Akshata Hegde

Drama Romance Inspirational

2  

Akshata Hegde

Drama Romance Inspirational

ನಿನ್ನಲ್ಲೇ ನಾನು..2

ನಿನ್ನಲ್ಲೇ ನಾನು..2

5 mins
201


ಆಕಳಿಸುತ್ತಲೆ ಎದ್ದಳು ಮಂದಾರಾ..


"ಅಯ್ಯೋ ಆಗಲೇ ಏಳು ಗಂಟೆ ಆಗಿಹೋಗಿದೆ.. ನಾನು ಒಂಬತ್ತು ಗಂಟೆಯೊಳಗೆ ಆಫೀಸ್ ಒಳಗೆ ಇರ್ಬೇಕು.. ಇಲ್ಲ ಅಂದ್ರೆ ಆ ದೂರ್ವಾಸ ಮುನಿ ಡ್ಯೂಪ್ಲಿಕೇಟ್ ನನ್ನ ಕೊಲೆ ಮಾಡೋಕು ಹೇಸಲ್ಲ.." ಎನ್ನುತ್ತಾ ಸ್ನಾನಕ್ಕೆ ಹೋದಳು.

ಬೇಗನೆ ಸ್ನಾನ ಮುಗಿಸಿಕೊಂಡು ರೆಡಿಯಾಗತೊಡಗಿದಳು.


ಕಪ್ಪು ಹಾಗು ತಿಳಿಗುಲಾಬಿ ಬಣ್ಣದ ಕುರ್ತಾ.. ಬಟ್ಟೆಯ ಮೇಲೆ ಬೆಳ್ಳಿ ಬಣ್ಣದ ಹೂವಿನ ಚಿತ್ತಾರವಿತ್ತು. ಕಪ್ಪು ಬಣ್ಣದ ಜೆಗ್ಗಿನ್ಸ್ ಹಾಕಿಕೊಂಡು, ಕುತ್ತಿಗೆಯ ಸುತ್ತಾ ಕಪ್ಪು ಹಾಗು ಬಿಳಿಯ ರಂಗಿನ ಸ್ಕಾರ್ಪ್ ಸುತ್ತಿಕೊಂಡಳು.

ಸುಂದರವಾಗಿ ಬಫ್ ಮಾಡಿಕೊಂಡು ಜುಟ್ಟ ಹಾಕಿಕೊಂಡಳು.


ಎಡಗೈಗೆ ಕಪ್ಪು ಬಣ್ಣದ ವಾಚ್ ಧರಿಸಿದಳು ಹಾಗು ಬಲಗೈಗೆ ಕಪ್ಪು ಬಣ್ಣದ ಬ್ರೆಸ್ಲೈಟ್ ಧರಿಸಿ., ಮುಖಕ್ಕೆ ತೆಳು ಮೇಕಪ್ ಮಾಡಿಕೊಂಡು ಸಣ್ಣ ಬಿಂದಿಯಿಟ್ಟು ತಿಂಡಿ ತಯಾರಿಸಲು ಶುರು ಮಾಡಿದಳು..


"ಮನೆಯಲಿ ಇದ್ದರೆ ಮ್ಯಾಗಿ.. ಚಿಂತೆಯೇ ಬೇಡ ಇನ್ನಾ.." ಎಂದು ಹಾಡುತ್ತ ಮ್ಯಾಗಿ ತಿಂದು ಕನ್ನಡಿಯಲ್ಲಿ ತನ್ನನ್ನು ಒಮ್ಮೆ ನೋಡಿ "ಮಂದು.. ಎಷ್ಟು ಚೆಂದ ಕಾಣ್ತಾ ಇದೀಯಾ.. ಆಹಾ! ನಿನ್ನ ದೃಷ್ಟಿ ನಿನಗೇ ತಾಕುತ್ತಲ್ಲೇ.." ಎಂದು ತನ್ನನ್ನು ತಾನೇ ಹೊಗಳಿಕೊಳ್ಳುತ್ತಾ ಸ್ಕೂಟಿ ಏರಿ ಹೊರಟಳು..


