ನಮ್ ಪರ್ಮಿಯ ಸೀರಿಯಲ್ ಸವಾರಿ
ನಮ್ ಪರ್ಮಿಯ ಸೀರಿಯಲ್ ಸವಾರಿ
ನಮ್ ಪರ್ಮಿಗೆ ಅಂದ್ರೆ ನನ್ನ ಗೆಳತಿ ಪರಿಮಳಾಗಿ ಸೀರಿಯಲ್ ಹುಚ್ಚು ಅಷ್ಟಿಷ್ಟಲ್ಲ ಕಣ್ರೀ. ಕಾಲೇಜಿಗೆ ಸೇರಿದಾಗಿನಿಂದಲೂ ಸೀರಿಯಲ್ ಮೋಹ ಅವಳಿಗೆ ವಿಪರೀತ. ಆಗ ಪ್ರಾಯದ ಹುಡುಗಿ. ಕನ್ನಡ ಸೀರಿಯಲ್ ಗಳ ಜೊತೆಗೆ ಹಿಂದಿ ಸೀರಿಯಲ್ ಗಳನ್ನು ತುಂಬಾ ನೋಡುತ್ತಿದ್ದಳು ಅವಳು! ಅದರಲ್ಲಿ ಬರುವ ಚಂದದ ನಟ ನಟಿಯರನ್ನು ನೋಡಿ, ತಾನೂ ಅವರಂತೆ ಯಾಕಿಲ್ಲ ಎಂದು ಕನ್ನಡಿಯ ಮುಂದೆ ನಿಂತು ಕೊರಗುತ್ತಿದ್ದಳು. ಸೀರಿಯಲ್ ಗಳಲ್ಲಿ ಬರುತ್ತಿದ್ದ ಚಿತ್ರ ವಿಚಿತ್ರ ಸನ್ನಿವೇಶಗಳನ್ನು ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಆನಂದಿಸುತ್ತಿದ್ದಳು. ಅದೂ ಸಹ ನಾಯಕ ನಾಯಕಿಯನ್ನು ಭೇಟಿಯಾಗುವ ಮೊದಲ ಪ್ರಸಂಗ, ಮದುವೆ ಸಂಭ್ರಮ, ಡಿಕ್ಕಿ ಹೊಡೆಯುವುದು, ಜಗಳ ಮಾಡುವುದು ಎಂದರೆ ತುಂಬಾ ಇಷ್ಟ ಇವಳಿಗೆ! ಇದರ ಜೊತೆಗೆ ಬರುವ ಬ್ಯಾಕ್ ಗ್ರೌಂಡ್ ಸಂಗೀತವಂತೂ ಅವಳಿಗೆ ಕಚಗುಳಿ ಇಟ್ಟಂತೆ ಮಾಡುತ್ತಿದ್ದವು.
ಈಗ ಮದುವೆಯಾಗಿ ಎರಡು ಮಕ್ಕಳ ತಾಯಿಯಾಗಿದ್ದಾಳೆ. ಅವಳ ಸೀರಿಯಲ್ ಹುಚ್ಚು ಮೊದಲಿಗಿಂತ ಅದೆಷ್ಟೋ ಪಾಲು ಕಡಿಮೆಯಾಗಿದೆಯಂತೆ. ದಿನಪೂರ್ತಿ ಕೆಲಸವಲ್ಲ? ಇನ್ನೆಲ್ಲಿ ಸೀರಿಯಲ್ ಉಸಾಬರಿ ಹೇಳಿ? ಅಡುಗೆ, ಮನೆಕೆಲಸ, ಜೊತೆಗೆ ಗಂಡ ಮಕ್ಕಳು ಮತ್ತು ಅತ್ತೆಯ ಬಗ್ಗೆ ವಿಚಾರಿಸಿಕೊಳ್ಳಬೇಕು. ಇವುಗಳೆಲ್ಲದರ ನಡುವೆ ಅವಳಿಗೆ ಬಿಡುವಾಗಿ ಕುಳಿತು ನೋಡಲು ಸಮಯವಾದರೂ ಎಲ್ಲಿರುತ್ತದೆ ಹೇಳಿ?!
