ಪ್ರೀತಿ ಎಂದರೆ...?
ಪ್ರೀತಿ ಎಂದರೆ...?
ಸಮುದ್ರದ ದಡದಲ್ಲಿ ಕುಳಿತು ಮುಳುಗುವ ಸೂರ್ಯನನ್ನು ದಿಟ್ಟಿಸಿ ನೋಡುತ್ತಾ ಕುಳಿತಿದ್ದ ಹೆಂಡತಿಗೆ ಬಲು ಇಷ್ಟವಾಗುವ ಐಸ್ ಕ್ರೀಮ್ ತಂದು ಕೊಟ್ಟ ಗಂಡನನ್ನೇ ನೋಡುತ್ತಿದ್ದ ಮುದ್ದು ಮುಖದ ಮಡದಿಯನ್ನು ಕೇಳಿದ
"ಏನಾಯ್ತು?ಯಾಕೆ ಹಾಗೆ ನೋಡ್ತಿದ್ದಿ?
"ರೀ ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರಾ?"
"ಇದೆಂಥ ಪ್ರಶ್ನೆ ಚೇತು?"
ಚೇತನಾ ಎಂಬ ಹೆಸರನ್ನು ಮುದ್ದಿನಿಂದ ಚೇತು ಎಂದು ಕರೆಯುತ್ತಿದ.
" ಹೇಳಿ ರೀ ಎಷ್ಟು ಪ್ರೀತಿಸುತ್ತೀರಾ "?
"ಪದಗಳಲ್ಲಿ ವರ್ಣಿಸಲಾಗದಷ್ಟು ಸಾಗರದ ನೀರಿನಷ್ಟು"
" ರೀ ಇನ್ನೂಂದು ಪ್ರಶ್ನೆ "
"ಏನು ಅಮ್ಮೋರು ಪ್ರಶ್ನೆ ಕೇಳುವ ಮೂಡ್ ನಲ್ಲಿ ಇದ್ದ ಹಾಗಿದೆ..ಉತ್ತರಿಸಲಾಗದಷ್ಟು ಕಷ್ಟದ ಪ್ರಶ್ನೆ ಕೇಳಬೇಡ ಮಾರಾಯ್ತಿ..ನಾನು ಅಷ್ಟು ಬುದ್ಧಿವಂತನಲ್ಲ..."
" ಸಾಕು ಸುಮ್ಮನಿರಿ ನೀವು ಡಬಲ್ ಡಿಗ್ರಿ ನಾನು ಬರಿ ಪಿ ಯು ಸಿ ಓದಿದ್ದು.. ನನಗಿಂತ ಬುದ್ಧಿವಂತರು ನೀವೆ ಅಲ್ವಾ? ನಾನು ವಯಸ್ಸಿನಲ್ಲಿ ನಿಮಗಿಂತ 10ವರುಷ ಚಿಕ್ಕವಳು"
"ಬುದ್ಧಿವಂತಿಕೆ ತೆಗೆದುಕೊಳ್ಳುವ ಡಿಗ್ರಿಯಲ್ಲಿ ಇರುವುದಿಲ್ಲ..ಕಷ್ಟ ಕಾಲದಲ್ಲಿ ಹೇಗೆ ತಲೆ ಓಡಿಸಿ ಬದುಕುತ್ತೇವೆ ಎಂಬುದರಲ್ಲಿ ಬುದ್ಧಿವಂತಿಕೆ ಅಡಗಿರುತ್ತದೆ. ನಾನು ನಾಲ್ಕೈದು ತಿಂಗಳು ಕೆಲಸವಿಲ್ಲದೆ ಅಲೆದಾಡುವಾಗ ದೃತಿಗೆಡದೆ ನೀನು ಕೇಟರಿಂಗ್ ಅನ್ನು ಶುರು ಮಾಡಿದೆ. ಹಗಲು ರಾತ್ರಿ ಕಷ್ಟಪಟ್ಟು ತಲೆ ಓಡಿಸಿ ಕೆಲಸ ಮಾಡಿ ಸಂಸಾರ ನಿಭಾಯಿಸಿದವಳು ನೀನು. ನಿನ್ನ ಬುದ್ಧಿವಂತಿಕೆ ನಮ್ಮನ್ನು ಉಪವಾಸದಿಂದ ನರಳುವುದನ್ನು ತಪ್ಪಿಸಿತಲ್ಲವೇ.. ಇನ್ನು ವಯಸ್ಸಿನ ಅಂತರ ಮುಖ್ಯವಲ್ಲ ಅವರವರ ವ್ಯಕ್ತಿತ್ವ ಮತ್ತು ವಿವೇಕ ಸುಖವಾಗಿ ಜೊತೆಯಾಗಿರಲು ಮುಖ್ಯವಷ್ಟೆ"
