ಜೀವನ ಅಂದು _ ಇಂದು
ಜೀವನ ಅಂದು _ ಇಂದು
ಅಜ್ಜಿ ಅಜ್ಜಿ ನಂಗೊಂದು ಕಥೆ ಹೇಳಜ್ಜಿ ಎನ್ನುತ್ತಾ ಆಕೆಯ 23 ವಯಸ್ಸಿನ ಮುದ್ದಾದ ಮೊಮ್ಮಗಳು ಅಜ್ಜಿಯ ಬಳಿ ಬಂದಳು, ಆಗ ಅಜ್ಜಿಯು ನನ್ನ ಜೀವನದ ಅನುಭವವನ್ನೇ ಕಥೆಯ ರೂಪದಲ್ಲಿ ಹೇಳುವೆ ಎಂದು ಮೊಮ್ಮಗಳಿಗೆ ಕಥೆ ಹೇಳಲು ಪ್ರಾರಂಭಿಸಿದರು, ಮೊಮ್ಮಗಳು ಸ್ನೇಹಾ ಅತಿ ಕಾತರದಿಂದ ಅಜ್ಜಿ ಹೇಳುವ ಕಥೆಯನ್ನು ಆಲಿಸಿದಳು.
ಅಜ್ಜಿಯು ನನಗೆ 7 ಜನ ಅಕ್ಕಂದಿರು, ಕೊನೆಯ ಹೆಣ್ಣು ಮಗಳು ನಾನು, ನನಗೆ ಒಬ್ಬ ತಮ್ಮಾ ಎಂಬುದು ನಿನಗೆ ತಿಳಿದದ್ದೇ ತಾನೇ ಸ್ನೇಹಾ ಎಂದು ತನ್ನ ಮೊಮ್ಮಗಳಲ್ಲಿ ಹೇಳಿದಳು, ಆಗ ಸ್ನೇಹಾಳು ಹಾ ನನಗೆ ಗೊತ್ತು ಅಜ್ಜಿ ಎಂದಳು.
ಅಜ್ಜಿಯು ತನ್ನ ಜೀವನದ ಕಥೆಯನ್ನು ಮುಂದುವರಿಸುತ್ತಾ, ಈಗಿನಂತಿರಲಿಲ್ಲ ನಮ್ಮ ಅಂದಿನ ಜೀವನ, ತುಂಬಾ ಕಷ್ಟದ ಜೀವನ, ಒಂದೊಂದು ಕಾಸಿಗೂ ಪರದಾಡುವ ಕಾಲ, ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವ ಕಾಲವದು, ನನ್ನ ತಂದೆ, ತಾಯಿ ಕಷ್ಟ ಪಟ್ಟು ನಮ್ಮನೆಲ್ಲಾ ಸಾಕಿ ಸಲಹುತ್ತಿದ್ದರು ಆದರೂ ಅವರಿಗೊಂದು ಗಂಡು ಮಗು ಬೇಕು ಎಂಬ ಆಶಯದಿಂದ ಪ್ರಯತ್ನಿಸುತ್ತಿದ್ದರು, ದೇವರು ಕೊನೆಗೂ ಅವರ ಪ್ರಯತ್ನಕ್ಕೆ ಪ್ರತಿಫಲವೆಂಬಂತೆ 8 ಜನ ಹೆಣ್ಣು ಮಕ್ಕಳ ನಂತರ ಒಬ್ಬ ಗಂಡು ಮಗುವನ್ನು ಕರುಣಿಸಿದನು, ವಂಶೋದ್ಧಾರಕನಾದ ಗಂಡು ಮಗ ಜನಿಸಿದನಲ್ಲಾ ಎಂಬ ಖುಷಿಯು ಅವರಿಗಿತ್ತು.
ಅಂದಿನ ಕಾಲದಲ್ಲಿ ಹೆಣ್ಣು ಗಂಡು ಎಂಬ ಬೇಧವು ಹೆಚ್ಚಾಗಿ ಇದ್ದ ಕಾರಣ ಹೆಣ್ಣು ಮಕ್ಕಳಿಗೆ ಜಾತಕ ಮಾಡಿಸುತ್ತಿರಲಿಲ್ಲ!!, ಹೆಚ್ಚಿನ ವಿದ್ಯಾಭ್ಯಾಸವೂ ಹೆಣ್ಣು ಮಕ್ಕಳಿಗೆ ನೀಡುತ್ತಿರಲಿಲ್ಲ, ಈಗಿನಂತಲ್ಲ ಅಂತಹ ಕಷ್ಟದ ಪರಿಸ್ಥಿತಿಯೂ ಅಂದಿನ ಕಾಲದಲ್ಲಿ ಇದ್ದ ಕಾರಣ ಹೆಣ್ಣು ಮಕ್ಕಳನ್ನು ಋತುಮತಿಯಾದ ತಕ್ಷಣ ಅಥವಾ ಋತುಮತಿಯಾಗುವ ಮುನ್ನವೇ ಗಂಡಿನ ವಿವರಗಳನ್ನು ಹೆಚ್ಚು ವಿಮರ್ಶೆ ಮಾಡದೇ ಅವನು ಕುರುಡನಾದರೂ ಸರಿಯೇ, ಕುಂಟನಾದರೂ ಸರಿಯೇ , ಅವನ ಮನೆಯವರು ಹೇಗಿದ್ದರೂ ಸರಿಯೇ ಮಗಳನ್ನು ಧಾರೆಯೆರೆದು ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದ ಕಾಲವದು!!
ಅದೃಷ್ಟವಶಾತ್ ಎಂಬಂತೆ ನಮಗೆ ಅಕ್ಕ ತಂಗಿಯರಿಗೆ ಎಲ್ಲರಿಗೂ ಕೂಡ ಸರಿಯಾದ ವರರೇ ಸಿಕ್ಕಿದರು ಆದರೆ ನನ್ನ ದೊಡ್ಡಪ್ಪನ ಮಗಳು ಅಕ್ಕನಿಗೆ ಮಾತ್ರ ಅಂಗವೈಕಲ್ಯ ಹೊಂದಿರುವ ಗಂಡ ಸಿಕ್ಕಿದ್ದ ಆದರೆ ಅಂಗವಿಕಲತೆ ಅವನಿಗಿದ್ದರೂ ಕೂಡ ಅವನ ಹಾಗೂ ಮನೆ ಮಂದಿಯ ಗುಣ ಚೆನ್ನಾಗಿದ್ದ ಕಾರಣ ಆಕೆಗೆ ಹೊಂದಿಕೊಳ್ಳಲು ಕಷ್ಟವೆನಿಸಲಿಲ್ಲ.
ಹಾಗೆಯೇ ನಾನು ಈ ತುಂಬು ಕುಟುಂಬಕ್ಕೆ ವಿವಾಹವಾಗಿ ಬಂದೆ, ಹಳೆಯ ಮನೆ, ಅಲ್ಲಿ ಇಲ್ಲಿ ಸೋರುತ್ತಿದ್ದ ಛಾವಣಿ, ಬಾತ್ರೂಂ, ಟಾಯ್ಲೆಟ್ ವ್ಯವಸ್ಥೆ ಇಲ್ಲ, ಟಾಯ್ಲೆಟ್ ಗೆಂದು ಪಕ್ಕದ ಗುಡ್ಡಗೆ ಚೊಂಬು ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ!!, ಮನೆಯಿಂದ ಸ್ವಲ್ಪ ದೂರದಲ್ಲಿ ತೋಟದಲ್ಲಿ ಸೋಗೆಯ ಪೊದೆ ಕಟ್ಟಿ ಮಾಡಿದ ಸ್ನಾನ ಗೃಹದಲ್ಲಿ ಸ್ನಾನ ಮಾಡುತ್ತಿದ್ದೆವು, ವಿದ್ಯುತ್ ಸೌಲಭ್ಯ ಇರಲಿಲ್ಲ, ಎಲ್ಲಾ ಕಾರ್ಯಗಳಿಗೂ ನೀರನ್ನು ಕೆಳಗಿನ ಬಾವಿಯಿಂದ ನೀರನ್ನು ಎತ್ತಿ ಮೆಟ್ಟಿಲು ಹತ್ತಿಕೊಂಡು, ಕೊಡವನ್ನು ಸೊಂಟದಲ್ಲಿ ಎತ್ತಿಕೊಂಡು ತರಬೇಕಾಗಿತ್ತು , ಸ್ವಲ್ಪ ತೋಟ, ಗುಡ್ಡೆ ಇತ್ತಾದರೂ ಗುಡ್ಡೆಗೆ ಹೋಗಿ ನಾವೇ ಕಟ್ಟಿಗೆ ಮಾಡಿ ತಂದು ಒಲೆ ಉರಿಸಿ ಅಡಿಗೆ ಮಾಡಬೇಕಾದ ಪರಿಸ್ಥಿತಿ!!, ಈಗಿನ ಅಡಿಕೆ, ತೆಂಗುಗಳ ತೋಟ ಆಗ ಇರಲಿಲ್ಲ, ಆಗ ಭತ್ತದ ಗದ್ದೆಯಿತ್ತು, ಅದರಿಂದ ನೇಜಿ ನೆಟ್ಟು, ಅಕ್ಕಿ ತಯಾರಿಸಿ ಊಟ ಮಾಡುತ್ತಿದ್ದೆವು.
ಕೆಲಸವೋ ಕೆಲಸ ಆಗ ಬಿಡುವಿಲ್ಲದ ರೀತಿ!!, ಮನೆಯ ಯಜಮಾನನಿಗೆ ಗದ್ದೆಯ ಕಡೆಗೆ ಹೋಗಿ ಗದ್ದೆ ವ್ಯವಸಾಯವನ್ನು ನೋಡಿಕೊಳ್ಳುವ ಕೆಲಸವಾದರೆ, ಮನೆಯ ಗೃಹಿಣಿಯರು ಸೀರೆ ಉಟ್ಟು, ಕೈ ತುಂಬಾ ಬಳೆ ತೊಟ್ಟು, ನೀಳವಾದ ಜಡೆ ತುಂಬಾ ಹೂವನ್ನು ಮುಡಿದುಕೊಂಡು, ತುಂಬು ಕುಟುಂಬದ ಜವಾಬ್ದರಿಗಳನ್ನು ನಿಭಾಯಿಸುವುದರ ಜೊತೆಗೆ ಹೊತ್ತು ಹೊತ್ತಿಗೆ ಗಂಡನಿಗೆ ಊಟ, ನೀರು, ತಿಂಡಿಯ ವ್ಯವಸ್ಥೆಯನ್ನು ಗದ್ದೆಗೆ ಹೊತ್ತುಕೊಂಡು ಹೋಗಿ, ಅಲ್ಲಿ ಅವರಿಗೆ ನೆರವಾಗುವ ಜವಾಬ್ದಾರಿಯೂ ಇತ್ತು!!
ಎಷ್ಟಾದರೂ ಹೆಣ್ಣಲ್ಲವೇ??, ಎಲ್ಲರ ಚುಚ್ಚು ಮಾತುಗಳನ್ನು ಸಹಿಸಿಕೊಂಡು, ಮರು ಮಾತನಾಡದೇ, ಎಲ್ಲರ ಜೊತೆಗೂ ಹೊಂದಿಕೊಂಡು, ನಗು ನಗುತಾ ಬಾಳಬೇಕು ಇದುವೇ ವಿಧಿ ನಿಯಮ, ಹಾಗೆಯೇ ಮನೆಯಲ್ಲಿಯೇ ಕಾರ್ಯಕ್ರಮಗಳು ನಡೆಯುತ್ತಿದ್ದುದರಿಂದ ಕಾರ್ಯಕ್ರಮಗಳ ಸಮಯದಲ್ಲಿ ಒಂದು ತಿಂಗಳಿನ ಮುಂಚೆಯೇ ಮನೆಗೆ ಬಂದು ಸೇರುವ ನೆಂಟರಿಷ್ಟರು!!, ಸಣ್ಣ ಮನೆಯಲ್ಲಿನ ಸೋರುವ ಛಾವಣಿಯಲ್ಲಿ, ಕಷ್ಟದ ಪರಿಸ್ಥಿತಿಯಲ್ಲಿ ಹೊತ್ತು ಹೊತ್ತಿಗೂ ಒಲೆ ಉರಿಸಿ ಅನ್ನ, ಸಾಂಬಾರು, ತಿಂಡಿ ಮಾಡಿ, ಬಾವಿಯಿಂದ ನೀರು ಸೇದಿ ಎಲ್ಲರಿಗೂ ಉಣಬಡಿಸಿ, ಒಂದೊಂದು ಮನಸ್ಥಿತಿಯ ಪ್ರತಿಯೊಬ್ಬರಲ್ಲಿಯೂ ಕೂಡ ಹೊಂದಿಕೊಂಡು ಬಾಳಬೇಕಾದುದು ಸೊಸೆಯಾದವಳ ಕರ್ತವ್ಯವಾಗಿತ್ತು!!, ಹಾಗೆಯೇ ಅಂದಿನ ಕಾಲದಲ್ಲಿ ಈಗಿನಂತೆ ವಾಹನಗಳ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಬರುವ ನೆಂಟರಿಷ್ಟರು ಕೂಡ 1 ವಾರಗಳ ಕಾಲ ತಂಗಿಯೇ ಹೋಗುತ್ತಿದ್ದರು.
ಅಂದು ಇಂದಿನಂತೆ ಫೋನ್ ಇಲ್ಲದೇ ಇದ್ದ ಕಾರಣ ಅಚಾನಕ್ ಆಗಿ ನೆಂಟರಿಷ್ಟರು ಆಗಮಿಸುತ್ತಿದ್ದರು, ಕೆಲವೊಮ್ಮೆ ಊಟದ ಹೊತ್ತಿಗಂತೂ ಬಂದಾಗ, ಮನೆ ಮಂದಿಗೆ ಮಾತ್ರ ಲೆಕ್ಕದ ಊಟ ತಯಾರಿಸಿದ ಸಂದರ್ಭಗಳಲ್ಲಿ ಪುನಃ ಒಲೆ ಉರಿಸಿ, ಅಡಿಗೆ ಮಾಡಿ ಬಡಿಸುವ ಕೆಲಸ ಗೃಹಿಣಿಗೆ ಬಂದೊದಗುತಿತ್ತು.