ಆದರೆ ಅವಳ ವಯಸ್ಸಾದ ಅತ್ತೆಗೆ ಮಾತ್ರ ಸೀರಿಯಲ್ ಹುಚ್ಚು ವಿಪರೀತವಾಗಿ ಬಿಟ್ಟಿದೆಯಂತೆ. ಸಂಜೆ ಆರು ಗಂಟೆಗೆ ತಮ್ಮ ಚಿಕ್ಕ ಪುಟ್ಟ ಕೆಲಸಗಳನ್ನು ಮುಗಿಸಿ ಕುಳಿತುಬಿಟ್ಟರೆ, ಮತ್ತೆ ಅವರು ಏಳುವುದು ರಾತ್ರಿ ಹತ್ತು ಗಂಟೆಗೆ! ಊಟವೂ ಇದರ ಮಧ್ಯೆ, ಜಾಹೀರಾತುಗಳು ಬಂದಾಗ ಮಾಡಿ ಮುಗಿಸಿರುತ್ತಾರೆ. ಅಂದೊಮ್ಮೆ ನಾಯಕ ನಾಯಕಿಯ ಪ್ರೇಮ ಸನ್ನಿವೇಶಗಳನ್ನು ಎವೆಯಿಕ್ಕದೆ ನೋಡುತ್ತಿದ್ದ ಪರ್ಮಿಗೆ ಈಗ ಅವೆಲ್ಲವೂ ತೀರಾ ಆರ್ಟಿಫಿಷಿಯಲ್ ಎನಿಸಿಬಿಟ್ಟಿದೆ!! ಆ ವಿಚಿತ್ರವಾದ ಸನ್ನಿವೇಶಗಳು ಅವುಗಳಿಗೆ ಅನೇಕ ಸಲ ನಗು ತರಿಸುತ್ತದೆಯಂತೆ.
ಹೀಗೆ ಒಂದು ದಿನ ಬಿಡುವಾದಾಗ, ಮಧ್ಯಾಹ್ನದ ಹೊತ್ತಿಗೆ ಅವಳಿಗೆ ಫೋನ್ ಮಾಡಿದೆ. "ಏನೇ ಪರ್ಮಿ ಹೇಗಿದ್ದಿ? ಸಂಜೆ ಕಾಲ್ ಮಾಡೋಣ ಎಂದುಕೊಂಡೆ. ನೀನು ಮಕ್ಕಳ ಹೋಂವರ್ಕ್ ಮತ್ತು ಸೀರಿಯಲ್ ನೋಡುವುದರಲ್ಲಿ ಬ್ಯುಸಿಯಾಗಿರುತ್ತೀಯಾ ಎಂದು ಈಗಲೇ ಮಾಡಿದೆ" ಎಂದೆ. ಇದಕ್ಕೆ ಪ್ರತಿಯಾಗಿ ಪರ್ಮಿ "ಅಬ್ಬಾ ಆ ಸೀರಿಯಲ್ ಸಹವಾಸವೇ ಸಾಕು ಮಾರಾಯ್ತಿ! ನಾನಂತೂ ವಾರಕ್ಕೆ ಒಂದೆರಡು ಬಾರಿ ನೋಡುತ್ತೇನೆ ಅಷ್ಟೇ. ನೀನು ಜಾಹೀರಾತಿನಲ್ಲಿ ನೋಡಿ ಸಹ ಅದರ ಅಪ್ಡೇಟ್ಸ್ ತಗೋಬಹುದು. ಏಕೆಂದರೆ ಒಂದು ವಾರ ಇಲ್ಲ ಒಂದು ತಿಂಗಳಾದರೂ ಇದ್ದಲ್ಲಿಯೇ ಇರುತ್ತದೆ! ಒಳ್ಳೆ ಗಮ್ ಎಳೆದ ಹಾಗೆ ಎಳೆಯುತ್ತಾರೆ".
