STORYMIRROR

Prajna Raveesh

Abstract Inspirational Children

4  

Prajna Raveesh

Abstract Inspirational Children

ಮತ್ತೊಮ್ಮೆ ಹುಟ್ಟಿ ಬನ್ನಿ ತಾತಾ...

ಮತ್ತೊಮ್ಮೆ ಹುಟ್ಟಿ ಬನ್ನಿ ತಾತಾ...

3 mins
367

ಆ ಭಿತ್ತಿಯಲ್ಲಿ ಇದ್ದ ಚಿತ್ರವನ್ನು ನೋಡುತ್ತಿದ್ದ ಅಪ್ಪನ ಬಳಿ ತನ್ನ ಮಗ ಆದಿ ಬಂದು, ಅಪ್ಪಾ ನಾನೂ ಅವಾಗ್ಲಿಂದ ನೋಡ್ತಾನೇ ಇದ್ದೇನೆ, ಯಾಕಪ್ಪಾ ಕಣ್ಣಲ್ಲಿ ನೀರು?! ಎಂದಾಗ ಶಿವರಾಮ ರಾಯರು ಕಣ್ಣಲ್ಲಿನ ನೀರನ್ನು ಒರೆಸಿಕೊಳ್ಳುತ್ತಾ, ಇದು ಕಣ್ಣೀರಲ್ಲ ಮಗನೇ, ಇದು ಆನಂದ ಭಾಷ್ಪ!! ಎಂದರು.


ಆದಿ : ಯಾತಕ್ಕೆ ಅಪ್ಪಾ, ಈ ಆನಂದ ಭಾಷ್ಪ?!, ನಾನು ಕಾರಣ ಕೇಳಬಹುದೇ?!


ಶಿವರಾಮ ರಾಯರು : ಹೇಳುತ್ತೇನೆ ಕಂದಾ, ಅದು ತುಂಬಾ ವರ್ಷಗಳ ಹಿಂದೆ ಅಂದರೆ ಸ್ವಾತಂತ್ರ್ಯ ಪೂರ್ವ ಕಾಲ. ಸ್ವಾತತ್ರ್ಯಪೂರ್ವದಲ್ಲಿ ಆಂಗ್ಲರು ನಮ್ಮನ್ನು ದಬ್ಬಾಳಿಕೆ ಮಾಡುತ್ತಿದ್ದರು ಮಗನೇ, ಶ್ರೀಮಂತಿಕೆಯಿಂದ ಕೂಡಿದ್ದ ನಮ್ಮ ದೇಶದ ಸಿರಿ, ಸಂಪತ್ತುಗಳನ್ನೆಲ್ಲಾ ದೋಚಿಕೊಂಡು, ನಮ್ಮನ್ನು ಅವರ ಗುಲಾಮರೆಂಬಂತೆ ನಡೆಸಿಕೊಳ್ಳುತ್ತಿದ್ದರು ಮಗನೇ. ನಮಗೆ ಯಾವ ಸ್ವಾತಂತ್ರ್ಯ ವೂ ಇರಲಿಲ್ಲ, ನಮ್ಮ ಸ್ವಾತಂತ್ರ್ಯವೆಲ್ಲಾ ಅವರ ಅಧೀನದಲ್ಲಿತ್ತು ಮಗನೇ.


ಆದಿ : ಆಗ ನಾವು ನಮ್ಮ ಸ್ವಾತಂತ್ರ್ಯಕ್ಕಾಗಿ ಏನು ಮಾಡಿದೆವು ಅಪ್ಪಾ?!, ಹೋರಾಟ ನಡೆಸಿದೆವೇ?!, ನಾವು ಆಚರಿಸುವ ಇಂದಿನ ನಮ್ಮ ಸ್ವಾತಂತ್ರ್ಯ ದಿನಾಚರಣೆಗೆ ಕಾರಣ ಯಾರಪ್ಪಾ?!


