ಚಿನ್ನದ ನಾಯಿಕೊಡೆ
ಚಿನ್ನದ ನಾಯಿಕೊಡೆ
ರಂಗ ಒಬ್ಬ ಸಾಮಾನ್ಯ ರೈತನ ಮಗ. ಅವರಪ್ಪ ಸಿದ್ದಪ್ಪ, ಹೊಲಕ್ಕೆ ಹೋದಾಗಲೆಲ್ಲ ಅವರ ಹಿಂದೆ ಓಡಿಹೋಗುತ್ತಿದ್ದ. ಸಿದ್ದಪ್ಪ ನೇಗಿಲನ್ನು ಹೆಗಲಿಗೇರಿಸಿ, ಕಟ್ಟಿದ್ದ ಎತ್ತುಗಳನ್ನು ಬಿಚ್ಚಿ, ಅವುಗಳ ಮೂಗುದಾರ ಹಿಡಿದು, ಹೊರಟನೆಂದರೆ ಸಾಕು ರಂಗನೂ ಅವರ ಹಿಂದೆ ಓಟಕ್ಕೀಳುತ್ತಿದ್ದ
ಹೊಲಕ್ಕೆ ಹೋಗುವ ದಾರಿಯುದ್ದಕ್ಕೂ ಹಸಿರ ರಾಶಿ. ತೆಂಗಿನ ತೋಟಗಳು, ಫಸಲು ತುಂಬಿ ತುಳುಕುತ್ತಿದ್ದ ಗದ್ದೆಗಳು, ಹಕ್ಕಿಹಾಡು, ಇವೆಲ್ಲ ರಂಗನಿಗೆ ಮುದ ನೀಡುತ್ತಿದ್ದವು ಹಾಗೂ ದೂರದ ಹೊಲದ ದೂರವನ್ನು ಮರೆಸಿ ಬಿಡುತ್ತಿದ್ದವು.
ಸಿದ್ದಪ್ಪನ ಹೊಲ, ಹೊಲದ ಬದಿಯಲ್ಲಿ ವಿಶ್ರಮಿಸಲು ಒಂದು ಪುಟ್ಟ ಗುಡಿಸಲು. ಈ ಸಲ ನಾಟಿ ಮಾಡಲು ಭೂಮಿ ಹಸನು ಮಾಡಬೇಕಿತ್ತು. ಎತ್ತುಗಳ ಮೇಲೆ ನೊಗವೇರಿಸಿ ಹೋಯ್! ಹೋಯ್! ಎಂದು ಅವುಗಳನ್ನು ಪ್ರೇರೇಪಿಸುತ್ತಾ ನೆಲ ಹಸನುಗೊಳಿಸುತ್ತಿದ್ದ ಸಿದ್ದಪ್ಪ.
ಪಕ್ಕದಲ್ಲೇ ರಾಮಣ್ಣನ ಗದ್ದೆ .ರಾಮಣ್ಣ, ಸಿದ್ದಪ್ಪ ಬಾಲ್ಯ ಸ್ನೇಹಿತರು, ಒಂದೇ ತಟ್ಟೆಯಲ್ಲಿ ಉಂಡವರು, ಕುಚಿಕು ಮಿತ್ರರು.ಇಬ್ಬರೂ ಒಟ್ಟಿಗೆ ನಾಟಿ ಮಾಡೋದು ಅಂತ ಮಣ್ಣು ಹದ ಮಾಡುತ್ತಿದ್ದರು.
ನಾಟಿ ಸಮಯ, ನಾಟಿ ನಂತರ ಫಸಲ ನಿರೀಕ್ಷೆ, ಇವರ ಹೊಲಾನ ಊರೆಲ್ಲಾ ಕಣ್ಣು ಕಣ್ಣು ಬಿಟ್ಟು ನೋಡುತ್ತಿತ್ತು. 'ಅಲ್ಲ ಈ ಪಾಟಿ ಒಟ್ಟಿಗೆ ಇರ್ತಾರಲ್ಲ! ಒಬ್ಬನ ಹೊಲದಲ್ಲಿ ಫಸಲು ಚೆನ್ನಾಗಿ ಬರಲಿಲ್ಲ ಅಂದರೆ ಇನ್ನೊಬ್ಬ ಸಹಾಯಮಾಡುತ್ತಾನಾ? ಎಂದು ಎಷ್ಟೊ ಊರ ಮಂದಿ ಅಂದುಕೊಂಡದ್ದು ಉಂಟು. ಮಾಡೇ ಮಾಡಿಯಾನು ಎಂಬುದು ಸಿದ್ದಪ್ಪನ ನಂಬಿಕೆ.