"ಇನ್ನು ಆ ಸೀರಿಯಲ್ ಗಳ ಲಾಜಿಕ್ ದೇವರಿಗೇ ಪ್ರೀತಿ!! ಸದ್ಯ ಇನ್ನೇನು ಸತ್ಯ ಏನೆಂದು ಗೊತ್ತಾಯಿತು ಅಥವಾ ಮದುವೆ ಸುಸೂತ್ರವಾಗಿ ನಡೆಯಿತು ಎಂದು ಒಂದೆರಡು ನಿಮಿಷ ಖುಷಿಪಡುವ ಹಾಗಿಲ್ಲ ಕಣೆ, ಮುಂದಿನ ಕ್ಷಣವೇ ಅದನ್ನು ಕನಸು ಎಂದು ತೋರಿಸುತ್ತಾರೆ! ನನಗಂತೂ ಇತ್ತೀಚಿಗೆ ಏನೋ ಒಳ್ಳೆಯದು ಸೀರಿಯಲ್ ಗಳಲ್ಲಿ ಆಗುತ್ತಿದೆ ಎಂದರೆ ಅದು ಕನಸಾ ಇಲ್ಲ ನನಸಾ ಎಂದು ಸಂದೇಹ ಬರುತ್ತದೆ! ಆ ಮಟ್ಟಿಗೆ ಡೈರೆಕ್ಟರ್ ಸೀರಿಯಲ್ ಅನ್ನು ಎಳೆದಾಡುತ್ತಾನೆ!!"
"ನಾಯಕ ನಾಯಕಿಯ ಸನ್ನಿವೇಶಗಳನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಆಗುವುದಿಲ್ಲ?! ಎಷ್ಟೋ ಸಲ ನೈಜತೆಯಿಂದ ಕೂಡಿರುವುದೇ ಇಲ್ಲ ಕಣೆ. ಅದು ಹೇಗೋ ತಿರುಗಿ ತಿರುಗಿ,ನೂರು ಇನ್ನೂರು ಮೀಟರ್ ಜಾರಿಕೊಂಡು ಹೋಗಿ, ನಾಯಕಿಯನ್ನು ಸಂಧಿಸುತ್ತಾನೆ ನಾಯಕ! ನನಗಂತೂ ನಕ್ಕು ನಕ್ಕು ಸಾಕಾಗುತ್ತದೆ. ಸೋಜಿಗದ ಸಂಗತಿಯೆಂದರೆ ರಾತ್ರಿ ಮಲಗುವಾಗಲೂ ಒಳ್ಳೆ ಆಭರಣ, ಸೀರೆಗಳನ್ನು ತೊಟ್ಟು ಫಂಕ್ಷನ್ ಗೆ ಹೋಗುವಂತೆ ರೆಡಿಯಾಗಿರುತ್ತಾರೆ. ಇನ್ನೂ ಪ್ರತಿ ಸೀರಿಯಲ್ನಲ್ಲಿ ಒಬ್ಬರಲ್ಲ ಒಬ್ಬರು ಐಎಎಸ್ ಓದುವವರು ಇದ್ದೇ ಇರುತ್ತಾರೆ. ಅದು ಹೇಗೆ ಅಂತ ಕಠಿಣ ಪರೀಕ್ಷೆಯನ್ನು ಅಷ್ಟು ಸುಲಭವಾಗಿ ಓದಿ ಕೆಲಸ ಪಡೆಯುತ್ತಾರೋ ನಾ ಕಾಣೆ!" ಎಂದಳು ಪರ್ಮಿ.
"ಹಾಗಾದ್ರೆ ದಿನವೂ ಸೀರಿಯಲ್ ನೋಡೋಲ್ಲ ಅನ್ನು. ಒಂದು ಕಾಲದಲ್ಲಿ ವಿಪರೀತ ಸೀರಿಯಲ್ ಹುಚ್ಚು ಇತ್ತಲ್ಲವೇ ನಿನಗೆ?" ಎಂದೆ.
