ನಿಗೂಢ ಅಜ್ಜ
ನಿಗೂಢ ಅಜ್ಜ
ನನಗೂ ನನ್ನ ಕಸಿನ್ಸ್ಗೂ ದೆವ್ವದ್ ಕತೆ ಕೇಳೋದ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಆವತ್ತು ಯಾವ್ದೋ ಸಂಭ್ರಮಕ್ಕೆ ಎಲ್ಲರೂ ಒಟ್ಟಾಗಿದ್ವಿ.ರಾತ್ರಿ ಹನ್ನೊಂದು ಸಮೀಪಿಸಿತ್ತು.ನಾವು ನಮ್ಮ ಅಣ್ಣನೊಬ್ಬನಿಗೆ ದೆವ್ವದ ಕತೆ ಹೇಳಲು ಪೀಡಿಸಿದೆವು.ಅವನೂ ನಮ್ಮ ಹಠಕ್ಕೆ ಆ ಊರಲ್ಲೇ ನಡೆದ, ಅವನ ಸ್ನೇಹಿತರಿಗಾದ ನೈಜ ಅನುಭವವನ್ನು ಹೇಳುವುದಾಗಿ ನಮಗೆ ಹೇಳಿದ.
ನಮ್ಮೂರು ಉಡುಪಿ ಜಿಲ್ಲೆಯ ಮಲ್ಪೆಯ ಸಮೀಪದ ತೊಟ್ಟಂ ಎಂಬ ಗ್ರಾಮ. ಮಲ್ಪೆ ಬೀಚ್ ಎಲ್ಲರಿಗೂ ಗೊತ್ತೇ ಇರುತ್ತೆ. ಅಲ್ಲಿಂದ ಉತ್ತರಕ್ಕೆ ಸಾಗಿದರೆ ತೊಟ್ಟಂ ಬೀಚ್ ಸಿಗುತ್ತೆ. ತೊಟ್ಟಂ ಬೀಚ್ನಲ್ಲಿ ಕಡಲು ಮತ್ತು ಹೊಳೆಯೊಂದು ಸೇರುವ ಜಾಗವಿದೆ ಅದಕ್ಕೆ ನಾವು "ಪೊಟ್ಟೆಲ್ಲ !!" ಅಂತಾ ಕರೀತೇವೆ. ಅದಕ್ಕೆ ಆ ಹೆಸರು ಹೇಗೆ ಬಂತೋ ಅದೂ ಈಗ ಮುಖ್ಯವಲ್ಲ. ನಾನು ಈಗ ಹೇಳಹೊರಟಿರುವ ಕತೆ ಆ ಹೊಳೆಯ ಮೇಲೆ ಬಡಾನಿಡಿಯೂರು ತೊಟ್ಟಂನಲ್ಲಿ (ಉತ್ತರ ತೊಟ್ಟಂ ) ನಿಂತಿದ್ದ ಸೇತುವೆಯಲ್ಲಿ ನಡೆದ ಒಂದು ನಿಗೂಢ ಘಟನೆಯ ಕುರಿತಾಗಿ.
ಆ ಸೇತುವೆ ಬಹಳ ಚಿಕ್ಕದಾಗಿತ್ತು. ಅದರಲ್ಲಿ ಏಕಕಾಲಕ್ಕೆ ಎರಡು ಬೃಹದಾಕಾರವಾದ ವಾಹನಗಳಾಗಲಿ, ಒಂದು ಚಿಕ್ಕ ಇನ್ನೊಂದು ಬೃಹತ್ ವಾಹನವಾಗಲಿ ಚಲಿಸಲಾಗುತ್ತಿರಲಿಲ್ಲ. ನವರಾತ್ರಿ ಸಂದರ್ಭಕ್ಕೆ ಅದರಾಚೆ ಸ್ವಲ್ಪ ದೂರದಲ್ಲಿ ಇದ್ದ ದುರ್ಗಾ ಗುಡಿಗೆ ಹೋಗುವಾಗ ಒಂದು ವೇಳೆ ಬಸ್ಸು ಬರುತ್ತಿದ್ದರೆ ನಾವು ಬಸ್ಸು ಹೋಗುವವರೆಗೂ ಅಲ್ಲೇ ನಿಂತು ಮತ್ತೆ ಹೋಗುವುದು ಅನಿವಾರ್ಯವಾಗಿತ್ತು . ಅದಕ್ಕಾಗಿಯೇ ಏನೋ ಅದನ್ನು "ಪೊಟ್ಟು ಸಂಕ " (ಹಾಳಾದ ಸೇತುವೆ ) ಎಂದು ನಮ್ಮವರು ಕರೆಯುತ್ತಿದ್ದರು. ಆ ಚಿಕ್ಕ ಸೇತುವೆಯ ಬಗ್ಗೆ ಗ್ರಾಮ ಪಂಚಾಯಿತಿಯಲ್ಲಿ ಸಾಕಷ್ಟು ಚರ್ಚೆಯಾಗಿ ಇಂದು ಅದರ ಅಗಲವನ್ನು ಹೆಚ್ಚಿಸಲಾಗಿದೆ. ಆದರೆ ಈ ಘಟನೆ ಅದು ಚಿಕ್ಕದಾಗಿ ಇದ್ದ ಸಮಯದಲ್ಲಿ ನಡೆದದ್ದು.
