ಕಟ್ಟುಪಾಡಿನ ರಂಗಿನಾಟ
ಕಟ್ಟುಪಾಡಿನ ರಂಗಿನಾಟ
ಕೈಯ ತಂಬಾ ರಂಗಿನ ಬಣ್ಣವ ಹಿಡಿದು
ಆಡಹೊರಟಿಹೆನು ನಾ ರಂಗಿನಾಟ
ಬಿಳಿಯ ಬಟ್ಟೆಯ ತುಂಬೆಲ್ಲಾ..
ತುಂಬಬೇಕು ಆ ಬಣ್ಣದ ಕಲೆಯೆಲ್ಲಾ......
ಸಂಭ್ರಮದ ನಡುವೆ ಬಿಕ್ಕಳಿಸುತ ಕೂತವಳನು ಕಂಡೆ
ಬಿಳಿಯ ಸೀರೆಯ ಉಟ್ಟು
ರಂಗಿನಾಟಕೆ ಸಿದ್ಧಳಾಗಿರುವಳೆಂದುಕೊಂಡೆ....
ಕೈ ಹಿಡಿದು ಬಾ ಎಂದೊಡೆ
ಕೈಕೊಡವಿ ಒಲ್ಲೆ ಎಂದಳಾಕೆ
ಹೆಚ್ಚು ಕಮ್ಮಿ ನನ್ನದೇ ಪ್ರಾಯ ಆಕೆಗೆ
ಪತಿಯ ಕಳೆದುಕೊಂಡ ಆ ಹೂವಿಗೆ
ಬಣ್ಣಗಳೊಳ ಸೇರುವುದು ನಿಷಿದ್ಧವಂತೆ
ಅಂಗೈ ಅಗಲ ಸೂರಿನಲಿ
ಬಣ್ಣದ ಕನಸ ಕಾಣಲು ಬೇಲಿ ಇಹುದಂತೆ
ನನಗರ್ಥವಾಗದ ವಿವರಣೆಗಳ
ವಿವರಿಸುವವರಾರು.....
ಬದುಕು ಒಂದು ಬಣ್ಣದ ನೌಕೆ
ಬಣ್ಣವ ತೊಡಲು ಈ ಕಟ್ಟುಪಾಡುಗಳೇಕೆ
ಬಿಳಿ ಸೀರೆಯನುಟ್ಟ ಆಕೆಯ ಮರೆತುಬಿಡುವೆನೆಂದರೆ
ಮತ್ತೇ ಮತ್ತೇ...ಕನಸಲಿ ಬಂದು
ಕೇಳುತಿಹಳು ಹೇ ಕವಿ ಮನವೇ ..
ನೀನಾದರೂ ಹೇಳು...
ಬಣ್ಣಗಳ ಋಣ ನನಗಿಲ್ಲವೇ ಎಂದು.....
