ಮುಸ್ಸಂಜೆ ಪ್ರೀತಿ
ಮುಸ್ಸಂಜೆ ಪ್ರೀತಿ
ಇಂದು ಶಾಂತು ನನ್ನ ಮನೆಗೆ ಎರಡು ವರ್ಷಗಳ ತರುವಾಯ ಮತ್ತೆ ಬರುವವಳಿದ್ದಾಳೆ. ಅದೆಷ್ಟು ಕಾದಿದ್ದೆ ನಾನು? ಯಾವಾಗ ನಾವಿಬ್ಬರೂ ಮತ್ತೆ ಜೊತೆಯಾಗುತ್ತೇವೆಂದು! ಅಂತೂ ಆ ಸುದಿನ ಬಂದಿದೆ. ನನ್ನ ಶಾಂತು ಮತ್ತೆ ಈ ಮನೆಗೆ ಬಂದು ಮನೆಯನ್ನು ಬೆಳಗಿಸುತ್ತಾಳೆ. ದಿನವೂ ಪೂಜೆಯನ್ನು ಮಾಡುತ್ತಾಳೆ. ಅಂಗಳದಿಂದ ಹೂವುಗಳನ್ನು ಕಿತ್ತು ದೇವರಿಗೆ ಮುಡಿಸುತ್ತಾಳೆ. ನನಗೆ ಬಗೆ ಬಗೆಯ ತಿಂಡಿಗಳನ್ನು ಮಾಡಿಕೊಡುತ್ತಾಳೆ. ಅವಳಿದ್ದರೇನೇ ಈ ಮನೆಗೆ ಏನೋ ಒಂದು ಕಳೆ. ಅವಳಿಲ್ಲದೆ ಈ ಮನೆ ಇಷ್ಟು ದಿನ ಜೀವಂತಿಕೆಯನ್ನು ಕಳೆದುಕೊಂಡಿತ್ತು!! ಅಂತೂ ಈ ದಿನ ಮತ್ತೆ ನನ್ನ ಶಾಂತು ವಾಪಸ್ಸಾಗುತ್ತಾಳೆ. ಸಾಕು ಅವರುಗಳ ಸಹವಾಸ! ಮಕ್ಕಳೆಂದು ಸಾಕಿ ಸಲಹಿದ್ದಕ್ಕೆ ಬಲು ದೊಡ್ಡ ಬಹುಮಾನವನ್ನೇ ಕೊಟ್ಟಿದ್ದಾರೆ. ಅಲ್ಲಾ ನಾವು ಮಾಡಿದ ತಪ್ಪಾದರೂ ಏನು? ಅವರನ್ನು ಚೆನ್ನಾಗಿ ಸಾಕಿ ವಿದ್ಯಾವಂತರನ್ನಾಗಿ ಮಾಡಿದ್ದೇ ತಪ್ಪೇ? ಎಲ್ಲಿ ಎಡವಿದೆವು ನಾವು! ಚಿಕ್ಕ ಮಕ್ಕಳು ಎಂದು ಅಕ್ಕರೆಯಿಂದ ಮುದ್ದು ಮಾಡಿದ್ದೆ ತಪ್ಪಾಯ್ತಾ? ಇಬ್ಬರು ಬುದ್ಧಿವಂತರಾದರು ಸರಿ, ಆದರೆ ಕನಿಷ್ಠ ಸಂಸ್ಕಾರವು ಅವರಿಗಿಲ್ಲವಲ್ಲ! ಹಾಗೆ ನೋಡಿದರೆ ನಾವಿಬ್ಬರೂ ಆ ರೀತಿಯಲ್ಲ. ಎಲ್ಲರನ್ನೂ, ಎಲ್ಲವನ್ನೂ ಗೌರವದಿಂದಲೇ ಕಾಣುತ್ತೇವೆ. ಆದರೆ ನಮ್ಮ ಮಕ್ಕಳಿಗೆ ತಂದೆ-ತಾಯಿಯರ ಮೇಲೂ ಗೌರವ ಇಲ್ಲವಾಗಿ ಹೋಯಿತೆ?!
