ಕದಡಿದ_ಬಣ್ಣಗಳು
ಕದಡಿದ_ಬಣ್ಣಗಳು
" ನಾಳೆ ನನ್ನ ಫ್ರೆಂಡ್ ಮೃದುಲ ಮನೆಗೆ ಬರ್ತಾ ಇದ್ದಾಳೆ. ಒಂದಷ್ಟು ದಿನಗಳು ನಮ್ಮ ಮನೆಯಲ್ಲೇ ಇರ್ತಾಳೆ. ನೀವು ನಿಮ್ಮ ಲಿಮಿಟ್ಸ್ ಅಲ್ಲಿಯೇ ಇರಿ. ಅವಳೊಂದಿಗೆ ಅತಿಯಾಗಿ ಮಾತನಾಡುವ ಅವಶ್ಯಕತೆಯಿಲ್ಲ. " ಎಂದು ನಿಹಾರಿಕಾ ತನ್ನ ಪತಿ ಅನಿಕೇತನಿಗೆ ಹೇಳಿದಳು. ಅವಳ ಮಾತು ಆಜ್ಞಾಕಾರಿಯಂತಿತ್ತು.
" ಸರಿ " ಎಂದಷ್ಟೇ ಉತ್ತರಿಸಿದ ಅನಿಕೇತ್. ನಿಹಾರಿಕಾ ತನ್ನ ಬ್ಯಾಗನ್ನು ತೆಗೆದುಕೊಂಡು ಹಾಸ್ಪಿಟಲ್ ಕಡೆ ಹೊರಟಳು. ಹೆಂಡತಿಯ ಈ ವರ್ತನೆ ಅವನಿಗೇನೂ ಹೊಸತಾಗಿರಲಿಲ್ಲ.
ನಿಹಾರಿಕಾ ನಡೆದುಕೊಳ್ಳುತ್ತಿದ್ದದ್ದೇ ಹಾಗೆ.
ಪತಿಯ ಮೇಲೇ ಯಾವುದೇ ರೀತಿಯ ಪ್ರೀತಿ, ಕಾಳಜಿ, ಗೌರವ ಇದ್ಯಾವುದೂ ಇಲ್ಲವೇನೋ ಅನ್ನಿಸುವ ಹಾಗೆ.
ನಿಹಾರಿಕಾ ಎಂ.ಬಿ.ಬಿ.ಎಸ್, ಎಮ್.ಎಸ್ ಮಾಡಿ ಡಾಕ್ಟರ್ ಆಗಿದ್ದಳು. ಪ್ರತಿಷ್ಠಿತ ಹಾಸ್ಪಿಟಲ್ಲೊಂದರಲ್ಲಿ ಸರ್ಜನ್ ಆಗಿ ಸೇವೆ ಸಲ್ಲಿಸುತ್ತಿದ್ದಳು. ಹೆಸರು, ಹಣ, ಅಂತಸ್ತು ಎಲ್ಲವೂ ಇತ್ತು. ಆದರೆ ಅವಳ ವೈವಾಹಿಕ ಜೀವನ ಮಾತ್ರ ಅವಳು ಬಯಸಿದಂತೆ ಇರಲಿಲ್ಲ. ಮನೆಯಲ್ಲಿ ತಂದೆ ತಾಯಿ ನೋಡಿ ನಿಹಾರಿಕಾಳಿಗೆ ಮದುವೆ ಮಾಡಿದ ಹುಡುಗನೇ ಅನಿಕೇತ್. ಬ್ಯುಸಿನೆಸ್ ಮೆನ್ ಆಗಿದ್ದ. ಒಳ್ಳೆಯ ಚಿತ್ರಕಾರ ಕೂಡ. ಆದರೆ ಮದುವೆಯಾಗಿ ಕೆಲವೇ ಸಮಯದಲ್ಲಿ ಅವನ ಬ್ಯುಸಿನೆಸ್ ಸಂಪೂರ್ಣವಾಗಿ ಲಾಸ್ ಆಗಿತ್ತು. ಅದಾದ ಮೇಲೆ ಹಿಡಿದ ಯಾವ ಕೆಲಸವೂ ಸರಿಯಾಗಿ ಕೈಹತ್ತಿರಲಿಲ್ಲ. ಲಾಸ್ ಮೇಲೆ ಲಾಸ್ ಆಗುತ್ತಲೇ ಹೋಯಿತು. ಕೊನೆಗೆ ಜೀವನೋಪಾಯಕ್ಕೋಸ್ಕರ ಆರ್ಟ್ ಟೀಚರ್ ಆಗಿ ಒಂದು ಆರ್ಟ್ ಸ್ಕೂಲಿನಲ್ಲಿ ಕೆಲಸ ಮಾಡಿಕೊಂಡಿದ್ದ. ಅನಿಕೇತ್ ತನಗೆ ಸರಿ ಹೊಂದುವ ಜೊತೆಯಲ್ಲ ಎಂದು ನಿಹಾರಿಕಾಳಿಗೆ ಗಾಢವಾಗಿ ಅನ್ನಿಸುತ್ತಿತ್ತು. ತಾನು ಫೇಮಸ್ ಡಾಕ್ಟರ್. ಸಮಾಜದಲ್ಲಿ ಒಂದು ಸ್ಥಾನ ಇರುವವಳು. ಆದರೆ ಅನಿಕೇತ್...!! ಜೀವನದಲ್ಲಿ ಒಂದು ಕಂಪ್ಲೀಟ್ ಫೈಲ್ಯೂರ್, ಎನ್ನುವುದು ನಿಹಾರಿಕಾಳ ಅಭಿಪ್ರಾಯವಾಗಿತ್ತು. ತನ್ನ ಹೈ ಸೊಸೈಟಿಯ ಸ್ನೇಹಿತರ ಮುಂದೆ ಅನಿಕೇತನನ್ನು ಪರಿಚಯಿಸಲೂ ನಿಹಾರಿಕಾಳಿಗೆ ಒಂದು ರೀತಿಯ ಮುಜುಗರವೆನ್ನಿಸುತ್ತಿತ್ತು. ಹಾಗಾಗಿ ಅನಿಕೇತನೊಡನೆ ಯಾವಾಗಲೂ ಒಂದು ರೀತಿಯ ಸಿಡುಕು, ಸಿಟ್ಟಿನಿಂದಲೇ ಮಾತನಾಡುತ್ತಿದ್ದಳು. ಆದರೆ ಅನಿಕೇತನದ್ದು ಬಹಳ ಶಾಂತ ಸ್ವಭಾವ. ಸಹನೆ, ಸರಳತೆ, ಸೌಜನ್ಯ ಎಲ್ಲವೂ ತುಂಬಿರುವ ವ್ಯಕ್ತಿತ್ವ. ಪ್ರತಿ ಬಾರಿಯೂ ತಾನೇ ಸೋಲುತ್ತಿದ್ದ. ನಿಹಾರಿಕಾಳೊಂದಿಗೆ ಅನುಸರಿಸಿಕೊಂಡು ಹೋಗುತ್ತಿದ್ದ. ಆದರೂ ಹೆಂಡತಿಯ ಈ ವರ್ತನೆ ಎಷ್ಟೋ ಸಲ ಅನಿಕೇತನಿಗೂ ನೋವು ತರಿಸುತ್ತಿತ್ತು. ಹೀಗೆ ನಿಹಾರಿಕಾ ಹಾಗೂ ಅನಿಕೇತನ ಸಂಸಾರದ ಕೊಂಡಿ ಬಿಗಿಯಾಗಿಯೂ ಇರದೆ, ಕಳಚಿಯೂಕೊಳ್ಳದೆ ಹೌದೋ ಇಲ್ಲವೋ ಎನ್ನುವಂತೆ ಬೆಸೆದುಕೊಂಡಿತ್ತು.
ಮರುದಿನ ಮುಂಜಾನೆ ಸುಮಾರು ಏಳು ಗಂಟೆಯ ಸಮಯಕ್ಕೆ ಕಾಲಿಂಗ್ ಬೆಲ್ ರಿಂಗಣಿಸಿತು. ಅನಿಕೇತ್ ಹೋಗಿ ಬಾಗಿಲು ತೆರೆದ. ಹಾಕಿಕೊಂಡಿದ್ದ ಏಪ್ರಾನ್, ಕೈಯಲ್ಲಿದ್ದ ಸೌಟು, ಮುಖದ ಮೇಲೆ ಮೆತ್ತಿದ್ದ ದೋಸೆ ಹಿಟ್ಟು ಇವೆಲ್ಲವನ್ನೂ ನೋಡಿ ಬಾಗಿಲಲ್ಲಿ ನಿಂತಿದ್ದವಳು ಹೇಗೆ ಪ್ರತಿಕ್ರಯಿಸಬೇಕೆಂದು ತಿಳಿಯದೆ ಹಾಗೇ ನಿಂತು ಬಿಟ್ಟಳು.
" ಹಾಯ್, ನಾನು ಅನಿಕೇತ್. ನೀವು ಮೃದುಲಾ ರೈಟ್ " ಎಂದು ಅನಿಕೇತನೇ ತನ್ನನ್ನು ತಾನು ಪರಿಚಯಿಸಿಕೊಂಡನು.
" ಹಾಯ್ " ಎಂದಷ್ಟೇ ನುಡಿದಳು ಮೃದುಲಾ.
" ಬನ್ನಿ ಒಳಗೆ " ಎಂದು ಸ್ವಾಗತಿಸಿದ ಅನಿಕೇತ್.
ಮೃದುಲಾ ತನ್ನ ಲಗ್ಗೇಜಿನೊಂದಿಗೆ ಮನೆಯೊಳಗೆ ನಡೆದಳು.
" ಕೂತ್ಕೊಳ್ಳಿ, ಬಾಯಾರಿಕೆಗೆ ನೀರು..? ಇಲ್ಲ ಕಾಫಿ, ಟೀ ಏನಾದರು "
" ಇಲ್ಲ, ಏನೂ ಬೇಡ "
" ಸರಿ ಹಾಗಾದರೆ ನೀವು ಮೊದಲು ಫ್ರೆಶ್ ಆಗಿ. ಬನ್ನಿ ಗೆಸ್ಟ್ ರೂಮ್ ತೋರಿಸುತ್ತೇನೆ " ಎಂದು ಗೆಸ್ಟ್ ರೂಮ್ ಕಡೆ ಹೆಜ್ಜೆ ಹಾಕಿದ ಅನಿಕೇತ್. ಮೃದುಲಾ ಅವನನ್ನೇ ಹಿಂಬಾಲಿಸಿದಳು.
ಸುಮಾರು ಒಂಭತ್ತು ಗಂಟೆಯ ಸಮಯಕ್ಕೆ ನಿಹಾರಿಕಾ ಎದ್ದು ಬಂದಳು. ಹಾಲಲ್ಲಿ ಕೂತಿದ್ದ ಮೃದುಲಾ " ಹಾಯ್, ನಿಹಾ... ಎಷ್ಟು ವರ್ಷಗಳಾಯಿತು ನಿನ್ನ ನೋಡಿ " ಎಂದು ಪ್ರೀತಿಯಿಂದ ನಿಹಾರಿಕಾಳನ್ನು ತಬ್ಬಿಕೊಂಡಳು.
