ಸಂಸಾರ ಒಂದು ಜೋಡೆತ್ತಿನ ಗಾಡಿ
ಸಂಸಾರ ಒಂದು ಜೋಡೆತ್ತಿನ ಗಾಡಿ


ಮದುವೆಯ ಸಂಬಂಧ ಜೋಡೆತ್ತಿನ ಗಾಡಿಯಿದ್ದಂತೆ
ಎರಡೂ ಎತ್ತುಗಳು ಗಾಡಿಯನ್ನ ಒಟ್ಟಿಗೆ ಎಳೆದಂತೆ
ದಂಪತಿಗಳಿಬ್ಬರೂ ಸೇರಿ ಸಂಸಾರವನ್ನ ನಡೆಸುವುದೆಂದರ್ಥ;
ಎರಡು ಎತ್ತುಗಳ ಬದಲು ಒಂದು ಕೋಣವಾದಾಗ
ಎತ್ತು ಏರಿಗೆಳೆದರೆ ಗಾಡಿಯನ್ನ ಕೋಣ ನೀರಿಗೆಳೆವುದು
ಆಗ ಸಂಸಾರದ ನೌಕೆ ಸಾಗುವುದೆಲ್ಲಿಗೆ?
ಇಬ್ಬರು ದಂಪತಿಗಳಲ್ಲಿ ಯಾರು ಎತ್ತು ಯಾರು ಕೋಣ;
ಎಂಬುದನ್ನ ತೀರ್ಮಾನಿಸಲೆಂದು ಇಬ್ಬರೂ
ಕಚ್ಚಾಡುವುದರಲ್ಲಿ ಯಾವ ಉಪಯೋಗವಿಲ್ಲ;
ದಂಪತಿಗಳೀರ್ವರೂ ಒಟ್ಟಿಗೆ ಕುಳಿತು ವಿಮರ್ಶಿಸಿ
ಇಬ್ಬರಲ್ಲಿ ಒಬ್ಬರು ಕೋಣವಾಗಿರುವುದರ ಅರಿವನ್ನ
ಪೂರ್ಣವಾಗಿ ಪಡೆದುಕೊಂಡರೆ ಬಹು ಉಪಯೋಗವಾದೀತು;
ಇಬ್ಬರೂ ಒಮ್ಮೆ ಎತ್ತುಗಳಂತೆ ಏರಿಗಿಳಿದು ದುಡಿದ ಮೇಲೆ
ಮತ್ತೊಮ್ಮೆ ಇಬ್ಬರೂ ಕೋಣಗಳಂತೆ ನೀರಿಗಿಳಿದು ಉಲ್ಲಾಸ ಪಡಲು
ಸಂಸಾರದ ನೌಕೆ ಅಡೆತಡೆಯಿಲ್ಲದೆ ಸುಖವಾಗಿ ನಡೆದೀತು;
ದಂಪತಿಗಳೆಂದರೆ ಒಬ್ಬ ಹೆಣ್ಣು ಇನ್ನೊಬ್ಬ ಗಂಡು ಮಾತ್ರವಲ್ಲ
ಇಬ್ಬರ ಗುಣಗಳೂ ಇಬ್ಬರಲ್ಲಿಯೂ ಇರುವುದ ತಿಳಿದು
ಇಬ್ಬರ ಗುಣಗಳ್ಳನ್ನ ಒಬ್ಬರನೊಬ್ಬರು ಗೌರವಿಸುವಂತಿರಬೇಕು;
ಎರಡೂ ಗುಣಗಳು ಒಬ್ಬರಲ್ಲಿ ಸಮಾನ ಸ್ಥಿತಿಯಲ್ಲಿರಲು
ಅವರ ಜೀವನ ಸದಾ ಸುವ್ಯವಸ್ಥೆಯಿಂದಿರುವಂತೆ
ಹೆಣ್ಣು ಗಂಡುಗಳಿಬ್ಬರೂ ತಮ್ಮ ಪಾತ್ರಗಳಿಗೆ ಬದ್ಧರಾಗಿರಬೇಕು;
ಸಮಾನತೆಯೆಂದರೆ ಇಬ್ಬರೂ ತಮ್ಮ ಪಾತ್ರಗಳನ್ನ
ಮನದಿಚ್ಛೆಯಂತೆ ಅದಲು ಬದಲು ಮಾಡಿಕೊಳ್ಳುವಂತದ್ದಲ್ಲ
ಪ್ರಾಕೃತಿಕವಾದ ತಮ್ಮಇರುವಿಕೆಯನ್ನ ಪ್ರೀತಿಸುವುದೆಂದರ್ಥ;
ಇರುವಿಕೆಯನ್ನ ಇದ್ದ ಹಾಗೆ ಪ್ರೀತಿಸುವುದೆಂದರೇನು?
ಅದು ಪರಸ್ಪರ ವಿಶ್ವಾಸ, ಸ್ವಾತಂತ್ರ್ಯ, ಗೌರವಗಳಿಂದ ಕೂಡಿದ,
ಕಲ್ಪನೆ ರಹಿತ ಮುಕ್ತ ಮನಸ್ಸುಗಳ ನಡುವಿನ ನೇರ ಸಂಬಂಧ.