ಅಲ್ಲಾ, ನಾವು ಮಾಡಿದ ಪಾಪವಾದರೂ ಏನು? ಇಬ್ಬರೂ ಗಂಡು ಮಕ್ಕಳು ನಮ್ಮ ಜೊತೆಯಿರಲಿ ಎಂದು ಆಶಿಸಿದ್ದು ತಪ್ಪಾ? ಸರಿ, ಬೇಡ ಈ ಹಳ್ಳಿಯ ವಾತಾವರಣ ಅವರಿಗೆ ಇಷ್ಟವಾಗಲಿಲ್ಲ. ಹಾಗಂತ ಮನೆಯನ್ನೇ ಇಬ್ಭಾಗ ಮಾಡಿ ಎಂದು ಹೇಳಿಬಿಡುವುದೇ? ಅವರಿಬ್ಬರಿಗೆ ಈ ಆಸ್ತಿಯ ಮೇಲೆ ಎಷ್ಟು ಹಕ್ಕಿದೆಯೋ ಅಷ್ಟು ಹಕ್ಕು ನನಗೂ ಇದೆಯಲ್ಲವೇ! ನಾನೇ ಇವುಗಳನ್ನು ಕಷ್ಟಪಟ್ಟು ಸಂಪಾದಿಸಿದ್ದರಿಂದ, ನನಗೆ ಇದು ಮೊದಲು ಸೇರಬೇಕಲ್ಲವೇ? ಒಂದೇ ಕ್ಷಣದಲ್ಲಿ ಆಸ್ತಿಯನ್ನು ಪಾಲು ಮಾಡಿ ನಮ್ಮಿಬ್ಬರಿಗೂ ಹಂಚಿ ಬಿಡಿ ಎಂದರೆ, ವಯಸ್ಸಾದ ನಾವಿಬ್ಬರು ಎಲ್ಲಿಗೆ ಹೋಗಬೇಕು? ಆ ಕಡೆ ನಮ್ಮನ್ನೂ ಅವರ ಮನೆಗಳಲ್ಲಿ ಇಟ್ಟುಕೊಳ್ಳುವುದಿಲ್ಲವಂತೆ, ಈ ಕಡೆ ಪೂರ್ತಿ ಆಸ್ತಿಯನ್ನು ಇಬ್ಬರ ಹೆಸರಿಗೆ ಮಾಡಬೇಕಂತೆ?! ನಮ್ಮನ್ನೇನು ಅಂದುಕೊಂಡಿದ್ದಾರೆ ಅವರಿಬ್ಬರು? ಇರುವ ಆಸ್ತಿಯನ್ನು ಅವರಿಬ್ಬರಿಗೂ ಹಂಚಿ, ನಾವೇನು ಅವರ ಮುಂದೆ ಕೈಚಾಚಬೇಕೇನು? ನನ್ನನ್ನೇನು ಅಷ್ಟು ಮೂರ್ಖ ಅಂದುಕೊಂಡಿದ್ದಾನೆಯೇ ಅವರು!! ಈ ಆಸ್ತಿಯೆಲ್ಲ ಮುಂದೇನಿದ್ದರೂ ಅವರಿಗೆಯೇ ಅಲ್ಲವೇ? ಆದರೆ ಅದನ್ನು ತಿಳಿಯುವ ಕನಿಷ್ಠ ವ್ಯವಧಾನವೂ ಅವರಿಗಿಲ್ಲವೇ? "ಎಂದು ಸಿಟ್ಟು ಮಾಡಿಕೊಂಡರು ಸುಬ್ಬರಾಯರು.
