ಪ್ರೀತಿಯೆಂದರೆ ಇದುವೇ?!
ಪ್ರೀತಿಯೆಂದರೆ ಇದುವೇ?!
ನಿತಿನ್ ಉದ್ಯೋಗಸ್ಥ ಹುಡುಗ, ಅವನ ಮನೆಯಲ್ಲಿ ತಂದೆ ತಾಯಿಯರೊಂದಿಗೆ ವಾಸವಾಗಿದ್ದ, ತಂದೆ ತಾಯಿಗೆ ಅವನೊಬ್ಬನೇ ಹುಡುಗ ಹಾಗಾಗಿ ಅವನನ್ನು ತುಂಬಾ ಮುದ್ದಿನಿಂದ ಬೆಳೆಸಿದ್ದರು ಕೂಡ!!, ಸಣ್ಣ ವಯಸ್ಸಿನಲ್ಲಿಯೇ ಅವನು ಬಯಸಿದ್ದೆಲ್ಲವೂ ಕೂಡ ಸಿಗುತ್ತಿತ್ತು ನಿತಿನ್ ಗೆ, ನಿತಿನ್ ಸಾಮಾನ್ಯ ಸ್ಥಿತಿ ಗತಿಯಿರುವ ಕುಟುಂಬದಲ್ಲಿ ಬೆಳೆದಿದ್ದರೂ ಕೂಡ ಆತನ ಅಪ್ಪ, ಅಮ್ಮ ಕಷ್ಟ ಪಟ್ಟಾದರೂ ಆತನ ಬಯಕೆ, ಆಸೆಗಳನ್ನು ಈಡೇರಿಸುತ್ತಿದ್ದರು, ತಮ್ಮ ಕಷ್ಟಗಳು ಮಗನ ಅರಿವಿಗೆ ಬಾರದಂತೆ ಬೆಳೆಸಿದ್ದರು ನಿಖಿಲ್ ನನ್ನು ಅವನ ಅಪ್ಪ ಅಮ್ಮ, ಹಾಗೆಯೇ ಎಲ್ಲಾ ತಂದೆ ತಾಯಿಯರಂತೆ ನಿಖಿಲ್ ನ ಅಪ್ಪ ಅಮ್ಮ ಕೂಡ ಕಷ್ಟಗಳೆಲ್ಲಾ ನಮ್ಮ ಪಾಲಿಗಿರಲಿ, ಸುಖದ ಜೀವನ ಮಗನಿಗಿರಲಿ ಎಂದು ಬಯಸಿದ್ದರು.
ನಿತಿನ್ ಬಯಸಿದ್ದನ್ನು ಎಲ್ಲಾ ಅಪ್ಪ, ಅಮ್ಮನಲ್ಲಿ ಕೇಳಿ ಪಡೆದುಕೊಳ್ಳುತ್ತಿದ್ದ ಆದರೆ ಆತನು ಬಯಸಿದ್ದನ್ನು ದೊರಕಿಸಿಕೊಡಲು ಅಪ್ಪ, ಅಮ್ಮ ಅದೆಷ್ಟು ಕಷ್ಟ ಪಟ್ಟಿರಬಹುದು ಎಂಬ ಊಹೆಯೂ ಕೂಡ ಆತನಿಗೆ ಇರಲಿಲ್ಲ!!, ಅವನು ಬಯಸಿದ ವಿದ್ಯೆಯೆಲ್ಲವನ್ನೂ ಆತನಿಗೆ ಕಲಿಸಿದ್ದರು ಕೂಡ ಆತನ ಅಪ್ಪ ಅಮ್ಮ.
ಹೀಗೆ ಬೆಳೆಯುತ್ತಾ ಹೋದಂತೆ ಅವನು ಮೌನಿಯಾಗತೊಡಗಿದ, ಅಪ್ಪ, ಅಮ್ಮನೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ, ಸ್ನೇಹಿತರೊಡನೆ ಹೊರಗಡೆ ಸುತ್ತಾಡಿ ಹೊರಗಡೆಯೇ ಊಟ, ತಿಂಡಿ ಮಾಡುತ್ತಿದ್ದ ಹೊರತು ಅಮ್ಮಾ ಅವನಿಗಾಗಿ ಪ್ರೀತಿಯಿಂದ ಅವನಿಗೆ ಇಷ್ಟವಾದ ತಿಂಡಿ, ಊಟ ತಯಾರಿಸಿದ್ದನ್ನು ಆತ ನಿರಾಕರಿಸುತ್ತಿದ್ದ!!, ನಾನು ಸ್ನೇಹಿತರೊಡನೆ ಹೊರಗಡೆ ತಿನ್ನುತ್ತೇನೆ ಎಂದು ಹೊರಗಡೆ ಗೆಳಯರ ಜೊತೆ ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ.
