STORYMIRROR

Madhan Technology

Comedy Drama Romance

4  

Madhan Technology

Comedy Drama Romance

Mr. ವಿಚಿತ್ರ weds ಎಡಿಟರ್ ಮೇಡಂ!

Mr. ವಿಚಿತ್ರ weds ಎಡಿಟರ್ ಮೇಡಂ!

10 mins
2

Mr. ವಿಚಿತ್ರ weds ಎಡಿಟರ್ ಮೇಡಂ!
(ಒಂದು ರೊಮ್ಯಾಂಟಿಕ್ & ಕಾಮಿಡಿ ಲವ್ ಸ್ಟೋರಿ)

ಲೇಖಕರು: [ಮದನ್ ಬಾಬುರಾವ್ ಉಪಳೆ]

ಅಧ್ಯಾಯ ೧: ಆ ಒಂದು ನಗು

ಸ್ಥಳ: ಜಿಲ್ಲಾ ಸಭಾಂಗಣ, ಚಿಕ್ಕಮಗಳೂರು.

ಚಿಕ್ಕಮಗಳೂರಿನ ಜಿಲ್ಲಾ  ಆಫೀಸ್ ಆವರಣದಲ್ಲಿ ಎಂದಿನಂತೆ ಫೈಲ್-ಗಳ ರವಾನೆಯ ಗದ್ದಲವಿರಲಿಲ್ಲ. ಬದಲಿಗೆ ಅಲ್ಲಿಂದ ಚಪ್ಪಾಳೆ, ಜೋರು ಧ್ವನಿ, ಮತ್ತು ಆಗಾಗ ನಗುವಿನ ಸದ್ದು ಕೇಳಿಸುತ್ತಿತ್ತು. ಕಾರಣ, ಮುಂಬರುವ ಸರ್ಕಾರಿ ನೌಕರರ ಕಾರ್ಯಾಗಾರಕ್ಕೆ ನಡಿತಿರೋ ನಾಟಕದ ರಿಹರ್ಸಲ್!

ಸ್ಟೇಜ್ ಮುಂದುಗಡೆ ಸೊಂಟದ ಮೇಲೆ ಕೈ ಇಟ್ಟುಕೊಂಡು, ಕಣ್ಣು ಕೆಂಪು ಮಾಡ್ಕೊಂಡು ನಿಂತಿದ್ದ ನಮ್ಮ ಹೀರೋ ಮದನ್. ಕಡೂರಿನಲ್ಲಿ ಅಗ್ರಿಕಲ್ಚರ್ ಆಫೀಸರ್. ಮೈ ಬಣ್ಣ ಬಿಳುಪು, ಮುಖದಲ್ಲಿ ಎಲ್ಲಿಲ್ಲದ ಕಳೆ. ಮೀಸೆ ತಿರುವಿ, ರೇಷ್ಮೆ ಶರ್ಟ್ ಸ್ಲೀವ್ಸ್ ಫೋಲ್ಡ್ ಮಾಡಿ ನಿಂತರೆ, ಇವನು ಆಫೀಸರ್ ಅನ್ನೋದಕ್ಕಿಂತ ರೌಡಿ ಸಿನೆಮಾದ ಹಿರೋ ತರಾನೇ ಕಾಣ್ತಿದ್ದ. ಉತ್ತರ ಕರ್ನಾಟಕದ ಗಂಡು ಕಲೆ ಅವನ ಮಾತಲ್ಲಿ ಎದ್ದು ಕಾಣ್ತಿತ್ತು.

"ಲೇ.. ತಡ್ರಿ ಲೇ.. ಮ್ಯೂಸಿಕ್ ನಿಲ್ಸ್ರಿ ಅಲ್ಲೇ!" ಮದನ್ ಘರ್ಜಿಸಿದ. ಎಲ್ಲರೂ ಗಪ್ ಚುಪ್.

"ಏನ್ರೀ ಅದು ಆಕ್ಟಿಂಗ್? ಹ? ಊಟಕ್ಕೆ ಉಪ್ಪು-ಖಾರ ಹಾಕ್ತಿರೋ ಇಲ್ವೋ? ಆ ಡೈಲಾಗ್ ಹೇಳುವಾಗ ಮುಖದಾಗ ಒಂದು ಚೂರು 'ಫೀಲ್' ಬೇಡವಾ? ಸುಮ್ನೆ ನ್ಯೂಸ್ ಓದಿದಂಗೆ ಒಪ್ಪಿಸಿದ್ರೆ ಹೆಂಗೆ?"

ಮದನ್ ಬೈಯ್ಯೋದನ್ನ ಕೇಳಿಸಿಕೊಳ್ಳೋಕೆ ಒಂದು ಪ್ರೇಕ್ಷಕ ವರ್ಗವೇ ಇತ್ತು. ಅದರಲ್ಲೂ ಮೂಲೆಯಲ್ಲಿ ಒಂದು ಕುರ್ಚಿಯಲ್ಲಿ ಕೂತಿದ್ದ ನಮ್ಮ ಹಿರೋಯಿನ್ ಪ್ರೇಮ, ಇವನ ಆರ್ಭಟ ನೋಡಿ ಬೆರಗಾಗಿದ್ದಳು. ಚಿಕ್ಕಮಗಳೂರು ಆಫೀಸ್ ನಲ್ಲಿ ಆಡಿಟರ್. ನೋಡೋಕೆ ತುಂಬಾನೇ ಸಿಂಪಲ್, ಆದ್ರೆ ಕಣ್ಣಲ್ಲಿ ಒಂದು ಚೂಟಿ ತನ.

"ಇವನ್ಯಾರಪ್ಪ ಹಿಟ್ಲರ್ ಮೊಮ್ಮಗನ ತರ ಆಡ್ತಾನೆ? ಡೈರೆಕ್ಟರ್ ಅಂದ್ರೆ ರಾಜಮೌಳಿ ಅನ್ಕೊಂಡ್ ಬಿಟ್ಟವನೆ," ಎಂದು ಪಕ್ಕದಲ್ಲಿದ್ದ ಫ್ರೆಂಡ್ ರಚನಾ ಕಿವಿಯಲ್ಲಿ ಉಸುರಿದಳು ಪ್ರೇಮ.

ಇಷ್ಟರಲ್ಲೇ ಮದನ್ ಕಣ್ಣು ಆ ಇಬ್ಬರ ಕಡೆ ಬಿತ್ತು. "ರೀ ಮೇಡಂ.. ಲಾಸ್ಟ್ ರೋ! ಅಲ್ಲಿ ಕುಶಲೋಪರಿ ಮಾತಾಡೋಕೆ ಬಂದಿಲ್ಲ ನಾವು. ನೆಕ್ಸ್ಟ್ ಸೀನ್ ನಿಮ್ಮದೇ ಅಲ್ವಾ? ಸ್ಟೇಜ್ ಮೇಲೆ ಬನ್ರಿ."

ಪ್ರೇಮಳಿಗೆ ಎದೆಯಲ್ಲಿ ಢವಢವ ಶುರುವಾಯ್ತು. ಸ್ಟೇಜ್ ಮೇಲೆ ಹೋದಳು. ಸೀನ್ ಪ್ರಕಾರ ಅವಳು ಗಂಡನ ಹತ್ರ ಜಗಳ ಆಡಬೇಕು.

ಮದನ್ ಆಕ್ಷನ್ ಹೇಳಿದ. "ಸ್ಟಾರ್ಟ್!"