ಹೊರಗಡೆ ಆಟೋ ನಿಂತ ಸದ್ದು ಕೇಳುತ್ತಿದ್ದಂತೆ ತನ್ನ ಪ್ರೀತಿಯ ಪತ್ನಿ ಶಾಂತಮ್ಮರನ್ನು ಬರಮಾಡಿಕೊಳ್ಳಲು ಓಡೋಡಿ ಹೋದರು. ಎರಡು ವರ್ಷಗಳ ನಂತರ ತನ್ನ ಪ್ರೀತಿಯ ಪತ್ನಿ ಮನೆಗೆ ವಾಪಸ್ಸಾಗುತ್ತಿದ್ದಾರೆ ಎಂದು ನೆನೆದು ಕಣ್ತುಂಬಿಕೊಂಡರು. ಆತುರದಲ್ಲೇ ತಾವು ತೊಟ್ಟಿದ್ದ ಪಂಚೆ ಶರ್ಟುಗಳನ್ನು ಮತ್ತೊಮ್ಮೆ ಸರಿಪಡಿಸಿಕೊಂಡರು! ಆಟೋದಿಂದ ಕಷ್ಟಪಟ್ಟು ನಗುತ್ತಲೇ ಕೆಳಗಿಳಿದ ಶಾಂತುವನ್ನು ನೋಡಿದ ರಾಯರು ಇವಳೇಕೆ ಇಷ್ಟು ಇಳಿದು ಹೋಗಿದ್ದಾಳೆ ಎಂದುಕೊಂಡರು. ಮನೆಯೊಳಗೆ ಕಾಲಿಡಲು ಹೋದ ಶಾಂತುವಿಗೆ "ಬಲಗಾಲಿಟ್ಟು ಒಳಗೆ ಬಾ" ಎಂದು ಪ್ರೀತಿಯಿಂದ ಹೇಳಿದರು. ಖುಷಿಯಿಂದಲೇ ತನ್ನ ಪತಿಯ ಮುಖವನ್ನು ನೋಡುತ್ತಾ ಶಾಂತಮ್ಮ "ಅಂತೂ ಎಂದು ಈ ದಿನ ಬರುತ್ತದೆ ಎಂದು ದಿನವೂ ಕಾಯುತ್ತಿದ್ದೆ ರೀ! ಇಂದು ಆ ಸುದಿನ ಬಂದಿದೆ ನೋಡಿ. ಬನ್ನಿ ಬಿಸಿಬಿಸಿ ಕಾಫಿ ಮಾಡಿಕೊಡುತ್ತೇನೆ" ಎಂದರು. ಶಾಂತಮ್ಮರಿಗೆ ಇಷ್ಟವೆಂದು ಬೋಂಡವನ್ನು ಕಟ್ಟಿಸಿಕೊಂಡು ಬಂದಿದ್ದ ರಾಯರು, ಕಾಫಿಯೊಂದಿಗೆ ಅದನ್ನು ತಿನ್ನಲು ತಮ್ಮ ಪ್ರೀತಿಯ ಮಡದಿಗೆ ಕೊಟ್ಟರು. ಈರುಳ್ಳಿ ಬೋಂಡವನ್ನು ನೋಡುತ್ತಿದ್ದಂತೆ ಶಾಂತಮ್ಮರಿಗೆ ಆಶ್ಚರ್ಯ ಮತ್ತು ಖುಷಿ ಎರಡು ಒಟ್ಟೊಟ್ಟಿಗೆ ಆಯಿತು.
ತನ್ನನ್ನು ಆ ಮನೆಗಳಲ್ಲಿ ವಿಚಾರಿಸಿಕೊಳ್ಳಲು ಯಾರೂ ಇರಲಿಲ್ಲ. ಮೊಮ್ಮಕ್ಕಳನ್ನು ನೋಡಿಕೊಳ್ಳುವ ಆಯಾಳಂತೆ ಕೆಲಸ ಮಾಡಿಕೊಂಡಿದ್ದೆ. ಆದರೆ ಇಲ್ಲಿ ತನ್ನನ್ನು ವಿಚಾರಿಸುವುದಕ್ಕೆ, ಪ್ರೀತಿಸುವುದಕ್ಕೆ ನನ್ನ ಪತಿಯಿದ್ದಾರೆ. "ದೇವರೇ ನಾನೇ ಧನ್ಯ!!" ಎರಡು ವರ್ಷಗಳ ಕಾಲ ಇವರನ್ನು ನೋಡಿದ್ದು ಮೊಮ್ಮಕ್ಕಳು ವಿಡಿಯೋ ಕಾಲ್ ಮಾಡಿದಾಗ ಮಾತ್ರ. ಇನ್ನೊಂದೆರಡು ಬಾರಿ ಹಬ್ಬವೆಂದು ಖುಷಿಯಿಂದಲೇ ಮಕ್ಕಳ ಮನೆಗೆ ಇವರು