Revati Patil

Abstract Classics Inspirational

4.5  

Revati Patil

Abstract Classics Inspirational

ಗಣೇಶ

ಗಣೇಶ

3 mins
711



ಭಾರತ ಹಬ್ಬಗಳ ದೇಶ. ಮೇಲಣ ತುದಿಯಿಂದ ಕೆಳಗಣ ನಾಡಿನವರೆಗೂ ಒಂದಿಲ್ಲೊಂದು ಒಂದು ಹಬ್ಬದ ಸದ್ದು ಸದಾ ಮೊಳಗುತ್ತಲೇ ಇರುತ್ತವೆ. ಕೆಲ ಹಬ್ಬಗಳು ಕೆಲವೇ ಪ್ರದೇಶಕ್ಕೆ ಸೀಮಿತವಾಗಿದ್ದರೆ ಇನ್ನೂ ಕೆಲವು ದೇಶದ ಪ್ರತೀ ಮೂಲೆ ಮೂಲೆಯಲ್ಲೂ ಸಲ್ಲಲ್ಪಡುತ್ತವೆ. ಅಂತಹ ಕೆಲವು ಉತ್ಸವಗಳಲ್ಲಿ ಗಣೇಶೋತ್ಸವ ಕೂಡ ಒಂದು.


ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಶುದ್ಧ ತೃತೀಯ ದಿನ ಗೌರಿ ಹಬ್ಬ ಮಾಡಿ, ನಾಲ್ಕನೇ ದಿನ ಅಂದರೆ ಚತುರ್ಥಿಯನ್ನು ಗಣೇಶನ ಹಬ್ಬವೆಂದು ಆಚರಿಸಲಾಗುತ್ತದೆ.

ಗಣೇಶ ಯಾರು?


ಗಣಗಳಿಗೆ ಈಶನಾದವನೇ ಗಣೇಶ. ಕಾರ್ಯಗಳಿಗೆ ವಿಘ್ನ ಬಾರದಿರಲು ಮೊದಲ ಪ್ರಾರ್ಥನೆಯನ್ನು ವಿಘ್ನೇಶ್ವರನಿಗೆ ಸಮರ್ಪಿಸುತ್ತೇವೆ. ಒಂದೇ ದಂತವನ್ನು ಉಳ್ಳವನಾಗಿ ಏಕದಂತನೆಂದು ಹೆಸರಾದವನು. ದೊಡ್ಡ ಉದರ ಹೊಂದಿ ಲಂಬೋದರನೆಂದು ಪ್ರಖ್ಯಾತಿ ಪಡೆದವನು. ವಾಹನವಾಗಿ ಮೂಷಿಕ ಇರುವುದರಿಂದ ಮೂಷಿಕವಾಹನವೆಂದು ಸಹ ಕರೆಯುತ್ತಾರೆ.ಆನೆಯ ಮುಖವನ್ನು ತನ್ನ ವದನದಲ್ಲಿ ಹೊಂದಿದ್ದರಿಂದ ಗಜಾನನ (ಗಜ ಆನನ ), ಗಜಮುಖನೆಂದು ಸಹ ಹೆಸರಾದವನು. ಸಂಕಷ್ಟಗಳ ನಿವಾರಕನು ಇವನೇ. ಗೌರಿ ತನಯನಾದ ಈ ಗಣೇಶನ ಹುಟ್ಟೇ ರೋಚಕ.

ಗಣೇಶನ ಉಗಮದ ಕಥೆ ಗೊತ್ತೆ?


ಗೌರಿ /ಪಾರ್ವತಿ ತನ್ನ ದೇಹಕ್ಕೆ ಲೇಪಿಸಿಕೊಂಡ ಅರಿಷಿಣದ ಮುದ್ದೆಯಿಂದ ಗಣೇಶನನ್ನು ರಚಿಸಿದಳು. ಅದೇ ಗಣೇಶನ ಹುಟ್ಟು ಎನ್ನಲಾಗುತ್ತದೆ. ಹಾಗೆಯೇ ಇದಕ್ಕೆ ಇನ್ನೊಂದು ಕಥೆಯೂ ಇದೆ.