ಪ್ರೇಮ ಡೈಲಾಗ್ ಹೇಳೋಕೆ ಶುರು ಮಾಡಿದಳು. "ರೀ.. ನೀವು ಪೇಟೆಗೆ ಹೋಗಿ ನನಗೊಂದು ಸೀರೆ ತರಲಿಲ್ಲ ಅಂದ್ರೆ.. ನಾನು.. ನಾನು.."

ಅವಳಿಗೆ ಡೈಲಾಗ್ ಮರೆತು ಹೋಯ್ತು. ಎದುರುಗಡೆ ಮದನ್ ಕಣ್ಣು ಕಿರಿದು ಮಾಡಿ ನೋಡ್ತಿದ್ದ. ಗಾಬರಿಯಲ್ಲಿ, "ನಾನು.. ನಾನು.. ಊಟ ಮಾಡಲ್ಲ.." ಎಂದು ಹೇಳುವ ಬದಲು, "ನಾನು.. ನಾನು.. ನಿಮ್ಮನ್ನೇ ತಿಂತೀನಿ!" ಎಂದುಬಿಟ್ಟಳು!

ಅವಳು ಹೇಳಿದ್ದು ಒಂದಾದರೆ, ಆ ಟೈಮಲ್ಲಿ ಅವಳ ಮುಖದ ಎಕ್ಸ್‌ಪ್ರೆಶನ್ ಹೇಗಿತ್ತು ಅಂದ್ರೆ, ಯಾವುದೋ ಹುಳಿ ಮಾವಿನಕಾಯಿ ತಿಂದ ಮಗುವಿನ ತರ ಮೂತಿ, ಕಣ್ಣು ಮುಚ್ಚಿ, ಹಣೆ ಸುಕ್ಕಿ ವಿಚಿತ್ರವಾಗಿತ್ತು.

ಅಲ್ಲಿವರೆಗೂ ಗಂಭೀರವಾಗಿದ್ದ ಮದನ್, ಅವಳ ಆ "ವಿಚಿತ್ರ ಮುಖಭಾವ" ನೋಡಿ ತಡೆಯಲಾರದೆ, ಜೋರಾಗಿ .. ಹಹಹಹಹ! ಎಂದು ನಗೇಬಿಟ್ಟ!

ಇಡೀ ಹಾಲ್ ಸ್ತಬ್ಧವಾಯ್ತು. "ಮೇಡಂ.. ಗಂಡ ಸೀರೆ ತರ್ಲಿಲ್ಲ ಅಂದ್ರೆ ಅವನ್ನೇ ತಿಂತೀರಾ? ನೀವು ಮನುಷ್ಯರಾ ಅಥವಾ ರಾಕ್ಷಸರಾ?" ಎಂದು ನಗುತ್ತಲೇ ಕೇಳಿದ. ಪ್ರೇಮ ತಲೆ ತಗ್ಗಿಸಿ ನಿಂತಳು. ಆದರೆ ಆ ಕ್ಷಣ ಮದನ್ ಕಣ್ಣಲ್ಲಿ ಅವಳ ಬಗ್ಗೆ ಒಂದು ಸಣ್ಣ ಕುತೂಹಲ ಮೂಡಿತು.

ಅಂದು ರಾತ್ರಿ ಮನೆಗೆ ಹೋದ್ರೂ ಪ್ರೇಮಳಿಗೆ ಆ ನಗು, ಆ ಬೈಗುಳ, ಮತ್ತು ಮದನ್ ನ ಆ 'Attitude' ಪದೇ ಪದೇ ನೆನಪಾಗ್ತಿತ್ತು.

ಅಧ್ಯಾಯ ೨: ಜರ್ನಿ ವಿತ್ 'ಮಿಸ್ಟರ್ ವಿಚಿತ್ರ'

ಸ್ಥಳ: ಚಿಕ್ಕಮಗಳೂರು ಬಸ್ ನಿಲ್ದಾಣ ಮತ್ತು ಚಲಿಸುವ ಬಸ್ ನಲ್ಲಿ.

ಮರುದಿನ ಬೆಳಿಗ್ಗೆ ಎಲ್ಲರೂ ಟ್ರೈನಿಂಗ್ ಗಾಗಿ ಚಿತ್ರದುರ್ಗಕ್ಕೆ ಹೊರಟಿದ್ದರು. ಬಸ್ ಹೊರಟಿತು. ಮದನ್ ಕೊನೆಯ ಸೀಟ್ ನಲ್ಲಿ, ಕಿವಿಗೆ ಇಯರ್ ಫೋನ್ ಹಾಕಿಕೊಂಡು ಪ್ರಪಂಚದ ಪರಿವೇ ಇಲ್ಲದವನಂತೆ ಕೂತಿದ್ದ. ಪ್ರೇಮ ಮತ್ತು ಅವಳ ಫ್ರೆಂಡ್ಸ್ ಮುಂದಿನ ಸೀಟ್ ನಲ್ಲಿ ರೀಲ್ಸ್ (Reels) ಮಾಡುವುದರಲ್ಲಿ ಬ್ಯುಸಿ ಆಗಿದ್ದರು.

ಹಾಡು ಪ್ಲೇ ಆಯ್ತು: "ಚಮಕ್ ಚಮಕ್ ಚಮಕ್ ಛಮ್.. ಮಾತಾಡೋ ಮಲ್ಲಿಗೆ.."

ಪ್ರೇಮ ಆ ಹಾಡಿಗೆ ತಕ್ಕಂತೆ ಸ್ಟೆಪ್ಸ್ ಹಾಕುತ್ತಿದ್ದಳು. ಅವಳ ಮುಖದಲ್ಲಿ ನಗು, ಕಣ್ಣಲ್ಲಿ ಉತ್ಸಾಹ ನೋಡಿ ಇಡೀ ಬಸ್ ನಲ್ಲಿದ್ದವರು ಚಪ್ಪಾಳೆ ತಟ್ಟಿದರು. ಕೊನೆಯ ಸೀಟ್ ನಲ್ಲಿದ್ದ ಮದನ್ ಇವರನ್ನೇ ಗಮನಿಸುತ್ತಿದ್ದ. "ಪರವಾಗಿಲ್ಲ, ನೆನ್ನೆ ನೋಡಿದಾಗ ಬರೀ ಎಡವಟ್ಟು ಅನ್ಕೊಂಡಿದ್ದೆ. ಡ್ಯಾನ್ಸ್ ಚೆನ್ನಾಗೇ ಮಾಡ್ತಾಳೆ," ಎಂದು ಮನಸಲ್ಲೇ ಅಂದುಕೊಂಡ.

ಟೀ ಬ್ರೇಕ್ ನಲ್ಲಿ ಮದನ್ ಪ್ರೇಮಳ ಹತ್ತಿರ ಬಂದ.

"ಎಕ್ಸ್‌ಕ್ಯೂಸ್ ಮೀ ಮೇಡಂ.. ಆವಾಗ್ಲೇ ಬಸ್ ನಲ್ಲಿ ಒಂದು ವಿಡಿಯೋ ಮಾಡಿದ್ರಲ್ಲ? ಅದು ಚೆನ್ನಾಗಿ ಬಂದಿದೆ. ನಂಗೊಂದು ಚೂರು ಕಳಿಸ್ತೀರಾ?"

