ಡಾ. ರಾಧಾಕೃಷ್ಣ..
ಡಾ. ರಾಧಾಕೃಷ್ಣ..
ಇಂದು ಡಾ. ಎಸ್ ರಾಧಾಕೃಷ್ಣರವರ ಜನ್ಮದಿನವಾದ ಅಪೂರ್ವ ದಿನವನ್ನು ಗುರುವಿನ ದಿನಾಚರಣೆಯೆಂದು ಪರಿಗಣಿಸಲಾಗಿದ್ದು ನಾವೆಲ್ಲರೂ ನಮ್ಮ ಬದುಕಿನ ಮೊದಲ ಗುರುವಾದ ತಾಯಿಗೆ ಗುರುವಂದನೆ ಸಲ್ಲಿಸಲೇಬೇಕು. ಅವಳ ಅಕ್ಕರೆಯ ಲಾಲನೆಯಲ್ಲಿ ನಾನು ಕಲಿತದ್ದು ಅಪಾರ. ಈಗಲೂ ಕಲಿಯುತ್ತಲೇ ಇದ್ದೇನೆ. ಅದು ನಿರಂತರ ಕಲಿಕೆ.
ನನ್ನ ಕಾಲೇಜಿನ ದಿನಗಳಲ್ಲಿದ್ದಾಗ, ಒಬ್ಬರು ಅತ್ಯಂತ ಆತ್ಮೀಯ ಅದ್ಯಾಪಕಿಯಿದ್ದರು. ಡಾ. ಕಮಲಾ ಹಂಪನಾ ಅವರು ಶ್ರೇಷ್ಟ ಬರಹಗಾರ್ತಿ, ಶ್ರೇಷ್ಟ ಕಾದಂರಿಗಳ ಲೇಖಕಿ. ಅವರು ನನಗೆ ಕನ್ನಡದ ಪಾಠ ಮಾಡುತ್ತಿದ್ದರು. ಅವರ ಪ್ರವಚನ ನಡೆಯುವಾಗ ಪೂರ್ತಿ ತರಗತಿಯಲ್ಲಿ ತುಂಬಾ ನಿಶಬ್ದತೆ ಇರ್ತಿತ್ತು. ಸಾವಕಾಶವಾಗಿ , ಒಂದೊಂದೇ ಮಾತನ್ನು ತೂಗಿ ಅಳೆದು ಸಂಪೂರ್ಣ ಭಾವ ತುಂಬಿ ವರ್ಣರಂಜಿತವಾಗಿ ಪುಸ್ತಕವನ್ನು ವೀಕ್ಷಿಸದೇ ಒಂದು ಕತೆಯಂತೆ ಸನ್ನಿವೇಶಗಳನ್ನು ಹೆಣೆಯುತ್ತಾ ಹೋದಾಗ, ಕೇಳುಗರಾದ ನಮಗೆ ಯಾವುದೋ ಲೋಕದಲ್ಲಿ ವಿಹರಿಸಿದಂತೆ ಭಾಸವಾಗುತ್ತಿತ್ತು. ಆ ಕತೆಯಲ್ಲಿ ತಲ್ಲೀನರಾಗಿಬಿಡ್ತಿದ್ವಿ. ಮುಂದೇನಾಗುವುದೆಂಬ ಕೌತುಕದಲ್ಲಿ ಜಾತಕ ಪಕ್ಷಿಯಂತೆ ಕೇಳಲು ಉತ್ಸುಕರಾಗ್ತಿದ್ವಿ. ಮನೇಗೆ ಬಂದ ಮೇಲೂ ಅದೇ ಗುಂಗಿನಲ್ಲಿ ಅದೇ ಪಾಠವನ್ನು ಮತ್ತೊಮ್ಮೆ ಓದಿ ರಸಾಸ್ವಾದನೆ ಮಾಡಿಕೊಳ್ಳುತ್ತಿದೆವು. ಗೆಳೆತಿಯರೊಡನೆ ಚರ್ಚೆ ಕೂಡಾ ಅದರ ಬಗ್ಗೆಯೆ ಇರುತ್ತಿತ್ತು. ಕೆಲವರಂತೂ ತಮ್ಮದೇ ರೀತಿಯಲ್ಲಿ ಕವನವನ್ನೂ ಬರೆಯುತ್ತಿದ್ದರು. ನನಗೆ ಆಗ ಕವನ ಹೇಗೆ ಬರೆಯುವುದೆಂದು ಗೊತ್ತೇ ಇರಲಿಲ್ಲ. ನನ್ನ ಗೆಳತಿಯ ನವ್ಯ ಕವನವು ನನಗೆ ತಲೆಬುಡ ಅರ್ಥವಾಗುತ್ತಿರಲಿಲ್ಲ. ನಾನೇನಿದ್ದರೂ ನೇರವಾಗಿ ಬರೆಯುವವಳು. ಹೀಗೆ ಸುತ್ತಿಬಳಸಿ, ಒಳಹೊರಗನ್ನು ತಿರುಚಿ ಕವನ ಬರೆಯುವ ಸಾಹಸ ಇರಲಿಲ್ಲ.