" ಹಾಯ್ ಮೃದುಲಾ " ಎಂದು ಅಷ್ಟೇ ಪ್ರೀತಿಯಿಂದ ಪ್ರತಿಕಿಯಿಸಿದಳು ನಿಹಾರಿಕಾ. ಎಷ್ಟೋ ವರ್ಷಗಳ ನಂತರ ಭೇಟಿಯಾಗಿದ್ದರು ಇಬ್ಬರು ಸ್ನೇಹಿತೆಯರು. ಅಂದು ರಜಾ ದಿನವಾಗಿದ್ದರಿಂದ, ನಿಹಾರಿಕಾಳೂ ಫ್ರೀಯಾಗಿದ್ದಳು. ಗೆಳತಿಯರ ಮಾತುಕತೆ ಮನಬಿಚ್ಚಿ ನಡೆದಿತ್ತು. ಮೃದುಲಾ ನಿಹಾರಿಕಾಳ ಬಾಲ್ಯ ಸ್ನೇಹಿತೆ. ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಳು. ವಿದೇಶದಲ್ಲಿ ನೆಲೆಸಿದ್ದಳು.
ಒಂದು ಮುಖ್ಯವಾದ ಕೆಲಸಕ್ಕೋಸ್ಕರ ಭಾರತಕ್ಕೆ ಬಂದಿದ್ದಳು. ಕೆಲವು ಸಮಯ ನಿಹಾರಿಕಾಳ ಮನೆಯಲ್ಲಿ ನೆಲೆಸುವವಳಿದ್ದಳು.
ಅಂದು ಇಡೀ ದಿನ, ನಿಹಾರಿಕಾ ಹಾಗು ಮೃದುಲಾಳ ಹರಟೆ ನಡೆದಿತ್ತು. ತಮ್ಮ ಜೀವನದ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದರು.
ಮರುದಿನ ನಿಹಾರಿಕಾ ಎಂದಿನಂತೆ ಬೆಳಿಗ್ಗೆ ಬೇಗನೆ ಹಾಸ್ಪಿಟಲ್ಲಿಗೆ ಹೊರಟಳು. ಅನಿಕೇತನೂ ತನ್ನ ಆರ್ಟ್ ಸ್ಕೂಲಿಗೆ ಹೊರಟಿದ್ದ. ಅವನು ಹೋಗುವ ದಾರಿಯಲ್ಲೇ ಮೃದುಲಾಳಿಗೂ ಏನೋ ಕೆಲಸವಿದ್ದ ಕಾರಣ ಅವನೇ ಅವಳನ್ನು ಡ್ರಾಪ್ ಮಾಡಿದ್ದ. ಮೃದುಲಾ ತನಗೆ ಬೆಂಗಳೂರಲ್ಲಿದ್ದ ಸೈಟೊಂದನ್ನು ಮಾರುವುದರಲ್ಲಿದ್ದಳು. ಅದಕ್ಕಾಗಿಯೇ ಓಡಾಟವನ್ನು ನಡೆಸಿದ್ದಳು. ಅನಿಕೇತನಿಗೆ ರಿಯಲ್ ಎಸ್ಟೇಟ್ ಬಗ್ಗೆ ಒಳ್ಳೆಯ ಅನುಭವವಿದ್ದ ಕಾರಣ ಅವನು ಮೃದುಲಾಳಿಗೆ ನೆರವಾಗಿದ್ದ. ಹಾಗಾಗಿ ಇಬ್ಬರ ಓಡಾಟ, ಒಡನಾಟ ಎಲ್ಲವೂ ಬೆಳೆದಿತ್ತು. ಕಡಿಮೆ ಸಮಯದಲ್ಲೇ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ನಿಹಾರಿಕಾ ಹಾಗೂ ಅನಿಕೇತನ ನಡುವೆ ಏನೋ ಸರಿ ಇಲ್ಲ ಎಂದು ಮೃದುಲಾಳಿಗೆ ಅನ್ನಿಸುತ್ತಲೇ ಇತ್ತು. ಅನಿಕೇತನ ಬಳಿ ಇದರ ಬಗ್ಗೆ ಕೇಳಲು ಮೃದುಲಾಳಿಗೇಕೋ ಮುಜುಗರವೆನ್ನಿಸಿತ್ತು. ಹಾಗಾಗಿ ಒಂದು ಸಂಜೆ ನಿಹಾರಿಕಾ ಫ್ರೀ ಇದ್ದಾಗ ಅವಳ ಬಳಿಯೇ ನೇರವಾಗಿ ಕೇಳಿದ್ದಳು.
