kaveri M

Drama Romance Others

4.4  

kaveri M

Drama Romance Others

ನಿನ್ನ ನಿರೀಕ್ಷೆಯಲ್ಲಿ

ನಿನ್ನ ನಿರೀಕ್ಷೆಯಲ್ಲಿ

3 mins
283


ತಣ್ಣನೆಯ ಗಾಳಿ ರಭಸವಾಗಿ ಬೀಸಿ ಎಚ್ಚರವಾಯ್ತು. ಕಣ್ಣುಜ್ಜಿಕೊಂಡು ಸುತ್ತ ನೋಡಿದರೆ ಆಗಲೇ ಬೆಳಗಾಗಿತ್ತು. ಹುಬ್ಬಳ್ಳಿ ರೈಲ್ವೇ ನಿಲ್ದಾಣಕ್ಕೆ ಅದಾಗಲೇ ಬಂದಾಗಿತ್ತು. ಇನ್ನೊಂದು ತಾಸಿನ ಪ್ರಯಾಣವಷ್ಟೇ ನಿನ್ನನು ಕಣ್ತುಂಬಿಕೊಳ್ಳಲು. ತಟ್ಟನೆ ನೆನಪಾಯ್ತು

ಬೆಳಿಗ್ಗೆ ನಾಲ್ಕು ಗಂಟೆಗೆ ಫೋನ್ ಮಾಡಿ ಎದ್ದೇಳಿಸ್ತಿನಿ

ಓದುವಿಯಂತೆ ಇವಾಗ ತಾಚಿ ಮಾಡು ಶಿವು ಅಂತ ಸದ್ದಿಲ್ಲದೆ ಮುತ್ತನಿಟ್ಟು ಮಲಗಿಸಿದ್ದು.

ಎದ್ದಿದಾನೋ ಇಲ್ವೋ ಒಂದು ಕಾಲ್ ಮಾಡಿ ಬಿಡೋಣ ಅಂತ ಮೊಬೈಲ್ ಕೈಗೆತ್ತಿಕೊಂಡಾಗಲೇ ಸ್ಕ್ರೀನ್ ಆನ್ ಲಾಕ್ ಆಗಿತ್ತು. ವಾಲ್ಪೇಪರ್ ಅಲ್ಲಿ ನಗುತ್ತಿದ್ದ ನಿನ್ನ ಮೊಗಕಂಡು ಈ ದಿನ ನಿನಗೆ ಸಮರ್ಪಿತ ಎಂದು ಎದೆಗಪ್ಪಿಕೊಂಡೆ.

ಅದಾಗಲೇ ಹದಿನೇಳು ಮಿಸ್ಸ್ಡ್ ಕಾಲ್ಸ್ , 12 ಟೆಕ್ಟ್ಸ್ ಮೆಸೇಜ್ಗಳು ಬಂದಿದ್ದವು. ಮನೆ ಬಿಟ್ಟಾಗಿನಿಂದ ಧಾರವಾಡ ರೈಲ್ವೇ ಸ್ಟೇಷನ್ ತಲುಪೋವರೆಗಿನ ಪ್ರತಿಯೊಂದು ಅಪ್ಡೇಟ್ ಅದರಲ್ಲಿತ್ತು. ಟ್ರೈನ್ ಸ್ವಲ್ಪ ಬೇಗನೆ ಓಡಿಸೋಕೆ ಹೇಳು ಗೌರಿ 😋 ನಂಗೆ ಕಾಯೋಕೆ ಆಗ್ತಿಲ್ಲ ನಾನಿನ್ನ ಆದಷ್ಟು ಬೇಗ ನೋಡಬೇಕು ಅನ್ನೋ ಪೆದ್ದು ಸಂದೇಶ ಮುದನೀಡಿತ್ತು. ಕಾಲಿಂಗ್ ಲಿಸ್ಟ್ ಅಲ್ಲಿ ಮೊದಲಿರೋ ನಂಬರನ್ನು ಬಲಕ್ಕೆ ಸರಿಸಿದಾಗ ಶುರುವಾಯಿತು

ಗಮನಿಸು ಒಮ್ಮೆ ನೀನು ಬಯಸಿಹೆ ನಿನ್ನೆ ನಾನು ಎಂಬ ಹಲೋ ಟ್ಯೂನ್.

