ವಿಧವೆ
ವಿಧವೆ
ಚಂದಮಾಮನ ನೋಡುತ
ಆಡುತ್ತಿದ್ದ ಪುಟ್ಟ ಸೋದರಿ
ಎಳೆಯವಯಸಲಿ
ಗಂಡನ ಮನೆಯ ಹಾದಿಹಿಡಿದಳು
ಆ ಕಿನ್ನರಿ...!
ಮೈಯ ಮೇಲೆ ಬಿಳಿಯ ಸೀರೆ
ಅವಳಲ್ಲ ಮಿನುಗು ತಾರೆ
ಬಣ್ಣದ ಬಟ್ಟೆ ತೊಟ್ಟು
ರಂಗಿನ ಬೊಟ್ಟು ಇಟ್ಟು
ಸಂಭ್ರಮಿಸುವ ವಯಸದು
ವಿಪರ್ಯಾಸ...
ಶ್ರೀಮತಿ ಅದೊಂದುವಾರದಲಿ
ವೃದ್ಧ ಶ್ರೀಯನು ಕಳೆದುಕೊಂದು
ಮತಿಯಿಲ್ಲದೆ ಕೂತಿದ್ದಳಾಕೆ
ಹಣೆಯ ಮೇಲೆ
ಮಾಸಿಹೋದ ಕುಂಕುಮ
ಸುಂದರ ಜಡೆಯಲಿ ಕಂಡದ್ದು
ಹೂಗಳಿಲ್ಲದ ಬರೀ ದಾರ
ಚೂರಾದ ಗಾಜಿನ ಬಳೆಗಳಲಿ
ಕಂಡಿತ್ತು... ರಕ್ತದ ಚಿತ್ರ
ಬೊಬ್ಬಿಡುವಂತಾದರೂ
ಬಿಕ್ಕಳಿಸುತ್ತಿದ್ದಳು ಒಬ್ಬೊಬ್ಬಳೇ
ತವರ ನೆನದರೆ ಕಾಣುವುದು ಅತ್ತಿಗೆಯ ಕೆಂಪು
ನೋಟ ಗಂಡನಿಲ್ಲದ ಮನೆಯಲಿ
ಅವಳಿಗೆ ತಾತ್ಸಾರದ ಕೂಟ
ಬೊಂಬೆಯ ಹಿಡಿದು ಆಡಬೇಕಿತ್ತು
ಚಂದದ ಆಟ
ಆದರೆ ವಿಧಿಯು ಕಲಿಸಿತ್ತು ಆಕೆಗೆ
ಸಹಿಸಲಾಗದ ಪಾಠ
ರೀತಿ ರಿವಾಜುಗಳು ನೀಡಿತ್ತು
ವಿಧವೆ ವಿಧವೆಯ ಪಟ್ಟ...!