ಶಿವರಾಮ ರಾಯರು : ಹೌದು ಮಗನೇ, ನಾವು ನಮ್ಮ ಸ್ವಾತಂತ್ರ್ಯವನ್ನು ಪಡೆಯಲು ಹಲವು ವರ್ಷಗಳ ಕಾಲ ಹೋರಾಡಬೇಕಾಯಿತು. ಮಹಾನ್ ವ್ಯಕ್ತಿಗಳ ಸಾಧನೆ, ತ್ಯಾಗ, ಬಲಿದಾನಗಳ ಫಲವಾಗಿ ನಾವಿಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ ಮಗನೇ.


ಆದಿ : ಹೌದಾ ಅಪ್ಪಾ, ಆ ಮಹಾನ್ ವ್ಯಕ್ತಿಗಳ ಹೆಸರುಗಳೇನು ಅಪ್ಪಾ?


ಶಿವರಾಮ ರಾಯರು : ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಸುಭಾಷ್ ಚಂದ್ರಬೋಸ್, ಭಗತ್ ಸಿಂಗ್, ತಾಂಟ್ಯಾ ಟೋಪೆ, ಬಾಲ ಗಂಗಾಧರ ತಿಲಕ್, ದಾದಾಬಾಯಿ ನವರೋಜಿ, ಕೆ. ಗೋಪಾಲಕೃಷ್ಣ ಗೋಖಲೆ, ಎನ್. ಎಸ್. ಹರ್ಡೇಕರ್, ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಕಮಲಾದೇವಿ ಚಟ್ಟೋಪಾಧ್ಯಾಯರು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರೂ ಸೇರಿ ಹಲವು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಫಲವಾಗಿ ನಾವಿಂದು ಸ್ವಾಂತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದ್ದೇವೆ ಮಗನೇ. ಅಷ್ಟೇ ಅಲ್ಲದೇ ನಿನ್ನ ತಾತನೂ ಕೂಡ ಸಣ್ಣ ವಯಸ್ಸಿನಿಂದಲೇ ನಮ್ಮ ದೇಶದ ಸ್ವಾಂತತ್ರ್ಯಕ್ಕಾಗಿ ಹೋರಾಡಿದ ವ್ಯಕ್ತಿಯೇ ಮಗನೇ.


ಆದಿ : ಓಹ್ ಹೌದಾ ಅಪ್ಪಾ, ತಾತನೂ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೇ?!


ಶಿವರಾಮ ರಾಯರು : ಹೌದು ಮಗನೇ, ತಾತನು ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಮಯದಲ್ಲಿ, ತಾತನಂತಹ ಅನೇಕ ಪುಟ್ಟ ಪುಟ್ಟ ದೇಶ ಪ್ರೇಮಿಗಳು, ಬಿಸಿಲು, ಗಾಳಿ, ಮಳೆ, ಮಣ್ಣು, ಕಲ್ಲು, ಮುಳ್ಳುಗಳನ್ನು ಕೂಡ ಲೆಕ್ಕಿಸದೇ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಕೊನೆಯವರೆಗೂ ಹೋರಾಡಿ, ಅದೆಷ್ಟೋ ದೇಶ ಪ್ರೇಮಿಗಳು ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಿಟ್ಟರು ಮಗನೇ.


ಆದಿ : ಓಹ್ ಹೌದಾ ಅಪ್ಪಾ, ನನಗೆ ಇದು ತಿಳಿದೇ ಇರಲಿಲ್ಲ!!


ಶಿವರಾಮ ರಾಯರು : ಅಂದು ನಿನ್ನ ತಾತನು ನನ್ನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಥೆಗಳನ್ನು ಹೇಳಿ ನಿದ್ದೆ ಮಾಡಿಸುತ್ತಿದ್ದರು, ಅದೆಷ್ಟೋ ಪುಟ್ಟ ದೇಶ ಪ್ರೇಮಿಗಳು ಪರಕೀಯರಿಂದ ನಮ್ಮ ದೇಶವನ್ನು ದಾಸ್ಯ ಮುಕ್ತವನ್ನಾಗಿ ಮಾಡಲು, ಕಲ್ಲು, ಮುಳ್ಳು, ಮಳೆ, ಗಾಳಿ, ಬಿಸಿಲೂ ಎನ್ನದೇ ಹಗಲಿರುಳು ಕಷ್ಟಪಟ್ಟಿದ್ದರು. ನಮ್ಮ ಭಾರತ ಮಾತೆಯನ್ನು ರಕ್ಷಿಸಲೆಂದು ಆಂಗ್ಲರ ವಿರುದ್ಧ ಹೋರಾಡಿ ತಮ್ಮ ಜೀವವನ್ನೇ ಪಣಕ್ಕಿಟ್ಟಿದ್ದರು!!, ಅವರು ಬ್ರಿಟಿಷರ ವಿರುದ್ಧ ಹೋರಾಡಿ ಕೊನೆಗೂ ನಮಗೆ ಆಗಸ್ಟ್ 14, 1947 ರ ಮಧ್ಯರಾತ್ರಿ ಸ್ವಾತಂತ್ರ್ಯ ಸಿಕ್ಕಿತು ಮಗನೇ. 


