ಅಪಾತ್ರ ( ಕಥೆ )
ಅಪಾತ್ರ ( ಕಥೆ )
" ಅದೆಷ್ಟು ಸಲ ಓದಿದ ಪುಸ್ತಕವನ್ನೇ ಓದ್ತೀಯಾ ಅರು. ಬೇಜಾರೇ ಆಗಲ್ವಲ್ಲ ನಿಂಗೆ. ದೇವಸ್ಥಾನಕ್ಕೆ ಲೇಟ್ ಆಗುತ್ತೆ. ರೆಡಿಯಾಗು ಹೋಗು " ಎಂದು ಆರೋಹಿಯನ್ನು ತಯಾರಾಗುವಂತೆ ಹೇಳಿದಳು ಆರೋಹಿಯ ಅತ್ತಿಗೆ ವೈಷ್ಣವಿ. ತಾನು ಓದುತ್ತಿದ್ದ ಪುಸ್ತಕವನ್ನು ಮಡಚಿಟ್ಟಳು ಆರೋಹಿ. " ಶಕುಂತಲಾ " ಎಂದು ದಪ್ಪ ಅಕ್ಷರದಲ್ಲಿ ಪುಸ್ತಕದ ಮುಖಪುಟದ ಮೇಲೆ ಬರೆದಿತ್ತು. ವೈಷ್ಣವಿ ಹೇಳಿದಂತೆ ಆರೋಹಿ ಆ ಪುಸ್ತಕವನ್ನು ಲೆಕ್ಕವಿಲ್ಲದಷ್ಟು ಬಾರಿ ಓದಿದ್ದಳು. ಆದರೂ ಪುನಃ ಓದುತ್ತಿದ್ದಳು. ಆ ಪುಸ್ತಕದಲ್ಲಿದ್ದ ಪ್ರತಿ ಅಕ್ಷರದಲ್ಲೂ ಅದೇನೋ ಭಾವನಾತ್ಮಕ ಸೆಳೆತ..!! ದುಷ್ಯಂತ ಶಕುಂತಲೆಯನ್ನು ಭೇಟಿಯಾಗಿದ್ದು, ಅವರ ಪ್ರೀತಿ, ಗಂಧರ್ವ ವಿವಾಹ, ಅವನು ಕೊಟ್ಟ ಉಂಗುರ, ಅದನ್ನು ಕಳೆದುಕೊಂಡ ಶಕುಂತಲೆಯ ಪರಿಸ್ಥಿತಿ, ದುಷ್ಯಂತನ ಮರೆವು, ಅದರಿಂದ ಶಕುಂತಲೆ ಪಟ್ಟ ನೋವು..!! ಕೊನೆಗೂ ಉಂಗುರ ಸಿಕ್ಕಿದ ಮೇಲೆ ಹಳೆಯದೆಲ್ಲವೂ ದುಷ್ಯಂತನಿಗೆ ನೆನಪಾಗಿ, ದುಷ್ಯಂತ ಶಕುಂತಲೆಯ ಮರುಮಿಲನ. ಎಷ್ಟು ಸುಂದರ. ಎಷ್ಟು ರಮಣೀಯ. ಕಳೆದುಕೊಂಡಿದ್ದು ಮತ್ತೆ ಸಿಕ್ಕರೆ..!! ಮರೆತು ಹೋದ ಸವಿ ನೆನಪು ಮತ್ತೆ ಜೀವ ತಾಳಿದರೆ ಎಷ್ಟು ಚಂದವಲ್ಲವೇ. ಹೀಗೆ ತನ್ನದೇ ಗುಂಗಿನಲ್ಲಿ ಕಳೆದುಹೋಗಿದ್ದಳು ಆರೋಹಿ. ಆ ಪುಸ್ತಕದಲ್ಲಿದ್ದದ್ದು ಆರೋಹಿಯ ಪಾಲಿಗೆ ಕೇವಲ ಕಥೆಯಾಗಿರಲಿಲ್ಲ, ಅವಳ ಜೀವನವೇ ಆಗಿತ್ತು.
ಐದು ವರ್ಷಗಳ ಹಿಂದೆ, ಆರೋಹಿಯ ಜೀವನದಲ್ಲಿಯೂ ಪ್ರೀತಿಯ ಪ್ರವೇಶವಾಗಿತ್ತು. ಏಕಾಂಶ್ ಎನ್ನುವ ಹೆಸರಿನಲ್ಲಿ. ಏಕಾಂಶ್ ರಾಜಸ್ಥಾನದ ಮೂಲದವನು. ಅವನು ಕೆಲಸ ಮಾಡುತ್ತಿದ್ದ ಕಂಪೆನಿಯ ಹೊಸತೊಂದು ಬ್ರಾಂಚ್, ಬೆಂಗಳೂರಿನಲ್ಲಿ ಆರಂಭವಾಗಿತ್ತು. ಹಾಗಾಗಿ ಏಕಾಂಶನನ್ನು ಬೆಂಗಳೂರಿಗೆ ವರ್ಗಾಯಿಸಿದ್ದರು. ಆರೋಹಿಯ ಪಕ್ಕದ ಮನೆಯಲ್ಲೇ ಬಾಡಿಗೆಗೆ ನೆಲೆಸಿದ್ದ ಏಕಾಂಶ್. ಅಕ್ಕ ಪಕ್ಕದ ಮನೆಯವರೆಂದರೆ ಸ್ನೇಹ, ಸಲಿಗೆ ಸಾಮಾನ್ಯ. ಏಕಾಂಶ್ ಹಾಗೂ ಆರೋಹಿಯ ಅಣ್ಣನಾದ ಅನುರಾಗ್ ನಡುವೆ ಒಳ್ಳೆಯ ಸ್ನೇಹವೇ ಬೆಳೆದಿತ್ತು. ಆಗೊಮ್ಮೆ ಈಗೊಮ್ಮೆ ಏಕಾಂಶ್ ಆರೋಹಿಯ ಮನೆಗೆ ಬಂದು ಹೋಗುತ್ತಿದ್ದ. ಏಕಾಂಶ್ ಬ್ಯಾಚುಲರ್ ಆಗಿದ್ದರಿಂದ, ಕೆಲವು ಸಲ ಊಟ ತಿಂಡಿಯೂ ಆರೋಹಿಯ ಮನೆಯಲ್ಲೇ ಮಾಡುತ್ತಿದ್ದ. ವೈಷ್ಣವಿ ಮಾಡುತ್ತಿದ್ದ ದಕ್ಷಿಣ ಭಾರತ ಶೈಲಿಯ ಪುಳಿಯೋಗರೆ, ಬಿಸಿಬೇಳೆ ಬಾತ್, ಒಬ್ಬಟ್ಟು ಇವೆಲ್ಲ ಏಕಾಂಶನ ಅಚ್ಚುಮೆಚ್ಚಾಗಿತ್ತು. ಏಕಾಂಶನಿಗೆ ಕನ್ನಡ ಬರುತ್ತಿರಲಿಲ್ಲ. ಅನುರಾಗನ ಜೊತೆಗೆ ನಡೆಯುತ್ತಿದ್ದ ಸಂಭಾಷಣೆಯೆಲ್ಲವೂ ಇಂಗ್ಲಿಷಿನಲ್ಲೇ, ಇಲ್ಲ ಹಿಂದಿಯಲ್ಲೇ ಆಗುತ್ತಿತ್ತು. ಆರೋಹಿಯೋ ಕನ್ನಡದಲ್ಲಿ ಎಮ್. ಎ ಮಾಡುತ್ತಿದ್ದಳು. ಅಪ್ಪಟ ಕನ್ನಡ ಪ್ರೇಮಿ. ಏಕಾಂಶ್ ಬೆಂಗಳೂರಿಗೆ ಬಂದು ಇಷ್ಟು ಸಮಯವಾದರೂ ಇನ್ನೂ ಕನ್ನಡ ಕಲಿಯದಿರುವ ವಿಷಯ ಅವಳಿಗೆ ಹಿಡಿಸಿರಲಿಲ್ಲ. ಅಂದೊಂದು ದಿನ ತರಕಾರಿಯವನ ಜೊತೆಯಲ್ಲಿ ಮಾತನಾಡಲು ಹೆಣಗಾಡುತ್ತಿದ್ದ ಏಕಾಂಶ್. ತರಕಾರಿಯವನ ಕನ್ನಡ ಏಕಾಂಶನಿಗೆ ಅರ್ಥವಾಗುತ್ತಿರಲಿಲ್ಲ. ಏಕಾಂಶನ ಹಿಂದಿ, ಇಂಗ್ಲಿಷ್ ಆ ತರಕಾರಿಯವನಿಗೆ ಅರ್ಥವಾಗುತ್ತಿರಲಿಲ್ಲ. ಅಂದು ತರಕಾರಿ ತರಲು ಆರೋಹಿಯೂ ಅಲ್ಲಿಗೆ ಬಂದಿದ್ದಳು. ಏಕಾಂಶನನ್ನು ನೋಡಿದ ಆರೋಹಿ, " ಒಂದು ಪ್ರದೇಶದಲ್ಲಿದ್ದುಕೊಂಡು ಸ್ವಲ್ಪವೂ ಸ್ಥಳೀಯ ಭಾಷೆಯನ್ನು ಕಲಿಯದಿದ್ದರೆ ಹೀಗೇ ಆಗುವುದು " ಎಂದು ಗೊಣಗಿಕೊಂಡಿದ್ದಳು. ನನ್ನ ಬಗ್ಗೆ ಏನು ಗೊಣಗಿಕೊಳ್ಳುತ್ತಿದ್ದೀರ ಎಂದು ಇಂಗ್ಲಿಷಿನಲ್ಲೇ ಕೇಳಿದ್ದ ಏಕಾಂಶ್. " ಯು ಹ್ಯಾವ್ ಟು ಲರ್ನ್ ಲೋಕಲ್ ಲಾಂಗ್ವೇಜ್, ಟು ಕಮ್ಯುನಿಕೇಟ್ ವಿದ್ ಲೋಕಲ್ ಪೀಪಲ್ " ಎಂದು ಉತ್ತರಿಸಿದ್ದಳು ಆರೋಹಿ. ಸರಿ, ನೀವೇ ನನಗೆ ಕನ್ನಡ ಕಲಿಸಿಕೊಡಿ ಎಂದು ಆರೋಹಿಯಲ್ಲಿ ಕೇಳಿದ್ದ ಏಕಾಂಶ್. ಮಾತಿಗೇನೋ " ಹಾಂ " ಎಂದು ತಲೆಯಾಡಿಸಿದ್ದಳು ಆರೋಹಿ. ಆದರೆ ಏಕಾಂಶ್ ಅದನ್ನೇ ಸೀರಿಯಸ್ ಆಗಿ ತೆಗೆದುಕೊಂಡಿದ್ದ. ತನಗೆ ಕನ್ನಡ ಕಲಿಸೆಂದು ಆರೋಹಿಯಲ್ಲಿ ದಂಬಾಲು ಬಿದ್ದಿದ್ದ. ಕೊನೆಗೆ ಸರಿಯೆಂದು, ಆರೋಹಿ ಏಕಾಂಶನಿಗೆ ಕನ್ನಡ ಕಲಿಸಲು ಒಪ್ಪಿದ್ದಳು. ಪ್ರತಿದಿನ ಸಂಜೆ ಆರೋಹಿ ಏಕಾಂಶನಿಗೆ ಕನ್ನಡ ಕಲಿಸುತ್ತಿದ್ದಳು. ಅಲ್ಲಿಯವರೆಗೆ ನೆರೆಹೊರೆಯೆಂಬ ಪರಿಚಯವಷ್ಟೇ ಇದ್ದ ಇಬ್ಬರ ಮಧ್ಯೆ ಈ ಕನ್ನಡ ಕಲಿಯುವಿಕೆಯು ಸ್ನೇಹಕ್ಕೆ ನಾಂದಿ ಹಾಡಿತ್ತು. ಸ್ನೇಹ ಸಲಿಗೆಗೆ, ಸಲಿಗೆ ಪ್ರೀತಿಗೆ ತಿರುಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಆರೋಹಿ ಏಕಾಂಶನಿಗೆ ಕನ್ನಡ ಭಾಷೆ ಕಲಿಸಿದರೆ, ಏಕಾಂಶ್ ಆರೋಹಿಗೆ ಪ್ರೀತಿಯ ಭಾಷೆ ಕಲಿಸಿದ್ದ. ಇಬ್ಬರ ನಡುವೆ ನವಿರಾದ ಪ್ರೇಮ ಚಿಗುರೊಡೆದಿತ್ತು. ಏಕಾಂಶ್ ಆರೋಹಿಯನ್ನು " ಕನ್ನಡ ಟೀಚರ್ " ಅಂತಲೇ ಕರೆದು ರೇಗಿಸುತ್ತಿದ್ದ. ಏಕಾಂಶನ ಪ್ರೀತಿಗೆ, ಅವನ ಅಕ್ಕರೆಯ ಮಾತುಗಳಿಗೆ ಆರೋಹಿ ಸೋತು ಹೋಗಿದ್ದಳು. ಭಾವನಾಲೋಕದಲ್ಲಿ ತೇಲಿ ಹೋಗಿದ್ದಳು. ಆರೋಹಿ ಯಾವ ವಿಷಯವನ್ನೂ ತನ್ನ ಅಣ್ಣ, ಅತ್ತಿಗೆಯಲ್ಲಿ ಮುಚ್ಚಿಡುತ್ತಿರಲಿಲ್ಲ. ತನ್ನ ಪ್ರೀತಿಯ ವಿಷಯವನ್ನೂ ಮುಚ್ಚಿಡಲಿಲ್ಲ. ಅನುರಾಗನಿಗೆ ಈ ವಿಷಯವನ್ನು ತಿಳಿಸಿದಾಗ, ಅವನೇನೋ ಖುಷಿಯಿಂದಲೇ ಒಪ್ಪಿಕೊಂಡ. ಆದರೆ ವೈಷ್ಣವಿಗೇಕೋ ಅಷ್ಟು ಮನಸ್ಸಿರಲಿಲ್ಲ.
" ಸರಿಯಾಗಿ ಗುರುತು ಪರಿಚಯವಿರದ ಹುಡುಗನಿಗೆ ನಮ್ಮ ಆರೋಹಿಯನ್ನು ಮದುವೆ ಮಾಡಿ ಹೇಗೆ ಕೊಡುವುದು ಅನುರಾಗ್ " ಎಂದು ಅನುರಾಗನಿಗೆ ಹೇಳಿದ್ದಳು ವೈಷ್ಣವಿ.
