಥ ಆಗಲ್ವಾ? ಹೋಗುತ್ತೆ ಅಂತ ಹೇಳಿದ್ರೆ ಇವಾಗ್ಲೇ ಎಲ್ಲ ನುಗ್ತೀರಾ ಅಂದ!.ಈಗ ಮತ್ತೆ ಸಾರ್ ಅನ್ನೋದನ್ನ ಕಿತ್ತಾಕಿ, ಅಣ್ಣಾ ನಿಜವಾಗ್ಲೂ ಹತ್ತಲ್ಲ,ಇಲ್ಲಿ ನಿಲ್ಲೋದು ಇಲ್ಲ,ಯಾವಾಗ ಹೊರುಡುತ್ತೆ ಹೇಳಿ ಅಂತ ಅಂಗಲಾಚೋ ದನಿಯಲ್ಲಿ ಕೇಳಿದ್ವಿ.ಮಾತೃಭಾಷೆಯಲ್ಲಿ ಅಲ್ವೇ ಅವನಿಗೂ ಎಲ್ಲೋ ಒಂದು ಕಡೆ ಕರುಣೆ ಬಂದು 5 ಗಂಟೆಗೆ ಆ ಪ್ಲಾಟಫಾರ್ಮ್ ಹತ್ರ ಬರ್ತೀನಿ; ಎಲ್ಲ ಸೀಟು ಖಾಲಿ ಇವೆ; ಯಾರಿಗೂ ಹೇಳ್ದಂಗೆ ಸುಮ್ನೆ ಹೋಗಿ ಅಲ್ಲಿ ನಿಲ್ಲಿ ಅಂದ! ಆಗ ಅವನು ನಮ್ಮ ಮುಂದೆ ಇರೋ ದೇವರು ತರ ಕಂಡ. ಅವ್ನು ಹೇಳಿದ ಹಾಗೆ ಪ್ಲಾಟಫಾರ್ಮ್ ಹತ್ರ ಹೋದ್ವಿ.ಅಲ್ಲಿ ನಿಂತು ಎಲ್ಲ ಒಟ್ಟಾಗಿ, ಆ ಬಸ್ ಬರ್ತಾ ಇದ್ದಂಗೆ ನಾವು ಎಲ್ಲ ಒಟ್ಟಿಗೆ ನುಗ್ಗಿ ಎಲ್ಲರೂ ಸೀಟು ಹಿಡಿಬೇಕು;ಮತ್ತೆ ಆ ಬಸ್ಸು ಬರುತ್ತೆ ಅಂತ ಯಾರಿಗೂ ಗೊತ್ತಾಗದ ಹಾಗೆ ಇರಬೇಕು ಅಂತ ಒಪ್ಪಂದಕ್ಕೆ ಪೆನ್ನಿಲ್ಲದೆ ಸಹಿ ಹಾಕಿದ್ವಿ!


ಈಗ ನಮ್ಮ ಮುಖದಲ್ಲಿ ಇದ್ದ ಭಾವ ನೋಡಿದ್ರೆ ಎಂಥವರಿಗೂ ಗೊತ್ತಾಗೋದು ಇವ್ರು ಖುಷಿಯಾಗಿದ್ದಾರೆ ಅಂತ.ಹಾಗೆ ಮಾತಾಡ್ತಾ ಮಾತಾಡ್ತಾ ಹೋಗಿ ಆ ಕಂಡಕ್ಟರ್ ಹೇಳಿದ ಪ್ಲಾಟ್ ಫಾರ್ಮ್ ಹತ್ರ ಗುಂಪಾಗಿ ನಿಂತ್ವಿ.ಬೇರೆ ಯಾರು ಮುಂಚೆನೇ ದಾಳಿ ಮಾಡಬಾರದು ಅನ್ನೋ ಹಾಗೆ!ಬಸ್ಸು ಚಾಲೂ ಮಾಡಿದ್ದೆ ತಡ ಇಷ್ಟೊತ್ತು ಸುಮ್ನೆ ಇದ್ದ ಜನ ಒಮ್ಮೆಲೆ ಎಚ್ಚೆತ್ತರು!ನಾವು ಮುಂಚೆನೇ ರೊಚ್ಚಿಗೆದ್ದಿದ್ವಿ ಹಾಗಾಗಿ ಕಂಡಕ್ಟರ್ ಬಾಗಿಲು ತಗ್ಯೋದೆ ತಡ ಈ ಕುರಿಗಳು ಹಟ್ಟಿಗೆ ನುಗ್ಗೊ ಹಾಗೆ ನುಗ್ಗಿ ಸಿಕ್ಕಿದ್ದ ಸೀಟ್ ಇಡ್ಕೊಂಡು ಕೂತ್ವಿ!.