"ಹೂಂ ಕಣೆ, ಆಗ ಕೆಲಸ ಕಾರ್ಯಗಳು ಇರಲಿಲ್ಲ. ಕಾಲೇಜು ಹುಡುಗಿ ಬೇರೆ. ನೋಡಿ ಆನಂದಿಸುತ್ತಿದ್ದೆ. ಈಗ ಒಂದರೆ ಘಳಿಗೆ ಸಿಕ್ಕರೆ ಸಾಕು, ಒಂಚೂರು ನಿದ್ದೆ ಮಾಡೋಣ ಅನ್ಸುತ್ತೆ. ಅಷ್ಟು ಸಾಕು ಮಾಡಿರುತ್ತಾರೆ ನನ್ನ ಮಕ್ಕಳು! ನಿದ್ದೆ ಮಾಡೋಣ ಎಂದರೆ ಅತ್ತೆಯವರ ಸೀರಿಯಲ್ ಸವಾರಿ ದಿನವೂ ಜೋರಾಗೇ ನಡೆಯುತ್ತಿರುತ್ತದೆ. ನಾನೇ ಹೇಗೋ ಸೌಂಡ್ ಕಡಿಮೆ ಇರುವಂತೆ ನೋಡಿಕೊಳ್ಳುತ್ತೇನೆ. ನಾನಾದರೋ ಬಿಡುವಾದಾಗ ಎಂದಾದರೊಂದು ಸೀರಿಯಲ್ ನೋಡುತ್ತೇನೆ. ಆದರೆ ಅವರು ದಿನವೂ ಒಂದು ಚಾನೆಲ್ ಹಾಕಿಟ್ಟರೆ ಅದರಲ್ಲಿ ಬರುವ ಎಲ್ಲಾ ಸೀರಿಯಲ್ ಗಳನ್ನು ನೋಡಿ ಮುಗಿಸಿಯೇ ಮಲಗುವುದು!"
"ಅವರು ನೋಡುವ ಸೀರಿಯಲ್ ಹೆಸರುಗಳೇ ಚಿತ್ರ ವಿಚಿತ್ರವಾಗಿರುತ್ತವೆ ಕಣೆ. ಅದಕ್ಕೆ ನಾನಂದುಕೊಳ್ಳುತ್ತೇನೆ ನನ್ನ ಜೀವನವೇ 'See ರಿಯಲ್' ತರಹ. ನಮ್ಮ ಮನೆಯೇ 'ಒಲವಿನ ನಿಲ್ದಾಣ', ನಾನೇ ಅದರಲ್ಲಿ ದಿನವೂ ಕೋಪಗೊಳ್ಳುವ 'ಕೆಂಡಸಂಪಿಗೆ'. ಇನ್ನು ಮನೆಯ 'ಭಾಗ್ಯಲಕ್ಷ್ಮಿ' ನಾನೇ ಅಲ್ಲವೇ?, 'ಲಕ್ಷ್ಮೀ ಬಾರಮ್ಮ' ಎಂದು ಕರೆದಾಗ ಬಂದವಳೇ ನನ್ನ ಮಗಳು, ನನ್ನ ಗಂಡ 'ರಾಮಾಚಾರಿಯಂತವನೇ'. ಇನ್ನವನಿಗೆ 'ತ್ರಿಪುರ ಸುಂದರಿಯೂ' ನಾನೇ, 'ಸತ್ಯಳೂ' ನಾನೇ!! ಅವನು ರಾಮಾಚಾರಿಯಾದರೆ ನಮ್ಮಿಬ್ಬರ ಜೋಡಿ, 'ಸೀತಾರಾಮರಂತೆ' ಅಲ್ಲವೇ?" ಎಂದಳು ನಾಚುತ್ತಾ ನಮ್ ಪರ್ಮಿ.
"ಹೋ ಸೂಪರ್ ಪರ್ಮಿ ನೀನು, ಹಾಗಾದ್ರೆ ನಿನ್ನ ಕುಟುಂಬವನ್ನು ನೋಡುವುದಕ್ಕೆ 'ಭೂಮಿಗೆ ಬಂದೇ ಬರುತ್ತಾನೆ ಬಿಡು ಆ ಭಗವಂತ' ಎಂದೆ ಅವಳನ್ನು ರೇಗಿಸುತ್ತಾ..!!