" ನಿಜ ಮೃದುಲಾ. ನಮ್ಮಿಬ್ಬರ ದಾಂಪತ್ಯ ಸರಿಯಾಗಿಲ್ಲ. ಸಾಕಷ್ಟು ಭಿನ್ನಾಭಿಪ್ರಾಯಗಳಿವೆ. ಅನಿಕೇತ್ ನನಗೆ ಯಾವ ರೀತಿಯಲ್ಲೂ ಸರಿ ಹೊಂದುವ ಸಂಗಾತಿಯಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲವಾಗಲೀ, ಧ್ಯೇಯವಾಗಲೀ ಅವರಲ್ಲಿ ಇಲ್ಲ. ಅದ್ಯಾವುದೋ ಆರ್ಟ್ ಸ್ಕೂಲಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಅದರಿಂದ ಅವರು ಆರಕ್ಕೇರುವುದೂ ಇಲ್ಲ, ಮೂರಕ್ಕೆ ಇಳಿಯುವುದೂ ಇಲ್ಲ. ಇಂಥವರನ್ನು ಕಟ್ಟಿಕೊಂಡು ಹೇಗೆ ಸುಖವಾಗಿರಲು ಸಾಧ್ಯ ಹೇಳು. ಅಪ್ಪ ಅಮ್ಮ ಮೆಚ್ಚಿ ಮಾಡಿದ ಮದುವೆ ಇದು. ಅವರ ನಿರ್ಧಾರ ನನ್ನ ಕೊರಳಿಗೆ ಕಂಟಕವಾಯಿತು. ಎಲ್ಲ ನನ್ನ ಹಣೆಬರಹ " ಎಂದಳು ನಿಹಾರಿಕಾ. ಅವಳ ಮಾತುಗಳಲ್ಲಿ ಗಂಡನ ಬಗ್ಗೆ ಇದ್ದ ಅಸಡ್ಡೆ, ಜಿಗುಪ್ಸೆ ಎದ್ದು ಕಾಣುತ್ತಿತ್ತು. ಮೃದುಲಾ ಏನೂ ಮಾತನಾಡದೆ ಮೌನವಾದಳು.
ಜೀವನವೆಂದರೆ ಹಾಗೆಯೇ ಅಲ್ಲವೆ. ನಮ್ಮ ಹತ್ತಿರ ಏನಿದೆಯೋ ಅದರ ಬೆಲೆ ನಮಗೆ ತಿಳಿದಿರುವುದಿಲ್ಲ. ನಿಹಾರಿಕಾಳ ಮಾತು ಕೇಳಿ ಮೃದುಲಾಳಿಗೂ ಹಾಗೇ ಅನ್ನಿಸಿತು. ತನ್ನ ದಾಂಪತ್ಯದಲ್ಲಿ ತಾನುಂಡ ಕಹಿ ನೆನಪಾಯಿತು. ಮೃದುಲಾಳ ಪತಿ ಆರ್ಯನ್. ಸಕ್ಸಸ್ ಫುಲ್ ಬಿಸಿನೆಸ್ ಮೆನ್ ಆಗಿದ್ದ. ಹಣ, ಬಂಗಲೆ, ಆಸ್ತಿ ಎಲ್ಲವೂ ಇತ್ತು. ಆದರೆ ನೆಮ್ಮದಿ..!! ಯಾವಾಗಲೂ ಹೆಂಡತಿಯೆಂದರೆ ಗುಲಾಮಳು ಎನ್ನುವ ಭಾವ. ಚಿಕ್ಕ ಪುಟ್ಟ ವಿಷಯಗಳಿಗೂ ಅನುಮಾನ ಪಡುವುದು. ಬೈಗುಳ. ಕೂಗಾಟ. ಹೀಗೆ ಒಂದೆರೆಡಲ್ಲ. ಆರ್ಯನ್ ಜೊತೆಗೆ ಬದುಕುವುದೇ ಅಸಾಧ್ಯವಾಗಿ ಹೋಗಿತ್ತು ಮೃದುಲಾಳಿಗೆ. ಸಂಸಾರ ನರಕದಂತಾಗಿತ್ತು. ಕೊನೆಗೆ ಬೇರೆ ದಾರಿಯೇ ಇಲ್ಲದೆ ವಿಚ್ಛೇದನ ಪಡೆದಿದ್ದಳು ಮೃದುಲಾ. ಆದರೆ ಇಲ್ಲಿ. ಅನಿಕೇತನಂತಹ ಒಳ್ಳೆಯ ವ್ಯಕ್ತಿಯೊಂದಿಗೆ ಬದುಕುವುದು ಕಷ್ಟ ಎನ್ನುತ್ತಿರುವ ಗೆಳತಿ ನಿಹಾರಿಕಾಳ ಮಾತು ಮೃದುಲಾಳಿಗೆ ಅಚ್ಚರಿ ತರಿಸಿತ್ತು. ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ ಎಂದುಕೊಂಡು ವಿಷಾದ ನಗು ಬೀರಿ ತನ್ನ ಹಳೆಯ ಯೋಚನೆಗಳಿಗೆ ಕಡಿವಾಣ ಹಾಕಿದ್ದಳು ಮೃದುಲ.
ಅಂದು ಸಂಜೆ ಅನಿಕೇತ್ ತನ್ನ ಕ್ಯಾನ್ವಾಸಿನಲ್ಲಿ ಏನೋ ಬಿಡಿಸುತ್ತಿದ್ದ.
" ಏನಿದು.. ಏನು ಬಿಡಿಸ್ತಾ ಇದ್ದೀರ " ಕೇಳಿದಳು ಮೃದುಲ.
" ಭಾವನೆಗಳನ್ನು. ಗಂಡಿನ ಭಾವನೆಗಳನ್ನು ಬಣ್ಣಗಳಲ್ಲಿ ಸೆರೆ ಹಿಡಿಯುವ ಪ್ರಯತ್ನ " ಎಂದು ನುಡಿದ ಅನಿಕೇತ್.
" ಗಂಡಿನ ಭಾವನೆಗಳೇ.. ಇಂಟ್ರಸ್ಟಿಂಗ್ " ಎಂದು ಅಚ್ಚರಿಯಿಂದ ನುಡಿದಳು.