" ಅವಕಾಶ ಸಿಕ್ಕರೆ ಸಾಕು ನನ್ನನ್ನು ಹೊಗಳುತ್ತೀರಾ ಅಂತಹದೇನು ನಾನು ಮಾಡಲಿಲ್ಲ ಕಷ್ಟ ಕಾಲದಲ್ಲಿ ಗಂಡನ ಜೊತೆಗಿರುವುದು ನನ್ನ ಕರ್ತವ್ಯ.ಅದನ್ನು ನಾನು ನಿಭಾಯಿಸಿದೆ ಅಷ್ಟೇ . ಅದು ಬಿಡಿ ಈಗ ನನ್ನ ಪ್ರಶ್ನೆಗೆ ಉತ್ತರಿಸಿ"
"ಸರಿ ಕೇಳಮ್ಮ ಅದೇನು ನಿನ್ನ ಪ್ರಶ್ನೆ"
"ರೀ ನಾವು ಮದುವೆಯಾಗಿ 20ವರ್ಷ ಕಳೆದಿದೆ . ನಿಮಗೆ ಒಮ್ಮೆಯೂ ಕೂಡ ನಿಮ್ಮ ಆಯ್ಕೆ ತಪ್ಪೆಂದು ಅನಿಸಲಿಲ್ಲವೇ"?
"ನೀನು ನನ್ನನ್ನು ಮೆಚ್ಚಿ ಮದುವೆಯಾದೆಯಲ್ಲಾ.. ನಿನಗೆ ಎಂದಾದರು ಹೀಗೆ ಅನಿಸಿತ್ತಾ?"
"ಪ್ರಶ್ನೆ ಕೇಳಿದವಳು ನಾನು ಉತ್ತರ ಹೇಳುವ ಕೆಲಸ ಮಾತ್ರ ನಿಮ್ಮದು .ಮರು ಪ್ರಶ್ನೆ ಮಾಡಬೇಡಿ. ನನಗೆ ಮಕ್ಕಳ ಭಾಗ್ಯವಿಲ್ಲ .ಆದರೂ ಕೂಡ ಮೊದಲು ತೋರುತ್ತಿದ್ದ ಪ್ರೀತಿಯನ್ನು ನನ್ನ ಮೇಲೆ ತೋರುತ್ತಿದ್ದೀರಿ. ಎಂದಿಗೂ ನಿಮಗೆ ಬೇರೆ ಮದುವೆಯಾಗಬೇಕೆಂದು ಅನಿಸಲಿಲ್ಲವೇ"?
"ಇಲ್ಲ ಚೇತು ಇನ್ನೊಂದು ಮದುವೆಯ ಆಲೋಚನೆ ನನಗೆ ಎಂದಿಗೂ ಬರಲಿಲ್ಲ. ಮಕ್ಕಳಾಗದಿದ್ದರೆ ಏನಂತೆ ನನಗೆ ನೀನು ನಿನಗೆ ನಾನು ಮಗುವಿದ್ದಂತೆ ಅಲ್ಲವೆ... ಮಕ್ಕಳಾಗಲಿಲ್ಲ ಎಂಬ ಕಾರಣಕ್ಕೆ ಇನ್ನೊಂದು ಮದುವೆಯಾಗುವುದಾದರೆ ಅದು ಪ್ರೀತಿ ಎನಿಸಿಕೊಳ್ಳದು ವಂಶೋದ್ಧಾರಕ್ಕಾಗಿ ಮಾಡಿಕೊಂಡ ಒಪ್ಪಂದದಂತಿರುತ್ತದೆ ಅಷ್ಟೇ"
"ಹಾಗಾದರೆ ಮದುವೆಯಾಗಿ ಮಕ್ಟಳಿರುವವರು ಒಬ್ಬರನ್ನೊಬ್ಬರು ಪ್ರೀತಿಸುವುದಿಲ್ಲವೇ"?