ಯಾಕೋ ಈ ದಿನ ಮಂದಾರ ಬಹಳ ಇಷ್ಟಪಟ್ಟು ತಯಾರಾಗಿದ್ದಳು. ಎಂದೂ ಇಷ್ಟು ಚೆಂದ ರೆಡಿಯಾದವಳೇ ಅಲ್ಲ.. ಇವತ್ತು ಮನಸಿಗೆ ಅನಿಸಿ ಸುಂದರವಾಗಿ ತಯಾರಾದಳು. ಮೊದಲೇ ಶ್ವೇತ ಸುಂದರಿಯಾಗಿದ್ದ ಅವಳು ಕಪ್ಪು ಬಣ್ಣದ ಧಿರಿಸಿನಲ್ಲಿ ಇನ್ನೂ ಹೊಳೆಯುತ್ತಿದ್ದಳು.. ಅವಳ ಇಷ್ಟವಾದ ಬಣ್ಣ ಕಪ್ಪು. light colour with black combination ಎಂದರೆ ಅವಳ ಇಷ್ಟ.. ಯಾವಾಗಲೂ ಅದೇ ತರನಾದ ಬಟ್ಟೆಗಳನ್ನು ಆರಿಸುತ್ತಿದ್ದಳು.


ಆಫೀಸ್ ಗೆ ಬಂದು ತನ್ನ ಜಾಗದಲ್ಲಿ ಆಸೀನಳಾದಳು. ಅವಳ ಕೆಲಸವನ್ನು ಮಾಡುತ್ತ ಕುಳಿತಳು. ಮಂದಾರ ಹೆಚ್ಚು ಮಾತನಾಡುವ ಹುಡುಗಿಯಲ್ಲ. ತನ್ನ ಕಂಪರ್ಟ್ ಜೋನ್ ಜೊತೆ ಮಾತ್ರ ಬಾಯಿಬಡುಕಿ ಆಗುತ್ತಿದ್ದಳು. ಉಳಿದವರ ಬಳಿ ಹಾಂ.. ಹೂಂ.. ಎಂದು ಮಾತು ಮುಗಿಸುತ್ತಿದ್ದಳು. ಅವಳ ಪ್ರಕಾರ ಗೆಳೆತನವನ್ನು ಎಲ್ಲರ ಜೊತೆಯೂ ಮಾಡಲಾಗುವುದಿಲ್ಲ.. ಕೇವಲ ನಗೆಯರಳಿಸಿ ಮಾತನಾಡುವುದು ಗೆಳೆತನ ಆಗುವುದೇ ಇಲ್ಲ. ಗೆಳೆಯರು ಅಂದರೆ ನೋವಿನಲ್ಲೂ ಸ್ವಂದಿಸುವವರಾಗ ಬೇಕು. ಗೆಳೆಯರ ಸಂತೋಷವನ್ನು ತನ್ನದೆಂದು ಖುಷಿ ಷಡಬೇಕು. ಜಗತ್ತೇ ತನ್ನ ಗೆಳೆಯನ ಉತ್ತಮ ಕಾರ್ಯದ ವಿರುದ್ಧ ನಿಂತರೂ ಗೆಳೆಯನ ಜೊತೆಯೇ ಇರಬೇಕು..


ಸುಭಾಷಿತದಲ್ಲಿ ಹೇಳುತ್ತಾರೆ..


ಪಾಪಾತ್ ನಿವಾರಯತಿ ಯೋಜಯತೇ ಹಿತಾಯ

ಗುಹ್ಯಂಚ ಗುಹತಿ ಗುಣಾನ್ ಪ್ರಕಟೀ ಕರೋತಿ

ಆಪದ್ಗತಂಚ ನ ಜಹಾತಿ ದದಾತಿ ಕಾಲೇ

ಸನ್ಮಿತ್ರ ಲಕ್ಷಣಮಿದಂ ಪ್ರವದಂತಿ ಸಂತಃ


ಅರ್ಥ ಏನೆಂದರೆ..


ಉತ್ತಮವಾದ ಗೆಳೆಯನು ತನ್ನ ಗೆಳೆಯನಲ್ಲಿರುವ ದೋಷಗಳನ್ನು ನಿವಾರಿಸಿ ಒಳ್ಳೆಯ ಕೆಲಸದಲ್ಲಿ ಯೋಜಿಸುತ್ತಾನೆ. ಆತನ ರಹಸ್ಯಗಳನ್ನು ಪ್ರಚುರಪಡಿಸದೇ ಒಳ್ಳೆಯ ಗುಣಗಳನ್ನು ಮಾತ್ರ ಪ್ರಕಟ ಮಾಡುತ್ತಾನೆ. ಆತನ ಕಷ್ಟಕಾಲದಲ್ಲಿ ಸಹಾಯಮಾಡುತ್ತಾನೆ. ಇದನ್ನೆ ಸನ್ಮಿತ್ರ ಲಕ್ಷಣ ಎಂದು ಸಂತರು ಹೇಳುತ್ತಾರೆ..