" ಕಳೆದೊಂದು ವರ್ಷದಿಂದ ಏಕಾಂಶ್ ನಮ್ಮ ಪಕ್ಕದ ಮನೆಯಲ್ಲೇ ಇದ್ದಾನೆ. ದಿನಾ ಅವನನ್ನು ನೋಡುತ್ತಿದ್ದೇವೆ. ಇನ್ನೆಷ್ಟು ಪರಿಚಯವಾಗಬೇಕು ವೈಷ್ಣವಿ. ಏಕಾಂಶ್ ಸಂಭಾವಿತ, ಒಳ್ಳೆಯ ಕೆಲಸದಲ್ಲಿದ್ದಾನೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಆರೋಹಿ ಅವನನ್ನು ಮನಸಾರೆ ಮೆಚ್ಚಿದ್ದಾಳೆ. ಇನ್ನೇನು ಬೇಕು " ಎಂದಿದ್ದ ಅನುರಾಗ್.
" ಪಕ್ಕದ ಮನೆಯಲ್ಲಿದ್ದರೆ...!! ನಮ್ಮ ಜೊತೆ ಚೆನ್ನಾಗಿ ಮಾತನಾಡಿದರೆ..!! ನಮ್ಮ ಮನೆಯ ಹುಡುಗಿಯನ್ನು ಅವನಿಗೆ ಕೊಟ್ಟು ಮದುವೆ ಮಾಡುವ ಮಟ್ಟಿಗೆ ಹುಡುಗ ಯೋಗ್ಯ ಅಂತಾನಾ..!! ಏಕಾಂಶ್ ಒಳ್ಳೆಯವನಲ್ಲ ಅಂತ ನಾನು ಹೇಳುತ್ತಿಲ್ಲ ಅನಿ. ಆದರೆ.. ಮದುವೆ ಎಂದರೆ ಮಕ್ಕಳಾಟವಲ್ಲ. ಏಕಾಂಶ್ ಈ ಊರಿನವನಲ್ಲ. ನಮಗೆ ಅವನ ಪೂರ್ವಾಪರದ ಬಗ್ಗೆ ಏನೆಂದರೆ ಏನೂ ಗೊತ್ತಿಲ್ಲ. ಅವನಿಗೂ ನಮಗೂ ಭಾಷೆ, ಸಂಸ್ಕೃತಿ, ಆಚಾರ, ವಿಚಾರ ಎಲ್ಲದೆಲ್ಲೂ ತುಂಬಾ ಅಂತರವಿದೆ. ಏಕಾಂಶ್ ಬಗ್ಗೆ ಸರಿಯಾಗಿ ವಿಚಾರಿಸದೆ ನಾವು ಮುಂದುವರಿಯುವುದು ಬೇಡ. " ಎಂದು ಸ್ಪಷ್ಟವಾಗಿ ನುಡಿದಿದ್ದಳು ವೈಷ್ಣವಿ.
ವೈಷ್ಣವಿಯ ಮಾತು ಅನುರಾಗನಿಗೂ ಸರಿ ಎನ್ನಿಸಿತ್ತು. ಏಕಾಂಶ್ ನ ಕಂಪೆನಿಯಲ್ಲಿ ಅವನ ಬಗ್ಗೆ ವಿಚಾರಿಸಿದ್ದ. ಅಲ್ಲಿದ್ದವರೆಲ್ಲ ಏಕಾಂಶ್‌ನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದರು. ಏಕಾಂಶ್‌ನ ಕೆಲವು ಗೆಳೆಯರೂ ಅದೇ ರೀತಿ ಹೇಳಿದ್ದರು. ಏಕಾಂಶ್ ಒಳ್ಳೆಯ ಹುಡುಗ, ಅವನಿಗೆ ಆರೋಹಿಯನ್ನು ಕೊಡಬಹುದು ಎನ್ನುವ ನಂಬಿಕೆ ಅನುರಾಗನಿಗೆ ಹುಟ್ಟಿತ್ತು. ಈ ವಿಷಯವಾಗಿ ವೈಷ್ಣವಿಯನ್ನೂ ಒಪ್ಪಿಸಿದ್ದ ಅನುರಾಗ್. ಆರೋಹಿಯ ಮನೆಯವರಿಂದ ಈ ಮದುವೆಗೆ ಪೂರ್ತಿ ಸಹಮತಿಯಿತ್ತು. ಆದರೆ ಏಕಾಂಶ್ ಮನೆಯವರು..!!
" ಅಪ್ಪ, ಅಮ್ಮ ಏಕೋ ಈ ಮದುವೆಗೆ ಒಪ್ಪುತ್ತಿಲ್ಲ. ಆದರೆ ಹೇಗಾದರೂ ಮಾಡಿ ಅವರನ್ನು ಒಪ್ಪಿಸುವೆನೆನ್ನುವ ಭರವಸೆ ನನಗಿದೆ. ಆ ಜವಾಬ್ದಾರಿ ನನ್ನದು. ನಿಶ್ಚಿತಾರ್ಥ ಈಗಲೇ ಆಗಿಬಿಡಲಿ, ನನ್ನ ಅಣ್ಣ ಅತ್ತಿಗೆ ಬರುತ್ತಾರೆ. ಮದುವೆಯ ಸಮಯಕ್ಕೆ ನಾನೇ ಊರಿಗೆ ಹೋಗಿ ಅಮ್ಮ, ಅಪ್ಪನನ್ನು ಒಪ್ಪಿಸಿ ಕರೆದುಕೊಂಡು ಬರುವೆ" ಎಂದಿದ್ದ ಏಕಾಂಶ್. ಪ್ರೇಮ ವಿವಾಹವೆಂದರೆ ಮನೆಯವರ ವಿರೋಧ ಬರುವುದು ಸಹಜ. ಏಕಾಂಶ್ ಹೇಗಾದರೂ ತಂದೆ ತಾಯಿಯನ್ನು ಒಪ್ಪಿಸುವೆನು ಎಂದು ಹೇಳಿರುವನಲ್ಲ. ಇನ್ನೇನು ಎಂದು ಯೋಚಿಸಿದ ಅನುರಾಗ್, ಆರೋಹಿ ಮತ್ತು ಏಕಾಂಶ್‌ನ ನಿಶ್ಚಿತಾರ್ಥಕ್ಕೆ ಸಿದ್ಧತೆ ಮಾಡಿಕೊಂಡಿದ್ದ.
" ನಾವು ಏಕೋ ದುಡುಕುತ್ತಿದ್ದೇವೆ ಅನ್ನಿಸುತ್ತಿದೆ ಅನುರಾಗ್. ಇನ್ನೂ ಸ್ವಲ್ಪ ಸಮಯ ಹೋಗಲಿ. ಏಕಾಂಶ್ ತನ್ನ ಮನೆಯವರನ್ನು ಒಪ್ಪಿಸಲಿ. ಆಮೇಲೆ ಇವೆಲ್ಲ ಮಾಡೋಣ " ಎಂದು ವೈಷ್ಣವಿ ಅನುರಾಗನಿಗೆ ಎರಡು ಮೂರು ಸಲ ಹೇಳಿದ್ದಳು.
