Akshata Hegde

Drama Romance Inspirational

2.9  

Akshata Hegde

Drama Romance Inspirational

ನಿನ್ನಲ್ಲೇ ನಾನು ೧

ನಿನ್ನಲ್ಲೇ ನಾನು ೧

4 mins
247


ಎಂದಿನಂತೆ ಅದೊಂದು ಸುಂದರ ಸಂಜೆ.. ಸೂರ್ಯ ತನ್ನ ಡ್ಯೂಟಿ ಮುಗಿಯಿತು ಎಂಬಂತೆ ನಿಧಾನವಾಗಿ ಮರೆಯಾಗುತ್ತಿದ್ದ. ಮಂದಾರ ನೆಪಕ್ಕೆ ಹಾಡು ಹಚ್ಚಿಕೊಂಡು ಇದ್ದರೂ ಆಕೆಯ ಗಮನ ಬೇರೆಡೆಯೇ ಇತ್ತು.

ಏನೆಂದು ಹೆಸರಿಡಲಿ.. ಈ ಚೆಂದ ಅನುಭವಕೆ..

ಈಗಂತೂ ಹೃದಯದಲಿ ನಿಂದೇನೇ ಚಟುವಟಿಕೆ..

ಈ ಮೌನದ ರೂವಾರಿ ನೀನಲ್ಲವೇ? ಇನ್ನೇತಕೆ ಬೇಜಾರು ನಾನಿಲ್ಲವೇ..

ತನ್ನಷ್ಟಕ್ಕೆ ತಾನೇ ಮ್ಯೂಸಿಕ್ ಪ್ಲೇಯರ್ ಅಲ್ಲಿ ಈ ಹಾಡು ಸಾಗುತ್ತಿತ್ತು.. ಹಾಡಿನೊಂದಿಗೆ ಎಂದಿನಂತೆ ಕುಣಿಯುತ್ತಾ, ತಾನೂ ಶ್ರುತಿ ಸೇರಿಸುತ್ತಾ ಇದ್ದ ಮಂದಾರ ಮಾತ್ರ ಇದಿನ ಮೌನಕ್ಕೆ ಶರಣಾಗಿದ್ದಳು...

ಏಕೋ ಈ ಹಾಡು ಬೇಡ ಎನಿಸಿ ಬೇರೆ ಹಾಕೋಣ ಎಂದು ಮುಂದಿನದು ಹಾಕಿದಳು..

ನೀನೆಂದರೆ ನನ್ನೊಳಗೆ..

ಏನೋ ಒಂದು ಸಂಚಲನ..

ನಾ ಬರೆದಿರೋ ಕವಿತೆಗಳಾ..

ನೀನೇ ಒಂದು ಸಂಕಲನ..

ಈ ಹಾಡು ಕೂಡಾ ಕಿರಿಕಿರಿ ಎನಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸೆದಳು.

"ನನ್ನ ಮೊಬೈಲ್ ಅಲ್ಲಿ ಯಾವ ಹಾಡೂ ನೆಟ್ಟಗಿಲ್ಲ" ಎಂದು ಗೊಣಗಿದಳು.

ಆಕೆಗೆ ಸಾಫ್ಟ್ ಮ್ಯೂಸಿಕ್ ಎಂದರೆ ಬಹಳ ಇಷ್ಟ.. ಅದರಲ್ಲೂ ರೊಮಾಂಟಿಕ್ ಹಾಡುಗಳು ಅವಳ ಜೀವ.. ಮಂದಾರಾಳ ಮ್ಯೂಸಿಕ್ ಪ್ಲೇಯರ್ ಅಲ್ಲಿ ಆಕೆಯ ಇಷ್ಟದ ಕನ್ನಡ ಹಾಗು ಹಿಂದಿಯ ಸುಮಧುರ ಗೀತೆಗಳು ಮಾತ್ರ ಇದ್ದವು. ಪ್ರತಿಯೊಂದರಲ್ಲೂ ಪರ್ಫೆಕ್ಟ್ ಆಗಿರುವ ವ್ಯಕ್ತಿತ್ವ ಅವಳದ್ದು. ತನಗೆ ಆರಾಮು ಕೊಡುವ ಗೀತೆಗಳನ್ನು ಮಾತ್ರ ಅವಳ ಮೊಬೈಲ್ ಅಲ್ಲಿ ಇಟ್ಟುಕೊಂಡಿದ್ದಳು. ಸ್ಟೋರೇಜ್ ಇದೆಯೆಂದೋ, ತನ್ನ ಬಳಿ ಹೊಸ ಗೀತೆಗಳು ಇವೆಯೆಂದು ತೋರಿಸಿಕೊಳ್ಳಲೋ.. ಮೊಬೈಲ್ ತುಂಬಾ ಬೇಕು ಬೇಡವಾದದ್ದನ್ನು ತುಂಬುವ ಜಾಯಮಾನ ಆಕೆಯದ್ದಲ್ಲ. ತಮ್ಮ ಆಯ್ಕೆ ಬೇರೆ ಅವರಿಗಾಗಿ ಬದಲಾಯಿಸಿಕೊಳ್ಳಬಾರದು ಎಂದು ಅವಳ ನಿಲುವು.