ಮಗನ ಈ ವರ್ತನೆಯಿಂದ ತಂದೆ ತಾಯಿಯ ಮನಸ್ಸಿಗೆ ಚೂರಿ ಇರಿದಂತಹ ಅನುಭವವಾಯಿತು, ಇತ್ತ ತನ್ನ ಪ್ರಾಣಕ್ಕಿಂತಲೂ ಜಾಸ್ತಿ ಮಗನನ್ನು ಪ್ರೀತಿಸುತ್ತಿದ್ದ ಆತನ ಅಮ್ಮಾ ದಿನಾಲೂ ಅವನು ಈ ದಿನವಾದರೂ ಮನೆಯಲ್ಲಿಯೇ ಊಟ, ತಿಂಡಿ ಮಾಡಬಹುದೆಂಬ ಭರವಸೆಯಲ್ಲಿ ಅವನಿಗಿಷ್ಟವಾದ ಊಟ, ತಿಂಡಿ ಮಾಡುತ್ತಿದ್ದರು ಹಾಗೂ ತಡರಾತ್ರಿಯವರೆಗೂ ಕೂಡ ತಾನು ಊಟ ಮಾಡದೇ ನಿತಿನ್ ಗಾಗಿ ಕಾಯುತ್ತಿದ್ದರು ಆತನ ಅಮ್ಮಾ!!, ಆದರೆ ಆತ ರಾತ್ರಿ ಬಂದೊಡನೆ ನಂದು ಊಟ ಆಯಿತಮ್ಮಾ ಎಂದು ಹೇಳಿ ಹೋಗಿ ಮಲಗಿ ಬಿಡುತ್ತಿದ್ದ ಆದರೆ ಒಂದು ದಿನವಾದರೂ ತನ್ನ ಅಮ್ಮನಲ್ಲಿ ನಿಂದು ಊಟ ಆಯಿತಾ ಅಮ್ಮಾ?, ನೀ ಯಾಕೆ ಇಷ್ಟು ತಡವಾದರೂ ಮಲಗದೆ ನನಗಾಗಿ ಕಾಯುತ್ತಿದ್ಯಾ ಎಂದು ಕೇಳಿರಲಿಲ್ಲ!!
ಅಪ್ಪ ಅಮ್ಮನ ನಿಷ್ಕಲ್ಮಶ ಪ್ರೀತಿ ನಿತಿನ್ ಗೆ ಅರಿವಾಗುತ್ತಿರಲಿಲ್ಲ ಆದರೆ ಪ್ರತಿ ವರ್ಷವೂ ಅವರಿಬ್ಬರ ಹುಟ್ಟು ಹಬ್ಬಕ್ಕೆ ಇರಬಹುದು ಅಥವಾ ಮದುವೆಯ ವಾರ್ಷಿಕೋತ್ಸವಕ್ಕೆ ಅಥವಾ ಅಪ್ಪಂದಿರ ದಿನ, ಅಮ್ಮಂದಿರ ದಿನ ಇಂತಹ ವಿಶೇಷವಾದ ದಿನಗಳಲ್ಲಿ ಮರೆಯದೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುತ್ತಿದ್ದ!!, ಅಪ್ಪ, ಅಮ್ಮನಿಗೆ ಉಡುಗೊರೆ ನೀಡುತ್ತಿದ್ದ!!, ಆದರೆ ಅಪ್ಪ, ಅಮ್ಮನಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅವನು ಹಾಕುವ ಸ್ಟೇಟಸ್, ಅವನು ಕೊಡುವ ಉಡುಗೊರೆಗಳಿಗಿಂತಲೂ ಮುಖ್ಯ ಅವನು ಅವರಿಗೆ ತೋರುವ ಪ್ರೀತಿ, ಕಾಳಜಿ, ಅವರನ್ನು ಅರ್ಥ ಮಾಡಿಕೊಳ್ಳುವ ಮನಸ್ಸು ಎಂಬುದು ಈತನಿಗೆ ಅರಿವಾಗುತ್ತಲೇ ಇರಲಿಲ್ಲ!!
ನಮ್ಮಲ್ಲಿಯೂ ಹಾಗೆಯೇ ಅಲ್ಲವೇ ಕೆಲವು ಜನರು ಅಪ್ಪ, ಅಮ್ಮನಲ್ಲಿ ಪ್ರೀತಿ, ಕಾಳಜಿ ತೋರಿ, ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳದೇ ವಿಶೇಷವಾದ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕುವುದು ಇರಬಹುದು ಅಥವಾ ಉಡುಗೊರೆ ಕೊಡುವುದು ಇರಬಹುದು ಮಾಡುತ್ತಿರುತ್ತಾರೆ ಆದರೆ ಈ ಪ್ರೀತಿ ಎನ್ನುವುದು ಒಂದು ದಿನದ ಮಟ್ಟಿಗೆ ಮಾತ್ರ ಸೀಮಿತವಾಗಿದ್ದರೆ ಸಾಕೇ??, ತಮ್ಮನ್ನು ಪೋಷಿಸಿ, ಬೆಳೆಸುವಲ್ಲಿ ಅಪ್ಪ, ಅಮ್ಮ ಪಟ್ಟ ಕಷ್ಟಗಳನ್ನು ಅರಿತುಕೊಂಡು ಅವರಿಗೆ ಪ್ರೀತಿ, ಕಾಳಜಿ ತೋರಿ ಅವರ ಮನಸ್ಸನ್ನು ಕೂಡ ಅರಿಯುವ ಪ್ರಯತ್ನ ಮಾಡಲೇ ಬೇಕಲ್ಲವೇ??