" ಎಲ್ಲ ಸರಿಯಾಗಿಯೇ ನಡೆಯುತ್ತಿದೆ ವೈಷ್ಣವಿ. ನೀನೇ ಓವರ್ ಥಿಂಕ್ ಮಾಡ್ತಾ ಇದ್ದೀಯ. ನಿಶ್ಚಿತಾರ್ಥ ಆಗಿ ಹೋಗಲಿ. ಮದುವೆಗೆ ಮನೆಯವರನ್ನೆಲ್ಲ ಒಪ್ಪಿಸಿ ಕರೆದುಕೊಂಡು ಬರುತ್ತೇನೆಂದು ಏಕಾಂಶ್ ಹೇಳಿರುವನಲ್ಲ. ನೀನು ಇಲ್ಲದಿರುವುದನ್ನೆಲ್ಲ ಯೋಚಿಸುತ್ತ ತಲೆ ಕೆಡಿಸಿಕೊಳ್ಳಬೇಡ. ರಿಲಾಕ್ಸ್ " ಎಂದಿದ್ದ ಅನುರಾಗ್
ನಿಶ್ಚಿತಾರ್ಥ ಅದ್ಧೂರಿಯಾಗಿಯೇ ನಡೆದಿತ್ತು. ಏಕಾಂಶ್ ಹೇಳಿದಂತೆ ಅವನ ಅಣ್ಣ, ಅತ್ತಿಗೆ ನಿಶ್ಚಿತಾರ್ಥಕ್ಕೆ ಬಂದಿದ್ದರು. ಅವರಿಬ್ಬರಿಗೂ ಆರೋಹಿ ಹಿಡಿಸಿದ್ದಳು. ಆರೋಹಿಯ ಕಣ್ಣಿನಲ್ಲಿ ಕಣ್ಣಿಟ್ಟು ಅವಳ ಕೈಯನ್ನು ಮೃದುವಾಗಿ ತನ್ನ ಕೈಗಳಲ್ಲಿ ಇರಿಸಿ, ಏಕಾಂಶ್ ಉಂಗುರವನ್ನು ತೊಡಿಸಿದಾಗ, ಆರೋಹಿ ತನ್ನನ್ನು ತಾನೇ ಮರೆತು ಹೋಗಿದ್ದಳು. ಏಕಾಂಶನಲ್ಲಿಯೇ ಸಂಪೂರ್ಣವಾಗಿ ಬೆರೆತು ಹೋಗಿದ್ದಳು. ಆ ಘಳಿಗೆಯೇ ಆರೋಹಿಯ ಮನಸು ಏಕಾಂಶನನ್ನು ತನ್ನ ಪತಿಯೆಂದು ಮನಸಾರೆ ಸ್ವೀಕರಿಸಿತ್ತು. ಬರುವ ತಿಂಗಳ ಕೊನೆಯ ವಾರದಲ್ಲೇ ಮದುವೆಯೆಂದು ನಿಶ್ಚಯವಾಗಿತ್ತು. ಅಂದು ಏಕಾಂಶ್ ರಾಜಸ್ಥಾನದಲ್ಲಿದ್ದ ತನ್ನ ಊರಿಗೆ ಹೊರಡುವವನಿದ್ದ. ಅಪ್ಪ, ಅಮ್ಮನನ್ನು ಒಪ್ಪಿಸಿ ಮದುವೆಗೆ ತನ್ನ ಜೊತೆಗೇ ಕರೆದುಕೊಂಡು ಬರುವೆ ಎಂದು ಹೇಳಿದ್ದ. ಹೊರಡುವ ದಿನ ಆರೋಹಿಯ ಕೈಯಲ್ಲೊಂದು ಪತ್ರವನ್ನಿಟ್ಟಿದ್ದ ಏಕಾಂಶ್. ಪ್ರೇಮ ಪತ್ರ. ಅಚ್ಚ ಕನ್ನಡದಲ್ಲಿ ಬರೆದ ಪ್ರೇಮ ಪತ್ರ.
" ನೀನು ಕಲಿಸಿದ ಕನ್ನಡವನ್ನೆಲ್ಲ ಬಳಸಿ ಈ ಪತ್ರ ಬರೆದಿರುವೆ ಆರೋಹಿ. ನನ್ನೆಲ್ಲ ಭಾವನೆಗಳನ್ನು ಈ ಪತ್ರದಲ್ಲಿ ತೆರೆದಿಟ್ಟಿರುವೆ. ಅಲ್ಲಲ್ಲಿ ಸ್ಪೆಲ್ಲಿಂಗ್ನ ತಪ್ಪಾಗಿರಬಹುದು. ಆದರೆ ನನ್ನ ಪ್ರೀತಿಯಲ್ಲಿ ಯಾವುದೇ ತಪ್ಪಾಗಲೀ, ಕೊರತೆಯಾಗಲೀ ಇಲ್ಲ. ನನ್ನ ಇಡೀ ಜೀವನವನ್ನು ನಿನ್ನೊಂದಿಗೆ ಕಳೆಯಬೇಕು ಎನ್ನುವುದೇ ನನ್ನ ಕನಸು. ಆ ಕನಸು ಇನ್ನು ಕೆಲವೇ ದಿನಗಳಲ್ಲಿ ನನಸಾಗಲಿದೆ. " ಎಂದು ಹೇಳಿ ಆರೋಹಿಯ ಕೈಗೆ ಪತ್ರವನ್ನಿಟ್ಟು ರಾಜಸ್ಥಾನಕ್ಕೆ ತೆರಳಿದ್ದ ಏಕಾಂಶ್.
ಮದುವೆಯ ತಯಾರಿಗಳು ಜೋರಾಗಿಯೇ ನಡೆದಿದ್ದವು. ಲಗ್ನ ಪತ್ರಿಕೆಯೂ ಹಂಚಿಯಾಗಿತ್ತು. ಮದುವೆಗೆ ಹದಿನೈದು ದಿನಗಳ ಮೊದಲೇ ಮನೆಯವರೊಂದಿಗೆ ಬಂದು ತಲುಪುವೆ ಎಂದಿದ್ದ ಏಕಾಂಶ್. ಆದರೆ ಏನೋ ಕಾರಣಗಳನ್ನು ಕೊಡುತ್ತ ದಿನಗಳನ್ನು ಮುಂದೂಡುತ್ತಲೇ ಇದ್ದ. ಮದುವೆಯ ದಿನಗಳು ಹತ್ತಿರವಾಗುತ್ತಿದ್ದವು. ಆರೋಹಿ, ಅನುರಾಗ್ ಕಾಲ್ ಮಾಡಿ, ಬರಲೇಕೆ ತಡವಾಗುತ್ತಿದೆ ಎಂದು ಕೇಳುತ್ತಲೇ ಇದ್ದರು. ಆದರೆ ಏಕಾಂಶ್ ಕಡೆಯಿಂದ ಸರಿಯಾದ ಉತ್ತರ ಬಂದಿರಲಿಲ್ಲ. ಮದುವೆಗೆ ಮೂರು ದಿನವಿದೆ ಎನ್ನುವಾಗ ಅವನ ಮೊಬೈಲ್ ಕೂಡ ಸ್ವಿಚ್ ಆಫ್ ಬರುತ್ತಿತ್ತು. ಅನುರಾಗನಿಗೆ ಏನು ಮಾಡುವುದೆಂದೇ ತಿಳಿಯದಂತಾಗಿತ್ತು. ನಾಲ್ಕು ದಿನ ಕಳೆದರೆ ತಂಗಿಯ ಮದುವೆ. ಆದರೆ ತಾಳಿ ಕಟ್ಟಬೇಕಾದ ಗಂಡಿನ ಪತ್ತೆ ಇಲ್ಲ..!! ಮಾಡುವುದೇನು..!! ಏಕಾಂಶನ ಅಣ್ಣನ ನಂಬರಿಗೆ ಕರೆ ಮಾಡಿದರೆ ಅದೂ ನಾಟ್ ರೀಚೆಬಲ್ ಅಂತ ಬರುತ್ತಿತ್ತು. ಇನ್ನು ಬೆಂಗಳೂರಿನಲ್ಲಿದ್ದ ಏಕಾಂಶನ ಗೆಳೆಯರಲ್ಲಿ ವಿಚಾರಿಸಿದರೆ ಅವರಿಗೂ ಯಾವ ಮಾಹಿತಿಯೂ ಇರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಅನುರಾಗ್ ರಾಜಸ್ಥಾನಕ್ಕೇ ಹೊರಟಿದ್ದ. ಏಕಾಂಶನ ಊರಾದ ಜೈಪುರಕ್ಕೆ ಅವನು ಕೊಟ್ಟಿದ್ದ ವಿಳಾಸದಲ್ಲಿ ಹೋಗಿ ನೋಡಿದರೆ, ಏಕಾಂಶನ ಪರಿವಾರ ಹತ್ತು ದಿನದ ಹಿಂದೆಯೇ ಅವರಿದ್ದ ಬಾಡಿಗೆ ಮನೆಯನ್ನು ಖಾಲಿ ಮಾಡಿಕೊಂಡು ಹೋಗಿರುವರೆಂದು ತಿಳಿಯಿತು. ಎಲ್ಲಿಗೆ ಹೋದರೆಂದರೆ ಅಲ್ಲಿರುವ ಯಾರಲ್ಲಿಯೂ ಸರಿಯಾದ ಉತ್ತರ ದೊರಕಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂದು ಅನುರಾಗ್ ಬೆಂಗಳೂರಿಗೆ ವಾಪಾಸ್ ಆಗಿದ್ದ. ಕೊನೆಯ ಪ್ರಯತ್ನವಾಗಿ ಏಕಾಂಶ್ ಕೆಲಸ ಮಾಡುತ್ತಿದ್ದ ಕಂಪೆನಿಗೆ ಹೋಗಿ ವಿಚಾರಿಸಿದ್ದ ಅನುರಾಗ್. ತಾನಿನ್ನು ನಿಮ್ಮ ಕಂಪೆನಿಯಲ್ಲಿ ಕಂಟಿನ್ಯೂ ಮಾಡುವುದಿಲ್ಲವೆಂದು ಏಕಾಂಶ್ ಒಂದು ವಾರದ ಹಿಂದೆಯೇ ತನ್ನ ರೆಸಿಗ್ನೇಶನ್ನನ್ನು ಇಮೇಲ್ ಮಾಡಿದ್ದಾನೆ. ನಾವೂ ಅವನನ್ನು ಸಂಪರ್ಕಿಸಲು ಪ್ರಯತ್ನಿಸಿದೆವು. ಆದರೆ ಪ್ರಯೋಜನವಾಗಲಿಲ್ಲವೆಂದು ಕಂಪೆನಿಯವರು ತಿಳಿಸಿದ್ದರು. ಅಲ್ಲಿಗೆ ಅನುರಾಗನಿಗಿದ್ದ ಎಲ್ಲ ಬಾಗಿಲುಗಳೂ ಮುಚ್ಚಿದ್ದವು. ಇನ್ನು ಏಕಾಂಶ್ ಬರುವುದಿಲ್ಲ, ಈ ಮದುವೆ ನಡೆಯುವುದಿಲ್ಲವೆಂದು ಮನದಟ್ಟಾಗಿತ್ತು. ಮರುದಿನವಿದ್ದ ಮದುವೆ ರದ್ದಾಗಿದೆಯೆಂದು ಆ ದಿನ ರಾತ್ರಿಯೇ ಆದಷ್ಟು ಜನರಿಗೆ ವಿಷಯ ತಲುಪಿಸಿದ್ದ ಅನುರಾಗ್. ನಡೆದಿದ್ದೆಲ್ಲವನ್ನು ಒಪ್ಪಿಕೊಳ್ಳಲು ಆರೋಹಿ ಸಿದ್ಧವಿರಲಿಲ್ಲ. ಏಕಾಂಶ್ ತನಗೆ ಮೋಸ ಮಾಡಿದನು ಎನ್ನುವುದನ್ನು ಅವಳ ಮನಸು ಸ್ವೀಕರಿಸಲೇ ಇಲ್ಲ. ವೈಷ್ಣವಿ, ಅನುರಾಗ್ ಎಷ್ಟೇ ಸಮಾಧಾನ ಮಾಡಿ, ತಿಳಿ ಹೇಳಿದರೂ ಪ್ರೀತಿಯೆನ್ನುವ ಮಾಯೆ ಆವರಿಸಿದ್ದ ಆರೋಹಿಯ ಮನಸು ವಾಸ್ತವಿಕತೆ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಏಕಾಂಶ್ ನಿಶ್ಚಿತಾರ್ಥಕ್ಕೆ ತೊಡಿಸಿದ ಉಂಗುರ, ಹಾಗೂ ಅವನು ಕೊನೆಯದಾಗಿ ಕೊಟ್ಟ ಆ ಓಲೆ ಇವೆರಡನ್ನೇ ನೋಡುತ್ತ ಅಳುತ್ತ ಕುಳಿತು ಬಿಡುತ್ತಿದ್ದಳು. ಆರೋಹಿಯನ್ನು ಸಂಭಾಳಿಸುವುದೇ ಅನುರಾಗ್, ವೈಷ್ಣವಿಗೆ ಕಷ್ಟವಾಗಿ ಹೋಗಿತ್ತು. ಆರೋಹಿ ಹೀಗೇ ಇದ್ದರೆ, ಅವಳ ಮನಸು ಇನ್ನಷ್ಟು ಹದಗೆಡುವುದೆಂದು ಅರಿತ ಅನುರಾಗ್ ಯಾವುದಾದರೂ ಕೆಲಸಕ್ಕೆ ಸೇರಿಕೊಳ್ಳುವಂತೆ ಆರೋಹಿಯನ್ನು ಒತ್ತಾಯಿಸಿದ್ದನು. ಅಣ್ಣನ ಒತ್ತಾಯಕ್ಕೆಂದು ಕಾಲೇಜಿನ ಲೆಕ್ಚರರ್ ಜಾಬಿಗೆ ಸೇರಿಕೊಂಡಿದ್ದಳು ಆರೋಹಿ. ಹೊಸ ಜಾಗ, ಹೊಸ ಜನ, ಹೊಸ ಕೆಲಸ ಆರೋಹಿಯ ಮನಸ್ಸಿನ ನೋವನ್ನು ಸ್ವಲ್ಪ ಕಡಿಮೆ ಮಾಡಿತ್ತಾದರೂ ಸಂಜೆ ಮನೆಗೆ ಬಂದ ಮೇಲೆ ಮತ್ತದೇ ನೆನಪುಗಳು. ಏಕಾಂಶ್ ತನಗೇಕೇ ಹೀಗೆ ಮಾಡಿದ..!! ಅವನ ಪ್ರೀತಿ ಸುಳ್ಳೇ..!! ಅವನು ತನಗೆ ಮೋಸ ಮಾಡಿದನೇ..!! ಹೀಗೆ ಸಾವಿರ ಪ್ರಶ್ನೆಗಳು. ಏಕಾಂಶನಿಗೆ ಏನಾದರೂ ಅನಿವಾರ್ಯತೆ ಇದ್ದಿರಬಹುದಲ್ಲವೇ. ಅದಿಕ್ಕೇ ಹೀಗೆ ಮಾಡಿರಬಹುದಲ್ಲವೇ. ಹೇಳಿಕೊಳ್ಳಲಾಗದಂಥಹ ಅದ್ಯಾವುದೋ ಪರಿಸ್ಥಿತಿಯಲ್ಲಿ ಅವನು ಸಿಲುಕಿರಬಹುದಲ್ಲವೇ. ಆರೋಹಿಯ ಮನಸು ಏಕಾಂಶನ ಪರವಾಗಿಯೇ ವಾದಿಸುತ್ತಿತ್ತು. ಸತ್ಯದ, ವಾಸ್ತವಿಕತೆಯ ಕಡೆಗೆ ಮುಖ ಮಾಡಲು ಅವಳ ಮನಸೇಕೋ ಸಿದ್ಧವಿರಲಿಲ್ಲ.
