ರಾತ್ರಿ ಪಾಳಿ
ರಾತ್ರಿ ಪಾಳಿ

1 min

3.1K
ಮಂಚಿಗೆಯ ಮೇಲೆ ಕುಳಿತು
ದೂರ ದಿಗಂತಕೆ ಕೇಳುವ ಹಾಗೆ
ಹೊಲಕೆ ಬಂದ ಕಾಡು ಮೃಗಗಳು
ಬೆದರುವ ಹಾಗೆ ಕೇಕೆ ಹಾಕುತ್ತಿದ್ದೆ!
ಎಂದು ಬೇಸರದಿ ಕುಳಿತವನಲ್ಲ
ರಾತ್ರಿ ಪಾಳಿ ನನಗೆ ಹೊಸತಲ್ಲ...
ಬಟ್ಟೆಯಲಿ ಮೈತೂರಿಸಿಕೊಂಡು
ಅವಸರದಿ ಓಡುವೆನು ಕೂಲಿಗಾಗಿ
ತಿಂಗಳ ಸಂಬಳಕೆ ನೌಕರ ನಾನು
ಕೇಕೆ ಹಾಕುವ ಉತ್ಸಾಹವಿಲ್ಲ
ಮುಖದ ಮೇಲೆ ನಿಜ ನಗುವಿಲ್ಲ!
ರಾತ್ರಿ ಕನಸೆಂಬುವುದು ನನಗೆ
ಹಗಲುಗನಸಾಗಿಹುದು!!
ಇಡೀ ರಾತ್ರಿ ಅಲೆಯುವೆನು
ರವಿಯ ಪರಿಚಯ ನನಗಿಲ್ಲ
ಶಶಿಯೊಂದಿಗೆ ನನ್ನ ದಿನವೆಲ್ಲ!
ಊರು ನೆನಪಾದಾಗಲೆಲ್ಲ
ಒಳಗೊಳಗೆ ಮರುಗುವೆನು
ಕತ್ತಲಿನದು ಸಂಪೂರ್ಣ ಸಹಕಾರ
ತೋರಗೊಡದು ಯಾರಿಗೂ ನನ್ನ ಕಣ್ಣೀರ!