" ಹಾಂ. ಹೌದು. ಯಾಕೆ. ಗಂಡಿಗೆ ಭಾವನೆಗಳಿರುವುದಿಲ್ಲವೇ. "
" ಹಾಗಲ್ಲ.. ಅದೂ.. ಹಾಗೆ ಸುಮ್ನೆ ಹೇಳ್ದೆ. ಹೆಣ್ಣಿನ ನೋವು, ದುಃಖ, ಚಂಚಲತೆ, ಹೀಗೆ ಅವಳ ಎಷ್ಟೋ ಇಮೋಶನ್ಸ್ಗಳನ್ನು ಕುರಿತು ಬಿಡಿಸಿರುವ ಪೈಂಟಿಗ್ ಗಳನ್ನು ಸಾಕಷ್ಟು ನೋಡಿದ್ದೇನೆ. ಇದು ಹೊಸತು "
" ಐ ನೋ. ಮೆನ್ ಆರ್ ಸಪೋಸ್ಡ ಟು ಬಿ ಸ್ಟ್ರಾಂಗ್ ಅಲ್ವ. ನಿರ್ಭಾವುಕನಂತಿರಬೇಕು. ದುಡಿಮೆಯೊಂದೇ ಅವನ ಧ್ಯೇಯವಾಗಿರಬೇಕು. ಸಕ್ಸಸ್ ಫುಲ್ ಆಗಿರಬೇಕು. ಹೀಗೆ, ಸಾಕಷ್ಟು ನಿರೀಕ್ಷೆಗಳು ಗಂಡಿನ ಮೇಲೆ. ಆ ನಿರೀಕ್ಷೆಗಳನ್ನು ಪೂರೈಸಲಿಲ್ಲ ಅಂದರೆ ಅವನಿಗೆ ಬೆಲೆಯಿಲ್ಲ. ಕಟ್ಟಿಕೊಂಡ ಹೆಂಡತಿಯ ಎದುರಿಗೂ ಅವನು ಕಾಲಿನ ಕಸಕ್ಕೆ ಸಮಾನ...."
" ಅನಿಕೇತ್. ನಿಮ್ಮ ಹಾಗೂ ನಿಹಾರಿಕಾಳ ಮಧ್ಯೆ ತುಂಬ ಮನಸ್ತಾಪಗಳಿರುವಂತೆ ತೋರುತ್ತದೆ. "
" ಅಲ್ಲ ಮೃದುಲ. ಮನಸ್ತಾಪವಲ್ಲ. ಅವಳಿಗೆ ನನ್ನ ಬಗ್ಗೆ ಇರುವುದು ಇನ್ಫೀರ್ಯಾರಿಟಿ . ಅವಳ ಕೊಲೀಗ್ಸ್, ಗೆಳತಿಯರ ಪತಿಯರೆಲ್ಲ ಉನ್ನತ ಸ್ಥಾನಗಳಲ್ಲಿದ್ದಾರೆ. ಆದರೆ ನಾನು. ಅವಳೇ ಯಾವಾಗಲೂ ಹೇಳುವಂತೆ ಆಫ್ಟರಾಲ್ ಎನ್ ಆರ್ಟ್ ಟೀಚರ್. ನನ್ನ ಬಗ್ಗೆ ಕೀಳರಿಮೆ ಅವಳಿಗೆ. ನಿಹಾರಿಕಾಳ ತಂದೆ ಹಾಗು ನನ್ನ ತಂದೆ ಆತ್ಮೀಯ ಸ್ನೇಹಿತರು. ಅವರ ಬಯಕೆಯಂತೆ ನಮ್ಮ ಮದುವೆ ಮಾಡಿದರು. ಆಗ ನಾನೂ ಚೆನ್ನಾಗಿಯೇ ಸಂಪಾದಿಸುತ್ತಿದ್ದೆ. ಆದರೆ ಬರುಬರುತ್ತ ನಾನು ಹಿಡಿದ ಕೆಲಸಗಳಲ್ಲೆಲ್ಲ ಬರೀ ಸೋಲೇ ಆಯಿತು. ನಾನು ಪ್ರಯತ್ನಿಸಲಿಲ್ಲ ಅಂತಲ್ಲ. ಆದರೆ ಅದೃಷ್ಟ ನನ್ನ ಕೈ ಹಿಡಿಯಲಿಲ್ಲ. ನಾನೇನೇ ಮಾಡಿದರೂ ನಿಹಾರಿಕಾಳ ಮುಂದೆ ನಾನೊಂದು ದೊಡ್ಡ ಜ಼ೀರೋ. ಅಷ್ಟೇ. " ಎಂದ ಅನಿಕೇತನ ಕಣ್ಣಾಲಿಗಳು ತೇವವಾಗಿದ್ದವು.
" ಎವ್ರಿಥಿಂಗ್ ವಿಲ್ ಬಿ ಫೈನ್ ಅನಿಕೇತ್. ಡೋಂಟ್ ವರಿ " ಎಂದು ಅನಿಕೇತನಲ್ಲಿ ನುಡಿದಳು ಮೃದುಲಾ.
" ಐ ಆಮ್ ಸಾರಿ. ನಾನೇನೋ ಹೇಳುತ್ತ ನಿಮಗೆ ಬೋರ್ ಹೊಡೆಸ್ತಾ ಇದ್ದೀನಿ. ಕಾಫಿ ಕುಡಿತೀರ " ಮಾತು ಬದಲಿಸಿದ ಅನಿಕೇತ್.
" ಇಲ್ಲ ಹಾಗೇನೂ ಇಲ್ಲ. ನೀವು ನಿಮ್ಮ ಮನಸು ಬಿಚ್ಚಿ ನನ್ನಲ್ಲಿ ಮಾತನಾಡಬಹುದು. ನಾನು ನಿಮ್ಮನ್ನು ಜಡ್ಜ್ ಮಾಡುವುದಿಲ್ಲ. " ಎಂದ ಮೃದುಲಾಳ ಮಾತಗಳು ಅನಿಕೇತನಿಗೇಕೋ ಹಿಡಿಸಿತು.
