ಮೂಲಭೂತ
ಮೂಲಭೂತ
ಕ್ಷೀರದ ಕಡಲೇ ನೀ
ಉಕ್ಕಿ ಹರಿಯುತಿರು
ಬಡವರ
ಉದರನದಿಯಲಿ I
ಆದರೆ
ಕಲ್ಲಿನ ದೇವರ
ಕೆಳಗಡೆಯಲ್ಲ II
ಹಣವೇ....ನೀ
ಹಂಚಿಕೆಯಾಗು
ಬದುಕ ಕನಸ ಹೊತ್ತ
ಹೊತ್ತೊತ್ತಿಗೂ
ಕಾಯುತಿರುವವರಲಿ I
ಆದರೆ
ಕಸದ ರಾಶಿಯಂತೆ
ಗುದ್ದಲಿಗಳಲಿ ತುಂಬುವ
ಭಂಡಾರಗಳ
ಕೋಣೆಗಳಲ್ಲಲ್ಲ II
ಓ ಅನ್ನವೇ ನೀ
ವರವಾಗು ಹಸಿದ
ಒಡಲುಗಳಿಗೆ I
ಆದರೆ
ತುಂಬಿದಹಂಕಾರದಿ
ಎಸೆದ ಕಸದ
ತೊಟ್ಟಿಗಳಲ್ಲಲ್ಲ II
ವಸ್ತ್ರವೇ ನೀ
ಸ-ಮಾನ ವಾಗಿ
ಆವರಿಸು ಎಲ್ಲೆಡೆ I
ಚಿಂದಿ ಇದ್ದ ಕಡೆ
ಹೊದಿಕೆಯಾಗು I
ಆದರೆ
ಬೆತ್ತಲೆಗೊಳಿಸುವ
ಕಚ್ಚೆಹರುಕರ
ಕ್ರೂರ ಮನಸುಗಳ
ಕೈಗಳಲ್ಲಲ್ಲ II
ಮನೆಯೇ ನೀ
ಗುಡಿಸಿಲಾದರೂ
ಪರವಾಗಿಲ್ಲ
ನೆಮ್ಮದಿಯ ತಾಣವಾಗು I
ಬಿಸಿಲುಮಳೆಗಾಳಿಗೆ
ರಕ್ಷೆಯಾಗು I
ಆದರೆ
ನಿಲ್ಲದಿರು ಶ್ರೀಮಂತರ
ನೂರಾರು ಕೊಠಡಿಗಳ
ಚಂದದ
ಅರಮನೆಯಾಗಿಯೇ II
ಜ್ಞಾನವೇ ನೀ
ಹರಿಯುವ ನದಿಯಾಗು
ಸಾರ್ವತ್ರಿಕವಾಗಿ
ಎಲ್ಲೆಡೆ ಎಲ್ಲರಿಗಾಗಿಯೂ I
ಆದರೆ
ನಿಂತ ನೀರಾಗದಿರು
ವ್ಯಾಪಾರದ ವಸ್ತುವಾಗಿ
ಉಳ್ಳವರ ಪಾಲಾಗಿ
ಭಿನ್ನ ಭೇದ ಮಾಡದಿರು II