"ನನ್ನ ಮಾತಿನ ಅರ್ಥ ಹಾಗಲ್ಲ ಚೇತು. ಮದುವೆಯಾಗಿ ಮಕ್ಕಳಾದ ಮೇಲೆ ಪ್ರೀತಿ ಹಂಚಿ ಹೋಗುತ್ತದೆ. ಮಕ್ಕಳು ಪ್ರಮುಖ ಪಾಲನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳ ಮೇಲಿನ ಗಮನದಲ್ಲಿ ಒಬ್ಬರ ಕಡೆಗೊಬ್ಬರ ಗಮನ ಕಡಿಮೆಯಾಗುತ್ತಿದೆ .. ಸಣ್ಣ ಪುಟ್ಟ ಮನಸ್ತಾಪಗಳು ಹುಟ್ಟಿಕೊಳ್ಳುತ್ತವೆ.. ಮಕ್ಕಳಿರುವ ಎಲ್ಲಾ ದಂಪತಿಯೂ ಹೀಗೆ ಎಂದು ಹೇಳಲಾರೆ.. ನಾನೇ ಹೆಚ್ಚು ಎಂಬ ಅಹಂಕಾರ ಎಲ್ಲಿರುತ್ತದೆಯೋ ಅಲ್ಲಿ ಸಮಸ್ಯೆಗಳು ಸಹಜ"
"ರೀ ಪ್ರೀತಿ ಎಂದರೆ ಏನು"?
"ಅದು ಕಣ್ಣಿಗೆ ಕಾಣಿಸದ ಒಂದು ಅದ್ಭುತ ಶಕ್ತಿ..ಹೇಳದೆ ಎಲ್ಲವನ್ನು ಅರ್ಥ ಮಾಡಿಕೊಳ್ಳುವ ಸೂಕ್ಷ್ಮ ಮನಸ್ಥಿತಿ.."
"ರೀ ಪ್ರೀತಿ ಇದೆ ಎಂದು ಗೊತ್ತಾಗುವುದು ಹೇಗೆ"?
"ಪ್ರೀತಿಯನ್ನು ವ್ಯಕ್ತಪಡಿಸುವ ಹಲವು ಬಗೆಗಳಿವೆ.. ಯಾವ ಅಪೇಕ್ಷೆಯನ್ನು ಬಯಸದೆ ಯಾವ ಪ್ರತಿಫಲವನ್ನು ನಿರೀಕ್ಷಿಸದೆ ನಿಷ್ಕಲ್ಮಶವಾಗಿ ಹೊರಹೊಮ್ಮುವ ಭಾವನೆ ಪ್ರೀತಿ"
"ರೀ ನೀವೇಕೆ ಇಷ್ಟು ವರ್ಷದಲ್ಲಿ ಒಮ್ಮೆಯೂ ಕೂಡ ವಾಲೆಂಟೈನ್ಸ್ ಡೇ ದಿನ ನನಗೆ ವಿಶ್ ಮಾಡಿ ನಿಮ್ಮ ಸ್ಟೇಟಸ್ ಗಳಲ್ಲೆಲ್ಲಾ ಹಾಕಲಿಲ್ಲ"?
