ಅಣ್ಣಾಂದ್ರೆ ನಂಗಿಷ್ಟ.
ಅಣ್ಣಾಂದ್ರೆ ನಂಗಿಷ್ಟ.
ಹೋದ ವಾರ ಬೆಂಗಳೂರಿಂದ ಚೆನೈಗೆ ಪ್ರಯಾಣಿಸುವಾಗ , ಬೆಳಗಿನ ಲಾಲ್ಬಾಗ್ ಎಕ್ಸಪ್ರೆಸ್ ನಲ್ಲಿ ನನ್ನ ಕಂಪಾರ್ಟ್ಮೆಂಟಲ್ಲಿ ಜನ ಕಿಕ್ಕಿರಿದು ಸೇರಿದ್ದರು. ನನ್ನ ಸೀಟು ರಿಸರ್ವ್ ಆಗಿತ್ತು. ಕೆಲವರು ಓಪನ್ ಟಿಕೆಟಲ್ಲಿ , ಪ್ರಯಾಣ ಮಾಡುವವರು ನಿಂತಿದ್ದರು. ಐದಾರು ಗಂಟೆಯ ಕಾಲ ನಿಲ್ಲಲು ಸಾಧ್ಯವೇ? ಅಲ್ಲಲ್ಲೇ ಕೆಲವರು ನೆಲದಲ್ಲಿ ಕೂತರು, ಮಾರಾಟ ಮಾಡುವವರು ಆಗಾಗ ಹಾದು ಹೋಗಿ, ಕಿರಿಕಿರಿ ಮೂಡಿಸುತ್ತಿದ್ದರು. ಮಧ್ಯ ಭಿಕ್ಷುಕರು ಸಹ. ಪಾಪ , ಕೆಳಗೆ ಕೂತವರ ಪಾಡು ಅಯ್ಯೋ ಅನಿಸಿತು..
ಇಂತಹ ಗದ್ದಲದಲ್ಲಿ, ನನ್ನ ಗಮನ ಸೆಳೆದದ್ದು, ಇಬ್ಬರು ಪುಟ್ಟ ಮಕ್ಕಳು...ಹುಡುಗ ಸುಮಾರು ಎಂಟು ವರ್ಷದವನಿರಬಹುದು, ಸೌಮ್ಯ ನಗುಮುಖ, ನೀಟಾಗಿ ಟೀಶರ್ಟ್ ಪ್ಯಾಂಟಲ್ಲಿ ಮುದ್ದಾಗಿದ್ದ. ಅವನ ಮಗ್ಗುಲಲ್ಲಿ ಕುಳಿತ ಪುಟ್ಟ ಪೋರಿ ಮೂರು ವರ್ಷದವಳಿರಬಹುದು. ಉದ್ದನೆಯ ನೀಲಿ ಗಾಗ್ರಾ ತೊಟ್ಟು ಮುಗ್ದವಾಗಿ ಅಣ್ಣನ ತೋಳು ಹಿಡಿದು ಕುಳಿತ ಭಂಗಿ ಅಪ್ಯಾಯಮಾನವಾಗಿತ್ತು. ನನ್ನ ಕಣ್ಣು ಪದೇ ಪದೇ ಅವರಿಬ್ಬರನ್ನೇ ಅವಲೋಕಿಸುತ್ತಿತ್ತು. ಯಾಕೋ ಇಷ್ಟ ಆಗಿದ್ದರು.
