ಬದಲಾಗುವ ಬಣ್ಣದ ಓಕುಳಿಗೆ
ಬದಲಾಗುವ ಬಣ್ಣದ ಓಕುಳಿಗೆ
ಕಾಲಿಂಗ್ ಬೆಲ್ ನ
ಸದ್ದಿಗೆ ಮನೆಯಲ್ಲ ಕಂಪನ
ಎದ್ದನೋ,ಬಿದ್ದನೋ ಎನ್ನುತ್ತ
ಬಾಗಿಲತ್ತ ಓಟ
ಯಾರಿರಬಹುದು?
ಡೋರ್ ಓಪನ್ ಮಾಡ್ಲಾ,ಬೇಡ್ವಾ
ಗೊಂದಲ
ಮನದ ಕಿಟಕಿಯಲ್ಲಿ
ಇಣುಕಿ ನೋಡುವಂತಿದ್ದರೆ
ಎಷ್ಟು ಚೆನ್ನ!
ಕೆಟ್ಟ ಕನಸೊಂದು
ರಚ್ಚೆಹಿಡಿದು ಕುತಂತೆ
ಮುದ್ದು ಮಾಡಿ ಕತ್ತು ಕೊಯ್ಯದು
ನಂಬಿಕೆಗೆ ಮಸಿ ಬಳಿದವ
ಅವನಾಸ್ತಿಯೆಂದು ಬಂದಿದ್ದರೆ?
ಬಾಗಿಲು ತೆರೆದ ನೆವಕೆ
ಮತ್ತೆ ನಿಟ್ಟುಸಿರು ಬಿಡಲಾರೆ
ಅವನಿಗಾಗಿ ಕದ ತರೆಯಲಾರೆ
ಒಮ್ಮೆ ಮುಚ್ಚಿಹೋದ ಕದವದು
ಹೆಣ್ಣೆಂದರೆ ಅವಗೆ ಬಗುರಿಯಂತೆ
ಬೇಕೆಂದಾಗ ಉಕ್ಕಿ
ಬೇಡೆಂದಾಗ ಧಿಕ್ಕರಿಸಿವಂತೆ
ತಿಂದುಂಡ ಗಳಿಗೆಗೆ
ಮಂಚದ ಕಿರಿಚಾಟದ ಸದ್ದು
ಹತ್ತೂರಿಗೆ ಓಲಗ ನುಡಿಸಿದಂತೆ
ಮೈ ಮನಸ್ಸು ನಾರಿದಂತೆ
ತಿಂದು ತೇಗಿ ಛೀಮಾರಿ ಹಾಕಿ
ಸರಿಯಿಲ್ಲವೆಂದು ಎದ್ದು
ಹೋದವ ಮತ್ತೆ ಬರಬಹುದೇ
ನಿರೀಕ್ಷೆ ಸುಳ್ಳಾಗಬಹುದು
ಎಲ್ಲೊ ಮನದ ಮೂಲೆಯಲ್ಲಿ
ಸಮರ್ಪಿಸಿದ್ದು ಆತ್ಮವಂಚನೆಯಲ್ಲ
ಸಾಂಗತ್ಯ ಸುಳ್ಳಲ್ಲ
ವಿಷದಡುಗೆ ಉಣಬಡಿಸಿದವರಾರೋ
ನಂಜು ಮೈತುಂಬ
ಬಾಗಿಲಾಚೆ ಗುಸುಗುಸು ಮಾತು
ನೂರಾರು ಮಂದಿಯಂತೆ
ಅವರೆಲ್ಲ ಒಳನುಗ್ಗಿದರೇ
ಕಂಗಾಲಾದ ಜಿಂಕೆಗೆ
ಆಸರೆ ನೀಡುವವರಾರು?
ಅವನೊಬ್ಬ ನಯವಂಚಕ
ನಯವಾಗಿ ಮಂಕೆರೆದವ
ಒಮ್ಮೆ ಭಯ
ಏನಾದ್ರಾಗಲಿ
ನೀರಿಗೆ ಬಿದ್ದಾಗಿದೆ
ಮೋಸದಾಟಕೆ ತೆರೆಎಳೆವೆ
ಇನ್ನೆಷ್ಡು ದಿನ ಅವಿತಿರಲಿ
ಸಾಕಿನ್ನು ಶೋಷಣೆ
ಧೈರ್ಯ ಒಂದೆ ಸಾಕೆಂದು
ಬಾಗಿಲ ಚಿಲಕ ತೆಗೆದೆ
ಬಟ್ಟಲು ತುಂಬ ಬಣ್ಣಗಳು
ಮಸುಕಾದ ಬಣ್ಣಕೆ
ಜೀವತುಂಬಲು ಬಂದಂತಿತ್ತು
ಬಣ್ಣದ ರಂಗಿನಲಿ
ಕುಗ್ಗಿದ ಮನಸ್ಸು ನಕ್ಕಿತ್ತು
ಕೆಟ್ಟ ಕನಸು ನೆತ್ತಿಯಲಿ ತತ್ತರಿಸಿತ್ತು.
ಬದಲಾಗುವ ಬಣ್ಣದ ಓಕುಳಿಗೆ
ಹುಚ್ಚೆದ್ದು ಕುಣಿದಿತ್ತು.