ಎಲ್ಲಾ ಕೆಲಸಗಳನ್ನೂ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು, ಮನೆ, ಸಂಸಾರವೆಂದು ಹಗಲಿರುಳು ಬಲು ತಾಳ್ಮೆಯಿಂದ ಕಷ್ಟದ ಜೀವನ ನಡೆಸುವ ಪರಿಸ್ಥಿತಿಯು ನನಗೆ ಬಂದೊದಗಿತ್ತು ಸ್ನೇಹಾ ಎಂದು ತನ್ನ ಜೀವನದ ಅನುಭವಗಳನ್ನು ಒಂದೊಂದಾಗಿ ಅಜ್ಜಿಯು ಸ್ನೇಹಾಳಿಗೆ ವಿವರಿಸಿದಾಗ, ಸ್ನೇಹಾಳಿಗೆ ಅಂದಿನ ಕಾಲದ ಜೀವನಕ್ಕೂ, ಇಂದಿನ ಕಾಲದ ಜೀವನಕ್ಕೂ ಇರುವ ವ್ಯತ್ಯಾಸ ಸರಿಯಾಗಿ ತಿಳಿಯಿತು.
ಅಜ್ಜಿಯ ಜೀವನದ ಅನುಭವಗಳನ್ನು ಕೇಳುತ್ತಾ ಇದ್ದಾಗ, ಓಹ್ ಅಜ್ಜಿ ಕಥೆ ಕೇಳುತ್ತಾ ಫೋನ್ ನೋಡುವುದನ್ನೇ ಮರೆತೆ ನೋಡಿ, ಇಂದು ನನ್ನ ಸ್ನೇಹಿತೆಯ ಮನೆಯಲ್ಲಿ ಗೃಹ ಪ್ರವೇಶವಿದೆ ವಾಟ್ಸ್ ಆ್ಯಪ್ ನಲ್ಲಿ ಬನ್ನಿ ಎಂದು ಆಹ್ವಾನಿಸಿದ್ದಳು, ಹೋಗದೇ ಇದ್ದರೆ ನೊಂದುಕೊಳ್ಳುವಳು ಎನ್ನುತ್ತಾ ತನ್ನ ಸ್ಕೂಟಿ ಯೇರಿ ಹೊರಡಲು ಅನುವಾದ ಮೊಮ್ಮಗಳನ್ನು ಕಂಡು ಅಜ್ಜಿಯು ಮೊಗದಲ್ಲಿ ಕಿರು ನಗೆಯನ್ನು ಬೀರಿ, ಅಂದಿನ ಕಾಲಕ್ಕೂ ಈಗಿನ ಕಾಲಕ್ಕೂ ಎಷ್ಟು ಅಂತರವಿದೆ, ಈಗಿನ ಕಾಲದಲ್ಲಿ ಕೈ ಬೆರಳಿನ ತುದಿಯಲ್ಲಿಯೇ ಆಹ್ವಾನ ನೀಡಲೂ ಆಗುತ್ತದೆ, ಬೇಕಾದ ವಸ್ತಗಳನ್ನು ಖರೀದಿಸಲೂ ಸಾಧ್ಯವಾಗುತ್ತದೆ, ಅದೆಷ್ಟೋ ಅಂತರದಲ್ಲಿರುವ ಅಪರಿಚಿತರು ಕೂಡ ಸ್ನೇಹಿತರಾಗಬಲ್ಲರು, ಹಾಗೆಯೇ ಇಂದಿನ ಆಧುನಿಕತೆಯ ಜೀವನ ಶೈಲಿಯಲ್ಲಿ ಅಂದಿನ ಸಂಸ್ಕೃತಿ, ಸಂಪ್ರದಾಯಗಳು, ವ್ಯಕ್ತಿ ವ್ಯಕ್ತಿಯ ನಡುವಿನ ಪ್ರೀತಿ, ಸ್ನೇಹ, ನಂಬಿಕೆ, ಸಂಬಂಧಗಳು ಮರೆಯಾಗುತ್ತಿವೆ ಎಂಬಂತೆ ಸ್ನೇಹಾಳ ಅಜ್ಜಿಗೆ ಭಾಸವಾಯಿತು!!, ನನಗೂ ಹಾಗೆಯೇ ಭಾಸವಾಗುತ್ತಿದೆ ಮತ್ತೆ ನಿಮಗೆ??