ಪ್ರೇಮಳಿಗೆ ಆಶ್ಚರ್ಯವಾಯ್ತು. "ಸರಿ ಸರ್, ನಂಬರ್ ಹೇಳಿ ವಾಟ್ಸಾಪ್ ಮಾಡ್ತೀನಿ," ಎಂದಳು.

ಅವಳು ನಂಬರ್ ಸೇವ್ ಮಾಡಲು ಹೋದಾಗ, ಟ್ರೂಕಾಲರ್ ನಲ್ಲಿ ಹೆಸರು ಡಿಸ್ಪ್ಲೇ ಆಯ್ತು: "Mr. ವಿಚಿತ್ರ".

ಪ್ರೇಮಳಿಗೆ ನಗು ತಡೆಯೋಕೆ ಆಗ್ಲಿಲ್ಲ. "ಏನ್ ಸರ್ ಇದು ಹೆಸರು?"

ಮದನ್ ತಲೆ ಕೆರೆದುಕೊಂಡ. "ಅದು ನಮ್ ಫ್ರೆಂಡ್ಸ್ ಇಟ್ಟಿದ್ದು. ನಮ್ ಬಿಹೇವಿಯರ್ ಸ್ವಲ್ಪ ಹಂಗೇ ಅಲ್ವಾ. ನೀವು ಬೇಕಿದ್ರೆ 'ಮದನ್' ಅಂತಾನೇ ಸೇವ್ ಮಾಡ್ಕೊಳ್ಳಿ."

"ಇಲ್ಲ ಸರ್.. ನಿಮಗೆ 'Mr. ವಿಚಿತ್ರ' ಅನ್ನೋ ಹೆಸರೇ ಸರಿ ಹೋಗುತ್ತೆ," ಎಂದು ಮನಸಲ್ಲೇ ನಕ್ಕಳು ಪ್ರೇಮ.

ಅವತ್ತು ರಾತ್ರಿ ಮದನ್ ವಾಟ್ಸಾಪ್ ಸ್ಟೇಟಸ್ ಹಾಕಿದ್ದ:

ಬಸ್ ನಲ್ಲಿ ತೆಗೆದ ವಿಡಿಯೋ. ಕ್ಯಾಪ್ಷನ್: "Journey Begins... with Crazy People!"

ಪ್ರೇಮಳಿಗೆ ಸಿಟ್ಟು ಬಂತು. "ನನ್ನ ವಿಡಿಯೋ ಹಾಕಿ ಕ್ರೇಜಿ ಪೀಪಲ್ ಅಂತಾನಾ? ಇರು ಮಗನೇ ನಿನಗೆ ನಾಳೆ ಕ್ಲಾಸ್ ತಗೊಳ್ತೀನಿ," ಎಂದುಕೊಂಡಳು. ಆದರೆ ಅವಳ ಮುಖದಲ್ಲಿ ಕೋಪಕ್ಕಿಂತ ಹೆಚ್ಚಾಗಿ ಖುಷಿಯೇ ಜಾಸ್ತಿ ಇತ್ತು.

ಅಧ್ಯಾಯ ೩: ಮೌನ ರಾಗ

ಸ್ಥಳ: ಟ್ರೈನಿಂಗ್ ಸೆಂಟರ್, ಚಿತ್ರದುರ್ಗ.

ಚಿತ್ರದುರ್ಗದ ಟ್ರೈನಿಂಗ್ ಸೆಂಟರ್ ನಲ್ಲಿ ಮೂರು ದಿನಗಳ ಕಾಲ ಮದನ್ ಮತ್ತು ಪ್ರೇಮಳ ಕಣ್ಣಾಮುಚ್ಚಾಲೆ ನಡೆಯಿತು.

ಮಧ್ಯಾಹ್ನ ಊಟದ ಟೈಮ್ ನಲ್ಲಿ ಪ್ರೇಮ ಮಾತನಾಡಿಸಲು ಪ್ರಯತ್ನಿಸಿದಳು.

"ಸರ್, ಊಟ ಹೇಗಿದೆ?"

ಮದನ್ ಫೋನ್ ನಿಂದ ತಲೆ ಎತ್ತದೆಯೇ, "ಪರವಾಗಿಲ್ಲ ಮೇಡಂ," ಎಂದಷ್ಟೇ ಉತ್ತರಿಸಿದ.

ಪ್ರೇಮ: "ನಿಮ್ ಊರು ಹೂವಿನ ಹಡಗಲಿ ಅಂದ್ರಲ್ಲ.. ಅಲ್ಲಿ ಮಲ್ಲಿಗೆ ಫೇಮಸ್ ಅಲ್ವಾ?"

ಮದನ್: "ಹೂ ಮೇಡಂ."

ಪ್ರೇಮಳಿಗೆ ಸಿಟ್ಟು ಬಂತು. "ರೀ ಮಿಸ್ಟರ್ ವಿಚಿತ್ರ.. ನಾನು ಇಷ್ಟೊಂದು ಮಾತಾಡ್ತಿದೀನಿ, ನೀವು ಬರೀ 'ಹೂ', 'ಆಯ್ತು' ಬಿಟ್ರೆ ಬೇರೆ ಪದಗಳೇ ಬರಲ್ವಾ? ರೇಷನ್ ಕಾರ್ಡ್ ನಲ್ಲಿ ಅಕ್ಕಿ ಅಳದಂಗೆ ಮಾತಾಡ್ತೀರಲ್ಲ!"

ಮದನ್ ಮೊದಲ ಬಾರಿಗೆ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಸಣ್ಣದಾಗಿ ಸ್ಮೈಲ್ ಮಾಡಿ, "ಊಟ ಮಾಡೋವಾಗ ಜಾಸ್ತಿ ಮಾತಾಡಿದ್ರೆ ಅನ್ನದ ಅಗುಳು ಗಂಟಲಿಗೆ ಸಿಕ್ಕಾಕೋತ್ತೆ ಮೇಡಂ. ಅದ್ಕೆ ನಾನು ಸೈಲೆಂಟ್," ಎಂದು ಪ್ಲೇಟ್ ಎತ್ತಿಕೊಂಡು ಹೋದ.

ಪ್ರೇಮಳಿಗೆ ಅವಮಾನ ಮತ್ತು ನಗು ಎರಡೂ ಬಂತು. "ಇವನಿಗೆ ಲವರ್ ಅಂತೂ ಇರೋಕೆ ಚಾನ್ಸೇ ಇಲ್ಲ. ಆಟಿಟ್ಯೂಡ್ ರಾಜ," ಎಂದುಕೊಂಡಳು.

ಆದರೆ ಅಂದು ಸಂಜೆ ಕೋಟೆ ನೋಡಲು ಹೋದಾಗ, ಮದನ್ ಜೊತೆಗೇ ಬಂದ. ಕೋಟೆಯ ಗಾಳಿಯಲ್ಲಿ ಇಬ್ಬರೂ ಜೊತೆಯಾಗಿ ಕೂತು ಫೋಟೋ ತೆಗೆಸಿಕೊಂಡರು. ಆ ಮೌನದಲ್ಲೇ ಒಂದು ಕನೆಕ್ಷನ್ ಏರ್ಪಟ್ಟಿತ್ತು.

ಅಧ್ಯಾಯ ೪: ಹ್ಯಾಪಿ ಬರ್ತ್ಡೇ ಎಡಿಟರ್ ಮೇಡಂ!

ಸಮಯ: ಸೆಪ್ಟೆಂಬರ್ ೧೪ರ ಮಧ್ಯರಾತ್ರಿ.