ಅಷ್ಟೊತ್ತಿಗೆ ಒಬ್ಬ ಅಕ್ಕ ಮಗು ಎತ್ಕೊಂಡು ಬಂದು ಸೀಟ್ ಕೇಳಿದ್ರು ,ಅಂತಹ ಪ್ರವಾಹದ ಸಮಯದಲ್ಲೂ ಮಾನವೀಯತೆ ಮೆರೆದು ನಾವು ಹಿಡಿದಿದ್ದ ಒಂದು ಸೀಟ್ ಬಿಟ್ಟು ಕೊಟ್ವಿ.ಯಾಕಂದ್ರೆ ಇರೋ 6 ಜನಕ್ಕೆ ಅರ್ಧ ಬಸ್ ಸೀಟ್ ನಾವೇ ಹಿಡ್ಕಂಡಿದ್ವಿ!ಅಂತೂ ಬಸ್ಸು ಹೊರಟಿತು ಬೆಂಗಳೂರಿಗೆ.ಕಿಟಕಿಯಿಂದ ಹೊರಗೆ ನೋಡ್ತಾ ಕೂತೆ,ದಾರಿಯಲ್ಲಿ ಎಷ್ಟೋ ಕಡೆ ನೀರಿನ ರಭಸಕ್ಕೆ ಸೇತುವೆಗಳು ಕೊಚ್ಚಿ ಹೋಗಿದ್ದವು.ಸುಮಾರು ಒಂದು ಗಂಟೆ ನಂತರವೂ ಸುತ್ತ ಎತ್ತ ಕಣ್ಣು ಹಾಯಿಸಿದರೂ ಕಾಣುತ್ತಿದ್ದದ್ದು ಬರೀ ನೀರು ಮಾತ್ರ!ಬೆಳಗ್ಗೆಯಿಂದ ಮಳೆಯಲ್ಲಿ ನೆಂದು, ಓಡಾಡಿ ಸುಸ್ತಾಗಿದ್ದ ನಮಗೆ ಒಳ್ಳೆ ನಿದ್ರೆ ಹತ್ತಿತು.


ಒಂದು ಕಡೆ ಬಸ್ ನಿಲ್ಲಿಸಿ ಊಟ ಮಾಡೋಕೆ ಟೈಮಿದೆ ಅಂದಾಗಲೇ ನಂಗೆ ಎಚ್ಚರವಾಗಿದ್ದು.ಕೆಳಗಿಳಿದು ನೋಡಿದರೆ ಕನ್ನಡ ಬೋರ್ಡ್ ಕಾಣಿಸಿತು!ಅಂದ್ರೆ ನಾವು ಆಗಲೇ ಕರ್ನಾಟಕ ಒಳಗೆ ಬಂದಿದ್ವಿ.ಕಿರಣ್ ಮೊಬೈಲ್ ಇನ್ನೂ ಜೀವಂತವಾಗಿತ್ತು,ಮನೆಗೆ ಕರೆಮಾಡಿ ಹೇಳಿದೆ ನಾನು ಬೆಂಗಳೂರಿಗೆ ವಾಪಸ್ ಬರ್ತಾ ಇದ್ದೀನಿ,ಚೆನ್ನೈಯಲ್ಲಿ ಪ್ರವಾಹ ಆಗಿದೆ ಅಂತ.ಅದೃಷ್ಟವಶಾತ್ ಆ ದಿನ ಮಾತೃಶ್ರೀ ಅವ್ರು ಟಿವಿ9 ಮತ್ತೆ ಸುವರ್ಣ ಚಾನಲ್ ನೋಡಿರಲಿಲ್ಲ!ಇಲ್ಲ ಅಂದಿದ್ದರೆ ,ಇವರು TRP ಗೋಸ್ಕರ ತೋರಿಸಿದ್ದನ್ನೆ ತೋರಿಸಿ ,ನೀರಲ್ಲಿ ನಿಂತ್ಕೊಂಡು ನಾನು ಹೇಗೆ ಮುಳುಗ್ತಾ ಇದ್ದೀನಿ ನೋಡಿ ಹೀಗೆ ಚೆನ್ನೈ ಮುಳುಗ್ತ ಇದೆ ಅಂತ ಆಡೋ ಇವರ ದೊಂಬರಾಟ ನೋಡಿ ಎದೆ ಹೊಡ್ಕೊಂಡಿರೋರು!. ಆ ಹೋಟೆಲಲ್ಲಿ ಊಟ ಮಾಡಿ ಮತ್ತೆ ಬಸ್ಸು ಹತ್ತಿದ್ವಿ.