ಈ ರೀತಿ ಗೆಳೆಯರು ಉದ್ಯೋಗದಲ್ಲಿ ಮಂದಾರಾಳಿಗೆ ಯಾರೂ ದೊರೆತಿರಲಿಲ್ಲ. ಸೋನಮ್ ಜೊತೆ ಮಂದಾರ ಕ್ಲೋಸ್ ಇದ್ದರೂ ಅವಳೀಗ ಇಲ್ಲಿ ಕೆಲಸ ಮಾಡುತ್ತಿಲ್ಲ.. ಎಲ್ಲರ ಜೊತೆಯೂ ಮಿಂಗಲ್ ಆಗುವ ಆಸೆ ಮಂದಾರಾಳಿಗೂ ಇದೆ ಆದರೆ ಉಳಿದವರಿಗೆ ಇವಳ ರೂಪ, ಗುಣ ಹಾಗೂ ಕೆಲಸದಲ್ಲಿನ ಶ್ರದ್ಧೆ ನೋಡಿ ಹೊಟ್ಟೆಕಿಚ್ಚು. ನಾವು ಬೆಳೆದಿದ್ದರೆ ಮಾತ್ರ ನಮ್ಮ ಮೇಲೆ ಹೊಟ್ಟೆಕಿಚ್ಚು ಬರುತ್ತದೆ ಎಂದು ಮಂದಾರಾ ಸುಮ್ಮನೆ ತಲೆಕೆಡಿಸಿಕೊಳ್ಳದೇ ಇದ್ದಿದ್ದಳು.


ಜೊತೆಗೆ ಮಂದಾರಾಳಿಗೆ ಇವರಂತೆ ಶೋಕಿ ಮಾಡಲು ಬರುತ್ತಿರಲಿಲ್ಲ. ಊರಿನಲ್ಲಿರುವ ವಯಸ್ಸಾದ ತಂದೆಯ ಔಷಧಿಗೆ ಹಣ ಬೇಕಿತ್ತು. ಯಾರು ಸಮಾನ ಮನಸ್ಕರು ಅಲ್ಲ ಎಂದು ಮಂದಾರಾ ಯಾರ ಜೊತೆಗೂ ಕ್ಲೋಸ್ ಆಗಿ ಇರಲು ಇಷ್ಟ ಪಡದೇ ತನ್ನ ಪಾಡಿಗೆ ತಾನಿದ್ದಳು.. ಕಂಪ್ಯೂಟರ್ ಮೊನಿಟರ್ ಅನ್ನೇ ನೋಡುತ್ತಾ ಕೀಬೋರ್ಡ್ ತಟ್ಟುತ್ತಿದ್ದ ಮಂದಾರಳನ್ನು ತಲೆ ಎತ್ತಿ ನೋಡುವಂತೆ ಮಾಡಿದ್ದು ಜ್ಯೋತಿಯ ಧ್ವನಿ. "ಮೇಡಮ್.. ಹಾರ್ದಿಕ್ ಸರ್ ನಿಮ್ಮನ್ನಾ ಕರೀತಾ ಇದಾರೆ." ಎಂದು ಹೇಳಿ ಹೋದಳು..


"ನಿನ್ನೆ ಉಗಿದಿದ್ದು ಸಾಕಾಗಲಿಲ್ಲ ಅನ್ಸೊತ್ತೆ ಈ ದೂರ್ವಾಸನ ಡ್ಯೂಪ್ ಗೆ.. ಹಾಳಾದೋನು.. ಫೈಲ್ ರೆಡಿ ಆಯ್ತಾ ಅಂತ ಕೇಳೋಕೆ ಕರೆದಿದ್ದು ಇರ್ಬೇಕು.." ಎಂದು ಗೊಣಗುತ್ತಾ ಅವನ ಕ್ಯಾಬಿನ್ ಬಾಗಿಲು ದೂಕಿದಳು.


"ಮೇ ಐ ಕಮಿನ್ ಸರ್" ಎಂದಳು ವಿಧೇಯವಾಗಿ.