ಫಸಲು ಬಂತು, ಇನ್ನೇನು ಕೊಯ್ಲು ಮಾಡಬೇಕು, ರಂಗಣ್ಣ ಹೊಲ ಸುತ್ತಿ ಸುತ್ತಿ ಬರುತ್ತಿದ್ದ ಅವರಪ್ಪ ಬಯ್ಯೋದೆ ಬೈಯೋದು, 'ಸುಮ್ನಿರು ಮಗನೇ ಬೆಳೆ ಕೊಯ್ಲಿಗೆ ಬಂದಾವೆ. ಕಟಾವು ಮಾಡಬೇಕು, ಓಡಾಡಿ ಹಾಳು ಮಾಡಬೇಡ' ಅಂತ. ರಂಗಣ್ಣನೋ ಹೊಲದಲ್ಲಿ ಕ್ರಿಮಿಕೀಟ, ಹುಳ- ಹುಪ್ಪಟೆ ಹಿಡ್ಕೊಂಡು ವಿಮಾನ ಚಿಟ್ಟೆ ಹಿಡಿದು, ಅದರ ಬಾಲಕ್ಕೆ ದಾರ ಕಟ್ಟಿ ಆಡೋದು ಹೀಗೇ ಮಾಡ್ತಿದ್ದ!
ಅಪ್ಪ ಹೊಡೆದಾನು ಅಂತ ಅಂದು ಹೆದರಿ ಗುಡಿಸಲಲ್ಲೇ ಕುಳಿತಿದ್ದ. ಆದರೆ, ಏನು ಮಾಡೋದು ಎಂದು ಕಾಣದ ಸುಂದರ ಪತಂಗ, ಹಾರಿಬಂತು ರಂಗಣ್ಣನ ಸಂಘ, ರಂಗ ಕೇಳ್ತಾನಾ? ಅದರ ಬೆನ್ನಟ್ಟಿದ! ಪತಂಗ ವೇನೋ ಮಾಯವಾಯ್ತು. ಆದರೆ, ಏನು ಆಶ್ಚರ್ಯ! ಹೊಲದಲ್ಲಿ, ಫಸಲಿನ ನಡುವೆ, ಏನೋ ಹೊಳೆದ ಹಾಗೆ ಕಂಡಿತು! ಹತ್ತಿರ ಹೋಗಿ ನೋಡುತ್ತಾನೆ ಬಂಗಾರ ಬಣ್ಣದ ನಾಯಿಕೊಡೆ! ಯಾವತ್ತೂ ನೋಡಿಲ್ಲ, ಇಂತಹ ವಿಸ್ಮಯ ಅವನು.
ಓಡಿಹೋಗಿ, ಅವರಪ್ಪನ ಕರೆದ. 'ಅಪ್ಪ ಇಲ್ಲಿ ಬಾ, ನೋಡು! ನಾನು ಏನು ಕಂಡೇ ಅಂತ! ' ಸಿದ್ದಪ್ಪನ ಕೈಹಿಡಿದು ದರ- ದರ ಅಂತ ಆ ಜಾಗಕ್ಕೆ ಎಳೆದು ತಂದ. ಫಸಲು ಎಲ್ಲಾ ಹಾಳು ಮಾಡ್ತಾನೆ ಹುಡುಗ ಅಂತ ಬಯ್ಯುತ್ತಲೇ ಸಿದ್ದಪ್ಪ, ಮನಸ್ಸಿಲ್ಲದ ಮನಸ್ಸಲ್ಲೇ ಹೋಗ್ತಾನೆ. ಆದರೆ ಎಂದೂ ಕಂಡರಿಯದ ನಾಯಿಕೊಡೆ ನೋಡಿ ದಿಗ್ಭ್ರಾಂತರಾಗುತ್ತಾನೆ!
ಹೌದಲ್ಲ ಚಿನ್ನದ ಬಣ್ಣದ ನಾಯಿಕೊಡೆ! ಎಷ್ಟು ಸುಂದರ, ನಿಧಾನವಾಗಿ ಅದರ ಅಗಲವಾದ ಕಾಂಡಕ್ಕೆ ಕೈ ಹಾಕಿ ಕಿತ್ತೇ ಬಿಟ್ಟ ಅಕ್ಕ- ಪಕ್ಕದ ಹೊಲದವರೂ ನೋಡಿದ್ರು, ಒಬ್ಬರಿಗೆ ಅಲ್ಲ, ಎಲ್ಲರಿಗೂ ಅಸೂಯೆ ಶುರುವಾಯಿತು!.ಅಲ್ಲ ಫಸಲೂ ಚೆನ್ನಾಗಿದೆ, ಅದೇನೋ ಚಿನ್ನದ ನಾಯಿಕೊಡೆ ಬೇರೆ ಸಿಕ್ಕಿತಂತೇ! ಅವನ ನಸೀಬು ಬಹಳ ಚೆನ್ನಾಗಿದೆ ಅಂದುಕೊಂಡವರೇ ಹೆಚ್ಚು. ಅಲ್ಲ ಇಷ್ಟು ದಿನ ನಮಗೆ ಕಾಣದ್ದು, ಇವನಿಗೆ ಸಿಕ್ಕಿದೆಯಲ್ಲ? ಇನ್ನೂ ಎಷ್ಟು ಇದ್ದಾವೊ ಅವನ ಭೂಮಿಯಲ್ಲಿ ಅನ್ಕೊಂಡವರು ಇನ್ನೊಂದಿಷ್ಟು ಮಂದಿ.