ಟ್ರೈನಿಂಗ್ ಮುಗಿದು ಒಂದು ತಿಂಗಳು ಕಳೆದಿತ್ತು. ಮದನ್ ಮತ್ತು ಪ್ರೇಮ ನಡುವೆ ಕೇವಲ "ಹಾಯ್, ಬಾಯ್" ಮೆಸೇಜ್ ಗಳಷ್ಟೇ ಇದ್ದವು.

ಅಂದು ಪ್ರೇಮಳ ಹುಟ್ಟುಹಬ್ಬ. ರಾತ್ರಿ ೧೨ ಗಂಟೆಗೆ ಮದನ್ ವಾಟ್ಸಾಪ್ ಸ್ಟೇಟಸ್ ಅಪ್ಡೇಟ್ ಆಯ್ತು.

ಅಲ್ಲಿ ಕಂಡ ದೃಶ್ಯ ನೋಡಿ ಪ್ರೇಮ ಶಾಕ್ ಆದಳು. ಮದನ್ ಹಾಕಿದ್ದು ಪ್ರೇಮಳ ಫೋಟೋ! ಕೋಟೆ ಮೇಲೆ ನಗ್ತಾ ನಿಂತಿದ್ದ ಫೋಟೋ ಹಾಕಿ, "Happy Birthday Editor Madam! Keep Smiling like this. - Madan" ಎಂದು ಬರೆದಿದ್ದ.

(ಬಸ್ ನಲ್ಲಿ ಅವಳು ರೀಲ್ಸ್ ಎಡಿಟ್ ಮಾಡಿ ಕಳಿಸಿದ್ದಕ್ಕೆ ಈ 'ಎಡಿಟರ್ ಮೇಡಂ' ಅನ್ನೋ ನಿಕ್ ನೇಮ್ ಇಟ್ಟಿದ್ದ).

ಪ್ರೇಮ ತಕ್ಷಣ ರಿಪ್ಲೈ ಮಾಡಿದಳು. "Thank you so much Sir! 😍 ಈ ಫೋಟೋ ಯಾವಾಗ ತೆಗೆದಿದ್ದು?"

ಮದನ್: "ವೆಲ್ಕಮ್ ಮೇಡಂ. ಕೋಟೆ ಮೇಲೆ ನೀವು ಫೋಸ್ ಕೊಡ್ತಿದ್ರಲ್ಲ, ಆಗ ಕ್ಲಿಕ್ ಮಾಡಿದ್ದು. ಚೆನ್ನಾಗಿತ್ತಾ?"

ಅವತ್ತು ರಾತ್ರಿ ಅವರಿಬ್ಬರ ಚಾಟಿಂಗ್ ೧೨ ಗಂಟೆಯಿಂದ ೧ ಗಂಟೆವರೆಗೂ ನಡೀತು. ಅಲ್ಲಿವರೆಗೂ ಬರೀ "Ok, Sent" ಅನ್ನುತ್ತಿದ್ದ ಮದನ್, ಅಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ. ಅಲ್ಲಿಗೆ 'ಆಫೀಸರ್ - ಆಡಿಟರ್' ಗೋಡೆ ಒಡೆದು, 'ಫ್ರೆಂಡ್ಸ್' ಅನ್ನೋ ಹೊಸ ಬಾಂಧವ್ಯ ಶುರುವಾಯ್ತು.

ಅಧ್ಯಾಯ ೫: ಆ ಒಂದು ಕರೆ ಮತ್ತು ಜಾತ್ರೆ

ಒಂದು ದಿನ ಮದನ್ ಆಫೀಸ್ ಗೆ ರಜೆ ಹಾಕಿದ್ದ. ಹುಷಾರಿಲ್ಲ ಎಂದು ರೂಮ್ ನಲ್ಲಿ ಮಲಗಿದ್ದ. ಸುಮ್ಮನೆ ವಾಟ್ಸಾಪ್ ನೋಡುವಾಗ ಪ್ರೇಮಳ ಸ್ಟೇಟಸ್ ನಲ್ಲಿ "ಜಾತ್ರೆ ವೈಬ್ಸ್" ಎಂದು ಕಂಡಿತು.

ಧೈರ್ಯ ಮಾಡಿ ಕಾಲ್ ಮಾಡಿದ.

"ಹಲೋ ಮೇಡಂ.. ಏನಾಯ್ತು? ಇವತ್ತು ಆಫೀಸ್ ಗೆ ಬಂದಿಲ್ಲ?"

ಪ್ರೇಮ: "ಹೂ ಸರ್.. ಊರಲ್ಲಿ ಜಾತ್ರೆ ಅಲ್ವಾ, ಅದಕ್ಕೆ ರಜೆ ಹಾಕಿದೆ. ನಿಮಗೇನಾಯ್ತು ಧ್ವನಿ ಡಲ್ ಆಗಿದೆ?"

ಮದನ್: "ಸ್ವಲ್ಪ ಜ್ವರ ಮೇಡಂ.. ಬಾಡಿ ಪೈನ್."

ಪ್ರೇಮಳಿಗೆ ಗಾಬರಿಯಾಯ್ತು. "ಅಯ್ಯೋ.. ಊಟ ಮಾಡಿದ್ರ? ಮಾತ್ರೆ ತಗೊಂಡ್ರ? ಬ್ಯಾಚುಲರ್ಸ್ ನೀವು, ಟೈಮ್ ಗೆ ಊಟ ಮಾಡಲ್ಲ," ಎಂದು ಒಂದೇ ಉಸಿರಲ್ಲಿ ಕಾಳಜಿ ತೋರಿಸಿದಳು.

ಮದನ್ ಗೆ ಆ ಕಾಳಜಿ ಇಷ್ಟವಾಯ್ತು. ಅಂದು ರಾತ್ರಿ ೧೦ ಗಂಟೆವರೆಗೂ ಮಾತು ನಡೀತು. ಮಾತಾಡ್ತಾ ಮಾತಾಡ್ತಾ ಮದುವೆ ವಿಷಯ ಬಂತು.

ಮದನ್: "ರೀ ಮೇಡಂ.. ನೀವು ಸುಮ್ನೆ ನಂಗೆ ಒಂದು ಒಳ್ಳೆ ಹುಡುಗಿನ ಹುಡುಕಿ ಕೊಡಿ. ಇಲ್ಲಾಂದ್ರೆ ನೋಡಿ.. ನಾನು ನಿಮ್ಮನ್ನೇ ಲವ್ ಮಾಡಿ ಮದುವೆ ಆಗ್ಬಿಡ್ತೀನಿ!"

ಇದನ್ನು ಕೇಳಿ ಪ್ರೇಮ ನಕ್ಕಳು. "ಸರಿ ಆಯ್ತು ಬಿಡಿ, ಹುಡುಕೋಣ," ಎಂದಳು. ಆದರೆ ಮನಸಲ್ಲಿ "ನೀವೇ ಮದುವೆ ಆದ್ರೆ ಸಾಕು," ಅಂತ ಅಂದುಕೊಂಡಳು.

ಅಧ್ಯಾಯ ೬: ಚಂಡು, ರಾಜ ಮತ್ತು ಪ್ರಪೋಸಲ್

ಈಗ ಇಬ್ಬರೂ ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಮದನ್ ನ ಫ್ರೆಂಡ್ ಹರೀಶ್ (ರವಿಚಂದ್ರನ್ ಫ್ಯಾನ್) ಐಡಿಯಾ ಕೊಟ್ಟ.