ಕಿರಣ್ ಬೆಂಗಳೂರಿನ ಕೆ ಆರ್ ಪುರಂ ಅಲ್ಲಿ ಇಳಿದ.ನಾನು ಮೈಸೂರು ಬ್ಯಾಂಕ್ ಸರ್ಕಲ್ ಅಲ್ಲಿ ಇಳಿದಾಗ ರಾತ್ರಿ 12 ಗಂಟೆಯಾಗಿತ್ತು.ನಮ್ಮ ನೆರೆಯಲ್ಲಿ ಸಿಕ್ಕ ಗೆಳೆಯ ರವಿ, ಕೇದಾರ್ ಮತ್ತೆ ಇನ್ನೂ ಇಬ್ಬರಿಗೆ ಕೈ ಬೀಸಿ ಹೊರಟೆ.ಅಲ್ಲಿಂದ 5 ನಿಮಿಷ ನಡೆದರೆ ನಮ್ಮ ಯುವಿಸಿಇ ಹಾಸ್ಟೆಲ್ ಸಿಗುತ್ತೆ,ಅಲ್ಲಿಗೆ ಹೋದೆ.ಎದುರಿಗೆ ಒಬ್ಬ ಸಿಕ್ಕಿ ಏನಾ!ನೀನು ಚೆನ್ನೈಗೆ ಹೋಗ್ತೀನಿ ಅಂದಿದ್ದೆ ,ಯಾಕೆ ಹೋಗ್ಲಿಲ್ವ ಅಂದ.ಹೋಗಿದ್ದೆ…ಇವಾಗ ಅಲ್ಲಿಂದ ಬಂದೆ... ಕಣೋ ಅಂತ ಹೇಳಿ ರೂಂ 47 ಕ್ಕೆ ಹೋದೆ.ಡಿಗ್ರೀ ಮುಗಿಸಿ 6 ತಿಂಗಳಾದರೂ ನನ್ನ ಬೆಡ್ ನನಗಾಗಿ ಖಾಲಿ ಇತ್ತು!.ಎಲ್ಲ ಆಗ್ಲೇ ಮಲಗೋಕೆ ತಯಾರಾಗಿದ್ರು, ಹಂಚಿ ಇದ್ದೋನು ಏನ್ ಸಾರ್, ಭಾರಿ ಮಳೆ ಅಲ್ಲ ನೀವು ಹೋಗಿದ್ದ ಕಡೆ, ನಮ್ಮೂರು ಕೊಪ್ಪಳ ಕಡೆ ಬನ್ನಿ ಸಾರ್ ಮಳೆ ಇಲ್ಲ ಅಂತ ಸಾಯ್ತಾ ಇದ್ದೀವಿ ಅಂತ ಚುಚ್ಚಿದ! ಲೋ ನಾನು ಕಾಲಿಟ್ಟ ಕಡೆ ಮಳೆ ಅಲ್ಲ ಕಣೋ ಪ್ರವಾಹ ಕೊಚ್ಚಿ ಹೋಗ್ತೀಯ ಸುಮ್ನೆ ಮಕ್ಕೊ ಬೆಳಗ್ಗೆ ಮಾತಾಡೋಣ ಅಂತ ಹೇಳಿ ಮಲಗಿದೆ.


ಬೆಳಗ್ಗೆ ನಿದ್ದೆಯಿಂದ ಎದ್ದ ಬಸ್ಯಾ" ಲೇ, ಹಂಚಿ ಸಾರ್ ಗೆ ಕಾಲ್ ಮಾಡ್ಲೇ,ಚೆನ್ನೈಯಲ್ಲಿ ಪ್ರವಾಹ ಅಂತೆ"ಅಂದ!.ಮುಚ್ಕೊಂಡು ಮಕ್ಕೊಲೇ ಅವ್ರು ರಾತ್ರೋರಾತ್ರಿ ಓಡಿ ಬಂದು ಅಲ್ಲೇ ಮಂಚದ ಮೇಲೆ ಬಿದ್ದವ್ರೆ ನೋಡು ಅಂತ ಹೇಳಿ ಮತ್ತೆ ಇನ್ನೊಮ್ಮೆ ಚುಚ್ಚಿದ!.ನಾನು ನಿದ್ದೆಗಣ್ಣಲ್ಲೆ , ಬಿಡೋ ಹಂಚಿ ನೊಂದಿರೋ ಜೀವಕ್ಕೆ ಪದೇ ಪದೇ ಯಾಕೆ ಚುಚ್ಚ್ತೀಯ ಅಂದೆ!



Rate this content
Log in

Similar kannada story from Drama