ಯಸ್ ಎಂಬ ಉತ್ತರ ದೊರೆತಾಗ ಒಳಬಂದಳು.


ಹಾರ್ದಿಕ್ ಮಾತನಾಡುವ ಮೊದಲೇ ತಾನೇ ಖುದ್ದಾಗಿ "ಬಾಸ್ ಫೈಲ್ ಇನ್ನು ರೆಡಿ ಆಗಿಲ್ಲ. ಕೆಲವೊಂದು ಡಾಕ್ಯುಮೆಂಟ್ ಸಿಗೋದು ಡಿಲೇ ಆಯ್ತು. ಇನ್ನೊಂದು ಗಂಟೆಯೊಳಗೆ ರೆಡಿ ಮಾಡ್ತೀನಿ" ಎಂದು ಸುಮ್ಮನಾದಳು.


ಹಾರ್ದಿಕ್ ನಗತೊಡಗಿದ.. "ಇವನಿಗೆ ಹಿಡಿದಿರೋ ಹುಚ್ಚು ಹೆಚ್ಚಾಗಿದೆ.. ಲೂಸ್ ತಂದು" ಎಂದು ಮನದೊಳಗೆ ಬೈದುಕೊಂಡಳು.


"ಏನ್ರೀ ಮನಸಲ್ಲೇ ನನಗೆ ಬೈದುಕೊಂಡ ಹಾಗಿದೆ.." ಎಂದ ಹಾರ್ದಿಕ್.

"ಹೇ.. ಹಾಗೇನೂ ಇಲ್ಲ ಬಾಸ್.. ಯಾಕೆ ನಕ್ರಿ ಅಂತ ಯೋಚಿಸ್ತಾ ಇದ್ದೆ" ಎಂದು ನುಡಿದಳು.

"ನಾನೇನೂ ಕೇಳಲೇ ಇಲ್ಲ.. ನೀವೇ ಹೇಳ್ತಾ ಇದ್ರಲ್ಲ.. ಅದಿಕ್ಕೆ ನಗು ಬಂತು.. ಮಿಸ್ ಮಂದಾರಾ.."

"ಏನು ಬಾಸ್?"

"ಸಾರಿ.. ರಿಯಲಿ ವೆರಿ ಸಾರಿ.."

"ಯಾಕೆ ಬಾಸ್..?"

"ನಿನ್ನೆ ನಿಮ್ಮ ತಪ್ಪು ಇರಲಿಲ್ಲ ಅಂತ ಈಗ ತಿಳೀತು.. ಸುಮ್ನೆ ನಿಮಗೆ ಬೈದುಬಿಟ್ಟೆ.. ಲಾಸ್ಟ್ ಪೊಸಿಶನ್ ಅಲ್ಲಿ ಇದ್ದ ನಮ್ಮ ಕಂಪನಿಯನ್ನಾ ಫಸ್ಟ್ ಪೊಸಿಶನ್ ಗೆ ತರೋವಾಗ ಪಟ್ಟ ಕಷ್ಟ ನನಗೆ ಮಾತ್ರ ಗೊತ್ತು. ಅದಿಕ್ಕಾಗಿ ಯೋಚನೆ ಮಾಡದೆ ನಿಮಗೆ ಬೈದೆ.. ನಿಮ್ಮದಲ್ಲಾ ತಪ್ಪು ಅಂತ ತಿಳೀತು.. ಸೊ ಅದನ್ನಾ ನಿಮಗೆ ಹೇಳೋಕೆ ಕರೆದೆ ಅಷ್ಟೇ.. ಈಗ ನಿಮ್ಮ ಕೆಲಸ ನೀವು ಮಾಡಿ.."


"ಸರಿ ನಿನ್ನೆ ಪ್ರೆಸೆಂಟೇಶನ್ ಡಿಲೀಟ್ ಮಾಡಿದ್ದು ಯಾರು?"


"ಏನೋ ನನ್ನ ತಪ್ಪು ಇತ್ತು ಅಂತ ಸಾರಿ ಕೇಳ್ದೆ ಅದಿಕ್ಕೋಸ್ಕರ ನೀವು ಸಲುಗೆ ತೋರಿಸೋದು ಬೇಡ.. ನೀವು ಎಲ್ಲಿರಬೇಕೋ ಅಲ್ಲೇ ಇರಿ. that is none of your business.. you may go now" ಎಂದು ತನ್ನ ಕೆಲಸ ಮುಂದುವರೆಸಿದ.