ಬಂದರೆ, ಏಕೋ ಇವರನ್ನು ಮಕ್ಕಳು ಅತಿಥಿಯನ್ನಾಗಿ ನೋಡಿದಂತೆ ಭಾಸವಾಯಿತು. ಬಂದ ಎರಡೇ ದಿನಗಳಿಗೆ ವಾಪಾಸ್ಸಾದರು. ನಾನೇ ಒಮ್ಮೆ ಇಬ್ಬರು ಮಕ್ಕಳು ಹಬ್ಬಕ್ಕೆಂದು ಸೇರಿದಾಗ, "ಅಪ್ಪನನ್ನು ಇಲ್ಲೇ ಒಂದೆರಡು ವಾರ ಇರಲು ಹೇಳಿ, ನನಗೂ ಏಕೋ ಬೇಜಾರು" ಎಂದು ಕೇಳಿದೆ. ಅದಕ್ಕೆ ಕಟ್ಟಿ ತುಂಡು ಮಾಡಿದಂತೆ ಕಿರಿಯ ಮಗ "ಇಲ್ಲಮ್ಮ ಅದು ಕಷ್ಟ. ನೀವಿಬ್ಬರೂ ಇಲ್ಲಿಯೇ ಇದ್ದರೆ ಮನೆ-ತೋಟಗಳನ್ನು ಹಳ್ಳಿಯಲ್ಲಿ ಯಾರು ನೋಡಿಕೊಳ್ಳುತ್ತಾರೆ? ನೀನು ಒಂದಷ್ಟು ದಿನ ಇಲ್ಲೇ ಇರು. ಇಲ್ಲಿ ನಾವೆಲ್ಲರೂ ಹೊರಗೆ ದುಡಿಯುವವರೇ. ಹಾಗಾಗಿ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟ. ನೀನು ಮೊಮ್ಮಕ್ಕಳನ್ನು ನೋಡಿಕೊಂಡು ಆರಾಮಾಗಿ ಒಂದು ಸ್ವಲ್ಪ ದಿನ ಇಲ್ಲಿರು. ನಂತರ ಊರಿಗೆ ಹೋಗುವಿಯಂತೆ" ಎಂದನು.
"ಕನಿಷ್ಠ ಸೌಜನ್ಯಕ್ಕಾದರೂ ಅಪ್ಪ ಒಂದು ವಾರದ ಮಟ್ಟಿಗೆ ಇಲ್ಲಿರಲಿ, ತೊಂದರೆಯೇನಿಲ್ಲ ಎಂದು ನನ್ನಿಬ್ಬರು ಮಕ್ಕಳು ಹೇಳಲಿಲ್ಲ. ಇವೆಲ್ಲವೂ ಆಸ್ತಿಯನ್ನು ಅವರಿಗೆ ಈಗಲೇ ಹಂಚಿಕೆ ಮಾಡದಿರುವ ಪರಿಣಾಮವೆಂದು ನನಗೆ ಗೊತ್ತಿತ್ತು!! ಆದರೂ ಏನೂ ಮಾತಾಡದೆ ಸುಮ್ಮನಿರುತ್ತಿದ್ದೆ. ಅಲ್ಲಿ ಆಗುತ್ತಿದ್ದದ್ದಾದರೂ ಏನು? ಮೂರು ಹೊತ್ತು ಮನೆಯೊಳಗೆ ಇದ್ದು ಬೇಸರವಾಗಿಬಿಟ್ಟಿತ್ತು! ಮೊಮ್ಮಕ್ಕಳನ್ನು ರೆಡಿ ಮಾಡಿ ಸ್ಕೂಲಿಗೆ ಕಳುಹಿಸಿದರೆ, ಮತ್ತೆ ಅವರು ಬರುತ್ತಿದ್ದದ್ದು ಸಂಜೆಯೇ. ಅಲ್ಲಿಯವರೆಗೂ ಏನು ಅಂತ ಮಾಡುವುದು? ಅದೇ ಮನೆಗೆಲಸ, ಟಿವಿ ನೋಡುವುದು, ಮೊಮ್ಮಕ್ಕಳಿಗೆ ತಿಂಡಿ ಮಾಡುವುದು. ಹಳ್ಳಿಯಲ್ಲಾದರೆ ಸುತ್ತಮುತ್ತ ಓಡಾಡಬಹುದು. ಆ ಮಹಾನಗರಿಯಲ್ಲೋ ಹೊರಗಡೆ ಹೋಗುವುದಕ್ಕೂ ಭಯ. ಅಂತೂ ಬಂಗಾರದ ಪಂಜರದಲ್ಲಿದ್ದ ಗಿಳಿಯ ರೀತಿ ನಾನಾಗಿದ್ದೆ".