"ನಿನ್ನ ಮೇಲಿನ ಪ್ರೀತಿ ಒಂದು ದಿನಕ್ಕೆ ಸೀಮಿತವಾಗಿದ್ದಲ್ಲ.ಆ ಒಂದು ದಿನ ನಿನಗೆ ವಿಶ್ ಮಾಡಿ ನಾನು ಸ್ಟೇಟಸ್ ಹಾಕಿಕೊಂಡರೆ ಜಾಸ್ತಿ ಪ್ರೀತಿಸುತ್ತೇನೆ ಎಂದು ಅರ್ಥವೇ? ಅಂತಹ ತೋರುಗಾಣಿಕೆಯ ಪ್ರೀತಿ ನನಗೆ ಇಷ್ಟವಿಲ್ಲ. ನಿನ್ನನ್ನು ಪ್ರೀತಿಸುವ ಪರಿ ನನಗೆ ತಿಳಿದಿದೆ .ನನ್ನದೇ ಲೋಕದಲ್ಲಿ ನಿನ್ನನ್ನು ಸದಾ ಪ್ರೀತಿಸುತ್ತಿರುತ್ತೇನೆ. ಬೇರೆಯವರಿಗೆ ಕಾಣುವಂತೆ ನಾವೇಕೆ ಬದುಕಬೇಕು"?
"ಎಲ್ಲರೂ ಹಾಕೊತಾರೆ ಅದರಲ್ಲಿ ತಪ್ಪೇನಿದೆ ಈ ವರ್ಷ ನಾವು ಪೋಟೋ ಹಾಕಿಕೊಳ್ಳೋಣ ಏನಂತೀರಾ "?
ಈ ಸೋಶಿಯಲ್ ಮೀಡಿಯಾಗಳು ಬರುವ ಮುಂಚೆಯು ನಾನು ನಿನ್ನನ್ನು ನೀನು ನನ್ನನ್ನು ಪ್ರೀತಿಸುತ್ತಲೇ ಇದ್ದೆವು ಎಂದಿಗೂ ಕೂಡ ಇಂತಹ ಪ್ರಶ್ನೆಗಳು ನಿನ್ನಲ್ಲಿ ಹುಟ್ಟಿರಲಿಲ್ಲ. ಇತ್ತೀಚಿಗೆ ನೀನು ನಿನ್ನ ಬದುಕನ್ನು ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳಲು ಪ್ರಾರಂಭಿಸಿದ್ದಿ. ಹಾಗಾಗಿ ಇಂತಹ ಭಾವನೆಗಳು ಮೂಡುತ್ತಿವೆ.ಅವರವರ ಬದುಕು ಅವರವರ ಇಷ್ಟ .ಒಬ್ಬರು ಮಾಡಿದಂತೆ ಇನ್ನೊಬ್ಬರು ಮಾಡಬೇಕೆಂಬ ನಿಯಮವಿಲ್ಲ ನಮ್ಮ ಪ್ರೀತಿ ಅಥವಾ ನಾವು ಇರುವ ರೀತಿ ಇನ್ನೊಬ್ಬರಿಗೆ ಪ್ರದರ್ಶಿಸಬೇಕೆಂದಿಲ್ಲವಲ್ಲ.."?
"ರೀ ಕಡೆಯ ಪ್ರಶ್ನೆ "
"ಕೇಳಮ್ಮ ಕೇಳು.. ಬೇಗ ಮನೆಗೆ ಹೋಗುವ ಕತ್ತಲಾಗುತ್ತಿದ್ದೆ"
"ರೀ ನೀವು ಹೇಳಿದ್ದು ನಿಜ ಮೊದಲು ಯಾರೊಂದಿಗೂ ನನ್ನನ್ನು ಹೋಲಿಸಿಕೊಳ್ಳುತ್ತಿರಲಿಲ್ಲ ಆದರೆ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ನೋಡುವ ಕೆಲವು ಸಂಸಾರದ ವಿಡಿಯೋ ಫೋಟೋಗಳು ನನ್ನನ್ನು ನಾವೇಕೆ ಹೀಗಿಲ್ಲ ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತಿದೆ ಇದನ್ನು ಹೇಗೆ ಸರಿಮಾಡಿಕೊಳ್ಳಲಿ..?"