"ಕಲ್ಲು ಮನಸಿನೋನು.. ಸಾರಿ ಇವನಾಗೇ ಕೇಳಿರೋಕೆ ಸಾಧ್ಯಾನೇ ಇಲ್ಲ.. ಶಿವರಾಂ ಸರ್ ಹೇಳಿರಬೇಕು. ಅಪ್ಪನ ಮಾತನ್ನಾ ಮೀರೋಕೆ ಆಗದೆ ಕೇಳಿರ್ತಾನೆ ಅಷ್ಟೇ.. ಎಲ್ಲೋಗತ್ತೆ ಇವನ ಕೊಬ್ಬು.." ಎಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಾ ನಿಂತಿದ್ದಳು ಮಂದಾರ.


ತಲೆ ಎತ್ತಿ ನೋಡಿದ ಹಾರ್ದಿಕ್ "ಏನ್ರಿ ಇನ್ನೂ ಇಲ್ಲೇ ನಿಂತಿದೀರಾ? ಹೋಗಿ ಅಂದ್ರೆ ಅರ್ಥ ಆಗಲ್ವಾ?" ಎಂದು ಗದರಿದ.

"ಸಾರಿ ಬಾಸ್" ಎಂದು ಹೊರಟ ಮಂದಾರಾಳಿಗೆ "ಮಂದಾರಾ ವೇಟ್.." ಎಂದ. ತಿರುಗಿದಳು ಹುಡುಗಿ.

"ಯು ಲುಕ್ ವಂಡರ್ಫುಲ್ ಟುಡೇ" ಎಂದು ಮೆಲ್ಲನೆ ಉಸುರಿದ.

ಕೇಳಿದರೂ ಕೇಳದಂತೆ "ಏನಂದ್ರಿ ಬಾಸ್" ಎಂದಳು.

"ಏನಿಲ್ಲಾ.. ಆ ನತಾಶಾಗೆ ನನ್ನ ಕ್ಯಾಬಿನ್ ಗೆ ಬರೋಕೆ ಹೇಳು" ಎಂದು ತನ್ನ ಕೆಲಸ ಮುಂದುವರೆಸಿದ.


"ಓಕೆ ಬಾಸ್" ಎಂದು ಹೊರಬಂದಳು. ಮಂದಾರಾಳ ಮನಸ್ಸು ಖುಷಿಯ ಬುಗ್ಗೆಗಳಿಂದ ತುಂಬಿತ್ತು. ತನಕೆ ಬಾಸ್ ಅಧ್ಬುತವಾಗಿ ಕಾಣುತ್ತಿರುವೆ ಎಂದಿದ್ದು ಆಕೆಯ ಖುಷಿಗೆ ಕಾರಣ ಆಗಿರಲಿಲ್ಲ. ಆತ ಸಾರಿ ಕೇಳಿದ್ದು ಹಾಗು ಪ್ರೆಸೆಂಟೇಶನ್ ಡಿಲೀಟ್ ಮಾಡಿದ್ದು ನತಾಶಾಳೇ ಎಂದು ಅವಳ ಮೇಲೆ ಇದ್ದ ಅನುಮಾನ ಸರಿಯಾದದ್ದು ಎಂದು ತಿಳಿದದ್ದು ಆಕೆಗೆ ಹಾರುವಂತೆ ಮಾಡಿತ್ತು. "ನಿನ್ನೇನೇ ಅವಳ ಹೆಸರು ಹೇಳುವವಳಿದ್ದೆ.. ಆದರೆ ಕೇವಲ ಅನುಮಾನ ಇದೆ ಅಂತ ಅವರನ್ನಾ ದೂಷಣೆ ಮಾಡಬಾರದು. ಕನ್ಫರ್ಮ್ ಆಗಿ ತಿಳಿಯದೆ ಇತರರನ್ನು ಬ್ಲೇಮ್ ಮಾಡುವುದು ಸರಿಯಲ್ಲಾ ಅಂತ ಸುಮ್ನೆ ಇದ್ದೆ. ಅವಳನ್ನಾ ಬಿಟ್ರೆ ಮತ್ಯಾರೂ ಇಂತ ಕುತಂತ್ರ ಮಾಡಲ್ಲ.." ಎಂದು ಅಂದುಕೊಳ್ಳುತ್ತಾ ನತಾಶಾ ಬಳಿ ಬಂದಳು.


