ಬದಿಗಿಡು ತಟ್ಟೆಯ..
ಬದಿಗಿಡು ತಟ್ಟೆಯ..
ಕರುಣೆ ಮೈತ್ರಿಗಳನ್ನು
ತೋರಿಸಲು
ಇವರೇನು ಬುದ್ಧರೇ?
ಸಾಯುವ ಸ್ಥಿತಿಯಲ್ಲೂ
ಇವರ ಪಾಪಗಳನ್ನು
ಮನ್ನಿಸು
ಎನಲು ಇವರೇನು
ಯೇಸುವಿನ ರೂಪವೇ?
ಶಾಂತಿಸoದೇಶ
ಸಾರಲು
ಇವರೇನು ಮಹಮದೀಯರೇ?
ದರಿದ್ರನಾರಾಯಣದೇವೋಭವವೆನಲು
ಇವರೇನು ವಿವೇಕಾನಂದರೇ?
ಇಲ್ಲ ಬಿಡು..
ಅವರ ವಾರಸುದಾರರ
ಹಾಗೇ ನಟನೆ ಮಾಡುತ್ತಾರಷ್ಟೇ.
ಹೊಟ್ಟೆಪಾಡು|
ಬದುಕಬೇಕಲ್ಲವೇ?
ಅವರುಗಳ ಹೆಸರುಗಳು
ಬೇಕಷ್ಟೆ |
ನಂಬದಿರು
ವೇಷಗಳನ್ನು.
ಬದಲಾಯಿಸಲಾರವು
ಮೋಡಿ ಮಾತುಗಳು |
ಅವಲಂಬನೆ ಸಾಕು.
ಎಷ್ಟೊಂದು ಸುರಿಯುತ್ತೀಯಾ
ಭಂಡಾರ ತುಂಬಲೆoದು?
ಬದಿಗಿಡು ನಿನ್ನ ತಟ್ಟೆಯ
ಸಾಕು ಸೋಗಿನ ಭಿಕ್ಷೆ..
ನಂಬು ನಿನ್ನ ರಟ್ಟೆಯ
ಹಾಗೂ
ಶ್ರಮಧರ್ಮವ ||