" ಸಮಯ ಸರಿದಿದೆ. ಏಕಾಂಶನ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸರಿಯಾಗಿ ನಂಬಿಸಿ ಕತ್ತು ಕುಯ್ದ ಏಕಾಂಶ್. ಹೀಗೆ ಮದುವೆಯಾಗುವೆನೆಂದು ನಂಬಿಸಿ ಮೋಸ ಮಾಡುವವರು ಎಷ್ಟು ಜನ ಇದ್ದಾರೆ. ಏಕಾಂಶ್ ಕೂಡ ಅವರಲ್ಲಿ ಒಬ್ಬ. ಇದೇ ಸತ್ಯ ಆರೋಹಿ " ಎಂದು ಅನುರಾಗ್ ಸಾಕಷ್ಟು ಸಲ ಹೇಳಿದ್ದ. ವೈಷ್ಣವಿಯೂ ಎಷ್ಟೋ ಬುದ್ಧಿ ಹೇಳಿದ್ದಳು. ಅವರ ಮಾತು ಕೇಳುವಾಗ ಆರೋಹಿಗೆ ನಿಜವೆನ್ನಿಸಿದರೂ, ಅದನ್ನು ಒಪ್ಪಿಕೊಳ್ಳಲೇಕೋ ಅವಳಿಗೆ ಆಗಿರಲಿಲ್ಲ. ತಂಗಿಯ ಜೀವನ ಹೀಗೆ ಹಾಳಾಗಬಾರದೆಂದು, ಬೇರೆ ಸಂಬಂಧವನ್ನು ಹುಡುಕುವ ಪ್ರಯತ್ನದಲ್ಲಿದ್ದ ಅನುರಾಗ್. ಯಾವ ಸಂಬಂಧ ತೋರಿಸಿದರೂ ಆರೋಹಿ ಒಪ್ಪುತ್ತಿರಲಿಲ್ಲ. ಮದುವೆವರೆಗೆ ಬಂದು ನಿಂತು ಹೋದ ಪ್ರೀತಿಯ ಗುಂಗಲ್ಲೇ ಕಾಲ ದೂಡುತ್ತಿದ್ದಳು. ಹೆಚ್ಚು ಬಲವಂತ ಮಾಡಲು ಅನುರಾಗ್, ವೈಷ್ಣವಿಗೂ ಇಷ್ಟವಿರಲಿಲ್ಲ. ಇಷ್ಟೆಲ್ಲ ಆದರೂ ಆರೋಹಿಯ ಮನಸಲ್ಲೇನೋ ಒಂದು ನಂಬಿಕೆ. ತನ್ನ ಪ್ರೀತಿಯ ಮೇಲಿದ್ದ ನಂಬಿಕೆ. ಏಕಾಂಶ್ ಮೇಲಿದ್ದ ನಂಬಿಕೆ. ಏಕಾಂಶ್ ಎಂದೂ ಸಭ್ಯತೆ ಮೀರಿ ತನ್ನೊಂದಿಗೆ ನಡೆದುಕೊಂಡಿರಲಿಲ್ಲ. ಇನ್ನು ನಮಗೆ ಹಣದ ವಿಷಯದಲ್ಲೂ ಯಾವ ರೀತಿಯ ಮೋಸವನ್ನೂ ಮಾಡಲಿಲ್ಲ. ತಂದೆ ತಾಯಿ ಒಪ್ಪದಿದ್ದರೂ ನಾ ನಿನ್ನನ್ನೇ ಮದುವೆಯಾಗುತ್ತೇನೆ, ನಿನ್ನ ಕೈ ಬಿಡುವುದಿಲ್ಲವೆಂದು ಯಾವಾಗಲೂ ಹೇಳುತ್ತಿದ್ದ . ಹಾಗಿರುವಾಗ ಹೀಗೆ ದೂರಾಗಬೇಕೆಂದರೆ ಯಾವುದೋ ಅನಿವಾರ್ಯವಾದ ಕಾರಣ ಇರಲೇ ಬೇಕಲ್ಲವೆ.. ಆರೋಹಿಯ ಮನಸು ಏಕಾಂಶ್ ಒಳ್ಳೆಯವನು ಎಂದೇ ವಾದಿಸುತ್ತಿತ್ತು. ಇಂದಲ್ಲ ನಾಳೆ ಏಕಾಂಶ್ ಬರಬಹುದಲ್ಲವೇ ಎನ್ನುವ ಸಣ್ಣ ಆಸೆ ಆರೋಹಿಯ ಮನದ ಮರೆಯಲ್ಲಿತ್ತು. ಆರೋಹಿಯೂ ಅದೇ ನಂಬಿಕೆಯಲ್ಲಿದ್ದಳು.
ವಿಧಿ ಎಷ್ಟೋ ಸಲ ಜೀವನದಲ್ಲಿ ವಿಚಿತ್ರವಾಗಿ ಆಟವಾಡುವುದು. ಅಂದು ತನ್ನ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸೆಮಿನಾರಿಗೆಂದು ಮಂಗಳೂರಿಗೆ ಹೋಗಿದ್ದ ಆರೋಹಿಯ ಮುಂದೆ ಅದೇ ವಿಧಿ ಮತ್ತೆ ಏಕಾಂಶನನ್ನು ತಂದು ನಿಲ್ಲಿಸಿತ್ತು. ಐದು ವರ್ಷಗಳ ನಂತರ ಏಕಾಂಶನನ್ನು ನೋಡಿದ್ದಳು ಆರೋಹಿ. ಮಂಗಳೂರಿನ ಮೇಳದಲ್ಲಿ. ಅಷ್ಟು ವರ್ಷಗಳ ನಂತರ ಏಕಾಂಶನನ್ನು ನೋಡಿದ ಆರೋಹಿಗೆ ಮಾತುಗಳೇ ಹೊರಡಲಿಲ್ಲ. ಬಿಟ್ಟ ಕಣ್ಣುಗಳನ್ನು ಬಿಟ್ಟಂತೆಯೇ ನೋಡುತ್ತ ನಿಂತು ಬಿಟ್ಟಳು. ಅಲ್ಲಿ ನೆರೆದಿದ್ದ ಜನಜಂಗುಳಿಯ ನಡುವೆ ಏನೆಂದು ಮಾತನಾಡುವುದು. ಏನನ್ನೂ ಹೇಳುವ, ಕೇಳುವಂಥಹ ಸ್ಥಳವಾಗಿರಲಿಲ್ಲವದು. ಆದರೂ ಆರೋಹಿ ಏಕಾಂಶನಲ್ಲಿ ಏನೋ ಮಾತನಾಡಬೇಕೆಂದು ಮುಂದಾದಾಗ, ಒಂದು ಚೀಟಿಯಲ್ಲಿ ಫೋನ್ ನಂಬರ್ ಜೊತೆ ಕಾಲ್ ಮೀ ಎಂದಷ್ಟೇ ಆರೋಹಿಯ ಕೈಯಲ್ಲಿಟ್ಟು ಅಲ್ಲಿಂದ ಹೊರಟಿದ್ದ ಏಕಾಂಶ್. ಲಾಡ್ಜಿನಲ್ಲಿರುವ ತನ್ನ ರೂಮಿಗೆ ಬರುತ್ತಲೇ ಏಕಾಂಶ್ ಕೊಟ್ಟ ನಂಬರಿಗೆ ಕಾಲ್ ಮಾಡಿದ್ದಳು ಆರೋಹಿ.