"ಸೋಶಿಯಲ್ ಮೀಡಿಯಾದಲ್ಲಿ ಬರುವ ಎಲ್ಲಾ ವಿಚಾರಗಳನ್ನು ಸತ್ಯವೆಂದು ನಂಬಬೇಡ. ತೋರಗಾಣಿಕೆಯ ಪ್ರೀತಿಗೂ ನಿಜವಾದ ಪ್ರೀತಿಗೆ ಬಹಳ ವ್ಯತ್ಯಾಸವಿದೆ.. ಡೈಮಂಡ್ ನೆಕ್ಲೆಸ್ ಕೊಟ್ಟು ಹೆಂಡತಿಯನ್ನು ಸಂತೋಷಪಡಿಸುವವ ಹೆಂಡತಿಯ ಕಷ್ಟಕ್ಕೆ ಸ್ಪಂದಿಸಲಾರ.. ಅಂತಯೇ ಗಂಡನಿಂದ ಸದಾ ನಿರೀಕ್ಷೆ ಮಾಡುವ ಹೆಂಡತಿ ಅವನ ನಿರೀಕ್ಷೆಯಂತೆ ಬದುಕಲು ಪ್ರಯತ್ನಿಸಲಾರಳು.. ನಾಲ್ಕು ಜನ ನಮ್ಮನ್ನು ಹೊಗಳಿ ಮಾತನಾಡಬೇಕು ಎಂಬ ಕಾರಣಕ್ಕೆ ಬದುಕುವುದಕ್ಕಿಂತ ನಮ್ಮಷ್ಟಕ್ಕೆ ನಾವು ಇರುವ ರೀತಿಯಲ್ಲಿ ಪ್ರೀತಿಸುತ್ತಾ ಬದುಕುವುದು ಉತ್ತಮ. ಇನ್ನು ಮುಂದೆ ಆ ಸೋಶಿಯಲ್ ಮೀಡಿಯಾಗಳಲ್ಲಿ ಬರುವ ವಿಷಯಗಳನ್ನೆಲ್ಲ ಬದಿಗಿಟ್ಟು ನಿನಗೆ ಖುಷಿ ಕೊಡುವ ವಿಚಾರದಲ್ಲಿ ಗಮನಹರಿಸು"
"ರೀ ಮತ್ತೆ.."
"ಏನಮ್ಮಾ..! ಸಾಕು ಮನೆಗೆ ಹೋಗುವ ಇಬ್ಬರು ಒಟ್ಟಿಗೆ ಕುಳಿತು ಊಟ ಮಾಡುವ ಸಮಯವಾಯಿತು"..ಎಂದು ಎದ್ದು ಹೋರಾಟವ ಹಿಂದೆ ತಿರುಗಿ ನೋಡಿದ ..ಇನ್ನು ಅಲ್ಲೇ ಕುಳಿತ ಮಡದಿಯನ್ನು ಕೈ ಹಿಡಿದು ಎಬ್ಬಿಸಿ ಕರೆದೊಯ್ದ...
ಪ್ರೀತಿ ಎಂದರೆ ಪರಸ್ಪರ ಗೌರವ ತೋರುತ್ತಾ ಒಬ್ಬರು ಅಭಿಪ್ರಾಯಕ್ಕೆ ಬೆಲೆ ಕೊಟ್ಟು ಕಷ್ಟದಲ್ಲಿ ಕೈ ಬಿಡದೆ ಜೊತೆಗಿರುವುದು..ಪ್ರೀತಿ ಒಂದು ದಿನಕ್ಕೆ ಸೀಮಿತವಾಗದೆ ಸಾಯುವವರೆಗು ಜೊತೆಯಿರಬೇಕು..ಪ್ರೀತಿ ನಿಸ್ವಾರ್ಥವಾಗಿದ್ದರೆ ಎಂದಿಗೂ ಮೋಸವಾಗುವುದಿಲ್ಲ ಏನಂತೀರಾ...?

