ಭಾರತಾಂಬೆಯ ಮೊರೆ
ಭಾರತಾಂಬೆಯ ಮೊರೆ
ಅಂದು
ಸಂಕೋಲೆ ಕಳಚಿತು
ಸ್ವಾತಂತ್ರ್ಯ ಲಭಿಸಿತು
ವಿಜಯದಾ ಹೊನ್ನ ಕಳಶ
ಎನ್ನ ಮುಡಿ ಸೇರಿತು
ವಂದೇ ಮಾತರಂ ವಂದೇ ಮಾತರಂ
ಜೈಕಾರವೆನ್ನ ಕಿವಿದೆರೆಯ ಹೊಕ್ಕಿತು
ತ್ರಿವರ್ಣ ಧ್ವಜ ಹಾರಾಡಿತು
ಮಾತೃ ಭಕ್ತಿಯ ಮಹಾಪೂರ
ಎಲ್ಲೆಡೆಯೂ ಹರಿಯಿತು
ಅದ ಕಂಡ ಎನ್ನ ಮನ
ಸಂತಸದಿ ಅರಳಿತು
ಹೃದಯ ಹರುಷದಿ ಹಿಗ್ಗಿತು
ನಡುನಡುವೆ ಕಾಡಿತು
ಹುತಾತ್ಮ ಪುತ್ರರ ನೆನಪು
ಹೆತ್ತೊಡಲ ಕಲಕಿತು
ಮನ ಮಮ್ಮಲ ಮರುಗಿತು
ಅವರ ಹಡದೀ ಜನುಮ
ಸಾರ್ಥಕವ ಕಂಡಿತು
ಇಂದು
ವರುಷಗಳುರಿಳಿದವು
ದಶಕಗಳು ಮರಳಿದವು
ವಿಜ್ಞಾನ ಯುಗದೊಳು
ತಂತ್ರಜ್ಞಾನ ಮೆರೆಯಿತು
ಕೂಗಿಕರೆದವೆನ್ನ ಮಕ್ಕಳ
ವಿದೇಶೀ ಜಾಲಗಳು
ಎನಗೆ ಬೆನ್ನ ಹಾಕಿ ಹೊರಟರು
ತಾಯ ಮೊರೆಯ ಮರೆತರು
ತಾಯ ಸೇವೆಯ ಮರೆತರು
ಬಂದ
ಾರೋ? ಬಾರರೋ ?
ಹೋ ! ನನ್ನ ಹಸಿರುಡಿಗೆಯಲಿ
ರಕುತದೋಕುಳಿಯ ಕೆನ್ನೀರು
ಮತ್ತೆ ಹರಡುತಿದೆ ಇಂದು
ನನ್ನ ಗಡಿಗಾಗಿ ಹೋರಾಡಿ
ಎನ್ನ ಮಡಿಲ ಸೇರುತಿಹ
ವೀರ ಪುತ್ರರ ಕಂಡು
ದು:ಖದಿ ಭಾರವಾಗುತಿಹುದು
ನನ್ನ ಈ ಹೆತ್ತೊಡಲು
ಮುಂದೆ
ಎಪ್ಪತ್ತರ ಹರೆಯ ನನಗೆ
ಎನ್ನ ಶಕ್ತಿ ಅಡಗುತಿದೆ
ಕೃಶವಾಗುತಿದೆ ಒಡಲು
ಮತ್ತೊಮ್ಮೆ ಕಾಡುತಿಹುದು
ಪರರ ಸಂಕೋಲೆಯ ಭಯ
ನನ್ನ ಸುತ್ತ ಮುತ್ತಲು
ಸಿಡಿಗುಂಡು ಗಳ ರಣಕೇಕೆ
ನನ್ನ ಕಿವಿಗಳ ಸೀಳುತಿದೆ
ಅಸಹಾಯಕ ಮಕ್ಕಳ
ಆರ್ತನಾದ ಕೇಳುತಿದೆ
ನನ್ನ ಹೃದಯ ಮಡುಗಟ್ಟುತಿದೆ
ಭವಿತವ್ಯದ ಕಾರ್ಗತ್ತಲು
ಕಣ್ಣ ಮುಂದೆ ಸುಳಿಯುತಿದೆ
ದಾರಿ ಕಾಣದಾಗುತಿದೆ
ಓ ನನ್ನ ವೀರ ಪುತ್ರರೇ
ಆಲಿಸಿ ಎನ್ನ ಮೊರೆಯ
ನೂಕದಿರೆನ್ನ ಮಗದೊಮ್ಮೆ
ಪರರ ಸಂಕೋಲೆಯೊಳಗೆ