ಇಬ್ಬರ ನಡುವೆ ಮಾತುಕತೆ, ತಮಾಷೆ, ನಗು, ಹರಟೆ, ಸಾಂತ್ವಾನ , ಸಲಿಗೆ, ಸ್ನೇಹ ಎಲ್ಲವೂ ಬೆಳೆಯಿತು. ಕೆಲವೇ ಸಮಯದಲ್ಲಿ ಇಬ್ಬರೂ ಆಪ್ತರಾದರು. ಸದಾ ಸಿಡುಕುತ್ತಿದ್ದ ನಿಹಾರಿಕಾಳ ಮುಂದೆ ಮೃದುಲಾಳ ತಣ್ಣನೆಯ ನಗು, ಸಹನೆ, ತಾಳ್ಮೆ ಇವೆಲ್ಲವೂ ಅನಿಕೇತನಿಗೆ ಬಹಳವಾಗಿ ಹಿಡಿಸಿತ್ತು. ತನ್ನ ಜೀವನದಲ್ಲಿ ಬರೀ ನೋವನ್ನೇ ನೋಡಿದ್ದ ಮೃದುಲಾಳ ಮನಸೂ ಅನಿಕೇತನ ಕಡೆ ವಾಲುತ್ತಿತ್ತು. ಇಬ್ಬರ ನಡುವೆಯಿರುವ ಸ್ನೇಹದ ಗಡಿ ಎಲ್ಲಿ ಮೀರುವೆವೋ ಎಂದು ಇಬ್ಬರ ಮನದಲ್ಲೂ ಆತಂಕ ಶುರುವಾಯಿತು. ಹೆಂಡತಿಗೆ ಮೋಸಮಾಡುವ ಉದ್ದೇಶ ಅನಿಕೇತನಿಗಿರಲಿಲ್ಲ. ಹಾಗೆಯೇ ಗೆಳತಿಗೆ ನಂಬಿಕೆ ದ್ರೋಹ ಮಾಡುವಂತಹ ಹೆಣ್ಣು ಮೃದುಲಾಳೂ ಆಗಿರಲಿಲ್ಲ. ಆದರೂ ಮಾಯಾ ಮೋಹಗಳಿಗೆ ಸಿಲುಕಿ ಒದ್ದಾಡುವ ಈ ಮನಸಿಗೆ ಕಡಿವಾಣ ಹಾಕುವುದು ಅಷ್ಟು ಸುಲಭವೇ. ಇಬ್ಬರ ಮನಸೂ ತೂಗುಯ್ಯಾಲೆಯಂತಾಗಿತ್ತು. ಭಾವಗಳ ಬಣ್ಣಗಳು ಕದಡಿ ಮನಸಿನ ತುಂಬ ರಾಡಿಯಾಗಿದ್ದವು..!!!!
ಅಂದು ಅನಿಕೇತ್ ತನ್ನ ಆರ್ಟ್ ಸ್ಕೂಲಿನಿಂದ ಬರುತ್ತಿದ್ದಾಗ, ಅಪಘಾತಕ್ಕೆ ತುತ್ತಾದ. ಅವನು ಬರುತ್ತಿದ್ದ ಬೈಕ್ ಸಂಪೂರ್ಣವಾಗಿ ಜಖಂ ಆಗಿತ್ತು. ವಿಷಯ ತಿಳಿದ ನಿಹಾರಿಕಾ ತತ್ತರಿಸಿ ಹೋಗಿದ್ದಳು. ಅನಿಕೇತನಿಗೆ ಏನಾಯ್ತೋ ಏನೋ ಎಂದು ಬಹಳ ಭಯಪಟ್ಟಿದ್ದಳು. ಆದರೆ ದೇವರ ದಯೆಯಿಂದ ಕಾಲಿಗೆ ಸಣ್ಣದಾಗಿ ಪೆಟ್ಟಾಗಿತ್ತೇ ವಿನಃ ಮತ್ತಿನ್ನೇನೂ ಆಗಿರಲಿಲ್ಲ. ನಿಹಾರಿಕಾಳ ಈ ಪ್ರೀತಿ, ಕಾಳಜಿ ಅನಿಕೇತನಿಗೆ ಬಹಳ ಅಚ್ಚರಿ ತರಿಸಿತ್ತು. ತನ್ನ ಹೆಂಡತಿಯ ಮನದಲ್ಲಿ ತನ್ನ ಬಗ್ಗೆ ನಿಜವಾಗಲೂ ಇಷ್ಟೊಂದು ಪ್ರೀತಿಯಿದೆಯೇ ಎಂದು ಅವನಿಗೇ ಆಶ್ಚರ್ಯವಾಗಿತ್ತು.