"ಈಗ ಮತ್ತೆ ನನಗೆ ಉಸಿರಾಡುವಂತಾಗಿದೆ. ಈ ಹಳ್ಳಿಯ ಸೊಗಡೇ ಅಂತದ್ದು!! ನಾನು ಈ ಮನೆಯೊಳಗೆ ಕಾಲಿಟ್ಟೊಡನೆ ಒಂದು ಆತ್ಮೀಯ ಭಾವ ನನ್ನೊಳಗೆ ಉದಯಿಸಿತು. ಸತತ ಮೂವತ್ತು ವರ್ಷಗಳ ಸುದೀರ್ಘವಾದ ದಾಂಪತ್ಯ ನಮ್ಮದು. ಅತ್ಯಂತ ಬಡತನವನ್ನು ನೋಡಿ ಬಂದಿದ್ದೇವೆ. ಕಷ್ಟದಲ್ಲಿ ನಾವಿಬ್ಬರು ಜೊತೆಯಾಗಿಯೇ ನಿಂತು ಈ ಹೊಲ-ಗದ್ದೆಗಳನ್ನು ಮಾಡಿದ್ದೇವೆ. ಎಷ್ಟೇ ಕಷ್ಟ ಬಂದರೂ ಮಕ್ಕಳನ್ನು ದಡ ಸೇರಿಸಿದ್ದೇವೆ. ಈಗ ನೋಡಿದರೆ ಅವರ ಜೀವನದ ದೃಷ್ಟಿಕೋನವೇ ಬದಲಾದಂತಿದೆ! ಇರಲಿ ಪೇಟೆಯ ಜೀವನ ಅವರಿಗೆ ಹಾಗಾಗುವಂತೆ ಮಾಡಿದೆ. ಸ್ವಲ್ಪಮಟ್ಟಿಗೆ ಸ್ವಾರ್ಥವನ್ನು ಕಲಿಸಿದೆ! ಅವರ ಮಕ್ಕಳು ಎದೆಯೆತ್ತರಕ್ಕೆ ಬೆಳೆದು ಪ್ರಶ್ನಿಸಿದಾಗ, ಮತ್ತೆ ಸರಿಯಾಗುತ್ತಾರೆ! ಈಗ ಅದರ ಚಿಂತೆ ಬೇಡ. ಇನ್ನೇನಿದ್ದರೂ ಮಿಕ್ಕ ಜೀವನವನ್ನು ನನ್ನ ಪತಿಯೊಂದಿಗೆ ಸಂತಸದಿಂದ ಕಳೆಯಬೇಕು" ಎಂದು ರಾಯರನ್ನು ಕರೆದು ಕಾಫಿ ಕೊಟ್ಟರು.