ಅದೊಂದು ಅರೆಹುಣ್ಣಿಮೆಯ ರಾತ್ರಿ ನನ್ನ ಅಣ್ಣನ ಮೂವರು ಸ್ನೇಹಿತರು ಬಡಕೈ (ಉತ್ತರ ) ತೊಟ್ಟಮಿನಿಂದ ಬರುತ್ತಿದ್ದರು.ಉತ್ತರ ತೊಟ್ಟಮಿಗೆ ಯಾವುದೊ ಕೆಲಸದ ನಿಮಿತ್ತ ಹೋದವರು ರಾತ್ರಿ 11ರ ಮೇಲೆ ಆ ಜಾಗದಿಂದ ಬರುತ್ತಿದ್ದರಂತೆ.ಉತ್ತರದಿಂದ ದಕ್ಷಿಣದತ್ತ ಪ್ರಯಾಣಿಸುತ್ತಿದ್ದ ಅವರಿಗೆ ಆ ಸೇತುವೆ ಸಮೀಪಿಸುತ್ತಿದ್ದಂತೆ ಯಾರೋ ಆ ಸೇತುವೆಯ ಹಲವಾರು ಕಂಬಗಳಲ್ಲಿ ಒಂದು ಕಂಬದ ಮೇಲೆ ಕೂತು ಕೆಳಗಿರುವ ಹೊಳೆಗೆ ಒಂಥರಾ ವಿಚಿತ್ರವಾಗಿ ಪದೇ ಪದೇ ಗಾಳ ಹಾಕಿ ಆ ಗಾಳವನ್ನು ಎಳೆಯುತ್ತಿರುವಂತೆ ಕಾಣಿಸಿತಂತೆ.........!!!! ಆ ಸೇತುವೆಗೆ ಹತ್ತಿರ ಹತ್ತಿರ ಸಮೀಪಿಸುತ್ತಿದ್ದಂತೆ ಯಾವುದೋ ಅಜ್ಜ ಹೊಳೆಗೆ ಪದೇ ಪದೇ ಗಾಳ ಹಾಕಿ ಗಾಳ ಎಳೆಯುತ್ತಿದ್ದುದು ಅರೆಹುಣ್ಣಿಮೆ ಬೆಳಕಲ್ಲಿ ಸರಿಯಾಗಿ ಕಾಣಿಸುತ್ತಿತ್ತಂತೆ.
" ಈ ಅಜ್ಜ ಈ ಹೊತ್ತಿನಲ್ಲಿ ಏನು ಗಾಳ ಹಾಕುತ್ತಿದ್ದಾರೆ!! " ಅವರಲ್ಲಿ ಒಬ್ಬರು ಇನ್ನೊಬರಿಗೆ ಹೇಳಿದರಂತೆ.
"ಹೌದು ಮಾರೆ, ಈ ಹೊತ್ತಿನಲ್ಲಿ ಎಂತಾ ಮೀನು ಹಿಡಿಯುವುದು "ಇನ್ನೊಬ್ಬರು ಹೇಳಿದರಂತೆ.
"ಯಾವುದಕ್ಕೂ ಹೋಗಿ ಎಷ್ಟು ಮೀನು ಹಿಡಿದಿದ್ದಾರೆ ನೋಡೋಣ "ಎಂದು ಮತ್ತೊಬ್ಬರು ಹೇಳಿದಾಗ ಅಜ್ಜನ ಬಳಿ ಹೋಗುವ ನಿರ್ಧಾರ ಮಾಡಿದರಂತೆ.
