Joshi Studio Channel

Comedy

3.0  

Joshi Studio Channel

Comedy

ಗುಂಡನ ಕಿತಾಪತಿ

ಗುಂಡನ ಕಿತಾಪತಿ

2 mins
1.2K


ರಾಮಾಪುರ ಎಂಬ ಊರಿನಲ್ಲಿ ಶಂಕ್ರಪ್ಪ ಮತ್ತು ರೇವತಿ ಎಂಬ ದಂಪತಿ ವಾಸವಾಗಿದ್ದರು. ಶಂಕ್ರಪ್ಪ ಒಂದು ದಳ್ಳಾಳಿ ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸವನ್ನು ನಿರ್ವಹಿಸುತ್ತಿದ್ದನು.ಈ ದಂಪತಿಗೆ ಗುಂಡ ಮತ್ತು ಗಂಗಾ ಎಂಬ ಇಬ್ಬರು ಮಕ್ಕಳಿದ್ದು ಶಂಕ್ರಪ್ಪ ಅಷ್ಟೇನು ಸ್ಥಿತಿವಂತನಲ್ಲದಿದ್ದರೂ ಇತ್ತೀಚೆಗಷ್ಟೇ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಮಗಳ ಮದುವೆಯನ್ನು ಮಾಡಿದ್ದನು.ಇವರ ಮಗ ಗುಂಡ ತಕ್ಕ ಶಿಕ್ಷಣವನ್ನು ಪಡೆಯದಿದ್ದರೂ ಕಿತಾಪತಿ ಮಾಡುವುದರಲ್ಲಿ ಪಳಗಿದ್ದನು. ಹೀಗೆಯೇ ಒಂದು ದಿನ ಶಂಕ್ರಪ್ಪ ತನ್ನ ಹೆಂಡತಿ ರೇವತಿಯೊಂದಿಗೆ ಮಾತನಾಡುತ್ತಾ ಹೇಗೋ ದೇವರ ದಯೆ ಮಗಳ ಮದುವೆಯಾಯಿತು. ಮುಂದೆ ಅವಳ ಸಂಸಾರ, ಅವಳ ಮಕ್ಕಳ ಶಿಕ್ಷಣ ಜವಾಬ್ದಾರಿ ಹೇಗೋ ಏನೋ? ಅದಕ್ಕೆ ರೇವತಿ ನಗುತ್ತ ರೀ ಮದುವೆ ಮಾಡಿ ನಾಲ್ಕು ತಿಂಗಳು ಆಗಿದೆ. ಈಗ್ಯಾಕೆ ಅದರ ಬಗ್ಗೆ ಚಿಂತಿಸ್ತೀರಾ? ಅಲ್ಲವೇ ಜೀವನದಲ್ಲಿ ಲೆಕ್ಕಾಚಾರ ಇರಬೇಕು, ಖರ್ಚು ವೆಚ್ಚ ಅಂದರೆ ಸಾಮಾನ್ಯನಾ? ರೀ  ನಿಮ್ಮ ಸ್ಪೀಡ್ ನೋಡಿದರೆ ಮಗು ಹುಟ್ಟುವ ಮೊದಲೇ ಶಾಲೆಯಲ್ಲಿ ಸೀಟ್ ಬುಕ್ ಮಾಡ್ತೀರಾ? ಏನು ಕಥೆ?


