ಭಾವವಿರದ ಜೀವವಿರಬಹುದೇ?!
ಭಾವವಿರದ ಜೀವವಿರಬಹುದೇ?!
ಈ ಭಾವನೆಗಳು ಎನ್ನುವುದು ಮನುಷ್ಯನಿಗೆ ಮಾತ್ರವಲ್ಲ ಸಕಲ ಜೀವರಾಶಿಗಳಿಗೂ ಇವೆ ಎನ್ನಬಹುದು, ಪ್ರೀತಿ, ಕೋಪ, ಕಾಳಜಿ, ದ್ವೇಷ, ವಾತ್ಸಲ್ಯ ಮುಂತಾದ ಭಾವನೆಗಳು ಮನುಷ್ಯರಿಗಷ್ಟೇ ಅಲ್ಲದೇ ಸಕಲ ಜೀವರಾಶಿಗಳಿಗೂ ಇವೆಯಲ್ಲವೇ??, ಹೌದು ಎಲ್ಲಾ ಜೀವಿಗಳಿಗೂ ಮನಸ್ಸಿದೆ ಆ ಮನಸ್ಸಿನಲ್ಲಿ ಭಾವನೆಗಳು ಎಂಬುದು ಇದ್ದೇ ಇರುತ್ತವೆ, ಉದಾಹರಣೆಗೆ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಹಸು ಮುಂತಾದವುಗಳು ಮನುಷ್ಯರೊಂದಿಗೆ ಇರಬಹುದು ಅಥವಾ ತಮ್ಮೊಳಗೆ ಇರಬಹದು ಅವರದೇ ಆದ ಭಾಷೆ ಹಾಗೂ ಅವರದೇ ಆದ ಭಾವನೆಗಳೊಂದಿಗೆ ವರ್ತಿಸುತ್ತವೆ ಅಲ್ಲವೇ??, ತಮ್ಮ ತಮ್ಮೊಳಗೆ ಅವುಗಳು ಕೆಲವೊಂದು ಸನ್ನೆಗಳ ಮೂಲಕ ಮಾತನಾಡುತ್ತವೆ ಅಥವಾ ಮಿಯಾಂವ್, ಬೌ ಬೌ ಅಥವಾ ಅಂಬಾ ಎಂದು ಅವರದೇ ಧ್ವನಿಗಳಲ್ಲಿ ನಮ್ಮತ್ತ ನೋಡುತ್ತಾ ನಮ್ಮನ್ನು ಅವರ ಬಳಿ ಹೋಗುವಂತೆ ಪ್ರೇರೇಪಿಸುತ್ತವೆ ಹಾಗೆಯೇ ಹಸಿವಾಗಿದೆ ಕುಡಿಯಲು ಅಥವಾ ತಿನ್ನಲು ಬೇಕು ಎಂದು ಅವರದೇ ಭಾಷೆಗಳಲ್ಲಿ ನಮ್ಮೊಡನೆ ವ್ಯವಹರಿಸುತ್ತವೆ ಅಲ್ಲವೇ??