"ಲೇ ಮದನ್, ಲವ್ ಮಾಡೋರು 'ಮೇಡಂ' ಅಂತ ಕರೀಬಾರ್ದು. ಅವಳನ್ನ 'ಚಂಡು' (ಚಂದ್ರ) ಅಂತ ಕರಿ."

ಮದನ್ ಫೋನ್ ಮಾಡಿ "ಹೇ ಚಂಡು.." ಎಂದ. ಅದಕ್ಕೆ ಪ್ರೇಮ ಕೂಡ ತಮಾಷೆಯಾಗಿ, "ಏನು ರಾಜಾ.." ಎಂದಳು. ಅಂದಿನಿಂದ ಇವರಿಬ್ಬರ ಹೆಸರು 'ಚಂಡು' ಮತ್ತು 'ರಾಜ' ಎಂದೇ ಫಿಕ್ಸ್ ಆಯ್ತು.

ಒಂದು ಮಳೆ ಬರುವ ಸಂಜೆ ಮದನ್ ಪ್ರಪೋಸ್ ಮಾಡಲು ನಿರ್ಧರಿಸಿದ.

"ಚಂಡು.. ನಾನು ಸ್ವಲ್ಪ ವಿಚಿತ್ರ ಮನುಷ್ಯ. ಕೋಪ ಜಾಸ್ತಿ. ಆದ್ರೆ ನಿನ್ನ ಜೊತೆ ಇದ್ರೆ ನಾನು ನಗ್ತಾ ಇರ್ತೀನಿ. I Love You. ಮದುವೆ ಆಗ್ತೀಯಾ?"

ಪ್ರೇಮ ನಾಚಿಕೆಯಿಂದ, "ಹೂ ರಾಜ.. ಒಪ್ಪಿಕೊಂಡೆ. ನಿನ್ ಜೊತೆ ಲೈಫ್ ಲಾಂಗ್ ಜಗಳ ಆಡೋಕೆ ನಾನು ರೆಡಿ," ಎಂದಳು.

ಆ ರಾತ್ರಿ ಹೂವಿನ ಹಡಗಲಿಯ 'Mr. ವಿಚಿತ್ರ' ಮತ್ತು ಚಿತ್ರದುರ್ಗದ 'ಎಡಿಟರ್ ಮೇಡಂ' ಅಧಿಕೃತವಾಗಿ ಪ್ರೇಮಿಗಳಾದರು.

ಅಧ್ಯಾಯ ೭: ಮಂಜುನಾಥನ ಸನ್ನಿಧಿಯಲ್ಲಿ

ಪ್ರೀತಿ ಮದುವೆಯ ಹಂತಕ್ಕೆ ಹೋಗಲಿ ಎಂದು ಬೇಡಿಕೊಳ್ಳಲು ಇಬ್ಬರೂ ಧರ್ಮಸ್ಥಳಕ್ಕೆ ಹೋದರು.

ಚಾರ್ಮಾಡಿ ಘಾಟ್ ರಸ್ತೆಯ ತಿರುವುಗಳಲ್ಲಿ ಬಸ್ ಬಳುಕುವಾಗ ಪ್ರೇಮ ಮದನ್ ಭುಜದ ಮೇಲೆ ತಲೆ ಇಟ್ಟು ಮಲಗಿದ್ದಳು. ಮದನ್ ಅವಳ ಕೈ ಹಿಡಿದು ಕೂತಿದ್ದ.

ಧರ್ಮಸ್ಥಳ ತಲುಪಿ, ನೇತ್ರಾವತಿ ನದಿಯಲ್ಲಿ ಸ್ನಾನ ಮುಗಿಸಿ ಮಂಜುನಾಥನ ದರ್ಶನ ಪಡೆದರು.

"ನೋಡು ಚಂಡು, ನಮ್ಮ ಮದುವೆಗೆ ಯಾವುದೇ ವಿಘ್ನ ಬರಬಾರದು," ಎಂದು ಮದನ್ ಹೇಳಿದ.

ದೇವಸ್ಥಾನದ ಹೊರಗೆ ಪ್ರಸಾದ ತಿನ್ನುತ್ತಾ, "ನಮ್ಮಿಬ್ಬರ ಮನೆಯವರು ಒಪ್ಪಲಿ, ಫೆಬ್ರವರಿ ಒಳಗೆ ಮದುವೆ ಆಗಲಿ," ಎಂದು ಹರಕೆ ಹೊತ್ತರು.

ಅಧ್ಯಾಯ ೮: ಹೂವಿನ ಹಡಗಲಿಯಲ್ಲಿ 'ಗ್ರೀನ್ ಸಿಗ್ನಲ್'

ಮದನ್ ತನ್ನ ಊರಾದ ಹೂವಿನ ಹಡಗಲಿಗೆ ಹೋದ. ಮನೆಯಲ್ಲಿ ಅಪ್ಪ, ಅಮ್ಮ, ಅಜ್ಜಿ ಎಲ್ಲರನ್ನೂ ಕೂರಿಸಿದ.

"ಅಪ್ಪಾ.. ನಾನೊಂದು ಹುಡುಗೀನ ಇಷ್ಟ ಪಟ್ಟಿದ್ದೀನಿ. ಹೆಸರು ಪ್ರೇಮ. ಗವರ್ನಮೆಂಟ್ ಆಫೀಸ್ ನಲ್ಲಿ ಕೆಲ್ಸ ಮಾಡ್ತಾಳೆ. ನಂಗೆ ಅವಳೇ ಬೇಕು."

ಅಪ್ಪ ಶಿವಣ್ಣ ಸ್ವಲ್ಪ ಗಂಭೀರವಾದರು. "ಚಿತ್ರದುರ್ಗದವ್ರಾ? ನಮ್ ಕಡೆ ಸೆಟ್ ಆಗ್ತಾರೇನಪ್ಪ?"

ಆಗ ಅಜ್ಜಿ ರುದ್ರಮ್ಮ ಬಂದ್ರು. "ಯಾಕಲೇ ಶಿವ್ಯಾ? ಹುಡುಗ ಇಷ್ಟ ಪಟ್ಟೀನಿ ಅಂತಾನೆ. ಸರ್ಕಾರಿ ಕೆಲ್ಸದಾಗ ಅದಾಳಂತೆ. ಇನ್ನೇನು ಬೇಕು? ಒಪ್ಕೋಳ್ರಲೇ."

ಅಜ್ಜಿ ಮತ್ತು ಅಮ್ಮನ ಸಪೋರ್ಟ್ ನಿಂದ ಅಪ್ಪ ಕೂಡ ಒಪ್ಪಿಕೊಂಡರು. "ನಿನ್ನ ಇಷ್ಟನೇ ನಮ್ಮ ಇಷ್ಟ ಕಣಪ್ಪ. ಆದಷ್ಟು ಬೇಗ ಕರ್ಕೊಂಡು ಬಾ," ಎಂದು ಗ್ರೀನ್ ಸಿಗ್ನಲ್ ಕೊಟ್ಟರು. ಮದನ್ ಕುಣಿದಾಡಿದ.

ಆದರೆ.. ಕಲ್ಲಹಟ್ಟಿಯಲ್ಲಿ ಪ್ರೇಮಳ ಮನೆಯ ಪರಿಸ್ಥಿತಿ ಬೇರೆಯೇ ಆಗಿತ್ತು.