ಘಮ ಘಮಿಸುವ ಕಾಫಿಯ ಜೊತೆಗೆ ಈರುಳ್ಳಿ ಬೋಂಡವನ್ನು ಆಸ್ವಾದಿಸುತ್ತಾ ರಾಯರು, "ಶಾಂತು, ನಿನ್ನ ಕೈ ರುಚಿಗೆ ಯಾವುದೂ ಸಾಟಿಯಿಲ್ಲ ಕಣೆ. ಇಷ್ಟು ದಿನಗಳಿಂದ ನಾನೇ ಅಡುಗೆ ಮಾಡಿಕೊಂಡು ಫಜೀತಿ ಪಡುತ್ತಿದ್ದೆ. ನಾಲಗೆಯೂ ಜಡ್ಡು ಹಿಡಿದಂತಾಗಿದೆ. ಒಂದೊಳ್ಳೆಯ ಸಾರು-ಪಲ್ಯ, ಮುದ್ದೆಯನ್ನು ಮಧ್ಯಾಹ್ನಕ್ಕೆ ಮಾಡಿದು" ಎಂದರು. ಖುಷಿಯಿಂದಲೇ ಒಪ್ಪಿದ ಶಾಂತಮ್ಮ ಅಡುಗೆ ತಯಾರಿಗೆ ಹೋದರು. ಇತ್ತ ರಾಯರು "ಹೊರಗಡೆ ಕೆಲಸವಿದೆ ಹೋಗಿ ಬರುತ್ತೇನೆ" ಎಂದು ಹೊರಟರು. ಇಷ್ಟು ಬಿರು ಬಿಸಿಲಿನಲ್ಲಿ ಎಲ್ಲಿಗೆ ಹೋದರೆಂದುಕೊಳ್ಳುತ್ತಾ ತಮ್ಮ ಕೆಲಸದಲ್ಲಿ ಮಗ್ನರಾದರು ಶಾಂತಮ್ಮ. ಎಷ್ಟೋ ದಿನಗಳ ನಂತರ ಸ್ವಾದಿಷ್ಟವಾದ ಊಟವನ್ನು ಸಂತೃಪ್ತಿಯಿಂದ ಸೇವಿಸಿದರು ರಾಯರು. ನಂತರ ಪ್ರೀತಿಯಿಂದ ತಮ್ಮ ಮಡದಿ ಶಾಂತುವಿಗೆ "ಇಂದು ಸಂಜೆ ಬೇಗ ರೆಡಿಯಾಗು. ದೇವಸ್ಥಾನಕ್ಕೆ ಹೋಗೋಣ. ನಂತರ ಅಲ್ಲಿಂದ ಟೆಂಟ್ ಗೆ ಹೋಗಿ ಒಂದು ಸಿನಿಮಾ ನೋಡೋಣ. ಅಲ್ಲಿಂದ ಹೋಟೆಲಿಗೆ ಹೋಗಿ ಊಟ ಮಾಡಿಕೊಂಡು ಬರೋಣ. ತಗೋ ಈ ಹಸಿರು ಸೀರೆ, ಹೂವು ಮತ್ತು ಗಾಜಿನ ಬಳೆ. ಇವೆಲ್ಲವನ್ನೂ ತೊಟ್ಟುಕೊಂಡೆ ನೀನು ಸಂಜೆ ಸಿದ್ಧವಾಗಬೇಕು! ಇನ್ನೇನಿದ್ದರೂ 'ನಿನಗೆ ನಾನು, ನನಗೆ ನೀನು' ಕಣೇ!! ಇರುವ ದಿನಗಳನ್ನು ಚೆನ್ನಾಗಿ, ಸಂತೋಷದಿಂದ ಕಳೆಯೋಣ. ಇನ್ಯಾವುದರ ಬಗ್ಗೆ ಯೋಚನೆ, ದುಗುಡ, ಚಿಂತೆ, ಒಂಟಿತನಗಳು ನಮ್ಮಿಬ್ಬರ ನಡುವೆ ಬರುವುದು ಬೇಡ ಶಾಂತು! ಅಚ್ಚುಕಟ್ಟಾಗಿ ತೋಟದ ಕೆಲಸ ಮಾಡಿಕೊಂಡು, ಹೊರಗೆ ಸುತ್ತಾಡಿಕೊಂಡು ಮಿಕ್ಕ ದಿನಗಳನ್ನು ಕಳೆಯೋಣ. ಮಕ್ಕಳು-ಮೊಮ್ಮಕ್ಕಳು ಬಂದಾಗ ಸಂಭ್ರಮದಿಂದ ಇರೋಣ. ಹಳೆಯದನ್ನೆಲ್ಲ ಇಟ್ಟುಕೊಂಡು ಕೊರಗುವುದು ಬೇಡ. ಸಾಕು ಈ ಮುಸ್ಸಂಜೆಯ ಹೊತ್ತಲ್ಲಿ ಎಲ್ಲರನ್ನೂ, ಎಲ್ಲವನ್ನೂ ಪ್ರೀತಿಯಿಂದ ಕಾಣೋಣ. ನಮ್ಮಿಬ್ಬರ ನಡುವಲ್ಲೂ ಜಗಳವಾಗದಂತೆ ನೋಡಿಕೊಳ್ಳೋಣ. ಅಕಸ್ಮಾತ್ ಆದರೂ, ಅದೇ ವಿಷಯವನ್ನು ಜಗ್ಗಾಡಿ ಎಳೆದಾಡುವುದು ಬೇಡ ಅಲ್ಲವೇ?!" ಎಂದರು.