ಅವರಿಬ್ಬರ ಸಂಬಂಧಿಕರು, ತಾತ, ಅಪ್ಪ ಇರಬಹುದೇನೋ..., ಬಾಗಿಲ ಬಳಿ ಕೆಳಗೆ ಕುಳಿತಂತೆ ಕಂಡಿತು. ಯಾಕೆಂದರೆ ಆಗಾಗ ಇವರಿಬ್ಬರೂ ಎದ್ದು ಆ ಕಡೆ ಹೋಗಿ ಏನೋ ತಿಂಡಿಗಳನ್ನು ಕೈಯಲ್ಲಿ ಹಿಡಿದು ಬಂದು ಪುನಃ ಆ ಎದುರಿನ ನಡುವಿನ ಸೀಟಿನಲ್ಲಿ ಕೂರುವುದು ನಡೀತಿತ್ತು. ಕಾಟ್ಪಾಡೀ ಸ್ಟೇಶನ್ ಬಂತು. ಮತ್ತೆ ಕೆಲವರು ಹತ್ತಿಕೊಂಡರು, ಕೆಲವರು ಇಳಿದರು.
ಈ ಮಕ್ಕಳು ಕುಳಿತ ಸೀಟು ಇನ್ನಾರಿಗೋ ಬುಕ್ಕ್ ಆಗಿ, ಆ ಸೀಟಿನವರು ಬಂದು ಇವರನ್ನು ಎಬ್ಬಿಸಿ ತಾವು ಕುಳಿತರು. ಪಾಪ ಮಕ್ಕಳು ಎದ್ದು ಸೀಟು ಬಿಟ್ಟು ಕೊಟ್ಟರು. ತಂಗಿಯನ್ನು ತಬ್ಬಿ ಹಿಡಿದು , ತಾನೂ ಬ್ಯಾಲೆಂನ್ಸು ಮಾಡುತ್ತಾ ಆ ಪೋರ ನಿಂತುಕೊಂಡಾಗ ಯಾಕೋ ಕರೆದು ಕುಳ್ಳಿರಿಸಿಕೊಳ್ಳೋಣ ಅನಿಸಿತು. ಆದರೆ ಜಾಗ ಸಾಲದಾಗಿತ್ತು. ಅಷ್ಟರಲ್ಲಿ, ಒಬ್ಬರ್ಯಾರೋ ಇಳಿಯುವ ಸೂಚನೆ ಕಂಡಿತು. ಖುಷಿಯಾಗಿ ಇವರು ಮತ್ತೆ ಆಸೀನರಾದರು. ನನಗೆ ಸಮಾಧಾನವಾಯಿತು. ಎಷ್ಟು ಪ್ರೀತಿ ಈ ಹುಡುಗನ ಮುಖದಲ್ಲಿ ಇದೆಯೆಂದು ನಾ ಯೋಚಿಸುತ್ತಿದ್ದೆ. ನನಗೂ ಒಬ್ಬ ಅಣ್ಣ ಇದ್ದಿದ್ದರೆ.....ಹೀಗೇ ಚಂದ ಕಾಪಾಡುತ್ತಿದ್ದನಲ್ವಾ ಅಂತ ಅನಿಸಿತ್ತು. ದೇವರು ಯಾಕೋ ನನಗೆ ಇದೊಂದು ವಿಷಯದಲ್ಲಿ ಮನಸು ಮಾಡಲಿಲ್ಲ ಅನಿಸಿತು. ....