ಪಾರ್ವತಿದೇವಿಯು ಕೈಲಾಸದಲ್ಲಿ ಒಮ್ಮೆ ತನ್ನ ಮೈ ಬೆವರಿನ ಬಂದ ಕೆಸರಿನಲ್ಲಿ ಮನುಷ್ಯಾಕಾರದ ಮುದ್ದೆಯನ್ನೊಂದು ಮಾಡಿದಳು. ಆ ಮುದ್ದೆಯ ಆಕಾರ ನೋಡಿ ಅವಳಿಗೆ ಮಮತೆಯುಂಟಾಗಿ ಅದಕ್ಕೆ ಜೀವ ಬರಿಸಿದಳು. ಅವನೇ ಗಣೇಶ.

ಗಣೇಶ ಗಜಮುಖನಾಗಿದ್ದು ಹೇಗೆ?


ಪಾರ್ವತಿ ದೇವಿಯಿಂದ ಜನ್ಮತಾಳಿದ ಗಣೇಶನಿಗೆ ಪಾರ್ವತಿಯು ತಾನು ಸ್ನಾನಕ್ಕೆ ಹೋಗುವುದಾಗಿ ತಿಳಿಸುತ್ತಾಳೆ. ದ್ವಾರವನ್ನು ದಾಟಿ ಯಾರೂ ಒಳಗೆ ಕಾಲಿಡದಂತೆ ಕಾವಲು ಕಾಯಲು ಗಣೇಶನಿಗೆ ಆಜ್ಞೆ ನೀಡಿ ಪಾರ್ವತಿದೇವಿ ಸ್ನಾನಕ್ಕೆ ತೆರಳುತ್ತಾಳೆ. ಅತ್ತ ಪಾರ್ವತಿ ದೇವಿ ಸ್ನಾನಕ್ಕೆ ಹೋದಬಳಿಕ ಇತ್ತ ಶಿವನು ಕೈಲಾಸಕ್ಕೆ ಮರಳುತ್ತಾನೆ. ದ್ವಾರಪಾಲಕನ ರೂಪದಲ್ಲಿದ್ದ ಗಣೇಶನನ್ನು ನೋಡಿದ ಶಿವ ಒಳಗಡಿಯಿಡಲು ಪ್ರಯತ್ನಿಸಿದಾಗ ಗಣೇಶ ತಡೆಯುತ್ತಾನೆ. ತನ್ನ ತಾಯಿ ಸ್ನಾನ ಮಾಡುತ್ತಿದ್ದಾಳೆ, ಒಳಗೆ ಹೋಗುವಂತಿಲ್ಲ ಎಂದು ಶಿವನನ್ನು ದ್ವಾರದಲ್ಲೇ ನಿಲ್ಲಿಸುತ್ತಾನೆ. ಕೋಪಿಸಿಕೊಂಡ ಶಿವ, ಗಣೇಶನ ರುಂಡ ಕತ್ತರಿಸುತ್ತಾನೆ. ನೆಲದ ಮೇಲೆ ಬಿದ್ದಿದ್ದ ಗಣೇಶನ ದೇಹವನ್ನು ನೋಡಿ ಬಿಕ್ಕಿ ಬಿಕ್ಕಿ ಅಳುತ್ತ ಬಂದ ಪಾರ್ವತಿದೇವಿ ಶಿವನಿಗೆ ತನ್ನ ಮಗನಿಗೆ ಮರಳಿ ಉಸಿರು ನೀಡುವಂತೆ ಕೇಳಿಕೊಳ್ಳುತ್ತಾಳೆ. ಮಾಡಿದ ತಪ್ಪಿನ ಅರಿವಾಗಿ ಶಿವನು ತನ್ನ ಸೈನಿಕರಿಗೆ ಉತ್ತರ ದಿಕ್ಕಿಗೆ ತಲೆ ಮಾಡಿ ಮಲಗಿದವರ ತಲೆ ತರುವಂತೆ ಆಜ್ಞೆ ವಿಧಿಸುತ್ತಾನೆ. ಹೋದ ಸೈನಿಕರಿಗೆ ಉತ್ತರ ದಿಕ್ಕಿಗೆ ಸತ್ತು ಬಿದ್ದಿದ್ದ ಆನೆಯೊಂದು ಸಿಕ್ಕು, ಅದರ ತಲೆಯನ್ನೇ ತರುತ್ತಾರೆ. ಆ ತಲೆಯನ್ನೇ ಶಿವನು ಗಣೇಶನಿಗೆ ಜೋಡಿಸುತ್ತಾನೆ. ಅಂದಿನಿಂದ ಮಾನವರೂಪಿ ಗಣೇಶ, ಸೊಂಡಿಲುಳ್ಳ ಗಜಮುಖನಾಗಿ ಪರಿವರ್ತಿತನಾಗಿದ್ದು.