ತಾಯಿ ಪ್ರೀತಿ, ವಾತ್ಸಲ್ಯಗಳನ್ನೂ ಕೂಡ ನಾವು ಪ್ರಾಣಿಗಳಲ್ಲಿ ಕಾಣಬಹುದು, ಉದಾಹರಣೆಗೆ ಒಂದು ನಾಯಿ ತನ್ನ ಮರಿಗಳನ್ನು ಯಾರೂ ಮುಟ್ಟದ ರೀತಿಯಲ್ಲಿ ಅವುಗಳನ್ನು ಜೋಪಾನ ಮಾಡಿಕೊಳ್ಳುತ್ತವೆ, ಬೆಕ್ಕುಗಳು ಮರಿ ಹಾಕಿದ ತಕ್ಷಣ ತಮ್ಮ ಮರಿಗಳನ್ನು ಬೇರೆ ಬೇರೆ ಸುರಕ್ಷಿತ ಸ್ಥಳಗಳಲ್ಲಿ ಇಟ್ಟು ಕಾಪಾಡಿಕೊಳ್ಳುತ್ತವೆ, ಹಸುಗಳು ಕರು ಹಾಕಿದ ತಕ್ಷಣ ತನ್ನ ಕರುವಿಗೆ ಶಕ್ತಿ ಬರಲೆಂದು ಅವುಗಳನ್ನು ನಾಲಿಗೆಯಿಂದ ಸವರುತ್ತವೆ , ಕಾಂಗಾರೂ ಗಳು ತಮ್ಮ ಮರಿಗಳನ್ನು ಅವುಗಳ ಚೀಲದಲ್ಲಿ ಒಯ್ದು ಸಂರಕ್ಷಣೆ ಮಾಡಿಕೊಳ್ಳುತ್ತವೆ, ಮಂಗಗಳು ತಮ್ಮ ಬಾಯಿಯಿಂದ ಮರಿಗಳನ್ನು ಕಚ್ಚಿ ಒಯ್ಯುತ್ತವೆ ಹೀಗೆಯೇ ಪ್ರತಿಯೊಂದು ಪ್ರಾಣಿಗಳು ಕೂಡ ವಿಭಿನ್ನವಾಗಿ ಮಾತೃ ವಾತ್ಸಲ್ಯಗಳನ್ನು ತೋರಿಸುತ್ತವೆ ಹಾಗೂ ತಮ್ಮ ಮರಿಗಳನ್ನು ಯಾರೂ ಮುಟ್ಟಬಾರದು ಎಂದು ಬಯಸುತ್ತವೆ, ಪಕ್ಷಿಗಳು ಕೂಡ ತಮ್ಮ ಮೊಟ್ಟೆಗಳನ್ನು, ಮರಿ ಹಕ್ಕಿಗಳನ್ನು ಜೋಪಾನ ಮಾಡಿಕೊಳ್ಳುತ್ತವೆ.
ಪ್ರಾಣಿ ಪಕ್ಷಿಗಳಿಗೆ ಒಗ್ಗಟ್ಟು ಕೂಡ ಇರುತ್ತವೆ ಉದಾಹರಣೆಗೆ ಇರುವೆಗಳು ಯಾವುದೇ ಒಂದು ಸಿಹಿ ತಿಂಡಿಯ ತುಣುಕುಗಳು ಇದ್ದರೆ ಅವುಗಳನ್ನು ಎಲ್ಲವೂ ಒಟ್ಟು ಸೇರಿ, ತಮ್ಮಿಂದ ದೊಡ್ಡ ಸಿಹಿ ತಿಂಡಿಯ ಚೂರುಗಳನ್ನು ಹೊತ್ತೊಯ್ಯುತ್ತವೆ, ಕಾಗೆಗಳು ತಿನ್ನಲು ಸಣ್ಣ ತುಣುಕು ಆಹಾರ ಸಿಕ್ಕಿದರೂ ಕೂಡ ಕಾ ಕಾ ಎಂದು ಕೂಗಿ ತಮ್ಮ ಬಳಗದವರನ್ನೆಲ್ಲಾ ಕರೆದು ಹಂಚಿ ತಿನ್ನುವ ಪಾಠಗಳನ್ನು ಮನುಷ್ಯನಿಗೆ ಹೇಳಿ ಕೊಡುವಂತೆ ಬಿಂಬಿತವಾಗುತ್ತವೆ!!