ಸೇತುವೆಯ ಹತ್ತಿರ ಬರುತ್ತಿದ್ದಂತೆಯೂ ಅಜ್ಜ ನಿರಂತರವಾಗಿ ಗಾಳ ಹಾಕಿ ಅದನ್ನು ಎಳೆಯುತ್ತಿರುವ ದೃಶ
್ಯ ಕಾಣಿಸುತ್ತಲೇ ಇತ್ತಂತೆ. ಮೂವರು ಹತ್ತಿರ ಹೋಗಿ ಅಜ್ಜ ಗಾಳ ಹಾಕುವುದನ್ನು ನೋಡಿದರಂತೆ......!!!ಏನಾದರೂ ಮೊದಲು ಎಷ್ಟು ಮೀನು ಹಿಡಿದ್ದಾರೆ ಎಂದು ನೋಡುವ ಎಂದು ಪಕ್ಕದಲ್ಲೇ ಇದ್ದ ಲಕೋಟೆ ತೆಗೆದು ಕೈಲಿದ್ದ ಟಾರ್ಚ್ ಹಿಡಿದು ಒಳಗೆ ನೋಡಿದರಂತೆ.ಆದರೆ ಒಳಗೆ ಒಂದು ಮೀನೂ ಇರಲಿಲ್ಲ.......!!!!ವಿಚಿತ್ರವೆನಿಸಿ ಹೊಳೆಗೆ ಟಾರ್ಚ್ ಹಾಕಿದಾಗ ಹೊಳೆಯ ನೀರೂ ಕೂಡಾ ಬತ್ತಿತ್ತು. ಅಣ್ಣನ ಸ್ನೇಹಿತರು , "ಈ ಅಜ್ಜೆರ್ ನೀರ್ ಇಪ್ಪಂದಿನ ತುದೆಟ್ ಏನ ಗಾಳ ಪಾಡೊಂದುಲ್ಲೆರ್ !!? ಓ ಅಜ್ಜೇರೇ !!?" (ಈ ಅಜ್ಜ ನೀರು ಇಲ್ದೆ ಇರೋ ಹೊಳೆಗೆ ಏನು ಗಾಳ ಹಾಕ್ತಾ ಇದ್ದಾರೆ. ಓ ಅಜ್ಜಾ !!) ಎಂದು ಅಜ್ಜನನ್ನು ಕೂಗಿದರು. ಆದರೆ ಅಜ್ಜ ಮಾತ್ರ ನಿರಂತರವಾಗಿ ಗಾಳ ಹಾಕುವುದು ಎಳೆಯುವುದು ಮಾಡುತ್ತಲೇ ಇದ್ದರಂತೆ. ಇವರು ನಗುತ್ತಾ "ಓ ಮೀನ್ ಪತ್ತುನ ಅಜ್ಜೇರೇ !! "(ಮೀನು ಹಿಡಿಯುವ ಅಜ್ಜಾ !!?) ಎಂದು ಕೂಗುತ್ತಾ ಅಜ್ಜನ ಮುಖಕ್ಕೆ ಟಾರ್ಚ್ ಲೈಟ್ ಹಾಕಿದರಂತೆ ............!!
ಆದರೆ ಅಜ್ಜನ ಮುಖಕ್ಕೆ ಟಾರ್ಚ್ ಹಾಕಿದಾಗ ಮುಖ ಕಾಣಲಿಲ್ಲ.........!!! ಆದರೆ ಕೈ ಮೈ ಎಲ್ಲಾ ಇದ್ದ ಹಾಗೆ ಕಾಣಿಸುತ್ತಿತ್ತು.....!!! ಅಜ್ಜ ನಿರಂತರವಾಗಿ ಗಾಳ ಹಾಕಿ ಅದನ್ನು ಎಳೆಯುತ್ತಿದ್ದರು.....!!! ನನ್ನ ಅಣ್ಣನ ಸ್ನೇಹಿತರು ಹೆದರಿ ಗಟ್ಟಿಯಾಗಿ ಕಿರುಚಿಕೊಂಡು ರಭಸದಲ್ಲಿ ಓಡಿ ಹತ್ತಿರವಿದ್ದ ಸಂಬಂಧಿಕರ ಮನೆ ಸೇರಿ ನಡೆದ ಘಟನೆಯನ್ನೆಲ್ಲ ಅವರಿಗೆ ತಿಳಿಸಿದರು. ಅವರು ಆ ಜಾಗ ಹಾಗೆ,ಅಲ್ಲಿ ಅವರಿಗೆ ರಾತ್ರಿ ವಿಚಿತ್ರ ಕೂಗು, ಗೆಜ್ಜೆ ಸದ್ದು ಕೇಳಿಸುತ್ತದೆ ಎಂದು ಹೇಳಿದ್ದರು .