ಇಂತಹ ಗಣೇಶನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಉತ್ತರ ಕರ್ನಾಟಕ ಭಾಗದ ಹಾವೇರಿಯಲ್ಲಿ ಆಚರಿಸುವ ನಮ್ಮ ಗಣೇಶ ಹಬ್ಬದ ಬಗ್ಗೆ ಹೇಳುವುದಾದರೆ ನಾವು ಗೌರಿ ಗಣೇಶನನ್ನು ಕೂಡಿಸುತ್ತೇವೆ. ಗಣೇಶನನ್ನು ಪಕ್ಕದ ಊರಿನಿಂದ ತರಬೇಕು. ಹಿಂದೆಲ್ಲ ನಡೆದುಕೊಂಡೇ ಹೋಗಿ ತರುತ್ತಿದ್ದರು. ಈಗ ನಮ್ಮ ಗಣಪ ಕಾರಿನಲ್ಲೂ ಬರುತ್ತಾನೆ!

ಮನೆಯ ಗಂಡುಮಕ್ಕಳು ಮಡಿಯಿಂದ, ಬಿದಿರಿನ ಬುಟ್ಟಿಯಲ್ಲಿ ಭತ್ತದ ಹೊಟ್ಟು/ತೌಡು ಹಾಕಿಕೊಂಡು ಹೋಗುತ್ತಾರೆ. ತಿಂಗಳ ಮೊದಲೇ ನಮ್ಮ ಕಂಬಾರರಿಂದ ( ನಮ್ಮ ಮುತ್ತಾತರ ಕಾಲದಿಂದಲೂ ನಮ್ಮ ಮನೆಗೆ ಗಣೇಶನನ್ನು ಮಾಡಿಕೊಡುವವರು ) ನಾವು ಹೇಳಿದಂತೆ ಮಾಡಿದ ಗಣೇಶನನ್ನು ಬುಟ್ಟಿಯಲ್ಲಿ ಭತ್ತದ ತೌಡಿನ ಮಧ್ಯದಲ್ಲಿಟ್ಟು ಶಲ್ಯದಿಂದ ಮುಚ್ಚಿ ಮನೆಗೆ ತರುತ್ತಾರೆ. ಮನೆಯ ಹೆಣ್ಣು ಮಕ್ಕಳು ಗಣೇಶನನ್ನು ತಂದವರ ಕಾಲಿಗೆ ನೀರು ಹಾಕಿ, ಗಣೇಶನಿಗೆ ಊದುಬತ್ತಿ ಬೆಳಗಿ ಗಣೇಶನನ್ನು ಬರಮಾಡಿಕೊಳ್ಳುತ್ತೇವೆ. ಗಣೇಶ ಎಲ್ಲಿಯೂ ಮುಕ್ಕಾಗಿರಬಾರದು.

ನಮ್ಮ ಮನೆಯಲ್ಲಿ (ಅಮ್ಮನ ಮನೆಯಲ್ಲಿ ) ಒಂದು ತಿಂಗಳವರೆಗೆ ಗಣೇಶನನ್ನು ಕೂರಿಸಿ ಮಹಾನವಮಿಗೆ (ದಸರೆಗೆ ) ವಿಸರ್ಜಿಸುತ್ತೇವೆ. ಗಣೇಶನಿಗೆ ಐದು ತರದ ಕರಿದ ತಿಂಡಿಗಳ ನೈವೇದ್ಯೆ ಮಾಡುತ್ತೇವೆ. ಮೋದಕ ಗಣೇಶನ ಪ್ರಿಯವಾದ ತಿಂಡಿಯೆಂದು ನಂಬುತ್ತೇವೆ. ಅದರಲ್ಲೂ ಹಬೆಯಲ್ಲಿ ಬೇಯಿಸಿದ (ಕುಚ್ಚಿದ ಕಡುಬು) ಮೋದಕ ಇನ್ನೂ ಶ್ರೇಷ್ಠವೆನ್ನುತ್ತಾರೆ. ಸಂಜೆಯ ಪೂಜೆ ಅಪ್ಪಾಜಿಯ ಹಾಡಿನೊಂದಿಗೆ ಪ್ರಾರಂಭವಾಗುತ್ತದೆ. ಗಣೇಶನನ್ನು ಕೂರಿಸದ ಅಥವಾ ಹಬ್ಬ ಇಲ್ಲದವರನ್ನು ಆ ದಿನ ಊಟಕ್ಕಾಗಿ ಮನೆಗೆ ಆಹ್ವಾನಿಸುತ್ತೇವೆ. ಮನೆ ಮಕ್ಕಳೆಲ್ಲ ಹೊಸ ಬಟ್ಟೆ ಧರಿಸಿ ಸಂಭ್ರಮಿಸುತ್ತಾರೆ. ಪಟಾಕಿಯನ್ನೂ ಹೊಡೆಯುತ್ತಾರೆ. ನಾನು ಮೊದಲಿಂದಲೂ ಪಟಾಕಿ ಹೊಡೆಯುವುದಿಲ್ಲ.

