Vijaya Bharathi

Classics Inspirational

2  

Vijaya Bharathi

Classics Inspirational

ಆನಂದಕಂದ

ಆನಂದಕಂದ

3 mins
99


ದೆಹಲಿಯಿಂದ ಹರಿದ್ವಾರಕ್ಕೆ ಹೊರಟಿದ್ದ ಸೂರ್ಯ,ಟ್ರೈನ್ ನಲ್ಲಿ ಒಂದು ಕಡೆ ಕುಳಿತು ಕಿಟಕಿಯಿಂದ ಹೊರಗಡೆ ನೋಡುತ್ತಾ ಕುಳಿತ. ಅವನ ಕೈಯಲ್ಲಿ "ತತ್ವಮಸಿ" ಪುಸ್ತಕವಿತ್ತು. ಬಿಳಿ ಪೈಜಾಮ, ಜುಬ್ಬ,ಹಣೆಯ ಮಧ್ಯದಲ್ಲಿ

ವಿಭೂತಿ, ಇಟ್ಟುಕೊಂಡಿದ್ದ ಇಪ್ಪತ್ತರ ಹರೆಯದ ಸೂರ್ಯ ಬಾಲ ಸೂರ್ಯನಂತೆ ತೇಜಸ್ವಿ ಯಾಗಿದ್ದ. ಇನ್ನೂ ಆಗ ತಾನೆ ಮುಖದಲ್ಲಿ ಚಿಗುರೊಡೆದಿದ್ದ ಕಪ್ಪು ಗಡ್ಡ ಮೀಸೆಗಳು, ಚುರುಕಾದ ಕಂಗಳು, ಶಾಂತವಾದ ಮುಖ ,ಅವನನ್ನು ನೋಡಿದರೆ ಒಬ್ಬ ಬಾಲ ಸಂನ್ಯಾಸಿಯಂತೆ ಕಾಣುತ್ತಿದ್ದ. ತನ್ನ ಅಂತರಂಗದೊಳಗೆ ಪುಟಿಯುತ್ತಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಾ, ಉತ್ತರಗಾಮಿಯಾಗಿ ಹೊರಟಿದ್ದ. ಅವನನ್ನು ನೋಡಿದವರೆಲ್ಲರಿಗೂ ಪಳಚ್ಚನೆ ಮಿಂಚು ಹೊಡೆದಂತೆ ಭಾಸವಾಗುತ್ತಿತ್ತು. ಅವನು ಸ್ವಲ್ಪ ಹೊತ್ತು ಹಾಗೇ ಕಣ್ಣು ಮುಚ್ಚಿ ಕುಳಿತ. ಅವನ ಚಿತ್ತಭಿತ್ತಿಯಲ್ಲಿ ನೆನೆಪುಗಳು ಸುಳಿದು ಹೋಗಲು ಪ್ರಾರಂಭಿಸಿದವು.


ಬೆಂಗಳೂರಿನ ಒಳ್ಳೆ ಸುಸಂಸ್ಕೃತ ಸೋಮಯಾಜಿಗಳ ವಂಶದಲ್ಲಿ ತಂದೆ ತಾಯಿಯ ಮೂರನೇ ಮಗನಾಗಿ ಜನಿಸಿದ್ದ ಸೂರ್ಯನಿಗೆ ತನ್ನ ಎಂಟನೇ ವಯಸ್ಸಿನಿಂದಲೂ ಈ ಸಂಸಾರದ ಸುಖ,ದುಃಖ,ಸಾವು,ನೋವುಗಳನ್ನು ನೋಡುವಾಗ, ಅನೇಕ ಪ್ರಶ್ನೆಗಳು ಏಳುತ್ತಿದ್ದವು. ಸಾವು ಎಂದರೇನು? ಸಾವಿನ ನಂತರದ ಜೀವನವೇನು? ಈ ಕೊನೆಯಿಲ್ಲದ ಹುಟ್ಟು ಸಾವುಗಳ ಚಕ್ರ ಕೊನೆಗಾಣುವುದೆಂತು? ಕಷ್ಟಗಳಲ್ಲಿ ಸಿಕ್ಕಿಹಾಕಿಕೊಳ್ಳುವುದು ಗೊತ್ತಿದ್ದರೂ ಎಲ್ಲರೂ ಯಾಕೆ ಮದುವೆ ಮಾಡಿಕೊಳ್ಳುತ್ತಾರೆ? ಶಾಶ್ವತ ಸುಖ ಯಾವುದು? ಸ ಏಕೋ ಬ್ರಹ್ಮಣ ಆನಂದಾ: ಎಲ್ಲಿ ಮತ್ತು ಹೇಗೆ ಸಿಗುತ್ತದೆ? ಹೀಗೆ ಪುಂಕಾನುಪುಂಕವಾಗಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದ. ಅವನ ಕೆಲವು ಪ್ರಶ್ನೆಗಳಿಗೆ ಸರಳವಾಗಿ ಅವನಿಗೆ ತಿಳಿಯುವಂತೆ ಅವನ ತಂದೆ ಸೋಮಯಾಜಿಗಳು ಹೇಳುತ್ತಿದ್ದರು.