ನಿನ್ನ ತಾತನೂ ಕೂಡ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು ಅಲ್ಲವೇ?!, ಆಗ ತಾತನು ನಾನು ಕೂಡ ಸ್ವಾತಂತ್ರ್ಯ ಸಿಕ್ಕಿದ ಖುಷಿಯಲ್ಲಿ, ನಮ್ಮ ದೇಶದ ತ್ರಿವರ್ಣ ಧ್ವಜವನ್ನು ಹಿಡಿದು, ಕಲ್ಲು, ಮುಳ್ಳು, ಬೆಟ್ಟ, ಗುಡ್ಡ, ಬಿಸಿಲು, ಮಳೆ, ಗಾಳಿ ಎನ್ನದೇ ಸಂತೋಷದಲ್ಲಿ ಓಡಿ ಸಂಭ್ರಮಿಸಿದ್ದೆ ಎಂದಿದ್ದರು, ರಾಷ್ಟ್ರ ಧ್ವಜವನ್ನು ಹಿಡಿದ ಓಟವು ಬರೀ ಖುಷಿಗಷ್ಟೇ ಅಲ್ಲ ಮಗನೇ, ಈ ದೇಶವು ಧ್ವಜದ ಮಧ್ಯೆಯಲ್ಲಿನ ಅಶೋಕ ಚಕ್ರದಂತೆ ಪ್ರಗತಿಯತ್ತ ಓಡಲಿ ಮಗನೇ ಎಂದಿದ್ದರು ಕೂಡ. ಅವರ ಜೀವಿತದ ಅವಧಿಯಲ್ಲಿಯೇ ನಮ್ಮ ದೇಶವು ವಿಶ್ವದ ಇತರ ದೇಶಗಳಿಗೆ ಏನೂ ಕಡಿಮೆ ಇಲ್ಲ, ಶಾಂತಿ, ಸಹಬಾಳ್ವೆಯ ವಿಶ್ವಕ್ಕೆಲ್ಲಾ ಬೋಧಿಸಿದ ಗುರು ನಮ್ಮ ದೇಶ ಎಂದು ಹೆಮ್ಮೆ ಪಟ್ಟಿದ್ದರು ಹಾಗೂ ನಮ್ಮ ದೇಶದ ಪ್ರಗತಿಯನ್ನು ಕಂಡು ತುಂಬಾ ಖುಷಿ ಪಟ್ಟಿದ್ದರು ಮಗನೇ. 