ಕಾಲ್ ರಿಸೀವ್ ಆದೊಡನೆ ಮೈ ಡಿಯರ್ ಪುಟ್ಟ ಗೌರಿ

ನಿನಗಾಗಿ ಬಾಗೀನಾ ಹಿಡಿದು ಕಾದಿರುವೆ. ಬೇಗ ಬರದೆ ಯಾಕೀಗೆ ಸತಾಯಿಸುವೆ ಎಂದ. ಬರ್ತಾ ಇದೀನಿ ಅಲ್ಲಿವರೆಗೂ ನೀನು ಓದಿಕೋ ಎಕ್ಸಾಮ್ ಇದೆ ಅಲ್ವಾ  ನಿಂಗೆ ಇವತ್ತು ಅಂತಷ್ಟೇ ಹೇಳಿ ಸುಮ್ಮನಾದೆ.

ಹೌದು. ಇವತ್ತು ಮಧ್ಯಾಹ್ನ ಶಿವುಗೆ ಎಕ್ಸಾಮ್ ಇದೆ. ಎಷ್ಟೇ ಬೇಡ ಅಂದರೂ ನಾ ನಿನ್ನ ನೋಡಲೇಬೇಕು, ಮಾತಾಡಬೇಕು ಅಂತ ಹಠ ಮಾಡಿ ನನಗಾಗಿ ಕಾದು ಕುಳಿತಿರುವನು. ಅದೆಷ್ಟು ಹುಚ್ಚು ಪ್ರೀತಿ ಇವನಿಗೆ. ಬಹುಶಃ ಹುಡುಗರೆಲ್ಲಾ ಹೀಗೆಯೇ ಇರಬೇಕು ಅನ್ಸುತ್ತೆ. ಒಂದು ವೇಳೆ ನನಗೆ ಒಂದು ಸಣ್ಣ ಕ್ಲಾಸ್ ಟೆಸ್ಟ್ ಇದ್ದರೆ ಎದ್ದು ಬಿದ್ದು ಓದಿಕೊಂಡು , ಅಯ್ಯೋ ನಂಗೆ ದೊಡ್ಡ ಎಕ್ಸಾಮ್ ಇದೆ , ನಾನೆಲ್ಲೂ ಬರೋದಕ್ಕೆ ಆಗಲ್ಲ ಅಂತಿದ್ದೆ ಅಲ್ವಾ? ಆದರೆ ಶಿವು ಹಾಗಲ್ಲ

ಮಿತಿಯಿರದ ಪ್ರೀತಿ ಅವನದು.

ಪದೇ ಪದೇ ವಾಚ್ ನೋಡಿ ನೋಡಿ ಸಾಕಾಯ್ತು. ಯಾಕೋ ಏನೋ ಗಂಟೆ ಮುಂದಕ್ಕೆ ಹೋಗ್ತಾನೆ ಇಲ್ಲ. ಕಾಲದ ಕಾಲಿಗೆ ಯಾರೋ ಹಗ್ಗ ಕಟ್ಟಿ ಹಿಂದಕ್ಕೆ ಎಳಿತಿರೋ ಹಾಗೆ. ಧಾರವಾಡ ಬಂದೆ ಬಿಡ್ತು. ಬಹಳ ವರ್ಷಗಳ ನಂತರದ ಭೇಟಿಗೆ ಕ್ಷಣಗಳಷ್ಟೇ ಬಾಕಿ.

ಹಾರ್ಟ್ ಅಟ್ಯಾಕ್ ಗೋ ಸೂಚನೆ.