" ನಮ್ಮಲ್ಲಿರುವುದರ ಬೆಲೆ ಅದು ಹತ್ತಿರವಿರುವಾಗ ತಿಳಿಯುವುದಿಲ್ಲ. ಆದರೆ ಅದೆಲ್ಲಿ ದೂರಾಗುವುದೋ ಎಂಬ ಭಯ ಮನಸನ್ನು ಆವರಿಸಿದಾಗ ಅದರ ಮಹತ್ವ ಅರಿವಾಗುವುದು " ಎಂದು ಒಗಟಾಗಿ ಮಾತನಾಡಿ ಅನಿಕೇತನನ್ನು ತಬ್ಬಿಕೊಂಡು ಜೋರಾಗಿ ಅತ್ತಿದ್ದಳು ನಿಹಾರಿಕಾ. ಅವಳಿದ್ದದ್ದೇ ಹಾಗೆ. ಮಾತು ಒಗಟು, ಸ್ವಭಾವ ಒರಟು ಎಂದುಕೊಂಡಿದ್ದ ಅನಿಕೇತ್. ಆದರೂ ಆ ಮಾತುಗಳು ಅವರಿಬ್ಬರ ಸಂಬಂಧದ ದಿಕ್ಕನ್ನೇ ಬದಲಾಯಿಸಿತ್ತು. ಮದುವೆಯೆನ್ನುವ ಪವಿತ್ರ ಬಂಧನದಲ್ಲಿ ಅಪಾರವಾದ ನಂಬಿಕೆಯಿಟ್ಟಂತವ ಅನಿಕೇತ್. ಎಲ್ಲೋ ಆ ನಂಬಿಕೆಗೆ ಮತ್ತೆ ಜೀವ ಬಂದಂತೆನ್ನಿಸಿತು ಅನಿಕೇತನಿಗೆ. ನಿಹಾರಿಕಾ ಬದಲಾಗುವಳೇ. ನಮ್ಮ ಸಂಸಾರ ಸುಖಮಯವಾಗುವುದೇ ಎಂಬ ಸಣ್ಣದೊಂದು ಆಸೆ ಅವನಲ್ಲಿ ಮೂಡಿತ್ತು. ನಿಹಾರಿಕಾಳೂ ಅನಿಕೇತನನ್ನು ಚೆನ್ನಾಗಿ ಆರೈಕೆ ಮಾಡುತ್ತಿದ್ದಳು. ಇಂದಲ್ಲ ನಾಳೆ ಇವಳು ಸಂಪೂರ್ಣವಾಗಿ ಬದಲಾಗಬಹುದು ಎನ್ನುವ ನಂಬಿಕೆ ಅನಿಕೇತನಲ್ಲಿ ಗಟ್ಟಿಯಾಯಿತು. ತಿಳಿದೋ ತಿಳಿಯದೆಯೋ ತನ್ನ ಮನಸು ಮೃದುಲಾಳ ಕಡೆಗೆ ವಾಲುತ್ತಿರುವುದು ತಪ್ಪು ಎನ್ನಿಸಿತು.
ಮೃದುಲಾಳ ಬಳಿ ಮಾತನಾಡಬೇಕು. ಅವಳಿಗೂ ನನ್ನ ಬಗ್ಗೆ ಒಲುಮೆಯಿದ್ದಂತಿದೆ. ಆದರೆ ನಮ್ಮ ಈ ಭಾವನೆ ತಪ್ಪು ಎಂದು ಅವಳಿಗೆ ತಿಳಿಸಬೇಕು ಎಂದುಕೊಂಡ ಅನಿಕೇತ್.
ಗಾರ್ಡನ್ನಿನ್ನಲ್ಲಿ ಕೂತಿದ್ದ ಮೃದುಲಾಳ ಬಳಿ ಬಂದು " ಮೃದುಲ. ಮನಸು ಎಷ್ಟು ವಿಚಿತ್ರ ಅಲ್ಲವೇ. ತಾನು ಬಯಸ್ಸಿದ್ದನ್ನು ಪಡೆದೇ ತೀರಬೇಕು ಎನ್ನುವ ಹಠ ಮನಸಿಗೆ. ಅದು ತಪ್ಪೋ, ಸರಿಯೋ ಅದ್ಯಾವುದೂ ಅದಕ್ಕೆ ಬೇಕಾಗಿಲ್ಲ. ಆದರೆ.. " ಎಂದ ಅನಿಕೇತನ ಮಾತನ್ನು ಅರ್ಧದಲ್ಲೇ ನಿಲ್ಲಿಸಿದಳು ಮೃದುಲ.
" ನೀವು ಏನು ಹೇಳಬೇಕೆಂದಿರುವಿರೋ ನನಗೆ ಗೊತ್ತು ಅನಿಕೇತ್. ಕಣ್ಣು ಹೋದ ಕಡೆಯೆಲ್ಲ ಮನಸು ಹೋಗಬಾರದು. ಮನಸು ಹೋದ ಕಡೆಗೆಲ್ಲ ಮನುಷ್ಯ ಹೋಗಬಾರದು. ದಾಂಪತ್ಯದಲ್ಲಿ ಬರೀ ನೋವನ್ನೇ ಕಂಡಿದ್ದ ನನ್ನ ಮನಸು ನಿಮ್ಮ ಸಾಂಗತ್ಯವನ್ನು ಬಯಸಿದ್ದು ನಿಜ. ಆದರೆ ನಾನು ನಿಮ್ಮ ಹಾಗು ನಿಹಾರಿಕಾಳ ನಡುವೆ ಎಂದಿಗೂ ಬರುವುದಿಲ್ಲ. ಗೆಳತಿಯ ಪತಿಯನ್ನೇ ನನ್ನವನ್ನನ್ನಾಗಿಸಿಕೊಂಡು, ನಿಹಾರಿಕಾಳ ಮನೆಮುರಿಯುವಂತಹ ಬುದ್ಧಿ ನನಗಿಲ್ಲ. ನಿಹಾರಿಕಾಳಿಗೆ ನಿಮ್ಮ ಮೇಲೆ ಪ್ರೀತಿಯಿದೆ. ಸಿಟ್ಟು, ಅಸಾಮಾಧಾನ ತೋರಿಸಬಹುದು. ಆದರೆ ಅವಳು ಬದಲಾಗುವಳು. ಅವಳನ್ನು