ಮನುಜ ಮತ್ತೆ ಕಾಗೆ
ಮನುಜ ಮತ್ತೆ ಕಾಗೆ


ಮನುಜ:
ಕಾಗೇ, ನಿಂಗೆ ಗೊತ್ತಿಲ್ಲ ನೀನು ಕಡುಗಪ್ಪು
ನಿನ್ನ ಕಂಠ ಕರ್ಣ ಕಠೋರ
ಮುಟ್ಟಿಸಿಕೊಳ್ಳಲು ನೀನು ಅಯೋಗ್ಯ
ನೀನು ಅಪಶಕುನ!
ಸತ್ತವರ ಪಿಂಡ ತಿನ್ನಲಷ್ಟೆ ನೀನು ಯೋಗ್ಯ
ಕೋಗಿಲೆಯ ಕಂಠವದು ನಿನಗೆಲ್ಲಿ?
ಗುಡಿಯೊಳಕ್ಕಿಲ್ಲ ನಿನಗೆ ಪ್ರವೇಶ!
ನಿನ್ನ ಜೀವನವೇ ನಿರರ್ಥಕ!
ಕಾಗೆ:
ಸ್ವಚ್ಚಂದ ಆಗಸದಲಿ ಮನಬಿಚ್ಚಿ ಹಾರುವೆ
ನಿನ್ನ ಗುಡಿ ಪ್ರವೇಶ ನನಗೇಕಯ್ಯ?
ಒಂದಗುಳು ಕಂಡೊಡನೆ ನನ್ನವರ ಕೂಗುವೆ
ನಮ್ಮವರಿಗೆ ನನ್ನ ಭಾಷೆ ಗೊತ್ತಿದೆ!
ಪಿಂಡ -ನೈವೇದ್ಯಗಳ ಭೇದವಿಲ್ಲ
ಮೇಲು ಕೀಳೆನಲು ನಾ ಮನುಜನಲ್ಲ!
ಕೋಗಿಲೆಯ ಕಂಠ ಇಂಪಾದರೆನಗೇನು?
ಕೋಗಿಲೆಯ ಮೊಟ್ಟೆಗೂ ಕಾವು ಕೊಡುವೆ ನಾನು!
ಪರನಿಂದೆ,ತೋರ್ಪಡಿಕೆ ನನಗೇಕಯ್ಯ?
ನಿಸ್ವಾರ್ಥ ಸೇವೆಯೇ ನನ್ನ ಕಾಯಕ
ನನ್ನ ಜೀವನವೇ ಸಾರ್ಥಕ!