ಆದರೆ ಮಗನೇ, ಈಗ ನಿನ್ನ ತಾತನು ನಮ್ಮೊಂದಿಗೆ ಇಲ್ಲ ಆದರೆ ಅವರ ನೆನಪಿಗಾಗಿ ನಾನು ನನ್ನ ಅಪ್ಪ ಚಿಕ್ಕ ವಯಸ್ಸಿನಲ್ಲಿ ಹೀಗೆ ಇದ್ದಿರಬಹುದೆಂದು ನನ್ನ ಕಲ್ಪನೆಯ ಚಿತ್ರವನ್ನು ಬಿಡಿಸಿ, ನಮ್ಮ ಗೋಡೆಯ ಮೇಲೆ ಅಂಟಿಸಿದ್ದೆ, ನಾನು ಪ್ರತಿದಿನವೂ ಈ ಚಿತ್ರವನ್ನು ನೋಡಿ ನನ್ನ ಅಪ್ಪನನ್ನು ನೆನೆದು ಭಾವುಕನಾಗುತ್ತೇನೆ ಮಗನೇ. ಇಂದು ಸ್ವಾತಂತ್ರ್ಯ ದಿನವಲ್ಲವೇ ಮಗನೇ?!, ಹಾಗಾಗಿ ಇಂದು ನನಗೆ ಈ ಚಿತ್ರವನ್ನು ಕಂಡ ತಕ್ಷಣ ದೇಶ ಪ್ರೇಮ ಎಂಬುದು ನನ್ನ ಉಸಿರಿನಲ್ಲಿದೆ, ನನ್ನ ರಕ್ತದಲ್ಲಿದೆ ಎಂಬ ಹೆಮ್ಮೆಯಾಯಿತು ಹಾಗೂ ಈ ಮಣ್ಣಿಗಾಗಿ ಹೋರಾಡಿದ ನಿನ್ನ ತಾತನನ್ನು ಈ ಚಿತ್ರದಲ್ಲಿ ಕಂಡ ತಕ್ಷಣ ಖುಷಿಯಿಂದ ಆನಂದ ಭಾಷ್ಪವಾಯಿತು ಮಗನೇ.


ಆದಿ : ನಾನು ನನ್ನ ತಾತ ತೀರಿ ಹೋದಾಗಿನಿಂದ ಈ ಚಿತ್ರವನ್ನು ನಮ್ಮ ಮನೆಯ ಗೋಡೆಯ ಮೇಲೆ ನೋಡುತ್ತಿದ್ದೇನೆ ಆದರೆ ನನಗೆ ಇದು ನನ್ನ ಅಜ್ಜನ ಚಿತ್ರವೇ ಎಂದು ಗೊತ್ತಿರಲಿಲ್ಲ. ನಾನು ಬೇರೆ ಯಾವುದೋ ಪುಟ್ಟ ಹುಡುಗನು ತ್ರಿವರ್ಣ ಧ್ವಜವನ್ನು ಹಿಡಿದು ಓಡಿದ ಚಿತ್ರವಿರಬಹುದು ಎಂದು ಅಂದುಕೊಂಡಿದ್ದೆ ಅಪ್ಪಾ, ಆದರೆ ನನಗೆ ಈಗ ತಿಳಿಯಿತು ನೋಡಿ ನಿಮ್ಮ ಕಲ್ಪನೆಯ ಚಿತ್ರದ ಒಳಗಿನ ಗುಟ್ಟು!! 


 ಚಿಕ್ಕಂದಿನಿಂದಲೇ ನನ್ನ ಜೊತೆ ಆಡಿ, ನನಗೆ ನೀತಿ ಕಥೆಗಳನ್ನು ಬೋಧಿಸಿ, ನನ್ನ ಜೊತೆ ಮಕ್ಕಳಂತೆ ಇರುತ್ತಿದ್ದ ನನ್ನ ತಾತನ ಕುರಿತು ಅವರು ಎಂದಿಗೂ ನನ್ನಲ್ಲಿ ಹೇಳಿರಲಿಲ್ಲ ಅಪ್ಪಾ, ಈ ವಿಷಯ ತಿಳಿದ ನಂತರ ನನಗೂ ನನ್ನ ತಾತನ ಬಗ್ಗೆ ಹೆಮ್ಮೆಯಾಗುತಿದೆ ಅಪ್ಪಾ.


ತಾತ ನೀವು ಮತ್ತೊಮ್ಮೆ ನನ್ನ ಮಗನಾಗಿ ಹುಟ್ಟಿ ಬನ್ನಿ ತಾತ ಎಂದು ಹೇಳುತ್ತಾ, ಆ ಗೊಡೆಯಲ್ಲಿರುವ ಚಿತ್ರವನ್ನು ಅಪ್ಪಿ ಹಿಡಿದು, ತನ್ನ ತಾತನನ್ನು ನೆನೆದು ಅಳತೊಡಗಿದನು ಆದಿ.


Rate this content
Log in

Similar kannada story from Abstract