ಆದರೆ ಇವನು ಬೆಳೆದಂತೇ, ಇವನ ಆಧ್ಯಾತ್ಮಿಕ ಜ್ಞಾನದ ದಾಹವೂ ಹೆಚ್ಚಾಗಿ, ತನ್ನ ಕಾಲೇಜಿನ ಸಂಸ್ಕೃತದ ಗುರುಗಳಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಪ್ರಾರಂಭಿಸಿದ. ಅವರಿಂದ,ಆಧ್ಯಾತ್ಮವೆಂಬುದು ಕೇವಲ ಪುಸ್ತಕದ ಬದನೆಕಾಯಿಯಲ್ಲ. ಅದನ್ನು ಅನುಭವದ ಮೂಲಕ ಮಾತ್ರ ಪಡೆದುಕೊಳ್ಳಬೇಕು,ಈ ಅನುಭವ ಪಡೆಯಲು ಸದ್ಗುರುವಿನ ಮಾರ್ಗದರ್ಶನ ಒಂದೇ ದಾರಿ ಎಂದು ತಿಳಿದುಕೊಂಡ ಸೂರ್ಯ, ಆ ಗುರುವನ್ನು ಅರಸುತ್ತಾ, ಹಿಮಾಲಯದತ್ತ ಹೊರಟ.


ಕಾಲೇಜು ವಿದ್ಯಾಭ್ಯಾಸವನ್ನು ಒಂದು ಹಂತಕ್ಕೆ ನಿಲ್ಲಿಸಿ, ತನಗೂ ಈ ಲೌಕಿಕ ವಿದ್ಯೆಗೂ ಆಗಿಬರುವುದಿಲ್ಲ ತಾನು ತನ್ನ ಅಂತರಂಗದ ಜ್ಞಾನ ಸಾಧನೆಗಾಗಿ ಗುರುವನ್ನು ಹುಡುಕಲು ಹೊರಡುತ್ತೇನೆ ಎಂದು ಮನೆಯಲ್ಲಿ ತನ್ನ ತಂದೆ ತಾಯಿಯ ಎದುರಿಗೆ ಹೇಳಿದಾಗ, ಅವನ ಅಮ್ಮ ಗೊಳೊ ಎಂದು ಅತ್ತರೆ,ತಂದೆ ಮಗನ ಅಪರಿಮಿತವಾದ ಆಧ್ಯಾತ್ಮಿಕ ಜ್ಞಾನದಾಹವನ್ನು ಪರಿಗಣಿಸಿ, ಮನಸ್ಸಿಲ್ಲದ ಮನಸ್ಸಿನಿಂದ ಅವನಿಗೆ ಒಪ್ಪಿಗೆ ಕೊಟ್ಟು, ಆಶಿರ್ವದಿಸಿಬೀಳ್ಕೊಟ್ಟಿದ್ದರು. ಎಲ್ಲ ಸಿದ್ಧತೆಗಳೊಂದಿಗೆ ಮಿತವಾದ ಲಗ್ಗೇಜ್ ಹಿಡಿದು, ದೆಹಲಿಯ ಟ್ರೈನ್ ಹತ್ತಿದ್ದ.