ಅಷ್ಟು ಹೊತ್ತಿಗೆ ಆಗಲೇ ಇವರು ಮಾತನಾಡುತ್ತಿದ್ದನ್ನು ಅರ್ಧಂಬರ್ಧ ಕೇಳಿಸಿಕೊಂಡ ಗುಂಡ ತನ್ನ ತಂದೆ ತಾಯಿ ಕಡೆ ಬುದ್ಧಿವಂತ ಎಂದು ಎನಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ನೇರವಾಗಿ ಒಂದು ಶಾಲೆಯ ಕಡೆ ಹೊರಟನು. ಶಾಲೆಯ ಕಛೇರಿಯಲ್ಲಿ ಮುಖ್ಯೋಪಾಧ್ಯಾಯರು ಒಂದು ಫೈಲನ್ನು ಪರಿಶೀಲಿಸುತ್ತಿದ್ದರು, ಜೊತೆಯಲ್ಲಿ ಒಬ್ಬ ಸಿಬ್ಬಂದಿ ಕೂಡ ನಿಂತಿದ್ದರು. ಅಷ್ಟರಲ್ಲಿ ಕಛೇರಿಯನ್ನು ಪ್ರವೇಶಿಸಿದ ಗುಂಡನನ್ನು ನೋಡಿ ಮುಖ್ಯೋಪಾಧ್ಯಾಯರು ಬನ್ನಿ ಕುಳಿತುಕೊಳ್ಳಿ ಎಂದಾಗ ಕುಳಿತ ಗುಂಡ ತನ್ನ ಪರಿಚಯವನ್ನು ಮಾಡಿಕೊಂಡು ನಮ್ಮ ಮಗುಗೆ ನಿಮ್ಮ ಶಾಲೆಯಲ್ಲಿ ಅಡ್ಮಿಷನ್ ಮಾಡಿಸಲು ಬಂದಿದ್ದೇನೆ. ಇವನ ಮಾತನ್ನು ಕೇಳಿ ಮುಖ್ಯೋಪಾಧ್ಯಾಯರು ತುಂಬ ಸಂತೋಷ, ನಿಮ್ಮ ಮಗುನಾ? ಅಲ್ಲ ನನ್ನ ಅಕ್ಕನ ಮಗು, ಮಗುವನ್ನು ಕರೆದುಕೊಂಡು ಬಂದಿದ್ದೀರಾ? ಇಲ್ಲ, ಮುಖ್ಯೋಪಾಧ್ಯಾಯರು ಮಗುವನ್ನು ಕರೆದುಕೊಂಡು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಆಗ ಗುಂಡ ಅದು ಸಾಧ್ಯವಿಲ್ಲ, ನನ್ನ ಅಕ್ಕ ಬೇರೆ ಊರಿನಲ್ಲಿದ್ದಾಳೆ, ಓಕೆ ಆದರೆ ಮಗು ಎಲ್ಲಿ, ನನ್ನ ಅಕ್ಕನ ಹೊಟ್ಟೆಯಲ್ಲಿ ಅದಲ್ಲದೆ ಮಗು ಇನ್ನೂ ಹುಟ್ಟಿಲ್ಲ!


ಇವನ ಮಾತನ್ನು ಕೇಳಿದ ಮುಖ್ಯೋಪಾಧ್ಯಾಯರು ಮತ್ತು ಜೊತೆಯಲ್ಲಿದ್ದ ಸಿಬ್ಬಂದಿ ಕಂಗಾಲಾಗಿದ್ದಲ್ಲದೆ ಅವರಿಗೆ ಮೂರು ಲೋಕವನ್ನು ಸುತ್ತಿಬಂದ ಹಾಗೆ ಆಗಿತ್ತು. ಆಗಲೇ ಇವನ ಬುದ್ಧಿವಂತಿಕೆಯನ್ನು ಅರ್ಥ ಮಾಡಿಕೊಂಡ ಮುಖ್ಯೋಪಾಧ್ಯಾಯರು ಅದು ಸರಿ ಈಗ್ಯಾಕೆ ಬಂದಿದ್ದು? ಅದಕ್ಕೆ ಗುಂಡ ಈಗ ತಾನೇ ಹೇಳಿದ್ದನಲ್ಲ ಮಗು ಅಡ್ಮಿಷನ್ ಗೆ ಬಂದಿದ್ದೇನೆಂದು, ಮುಖ್ಯೋಪಾಧ್ಯಾಯರಿಗೆ ತಲೆ ಕೆಟ್ಟು ಬಟ್ಟೆ ಹರಿದುಕೊಂಡು ಹೋಗುವುದೊಂದು ಬಾಕಿಯಿತ್ತು. ಅಲ್ಲರೀ ಮಗು ಇಲ್ಲದೇ ಈಗಿನ ಕಾಲದಲ್ಲಿ ಯಾರು ಅಡ್ಮೀಷನ್ ಮಾಡಿಸುತ್ತಾರಾ ನೀವೇ ಹೇಳಿ ನೋಡೋಣ?