ಉಪಹಾರ ಮಾರುವವ ಬಂದ. ನಾ ಇಡ್ಲಿ ತೊಗೊಂಡೆ. ಆ ಮಕ್ಕಳೂ ದೋಸೆ ತಗೊಂಡರು. ಒಂದೇ ತಟ್ಟೇಲಿ ಇಬ್ಬರೂ ಹಂಚಿ ತಿನ್ನುತ್ತಿದ್ದರು. ಅಣ್ಣ ಕೈಯಲ್ಲಿ ತಟ್ಟೆ ಹಿಡಿದು, ದೋಸೆಗೆ ಸಾಗೂ ಅದ್ದಿ ತಂಗಿಯ ಪುಟ್ಟ ಬಾಯಿಗಿಡುತ್ತಿದ್ದ. ನಂತರದ ತುತ್ತನ್ನು ತಾನು ತಿನ್ನುತ್ತಿದ್ದ. ಅಬ್ಬಾ! ಎಂತ ಸೊಗಸಾಗಿತ್ತು ಆ ನೋಟ. ಆ ಹುಡುಗನ ಮುಖದಲ್ಲಿ ಸಂತೃಪ್ತಿ , ತ್ಯಾಗ ಎದ್ದು ಕಾಣುತ್ತಿತ್ತು. ಅಷ್ಟೇ ಪ್ರೀತಿ ಆ ಮುದ್ದು ಹುಡುಗಿಯಲ್ಲೂ ಇತ್ತು. ಅವಳೂ ದೋಸೆ ಚೂರು ಮುರಿದು ಅವನ ಬಾಯಿಗಿಟ್ಟು ನಕ್ಕಳು. ಅವನೂ ಬಹಳ ಖುಷಿಯಾದ. ನಾ ತಿನ್ನುವುದನ್ನು ಮರೆತು ಅವರನ್ನೇ ದಿಟ್ಟಿಸುತ್ತಿದ್ದೆ. ಇತರ ಜನರ ಬಗ್ಗೆ ನಾ ಯೋಚಿಸಲಿಲ್ಲ. ತಿಂದಾದ ಮೇಲೆ, ಅವಳನ್ನು ನಲ್ಲಿ ಹತ್ತಿರ ಕರೆದೊಯ್ದು ಬಾಯಿ ಕೈ ತೊಳೆಸಿ ಜೇಬಿನಿಂದ ಕರಚೀಫ್ ತೆಗೆದು ತುಟಿಯೊರೆಸಿ ಮತ್ತೆ ಸೀಟಿಗೆ ಬಂದು ಕುಳಿತರು.. ಅಷ್ಟರಲ್ಲಿ ನಾನೂ ತಿಂಡಿ ಮುಗಿಸಿದ್ದೆ.
ಸ್ಟೇಶನ್ ಗಳು , ಊರುಗಳು ಸಾಗಿದಂತೆಲ್ಲಾ, ನನ್ನ ಯೋಚನಾಲಹರಿಯೂ ಓಡುತ್ತಲೇ ಇತ್ತು. ಮನಸು ಇಪ್ಪತ್ತು ವರ್ಷದ ಹಿಂದಕ್ಕೆ ಓಡಿತು. ಒಮ್ಮೆ ನಾನು ಚೊಚ್ಚಲು ಬಸುರಿಯಾಗಿದ್ದಾಗ, ಬೆಂಗಳೂರಿನ ಐಟಿಐ ನಲ್ಲಿದ್ದೆ. ಆಗ, ಅಲ್ಲಿನ ಸಹೋದ್ಯೋಗಿ ಒಬ್ಬರು ನನ್ನನ್ನು ಬಹಳ ಅಕ್ಕರೆ ಯಿಂದ ಮಾತಾಡಿಸುತ್ತಿದ್ದರು. ನನಗೆ ಕೆಲಸ ಮಾಡಲು ಅನುಕೂಲವಾಗುವಂತೆ, ಎಲ್ಲ ಸೌಕರ್ಯವನ್ನೂ ಒದಗಿಸಿ ಅಪ್ಯಾಯತೆ ತೋರಿದ್ದರು. ನಂತರ ನಾನು ಮೆಟರ್ನಿಟಿ ರಜ ಪಡೆದು ಮನೇಲುಳಿದೆ. ಒಮ್ಮೆ ಆ ಮನುಷ್ಯ ತನ್ನ ಪತ್ನಿಯ ಸಮೇತ ಮನೆಗೆ ಬಂದರು. ಜೊತೆಗೆ ತರತರದ ತಿಂಡಿ ಹಣ್ಣುಹಂಪಲುಗಳನ್ನು ತಂದು ನನಗೆ ಇತ್ತಾಗ , ನನಗೆ ಎಲ್ಲಿಲ್ಲದ ಆನಂದ , ಕುತೂಹಲ ಒಟ್ಟಿಗೇ ಆಗಿತ್ತು. ಇದೆಲ್ಲಾ ಯಾಕೆ ಸುಮ್ಮನೆ...