ಈಗ ಅವನು ಹರಿದ್ವಾರದ ಕಡೆ ಹೊರಟಿದ್ದಾನೆ. ಹರಿದ್ವಾರ್ ಮತ್ತು ಹೃಶೀಕೇಶ್ ನಲ್ಲಿ ಈ ರೀತಿಯ ಆಧ್ಯಾತ್ಮ್ ಸಾಧಕರು ಬಹಳ ಜನರು ಇದ್ದಾರೆ ಎಂದು ಕೇಳಿ ತಿಳಿದಿದ್ದ ಅವನು ಜ್ಞಾನ ಗುರುವನ್ನು ಅರಸುತ್ತಾ ಹೊರಟ.

ಬೆಳಗಿನ ಝಾವ ಟ್ರೈನ್ ಹರಿದ್ವಾರ ತಲುಪಿದಾಗ, ಮೊದಲು ಗಂಗಾನದೀ ತೀರಕ್ಕೆ ಹೋಗಿ, ಗಂಗೆಯಲ್ಲಿ ಮಿಂದು, ಅಲ್ಲಿರುವ ಗುಡಿ ಗೋಪುರಗಳನ್ನು ಸುತ್ತಿದ. ಅಂದು ಸಂಜೆಯ ಗಂಗಾರತಿಯನ್ನು ನೋಡಿ ಕಣ್ತುಂಬಿಕೊಂಡ. ದೂರದ ಹಿಮಾಲಯ ಪರ್ವತ ಶ್ರೇಣಿಗಳನ್ನು ದಿಟ್ಟಿಸುತ್ಟಾ, ಕಣ್ಣು ಮುಚ್ಚಿ ಕುಳಿತ.


ಹರಿದ್ವಾರದಲ್ಲಿ ಸಂಜೆಯ ಗಂಗಾರತಿಗೆ ಸಾಲುಸಾಲಾಗಿ ಹಿಂಡು ಹಿಂಡಾಗಿ ಬರುತ್ತಿದ್ದ ಕಾವಿಧಾರಿಗಳನ್ನು ನೋಡುತ್ತ, ಅವನಿಗೆ ತನ್ನಂತೆಯೇ ತುಂಬ ಮಂದಿ ಇದ್ಡಾರೆ ಎನಿಸಿ ಸಮಾಧಾನವಾಯಿತು. ಸುಮಾರು ಮಠ ಮಂದಿರಗಳಲ್ಲಿ ಅಂತಹ ಸಂನ್ಯಾಸಿಗಳೆ ತುಂಬಿರುತ್ತಿದ್ದರು. ಆದರೆ ಇವರಲ್ಲಿ ಎಷ್ಟು ಮಂದಿ ನಿಜವಾದ ಜ್ಞಾನ ಪಿಪಾಸುಗಳೆಂದು ತಿಳಿಯಲು ಅವನಿಂದ ಆಗಲಿಲ್ಲ. ಒಂದೆರಡು ದಿನಗಳು ಹರಿದ್ವಾರದಲ್ಲಿದ್ದು,ಹೃಶೀಕೇಶಕ್ಕೆ ಹೋದ. ಅದಂತೂ ಪ್ರಕೃತಿಯ ಮಧ್ಯದಲ್ಲಿರುವ ಸುಂದರ ನಗರ. ಸುತ್ತಲೂ ಹಿಮಾಲಯದ ಶ್ರೇಣಿಗಳು, ಮಧ್ಯದಲ್ಲಿ ಹರಿಯುವ ಗಂಗೆ, ಅನೇಕ ಸಾಧಕರೂ ಸಿದ್ಧರೂ ಇಂದಿಗೂ ಆಶ್ರಮಗಳನ್ನು ಮಾಡಿಕೊಂಡು ಯೋಗ ಧ್ಯಾನವನ್ನು ಹೇಳಿಕೊಡುತ್ತಿದ್ದಾರೆ ಎಂಬ ವಿಷಯವನ್ನು ತಿಳಿದುಕೊಂಡ ಸೂರ್ಯ,ಅಲ್ಲಿಯ ಓಂಕಾರಾಶ್ರಮಕ್ಕೆ ಹೋದ.