ರೈಲಿಳಿದು ಸುತ್ತ ಕಣ್ಣು ಹಾಯಿಸುತ್ತಲ್ಲೇ ನನ್ನ ಕಣ್ಣ ತುಂಬಿದ. ರಾತ್ರಿಯೆಲ್ಲಾ ನಿದ್ದೆಗೆಟ್ಟಿದ್ದು ಎದ್ದು ಕಾಣುತ್ತಿತ್ತು. ಗಾಳಿಗೆ ಕೆದರಿದ ಕೂದಲು ಒಂಥರಾ ಚಂದಗಾಣುತಿದೆ.

ಚಳಿಗೆ ಒಡೆದ ತುಟಿಗಳು ನಡುಗುತಿವೆ. ಆಗಿನಿಂದ ತುಂಬಾ ಮಾತಾಡೋಕೆ ಇದೆ ಎಂದು ಪರಿತಪಿಸುತ್ತಿದ್ದ ಜೀವವದು ಮೌನವಹಿಸಿ ನನ್ನನ್ನೇ ಬಿಟ್ಟುಬಿಡದೆ ನೋಡುತ್ತಿದೆ. ಮಾತಿಲ್ಲ ಕಥೆಯಿಲ್ಲ. ನಾಚುತ್ತಲೇ ನಿಂತಿರುವ ಮಾರಾಯ. ಅದೇನು ಮಾಡಲಿ ನಾನು ?

ಕೈಯುಜ್ಜಿಕೊಳ್ಳುತ್ತಾ ಪಕ್ಕದಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಹೋಗಿ ಕುಳಿತೆ. ನನಗೆ ಚಳಿಯಾಗುತ್ತಿದೆ ಎಂದು ಅರಿತವ ನಿಮಿಷಗಳಲ್ಲಿ ಕಾಫಿಯೊಂದಿಗೆ ಹಾಜರಾಗಿದ್ದ. ಕಾಫಿಗಿಂತ ಇವನ ಸನಿಹ ಕುಳಿತಿರುವುದೇ ಬೆಚ್ಚಗಿನ ಅನುಭವ ನೀಡಿತು.

ಅವನ ಕೈಗಳು ನಡುಗುತಿದೆ , ಕಣ್ಣಲ್ಲಿ ಕಣ್ಣಿಟ್ಟು ನೋಡಲು ವಿಫಲನಾಗಿದ್ದಾನೆ. ಇಪ್ಪತ್ತು ನಿಮಿಷ ಕಳೆದರೂ ತುಟಿಯಂಚನ್ನು ಬಿಚ್ಚಲಿಲ್ಲ. ಮೌನದ ಸಂವಹನ ಹೆಚ್ಚಾಗಿಯೇ ಇತ್ತು.

ಸಿಟ್ಟು ಬಂದು ಮೆಸೇಜ್ ಹಾಕಿದೆ. ಇವಾಗೇನು ಮಾತಾಡ್ತಿಯೋ ಇಲ್ವೋ ನಾನು ಹೊರಡಬೇಕು ಅಂತ ಒಂದೆರೆಡು ಕೆಂಪು ಮೂತಿಯ ಇಮೋಜಿಗಳ ಜೊತೆಗೆ. ನನಗೇಕೋ ಭಯ ಆಗ್ತಿದೆ ಗೌರಿ

ನಿನ್ನ ಜೊತೆ ಫೋನ್ ಮೆಸೇಜ್ ಅಲ್ಲಿಯೇ ಮಾತಾಡಿ ಅಭ್ಯಾಸ ನಂಗೆ.ಈಗ ಸಡನ್ನಾಗಿ ಎದುರಿಗೆ ನಿಂತು ಮಾತಾಡೋಕೆ ತುಂಬಾ ಭಯ ಆಗ್ತಿದೆ. ಪ್ಲೀಸ್ ಕಾಲ್ ಮಾಡು ಗೌರಿ.ನಿನ್ನ ನೋಡ್ಕೊಂಡೆ ನಿನ್ನ ಜೊತೆ ಮಾತಾಡ್ತೀನಿ ಎಂಬ ಪ್ರತ್ಯುತ್ತರ ಕಂಡು ನಗು ಒತ್ತರಿಸಿ ಬಂತು.