ಈ ದಿನ ಅವಳ ಇಷ್ಟದ ಹಾಡುಗಳೇ ಅವಳಿಗೆ ನೆಟ್ಟಗೆ ಇಲ್ಲ ಎಂದೆನಿಸಿದೆ. ಹಾಡು ದಿನಕ್ಕೆ ತಕ್ಕಂತೆ ಬದಲಾಗದು. ಬದಲಾಗುವುದು ಮನಸ್ಸು. ಇವತ್ತು ಮಂದಾರಾಳ ತಲೆಯೇ ಕೆಟ್ಟು ಹೋಗಿದೆ..

ತನ್ನೊಳಗೇ ಸಾವಿರ ಪ್ರಶ್ನೆ ಕೇಳಿಕೊಳ್ಳುತ್ತಿದ್ದಾಳೆ..

"ನನ್ನ ಜೀವನ ನನ್ನ ಆಯ್ಕೆ.. ನನ್ನ ಬದುಕುವ ರೀತಿ ಸರಿಯಿಲ್ಲ ಅನ್ನೋಕೆ ಅವನ್ಯಾರು? ಹು ಇಸ್ ಹಿ? ಪ್ರತಿಯೊಬ್ಬರಿಗೂ ಅವರದ್ದೆ ಆದ ಅಭಿರುಚಿಗಳು ಇರ್ತವೆ.. ನಾನು ಶಿಲಾಯುಗದಲ್ಲಿ ಇದ್ದೀನಾ? ಹೇಗೆಲ್ಲಾ ಹೀನಾಯವಾಗಿ ಮಾತನಾಡಿದ.. ಆದರೆ ನಾನು ಮಾತ್ರ ಅವನ ಮಾತುಗಳಿಗೆ ಎದುರಾಡದೇ ಬಂದೆ.. ಯಾಕೆ ಹೀಗೆ? ನನಗೆ ಏನಾಗಿದೆ? ತಲೆ ಹಾಳಾಕ್ತಾ ಇದೆ.. ನನ್ನ ವಿನುತಾ ಗೆ ಕಾಲ್ ಮಾಡ್ತೀನಿ.. ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಲು ಅವಳು ಮಾತ್ರಾ ಶಕ್ಯಳು.." ಎಂದು ಮೊಬೈಲ್ ಓನ್ ಮಾಡಿ ಕರೆ ಮಾಡಿದಳು.

ವಿಷಯವನ್ನು ಮಂದಾರ ಹೇಳೆದಳು...

ನಗುತ್ತಾ ಮಾತನಾಡತೊಡಗಿದಳು ವಿನುತಾ..

"ಇಷ್ಟಕ್ಕೆಲ್ಲ ಸಿಟ್ಟು ಮಾಡಿಕೊಳ್ಳೋದಾ..? ಅವನು ಏನಂದ.. ನೀನು ಇನ್ನು ಹಳೇ ಕಾಲದಲ್ಲೇ ಇದೀಯಾ ಅಂತ ಅಲ್ವಾ..? ಅವನು ಹೇಳಿದ್ದೂ ಸುಳ್ಳಲ್ಲ.. ಕಾಲ ಬದಲಾಗಿದೆ.. ಎಲ್ಲ ಬದಲಾಗಿದಾರೆ.. ನೀನು ಅಪ್ಡೇಟ್ ಆದರೆ ಒಳ್ಳೇದಲ್ವಾ..? ಆದರೆ ಈಗಿನ ವ್ಯವಸ್ಥೆಗೆ ನೀನು ಒಗ್ಗಿ ಕೊಳ್ಳೋದು ಕಷ್ಟ ಅಲ್ವಾ.. ಬಿಡು ಅದೆಲ್ಲಾ.. ನಿನ್ನ ತನ ಬಿಡೋದು ಬೇಡ... ಹೇಗಿದೀಯೋ ಹಾಗೇ ಇರು.." ಎಂದು ಕರೆ ತುಂಡರಿಸಿದ್ದಳು..