ದೇಶ ವಿದೇಶಗಳಿಂದ ಬಂದಿದ್ದ ಅನೇಕ ಪಿಪಾಸುಗಳು ತಮ್ಮ ಅಭ್ಯಾಸದಲ್ಲಿ ತೊಡಗಿದ್ದರು. ವಿಶಾಲವಾದ ಆಶ್ರಮದಲ್ಲಿ,ಸಣ್ಣಸಣ್ಣ ಕುಟೀರಗಳು, ಅಲ್ಲಿಯ ಬ್ರಹ್ಮಾನಂದ ಸ್ವಾಮೀಜಿಯವರು ಶ್ರೀರಾಮಕೃಷ್ಣ ಮಠದಿಂದ ಬಂದವರೆಂದು ತಿಳಿಯಿತು. ಸೂರ್ಯ ಒಂದು ಕುಟೀರದಲ್ಲಿ ಉಳಿದ. ಪ್ರತಿದಿನ ಯೋಗ,ಧ್ಯಾನ,ಪ್ರವಚನಗಳು,ಅಧ್ಯಯನ ಶಿಬಿರಗಳು ಎಲ್ಲವೂ ತುಂಬಾ ವ್ಯವಸ್ಥಿತವಾಗಿ ನಡೆಯುತ್ತಿದ್ದವು. ಬೃಹತ್ತಾದ ಗ್ರಂಥಾಲಯದಲ್ಲಿ, ಅಧ್ಯಾತ್ಮಿಕ ಗ್ರಂಥಗಳಿದ್ದವು.ಅವುಗಳನ್ನು ಓದಿ,ಸ್ವಾಮೀಜಿಯವರೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬಹುದಾಗಿತ್ತು. ಈ ಆಶ್ರಮವನ್ನು ನೋಡಿದ ಸೂರ್ಯನಿಗೆ, ತಾನು ಬಂದಿರುವ ಜಾಗ ಸರಿಯಾಗಿದೆ ಅನ್ನಿಸತೊಡಗಿತು. ಕೆಲವೇ ದಿನಗಳಲ್ಲಿ ಅಲ್ಲಿಯ ಸ್ವಾಮಿಜಿಗೆ ಇವನು ಅಚ್ಚುಮೆಚ್ಚಿನ ಶಿಷ್ಯನಾದ. ಅವರು ಇವನ ಮನಃ ಪಕ್ವತೆಯನ್ನು ತಿಳಿದು,ಯೋಗ ಮಾರ್ಗದ ಧೀಕ್ಷೆಯನ್ನು ನೀಡಿದರು. ರಾಜಯೋಗದ ಮಾರ್ಗದಲ್ಲಿ ಭಕ್ತಿಯೋಗದ ಮೂಲಕ ಭಗವಂತನನ್ನು ಸೇರಬಹುದಾದ ಮಾರ್ಗವನ್ನು ಅವನಿಗೆ ಉಪದೇಶಿಸಿದರು.ಆಧ್ಯಾತ್ಮಿಕ ಜ್ಞಾನವನ್ನು ಸಂಸಾರದೊಳಗಿದ್ದೂಸಾಧಿಸಬಹುದು,ಎಲ್ಲರೂ ಸಂನ್ಯಾಸಿಗಳಾಗಬೇಕಾದ ಅವಶ್ಕತೆಯಿಲ್ಲ ವೆಂಬುದನ್ನು ಅವನಿಗೆ ಮನದಟ್ಟು ಮಾಡುತ್ತಾ ಬಂದರು.

"ಈ ಜೀವನವೆಂಬ ಯಜ್ಞ್ಯದಲ್ಲಿ ,ನಿಶ್ಕಾಮಕರ್ಮವೆಂಬ ಹವಿಸ್ಸನ್ನು ಭಗವಂತನಿಗೊಪ್ಪಿಸುತ್ತಾ, ನಾವು ಮಾಡುವ ಎಲ್ಲ ಕರ್ಮಗಳನ್ನೂ ಅವ ನಿಗರ್ಪಿಸಿ,ಫಲಾಫಲಗಳನ್ನು ಅವನಿಗೆ ಬಿಟ್ಟು, ಅವನಲ್ಲಿ ಭಕ್ತಿಯೋಗವನ್ನು ಸಾಧಿಸುತ್ತಾ,ಹೋದಾಗ, ನಮ್ಮ ಸಾಧನೆಗೆ ತಕ್ಕ ಫಲವನ್ನು ಅವನೇ ಕೋಡುತ್ತಾನೆ. ಹೀಗಾಗಿ ಭಗವಂತನನ್ನು ಸೇರಲು ಗೃಹಸ್ಥಾಶ್ರಮದಲ್ಲೂ ಸಾಧ್ಯವಿದೆ.ಯಾವಾಗ ನಮ್ಮ ಮನಸ್ಸು ಭಗವಂತನಲ್ಲಿ ಲೀನವಾಗಿ ಎಲ್ಲವೂ ಅವನದೆಂದು ಒಪ್ಪಿಸುತ್ತೇವೋ,ಅವನು ಭಕ್ತರನ್ನು ತನ್ನವನೆಂದು ನಮ್ಮಒಳಗೇ ಭದ್ರವಾಗಿ ನಿಲ್ಲುತ್ತಾನೆ. ಅಂತಹ ಒಂದು ಸ್ಥಿತಿಯಲ್ಲಿ ಭಕ್ತ ಹಾಗೂ ಭಗವಂತನಲ್ಲಿ ಯಾವುದೆ ಭೇದವಿರದೆ,ಅವನೇ ನಾನು,ನಾನೇ ಅವನು ಎಂಬ ತಾದಾತ್ಮ್ಯತೆ ಉಂಟಾಗುತ್ತದೆ.ಇದೇ ’ಅಹಮ್ ಬ್ರಹ್ಮಾಸ್ಮಿ".


