ಛಲಗಾತಿ
ಛಲಗಾತಿ
ಸಂಪ್ರದಾಯದ ಸಂಕೋಲೆಯಲ್ಲಿ ಸಿಕ್ಕಿ
ಹದಿನಾಲ್ಕರ ಬಾಲೆಗೆ ಆಗಿತ್ತು ವಿವಾಹ!
ಗುರುತಿರದ ದಾರಿಯಲ್ಲಿ ಸಾಗಿತ್ತು
ದೂರದೂರಿಗೆ ಪತಿಯೊಡನೆ ಪಯಣ.
ನೋವಿತ್ತು-ನಲಿವಿತ್ತು, ಕೊಂಕಿತ್ತು-ಮುದ್ದಿತ್ತು
ಅತ್ತೆ-ನಾದಿನಿಯ ಕಾಟಕ್ಕೆ ಸಂಸಾರ ಬೇರಾಗಿತ್ತು!
ರಟ್ಟೆಯಲಿ ಬಲವಿತ್ತು,ದುಡಿದು ತಿನ್ನುವ ಛಲವಿತ್ತು
ಅಂತೂ ಜೀವನ ಸಾಗುತ್ತಲಿತ್ತು.
ಶಾಂತ ಸಂಸಾರ ಸಾಗರದಲ್ಲಿ
ಬಾಳನೌಕೆ ತೇಲುತ್ತಾ ಸಾಗಿತ್ತು
ತಮ್ಮಿಬ್ಬರ ಒಲವಿನ ಗುರುತಾಗಿ
ಪುಟ್ಟ ಜೀವವೊಂದು ಜನಿಸಿತ್ತು!
ಸುಖ ಸಂಸಾರದಲ್ಲಿ ಬಿರುಗಾಳಿ ಬೀಸಿತ್ತು
ಬಿರುಗಾಳಿ ನಿಂತಾಗ ಪತಿಯ ಜೀವ ಹಾರಿತ್ತು!
ಕೈಯಲ್ಲೊಂದು ಕಂಕುಳಲ್ಲೊಂದು ಮಗುವಿತ್ತು
ದಿಕ್ಕು ತೋಚದಾಗಿ ಕಣ್ಣಿಗೆ ಮಬ್ಬು ಕವಿದಿತ್ತು.
ಹದಿಹರೆಯದ ಕನಸು ಇಪ್ಪತ್ನಾಲ್ಕು ವರ್ಷಕ್ಕೆ ನಿಂತಿತ್ತು!
ನೆರೆಹೊರೆಯವರ ಸಹಕಾರವಿತ್ತು
ತನ್
ನವರ ತಿರಸ್ಕಾರವಿತ್ತು!
ಅವಡುಗಚ್ಚಿ ಜೀವನ ಸಾಗಿಸಲೆಬೇಕಿತ್ತು...
ನಿದ್ರೆಯೆಂಬುದು ಮಾಯವಾಗಿತ್ತು
ದುಡಿಮೆಯೊಂದೆ ಗುರಿಯಾಗಿತ್ತು
ಕಲ್ಲು ಮುಳ್ಳು ತುಂಬಿದ ದಾರಿಯಿತ್ತು
ಮುಳ್ಳು ಚುಚ್ಚಿದ ಕಾಲು ಕುಂಟುತ್ತಿತ್ತು
ಕಣ್ಣಿಂದ ಮುಸಲಧಾರೆ ಹರಿಯುತ್ತಿತ್ತು
ಹಗಲು ರಾತ್ರಿಯ ಭೇದ ಮರೆಯಾಗಿತ್ತು
ಮಕ್ಕಳಿಗೆ ಶಿಕ್ಷಣವು ಶುರುವಾಗಿತ್ತು
ಬೆಳಗಿಂದ ಬೈಗಿನವರೆಗೆ ಅವರ ದಾರಿ ಕಾಯುತ್ತಿತ್ತು
ಸಂಜೆ ಬರಲು ಅವರ ತಬ್ಬಿ ಹೃದಯ ಹಿಗ್ಗುತ್ತಿತ್ತು!
ಮಕ್ಕಳಿಗೆ ಹೊಸ ಬಟ್ಟೆ ಕೊಡಿಸಿತ್ತು
ಹೊಸ ಸೀರೆಗೆ ಕಾಸು ಕಮ್ಮಿಯಿತ್ತು
ಮಕ್ಕಳ ಸಂತಸದಲಿ ದುಃಖ ಮರೆಯಾಗಿತ್ತು
ಪತಿಯ ನೆನೆದು ಕಣ್ಣು ತುಂಬುತ್ತಿತ್ತು
ಅಂತೂ ಮಗನಿಗೆ ಪದವಿ ದೊರಕಿತ್ತು
ಬಂಧು ಬಾಂಧವರ ಪ್ರಶಂಸೆಯೂ ಸಿಕ್ಕಿತ್ತು
ಟೀಕೆ - ಟಿಪ್ಪಣಿಗೆ ಕಿವಿ ಕಿವುಡಾಗಿತ್ತು!
ಛಲಗಾತಿಯ ಬಾಳನೌಕೆ ದಡ ಸೇರಿತ್ತು!