ಮಂದಾರಾಳ ಚಿಂತೆ ಹೆಚ್ಚಾಯಿತೇ ವಿನಃ ಕಡಿಮೆ ಅಂತೂ ಆಗಲಿಲ್ಲ..

"ವಿನುತಾ ಕೂಡಾ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದಳು.. ಜನರು ಹೇಳ್ತಾರೆ ಅಂತ ನಾವು ಬದಲಾಗಬೇಕಾ? ಅಷ್ಟಕ್ಕೂ ನನ್ನ ಆಯ್ಕೆಯಲ್ಲಿ ತಪ್ಪೇನಿದೆ.? ಇವರಂತೆ ಪಾರ್ಟಿಗಳನ್ನಾ ಅಟೆಂಡ್ ಮಾಡಲ್ಲ.. ಕಿರುಚಾಟದ ಅರ್ಥವಾಗದ ಭಾಷೆಗಳ ಡಿಜೆ ಸಾಂಗ್ಸ್ ಗಳಿಗೆ ನಾನು ಹುಚ್ಚೆದ್ದು ಕುಣಿಯುವುದಿಲ್ಲ.. ಹಳೆಯ ಹಾಗು ಹೊಸ ಮಧುರ ಗೀತೆಗಳನ್ನಾ ಮಾತ್ರ ಕೇಳ್ತೇನೆ.. ಅರ್ಧ ಮರ್ಧ ಹರಿದಿರೋ ಮಾಡ್ರನ್ ಬಟ್ಟೆಗಳನ್ನಾ ಹಾಕಿಕೊಳ್ಳಲ್ಲ.. ಯಾರ ತಂಟೆಗೂ ಹೋಗದೆ ನಾನಾಯಿತು ನನ್ನ ಕೆಲಸವಾಯಿತು ಅಂತ ನನ್ನ ಪಾಡಿಗೆ ನಾನಿರುವೆ.. ಈ ಕಾರಣಗಳಿಗೆ ನಾನು ಶಿಲಾಯುಗದವಳಾ...? ನಾನು ನಾಲ್ಕು ಜನರಿಗಾಗಿ ನನ್ನ ಆಯ್ಕೆಗಳನ್ನಾ ಬದಲಿಸಿಕೊಳ್ಳಬೇಕಾ? ನೆವರ್.. ನಾನು ಈಗ ಹೇಗೆ ಇದ್ದೀನೋ ಹಾಗೇ ಮುಂದೆಯೂ ಇರ್ತೇನೆ.. ಫ್ಯಾಶನ್ ಜಗತ್ತಿನ ಹಿಂದೆ ನಾನಂತೂ ಹೋಗಲ್ಲ.. ಇವತ್ತು ಇರುವ ಟ್ರೆಂಡ್ ನಾಳೆ ಇರಲ್ಲ.. ದಿನಕ್ಕೊಂದರಂತೆ ಟ್ರೆಂಡ್ ಗೆ ತಕ್ಕ ಬಟ್ಟೆ ಕೊಂಡು ದುಂದು ವೆಚ್ಚ ಮಾಡುವುದಕ್ಕಿಂತ ಅದೇ ಹಣವನ್ನಾ ಯಾವುದೋ ಬಡ ರೋಗಿಯ ಚಿಕಿತ್ಸೆಗೋ, ಮಗುವಿನ ವಿದ್ಯಾಭ್ಯಾಸಕ್ಕೋ ವಿನಿಯೋಗಿಸಿದರೆ ಪುಣ್ಯ ಬರುವುದು.. ಪಾಪ ಪುಣ್ಯದ ಪ್ರಶ್ನೆಗಿಂತ ನನಗೆ ಒಂದು ತರನಾದ ಸಂತೋಷ ಸಿಗೊತ್ತೆ. ಕಷ್ಟದಲ್ಲಿ ಇರುವ ಒಬ್ಬರಿಗೆ ಸಹಾಯ ಮಾಡಿದಾಗ ಅವರ ಕಣ್ಣಲ್ಲಿ ಮೂಡುವ ಸಂತೋಷ ಹಾಗು ಅವರ ನಗೆ ಈ ತರ ಎಷ್ಟು ಟ್ರೆಂಡ್ ಗಳ ಬಟ್ಟೆ ಧರಿಸಿದರೂ ಸಿಗದು.. ನಾನು ನಾನಾಗಿರಲು ಬಯಸ್ತೀನಿ.. ನನ್ನ ಜೀವನ ನನ್ನ ಆಯ್ಕೆ.. ಅದನ್ನು ಪ್ರಶ್ನಿಸಲು, ಹೀಯಾಳಿಸಲು ಅವನ್ಯಾರು.. ಭಾವನೆಗಳೇ ತುಂಬಿರದ ಮೃಗ ಅವನು.. ನಿಜವಾಗಿಯೂ ಇನ್ನೊಬ್ಬರ ಕಷ್ಟಕ್ಕೆ ಮಿಡಿಯದ ಆತನದ್ದೂ ಒಂದು ಹೃದಯವಾ? ಕಲ್ಲು ಮನದ ಆತ ಶಿಲಾಯುಗದವನೇ ಹೊರತು ನಾನಲ್ಲ.. ಅವನೇನೇ ಅಂದರೂ ಇನ್ನು ನಾನು ತಲೆಕೆಡಿಸಿಕೊಳ್ಳಬಾರದು ಜೊತೆಗೆ ವಾದವೂ ಮಾಡಬಾರದು.. ಮೂರ್ಖರ ಜೊತೆ ಯಾಕೆ ವಾದಿಸಬೇಕು..? ವಕಾ ವಕಾ ಅಂತೆ.. ತಾಕಿ ತಾಕಿ ಅಂತೆ.. ಅರ್ಥವೇ ಆಗದ ಭಾಷೆಯ ಹಾಡುಗಳು.. ಹಾಡೋ ಕಿರುಚಾಟವೋ.. ನನ್ನಂತೆ ಭಾವನೆಗಳು ಇರುವವರಿಗೆ ಮಾತ್ರ ಸುಮಧುರ ಗೀತೆಗಳು ಹಿಡಿಸುವುದು.. ಅವನಂತವನಿಗೆ ಆ ತರದ ಹಾಡೇ ಸಾಕು.. ಮೂಡ್ ಕರಾಬ್ ಆಗಿದೆ ಹಾಡು ಕೇಳೋಣ..." ಎಂದು ಹಾಡೊಂದ ಹಾಕಿದಳು ಮಂದಾರಾ..