ಮನುಷ್ಯರು, ಪ್ರಾಣಿ ಪಕ್ಷಿಗಳು ಮಾತ್ರವಲ್ಲದೇ ಗಿಡ, ಮರಗಳಿಗೂ ಕೂಡ ತಮ್ಮದೇ ಆದ ಭಾವನೆಗಳು ಇರುತ್ತವೆ, ಒಂದು ಸಸ್ಯಕ್ಕೆ ನಾವು ಪ್ರತಿ ನಿತ್ಯ ನೀರು ಹಾಕಿ, ಅದನ್ನು ಚೆನ್ನಾಗಿ ಆರೈಕೆ ಮಾಡಿಕೊಂಡು, ಅದರ ಜೊತೆ ನಮ್ಮ ಸ್ವಲ್ಪ ಸಮಯವನ್ನಾದರೂ ಕಳೆದೆವು ಎಂದಾದರೆ ಆ ಗಿಡವು ಬೇರೆ ಗಿಡಗಳಿಗಿಂತ ಇನ್ನೂ ಚೆನ್ನಾಗಿ ಬೆಳೆಯುತ್ತವೆ, ತೋಟದಲ್ಲಿ ಮನುಷ್ಯರು ಹೋಗಿ ಅಡಿಕೆ ಅಥವಾ ತೆಂಗಿನ ಗಿಡಗಳನ್ನು ಮುಟ್ಟಿ, ಅವುಗಳ ಜೊತೆಗೆ ಸ್ವಲ್ಪ ಸಮಯವನ್ನು ಕಳೆದರೆ ಅವುಗಳು ಇನ್ನೂ ಹೆಚ್ಚು ಫಸಲನ್ನು ನೀಡುತ್ತವೆ ಕಾರಣ ಅವುಗಳಿಗೂ ಖುಷಿಯ ಅನುಭವವಾಗುತ್ತವೆ ಹಾಗಾಗಿ ಮರ ಗಿಡಗಳಿಗೂ ಭಾವನೆಗಳಿರುತ್ತವೆ!!
ಹಾಗಾಗಿ ಪ್ರತಿಯೊಂದು ಸಜೀವಿಗಳಿಗೂ ತಮ್ಮದೇ ಆದ ಭಾವನೆಗಳಿರುತ್ತವೆ, ಭಾವವಿಲ್ಲದ ಜೀವವಿರಲು ಸಾಧ್ಯವೇ?!, ಮನುಷ್ಯರು ಇನ್ನೊಬ್ಬರಿಗಿಂತ ವೇಗವಾಗಿ ನಾವು ವಾಹನಗಳನ್ನು ಚಲಾಯಿಸಬೇಕು ಎಂಬ ಭರಾಟೆಯಲ್ಲಿ ಅದೆಷ್ಟೋ ಪ್ರಾಣಿಗಳಿಗೆ ಗುದ್ದಿ, ಪ್ರಾಣಿಗಳ ಪ್ರಾಣ ಹನಿಗಳನ್ನು ಮಾಡಿದ ಅದೆಷ್ಟೋ ಘಟನೆಗಳನ್ನು ನೋಡುತ್ತಾ, ಕೇಳುತ್ತಾ ಬಂದಿದ್ದೇವೆ ಅಲ್ಲವೇ??
ಹಾಗಾಗಿ ಮಾನವನು ಸ್ವಾರ್ಥದಿಂದ ಯೋಚಿಸದೇ, ಇನ್ನೊಬ್ಬನಿಗಿಂತ ನಾನು ಮೊದಲು ಹೋಗಬೇಕು ಎಂದು ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸದೇ, ತಮ್ಮ ಜೀವದ ರಕ್ಷಣೆಯ ಜೊತೆಗೆ ಭೂಮಿಯಲ್ಲಿನ ಪ್ರತಿಯೊಂದು ಜೀವ ಸಂಕುಲದ ರಕ್ಷಣೆಯೂ ಅಗತ್ಯ, ಅವಕ್ಕೂ ಮನಸ್ಸಿದೆ, ಭಾವನೆಗಳಿವೆ, ನೋವು ಎಂಬುದಿದೆ ಎಂಬುದನ್ನು ಅರಿತು ನಿಧಾನವಾದರೂ ಚಿಂತೆಯಿಲ್ಲ ಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದು ಉತ್ತಮವಲ್ಲವೇ??
