ಅನನ್ಯ ಬಾಂಧವ್ಯ
ಅನನ್ಯ ಬಾಂಧವ್ಯ
ಜೀವನದ ಸೂರ್ಯ ಅಸ್ತಮಿಕೆಯಲಿ,
ಪ್ರೇಮವೆಂಬ ಶಶಿ ಇಲ್ಲದೆ ಬಾಳು ಇರುಳಲಿ,
ಪ್ರೀತಿಯ ನಕ್ಷತ್ರಗಳು ಕಾಣದ ಮರೆಯಲಿ,
ವ್ಯಕ್ತಿತ್ವದ ಕಿರಣಗಳು ನಂದಿದೆ ಘೋರ ಕತ್ತಲಿನಲಿ!!
ದೇವರ ಸೃಷ್ಟಿಯು ಬೇನೆಗಳ ಕೆಡಕಿನಲಿ,
ವಿಶ್ವಾಸದ ಅಲೆಗಳು ಹರಿಯದೆ ಸ್ಥಂಭನದಲಿ,
ಜೀವ ಭಸ್ಮವಾಗುತಿದೆ ದುಗುಡಗಳ ಬೆಂಕಿಯಲಿ,
ಹರುಷದ ಮಳೆಯಿಲ್ಲದೆ ಜೀವನವು ಬರಗಾಲದಲಿ!!
ನನ್ನ ಬಾಳ ಪುಟಗಳನು ಚಂದದಿ ಅಲಂಕರಿಸಲು,
ಸಂತಸದ ಹೊನಲನು ಉತ್ಸಾಹದಿ ಹರಿಸಲು,
ಉಸಿರ ಜ್ಯೋತಿಯನು ಬೆಳಗಿ ಪ್ರಜ್ವಲಿಸಲು,
ದೇವದೂತಳಾಗಿ ಬಂದಿಹಳು ನನ್ನ ಹರಸಲು!!
ಅವಳ ನಡಿಗೆಯಲಿ ನನ್ನ ಜೀವನ ನಡೆಯಲು,
ಅನನ್ಯ ಬಾಂಧವ್ಯದಿ ಪ್ರೀತಿಪ್ರೇಮ ಪ್ರಸರಿಸಲು,
ಬಾಳಗೀತೆಯಲಿ ಮಧುರ ಪಲ್ಲವಿಯಾಗಲು,
ದೇವಿಯಂತೆ ನೆಲೆಸಿಹಳು ನನ್ನ ಬದುಕಿಸಲು!!