ಎಂದಾಗ, ಅವರಂದ ಮಾತು..ನೀವು ನನ್ನ ತಂಗಿ ಇದ್ದ ಹಾಗೆ, ನನ್ನ ಕರ್ತವ್ಯ ನಾ ಮಾಡಿದೆ ಕಣಮ್ಮಾ.ಅಂದರು. ನನಗೆ ಮಾತೇ ಹೊರಡದೇ ಮೂಕಳಾದೆ. ಮನೆಯಲ್ಲಿ ಯಜಮಾನರಿರಲಿಲ್ಲ. ಅವರ ಪತ್ನಿಯು ಸಹ ಅಷ್ಟೇ ಮುತುವರ್ಜೀಯಿಂದ ನನಗೆ ಅಕ್ಕರೆ ತೋರಿದರು. ನನಗೆ ಹೂಮುಡಿಸಿ ಆನಂದಿಸಿದರು. ನನಗೆ ತೌರಿನ ನೆನಪನ್ನು ಮರೆಸಿ ಹರಸಿದ್ದರು. ದೇವರು ನನ್ನ ಪಾಲಿಗಿದ್ದಾನೆ ಎನಿಸಿತ್ತು. ನಮ್ಮ ಯಜಮಾನರಿಗೂ ಹೀಗೇ ಅನಿಸಿತ್ತು.
ಈ ಮಕ್ಕಳನ್ನು ಕಂಡಾಗ ಆ ದೈವಸ್ವರೂಪಿ ಅಣ್ಣನ ನೆನಪಾಯಿತು.
ಮತ್ತೆ ಮನಸನ್ನು ಕೊಡವಿ ವಾಸ್ತವಕ್ಕೆ ಇಳಿದೆ. ಮಕ್ಕಳು ಮುಗ್ದವಾಗಿ ಆಟವಾಡಿಕೊಂಡಿದ್ದರು . ಜಾಗ ಇಕ್ಕಟ್ಟಾಗಿ, ಹುಡುಗ ತಂಗಿಯನ್ನು ತೊಡೆಯ ಮೇಲೇ ಕೂರಿಸಿಕೊಂಡಿದ್ದ. ಅವಳಿಗೆ ಕಷ್ಟವಾಗದಂತೆ ಮೃದುವಾಗಿ ತಬ್ಬಿ ಹಿಡಿದು, ಆಗಾಗ ಕೆನ್ನೆಗೆ ಮುದ್ದಿಸಿದಂತೆ ಕಂಡು ನಗು ಬಂತು. ಚೆನೈ ಹತ್ತಿರ ಬರುತ್ತಿದ್ದಂತೆ ಸೆಖೆ ಶುರುವಾಗಿತ್ತು, ಹುಡುಗಿ ಸೆಖೆಯಿಂದ ಚಡಪಡಿಸುತ್ತಿದ್ದಳು. ಅವನು ಬಾಯಿಂದ ಗಾಳಿ ಊದಿ, ಸಮಾಧಾನ ಮಾಡುತ್ತಿದ್ದ ನೋಟ ಯಾಕೋ ತೀರ ಮುದ್ದಾಗಿತ್ತು. ಎಷ್ಟು ಪುಣ್ಯ ಮಾಡಿತ್ತು ಹುಡುಗಿ ಅನಿಸಿತು.
ಚೆನೈ ತಲುಪಿ ಮನೆ ಸೇರಿ ರಾತ್ರಿ ಮಲಗಿದಾಗಲೂ ಅಣ್ಣ ತಂಗಿಯರ ನೆನಪು ಕಾಡಿತ್ತು. ನಿದ್ದೆ ಬಾರದೆ ಹೊರಳಾಡಿದ್ದೆ. ನನಗೂ ಅಣ್ಣ ಇರಬೇಕಿತ್ತು . ಪ್ರೀತಿಗೆ, ಅಸರೆಗೆ, ಹಂಚಿಕೆಗೆ ಅವ ಇದ್ದಿದ್ದರೇ..........?😊👌👍💐