ತನ್ನ ಗಂಡ ಹೇಳಿದ ಎಲ್ಲಾ ಮಾತುಗಳನ್ನು ಪ್ರೀತಿಯಿಂದಲೇ ಅನುಮೋದಿಸುತ್ತಾ "ಹೂಂ ರೀ, ನೀವು ಹೇಳಿದಂತೆ ಆಗಲಿ. ಇನ್ನು ಮೇಲಿಂದ ಇಬ್ಬರೂ ಒಟ್ಟಿಗೆ ಇರೋಣ. ಜಗಳ ಆಡೋದನ್ನೇ ಈ ಎರಡು ವರ್ಷ ಮರೆತಿದ್ವಿ. ಒಳ್ಳೆ ಮರುಭೂಮಿಯಲ್ಲಿ ಇದ್ದಂಗೆ ಆಗಿತ್ತು. ಜಗಳ-ಮುನಿಸಿನ ನಂತರ ಬರುವ ಪ್ರೀತಿ, ಮಳೆಬಿಲ್ಲಿನಂತೆ ಇರುತ್ತದೆ ಎಂಬುದರಲ್ಲಿ ಸಂಶಯವಿಲ್ಲ!! ಅಂತೂ ಇಷ್ಟು ವರ್ಷಕ್ಕೆ ಒಂದೊಳ್ಳೆ ಸೀರೆಯನ್ನು ತಂದಿದ್ದೀರಲ್ಲ. ನನಗಂತೂ ಮದುವೆಯಾದ ಹೊಸತರಲ್ಲಿ ನಾವಿಬ್ಬರೂ ಜೋಡಿ ಹಕ್ಕಿಗಳ ಹಾಗೇ ಸಿನಿಮಾಗಳನ್ನು ನೋಡಿದ ದಿನಗಳು ನೆನಪಾಗುತ್ತಿವೆ! ನೀವು ಹೇಳಿದಂತೆ ಸಂಜೆ ಬೇಗ ರೆಡಿಯಾಗಿ ಎಲ್ಲಾ ಕಡೆಯೂ ಹೋಗಿ ಬರೋಣ. ನಾನಂತೂ ಇಷ್ಟು ದಿನ ಮನೆಯಲ್ಲಿ ಇದ್ದು ಬಸವಳಿದು ಹೋಗಿದ್ದೇನೆ. ಹಾಗಾಗಿ ಹೊರಗೆ ಸುತ್ತಾಡಬೇಕೆಂಬ ಆಸೆಯಾಗಿದೆ. ನೀವು ಒಂದು ಗಂಟೆ ನಿದ್ರೆ ಮಾಡಿ. ಅಷ್ಟರೊಳಗೆ ಈ ಮನೆಯನ್ನು ಮತ್ತೆ ಮೊದಲಿನ ಸ್ಥಿತಿಗೆ ತಂದಿಡುತ್ತೇನೆ. ಇನ್ನು ನಾನು ಬಂದಾಯ್ತಲ್ಲ? ನೋಡಿ ಇನ್ನು ಮೇಲೆ ಮನೆ ಹೇಗೆ ಫಳಫಳ ಅನ್ನುತ್ತದೆ ಅಂತ" ಎಂದು ದೇವರಿಗೆ ಹೂವು ಮೂಡಿಸಲು ಹೋದರು ಶಾಂತಮ್ಮ..!!