"ನತಾಶಾ.. ನಿನ್ನ ಹಾರ್ದಿಕ್ ಬಾಸ್ ಕರೀತಾ ಇದಾರೆ.. ಬೇಗ ಹೋಗು" ಎಂದಳು ಮಂದಾರಾ.

"ನಾನು ಹೋಗ್ತೀನಿ.. ಮೊದಲು ನೀನು ಇಲ್ಲಿಂದ ತೊಲಗು.." ಎಂದು ಸಿಟ್ಟಿನಿಂದ ಹೇಳಿದಳು ನತಾಶಾ..


"ಇಸಮೇ ತೇರಾ ಘಾಟಾ..

ಮೇರಾ ಕುಚ್ ನಹಿ ಜಾತಾ.." ಎಂದು ನಗುತ್ತಾ ಹೇಳಿ ತನ್ನ ಜಾಗದೆಡೆಗೇ ಹೊರಟಳು ಮಂದಾರಾ.

ಮಂದಾರಾ ಯಾಕೆ ಆ ಹಾಡು ಹೇಳಿದಳು ಎಂದು ನತಾಶಾಳಿಗೆ ಅರ್ಥವಾಗಿ ಹೋಗಿತ್ತು..


"ಛೇ.. ಬಾಸ್ ಇನ್ನೆಷ್ಟು ಬೈತಾರೋ?" ಎಂದು ಕೈ ಹಿಸುಕಿಕೊಳ್ಳುತ್ತಾ ಹೆಜ್ಜೆ ಹಾಕಿದಳು ನತಾಶಾ.

ಮನಸ್ಸು ಪ್ರಫುಲ್ಲವಾಗಿ ಇದ್ದರೆ ಮಾಡುವ ಕೆಲಸ ಕೂಡಾ ಬೇಗ ಮುಗಿಯುತ್ತದೆ. ಸಂತೋಷದಿಂದ ಕೂಡಿದ್ದ ಮನದೊಂದಿಗೇ ಕೇವಲ ಅರ್ಧಗಂಟೆಯಲ್ಲೇ ತನ್ನ ಕೆಲಸ ಮುಗಿಸಿದ್ದಳು ಮಂದಾರಾ.


ಹಾರ್ದಿಕ್ ಗೆ ಸಬ್ಮಿಟ್ ಮಾಡುವಾಗ ಅವನು ಆಶ್ಚರ್ಯದಿಂದ ಕೇಳಿದ "ನೀವ್ ಹೇಗ್ರಿ ಇಷ್ಟು ಬೇಗ ಸರಿಯಾಗಿ ಮುಗಿಸ್ತೀರಾ?"

"ಶ್ರದ್ಧೆಯಿದ್ದರೆ ಎಲ್ಲವೂ ಸಾಧ್ಯ.." ಎಂದು ಹೇಳಿ ಹೊರಬಂದಳು.

"ಕೆಲಸ ನೆಟ್ಟಗೆ ಮಾಡಿದ್ರೂ ಕೊಬ್ಬು ಮಾತ್ರ ಹೆಚ್ಚೇ ಇದೆ.." ಎಂದು ಹಾರ್ದಿಕ್ ಮೂಗು ಮುರಿದ.


ಮಂದಾರಾ ಕ್ಯಾಂಟೀನ್ ಗೆ ಹೋಗಿ ಜಾನ್ಹವಿಯನ್ನು ಹುಡುಕಿದಳು. ಜಾನ್ಹವಿ ಹಾಗೂ ಮಂದಾರಾ ಬೇರೆ ಡಿಪಾರ್ಟ್ಮೆಂಟಿಗೆ ಸೇರಿದ್ದರಿಂದ ಕೇವಲ ಕ್ಯಾಂಟೀನ್ ಅಲ್ಲಿ ಜೊತೆಯಾಗುತ್ತಿದ್ದರು. ಇಬ್ಬರದ್ದೂ ಒಂದೇ ಅಭಿರುಚಿ ಹಾಗು ಇಬ್ಬರೂ ಸಮಾನ ಮನಸ್ಕರು. ಬೇಗ ಊಟ ಮಾಡಿ ಚೂರು ಹರಟೆ ಹೊಡೆದು ಹೋಗುತ್ತಿದ್ದರು.