ಎದುರಿಗೆ ಒಂದು ಮಾತು ಆಡದವನು ಫೋನ್ ಅಲ್ಲಿ ಪಟಪಟನೆ ಮಾತಿನ ಮಳೆಗರೆಸಲು ಶುರುಮಾಡಿದ. ಎರೆಡೆರದು ಬಾರಿ ಅವನ ಮಾತು ಕೇಳುತ್ತಿತ್ತು. ಒಂದು ಪಕ್ಕದಲ್ಲೇ ಕುಳಿತು, ಇನ್ನೊಂದು ಫೋನ್ ಅಲ್ಲಿನ ಮಾತು. ಹೀಗೂ ಉಂಟು ಅಂತನಿಸಿದ್ದು ಸುಳ್ಳಲ್ಲ.

ನಮ್ಮಿಬ್ಬರ ಹುಚ್ಚುತನವ ಕಂಡು ಜನರೆಲ್ಲಾ ನಗುತ್ತಿದ್ದಂತೆ ಭಾಸವಾಗಿ ಎದ್ದು ನಡೆದೆ. ಕೈಹಿಡಿದು ಮತ್ತೆ ಕೂರಿಸಿ ಮಡಿಲಲ್ಲಿ ತಲೆಯಿಟ್ಟು ಮಲಗಿದ. ಪಬ್ಲಿಕ್ ಪ್ಲೇಸ್ ಅನ್ನೋ ಅರಿವಿಲ್ಲದೆ ಕಣ್ಣೀರಿಟ್ಟಿದ್ದ. ಯಾಕೆ ಅತ್ತಿದ್ದು ಎಂಬ ಕಾರಣ ಅವನಿಗೆ ಗೊತ್ತಿಲ್ಲವೆಂದ. ನನಗಿಂತ ದೊಡ್ಡವನಾಗಿದ್ದರೂ ಪುಟ್ಟ ಮಗುವಿನ ಹಾಗೆ ನನ್ನನ್ನು ಹಚ್ಚಿಕೊಂಡು ಬಿಟ್ಟಿದ್ದ.

ಮನೆಯಿಂದಾಗಲೇ ಕಾಲ್ ಗಳು ಶುರುವಾದವು .

ಎಲ್ಲಿದಿಯಾ ಮಗಳೇ ಇನ್ನು ಎಷ್ಟು ಹೊತ್ತು ಮನೆಗೆ ಬರೋದಕ್ಕೆಂದು. ಶಿವು ನಂಗೆ ಲೇಟ್ ಆಗ್ತಿದೆ ಹೊರಡೋಣವಾ ಅಂತ ಹೇಳಿ ಮೇಲೇಳಲು ಅವನ ಕಣ್ಣಿನ ಭಾವ ಯಾಕೋ ತಡೆಹಿಡಿದಿತ್ತು. ಆದರೂ ನನಗೆ ತೊಂದರೆ ಆಗಬಾರದು ಅಂತ ಹೊರಡಲು ಅಣಿಯಾದ. ಹೊರಗೆ ಹೋಗಲು ಮೇಲ್ಸೇತುವೆಯ ಬಳಸಬೇಕಿತ್ತು. ಇಬ್ಬರ ಹೆಜ್ಜೆಗಳು ಒಟ್ಟಿಗೆ ಸಾಗುತ್ತಿದ್ದವು. ಕೈಬೆರಳುಗಳು ಜೊತೆಯಾಗಿ ಕಚಗುಳಿ ಇಡುತ್ತಿದ್ದವು. ಸಮಯವು ಇಲ್ಲೇ ಸ್ಥಗಿತಗೊಂಡರೆ ಎಷ್ಟು ಚಂದವಿರುತ್ತೆ ಅನಿಸಿ ಮೈಮರೆತು ಕಣ್ಮುಚ್ಚಿದೆ.