ಸೂರ್ಯ ಬ್ರಹ್ಮಾನಂದರ ಮಾರ್ಗದರ್ಶನದಲ್ಲಿ ಅಧ್ಯಾತ್ಮ ಸಾಧನೆಯಲ್ಲಿ ಮುಂದುವೆರೆಯುತ್ತಿದ್ದ. ತಾನು ಅರಸುತ್ತಿದ್ದ ಸದ್ಗುರುಗಳು ಇವರೇ ಎಂದು ಮನಗಂಡಿದ್ದ.ಅವನ ಅಂತರಂಗದ ತಳಮಳಗಳು ಕಡಿಮೆಯಾಗುತ್ತಾ ಬಂದವು.ಅನೇಕ ವರ್ಷಗಳು ಅಲ್ಲೇ ಸಾಧನೆಯಲ್ಲಿ ತನ್ಮಯನಾಗಿದ್ದ. ಇದರ ಮಧ್ಯದಲ್ಲಿ, ಅವನ ತಂದೆ ತಾಯಿಯರು ಇವನನ್ನು ಮನೆಗೆ ಕರೆದುಕೊಂಡು ಹೋಗಲು ಬಂದಾಗ, ಅವನು ನಿರಾಕರಿಸಿದ. ಗೃಹಸ್ಥಾಶ್ರಮದ ಬಗ್ಗೆ ಗುರುಗಳು ಎಷ್ಟೆ ತಿಳಿಸಿ ಹೇಳಿದರೂ, ಅವನು ಗೃಹಸ್ಥನಾಗಲು ಒಪ್ಪಲಿಲ್ಲ. ಕಡೆಗೆ ಅವನ ತಂದೆ ತಾಯಿಯರು ಬಂದ ದಾರಿಗೆ ಸುಂಕವಿಲ್ಲದಂತೆ ಹಿಂತಿರುಗಿದರು.

ಮುಂದೆ ಅನೇಕ ವರ್ಷಗಳು ಗುರುವಿನ ಚರಣಗಳಲ್ಲಿ ಕುಳಿತು, ತನ್ನ ಸಾಧನೆಯನ್ನು ಮುಂದುವರಿಸುತ್ತಾ, ಆಶ್ರಮದ ಎಲ್ಲಾ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ, ಅತ್ಯಂತ ಶಾಂತವಾಗಿ ನೆಮ್ಮದಿಯಿಂದ

ಇದ್ದ ಸೂರ್ಯನಿಗೆ ,ಅವನ ಮನ:ಪಕ್ವತೆ ಯನ್ನು ದೃಢೀಕರಣ ಮಾಡಿಕೊಂಡು ,ಒಂದು ಶುಭ ಮುಹೂರ್ತದಲ್ಲಿ,ಬ್ರಹ್ಮಾನಂದರು ಆ ಆಶ್ರಮದ ಕಿರಿಯ ಸ್ವಾಮೀಜಿಯಾಗಿ ಧೀಕ್ಷೆ ನೀಡಿ,ಜ್ಞಾನ ಜನ್ಮವನಿತ್ತು"ಆನಂದಕಂದ"ನೆಂದು ನಾಮಕರಣ ಮಾಡಿದರು.


Rate this content
Log in

Similar kannada story from Classics