ಆ ದಿನ ಚಂದ್ರನನ್ನು ನೋಡಬಾರದು ಎಂದು ಹಿರಿಯರು ಎಷ್ಟೇ ಎಚ್ಚರಿಸಿದರೂ ಕದ್ದು ಮುಚ್ಚಿ ಚಂದ್ರನನ್ನು ನೋಡುವ ಗುಣ ಈಗಲೂ ಹೋಗಿಲ್ಲ.

ಇನ್ನೂ ನಮ್ಮ ಇಲಿವಾರದ ಬಗ್ಗೆ ಹೇಳದಿದ್ದರೆ ಹೇಗೆ? ಗಣೇಶನ ಹಬ್ಬದ ಮಾರನೇ ದಿನವನ್ನು ಇಲಿವಾರ ಎಂದು ಆಚರಿಸುತ್ತೇವೆ. ಗಣೇಶನ ವಾಹನವಾದ ಮೂಷಿಕನಿಗೂ ಪೂಜೆ ಬೇಡವೇ? ಆ ದಿನ ತಿಂಡಿಗೆ ವಡೆಯನ್ನೇ ಮಾಡುವುದು ಪದ್ಧತಿ. ಮೂಷಿಕನಿಗೆ (ಇಲಿಗೆ ) ಐದು ವಡೆಗಳನ್ನು ನೈವೇದ್ಯೆ ಮಾಡಿ ಅಟ್ಟದ ಮೇಲೆ ಇಲಿಗಳು ತಿನ್ನಲಿ ಎಂದು ಇಡುತ್ತೇವೆ.

ಆ ದಿವಸ ಪುಸ್ತಕ ತೆರೆದರೆ ಇಲಿಗಳೆಲ್ಲ ಕೋಪಿಸಿಕೊಂಡು ಪುಸ್ತಕ ಹರೆಯುತ್ತವೆ ಎನ್ನುವ ಪ್ರತೀತಿಯೂ ನಮ್ಮಲ್ಲಿದೆ. ಹಾಗಾಗಿ ಇಲಿವಾರದ ದಿನ ನಮ್ಮ ಭಾಗದಲ್ಲಿ ರಜೆ ನೀಡುತ್ತಾರೆ. ಆ ದಿನ ಪುಸ್ತಕಗಳನ್ನು ಮಕ್ಕಳು ಕಣ್ಣಿಂದ ಸಹ ನೋಡುವುದಿಲ್ಲ!

ಒಂದು ತಿಂಗಳವರೆಗೆ ನಮ್ಮೊಡನಿದ್ದು ಹೋಗುವ ಗಣೇಶನನ್ನು ವಿಸರ್ಜಿಸುವಾಗ ತುಂಬಾ ಬೇಸರವೂ ಆಗುತ್ತದೆ. ಮನೆಯ ಗೆಳೆಯನೊಬ್ಬ ಹೋಗುವಂತೆ ಭಾಸವಾಗುತ್ತದೆ. ಮನೆಯಲ್ಲಿ ಆ ವರ್ಷ ಯಾರಾದರೂ ಗರ್ಭಿಣಿಯರಿದ್ದರೆ ಆ ವರ್ಷಪೂರ್ತಿ ಗಣೇಶನನ್ನು ವಿಸರ್ಜಿಸುವಂತಿಲ್ಲ. ಇದು ನಮ್ಮ ಭಾಗದ ನಮ್ಮ ಮನೆಯ ಗಣೇಶನ ಆಚರಣೆ.


Rate this content
Log in

Similar kannada story from Abstract