ಜಾನ್ಹವಿ ಹಾರ್ದಿಕ್ ಅಣ್ಣನಾದ ಅರ್ನವ್ ಕೆಳಗೆ ಕೆಲಸಮಾಡುತ್ತಿದ್ದಳು. ಆತ ಇವನಂತೆ ಕೋಪಿಷ್ಠನಲ್ಲ. ಸಹನಾ ಮೂರ್ತಿ.. ಆ ಡಿಪಾರ್ಟ್ಮೆಂಟಿಗೆ ಹೋದರೆ ಜಾನ್ಹವಿ ಸಿಗುವಳು ಹಾಗೇ ಒಳ್ಳೆಯ ಬಾಸ್ ಕೂಡಾ ಇದ್ದ ಕಾರಣ ಮಂದಾರಾಳಿಗೆ ಆ ಡಿಪಾರ್ಟ್ಮೆಂಟಿಗೆ ಹೋಗೋ ಆಸೆ ಇತ್ತು. ಆದರೆ ಅದು ಸಾಧ್ಯ ಆಗುತ್ತಿರಲಿಲ್ಲ..


"ಮಂದು.. ನಿನ್ನೆ ಶ್ರೇಯಸ್ ದು ಹೊಸ ಸಾಂಗ್ ಲಾಂಚ್ ಆಯ್ತು ಕೇಳಿದ್ಯಾ?"

"ನನ್ನ ಹತ್ರ ಈ ಪ್ರಶ್ನೆ ಕೇಳ್ತಾ ಇದೀಯಲ್ಲೇ.. ನಾವ್ ಬಿಡ್ತೀವಾ? ಸೂಪರ್ ಸಾಂಗ್ ಕಣೇ.. ನನಗೆ ತುಂಬಾ ಇಷ್ಟ ಆಯ್ತು.. ಎಷ್ಟು ಚೆಂದ ಗೊತ್ತಾ ನಮ್ ಶ್ರೇಯಸ್ ಧ್ವನಿ.. one in a million.."

"ಹೌದಮ್ಮ ಗೊತ್ತು.. ಟೈಂ ಸಿಕ್ರೆ ಸಾಕು.. ಅವನನ್ನಾ ಹೊಗಳ್ತಾ ಇರ್ತೀಯಾ.."

"ಹ್ಮ್ ಜಾನು.. ನನ್ನ ಫೇವರಿಟ್ ಅಲ್ವಾ..? ನನಗೆ ಯಾವ ಆಕ್ಟರ್ ಕೂಡಾ ಇಷ್ಟ ಇಲ್ಲ.. ಐ ಲೈಕ್ ಶ್ರೇಯಸ್ ಶರ್ಮಾ.."

"ಬಟ್ ಅವನು ನಿನಗೆ ಸಿಗೋದು ಡೌಟ್ ಅಲಾ ಮಂದು.."

"ಅದು ನಂಗೂ ಗೊತ್ತು ಜಾನು.."

"ಆದ್ರೂ ಆಸೆ.."

"ಅದೆಲ್ಲಾ ಬಿಡು.. ಟೈಂ ಆಯ್ತು ಆಮೇಲೆ ಇದಾನಲ್ಲಾ ಆ ದೂರ್ವಾಸನ ಡ್ಯೂಪ್ ಯೋಚನೆ ಮಾಡದೇ ಉಗಿಯೋಕೆ ಶುರು ಮಾಡ್ತಾನೆ.."

"ಅವನನ್ನಾ ಬೈಲಿಲ್ಲ ಅಂದ್ರೆ ನಿಂಗೆ ತಿಂದನ್ನಾ ಕರಗೊಲ್ಲ ಅಲ್ವಾ..?"

"ಬಿಡೇ.. ನಾ ಹೋಗ್ತೆ.. ಬಾಯ್"

"ಬಾಯ್ ಮಂದು.."

ತನ್ನ ಜಾಗದಲ್ಲಿ ಕುಳಿತು ತನ್ನ ಉಳಿದ ಕೆಲಸ ಮುಂದುವರೆಸಿ ಮನೆಗೆ ಹೋದಳು.

ಮೊಬೈಲ್ ತೆಗೆದು ನೋಡಿದವಳಿಗೆ ಪೋಸ್ಟ್ ಒಂದು ಕಣ್ಣಿಗೆ ಬಿತ್ತು..