ಬದಲಾಯಿಸುವ ತಾಳ್ಮೆ, ಸಂಯಮ ನಿಮ್ಮಲಿದೆ. ಆ ನಂಬಿಕೆ ನನಗಿದೆ. ನಾನು ಭಾರತಕ್ಕೆ ಬಂದದ್ದೇ ಬೇರೆ ಉದ್ದೇಶದಿಂದ. ಮದುವೆಯಾಗಿ ಸಂಸಾರದಲ್ಲಿ ಬರೀ ನೋವನ್ನೇ ಕಂಡ ನನಗೆ ಮತ್ತೆ ಮದುವೆಯಾಗಲು ಮನಸ್ಸೇಕೋ ಒಪ್ಪಲಿಲ್ಲ. ಆದರೆ ಮಕ್ಕಳೆಂದರೆ ನನಗೆ ಪ್ರಾಣ. ನಾನಿಲ್ಲಿಗೆ ಬಂದದ್ದು ಅದೇ ಸಲುವಾಗಿ. ಒಂದು ಮಗುವನ್ನು ದತ್ತು ತೆಗೆದುಕೊಳ್ಳುವ ಉದ್ದೇಶದಿಂದ. ಅದರ ಲೀಗಲ್ ಪ್ರೊಸೀಜರ್ಗಳು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುತ್ತವೆ. ಆಮೇಲೆ ನಿಮ್ಮಿಬ್ಬರಿಗೂ ಈ ವಿಷಯ ಹೇಳಬೇಕೆಂದಿದ್ದೆ. ಆದರೆ ಅದರ ನಡುವೆ ಮನಸು ಇನ್ನೆಲ್ಲೋ ವಾಲಿತು. ಈಗ ಅದಕ್ಕೆ ನಾನೇ ಕಡಿವಾಣ ಹಾಕಿರುವೆ. ಬರುವಾಗ ನಿಹಾರಿಕಾಳ ಸ್ನೇಹಿತೆಯಾಗಿ ಬಂದೆ. ಆದರೆ ಹೋಗುವಾಗ ನಿಮ್ಮ ಸ್ನೇಹ, ವಿಶ್ವಾಸವನ್ನೂ ನನ್ನೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ನೀವು ಎಂದಿಗೂ ನನ್ನ ಆಪ್ತ ಸ್ನೇಹಿತರಾಗಿಯೇ ಉಳಿಯುವಿರಿ ಅನಿಕೇತ್. ಏನೇ ಆದರೂ ನಿಮ್ಮನ್ನು ಪಡೆಯಲಿಕ್ಕೆ ನಿಹಾರಿಕಾ ನಿಜವಾಗಲೂ ಪುಣ್ಯ ಮಾಡಿದ್ದಾಳೆ " ಎಂದು ನುಡಿದ ಮೃದುಲಾಳ ಕಣ್ಣುಗಳಲ್ಲಿ ಒಂದು ಮಿಂಚು ಅದರ ಹಿಂದೆಯೇ ಒಂದು ವಿಷಾದದ ಭಾವ ಎರಡೂ ಮೂಡಿ ಮರೆಯಾದವು.
" ಏನು ಮಾಡ್ತಾ ಇದ್ದೀರ ಇಬ್ರು ಇಲ್ಲಿ " ಎಂದು ಕೇಳುತ್ತಾ ಬಂದ ನಿಹಾರಿಕಾಳ ಪ್ರಶ್ನೆಗೆ
" ಏನಿಲ್ಲ ಹೀಗೆ ಸುಮ್ನೆ ಮಾತಾಡ್ತಾ ಇದ್ವಿ " ಎಂದು ಉತ್ತರಿಸಿದ ಅನಿಕೇತ್.
" ಓಹ್. ಬಿಸಿ ಬಿಸಿಯಾಗಿ ಕಾಫಿ ಮಾಡಿದ್ದೀನಿ. ಬನ್ನಿ ಇಬ್ರು. ಕಾಫಿ ಕುಡಿಯುತ್ತ ಮಾತಾಡುವಿರಂತೆ " ಎಂದು ಡೈನಿಂಗ್ ಟೇಬಲ್ಲಿನ ಕಡೆಗೆ ಹೆಜ್ಜೆ ಹಾಕಿದಳು ನಿಹಾರಿಕಾ. ಮನಸನ್ನು ಕಾಡುತ್ತಿದ್ದ ಯಾವುದೋ ಒಂದು ಸೆಳೆತ ಅಂದು ಕರಗಿ ನೀರಾಗಿತ್ತು. ದಾರಿ ಸ್ಪಷ್ಟವಾಗಿತ್ತು. ಸಂಬಂಧಗಳು ಸರಳವಾಗಿದ್ದವು.ಪ್ರಶೆಗಳಿಗೆ ಉತ್ತರ ದೊರಕಿದ್ದವು. ಮನಸು ಹಗುರಾಗಿದ್ದ ಅನುಭವ ಅನಿಕೇತ್ ಹಾಗು ಮೃದುಲಾ ಇಬ್ಬರಿಗೂ ಉಂಟಾಗಿತ್ತು. ಕದಡಿದ್ದ ಭಾವದ ಬಣ್ಣಗಳಿಂದ ಒಂದು ಚಿತ್ತಾರ ಮೂಡಿತ್ತು. ಆ ಚಿತ್ತಾರಕ್ಕೆ ಇಬ್ಬರೂ ಸ್ನೇಹ ಎನ್ನುವ ಹೆಸರನ್ನು ಇಟ್ಟಿದ್ದರು.
" ಬನ್ನಿ ಬೇಗ " ಎಂದು ಮತ್ತೆ ಕರೆದ ನಿಹಾರಿಕಾಳ ದನಿಗೆ ಎಚ್ಚೆತ್ತ ಇಬ್ಬರೂ 'ಹಾಂ' ಎನ್ನುತ್ತ ಟೇಬಲ್ಲಿನ ಕಡೆಗೆ ನಡೆದರು.