ಪ್ರಚಾರ ಜಾಸ್ತಿ ಆಗಿತ್ತು. ಇರಲಿ ನೋಡೋಣ, ಪೇಟೆಗೆ ಹೋಗಿ ಮಾರಿ ಸ್ವಲ್ಪ ದುಡ್ಡು ಸಿಗುತ್ತೆ ಅಂತ, ಸಿದ್ದಪ್ಪ ಯೋಚಿಸಿ ಪೇಟೆಗೆ ನಡೆದಿದ್ದ, ರಾಮಣ್ಣನೊಂದಿಗೆ.
'ಬನ್ರೋ ಎಲ್ಲಾ! ಚಿನ್ನದ ನಾಯಿಕೊಡೆ ಇದೆಯಂತೆ ಅವನ ಹೊಲದಲ್ಲಿ ತೊಗೊಳೋಣ' ಅಂತ ಊರಜನ ಸಿದ್ದಪ್ಪ ಪೇಟೆಗೆ ಹೊರಟದ್ದೇ ತಡ ಕಬ್ಬಿನ ಗದ್ದೆಗೆ ಆನೆ ನುಗ್ಗುವ ಹಾಗೆ ನುಗ್ಗಿ ಎಲ್ಲಾ ಫಸಲು ನಾಶ ಮಾಡಿದರು. ಆದರೆ ವಾಪಸ್ಸು ಹೋದದ್ದು ಮಾತ್ರ ಬರಿಗೈಲೆ! ನಿಜವಾಗಲೂ ಅದು ಸಿದ್ದಪ್ಪನ ನಸೀಬೇ ?!
ಇವೆಲ್ಲ ನೋಡಿದ ಸಿದ್ದಪ್ಪಣ್ಣ ಹೆಂಡತಿ ಮರುಗಿದಳು. ಆದ್ರೂ ಪೇಟೆಗೆ ಹೋದ ಸಿದ್ದಪ್ಪ ಕೈತುಂಬಾ ಹಣ ತಗೊಂಡು ಬಂದಾನೋ ಎಂದು ನಿರೀಕ್ಷಿಸಿದಳು.
ಏನೂ ಅರಿಯದ ಸಿದ್ದಪ್ಪ ಹಾಗೂ ರಾಮಣ್ಣ ಪೇಟೆಯಲ್ಲಿ ನಾಯಿಕೊಡೆ ಮಾಡಲು ಹೊರಟಿದ್ದರು. ಹೊಳೆಯೋ ನಾಯಿಕೊಡೆ ನೋಡಿ ರಾಮಣ್ಣನ ಕಣ್ಣು ಕುಕ್ಕಿತು, ಬುದ್ಧಿಗೆ ಭ್ರಾಂತು ಬಂತು, ಎಲ್ಲಾ ಹಣ ಸಿದ್ದಪ್ಪನಿಗೆ ಹೋದರೆ ತನಗೇನು ಸಿಕ್ಕಿತು ಅಂತ ಅಲ್ಲೇ ಅವನ ಕಥೆ ಮುಗಿಸಿದ್ದ!
ಬಂಗಾರದ ನಾಯಿಕೊಡೆ ಜೊತೆ ರಾಮಣ್ಣ ಪೇಟೆ ತಲುಪಿದ. ಮಾರಾಟಕ್ಕೆ ನಿಂತ. ಜನ ನಗಲಾರಂಭಿಸಿದರು! ಒಬ್ಬಾತ ಹೇಳಿದ ಬಂಗಾರದ ಬಣ್ಣದ್ದೇ ಆದರೂನಾಯಿಕೊಡೆ, ನಾಯಿಕೊಡೇನೆ ಅಂತ ! ರಾಮಣ್ಣ ನಾಯಿಕೊಡೆ ಮಾರ್ಲಿಲ್ಲಾ, ಹೋದ ಸಿದ್ದಪ್ಪ ವಾಪಸ್ ಬಂದಾನೆ? ರಾಮಣ್ಣನಿಗೆ ಊರ ಕಡೆ ಹೇಗೆ ಹೋಗೋದು ಅಂತ ತೋಚಲಿಲ್ಲ. ಅಲ್ಪನಿಗೆ ಐಶ್ವರ್ಯ ಬಂತೋ ಇಲ್ವೋ, ಆದರೆ, ರಾಮಣ್ಣ ಮಾತ್ರ ಅರ್ಧ ರಾತ್ರಿಯಲ್ಲಿ ಕೊಡೆ ಹಿಡಿದು ಕೊಂಡಿದ್ದ; ಬರೀ ಕೊಡೆಯಲ್ಲ 'ಚಿನ್ನದ ನಾಯಿಕೊಡೆ'!