ಮಂದಾರಾಳ ಗುಣವೇ ಹಾಗೇ.. ಇನ್ನೊಬ್ಬರ ಕಷ್ಟ ತನ್ನದೆಂದು ಭಾವಿಸುವಳು. ಫ್ಯಾಶನ್ ಜಗತ್ತನ ಹಿಂದೆ ಹೋಗದೆ ತಾನು ಆರಾಮಾಗಿ ಇರುವಳು. ಇವತ್ತಿನ ಹೊಸ ಟ್ರೆಂಡ್ ನಾಳೆ ಹಳೆಯದಾಗುತ್ತದೆ. ಫ್ಯಾಶನ್ ನಿಂತ ನೀರಲ್ಲ.. ಅದರ ಹಿಂದೆ ಹೋಗಿ ದುಂದುವೆಚ್ಚ ಮಾಡುವುದು ಆಕೆಗೆ ಸಹ್ಯವಾಗಿ ಇರಲಿಲ್ಲ. ಟ್ರೆಂಡಿಗೆ ತಕ್ಕಂತೆ ಬದಲಾಗುತ್ತಾ ಹೋದರೆ ಒಂದು ದಿನ ವಾರ್ಡರೋಬ್ ತುಂಬಾ ಬಟ್ಟೆಯಿದ್ದರೂ "ನನಗೆ ಹಾಕಿಕೊಳ್ಳಲು ಒಂದು ಬಟ್ಟೆಯೂ ಇಲ್ಲ.." ಎನ್ನಬೇಕಾಗುತ್ತದೆ.

ಕೌನ್ ತುಜೆ ಯು ಪ್ಯಾರ್ ಕರೇಗಾ..

ಜೇಸೆ ಮೇ ಕರತೀ ಹ್ಮೂ...

ಎಂ.ಎಸ್. ಧೋನಿ ಚಿತ್ರದ ಈ ಹಾಡು ಕೇಳಿದ ಮಂದಾರಾಳಿಗೆ ನನಗ್ಯಾಕೆ ಇನ್ನೂ ಪ್ರೀತಿ ಆಗಿಲ್ಲ ಎಂದೆನಿಸಿತು..