ಕಮಲಾ ಹಂಪನಾರವರ ಅತ್ಯಂತ ಶ್ರೇಷ್ಟ ಭಾಷಾಲಹರಿ ನನ್ನನ್ನು ಬಹಳಷ್ಟು ಪ್ರೇರೇಪಿಸಿತ್ತು. ಅವರ ವಾಕ್ ಚಾತುರ್ಯ , ಶೈಲಿ, ವರ್ಣನೆಯ ರೀತಿ, ಕಲಿಕೆ, ಜ್ಞಾನದ ಭಂಡಾರ ಎಲ್ಲವೂ ನನ್ನನ್ನು ಮೂಕವಿಸ್ಮಿತಳನ್ನಾಗಿಸಿದ್ದವು. ಅವರನ್ನೇ ಆದರ್ಶಗುರುವನ್ನಾಗಿಸಿಕೊಂಡದ್ದೂ ನಿಜ. ಅವರಿಗೆ ನನ್ನ ಈ ಬರಹವೇ ಕೊಡುಗೆ. ಅವರಿಗೆ ನನ್ನ ಗುರುವಂದನೆಗಳನ್ನರ್ಪಿಸುತ್ತೇನೆ.
ಹಳೆಗನ್ನಡವನ್ನು ಕಲಿಯುವಾಗ, ಭಾರತದ ಮಹಾಗ್ರಂಥಗಳ ಪರಿಚಯವಾಗುತ್ತದೆ. ಹಿರಿಯ ಶ್ರೇಷ್ಟ ಲೇಖಕರ ಅದ್ಬುತ ಕಾದಂಬರಿಗಳೂ ಓದಲು ಸಿಗುತ್ತವೆ. ಶ್ರೀ ದ.ರಾ.ಬೇಂದ್ರೆಯವರ ಅನೇಕ ಪುಸ್ತಕಗಳು, ಕುವೆಂಪುರವರ ಲೇಖನಗಳು, ಸಾಶೀ ಮರುಳಯ್ಯರವರ ಪುಸ್ತಕಗಳು, ಪಾಟೀಲ್ ಪುಟ್ಟಪ್ಪನವರ ಲೇಖನಗಳು, ಐತಿಹಾಸಿಕ ಪುಸ್ತಕಗಳು, ಹಾಸ್ಯಲೇಖನಗಳು, ನಾಟಕ, ಪ್ರದರ್ಶನಗಳು ಓದುಗರನ್ನು ಬಹಳಷ್ಟು ಆಕರ್ಷಿಸಿರುವದು ನಿಜವೇ. ಅಂತಹ ಸಮಸ್ತ ಬರಹಗಾರರಿಗೂ, ಓದುಗರಿಗೂ ನನ್ನ ಅನಂತಾನಂತ ವಂದನೆಗಳನ್ನು ಅರ್ಪಿಸುತ್ತೇನೆ.
ನನ್ನ ಹವ್ಯಾಸ ಬರೀ ಓದುವುದೇ ಆಗಿದ್ದ ದಿನಗಳಿದ್ದವು. ಓದಿನಲ್ಲಿ ಮಗ್ನವಾದಾಗ, ಊಟ, ನಿದ್ರೆ ತೊರೆದದ್ದೂ ಉಂಟು. ಅಂತಹ ಉತ್ಕಟ ವ್ಯಾಮೋಹವಿತ್ತು. ಬಹಳಷ್ಟು ಸಲ ತಂದೆತಾಯಿಯಿಂದ ಬೈಸಿಕೊಂಡದ್ದಿದೆ. ಈಗಲೂ ಮನೆಯವರಿಂದ ಬೈಸಿಕೊಳ್ಳುತ್ತೇನೆ ಸಹ. ಇದನ್ನು ಯಾಕೆ ಉಲ್ಲೇಖಿಸುತ್ತಿದ್ದೇನೆಂದರೆ, ಪ್ರತೀ ಓದುಗನಿಗೆ ಕನ್ನಡಭಾಷೆಯಲ್ಲಿ ಆಧರ, ಸಹನೆ, ಬಾಂಧವ್ಯ ಇರುತ್ತದೆ. ಪ್ರತೀ ಸಾಲನ್ನೂ ಆನಂದಿಸಿ ರುಚಿಸಿಕೊಂಡು ಓದುವವನಿಗೆ ಸಾಹಿತ್ಯದ ಅರಿವು ಚೆನ್ನಾಗಿಯೇ ಇರುತ್ತದೆ. ಅದರ ಸ್ವಾದ ಆಗಲೇ ಅರಿವಾಗುವುದು. ಅದು ಒಮ್ಮೆ ರುಚಿಸಿದರೆ ಸಾಕು, ಮತ್ತೆಂದೂ ಹಿಮ್ಮೆಟ್ಟುವುದಿಲ್ಲ. ನಿರಂತರ ಓದುವ ಹವ್ಯಾಸ ತಾನಾಗಿಯೇ ಶುರುವಾಗಿಬಿಡುತ್ತದೆ. ಯಾವುದೇ ದಿನಪತ್ರಿಕೆ ತುಣುಕಿನ ಮಾಹಿತಿಯೂ ಸಹ ಒಂದೊಂದು ಸಲ ಓದಲು ಪ್ರೇರಿಸುತ್ತದೆ. ಅದು ಅವರವರ ಇಷ್ಟದ ಕೆಲಸ. ನನ್ನದೂ ಸಹ.
ಹಾಗೆಯೇ ಜೀವನದ ಹಲವು ಸನ್ನಿವೇಶಗಳೂ ನಮಗೆ ಒಂದು ರೀತಿಯ ಪಾಠವೇ ತಾನೇ. ಎಲ್ಲವನ್ನೂ ಕಲಿತುಬಿಟ್ಟೆ ಎಂಬ ಅಹಂ ಮಾತ್ರ ಸಲ್ಲದು. ಅದೆಂದಿಗೂ ಮುಗಿಯದ ಅಧ್ಯಾಯ. ಸಾವಿನ ಮುನ್ನಾದಿನವೂ ನಾವು ಪಾಠವನ್ನು ಕಲಿಯುವುದಿದೆ. ನಮ್ಮನ್ನು ಬೀಳ್ಕೊಡಲು ಬರುವ ನಮ್ಮ ಶತ್ರುಗಳನ್ನೂ ಸಹ ನಾವು ಕ್ಷಮಿಸಬೇಕಲ್ಲವೇ? ಇದೇ ಕಲಿಕೆ. ಇದೇ ಮಹಾಜ್ಞಾನ. ಆ ದೇವರು ನಮ್ಮಿಂದ ಬಯಸುವುದೂ ಇದನ್ನೇ.
ಈ ಮುಖಪುಟದಲ್ಲಿ ನನ್ನನ್ನು ಹಲವು ಬಾರಿ ತಿದ್ದಿ, ಹಲವು ಬಾರಿ ಪ್ರೋತ್ಸಾಹಿಸಿ, ಹಲವು ಬಾರಿ ಹೊಗಳಿ, ಹಲವು ಬಾರಿ ಮೆಚ್ಚುಗೆ ಸೂಚಿಸಿದ ಎಲ್ಲ ಮಿತ್ರವೃಂದಕ್ಕೂ ಗುರುವೆಂಬ ನಾಮಾಂಕಿತವಿತ್ತು ಧನ್ಯವಾದಗಳನ್ನರ್ಪಿಸುತ್ತೇನೆ.
ಶುಭವಾಗಲಿ, ಶುಭದಿನ..🙏