ಮರುಕ್ಷಣವೇ ನನ್ನ ಮೇಲೆತ್ತಿ ನನ್ನತ್ತ ನಗುಬೀರಿದ. ಅವನ ಮೊಗದಲ್ಲಿನ ಮಂದಹಾಸವ ಕಂಡು ಅದರಲ್ಲೇ ಲೀನವಾದೆ. ಇಬ್ಬರೂ ಮತ್ತೊಬ್ಬರ ಲೋಕದಲ್ಲಿ ಮುಳುಗಿದ್ದೆವು. ಮತ್ತೊಂದು ಟ್ರೈನ್ ಬಂದು ಎಚ್ಚರಗೊಳಿಸಿತ್ತು ನಮ್ಮನ್ನು.

ಗೌರಿ ..ಗೌರಿ ..

ಸುತ್ತಲೂ ಎಷ್ಟು ಚಂದದ ನೋಟ. ನೀನೊಡಲೆಂದು ಮೇಲೆತ್ತಿದ್ದು ನಿನ್ನ. ನೀನು ನೋಡಿದರೆ,ನನ್ನೇ ನೋಡಿಕೊಂಡು ಇದೀಯಲ್ಲಾ. ನಿನ್ನಯ ನೋಟ ಎದುರಿಸೋ ಶಕ್ತಿ ನನಗಿಲ್ಲವೆಂದ ಮುಗ್ಧತೆಯಿಂದ.

ನನ್ನ ಒಲವೇ ನನ್ನ ಕಣ್ಮುಂದಿರಲು ಹೇಗೆ ತಾನೇ ಅತ್ತಿತ್ತ ನೋಡಲು ಮನಸಾಗುವುದು. ನೀಕಂಡರೆ ಸಾಕೆನೆಗೆ ಎನ್ನಲು ಇಬ್ಬರ ಮನತುಂಬಿ ಬಂದಿತ್ತು.

ಒಲ್ಲದ ಮನಸ್ಸಿನಿಂದ ಕೆಳಗಿಳಿದು ಬಸ್ ಸ್ಟಾಪ್ ಗೆ ಬಂದೆವು.

ಅಪ್ಪ ಕಾಯುತ್ತಾ ನಿಂತಿದ್ದರು ಮಗಳಿಗಾಗಿ. ಹೊರಡುವ ಮುನ್ನ ಶಿವು ಕೈಗೆ ಮುತ್ತನಿಟ್ಟು ಎಕ್ಸಾಮ್ ಚನ್ನಾಗಿ ಮಾಡಿದರೆ ಮತ್ತೊಮ್ಮೆ ಸಿಗುವೆ ಎಂದು ಹೇಳಿ ಭಾರದ ಹೆಜ್ಜೆಗಳಿಡುತ್ತಾ ಹೊರಟೆ. ಪ್ರೀತಿಯ ಶಿವು ಮಂಕಾಗಿ ನಿಂತಿದ್ದ ತಿರುಗಿ ತಿರುಗಿ ಅವನನ್ನೇ ನೋಡುತ್ತಿದ್ದೆ.ಒಮ್ಮೆ ಓಡಿ ಹೋಗಿ ತಬ್ಬಿಬಿಡಲೇ ಅನಿಸತೊಡಗಿತ್ತು.

ಅಪ್ಪ ಅದಾಗಲೇ ನನ್ನ ಕಂಡು ಹತ್ತಿರ ಬರತೊಡಗಿದರು. ಬಾ ಮಗಳೇ ಬಸ್ ಹೊರಡುತ್ತಿದೆ ಎಂದು ಕರೆದೊಯ್ದರು. ಬಸ್ ಒಂದು ಸುತ್ತು ಹಾಕಿ ರೋಡಿಗಿಳಿಯುವಾಗ ಇಬ್ಬರ ಕಣ್ಣಂಚಲ್ಲು ಹನಿ ಜಿನುಗಿತ್ತು.Rate this content
Log in

Similar kannada story from Drama