ಅವೆಲ್ಲ ನನ್ನ ಶಬ್ಧಕೋಶದಲ್ಲಿ ನಿಶಿದ್ಧ ಪದಗಳು ಎಂದು ಒಮ್ಮೆ ನಕ್ಕು ಹಾಡನ್ನು ಕೇಳತೊಡಗಿದಳು...

Music🎵🎼❤

ಇದು ಕೇವಲ ಶಬ್ದವಲ್ಲ.. ನೋವಿಗೆ ಔಷಧಿ.. ನಲಿವಿಗೆ ಸಂಗಾತಿ.. ಎಷ್ಟೇ ಬೇಸರವಾಗಿದ್ದರೂ, ಸ್ಟ್ರೆಸ್ ಇದ್ದರೂ ನಮ್ಮಿಷ್ಟದ ಹಾಡುಗಳನ್ನು ಕೇಳಿದರೆ ಎಲ್ಲಾ ಮಾಯವಾಗುತ್ತದೆ..

ತಟ್ಟನೆ ಮಂದಾರಾಳಿಗೆ ನೆನಪಾಯಿತು.. ಈ ದಿನ ನನ್ನಿಷ್ಟದ ಹಾಡುಗಾರ ಶ್ರೇಯಸ್ ಶರ್ಮಾ ಹೊಸ ಹಾಡು ಯೂಟ್ಯೂಬ್ ಅಲ್ಲಿ ಬಿಡುಗಡೆ ಆಗುವುದು ಎಂದು..

ಮೂಲತಃ ಕರ್ನಾಟಕದವರೇ ಆದ ಶ್ರೇಯಸ್ ಎಲ್ಲಾ ಭಾಷೆಗಳಲ್ಲೂ ಹಾಡುತ್ತಿದ್ದರು. ಕನ್ನಡ ಹಾಡುಗಳನ್ನು ಹಿಡಿದು, ಮಲಯಾಳಂ, ತೆಲುಗು, ತಮಿಳು ಹೀಗೆ ದಕ್ಷಿಣ ಭಾರತದ ಪ್ರಮುಖ ಹಿನ್ನೆಲೆ ಗಾಯಕ. ಹಿಂದಿಯಲ್ಲಿ ಅಂತೂ ಕೇಳುವುದೇ ಬೇಡ.. ಬಿ ಟೌನ್ ಅವರು ಯಾವ ಚಿತ್ರ ಮಾಡಿದರೂ ಅದರಲ್ಲಿ ಶ್ರೇಯಸ್ ಒಂದು ಹಾಡಾದರೂ ಇರಬೇಕಿತ್ತು.. ಇಲ್ಲದಿದ್ದರೆ ಚಿತ್ರ ಅಪೂರ್ಣವೇ ಸರಿ...

ಯಾವುದೋ ಹಿಂದಿಯ ಹಾಡು ಇವತ್ತು ಲಾಂಚ್ ಆಗುತ್ತಿತ್ತು.. ಎಷ್ಟೇ ಎತ್ತರ ಬೆಳೆದಿದ್ದರೂ ಆತ ತನ್ನ ಮಾತೃಭಾಷೆ ಮರೆತಿರಲಿಲ್ಲ.. ಕರ್ನಾಟಕಕ್ಕೆ ಬಂದಾಗ ಅವನು ಸುಂದರವಾದ ಕನ್ನಡದಲ್ಲೇ ಮಾತನಾಡುತ್ತಿದ್ದ.

ಮಂದಾರಾ ಅಂತೂ ಶ್ರೇಯಸ್ ಮಧುರ ಕಂಠಕ್ಕೆ ಮಾರು ಹೋಗಿದ್ದಳು. ಹಳೆ ಹಾಡುಗಳನ್ನು ಮಾತ್ರ ಕೇಳುತ್ತಿದ್ದ ಅವಳು ಹೊಸ ಹಾಡು ಕೇಳಲು ಕಾರಣ ಶ್ರೇಯಸ್ ಮಧುರ ಗಾನ...

ಮಂದಾರಾ T series ನ ನೋಟಿಪಿಕೇಷನ್ ಗಾಗಿ ಕಾಯುತ್ತಾ ಕುಳಿತಿದ್ದಳು..

ಮುಂದುವರೆಯುವುದು...


Rate this content
Log in

Similar kannada story from Drama