ಆ ರೀತಿ ನಮಗೆ ಮಾಡಲು ರೂಲ್ಸ್ ಕೂಡ ಇಲ್ಲ. ಆಗ ಗುಂಡ ನಾನು ಮಾಡಿಸ್ತಿನಲ್ಲ, ಇವನ ಮಾತನ್ನು ಕೇಳಿ ಮುಖ್ಯೋಪಾಧ್ಯಾಯರಿಗೆ ಕೋಪ ನೆತ್ತಿಗೇರಿದ್ದರೂ ತೋರಿಸಿಕೊಡದೇ ತಾಳ್ಮೆಯಿಂದ ನಿಮ್ಮನ್ನು ಇಲ್ಲಿ ಯಾರು ಕಳಿಸಿದ್ದು? ಅದಕ್ಕೆ ಗುಂಡ ಯಾರು ಕಳಿಸಿಲ್ಲ, ನಾನೇ ಬಂದಿದ್ದೇನೆ. ಯಾಕೆ? ನನ್ನ ತಂದೆ ತಾಯಿ ಮಗುವಿಗೆ ಶಾಲೆಯಲ್ಲಿ ಸೀಟ್ ಕೊಡಿಸುವುದರ ಕುರಿತು ಮಾತನಾಡುತ್ತಿದ್ದರು. ಅದಕ್ಕೆ ಅಡ್ಮಿಷನ್ ಮಾಡಿಸಲು ಬಂದಿದ್ದೇನೆ. ಇವನ ಸಮಸ್ಯೆಯನ್ನು ಅರ್ಥಮಾಡಿಕೊಂಡ ಮುಖ್ಯೋಪಾಧ್ಯಾಯರು ಸದ್ಯ ನಮ್ಮಲ್ಲಿ ಸೀಟ್ ಖಾಲಿ ಇಲ್ಲ, ಇನ್ನೂ ಐದು ವರ್ಷ ಬಿಟ್ಟು ಬನ್ನಿ ನಿಮ್ಮ ಮಗುವಿಗೆ ಖಂಡಿತವಾಗಿ ಸೀಟು ಕೊಡುತ್ತೇನೆ ಎಂದು ಹೇಳಿದಾಗ ಗುಂಡ ಸರಿ ಐದು ವರ್ಷ ಆದ ಮೇಲೆ ಬಂದು ಅಡ್ಮಿಷನ್ ಮಾಡಿಸುತ್ತೇನೆ ಎಂದು ಹೇಳಿ ಹೊರಟನು.


ಇತ್ತ ಕಡೆ ಮನೆಯಲ್ಲಿ ತಂದೆ ತಾಯಿ ಹೇಳದೇ ಎಲ್ಲಿ ಹೋದ ಎಂದು ಚಿಂತಿಸುತ್ತ ಇವನ ದಾರಿಯೇ ಕಾಯುತ್ತಿದ್ದರು. ಅಷ್ಟರಲ್ಲಿ ಮನೆಗೆ ಬಂದ ಗುಂಡನನ್ನು ತಾಯಿ ಇಷ್ಟು ಹೊತ್ತು ಎಲ್ಲಿಗೆ ಹೋಗಿದ್ದೆ? ಗುಂಡ ಶಾಲೆ ಅಡ್ಮಿಷನ್ ಮಾಡಿಸಲು ಹೋಗಿದ್ದೆ. ಚಕಿತಳಾದ ತಾಯಿ ಯಾರಿಗೆ? ಏನು ಅಮ್ಮ ನೀನು ಹೇಳಿದ್ದನೆಲ್ಲ ಮರೆತಿಯಾ ಎಂತಹ ಮರುವು ನಿನ್ನದು. ನೀನು ಮತ್ತು ಅಪ್ಪ ಅಕ್ಕನ ಮಗುವಿನ ಅಡ್ಮಿಷನ್ ಕುರಿತು ಮಾತನಾಡುತ್ತಿದ್ದೀರಿ, ಅದಕ್ಕೆ ನಾನೇ ಹೋಗಿದ್ದೆ, ಆಗ ತಾಯಿ ಹುಟ್ಟಲಾರದ ಮಗುವಿಗೆ ಅಡ್ಮಿಷನ್ನಾ? ಶಾಲೆಯಲ್ಲಿ ಏನು ಹೇಳಿದರು. ಆಗ ಗುಂಡ ನಿಮ್ಮ ಮಗುವಿಗೆ ಈಗ ಸೀಟ್ ಕೊಡಲು ಆಗುವುದಿಲ್ಲ, ಐದು ವರ್ಷ ಆದ ಮೇಲೆ ಬನ್ನಿ ಖಂಡಿತ ಸೀಟ್ ಕೊಡುತ್ತೇನೆ ಎಂದು ಹೇಳಿ ಕಳುಹಿಸಿದರು. ಯಾವಾಗಲೂ ನನ್ನ ದಡ್ಡ ಎಂದು ಬೈಯುತ್ತಿದ್ದಿ. ಈಗಲಾದರೂ ಗೊತ್ತಾಯಿತಾ? ನಾನು ಎಷ್ಟು ಬುದ್ಧಿವಂತ ಎಂಬುದು. ಇವನ ಮಾತನ್ನು ಕೇಳಿದ ತಂದೆ ತಾಯಿ ಮೂರ್ಚೆ ಹೋಗುವುದು ಒಂದೇ ಬಾಕಿಯಿತ್ತು.


Rate this content
Log in

Similar kannada story from Comedy