ಅಧ್ಯಾಯ ೯: ಕಲ್ಲಹಟ್ಟಿಯಲ್ಲಿ ಬಿರುಗಾಳಿ

ಸ್ಥಳ: ಕಲ್ಲಹಟ್ಟಿ, ಪ್ರೇಮಳ ತವರು ಮನೆ.
ಪ್ರೇಮ ತನ್ನ ಮನೆಗೆ ಬಂದು ವಿಷಯ ತಿಳಿಸಿದಳು. ಅಣ್ಣ ರಘು, "ಹುಡುಗ ಸರ್ಕಾರಿ ಕೆಲ್ಸದಾಗ ಇದಾನೆ, ಒಳ್ಳೆಯವನು ಅಂದ್ರೆ ನಂದೇನು ತಕರಾರಿಲ್ಲ," ಎಂದು ಒಪ್ಪಿಗೆ ಸೂಚಿಸಿದ.
ಆದರೆ, ರಾತ್ರಿ ಊಟದ ಸಮಯದಲ್ಲಿ ಅಮ್ಮ ಶಾರದಮ್ಮನ ಹತ್ತಿರ ವಿಷಯ ಹೇಳಿದಾಗ ಕಥೆ ಉಲ್ಟಾ ಆಯ್ತು.
"ಏನೇ? ಲವ್ ಮ್ಯಾರೇಜ್ ಆ? ನಮ್ ಜನಾಂಗ ಬೇರೆ, ಅವರದ್ದು ಬೇರೆ. ಹೂವಿನ ಹಡಗಲಿ ಕಡೆ ಜನ ನಮಗೆ ಸೆಟ್ ಆಗಲ್ಲ. ನೀನು ಅವರನ್ನ ಮದುವೆ ಆಗ್ತೀನಿ ಅನ್ನೋದಾದ್ರೆ, ನನ್ನ ಹೆಣದ ಮೇಲೆ ನಡೀಬೇಕು!" ಎಂದು ಶಾರದಮ್ಮ ಖಡಾಖಂಡಿತವಾಗಿ ಹೇಳಿಬಿಟ್ಟರು.
ಪ್ರೇಮ ಅಳುತ್ತಾ, "ಅಮ್ಮ ಹಂಗಲ್ಲ, ಹುಡುಗ ತುಂಬಾ ಒಳ್ಳೆಯವರು," ಎಂದು ಎಷ್ಟೇ ಹೇಳಿದರೂ ಅಮ್ಮ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಅಂದು ರಾತ್ರಿ ಪ್ರೇಮ ಮದನ್ ಗೆ ಫೋನ್ ಮಾಡಿ ಅಳುತ್ತಾ ವಿಷಯ ತಿಳಿಸಿದಳು. "ರಾಜ.. ಅಮ್ಮ ಒಪ್ಪುತ್ತಿಲ್ಲ. ವಿಷ ಕುಡೀತೀನಿ ಅಂತಿದಾರೆ. ನಂಗೆ ಭಯ ಆಗ್ತಿದೆ."
ಮದನ್ ಧೈರ್ಯ ತುಂಬಿದ. "ಹೆದರಬೇಡ ಚಂಡು. ನಾನು ಮಂಜುನಾಥನ ಮುಂದೆ ಪ್ರಾಮಿಸ್ ಮಾಡಿದೀನಿ, ನಿನ್ನ ಕೈ ಬಿಡಲ್ಲ. ಬಿರುಗಾಳಿ ಬಂದ ತಕ್ಷಣ ಹಡಗು ನಿಲ್ಲಿಸಬಾರದು. ನಾವು ಹಿರಿಯರ ಮೂಲಕ ಮಾತಾಡೋಣ."

ಅಧ್ಯಾಯ ೧೦: ದಾವಣಗೆರೆಯಲ್ಲಿ ಸಂಕ್ರಾಂತಿ ಸಂಧಾನ

ಸ್ಥಳ: ದಾವಣಗೆರೆ, ಮದನ್ ದೊಡ್ಡಪ್ಪನ ಮನೆ. ದಿನಾಂಕ: ಜನವರಿ ೧೪ (ಸಂಕ್ರಾಂತಿ).
ಮದನ್ ತನ್ನ ತಂದೆ ಮತ್ತು ಲಾಯರ್ ದೊಡ್ಡಪ್ಪನ ಜೊತೆ ಸೇರಿ ಪ್ಲಾನ್ ಮಾಡಿದನು. ಸಂಕ್ರಾಂತಿ ಹಬ್ಬಕ್ಕೆ ಪ್ರೇಮಳನ್ನು ದಾವಣಗೆರೆಗೆ ಕರೆಸಿಕೊಂಡರು.
ದೊಡ್ಡಪ್ಪನ ಮನೆಯಲ್ಲಿ ಉತ್ತರ ಕರ್ನಾಟಕದ ಸ್ಪೆಷಲ್ ಹೋಳಿಗೆ ಊಟದ ನಂತರ ಪಂಚಾಯ್ತಿ ಶುರುವಾಯಿತು. ದೊಡ್ಡಪ್ಪ ನೇರವಾಗಿ ಪ್ರೇಮಳನ್ನು ಪ್ರಶ್ನಿಸಿದರು.
"ನೋಡಮ್ಮ ಪ್ರೇಮ.. ನಿಮ್ಮ ಅಮ್ಮ ಒಪ್ಪಿಲ್ಲ ಅಂತ ಮದನ್ ಹೇಳಿದ. ಈಗ ನಮ್ ಪ್ರಶ್ನೆ ಒಂದೇ... ನಿಮ್ಮ ಅಮ್ಮ ಒಪ್ಪಿಲ್ಲ ಅಂದ್ರು, ನೀನು ಮದನ್ ನ ಮದುವೆ ಆಗೋಕೆ ತಯಾರಿದ್ದೀಯಾ? ನಾಳೆ ದಿನ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಧೈರ್ಯವಾಗಿರ್ತೀಯಾ?"
ಪ್ರೇಮ ಮದನ್ ಮುಖ ನೋಡಿದಳು. ಅವನ ಕಣ್ಣಲ್ಲಿ ಭರವಸೆ ಇತ್ತು. ಅವಳು ದೃಢವಾಗಿ ಉತ್ತರಿಸಿದಳು:
"ಹೂ ಮಾವ.. ಅಮ್ಮನಿಗೆ ಈಗ ಕೋಪ ಇರಬಹುದು, ಆದ್ರೆ ನನಗೆ ಮದನ್ ಮುಖ್ಯ. ಅವರನ್ನು ಬಿಟ್ಟು ನನಗೆ ಇರೋಕೆ ಆಗಲ್ಲ. ನಾನು ಮದನ್ ನ ಮದುವೆ ಆಗ್ತೀನಿ."
ಅವಳ ಈ ಮಾತು ಕೇಳಿ ಮದನ್ ಮನೆಯವರಿಗೆ ತುಂಬಾ ಖುಷಿಯಾಯಿತು. ಅಲ್ಲಿಯೇ ತಾಂಬೂಲ ಬದಲಾಯಿಸಿ, ದಿನಾಂಕ ಫಿಕ್ಸ್ ಮಾಡಿದರು. "ಬರುವ ಫೆಬ್ರವರಿ ೭ ಕ್ಕೆ ಮದುವೆ ಮುಹೂರ್ತ ಫಿಕ್ಸ್!"