ಇನ್ನು ಹತ್ತು ದಿನಗಳ ನಂತರ ಬೆಂಗಳೂರಿನಲ್ಲಿ ಅದೂ ಇವಳ ಮನೆಯ ಹತ್ತಿರದಲ್ಲೇ ಶ್ರೇಯಸ್ ಶರ್ಮಾ ಲೈವ್ ಕಾನ್ಸರ್ಟ್ ಇತ್ತು..


ಮಂದಾರಾಳಿಗೆ ಸಂತೋಷವಾಯಿತು ಆದರೆ ಸಂಜೆ ಬೇಗ ಲೈವ್ ಪ್ರೋಗ್ರಾಮ್ ಶುರುವಾಗುತ್ತಿತ್ತು ಹಾಗೂ ಬೆಳಕು ಹರಿಯುವವರೆಗೂ ಇರುವುದು.. ಎರಡು ದಿನಗಳ ರಜೆ ಬೇಕಾಗಿತ್ತು ಮಂದಾರಾಳಿಗೆ.. ಆದರೆ ಆ ದೂರ್ವಾಸನ ಡ್ಯೂಪ್ ನನಗೆ ರಜೆ ಕೊಟ್ಟು ಉದ್ದಾರ.. ಎಂದು ಬೇಸರಿಸಿಕೊಂಡಳು..


ಅವಳ ಸ್ವಭಾವವೇ ಹಾಗೇ.. ಹಾರ್ದಿಕ್ ಅವಳನ್ನು ತುಚ್ಛವಾಗಿ ಕಂಡರೂ ಅವನ ಮೇಲೆ ದ್ವೇಷ ಸಾಧಿಸುವ ಮನಸ್ಸಲ್ಲ. ಆತನನ್ನು ಯಾವಗಲೋ ಕ್ಷಮಿಸಿದ್ದಳು. ಅದರಲ್ಲಿ ಬೇರೆಯವರ ಕುತಂತ್ರ ಇತ್ತಲ್ಲವೇ.. ಹಾಗಾಗಿ ಅವಳು ಆತನ ಮಾತುಗಳು ಬೇಸರವಾದರೂ ಮರೆತಳು. ಮನದಲ್ಲಿ ನೋವನ್ನು ಇಟ್ಟುಕೊಂಡರೆ ನಾವೇ ಕೊರಗುವುದು. ಒಂದೇ ಜೋಕ್ ಗೆ ಪದೇ ಪದೇ ನಾವು ನಗಲು ಆಗದು.. ಹಾಗಿದ್ದ ಮೇಲೆ ಒಂದೇ ನೋವಿನ ಸಂಗತಿಗೆ ಯಾಕೆ ಪದೆ ಪದೆ ಅಳಬೇಕು?? ನಾವು ಹೊಂದಿಕೊಂಡು ಹೋದರೆ ಜಗತ್ತೇ ಹೊಂದಿಕೊಂಡು ಹೋಗುತ್ತದೆ..


ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಂಮ್ಮಿನ ಕೋಟೆಯಲಿ..

ಎಷ್ಟು ಕಷ್ಟವೋ ಹೊಂದಿಕೆ ಎಂಬುದು

ನಾಲ್ಕು ದಿನದ ಈ ಬದುಕಿನಲಿ

ಅದಕ್ಕಾಗಿ ಯಾವುದನ್ನೂ ಅತಿಯಾಗಿ ಚಿಂತಿಸದೇ ಸಂತೋಷದಿಂದ ಮಂದಾರಾ ಇದ್ದಳು..


ಮುಂದುವರೆಯುವುದು...


ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ತಿಳಿಸಿ. ಕಡಿಮೆ ರೇಟಿಂಗ್ ಕೊಟ್ರೆ ಕಾರಣ ತಿಳಿಸಿ. ಅಟ್ಲೀಸ್ಟ್ ನನ್ನ ತಪ್ಪು ಏನು ಅಂತ ತಿಳಿದರೆ ತಿದ್ದಿಕೊಂಡು ಬರೆಯುವೆ.

ಎಂದಿನಂತೆ ನಿಮ್ಮ ಅನಿಸಿಕೆಗಳ ನಿರೀಕ್ಷೆಯಲ್ಲಿರುವೆ..



Rate this content
Log in

Similar kannada story from Drama