" ಹಲೋ " ಎಂದು ಆ ಕಡೆಯಿಂದ ಕೇಳಿದ ದನಿಯಿಂದಲೇ ಆರೋಹಿಯ ತನು ಮನ ಕಂಪಿಸಿತ್ತು. ಸತತ ಐದು ವರ್ಷಗಳ ನಂತರ ಏಕಾಂಶನ ದನಿ ಕೇಳಿದ್ದಳು ಆರೋಹಿ. ಮಾತನಾಡಬೇಕೆಂದರೆ ಆರೋಹಿಯ ಗಂಟಲೇಕೋ ಕಟ್ಟಿಕೊಂಡಂತೆನ್ನಿಸಿತ್ತು.
ಆ ಕಡೆಯಿಂದ ಯಾವ ಮಾತೂ ಬಾರದಿದ್ದದ್ದನ್ನು ನೋಡಿ,
" ಆರೋಹಿ ನಾ" ಎಂದು ಮತ್ತೆ ಏಕಾಂಶನೇ ಕೇಳಿದ್ದ.
" ಹಾಂ. ಹೌದು. ಏಕಾಂಶ್ ನಾ ನಿನ್ನನ್ನು ನೋಡಬೇಕು, ಮಾತನಾಡಬೇಕು" ಎಂದಿದ್ದಳು ಆರೋಹಿ.
" ಸಂಜೆ ಸಿಗೋಣ. ತಣ್ಣೀರು ಬಾವಿ ಬೀಚ್ ಹತ್ತಿರ ಬಾ. ಆಟೋದವರಲ್ಲಿ ಹೇಳಿದರೆ ಬಿಡ್ತಾರೆ " ಎಂದಷ್ಟೇ ಹೇಳಿ ಫೋನ್ ಕಟ್ ಮಾಡಿದ್ದ ಏಕಾಂಶ್.
ನಂಬಲೇ ಆಗಿರಲಿಲ್ಲ ಆರೋಹಿಗೆ. ನಿರೀಕ್ಷೆಯೇ ಮಾಡದ ಸ್ಥಳದಲ್ಲಿ, ನಿರೀಕ್ಷೆಯೇ ಮಾಡದ ಸಮಯದಲ್ಲಿ ಏಕಾಂಶನ ಭೇಟಿಯಾಗಿತ್ತು. ಕಳೆದು ಹೋದ ನಿಧಿಯೇ ದೊರಕಿದೆಯೇನೋ ಎಂದೆನ್ನಿಸಿತ್ತು. ಸಂಜೆಯಾಗುವುದನ್ನೇ ಕಾಯುತ್ತಾ ಕೂತಳು. ಏಕಾಂಶ್ ಹೇಳಿದ ಸಮಯಕ್ಕಿಂತ ಮೊದಲೇ, ತಣ್ಣೀರು ಬಾವಿ ಬೀಚಿಗೆ ಹೋಗಿ ಏಕಾಂಶನಿಗಾಗಿ ಕಾಯುತ್ತಿದ್ದಳು. ಹೇಳಿದ ಸಮಯಕ್ಕೆ ಸರಿಯಾಗಿ ಬಂದಿದ್ದ ಏಕಾಂಶ್. ಏಕಾಂಶನಿಗೆ ಇಷ್ಟವಾದ ಕೇಸರಿ ಬಣ್ಣದ ಸೀರೆಯನ್ನೇ ಉಟ್ಟುಕೊಂಡು ಬಂದಿದ್ದಳು ಆರೋಹಿ. ಮುದ್ದಾಗಿ ಕಾಣಿಸುತ್ತಿದ್ದಳು. ಅಂದು ನಿಶ್ಚಿತಾರ್ಥದಲ್ಲಿ ಹಾಕಿದ್ದ ಉಂಗುರವಿನ್ನೂ ಆರೋಹಿಯ ಬೆರಳಲ್ಲಿಯೇ ಇತ್ತು. ಇಷ್ಟು ವರ್ಷಗಳಲ್ಲಿ ಒಂದು ದಿನವೂ ಅದನ್ನು ತೆಗೆದಿಟ್ಟಿರಲಿಲ್ಲ ಆರೋಹಿ. ಆ ಉಂಗುರವನ್ನು ಗಮನಿಸದೇ ಇರಲಿಲ್ಲ ಏಕಾಂಶ್.
" ಆರೋಹಿ, ನೀನು ಮೇಳದಲ್ಲಿ ಸಿಕ್ಕಾಗ ಹೇಗೆ ಪ್ರತಿಕ್ರಿಯಿಸಬೇಕೆಂದೇ ತಿಳಿಯಲಿಲ್ಲ ನನಗೆ. ನೀನು ನನ್ನಲ್ಲಿ ಏನೋ ಮಾತನಾಡಬೇಕೆಂದಿದ್ದೆ. ಆದರೆ ನಾನು ಮಾತನಾಡುವ ಪರಿಸ್ಥಿಯಲ್ಲಿರಲಿಲ್ಲ. ಅದಿಕ್ಕೆ ಇಲ್ಲಿ ಸಿಗುವಂತೆ ತಿಳಿಸಿದೆ. ನಮ್ಮ ಜೀವನದಲ್ಲಿ ನಾವು ಊಹಿಸಲಾಗದಂಥಹ ಎಷ್ಟೋ ವಿಷಯಗಳು ನಡೆದುಹೋಗುತ್ತವೆ. ನನ್ನ ನಿನ್ನ ಭೇಟಿ, ಪ್ರೀತಿ, ಅದಾದ ಮೇಲೆ ದೂರಾಗಿದ್ದವು ಎಲ್ಲವೂ ಹಾಗೆಯೇ. ಅಂದು ಜೈಪುರಕ್ಕೆ ವಾಪಾಸ್ಸಾದ ನಾನು ನಮ್ಮಿಬ್ಬರ ಮದುವೆಯ ಬಗ್ಗೆ ಅಮ್ಮ, ಅಪ್ಪನ ಹತ್ತಿರ ಮಾತನಾಡಬೇಕಂತಲೇ ಇದ್ದೆ. ಆದರೆ ನನ್ನ ತಂದೆ ತಮ್ಮ ಸ್ನೇಹಿತನ ಮಗಳು ರಿಷಿಕಾಳನ್ನೇ ಏಕಾಂಶನಿಗೆ ತಂದುಕೊಳ್ಳುತ್ತೇವೆ ಎಂದು ಅವರ ಸ್ನೇಹಿತನಿಗೆ ಮಾತು ಕೊಟ್ಟುಬಿಟ್ಟಿದ್ದರು. ಆ ಸಂದರ್ಭದಲ್ಲಿ ಆರ್ಥಿಕವಾಗಿಯೂ ನಮ್ಮ ಮನೆಯವರು ಸಾಕಷ್ಟು ಸಂಕಷ್ಟಗಳಲ್ಲಿದ್ದರು. ಅದೆಲ್ಲದರಿಂದ ಹೊರಬರಬೇಕೆಂದರೆ ರಿಷಿಕಾಳನ್ನು ಮದಯವೆಯಾಗುವುದೊಂದೇ ನನಗಿದ್ದ ದಾರಿಯಾಗಿತ್ತು. ನಿನ್ನ ಬಳಿ ಏನನ್ನೂ ಹೇಳುವ ಧೈರ್ಯವೇಕೋ ನನಗೆ ಆಗ ಬರಲೇ ಇಲ್ಲ. ಹಾಗಾಗಿಯೇ ಪಲಾಯನವಾದಿಯಾಗಿಬಿಟ್ಟೆ. ಯಾವ ಸುಳಿವೂ ಕೊಡದೆ ನಿನ್ನಿಂದ ದೂರಾದೆ. ಮದುವೆಯಾದ ಮೇಲೆ ನಾನು ರಿಷಿಕಾ ನಾಲ್ಕು ವರ್ಷ ವಿದೇಶದಲ್ಲಿ ನೆಲೆಸಿದ್ದೆವು. ಈಗ ಬೆಂಗಳೂರಿಗೆ ಬಂದಿದ್ದೇವೆ. ಫ್ಯಾಮಿಲಿ ಟ್ರಿಪ್ ಎಂದು ಇಲ್ಲಿಗೆ ಬಂದಾಗ ಅಚಾನಕವಾಗಿ ನಿನ್ನ ಭೇಟಿಯಾಯಿತು. ನನ್ನ ಮಡದಿ ರಿಷಿಕಾ ತುಂಬಾ ಪೊಸೆಸಿವ್. ಅವಳಿಗೆ ನನ್ನ ಜೀವನದಲ್ಲಿ ಹೀಗೊಂದು ಘಟನೆ ನಡೆದಿದೆಯೆಂದು ತಿಳಿದರೆ ಹೇಗೆ ಪ್ರತಿಕ್ರಿಯಿಸುವಳೋ ಗೊತ್ತಿಲ್ಲ. ಭೂಮಿ ತುಂಬಾ ಚಿಕ್ಕದಾಗಿದೆ. ಇನ್ನು ಜೀವನದಲ್ಲಿ ಮುಂದೆಂದಾದರೂ ನಮ್ಮಿಬ್ಬರ ಭೇಟಿ ಮತ್ತೆಯಾದರೆ ಅಪರಿಚಿತರಂತೆಯೇ ಇದ್ದು ಬಿಡೋಣ. ನಮ್ಮಿಬ್ಬರ ದಾರಿ ಎಂದೋ ಕವಲೊಡೆದಾಗಿದೆ. ಅದೆಂದಿಗೂ ಮತ್ತೆ ಸೇರಲಾರದು. ದಯವಿಟ್ಟು ನನ್ನ ಜೀವನದಲ್ಲಿ ಮತ್ತೆಂದಿಗೂ ಪ್ರವೇಶಿಸುವ ಪ್ರಯತ್ನ ಮಾಡಬೇಡ ಆರೋಹಿ. ಸಾಧ್ಯವಾದರೆ ನನ್ನೆಲ್ಲ ತಪ್ಪುಗಳನ್ನು ಕ್ಷಮಿಸು. ರಿಷಿಕಾ ನನಗಾಗಿ ಕಾಯುತ್ತಿರುವಳು. ನಾನಿನ್ನು ಬರುತ್ತೇನೆ " ಎಂದು ಆರೋಹಿಗೆ ವಿದಾಯ ಹೇಳಿ ನಡೆದಿದ್ದ ಏಕಾಂಶ್.
ಆರೋಹಿ ನೀನು ಹೇಗಿರುವೆ.. ನಿನ್ನ ಜೀವನ ಹೇಗಿದೆ. ನಾನು ನಿನ್ನನ್ನು ಬಿಟ್ಟು ಹೋದ ಮೇಲೆ ನಿನ್ನ ಪರಿಸ್ಥಿತಿಯೇನಾಯಿತು. ನನ್ನನ್ನು ಮರೆತೆಯಾ..!! ನಿನ್ನ ಜೀವನದಲ್ಲಿ ಮುಂದುವರೆದೆಯಾ..?? ಯಾವ ಪ್ರಶ್ನೆಯೂ ಇರಲಿಲ್ಲ. ಏಕಾಂಶನ ಮಾತಲ್ಲಿದ್ದದ್ದು ಕೇವಲ ' ನಾನು '. ನನಗೆ ಪರಿಸ್ಥಿತಿಯ ಒತ್ತಡವಿತ್ತು. ಹಾಗಾಗಿ ರಿಷಿಕಾಳನ್ನು ಮದುವೆಯಾದೆ. ನನ್ನ ಜೀವನದ ಹಾದಿಯೀಗ ಬೇರಾಗಿದೆ. ನೀನು ಮತ್ತೆ ಬಂದು ನನ್ನ ವೈವಾಹಿಕ ಜೀವನದಲ್ಲಿ ಕೋಲಾಹಲವೆಬ್ಬಿಸಬೇಡ. ಹೀಗೇ. ಬರೀ ' ನಾನು ' ಮಾತ್ರ. ಪ್ರೀತಿಯೆನ್ನುವ ಮಾಯೆ ಕಟ್ಟಿದ್ದ ಆ ಪಟ್ಟಿ ಅಂದು ಕಳಚಿಬಿದ್ದಿತ್ತು. ಸ್ವಾರ್ಥದ ಪರಿಚಯವಾಗಿತ್ತು. ವಾಸ್ತವಿಕತೆಯ ಪರಿಚಯವಾಗಿತ್ತು. ಆರೋಹಿಯ ನೆಚ್ಚಿನ ಕಥೆಯಲ್ಲಿ ದುಷ್ಯಂತ ಎಲ್ಲವನ್ನೂ ಮರೆತಿದ್ದ. ಹಾಗಾಗಿ ಅವನಿಗೆ ನೆನಪು ಮರುಕಳಿಸಿತು. ಆದರೆ ನಿಜ ಜೀವನದಲ್ಲಿ ಏಕಾಂಶ್ ಯಾವುದನ್ನೂ ಮರೆತಿರಲಿಲ್ಲ. ಕೇವಲ ಮರೆತಂತೆ ನಟಿಸಿದ್ದ. ಮರೆತವರಿಗೆ ನೆನಪಿಸಬಹುದು. ಆದರೆ ಮರೆತಂತೆ ನಟಿಸಿದವರಿಗೆ ನೆನಪಿಸಲು ಸಾಧ್ಯವೇ..!! ಆರೋಹಿಯ ಕಣ್ಣುಗಳು ತುಂಬಿದರೂ ಮನಸ್ಸೇಕೋ ಹಗುರವೆನ್ನಿಸಿತ್ತು. ಅಪಾತ್ರರಿಗೆ ನೀಡುವ ಪ್ರೀತಿ, ಅಪಾತ್ರರ ಮೇಲೆ ಇಡುವ ನಂಬಿಕೆ ಎಲ್ಲವೂ ನೀರಲ್ಲಿ ಹೋಮ ಮಾಡಿದಂತೆ ಎನ್ನುವುದು ಅರಿವಾಗಿತ್ತು. ತನ್ನ ಬೆರಳಲ್ಲಿದ್ದ ಉಂಗುರವನ್ನು ತೆಗೆದು ಕಡಲ ಒಡಲೊಳಗೆ ಎಸೆದುಬಿಟ್ಟಳು. ಅದರೊಂದಿಗೆ ಹಳೆಯ ನೆನಪುಗಳ ಮೂಟೆಯನ್ನೂ ಕೂಡ.