ಅಧ್ಯಾಯ ೧೧: ಪ್ರೀತಿಯ ಗೆಲುವು ಮತ್ತು ಹರಕೆ

ಮದುವೆ ಫಿಕ್ಸ್ ಆದ ಖುಷಿಯಲ್ಲಿ, ಮದನ್ ತನ್ನ ಅಳಿಯ (ಬಾವ) ಭರತ್ ನನ್ನು ಕರೆದುಕೊಂಡು ಧರ್ಮಸ್ಥಳಕ್ಕೆ ಹೋದನು. ಮಂಜುನಾಥನ ಸನ್ನಿಧಿಯಲ್ಲಿ "ನನ್ನ ಪ್ರೀತಿ ಗೆದ್ದಿತು, ಮದುವೆ ನಿರ್ವಿಘ್ನವಾಗಿ ನೆರವೇರಲಿ," ಎಂದು ಹರಕೆ ಕಟ್ಟಿಕೊಂಡನು.
ಇತ್ತ ಮದುವೆ ಶಾಪಿಂಗ್ ಜೋರಾಗಿ ನಡೆಯಿತು. ಮದನ್ ಅಮ್ಮ ಗೌರಮ್ಮ ಪ್ರೇಮಳಿಗೆ ರೇಷ್ಮೆ ಸೀರೆ ಕೊಡಿಸಿದರು. ಪ್ರೇಮಳಿಗೆ ಅಮ್ಮ ಪಕ್ಕದಲ್ಲಿ ಇಲ್ಲದ ಕೊರಗು ಕಾಡುತ್ತಿತ್ತು. ಮದನ್ ಅವಳನ್ನು ಸಮಾಧಾನ ಪಡಿಸಿದ. "ಈಗ ಇಲ್ಲಿರೋ ಅಮ್ಮ (ಗೌರಮ್ಮ) ಕೂಡ ನಿನ್ನ ಅಮ್ಮನೇ ಅಲ್ವಾ? ಬೇಜಾರ್ ಮಾಡ್ಕೋಬೇಡ."
ಮದುವೆ ಪತ್ರಿಕೆ ಹಂಚಲಾಯಿತು. ಬ್ಯಾಚುಲರ್ ಪಾರ್ಟಿಗಳು ಮುಗಿದವು. ಫೆಬ್ರವರಿ ೬ ರಂದು ಅರಿಶಿನ ಶಾಸ್ತ್ರ ನಡೆಯಿತು. ಮದನ್ ಮತ್ತು ಪ್ರೇಮ ಮದುವೆಯ ಕಳೆ ತುಂಬಿಕೊಂಡು ಮಿಂಚುತ್ತಿದ್ದರು.

ಅಧ್ಯಾಯ ೧೨: Mr. ವಿಚಿತ್ರ Weds ಎಡಿಟರ್ ಮೇಡಂ

ದಿನಾಂಕ: ಫೆಬ್ರವರಿ ೭.
ಕಲ್ಯಾಣ ಮಂಟಪ ಸಿಂಗಾರಗೊಂಡಿತ್ತು. ಮದನ್ ರೇಷ್ಮೆ ಪಂಚೆ ಧರಿಸಿ, ಹಣೆಗೊಂದು ನಾಮ ಇಟ್ಟು ರಾಜಕುಮಾರನಂತೆ ಕಂಗೊಳಿಸುತ್ತಿದ್ದ. ಇತ್ತ ಪ್ರೇಮ ರೇಷ್ಮೆ ಸೀರೆಯುಟ್ಟು ದೇವತೆಯಂತೆ ಮಂಟಪಕ್ಕೆ ಬಂದಳು.
ಗಟ್ಟಿಮೇಳ ಮೊಳಗಿತು. ಮದನ್ ಪ್ರೇಮಳ ಕಣ್ಣಲ್ಲಿ ಕಣ್ಣಿಟ್ಟು, "ಸ್ಮೈಲ್ ಮಾಡು ಚಂಡು.." ಎಂದು ಹೇಳುತ್ತಾ ಮಾಂಗಲ್ಯ ಧಾರಣೆ ಮಾಡಿದನು.
ಆದರೆ, ಪ್ರೇಮಳ ಕಣ್ಣುಗಳು ಪದೇ ಪದೇ ಮಂಟಪದ ಬಾಗಿಲ ಕಡೆ ನೋಡುತ್ತಿದ್ದವು. ಅಮ್ಮ ಬಂದೇ ಬರುತ್ತಾರೆ ಎಂಬ ಆಸೆ ಅವಳಿಗಿತ್ತು. ಆದರೆ, ಅಮ್ಮ ಬರಲೇ ಇಲ್ಲ.
ಕಣ್ಣಲ್ಲಿ ನೀರು ತುಂಬಿಕೊಂಡಿದ್ದ ಪ್ರೇಮಳನ್ನು ಮದನ್ ಸಮಾಧಾನ ಪಡಿಸಿದ. "ನಾನಿದ್ದೀನಿ ಅಲ್ವಾ ನಿನಗೆ.. ಇನ್ಮುಂದೆ ನಾನೇ ಎಲ್ಲ. ನಿನಗೆ ಎರಡು ಅಪ್ಪ, ಒಬ್ಬರು ಅಮ್ಮ ಸಿಕ್ಕಿದ್ದಾರೆ," ಎಂದು ಭರವಸೆ ನೀಡಿದ. ಸಪ್ತಪದಿ ತುಳಿದು, ಅವರು ಅಧಿಕೃತವಾಗಿ ಗಂಡ-ಹೆಂಡತಿಯಾದರು.

ಅಧ್ಯಾಯ ೧೩: ಅಮ್ಮನ ಕರೆ ಮತ್ತು ಯುಗಾದಿಯ ಸಿಹಿ

ಮದುವೆಯಾಗಿ ಒಂದು ತಿಂಗಳು ಕಳೆಯಿತು. ಕಡೂರಿನಲ್ಲಿ ಮದನ್ ಮತ್ತು ಪ್ರೇಮಳ ಸಂಸಾರ ಸುಖವಾಗಿತ್ತು. ಮದನ್ ಈಗ ಪಕ್ಕಾ 'ಹೆಂಡ್ತಿ ಮಾತು ಕೇಳುವ ಗಂಡ' ಆಗಿದ್ದ.
ಯುಗಾದಿ ಹಬ್ಬದ ದಿನ. ಪ್ರೇಮ ಅಡುಗೆ ಮಾಡುತ್ತಿರುವಾಗ ಅವಳ ಫೋನ್ ರಿಂಗ್ ಆಯ್ತು. ಡಿಸ್ಪ್ಲೇ ಮೇಲೆ "ಅಮ್ಮ" ಎಂದು ನೋಡಿ ಅವಳಿಗೆ ನಂಬಲಿಕ್ಕೆ ಆಗಲಿಲ್ಲ.
ಅಮ್ಮ: "ಹಲೋ ಮಗಳೇ.. ಹೇಗಿದ್ದೀಯಾ?"
ಆ ಧ್ವನಿ ಕೇಳಿ ಪ್ರೇಮಳಿಗೆ ಕಣ್ಣೀರು ಬಂತು.
ಅಮ್ಮ: "ಆಗಿದ್ದೆಲ್ಲ ಆಗೋಯ್ತು ಬಿಡು. ಹಬ್ಬಕ್ಕೆ ಹೊಸ ಅಳಿಯನ್ನ ಕರ್ಕೊಂಡು ಊರಿಗೆ ಬಾ. ಯುಗಾದಿ ಹಬ್ಬ ಒಟ್ಟಿಗೆ ಮಾಡೋಣ."
ಪ್ರೇಮ ಓಡಿ ಹೋಗಿ ಮದನ್ ನ ತಬ್ಬಿಕೊಂಡು ವಿಷಯ ಹೇಳಿದಳು. ಮದನ್ ಮುಗುಳ್ನಗುತ್ತಾ, "ನಾನು ಹೇಳಿರ್ಲಿಲ್ವಾ ಚಂಡು, ಅಮ್ಮ ಯಾವತ್ತಿದ್ರೂ ಮಕ್ಳನ್ನ ಬಿಟ್ಟಿರಲ್ಲ ಅಂತ. ಪ್ಯಾಕ್ ಮಾಡು, ಹೋಗೋಣ," ಎಂದ.