"ರಾತ್ರಿ ಯಾರು ಬಂದು ಏನೆಲ್ಲಾ ಆ ಹೊಳಕ್ಕೆ ಎಸೆದು ಹೋಗುತ್ತಾರೋ !!? ಇನ್ನು ಸಮುದ್ರದಿಂದ ಮೇಲೆ ಬಿದ್ದ ಹೆಣಗಳು ಈ ಹೊಳವನ್ನು ಸೇರುತ್ತದೆಯೋ !!ಆ ಹೊಳದ ಸುತ್ತ ಇರುವ ದೊಡ್ಡ ದೊಡ್ಡ ಪೊದೆಗಳೂ ಭಯಾನಕವಾಗಿದೆ. ಅದರೊಳಗೆ ಏನೇನು ನಡೆದಿದೆ ಯಾರಿಗೆ ಗೊತ್ತು ಎಂದು ಹೇಳಿದ್ದರು. ಅವರು ಹೆದರಿ ಆ ರಾತ್ರಿ ಅಲ್ಲೇ ತಂಗಿದರು. ಅವರಲ್ಲಿ ಒಬ್ಬರಿಗೆ (ಟಾರ್ಚ್ ಮುಖಕ್ಕೆ ಹಾಕಿದವರಿಗೆ) ಹೆದರಿ ಮರುದಿನ ಜ್ವರವೂ ಬಂದಿತ್ತು. ಆದರೆ ಅವರು ಟಾರ್ಚ್ ಅಜ್ಜನ ಮುಖದಿಂದ ಭಯದಲ್ಲಿ ಒಮ್ಮೆಲೆ ತೆಗೆದಾಗ ಮತ್ತೆ ಅಜ್ಜನ ಮುಖ ಕಾಣಿಸಿತ್ತಂತೆ. ಇನ್ನು ಅವರಲ್ಲಿ ಒಬ್ಬರು ಓಡುವಾಗ ಹಿಂದಿರುಗಿ ನೋಡಿದಾಗ ಅಜ್ಜ ನಿರಂತರವಾಗಿ ಗಾಳ ಹಾಕುವುದು ಗಾಳ ಎಳೆಯುವುದು ಮಾಡುತ್ತಲೇ ಇದ್ದರಂತೆ......!!! ಇದನ್ನು ಮೀನು ಹಿಡಿಯುವ ಅಜ್ಜನ ಕತೆ ಎಂದು ನಮಣ್ಣ ನಮಗೆ ಹೇಳಿದ್ದರು.
ಈ ಕತೆ ಕೇಳಿದ ನಮ್ಮಮ್ಮ ಬಹುಶಃ ಆ ಅಜ್ಜ ಬದುಕಿರುವಾಗ ಮೀನು ಹಿಡಿಯಲು ಆ ಹೊಳೆಗೆ ಬರುತ್ತಿದ್ದರೇನೋ !!ಎಂದು ಹೇಳಿ "ಬೇಗ ಮಲಗಿ ಮಕ್ಕಳೇ ಇಲ್ಲಾಂದ್ರೆ ಆ ಅಜ್ಜ ಬರಬಹುದು "ಎಂದು ನಮಗೆ ಹೆದರಿಸಿದ್ದರು. ನನ್ನ ತಂಗಿ "ಅಮ್ಮಾ !!" ಎಂದು ಕೂಗಿ ಹೆದರಿದ್ದಳು. ಈ ಕತೆ ಕೇಳಿ ನಾವೆಲ್ಲಾ ಒಬ್ಬರನ್ನೊಬ್ಬರು ತಬ್ಬಿಕೊಂಡು ರಾತ್ರಿ ಹೆದರುತ್ತಲೇ ಮಲಗಿದ್ವಿ. ಈಗ ಕೂಡಾ ಆ ಸೇತುವೆ ದಾಟುವಾಗ ಅಜ್ಜ ಆ ಸೇತುವೆಯ ಮೇಲೆ ಹೇಗೆ ಕೂತು ಮೀನು ಹಿಡಿಯುತ್ತಿದ್ದರೋ ಎಂದು ಕಲ್ಪಿಸಿಸಿಕೊಳ್ಳುತೇನೆ !!ಆದರೂ ತುಂಬಾ ಭಯವಾಗುತ್ತದೆ!!!!!