ಅಧ್ಯಾಯ ೧೪: ಅಣ್ಣನ ಮುನಿಸು ಮತ್ತು ಮಾವನ ಮನೆ

ಕಲ್ಲಹಟ್ಟಿಯಲ್ಲಿ ಶಾರದಮ್ಮ ಆರತಿ ಎತ್ತಿ ಮಗಳು-ಅಳಿಯನನ್ನು ಸ್ವಾಗತಿಸಿದರು. ಹಳೆಯ ಮನಸ್ತಾಪಗಳೆಲ್ಲ ಬೇವು-ಬೆಲ್ಲದ ಜೊತೆ ಕರಗಿ ಹೋಗಿದ್ದವು. ಆದರೆ, ಪ್ರೇಮಳ ಅಣ್ಣ ರಘು ಇನ್ನೂ ಮುಖ ಗಂಟಿಕ್ಕಿಕೊಂಡಿದ್ದ. "ನನ್ನ ಮಾತು ಕೇಳದೆ ಮದುವೆ ಆದ್ರಲ್ಲ" ಎಂಬ ಅಹಂಕಾರ ಅವನಲ್ಲಿತ್ತು.
ಮದನ್ ಇದನ್ನು ಗಮನಿಸಿದ. ರಘುವಿನ ಭುಜದ ಮೇಲೆ ಕೈ ಹಾಕಿ, "ಏನ್ ಭಾವ್ರೇ.. ಕೋಪನಾ? ನೋಡಿ, ನಿಮ್ಮ ತಂಗಿ ಸಿಕ್ಕಾಪಟ್ಟೆ ಡೇಂಜರ್. ದಿನಾ ಜಗಳ ಆಡ್ತಾಳೆ. ಅಂಥವಳನ್ನ ನಿಮ್ಮ ತಲೆ ಮೇಲಿಂದ ಇಳಿಸಿ ಕರ್ಕೊಂಡು ಹೋಗಿದ್ದೀನಿ, ನೀವು ನನಗೆ ಥ್ಯಾಂಕ್ಸ್ ಹೇಳ್ಬೇಕು!" ಎಂದು ತಮಾಷೆ ಮಾಡಿದ.
ಮದನ್ ನ ಹಾಸ್ಯಪ್ರಜ್ಞೆಗೆ ರಘುವಿನ ಕೋಪ ಕರಗಿತು. "ನೀವು ಗ್ರೇಟ್ ಬಾವಾ," ಎಂದು ರಘು ನಕ್ಕ. ಆನಂತರ ಮದನ್ ಇಡೀ ಊರಿನಲ್ಲಿ ಎಲ್ಲರನ್ನೂ ಮಾತಾಡಿಸಿ, "ಶಾರದಮ್ಮನ ಅಳಿಯ ಬಂಗಾರದಂಥ ಮನುಷ್ಯ" ಎಂದು ಹೆಸರು ಗಳಿಸಿದನು.

ಅಧ್ಯಾಯ ೧೫: ಶುಭಂ

ಕಥೆಯ ಕೊನೆಯ ಘಟ್ಟ. ಎರಡು ಕುಟುಂಬಗಳು ಒಂದಾಗುವ ಸಮಯ.
ಹೂವಿನ ಹಡಗಲಿ ಕಡೆಯಿಂದ ಮದನ್ ಅಜ್ಜ, ಅಜ್ಜಿ, ಅಪ್ಪ, ಅಮ್ಮ ಎಲ್ಲರೂ ವ್ಯಾನ್ ಮಾಡಿಕೊಂಡು ಕಲ್ಲಹಟ್ಟಿಗೆ ಬಂದರು. ಎರಡು ಕುಟುಂಬಗಳು ಸೇರಿದಾಗ ಅಲ್ಲಿ ಬರೀ ನಗು ಮತ್ತು ಸಂತೋಷವಿತ್ತು.
ಮದನ್ ಅಜ್ಜಿ ಪ್ರೇಮಳ ಅಮ್ಮನ ಕೈ ಹಿಡಿದು, "ನಿನ್ ಮಗಳು ನಮ್ ಮನೇಲಿ ಮಹಾಲಕ್ಷ್ಮಿ ತರ ಇದ್ದಾಳೆ," ಅಂದ್ರು. ಎಲ್ಲರೂ ಒಟ್ಟಿಗೆ ಕುಳಿತು 'ಜುಗಲ್ ಬಂದಿ' ಊಟ ಮಾಡಿದರು.
ರಾತ್ರಿ ಮದನ್ ಮತ್ತು ಪ್ರೇಮ ಟೆರೇಸ್ ಮೇಲೆ ನಿಂತಿದ್ದರು. ಹುಣ್ಣಿಮೆ ಬೆಳಕು ಚೆಲ್ಲಿತ್ತು.
ಮದನ್: "ಏನ್ ಮೇಡಂ, ಲೈಫ್ ಹೆಂಗಿದೆ?"
ಪ್ರೇಮ: "ತುಂಬಾ ಖುಷಿಯಾಗಿದ್ದೀನಿ ರೀ.. ಥ್ಯಾಂಕ್ಸ್."
ಮದನ್: "ಥ್ಯಾಂಕ್ಸ್ ಎಲ್ಲಾ ಬ್ಯಾಡ, ಲೈಫ್ ಲಾಂಗ್ ಈ 'Mr. ವಿಚಿತ್ರ'ನ ಸಹಿಸ್ಕೊಂಡು ಹೋದ್ರೆ ಸಾಕು!"
ಇಬ್ಬರೂ ನಕ್ಕರು. ಅವರ ನಗು ಚಂದ್ರನ ಬೆಳಕಿನಲ್ಲಿ ಮಿಂಚುತ್ತಿತ್ತು.
ಒಬ್ಬ 'Attitude' ಹುಡುಗ ಮದನ್, ಒಬ್ಬಳು 'ರಗಡ್' ಹುಡುಗಿ ಪ್ರೇಮ. ಒಂದು ನಾಟಕದಲ್ಲಿ ಶುರುವಾದ ಜಗಳ, ಬಸ್ ಜರ್ನಿಯಲ್ಲಿ ಹುಟ್ಟಿದ ಸ್ನೇಹ, ಮನೆಯವರ ವಿರೋಧದ ನಡುವೆಯೂ ಗೆದ್ದ ದಾಂಪತ್ಯ. ಇಂದು ಎರಡು ಕುಟುಂಬಗಳ ಪ್ರೀತಿಯ ಮಡಿಲಲ್ಲಿ ಇವರಿಬ್ಬರು ಸುಖವಾಗಿ ಬಾಳುತ್ತಿದ್ದಾರೆ.

ಶುಭಂ.



Rate this content
Log in

More kannada story from Madhan Technology

Similar kannada story from Comedy